ಶ್ರೀಗಳ ಸಾರಥ್ಯ
ಕರ್ನಾಟಕದ ರಂಗಕಾಶಿ ಎಂದು ಪ್ರಸಿದ್ಧಿ ಪಡೆದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿರುವ ತರಳಬಾಳು ಬೃಹನ್ಮಠದ ಶಾಖಾ ಮಠದ ಪೀಠಾಧಿಪತಿಗಳಾದ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಈ ಅಭಿಯಾನದ ನೇತೃತ್ವ ವಹಿಸಿದ್ದಾರೆ. ಪೂಜ್ಯರಿಗೆ ಇರುವ ಸಾಮಾಜಿಕ ಕಾಳಜಿಯೇ ಈ ಅಭಿಯಾನಕ್ಕೆ ದೊಡ್ಡ ಪ್ರೇರಣೆ ಎನ್ನಬಹುದು. ಕೇವಲ ಧಾರ್ಮಿಕ ಆಧ್ಯಾತ್ಮಿಕ ವಿಚಾರಗಳಿಗೆ ಅಂಟಿಕೊಳ್ಳದೆ ಸರ್ವಧರ್ಮಿಯರ ಜೊತೆ ಸೇರಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಮಾನವತೆಯ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಸದಾ ಶ್ರಮಿಸುತ್ತ ಬಂದಿದ್ದಾರೆ. ಈ ದಿಶೆಯಲ್ಲಿ ಪ್ರಸ್ತುತ ಮತ್ತೆ ಕಲ್ಯಾಣ ಅಬಿಯಾನದ ನೇತೃತ್ವವಹಿಸಿದ್ದಾರೆ. ಮತ್ತೆ ಕಲ್ಯಾಣದ ಮೂಲಕ ಮುಂದಿನ ಪೀಳಿಗೆಗೆ ಶರಣ ಸಂಸ್ಕೃತಿಯಿಂದ ಮತ್ತು ವಿವಿಧ ಮತಪಂಥಗಳಿಂದ ಕೊಡುಗೆಯಾಗಿ ಬಂದ ಮಾನವತೆಯನ್ನು ಸಾರುವ ಸಂಕಲ್ಪ ಹೊಂದಿದ್ದಾರೆ.
