ಸಾಣೇಹಳ್ಳಿ ರಂಗ ಸಂಸ್ಕೃತಿ
'ಶ್ರೀ ಶಿವಕುಮಾರ ಕಲಾಸಂಘ'ಕ್ಕೆ ಮೆರಗು ತಂದುದು ೧೯೯೭ರಲ್ಲಿ ಅಸ್ತಿತ್ವಕ್ಕೆ ಬಂದ 'ಶಿವಸಂಚಾರ'. ಇದು ಶ್ರೀ ಸಿಜಿಕೆ ಅವರ ಕಲ್ಪನೆಯ ಕೂಸು. ಅವರೊಮ್ಮೆ ಸಾಣೇಹಳ್ಳಿಯಲ್ಲಿ ನಡೆದ 'ದಲಿತ ಮಕ್ಕಳ ರಂಗತರಬೇತಿ ಶಿಬಿರ'ದ ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇಲ್ಲಿಯ ರಂಗಚಟುವಟಿಕೆಗಳನ್ನು ಗಮನಿಸಿ ವರ್ಷದುದ್ದಕ್ಕೂ ನಾಡಿನೆಲ್ಲೆಡೆ ನಾಟಕಗಳು ನಡೆಯಬೇಕು. ಅದಕ್ಕಾಗಿ ಒಂದು ರೆಪರ್ಟರಿ ಮಾಡಬೇಕೆಂದು ಆಶಿಸಿದ್ದಲ್ಲದೆ ಅದಕ್ಕೆ `ಶಿವಸಂಚಾರ' ಎನ್ನುವ ಅರ್ಥಪೂರ್ಣ ಹೆಸರಿಟ್ಟರು. ತಾವೇ ಹೆಚ್ಚಿನ ಆಸಕ್ತಿ ವಹಿಸಿ ಶಿವಸಂಚಾರದ ಕಲ್ಪನೆಯನ್ನು ಸಾಕಾರಕ್ಕೆ ತಂದರು. ಪ್ರತಿವರ್ಷ ೨೦ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಮೂರು ತಿಂಗಳ ತರಬೇತಿ ನೀಡಿ, ಆ ಅವಧಿಯಲ್ಲಿ ಮೂರು ನಾಟಕಗಳನ್ನು ಕಲಿಸಿ ಆ ನಾಟಕಗಳನ್ನು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಅಭಿನಯಿಸುವಂತೆ ಮಾಡಿದರು. ಮೊದಲಿಗೆ ಕಲಾವಿದರ ಆಯ್ಕೆ ತುಂಬಾ ಶ್ರಮದಾಯಕವಾಗಿತ್ತು. ೨೦೦೮ರಲ್ಲಿ ಶ್ರೀ ಶಿವಕುಮಾರ ರಂಗಶಾಲೆ ಪ್ರಾರಂಭವಾದ ನಂತರ ಶಿವಸಂಚಾರಕ್ಕೆ ಕಲಾವಿದರನ್ನು ಹುಡುಕುವ ಅಗತ್ಯ ಬೀಳದಾಯಿತು. ಒಂದು ವರ್ಷ ರಂಗಶಾಲೆಯಲ್ಲಿ ತರಬೇತಿ ಪಡೆದವರು ಮರುವರ್ಷ ಶಿವಸಂಚಾರಕ್ಕೆ ಬರುವರು. ಶಿವಸಂಚಾರದ ಕಲಾವಿದರು ಇದುವರೆಗೆ ವಿಭಿನ್ನ ವಸ್ತುವುಳ್ಳ ೫೭ ನಾಟಕಗಳ ೨೮೦೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕರ್ನಾಟಕದ ಒಳ ಹೊರಗೆ ನೀಡಿ ರಂಗಾಸಕ್ತರ ಗಮನ ಸೆಳೆದಿದೆ.
