ಡಾ. ಪಂಡಿತಾರಾಧ್ಯ ಶ್ರೀಗಳು
ಮಠ ಮತ್ತು ಮಠಾಧೀಶರನ್ನು ಅನುಮಾನದಿಂದ ನೋಡುವ ಕಾಲ ಇದು. ಇಂಥ ಕಾಲದಲ್ಲೂ ಇದಕ್ಕೆ ಅಪವಾದವಾಗಿರುವವರು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು. ಅವರು ತಮ್ಮ ಪರಿಶ್ರಮ, ಜನಪರ ಕಾಳಜಿ, ವೈಚಾರಿಕತೆ, ರಂಗಾಸಕ್ತಿ, ಸಾಹಿತ್ಯಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಒಲವಿನಿಂದಾಗಿ ಎಲ್ಲರ ಪ್ರೀತಿಗೆ ಅರ್ಹರಾಗಿದ್ದಾರೆ. ವೈಚಾರಿಕ ಲೇಖನ, ಭಾಷಣಗಳ ಮೂಲಕ ನಾಡಿನ ಸಾಹಿತ್ಯಾಸಕ್ತರ, ವಿಚಾರªಂತರ ಹಾಗೂ ಸಾಮಾನ್ಯ ಜನರ ಗಮನ ಸೆಳೆದಿದ್ದಾರೆ. ಮಠಾಧೀಶರೆಂದರೆ ಮೂಗು ಮುರಿಯುತ್ತಿದ್ದ ಬುದ್ಧಿಜೀವಿಗಳೆನ್ನುವವರೂ ಶ್ರೀಗಳ ಬಗ್ಗೆ ಪ್ರೀತಿ, ವಿಶ್ವಾಸ, ಗೌರವ ತೋರುತ್ತಿದ್ದಾರೆ.
ಶ್ರೀಗಳಿಗೆ ರಂಗಭೂಮಿಯ ಬಗೆಗೆ ಅಪಾರ ಕಾಳಜಿ. ಸಾಣೇಹಳ್ಳಿಯಂಥ ಕುಗ್ರಾಮ ನಾಡಿನ ಎಲ್ಲ ಬುದ್ಧಿವಂತರ ಗಮನ ಸೆಳೆಯಲು ಕಾರಣವಾದದ್ದು ಶ್ರೀಗಳವರ ರಂಗಭೂಮಿಯ ಚಟುವಟಿಕೆಗಳೇ. ಸಾಣೇಹಳ್ಳಿಯಲ್ಲಿ ಶ್ರೀ ಶಿವಕುಮಾರ ಕಲಾಸಂಘ', 'ಶಿವಸಂಚಾರ' ರಂಗತಿರುಗಾಟದ ಕಲಾತಂಡವಿದೆ. ಅಲ್ಲದೆ ನಾಟಕಗಳನ್ನು ಆಸ್ವಾದಿಸಿ ವಿಮರ್ಶಿಸುವ ಪ್ರೇಕ್ಷಕ ವೃಂದವಿದೆ. ಇವುಗಳಿಗೆ ಕಳಸವಿಟ್ಟಂತೆ ಗ್ರೀಕ್ ಮಾದರಿಯ ಸುಮಾರು ನಾಲ್ಕು ಸಾವಿರ ಜನರು ಕೂರುವ ಬಯಲು ರಂಗಮಂದಿರವಿದೆ. ಶ್ರೀಗಳು ಶಿವಸಂಚಾರದ ಶಿವಶಿಲ್ಪಿಗಳಾಗಿ ನಾಡಿನ ತುಂಬೆಲ್ಲ ಶಿವನ ಸಂಚಾರ ಮಾಡಿಸುತ್ತಿದ್ದಾರೆ.
ಇದಕ್ಕೆಲ್ಲ ಕಳಸವಿಟ್ಟಂತೆ ಶ್ರೀಗಳೇ 'ಅಂತರಂಗ-ಬಹಿರಂಗ, ಸ್ವಾಮಿ ವಿವೇಕಾನಂದ, ಜಂಗಮದೆಡೆಗೆ, ಅಂಕುಶ' ಎನ್ನುವ ನಾಟಕಗಳನ್ನು ರಚಿಸಿದ್ದಾರೆ. 'ಶಿವಸಂಚಾರ' & 'ಶಿವದೇಶ ಸಂಚಾರ'ದ ಮೂಲಕ ಅವುಗಳನ್ನು ಆಡಿಸಿ ಸಾಂಸ್ಕೃತಿಕ ಯಾತ್ರೆಯನ್ನು ಕರ್ನಾಟಕ ಮತ್ತು ಭಾರತದುದ್ದಗಲಕ್ಕೂ ಮಾಡಿಸಿದ್ದಾರೆ. ಕಲೆಯ ಗಂಧವೇ ಇಲ್ಲದ ಗ್ರಾಮೀಣ ಯುವಕ ಯುವತಿಯರಲ್ಲಿ ರಂಗಾಸಕ್ತಿಯನ್ನು ಮೂಡಿಸಿ ಶಿವಸಂಚಾರದ ಮೂಲಕ ಅವರನ್ನು ಬೆಳಕಿಗೆ ತರುತ್ತಿದ್ದಾರೆ. ಅವರ ರಂಗ ಸಾಧನೆ ಗಮನಿಸಿ ೧೯೯೮ ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ 'ಗೌರವ ಫೆಲೋಷಿಪ್' ನೀಡಿದ್ದರೆ, ೨೦೦೪ ರಲ್ಲಿ ಕರ್ನಾಟಕ ಸರ್ಕಾರ 'ರಾಜ್ಯೋತ್ಸವ' ಪ್ರಶಸ್ತಿ ನೀಡಿ ಗೌರವಿಸಿದೆ. ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ 'ಫಾಲ್ ಹ್ಯಾರಿಸ್' ಪ್ರಶಸ್ತಿ ನೀಡಿದೆ. ೨೦೦೭ ರಲ್ಲಿ 'ಕೆ ವಿ ಶಂಕರೇಗೌಡ' ಸೇವಾ ಪ್ರಶಸ್ತಿ, ೨೦೧೦ರಲ್ಲಿ 'ದುರ್ಗದ ಸಿರಿ' ಪ್ರಶಸ್ತಿ, ೨೦೧೨ರಲ್ಲಿ ಕುವೆಂಪು ವಿವಿ 'ಗೌರವ ಡಾಕ್ಟರೇಟ್' ಪ್ರಶಸ್ತಿ ಹಾಗೂ ಆಳ್ವಾಸ್ 'ನುಡಿಸಿರಿ' ಪ್ರಶಸ್ತಿ ಮತ್ತು ೨೦೧೩ರಲ್ಲಿ ದುಬೈ 'ಶ್ರೀರಂಗ' ಧ್ವನಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಶ್ರೀಗಳವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಕಂಡ ಕನಸಿನ ಬಳ್ಳಿ. ಅವರ ಕರಕಮಲ ಸಂಜಾತರು. ಇವರು ಸಿರಿಗೆರೆಗೆ ಕಾಲಿಟ್ಟದ್ದು ೧೯೬೭ ರಲ್ಲಿ. ಆಗ ಒಂದು ಜವಾನ ಕೆಲಸ ಬಯಸಿ ಬಂದವರು. ಹಿರಿಯ ಗುರುಗಳ ಆಶೀರ್ವಾದದಿಂದ ಸಿರಿಗೆರೆಯಲ್ಲೆ ಮಠದ ಆರ್ಥಿಕ ನೆರವಿನಿಂದ ಪಿಯುಸಿ ಸೇರಿದರು. ಬಿಎ ಪದವಿಯಲ್ಲಿ ತತ್ವಶಾಸ್ತ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ
ಶ್ರೇಣಿ ಪಡೆದರು. ಮುಂದೆ ೧೯೭೪ ರಲ್ಲಿ ಮೈಸೂರಲ್ಲಿ ಎಂ ಎ ಪದವಿಯಲ್ಲಿ ತತ್ವಶಾಸ್ತ್ರ ವಿಷಯದಲ್ಲೆ ಪ್ರಪಥಮರಾಗಿ ಮತ್ತೆ ಚಿನ್ನದ ಪದಕ ಪಡೆದರು. ೧೯೭೭ ಡಿಶಂಬರ್ ೨೫ ರಂದು ಸಾಣೇಹಳ್ಳಿ ಶ್ರೀಮಠದ ಪಟ್ಟಾಧಿಕಾರ ವಹಿಸಿಕೊಂಡರು.
ಪೂಜ್ಯರ ಲೇಖನಿಯಿಂದ 'ಜೀವನದರ್ಶನ'ದಿಂದ ಹಿಡಿದು 'ರೊಟ್ಟಿ ಬುತ್ತಿ' ಯವರೆಗೆ ೫೦ಕ್ಕೂ ಹೆಚ್ಚು ಕೃತಿಗಳು ಹೊರಬಂದಿವೆ. ಪ್ರಜಾವಾಣಿಯ 'ಬಾಳಬುತ್ತಿ' ಅಂಕಣಕಾರರಾಗಿದ್ದಾರೆ. ಪರಿಸರ ಕಾಳಜಿಯುಳ್ಳ ಶ್ರೀಗಳು ಸಾಂಸ್ಕೃತಿಕ ಹರಿಕಾರರೂ ಹೌದು. ನೇರ, ನಿಷ್ಠುರ ನಡೆ ನುಡಿಯ ಇವರು ಸನ್ಯಾಸಿಗಳಲ್ಲೆÃ ಅಪರೂಪದ ವ್ಯಕ್ತಿತ್ವವುಳ್ಳವರು. 'ಗುಬ್ಬಿ ವೀರಣ್ಣ ಪ್ರಶಸ್ತಿ' ಪುರಸ್ಕೃತರನ್ನೆಲ್ಲ ಸಾಣೇಹಳ್ಳಿಯಲ್ಲಿ ಒಂದೇ ವೇದಿಕೆಯಲ್ಲಿ ಸೇರಿಸಿ ಅವರಿಗೆ ಬೆಳ್ಳಿ ಬೆತ್ತ, ಮೈಸೂರು ಪೇಟ ದೊಂದಿಗೆ ಅಭಿನಂದಿಸಿ ಗೌರವಿಸಿದ್ದು ರಂಗಭೂಮಿಯ ಇತಿಹಾಸದಲ್ಲೆ ಸ್ಮರಣೀಯವಾದುದು.
೨೦೦೪ರಲ್ಲಿ ಹೊಸದುರ್ಗದಲ್ಲಿ ನಡೆದ ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದು ಪೂಜ್ಯರ ಸಾಹಿತ್ಯಪ್ರೇಮಕ್ಕೆ ಹಿಡಿದ ಕನ್ನಡಿ. ಸಾಣೇಹಳ್ಳಲ್ಲಿ ರಾಷ್ಟೀಯ, ಅಂತರರಾಷ್ಟೀಯ ನಾಟಕೋತ್ಸವಗಳನ್ನು ನಡಸಿದ್ದಾರೆ. ಬಸವಣ್ಣನವರ ಬದುಕಿನ ಸುತ್ತ ಹೆಣೆದ ನಾಲ್ಕು ನಾಟಕಗಳನ್ನು ಶಿವಸಂಚಾರದ ಕಲಾವಿದರಿಂದ ಹಿಂದಿ ಭಾಷೆಯಲ್ಲಿ ಮಾಡಿಸಿ 'ಭಾರತ ರಂಗಸಂಚಾರ' ಏರ್ಪಡಿಸಿದ್ದು, 'ಮರಣ್ ಹೀ ಮಹಾನವಮಿ', 'ಮೈ ಬಾವರಿ ಚನ್ನ್ಕೀ' ನಾಟಕಗಳನ್ನು 'ಶಿವದೇಶ ಸಂಚಾರ' ಕಲಾವಿದರಿಂದ ಹಿಂದಿ ಭಾಷೆಯಲ್ಲಿ ಮಾಡಿಸಿ 'ಶಿದೇಶ ಸಂಚಾರ” ಏರ್ಪಡಿಸಿದ್ದು ಭಾರತದ ರಂಗಭೂಮಿಯ ಇತಿಹಾಸದಲ್ಲೆ ಒಂದು ಐತಿಹಾಸಿಕ ದಾಖಲೆಗಳಾಗಿವೆ.
ಶ್ರೀಗಳವರು ಜನಿಸಿದ್ದು (೪/೯/೧೯೫೧) ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕು ಹೆಡಿಯಾಲದಲ್ಲಿ. ಅವರ ಪೂರ್ವಾಶ್ರಮದ ತಂದೆ ನಾಗಯ್ಯ, ತಾಯಿ ಶಿವನಮ್ಮ. ಪ್ರಾಥಮಿಕ ಶಿಕ್ಷಣ ಹೆಡಿಯಾಲದಲ್ಲಿ. ಪ್ರೌಢಶಿಕ್ಷಣ ಸುಣಕಲ್ ಬಿದರೆಯಲ್ಲಿ. ಕಾಲೇಜು ಶಿಕ್ಷಣ ಸಿರಿಗೆರೆಯಲ್ಲಿ. ಸ್ನಾತಕೋತ್ತರ ಪದವಿ ಮೈಸೂರಲ್ಲಿ. ಆಗ ಸ್ವಲ್ಪ ಹಣ ಕಟ್ಟಿ ಚಿನ್ನದ ಪದಕ ಪಡೆಯಲು ವಿಶ್ವವಿದ್ಯಾಲಯ ಸೂಚಿಸಿದಾಗ ಹಣ ಕಟ್ಟಿ ಪಡೆಯುವ ಪದಕವೇ ಬೇಡವೆಂದು ಪ್ರತಿಭಟಿಸಿದ ಬಂಡಾಯ ಮನೋಧರ್ಮದವರು. ಶಿವಸಂಚಾರದ ಮೂಲಕ ರಂಗಕ್ರಾಂತಿಯನ್ನೇ ಮಾಡಿ ಮತೀಯ ಸಾಮರಸ್ಯ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ದೀನದಲಿತರ ಬಗ್ಗೆ ವಿಶೇಷ ಕಾಳಜಿಯುಳ್ಳ ಶ್ರೀಗಳು ಅವರ ಯಾವುದೇ ಸಮಸ್ಯೆಗಳಿದ್ದರೂ ತಕ್ಷಣ ಪರಿಹರಿಸುವ ಪ್ರಯತ್ನ ಮಾಡುವರು.
