ನಮ್ಮ ನೀರೀಕ್ಷೆ


ಮತ್ತೆ ಕಲ್ಯಾಣ ಕೇವಲ ಒಂದು ಸಮಾರಂಭ, ವಿಚಾರ ಸಂಕಿರಣ ಅಲ್ಲ; ಸಮಾಜದ ಇಂದಿನ ತಲ್ಲಣಗಳಿಗೆ ಇದೇ ನೆಲದಲ್ಲಿ ಜನ್ಮ ತಳೆದ ಶರಣ ಚಳವಳಿಯ ತಾತ್ವಿಕ ಭಿತ್ತಿಯೊಳಗಿನಿಂದ ಪರಿಹಾರಗಳನ್ನು ಹುಡುಕಿಕೊಳ್ಳುವ ಅನ್ವೇಷಣೆ. ವ್ಯಕ್ತಿ, ಕಸುಬು, ಜಾತಿ, ಲಿಂಗ, ಭಾಷೆ, ಧರ್ಮಗಳ ಹೆಸರಿನಲ್ಲಿ ಮನುಷ್ಯ ಕುಲ ತನ್ನದೇ ಸಹಜೀವಿಗಳಿಂದ ದೂರ ಸರಿಯುತ್ತಾ ಒಡೆದುಹೋಗುತ್ತಿರುವ ಈ ಆತಂಕದ ಹೊತ್ತಿನಲ್ಲಿ ಎಲ್ಲರೂ ಜೊತೆ ಜೊತೆಯಾಗಿಯೇ ಮುನ್ನಡೆಯಲು ತೊಡಗುತ್ತಿರುವ ಹೊಸದೊಂದು ಪ್ರಕ್ರಿಯೆ. ಅಂದರೆ ಸ್ವಲ್ಪ ದೀರ್ಘವಾದ ಯಾತ್ರೆಗೆ ಜೀವಪರ ತುಡಿತಗಳುಳ್ಳ ಮನಸ್ಸುಗಳು ಸೇರಿ ಬರೆಯುತ್ತಿರುವ ಮುನ್ನುಡಿ. ಹೊಸ ಬೆಳಕನ್ನು ನೀಡುವ ಅರಿವು ನಮ್ಮ ಪರಂಪರೆಯೊಳಗೇ ಇದೆ. ಕನ್ನಡ ನಾಡಿನಲ್ಲಿ ೯೦೦ ವರ್ಷಗಳ ಕೆಳಗೆ ಹುಟ್ಟಿಕೊಂಡ ಬಸವಾದಿ ಶಿವಶರಣರ ಚಿಂತನೆ ಮತ್ತು ಕ್ರಿಯೆಯಲ್ಲಿ ಇಂದು ನಮಗೆ ದಾರಿ ದೀಪವಾಗಬಲ್ಲ ತತ್ವಗಳಿವೆ. ಹಾಗಾಗಿ ಕಲ್ಯಾಣದ ಕಡೆಗೆ ಹೊರಳಿ ನೋಡುತ್ತಾ, ಇಂದಿಗೆ ಬೇಕಾದ ಅರಿವು ಹಾಗೂ ಪ್ರೇರಣೆಯನ್ನು ಪಡೆದುಕೊಳ್ಳಲು ಹೊರಟಿದ್ದೇವೆ. ಜಾತಿ ಮತ ಪಂಥಗಳಾಚೆಗೆ ಮಾನವತೆಯ ಪರ್ವತವನ್ನು ನಿರ್ಮಿಸಲು ಪ್ರತಿಯೊಬ್ಬರು ಮನಸ್ಸು ಮಾಡಬೇಕು. ಮತ್ತು ಆ ನಿಟ್ಟಿನಲ್ಲಿ ಸಾಗುತ್ತಿರುವ ಈ ಚಳುವಳಿಗೆ ಪ್ರತಿಯೊಬ್ಬರ ಭಾಗವಹಿಸಿ ಅಭಿಯಾನವನ್ನು ಅರ್ಥೈಸಿಕೊಂಡು ಮತ್ತೆ ಕಲ್ಯಾಣದ ಆಶಯವನ್ನು ಸಮಾಜಕ್ಕೆ ತಲುಪಿಸಬೇಕೆಂಬುದೆ ನಮ್ಮ ನಿರೀಕ್ಷೆ.