ಮತ್ತೆ ಕಲ್ಯಾಣವೇಕೆ


ಕಲ್ಯಾಣವೇ ಏಕೆ? ಇಂದು ಯಾವುದೇ ಹೊಸ ಚಿಂತನೆ, ತಂತ್ರಜ್ಞಾನ ಅಥವಾ ಪ್ರಯೋಗಗಳಿಗಾಗಿ ಭಾರತೀಯರು ಹೊರದೇಶಗಳತ್ತ ನೋಡಬೇಕಾದ ಪರಾವಲಂಬನೆಯ ಪರಿಸ್ಥಿತಿ ಇದೆ. ನಮ್ಮೊಳಗಿನ ಸತ್ವ, ಮಹತ್ವವನ್ನು ಅರಿಯದೆ ಪರೋಪಜೀವಿಗಳಂತೆ ಬದುಕು ಸವೆಸುತ್ತಿದ್ದೇವೆ. ಭಾರತ ಅನೇಕ ವೈಜ್ಞಾನಿಕ ಅನ್ವೇಷಣೆಗಳ ಜೊತೆಗೆ, ವಾಸ್ತವವಾದಿ ವೈಚಾರಿಕತೆಗೆ ಅಡಿಗಲ್ಲನ್ನಿಟ್ಟ ಪ್ರಪಂಚದ ಮೊಟ್ಟಮೊದಲ ದೇಶ. ವಿಚಾರವಾದಿ ಚಾರ್ವಾಕ ಪಂಥವನ್ನು, ಜೀವಪ್ರೀತಿಯ ಸಂದೇಶ ಸಾರುವ ಬೌದ್ಧ ಧರ್ಮವನ್ನು, ಕಾಯಕದ ಘನತೆಯನ್ನು ಎತ್ತಿಹಿಡಿದು ಸರ್ವ ಸಮಾನತೆಯ ತತ್ವವನ್ನು ಮುಂದಿಟ್ಟು ವಚನ ಚಳುವಳಿಯನ್ನು ಜಗತ್ತಿಗೆ ಕೊಟ್ಟ ದೇಶ ನಮ್ಮದು. ಆದರೆ ಕಾಲದ ಜೊತೆಗೆ ಬಂದ ವಸ್ತುಸ್ಥಿತಿಗಳಿಂದಾಗಿ ಉಂಟಾದ ವಿಸ್ಮೃತಿಯು ಇವೆಲ್ಲವನ್ನೂ ನಮ್ಮ ನೆನಪಿನಾಳಕ್ಕೆ ತಳ್ಳಿದೆ. ಇಂದು ಆ ತತ್ವಗಳ ಮೂಲಸಾರವನ್ನು ಮತ್ತೊಮ್ಮೆ ನೆನಪಿನಾಳದಿಂದ ಹೊರತೆಗೆದು ಮನನ ಮಾಡಿಕೊಳ್ಳುವ, ಹೊಸ ತಲೆಮಾರಿಗೆ ಅದರ ಸವಿಯನ್ನು ಉಣಬಡಿಸುವ ಅಗತ್ಯವಿದೆ. ಕಲ್ಯಾಣವೆಂಬುದು ವಿಶಿಷ್ಟವಾದ ಅರಿವಿನ ನಡಿಗೆಯಾಗಿತ್ತು. ವಿವಿಧ ಸಮುದಾಯ, ಕಸುಬುಗಳಿಗೆ ಸೇರಿದ್ದ ಸಾಮಾನ್ಯರು ಅಸಾಮಾನ್ಯವಾದ ಪಾಠಗಳನ್ನು ಜಗತ್ತಿಗೆ ಕಲಿಸಿದರು. ಅದ್ಭುತವಾದ ಸಂಗತಿಗಳನ್ನು ಸರಳ ವಚನಗಳಲ್ಲಿ ಕ್ರೋಡೀಕರಿಸಿದರು. ಜಗತ್ತನ್ನು ಬಾಧಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಅರಿವು, ಅನ್ನದಾಸೋಹ ಮತ್ತು ಕಾಯಕ ಇವು ಪರಿಹಾರವಾಗಬಲ್ಲವು. ಹಾಗಿದ್ದ ಮೇಲೆ ನಾವೇಕೆ ಮತ್ತೆ ಕಲ್ಯಾಣದ ಕಡೆಗೆ ನೋಡಬಾರದು ಎಂಬ ಚಿಂತನೆಯಿಂದ ಹುಟ್ಟಿದ್ದೇ ‘ಸಹಮತ ವೇದಿಕೆ’. ಎಲ್ಲರೊಡಗೂಡಿದ ನಡಿಗೆಯೇ ಮತ್ತೆ ಕಲ್ಯಾಣ.