ರಾಜ್ಯ ಅಭಿಯಾನ


ಅಗಸ್ಟ್ ೧, ಸಾಣೇಹಳ್ಳಿ


ಇಂದು ಸಾಣೇಹಳ್ಳಿ ಶ್ರೀ ಮಠದ ಇತಿಹಾಸದಲ್ಲಿ ಸ್ಮರಣಾರ್ಹ ದಿನ. ಬಸವಾದಿ ಶಿವಶರಣರ ಚಿಂತನೆಗಳನ್ನು ಹರಡುವ ನಿಟ್ಟಿನಲ್ಲಿ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಜಿಗಳವರು ಅನೇಕ ಪ್ರಯೋಗಗಳನ್ನು ಮಾಡಿದರು. ಅದೇ ಪರಂಪರೆಯನ್ನು ನಾವು ಇಂದು ಮತ್ತೆಕಲ್ಯಾಣದ ಮೂಲಕ ಮುಂದುವರಿಸಿದ್ದೆವೆ. ಇಂದು ಆದರ್ಶಗಳು ಯಾರಿಗೂ ಬೇಕಾಗಿಲ್ಲ. ಹಣ, ಅಧಿಕಾರಕ್ಕಾಗಿ ಮಾತ್ರ ತಮ್ಮ ಗಮನವನ್ನು ಹರಿಸುತ್ತಿದ್ದಾರೆ. ಮೊದಲು ಅರಿವು, ಆದರ್ಶಗಳು ಮೊದಲಾಗಬೇಕು. ೧೨ನೆಯ ಶತಮಾನದ ಶರಣರು ಅರಿವು ಆಚಾರ ಒಂದಾದವರು. ಅರ್ಥ ಅಧಿಕಾರಕ್ಕಾಗಿ ಆದರ್ಶ ಗಳನ್ನು ಗಾಳಿಗೆ ತೂರಿದವರಲ್ಲ. ಕೇವಲ ಅರ್ಥ ದ ಹಿಂದೆ ಹೋದವರಿಗೆ ನಿರಾಶೆ ಕಟ್ಟಿಟ್ಟಬುತ್ತಿ. ನಾವು ಮಾಡುವ ಕೆಲಸ ನಮಗಷ್ಟೇ ಅಲ್ಲ ಸಮಾಜಕ್ಕೂ ನೆಮ್ಮದಿಯನ್ನು ತಂದುಕೊಡಬೇಕು. ಭಗವಂತ ಸರ್ವಾಂತರ್ಯಾಮಿ. ಎಲ್ಲ ಕಡೆಯೂ ಇದ್ದಾನೆ. ಭಗವಂತನನ್ನು ನಮ್ಮ ವ್ಯಕ್ತಿತ್ವದಲ್ಲೇ ಕಂಡುಕೊಳ್ಳಬೇಕು. ಅಂತರಂಗ ಬಹಿರಂಗ ಶುದ್ದಿಯೇ ದೇವರನ್ನು ಕಾಣುವ ದಾರಿ. ಇದನ್ನೇ ಶರಣರು ನಡೆದು ತೋರಿದರು. ಭಗವಂತನೇ ತಂದೆ, ತಾಯಿ, ಬಂಧು ಎನ್ನುವ ಭಾವ ಬಲಿತರೆ ವ್ಯಕ್ತಿ ದೇವನಾಗುತ್ತಾನೆ. ಶರಣರ ಇಂಥ ಚಿಂತನೆಗಳನ್ನು ಇಂದಿನ ಪೀಳಿಗೆಗೆ ಅರಿವು ಮೂಡಿಸುವುದೇ ಮತ್ತೆಕಲ್ಯಾಣ. ಕಲ್ಯಾಣ ಎಂದರೆ ಒಳಿತು, ಶುಭ, ಅಭ್ಯುದಯ, ಮಂಗಳ, ಲೇಸು. ಇಂಥ ಕಲ್ಯಾಣವನ್ನು ರಾಜ್ಯಾದ್ಯಾಂತ ಪಸರಿಸಬೇಕಾಗಿದೆ. ನಾಡಿನ ಮಕ್ಕಳೆ ನಮಗೆ ದೇವರು. ಅವರ ಅಭ್ಯುದಯವೇ ನಮ್ಮ ಅಭ್ಯುದಯ. ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳಲು ನಾವು ಸೋತಿದ್ದೇವೆ. ಪ್ರಕೃತಿ ಮಾತೆಯ ಒಲವನ್ನು ಗಳಿಸಿಕೊಳ್ಳಬೇಕು. ಈ ಯಾನದಲ್ಲಿ ಅನೇಕ ವಿಪತ್ತುಗಳು ಬರಬಹುದು. ಆ ಎಲ್ಲ ವಿಪತ್ತುಗಳು ನಮ್ಮ ವ್ಯಕ್ತಿ ತ್ವವನ್ನು ಗಟ್ಟಿಗೊಳಿಸಲಿಕ್ಕಾಗಿಯೇ ಬರುವಂಥವು ಎಂದು ಭಾವಿಸಿರುವಂಥವರು. ನಟ ಚೇತನ್ ಮಾತನಾಡಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿಗಳ ವ್ಯಕ್ತಿತ್ವಕ್ಕೆ ಮಾರುಹೋಗಿದ್ದೇನೆ. ನಾನು ಹುಟ್ಟಿ ಬೆಳೆದು ಓದಿದ್ದು ಅಮೇರಿಕಾದಲ್ಲಿ. ಕನ್ನಡದ ಮೇಲಿನ ಸೆಳೆತದಿಂದಾಗಿ ವಾಪಸ್ ಬಂದು ಇಲ್ಲೇ ನೆಲೆಸಿದ್ದೇನೆ. ಮತ್ತೆಕಲ್ಯಾಣ ಎಲ್ಲ ಅಸಮಾನತೆಗಳನ್ನು ತೊಡೆದುಹಾಕಿ ಎಲ್ಲರನ್ನೂ ಒಳಗೊಳ್ಳುವುದೇ ಆಗಿದೆ. ಇದರಲ್ಲಿ ನಾನು ಪಾಲ್ಗೊಳ್ಳುತ್ತಿರುವುದು ಸಂತೋಷವಾಗಿದೆ. ಮಕ್ಕಳಾಗಿ ಉತ್ತಮ ಕನಸುಕಾಣುವುದು ಬಹಳ ಮುಖ್ಯ. ನಿಜವಾದ ಕನಸನ್ನು ನಾವು ಇರುವ ಜಾಗದಲ್ಲಿಯೇ ನನಸು ಮಾಡಿಕೊಳ್ಳಬೇಕು. ಹಣ ಅಷ್ಟೇ ಕನಸಾಗಬಾರದು. ಪರಸ್ಪರ ಪ್ರೀತಿ, ವಿಶ್ವಾಸ, ನಂಬುಗೆಯನ್ನು ನನಸು ಮಾಡುವ ಕನಸುಕಾಣಬೇಕು. ಡಾ. ಶಾಂತವೀರ ಮಹಾಸ್ವಾಮಿಗಳು ಮಾತನಾಡಿ ಸಮಾಜದ ಎಲ್ಲ ವರ್ಗಕ್ಕೆ ಬಸವಾದಿ ಚಿಂತನೆಗಳನ್ನು ತಲುಪಿಸುವುದೇ ಮತ್ತೆ ಕಲ್ಯಾಣ. ಇದು ಬಸವಣ್ಣನವರ ತತ್ವಕ್ಕೆ ಹೊಸ ಆಯಮ ನೀಡುವಂಥದ್ದು. ಬಸವಣ್ಣ ಪ್ರಚಾರದ ಸರಕಲ್ಲ. ಅದು ಬೆಳಕು. ಬೆಳಕನ್ನು ರಾಜ್ಯಾದ್ಯಂತ ಪಸರಿಸುವ ಕೆಲಸ. ಕಠಿಣವಾದ ಕೆಲಸ. ಆಧ್ಯಾತ್ಮದ ದರ್ಶನ ಇಲ್ಲದೆ ಹೋದರೆ ಬದುಕಿನಿಂದ ವಿಮುಖರಾಗುವ ಸಾಧ್ಯತೆ ಇದೆ. ಇಂಥವರಿಗೆ ಬಸವ ತತ್ವ ಮಾರ್ಗದರ್ಶನ ತೋರುವುವುದು ಎನ್ನುವುದನ್ನು ತಿಳಿಸಬೇಕಾಗಿದೆ. ಈ ಕಾರ್ಯಕ್ಕೆ ಶುಭವಷ್ಟೇ ಅಲ್ಲ ಅವರ ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಜೊತೆಯಾಗಿ ನಿಲ್ಲುವ ಅವಶ್ಯಕತೆ ಇದೆ ಎಂದರು. ಶ್ರೀ ಪರುಷೋತ್ತಮಾನಂದಪುರಿ ಸ್ವಾಮಿಗಳು, ಶಾಸಕ ಗೂಳಿಹಟ್ಟಿ ಶೇಖರ್, ಬೇರೆ ಬೇರೆ ಜಿಲ್ಲೆಗಳ ಮುಖಂಡರು ಉಪಸ್ಥಿತಿತರಿದ್ದರು. ಸಾಣೇಹಳ್ಳಿ ಗ್ರಾಮದ ರೈತ ಸಣ್ಣಪ್ಪರ ಬಸವರಾಜಪ್ಪ ಶರಣರ ಸ್ಥಬ್ಧ ಚಿತ್ರವುಳ್ಳ ವಿಶೇಷ ವಾಹನಕ್ಕೆ ಮತ್ತೆಕಲ್ಯಾಣದ ಬಾವುಟವನ್ನು ನಿಶಾನೆಯಾಗಿ ತೋರಿಸುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಶಾಲಾ ಕಾಲೇಜುಗಳ ಸಿಬ್ಬಂದಿ,ವಿದ್ಯಾರ್ಥಿಗಳು, ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಿಕಾಣಿಕೆ ಸಮರ್ಪಿಸಿದರು. ಸಾವಿರಾರು ಜನ ನಿಂತು ಬೀಳ್ಕೊಟ್ಟರು. ನೂರಾರು ವಾಹನಗಳು ಪೂಜ್ಯರ ವಾಹನವನ್ನು ಹಿಂಬಾಲಿಸಿದವು. ಆರಂಭದಲ್ಲಿ ವಚನಗೀತೆಯ ಪ್ರಾರ್ಥನೆ ನಡೆಸಲಾಯಿತು.





ಆಗಸ್ಟ್ 02 ಶುಕ್ರವಾರ, ಉಡುಪಿ


-ಸಾರ್ವಜನಿಕ ಸಮಾವೇಶ - ಇಲ್ಲಿನ ಪುರಭವನ ಅಜ್ಜರಕಾಡಿನಲ್ಲಿ ನಡೆದ ಮತ್ತೆ ಕಲ್ಯಾಣದ ಸಾನ್ನಿಧ್ಯವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ 12 ನೆಯ ಶತಮಾನ 21 ನೆಯ ಬೇರೆ ಬೇರೆ ಅಲ್ಲ. ಅಂದಿರುವವರೇ ಇಂದೂ ಇದ್ದಾರೆ. ಅಂದಿರುವ ಸಮಸ್ಯೆಗಳೇ ಇಂದೂ ಇವೆ. ವಚನಕಾರರು ಶ್ರದ್ಧೆ, ಭಕ್ತಿ, ಬದ್ಧತೆಯಿಂದ ಆ ಸಮಸ್ಯೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು. ಕಾಲ, ಕಾಯಕ ಮತ್ತು ಕಾಸುಗಳ ಮಹತ್ವವನ್ನು ಮರೆತದ್ದರಿಂದಲೇ ಎಲ್ಲ ಅನಾಹುತಗಳಿಗೆ ದಾರಿಯಾಗಿದೆ. ಇವುಗಳ ಮಹತ್ವ ತಿಳಿದು ನಡೆದುಕೊಳ್ಳಬೇಕು. ಸಂಪತ್ತಿನ ಮದದಲ್ಲಿ ಮೆರೆಯುತ್ತಿರುವ ಜನರನ್ನು ಉದ್ದೇಶಿಸಿಯೇ ಬಸವಣ್ಣ ಹಾವು ಕಚ್ಚಿಸಿದವರನ್ನು ನುಡಿಸಬಹುದು `ಸಿರಿಗರ’ ಹೊಡೆದವರ ನುಡಿಸಲಾಗದು ಎಂದು ಹೇಳಿದುದು. ಸಿರಿಗರ ಮಠಾಧಿಪತಿಗಳಿಗೆ, ರಾಜಕಾರಣಿಗಳಿಗೆ ಇಂದು ಹೊಡೆದಿದೆ. ಹೀಗಾಗಿ ಎಲ್ಲರೂ ಮದವೇರಿದ್ದಾರೆ. ಮತದಾರ ಜಾಗೃತನಾದರೆ ನೇತಾರ ಜಾಗೃತನಾಗುವನು. ಬಸವಣ್ಣ ನೇತರರನ್ನು ಅವಲಂಭಿಸದೆ ಮತದಾರರನ್ನು ಅವಲಂಬಿಸಿದ್ದರು. ಬಸವಣ್ಣ ಮೊದಲು ತಮ್ಮ ವ್ಯಕ್ತಿತ್ವವನ್ನು ತಾವು ತಿದ್ದಿಕೊಂಡರು. ಮೊದಲು ಜಾತಿಯ ಶ್ರೇಷ್ಠತೆಯಿಂದ ಹೊರಬಂದರು. ವಚನಕಾರರ ದಾಸೋಹ ಪ್ರಜ್ಞೆ ಇಂದಿನ ಜನರಿಗೆ ಬರಬೇಕಿದೆ. ವಚನಕಾರರಲ್ಲಿ ಕೂಡಿಡುವ ಪದ್ಧತಿ ಇರಲಿಲ್ಲ. ಅಕ್ಕಿಯನ್ನು ಆಯ್ದು ಜೀವನ ಮಾಡುವ ಮಾರಯ್ಯ ಒಮ್ಮೆ ಹೆಚ್ಚು ಅಕ್ಕಿಯನ್ನು ತಂದಾಗ ಪತ್ನಿ ಲಕ್ಕಮ್ಮ `ಈಸಕ್ಕಿಯಾಸೆ ನಿಮಗೇಕೆ” ಎಂದು ಪ್ರಶ್ನಿಸಿ ಅದನ್ನು ವಾಪಾಸ್ ಕಳುಹಿಸುವ ನೈತಿಕ ಸ್ಥೈರ್ಯ ತೋರಿದಳು. ಇಂಥ ಧೈರ್ಯ ಇಂದು ನಮಗಿದೆಯೇ ಎಂದು ಕೇಳಿಕೊಳ್ಳಬೇಕಾಗಿದೆ. ಬಸವ ತತ್ವವನ್ನು ಆರಿತು ಆಚರಿಸುವ ನಿಷ್ಠೆ ಮತದಾರರಿಗೆ, ನೇತರಾರಿಗೆ ಬರಬೇಕಿದೆ. ತಾತ್ವಿಕ ಬದ್ಧತೆ ಇಲ್ಲದ ಬದುಕು ನರಕವಾಗುವುದು. ಜನ ಮೆಚ್ಚಿ ಶುದ್ಧನಲ್ಲದೆ ಮನ ಮೆಚ್ಚಿ ಶುದ್ಧನಲ್ಲ ಎನ್ನುವ ಮಾತನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಕಾಕಿ, ಕಾವಿ, ಖಾದಿ ಸುಮ್ಮನೆ ಅವು ಬಟ್ಟೆಗಳಲ್ಲ; ಅವುಗಳಿಗಿರುವ ಅರ್ಥವನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಬೇಕು. ಆತ್ಮ ಶುದ್ಧಿಯಿಲ್ಲದೆ ಲೋಕಕಲ್ಯಾಣ ಸಾಧ್ಯವಿಲ್ಲ. ಜಾಗೃತಿ ಸಾಮಾನ್ಯ ಜನರಿಗಿಂತ ಅಧಿಕಾರ ಹೊಂದಿರುವವರಿಗೆ, ಜಾತಿಯ ಮೇಲ್ಪದರದಲ್ಲಿರುವ ಬೇಕಿದೆ. ಇಂಥವರು ಮಾತನಾಡುವ ಬದಲು ವಚನಕಾರರ ಚಿಂತನೆಯನ್ನು ಕೇಳಿ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಶ್ರೇಷ್ಠತೆಯೆಂಬ ವ್ಯಸನದಿಂದ ಹೊರಬರಬೇಕಿದೆ. ನಮ್ಮ ಈ ಮತ್ತೆ ಕಲ್ಯಾಣದ ವೇದಿಕೆಗೆ ಒಂದು ಬದ್ಧತೆ, ಶಿಸ್ತು ಇರುತ್ತದೆ ಎಂದು ಹೇಳಿದರು.
ಬಸವಣ್ಣ ಮತ್ತು ಜನತಂತ್ರ ಕುರಿತು ಉಪನ್ಯಾಸ ನೀಡಿದ ಕಡೂರಿನ ಮಾಜಿ ಶಾಸಕ ವೈ ಎಸ್ ವಿ ದತ್ತ ಮಾತನಾಡಿ ಉಡುಪಿ ಇಂದು ವೈದಿಕ ಯಾತ್ರೆ ಮತ್ತು ವೈಚಾರಿಕ ಯಾತ್ರೆಗೆ ಸಾಕ್ಷಿಯಾಗಿದೆ. ಉಡುಪಿಯ ನೆಲದಲ್ಲಿ ಸರ್ವ ಜನಾಂಗದ ಸಾಮರಸ್ಯದ ಅರಿವನ್ನು ಮತ್ತೆ ಮತ್ತೆ ಮೂಡಿಸಬೇಕಾದ ಅನಿವಾರ್ಯತೆಯಿದೆ. ಇಂಗ್ಲೇಂಡಿನಲ್ಲಿ ನಡೆದ ಮ್ಯಾಗ್ನಾಕಾರ್ಟ್ ಪ್ರಜಾಪ್ರಭುತ್ವದ ಉಗಮದ ಸಂಕೇತವೆಂದೂ, ಪ್ರಾನ್ಸ್ ಕ್ರಾಂತಿ, ರಷ್ಯಾದ ಕ್ರಾಂತಿಗಳೇ ಜನತಂತ್ರದ ಉಗಮ ತಾಣಗಳೆಂದು ಇತಿಹಾಸದಲ್ಲಿ ಓದಿದ್ದೇವೆ. ಆದರೆ ಆಶ್ಚರ್ಯ ಮತ್ತು ಖುಷಿ ಕೊಡುವ ಸಂಗತಿಯೆಂದರೆ ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ಮೊಟ್ಟಮೊದಲಿಗೆ ನೀಡಿದವರು 12 ನೆಯ ಶತಮಾನದ ಬಸವಣ್ಣ. ಜನರೆಲ್ಲ ಕೂಡಲಸಂಗಮದೇವರು, ನಾನೊಬ್ಬನೇ ಭಕ್ತ ಎನ್ನುವುದೇ ಬಸಣ್ಣ ಪ್ರಜಾತಂತ್ರಕ್ಕೆ ನೀಡಿದ ವ್ಯಾಖ್ಯಾನ. ಈ ಮಾತನ್ನು ನಾವು ರಾಜಕಾರಣಿಗಳು ಅನುಸರಿಸಿದ್ದರೆ ಎಂಥ ಬದಲಾವಣೆಯನ್ನು ಕಾಣಲು ಸಾಧ್ಯವಿತ್ತು ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ವ್ಯಷ್ಠಿ ಮತ್ತು ಸಮಷ್ಠಿಗಳ ಮಧ್ಯೆ ಪೂರಕ, ಸಾಮರಾಸ್ಯದ ಬೆಸುಗೆಯಿರಬೇಕು. ಇದೇ ಪ್ರಜಾಪ್ರಭುತ್ವದ ಮೂಲಾಧಾರ. ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ, ಮನವ ಸಂತೈಸಿಕೊಳ್ಳಿ ಎನ್ನುವ ಮೂಲಕ ವ್ಯಷ್ಠಿ ಮತ್ತು ಸಮಷ್ಠಿಯನ್ನು ಬಸವಣ್ಣ ಬೆಸೆದಿದ್ದಾರೆ. ಬಸವಣ್ಣನ ಸಂವಿಧಾನಕ್ಕೆ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ’ ಎನ್ನುವ ಸಪ್ತಶೀಲಗಳೇ ಪ್ರಿಯಾಂಬಲ್. ಸದಾ ಬಸವಣ್ಣ ಬಡವರ, ದೀನ ದಲಿತರ ಪರವಾಗಿದ್ದವರು. ಬಸವಣ್ಣ `ಹೊನ್ನಿನೊಳಗೊಂದೊರೆಯ ಸೀರೆಯೊಳಗೊಂದಳೆಯ ಇಂದಿಂಗೆ, ನಾಳೆಗೆ ಎಂದು ಕೂಡಿಟ್ಟೆನಾದರೆ ತಲೆದಂಡ’ ಎಂದು ಅಂದೇ ಹೇಳಿದ್ದಾರೆ. ಇಂದು ನಾವು ಅಹಿಂದಾ ಚಳುವಳಿಯ ಬಗ್ಗೆ ಮಾತನಾಡುತ್ತೇವೆ. ಬಸವಣ್ಣ ಅಂದೇ ಸೂಳೆ ಸಂಕವ್ವೆಯನ್ನು ಪತಿತ ಪಾವನೆಯನ್ನಾಗಿ ಮಾಡಿದವ. ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ ಎಂದು ಬಸವಣ್ಣ ತನ್ನನ್ನೇ ತಾನು ಕಿರಿದಾಗಿಸಿಕೊಳ್ಳುವ ಮೂಲಕ ಸಮಾನತೆಯನ್ನು ಸಾರಿದವರು. ಎಲ್ಲಿಯವರೆಗೆ ಜನರು ಜನಪರ, ಜೀವಪರ ನಿಲುವುಳ್ಳವರನ್ನ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಜನತಂತ್ರ ಯಶಸ್ವಿಯಾಗದು. ಇಂದು ಸೈದ್ಧಾಂತಿಕ ಬದ್ಧತೆ, ಪ್ರಾಮಾಣಿಕ ನಿಲುವು ರಾಜಕಾರಣಿಗಳಿಗೆ ಇರಬೇಕು. ಜನರಿಗೆ ಅಂಜುವವ ರಾಜಕಾರಣಿಯಾಗಬೇಕು. ಬಸವಣ್ಣನಗಿರುವ ತಾಕತ್ತು ಇಂದಿನ ಯಾವ ದೇಶದ ರಾಜಕಾರಣಿಗಳಿಗೂ ಇಲ್ಲ. ಅಧಿಕಾರ ಇದ್ದಾಗ ಕೆಲಸ ಮಾಡದೆ; ಮಾಜಿ ಆದ ಮೇಲೆ ಹಳಹಳಿಸುವುದರಲ್ಲಿ ಅರ್ಥವಿಲ್ಲ ಎಂದರು.
ವಚನಗಳ ಸಮಾನತೆಯ ಆಶಯ ಕುರಿತಂತೆ ಹಿರೇಯಡ್ಕದ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಮಾತನಾಡಿ ಆಕರ್ಷಕವಾಗಿ ಮಾತನಾಡಿದರೆ ಸಾಲದು ನುಡಿ ಧೀರರಾದಂತೆ ನಡೆ ಧೀರರೂ ಆಗಬೇಕು. ಸಮಾಜದ ವಿಮರ್ಶೆಗಿಂತ ಅಂತರಂಗದ ವಿಮರ್ಶೆಗೆ ಹೆಚ್ಚು ಆದ್ಯತೆ ನೀಡಿದವರು ವಚನಕಾರರು. ನಮ್ಮ ಮಾತು ನಮಗೇ ಆರ್ಥವಾಗದಿರುವ ಈ ದಿನಮಾನಗಳಲ್ಲಿ ಮತ್ತೆ ಕಲ್ಯಾಣದ ಮೂಲಕ ನಮ್ಮನ್ನು ತಿದ್ದುವ ಕಾರ್ಯ ಪೂಜ್ಯರು ಮಾಡುತ್ತಿದ್ದಾರೆ. ಅರಿತರೆ ಶರಣ, ಮರೆತರೆ ಮನುಷ್ಯ ಎನ್ನುವುದರ ಮೂಲಕ ವಚನಕಾರರು ನಮ್ಮನ್ನು ನಾವು ಅರಿತುಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದರು. ಸತ್ಯದ ಹಲವು ಮುಖಗಳನ್ನು ಅರ್ಥೈಸಿಕೊಳ್ಳಲು ವಚನಗಳು ನಮ್ಮ ನೆರವಿಗೆ ಬರುವವು. ಹೊರಗಿನ ಬಣ್ಣ, ಜಾತಿ, ವೇಷಭೂಷಗಳು ಮುಖ್ಯವಲ್ಲ; ಅಂತರಂಗವೇ ಮುಖ್ಯ. ವಚನಕಾರರು ತಮ್ಮ ವಚನದಲ್ಲಿ ಸಮಾನತೆಯ ಆಶಯಗಳನ್ನು ವ್ಯಕ್ತಪಡಿಸಿದ್ದಾರೆ. ಸಿರಿಗರ ಹೊಡೆದವರನ್ನು ನುಡಿಸಲಾಗದು; ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿಯುವರು. ಈ ಮಾತು ಇಂದಿನ ರಾಜಕಾರಣಿಗೆ ಹೆಚ್ಚು ಅನ್ವಯಿಸುವುದು. ಮತ್ತೆ ಕಲ್ಯಾಣದ ಮೂಲಕ ನಾಡಿನೆಲ್ಲಡೆ ಬಸವ ಬೆಳಕನ್ನು ಹರಡಲು ಹೊರಟಿರುವ ಪೂಜ್ಯರಿಗೆ ಯಶಸ್ಸಾಗಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಮೇಟಿ ಮುದಿಯಪ್ಪ ಮಾತನಾಡಿ ವಚನ ಚಳುವಳಿ ಒಂದು ಆದರ್ಶ. ಪ್ರಜಾಪ್ರಭುತ್ವದ ಮಾದರಿಗಳನ್ನು ವಚನಗಳಲ್ಲಿ ಕಾಣಬಹುದು. ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಲೇ ಸಮಾಜದ ಹಿತವನ್ನು ಕಾಪಾಡಿದವರು ವಚನಕಾರರು. ಆತ್ಮನಿರೀಕ್ಷಣೆ ವಚನಗಳ ಮುಖ್ಯ ಆಶಯ. ವಚನಕಾರರ ದಯೆ ಕೇವಲ ಮಾನವರಿಗಷ್ಟೇ ಅಲ್ಲ; ಸಕಲ ಜೀವಾತ್ಮರಿಗೂ ಲೇಸ ಬಯಸಿದುದು. ಗಾಂಧೀಜಿಯ ನಿಲುವು ವಚನ ಮೀಮಾಂಸೆಯ ನಿಲುವೂ ಹೌದು. ವಚನಕಾರರು ಕೇವಲ ಲಿಂಗಾಯತ ಮಾತ್ರವಲ್ಲ ಇಡೀ ವಿಶ್ವಕ್ಕೆ ಸಲ್ಲುವವರು. ಬಸವಣ್ಣ ಯಾರೊಬ್ಬರ ಸ್ವತ್ತಲ್ಲ; ವಿಶ್ವದ ಸಕಲರ ಸ್ವತ್ತು. ಭಾರತೀಯರಲ್ಲಿ ಮಹಿಳಾ ಜಾಗೃತಿ 12 ನೆಯ ಶತಮಾನದಲ್ಲಿ ಹೆಚ್ಚಾಗಿ ಕಂಡಿದೆ. ವಚನಕಾರರಲ್ಲಿ ಕಾಯಕಕ್ಕೇ ಅಗ್ರಸ್ಥಾನ. ಕಾಯದಕ ಪ್ರತಿಫಲವನ್ನು ದಾಸೋಹದ ಮೂಲಕ ಹಂಚುವ ಹೊಸ ಅರ್ಥನೀತಿಯನ್ನು ವಚನಕಾರರು ಕಂಡು ಹಿಡಿದರು. ಇಂದಿನ ಭಾರತೀಯ ಸಮಾಜಕ್ಕೆ ಬಸವಣ್ಣನವರ ಆದರ್ಶಗಳನ್ನು ಮುಂದಿಟ್ಟುಕೊಳ್ಳುವ ಅವಶ್ಯಕತೆಯಿದೆ. ಆಧುನಿಕತೆಯ ದುರಂಹಕಾರ, ಲೋಲುಪತೆ ಮುಂತಾದವುಗಳೆಲ್ಲಕ್ಕೂ ವಚನದಲ್ಲಿ ಉತ್ತರವಿದೆ. ಪ್ರಜಾಪ್ರಭುತ್ವದ ಆಧ್ಯಾತ್ಮಿಕ ಆತ್ಮ ವಚನಗಳು. ಇವು ಬದುಕಿಗೆ ನೆಮ್ಮದಿಯನ್ನು ತಂದುಕೊಡಬಲ್ಲವು. ಈ ಹಿನ್ನೆಲೆಯಲ್ಲಿ ಮತ್ತೆ ಕಲ್ಯಾಣದ ಮೂಲಕ ವಚನ ಬೆಳಕನ್ನು ಪಡೆದುಕೊಳ್ಳೋಣ ಎಂದರು.
ವೇದಿಕೆಯ ಮೇಲೆ ಪ್ರಮೋದ್ ಮಧ್ವರಾಜ್, ಲಾಲಾಜಿ ಆರ್ ಮೆಂಡನ್, ವಿನಯಕುಮಾರ್ ಸೊರಕೆ ಇದ್ದರು. ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ನಿರಂಜನ್, ಕಾರ್ಯಕ್ರಮ ನಿರೂಪಣೆಯನ್ನು ತ್ರಿವೇಣಿ ನೆರವೇರಿಸಿಕೊಟ್ಟರು. ದಿನಕರ್ ಬೇಂಗ್ರೆ ಶರಣು ಸಮರ್ಪಿಸಿದರು.
ಬೆಳಗ್ಗೆ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ
ಉಡುಪಿ, ಆಗಸ್ಟ್ 2; ನಾವೆಲ್ಲರೂ ಕೂಡ ದೇವರ ಮಕ್ಕಳು ಎನ್ನುವ ಭಾವ ನೆಲೆಗೊಳ್ಳಬೇಕು. ಹುಟ್ಟಿನ ಕಾರಣಕ್ಕಾಗಿ ಮೇಲು-ಕೀಳು ಎಂಬುದು ಸರಿಯಲ್ಲ. ಶರಣರು ಗುಡಿ ಸುತ್ತಲು, ತೀರ್ಥಕ್ಷೇತ್ರಗಳನ್ನು ಸಂದರ್ಶಿಸಲು ಹೇಳಿಲ್ಲ. ಸ್ಥವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದರು. ಸತ್, ಚಿತ್, ಅನಂದ ಅನುಭವಿಸುವ, ಹುಟ್ಟುಸಾವುಗಳಿಲ್ಲದ ದೇವರೇ ನಿಜವಾದ ದೇವರು. ಈ ಲಕ್ಷಣಗಳಿಲ್ಲದ ಸ್ಥಾವರ ದೇವರು ದೇವರಲ್ಲ. ಈ ಹಿನ್ನೆಲೆಯಲ್ಲಿ ವಚನಕಾರರು `ತನ್ನ ತಾನರಿತರೆ ತಾನೇ ದೇವ ನೋಡ’ ಎಂದದ್ದು. ಇಂದು ನಾವು ದೇವಾಲಯಕ್ಕಿಂತ ದೇಹಾಲಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗಿದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ನೀವೇ ನಾಳಿನ ಹಿರಿಯರು. ನಿಮಗೆ ನಾವು ಸರಿಯಾದ ಮಾರ್ಗದರ್ಶನ ಮಾಡದಿದ್ದರೆ ಚಿಂತಕ ನಾ ಮೊಗಸಾಲೆ; ಮತ್ತೆ ಕಲ್ಯಾಣ ಎಂದರೆ ಈಗಿನ ಬೀದರ್ ಜಿಲ್ಲೆಯ ಬಸವಕಲ್ಯಾಣಕ್ಕೆ ಹೋಗುವುದಲ್ಲ. ವೈಯುಕ್ತಿಕ ಕಲ್ಯಾಣಕ್ಕಿಂತ ಲೋಕಕಲ್ಯಾಣ ಮುಖ್ಯ ಎಂದು ಭಾವಿಸಿದವರು ವಚನಕಾರರು. ವಚನ ಸಾಹಿತ್ಯವಲ್ಲ; ಧರ್ಮ. ಇದು ಎಲ್ಲ ಪುರುಷಾರ್ಥಗಳನ್ನು ಹೊಂದಿದೆ. ವಚನ ಎಂದರೆ ಪ್ರಮಾಣ, ಬದ್ಧತೆ. ವಿನಯವೆಂಬುದು ದೇವರಿಗೆ ಸಾಕ್ಷಿಯಾಗಬೇಕು. ದೇವರಿಗಿಂತ ದೊಡ್ಡವ ಮನುಷ್ಯ, ಮನುಷ್ಯನ ಮನಃಸಾಕ್ಷಿ. ದೇವರನ್ನು ನೆನೆಯುವುದೇ ಕಾಯಕವಾಗಬಾರದು. ದೇವರು ಎಷ್ಟು ದೊಡ್ಡವನೋ ಅದಕ್ಕಿಂತ ಕಾಯಕ ದೊಡ್ಡದು. ಮಾತಿನಿಂದ ಹುಟ್ಟಿದ ಧರ್ಮ ವಚನ ಧರ್ಮ. ಇದು ಸಾಂಸ್ಥಿಕ ಧರ್ಮವಲ್ಲ; ಸಾಂಸ್ಕೃತಿಕ ಧರ್ಮ. ಮನಸ್ಸುಳ್ಳವನೇ ಮನುಷ್ಯ. ಆತ ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾನೆ. ಇಂದು ಬಹುತೇಕ ಧರ್ಮಗಳಲ್ಲಿ ತರತಮ ಭಾವಗಳು ಹುಟ್ಟಿಕೊಂಡಿವೆ. ಯಾವುದು ಧರ್ಮವಲ್ಲವೋ ಅದು ಇಂದು ಧರ್ಮವಾಗಿದೆ. ಜನಸಾಮನ್ಯರಿಗೆ ಧರ್ಮದ ಕಲ್ಪನೆ ಯಾವತ್ತೂ ಬರಲಿಲ್ಲ. ಪುರೋಹಿತರು ಹೇಳುವುದೇ ಧರ್ಮವಾಗಿದೆ. ಧರ್ಮ ಎಂದರೆ ವೈಯಕ್ತಿಕವೂ ಹೌದು ಸಾರ್ವಜನಿಕವೂ ಹೌದು. ಇಂದಿನ ಧರ್ಮಗಳು ಆಚರಣೆಗೆ ಒತ್ತುಕೊಡುತ್ತವೆ. ವಚನ ಧರ್ಮವು ಎಲ್ಲ ಧರ್ಮಗಳ ಸಾರವನ್ನು ಹಿಡಿದಿಟ್ಟಿದೆ. ವಚನ ಧರ್ಮವು ದೇವಾಲಯಗಳನ್ನು ನಾಶಮಾಡುವಂತೆ ಹೇಳಿಲ್ಲ ಎಂದರು.
ಉಪನ್ಯಾಸಕ ನಾಗರಾಜ್ ಜಿ ಎಸ್ : 21 ನೆಯ ಶತಮಾನದಲ್ಲಿರುವ ನಾವು ಸಂವಿಧಾನವನ್ನೇ ಅಳಿಸುವ ದಾಷ್ಠ್ಯ ತೋರುತ್ತಿದ್ದೇವೆ. 12 ನೆಯ ಶತಮಾನದಲ್ಲಿ ಬಸವಣ್ಣ ಈ ಹಿನ್ನೆಲೆಯಲ್ಲಿ ಎಷ್ಟು ಕಷ್ಟಪಟ್ಟಿರಬೇಕು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮಲ್ಲಿರುವ ನಕಾರಾತ್ಮಕ ಭಾವನೆಯನ್ನು ಸಕಾರಾತ್ಮಕ ಭಾವನೆಯಾಗಲು ವಚನ ಸಾಹಿತ್ಯದ ಅಧ್ಯಯನ ಮುಖ್ಯ. ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದೇ ಧರ್ಮ. ಮನುಷ್ಯರಲ್ಲಿ ಮಾನವ ಧರ್ಮ ಮುಖ್ಯವಾಗಬೇಕು. ಜಾತಿಯ ಹಂಗಿಲ್ಲದೆ ಇತರರನ್ನ ನೋಡುವ, ಜೊತೆ ಜೊತೆ ಸಾಗುವ ಭಾವನೆ ಬರಬೇಕು. ಅಪ್ಪ-ಅಮ್ಮನನ್ನು ಕಣ್ಣೀರು ಹಾಕಿಸುವ ಕೆಲಸ ವಿದ್ಯಾರ್ಥಿಗಳು ಮಾಡಬಾರದು. ಗುರುಗಳ ಕಣ್ಣಲ್ಲಿ ನೀರು ತರಿಸುವವರು ಮುಂದೆ ರಕ್ತಕಣ್ಣೀರು ಹರಿಸುತ್ತಾರೆ. ವಚನದ ಬೆಳಕಲ್ಲಿ ನಾವೆಲ್ಲ ಸಾಗೋಣ ಎಂದರು.
ವೈ.ಎಸ್.ವಿ.ದತ್ತ : `ಮರದ ಬಾಯಿ ಬೇರೆಂದು ತಳಕ್ಕೆ ನೀರೆರೆಯಬೇಕು’ ಎಂದು ಬಸವಣ್ಣನವರು ಹೇಳಿರುವ ಮಾತನ್ನು ಪಂಡಿತಾರಾಧ್ಯ ಗುರುಗಳು `ಸಮಾಜದ ಬೇರು ಮಕ್ಕಳೆಂದು ಭಾವಿಸಿ’ ಅವರಿಗೆ ವಚನ ತತ್ವದ ನೀರೆರೆಯುವ ಕಾಯಕವೇ ಈ ಮತ್ತೆ ಕಲ್ಯಾಣ. ಈ ಮತ್ತೆ ಕಲ್ಯಾಣ ಎಂದೋ ಪ್ರಾರಂಭವಾಗಬೇಕಿತ್ತು. ತಡವಾದರೂ ಪ್ರಾರಂಭವಾಯಿತಲ್ಲ ಎನ್ನುವುದೇ ಸಮಾಧಾನದ ಸಂಗತಿ. ಶರಣರ ತತ್ವ ಸಿದ್ಧಾಂತಗಳು ಎಲ್ಲರಿಗೂ ಆದರ್ಶ. ಅದರಲ್ಲೂ ನನ್ನಂಥ ರಾಜಕಾರಣಿಗಳಿಗೆ ಇನ್ನೂ ಹೆಚ್ಚು ಆದರ್ಶವಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬಸವಚಿಂತನೆಯತ್ತ ಮುಖಮಾಡುವುದಷ್ಟೇ ಅಲ್ಲ; ಅನುಷ್ಠಾನಕ್ಕೆ ತರಬೇಕಾದ ತುರ್ತು ಇಂದು ಇದೆ ಎಂದರು.
ಸಂವಾದದಲ್ಲಿ ಉಡುಪಿಯ ಎಲ್ಲ ತಾಲ್ಲೂಕಿನಿಂದ ಬಂದ ಆಯ್ದ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡು ತಮ್ಮ ಆತ್ಮಬಲವನ್ನು ಹೆಚ್ಚಿಸಿಕೊಂಡರು.






ಆಗಸ್ಟ್ 03 ಶನಿವಾರ, ಮಂಗಳೂರು


ಮತ್ತೆ ಕಲ್ಯಾಣ ಆಂದೋಲನದ ಸಮಾವೇಶ ಮಂಗಳೂರು ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ



ಅಗಸ್ಟ್ 3 ಮಂಗಳೂರು; ಇಲ್ಲಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಂಡಿದ್ದ ಮತ್ತೆ ಕಲ್ಯಾಣದ ಭಾಗವಾಗಿ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮುಖವಾಡಗಳನ್ನು ಕಳಚಿ ಸಹಜವಾಗಿ ಬದುಕುವ ಪ್ರಯತ್ನ ಮಾಡಿದರೆ ವ್ಯಕ್ತಿ ಇನ್ನೊಷ್ಟು ಶಕ್ತಿಯುತವಾಗಿ ಬದುಕಲು ಸಾಧ್ಯ. ಮನುಷ್ಯ ಇಂದು ಅರ್ಥ, ಅಧಿಕಾರ, ರೂಪ ಮುಂತಾದ ಮದಗಳಿಂದ ಮದೋನ್ಮತ್ತನಾಗಿದ್ದಾನೆ. `ಮಾಡಿದೆನೆಂಬುದು ಮನದಲ್ಲಿ ಕಾಡಿದರೆ ಏಡಿಸಿ ಕಾಡಿತ್ತು ಮಾಯೆ’ ಎನ್ನುವ ಮೂಲಕ ಬಸವಣ್ಣ ತಮ್ಮ ವಿನಯವಂತಿಕೆಯನ್ನು ತೋರಿದ್ದಾರೆ. `ಎನಗಿಂತ ಕಿರಿಯರಿಲ್ಲ; ಶಿವಭಕ್ತನಿಗಿಂತ ಹಿರಿಯರಿಲ್ಲ’ ಎನ್ನುವ ವಿನಯವಂತಿಕೆಯನ್ನು ಬೆಳಸಿಕೊಳ್ಳದಿದ್ದರೆ ನಾವು ಅಹಂಕಾರದ ಮೊಟ್ಟೆಗಳಾಗುತ್ತೇವೆ. ವಿನಯವಂತಿಕೆ, ಬಾಗುವ ಗುಣ ಇಲ್ಲದಿದ್ದರೆ `ಮತ್ತೆ ಕಲ್ಯಾಣ’ ಸಾಧ್ಯವಿಲ್ಲ. ಕಸಬರಿಕೆಯ ಕೆಲಸ ಕಸ ಇರುವಲ್ಲಿ ಕಸ ಗುಡಿಸುವುದು. ಯಾವ ಕಸಬರಿಕೆಯನ್ನು ಎಲ್ಲಿ ಬಳಸಬೇಕೆನ್ನುವ ವಿವೇಕವೂ ನಮಗಿದೆ. ನಾವೆ ಬುದ್ಧಿವಂತರು, ವಿವೇಕವಂತರು, ನಮ್ಮಂತೆ ಸಮಾಜಿಕ ಕಾಳಜಿಯುಳ್ಳವರು ಬೇರೆ ಯಾರೂ ಇಲ್ಲ ಎನ್ನುವ ಅಹಂಕಾರವನ್ನು ಕೆಲವರು ಬಿಡಬೇಕು. ನಮ್ಮ ವೇದಿಕೆ ಎಲ್ಲರನ್ನೂ ಒಳಗೊಳ್ಳುವ ವೇದಿಕೆ. ಮುಂದಿನ ನವ ಸಮಾಜಕ್ಕಾಗಿ ನಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡುವುದು ಇಂದಿನ ಅತ್ಯಂತ ತುರ್ತು ಅಗತ್ಯ. ಅದನ್ನು ಯಾರು ಎಷ್ಟೇ ವಿರೋಧಿಸಿದರೂ ನಾವು ನಮ್ಮ ಪ್ರಯತ್ನ ಬಿಡುವುದಿಲ್ಲ. ನಿಪುಣ ಶಿಲ್ಪಿಯೊಬ್ಬ ಕಾಡುಗಲ್ಲಿಗೂ ಸುಂದರ ರೂಪ ಕೊಡಬಲ್ಲ. ಇದೇ ಪ್ರಯತ್ನವನ್ನು `ಮತ್ತೆ ಕಲ್ಯಾಣ’ ಮಾಡುತ್ತಿದೆ. ಬಸವಣ್ಣನವರಿಗೆ ಬಂದಷ್ಟು ವಿಪತ್ತುಗಳು ಬೇರೆ ಯಾರಿಗೂ ಬಂದಿರಲಿಕ್ಕೆ ಸಾಧ್ಯವಿಲ್ಲ. ಆದರೂ ಅವರು ವಿವೇಕದಿಂದ ಎಲ್ಲವನ್ನೂ ಎದುರಿಸಿ ಯಶಸ್ವಿಯಾದರು. ಇದು ನಮಗೂ ಪ್ರೇರಣೆ. ನಮ್ಮನ್ನು ಇಲ್ಲಿ `ಅಭಿನವ ಬಸವಣ್ಣ’ ಎಂದು ಬಣ್ಣಿಸಲಾಯಿತು. ಈ ಮಾತು ಕೇಳಿ ನಮಗೆ ತುಂಬ ವೇದನೆಯಾಯಿತು. ನಾವು `ಮಾವಿನ ಕಾಯಿಯೊಳಗೊಂದು ಎಕ್ಕೆಯ ಕಾಯಿ’ ಮಾತ್ರ. ಇಂದು ಯಾವ ವ್ಯಕ್ತಿಗೂ ಅಭಿನವ ಬಸವಣ್ಣ ಎನ್ನುವ ಪದ ಬಳಕೆಯ ಯೋಗ್ಯತೆಯಿಲ್ಲ. ಮತ್ತೆ ಕಲ್ಯಾಣ ಕಾರ್ಯಕ್ರಮಕ್ಕೆ ಯಾವುದೇ ಮಡಿ-ಮೈಲಿಗೆಯಿಲ್ಲ. ಇಲ್ಲಿನ `ಮತ್ತೆ ಕಲ್ಯಾಣ’ದ ಸಂಘಟಕರಲ್ಲಿ ಮುಸ್ಲಿಂ ಬಾಂಧವರು, ಕ್ರೈಸ್ತ ಬಾಂಧವರೂ ಇರುವರು ಎನ್ನುವುದನ್ನು ಮನಗಾಣಬೇಕು ಎಂದರು.
`ವಚನ ಸಾಹಿತ್ಯ ಮತ್ತು ಸಂವಿಧಾನ’ ಕುರಿತಂತೆ ಕರ್ನಾಟಕ ಚಿತ್ರಕಲಾಪರಿಷತ್ ಅಧ್ಯಕ್ಷರಾದ ಬಿ ಎಲ್ ಶಂಕರ್ ಮಾತನಾಡಿ 12 ನೆಯ ಶತಮಾನದಲ್ಲಿ ಬಸವಾದಿ ಶರಣರು ಮಾಡಿದಂಥ ಪ್ರಯತ್ನವನ್ನು ಇಂದು 21 ನೆಯ ಶತಮಾನದಲ್ಲಿ ಪಂಡಿತಾರಾಧ್ಯ ಶ್ರೀಗಳು `ಮತ್ತೆ ಕಲ್ಯಾಣ’ದ ಮೂಲಕ ಮಾಡ ಹೊರಟಿದ್ದಾರೆ. ಇಂಥ ಕಾರ್ಯ ಮಾಡಲು ಎಂಟೆದೆ ಬೇಕು. ಅಂಥ ಅಪರೂಪದ ಸ್ವಾಮಿಜಿಗಳು ಪಂಡಿತಾರಾಧ್ಯ ಶ್ರೀಗಳು. ಈ ಕಾರ್ಯವನ್ನು ಮೆಚ್ಚುವುದರ ಜೊತೆ-ಜೊತೆಗೆ ನಾವೂ ಹೆಜ್ಜೆ ಹಾಕಬೇಕು. ಈ ಬಗ್ಗೆ ಕೆಲವರು ಅಪಸ್ವರ, ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವುದು ಮೊಸರಿನಲ್ಲಿ ಕಲ್ಲು ಹುಡುಕಿದಂತಾಗಿದೆ. ಅತಿ ವಿಸ್ತೃತವಾದ ಸಂವಿಧಾನ ಭಾರತದ ಸಂವಿಧಾನ. ಅಷ್ಟೇ ವಿಶಾಲ ಮೌಲ್ಯಗಳನ್ನು ಒಳಗೊಂಡದ್ದು ವಚನ ಸಾಹಿತ್ಯ. ನಮ್ಮ ಸಂವಿಧಾನವೇ ನಮ್ಮ ಧರ್ಮ ಗ್ರಂಥ. ದೇಶ ಅನ್ನುವುದು ಭೂಮಿ ಅಥವ ಮಣ್ಣಲ್ಲ; ಮನುಷ್ಯ. ಸಂವಿಧಾನಕಾರರ ಮೇಲೆ ಪ್ರಭಾವ ಬೀರಿದ ಪ್ರಮುಖ ಅಂಶಗಳು; ಅಮೇರಿಕಾದ ಕ್ರಾಂತಿಯ ಘೋಷಣೆ `ಸೃಷ್ಟಿಯಲ್ಲಿ ಎಲ್ಲ ಸಮಾನರು’, ಪ್ರೆಂಚ್ ಕ್ರಾಂತಿಯ `ಸ್ವಾಂತತ್ರ್ಯ, ಸಹೋದರತೆ, ಸಮಾನತೆ’, ರಶ್ಯದ ಕ್ರಾಂತಿದ `ಸಾಮಾರ್ಥ್ಯಕ್ಕೆ ತಕ್ಕ ಹಾಗೆ ಮಾತನಾಡಬೇಕು, ಪಡೆಯಬೇಕು’ ಎನ್ನುವಂಥ ಮಾತುಗಳು. ನಮ್ಮ ದೇಶದ ಕರಡು ಸಂವಿಧಾನವನ್ನು ಸಾರ್ವಜನಿಕ ಅವಗಾಹನೆಗೆ ತಂದಾಗ 7635 ತಿದ್ದುಪಡಿಗಳು ಬಂದು ಸೇರಿಕೊಳ್ಳುತ್ತವೆ. ನಮ್ಮ ದೇಶದ ಒಟ್ಟು ಸಂಪತ್ತಿನ ಶೇ. 58 ರ ಭಾಗ ಶೇ 1 ಜನರ ಕೈಯಲ್ಲಿದೆ ಎನ್ನುವುದು ವಿಪರ್ಯಾಸವೇ ಸರಿ. ಒಂದು ವೇಳೆ ಸಂವಿಧಾನದ ಆಶಯಗಳು ಈಡೇರದಿದ್ದರೆ ಅದರ ತಪ್ಪು ಸಂವಿಧಾನದಲ್ಲ; ಸಂವಿಧಾನವನ್ನು ಅನುಷ್ಟಾನಕ್ಕೆ ತರುವವರದ್ದು ಎಂದು ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗಲೇ ಹೇಳಿದ್ದಾರೆ. ಇಂಗ್ಲೆಂಡಿನ ಮ್ಯಾಗ್ನಾಕಾರ್ಟ್ ಒಪ್ಪಂದವೇ ಪ್ರಜಾಪ್ರಭುತ್ವದ ಮೂಲ ಎಂದು ಹೇಳಲಾಗುತ್ತಿದೆ. ಆದರೆ ನಮ್ಮ ಸಂವಿಧಾನಕ್ಕೆ 12 ನೆಯ ಶತಮಾನದ `ಅನುಭವ ಮಂಟಪ’ವೇ ಮೂಲ ಎಂದು ನಾವು ಘಂಟಾಘೋಷವಾಗಿ, ಹೆಮ್ಮೆಯಿಂದ ಹೇಳಬಹುದು. ಅನುಭವ ಮಂಟಪವೇ ನಮ್ಮ ದೇಶದ ಮೊದಲ ಪಾರ್ಲಿಮೆಂಟು. ಅಲ್ಲಮಪ್ರಭುಗಳೇ ಮೊದಲ ಸ್ಪೀಕರ್. ಪ್ರತಿ 600 ವರ್ಷದ ಅವಧಿಗೊಬ್ಬರಂತೆ ಬುದ್ಧ, ಏಸು ಕ್ರಿಸ್ತ, ಪೈಗಂಬರ್, ಬಸವಣ್ಣನವರು ಬಂದು ಮಾನವತೆಯ ಸಂದೇಶ ನೀಡಿದ್ದಾರೆ. ಕಳ ಬೇಡ, ಕೊಲ ಬೇಡ, ಹುಸಿಯ ನುಡಿಯಲು ಬೇಡ, ಇದಿರ ಹಳಿಯ ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಮನದ ಮುಂದಣ ಆಸೆಯೇ ಮಾಯೆ, ನಾನು ನೀನೆಂಬುದೇ ಮಾಯೆ ಮುಂತಾದ ಮೌಲ್ಯಯುತ ಆತ್ಮಸಾಕ್ಷಿಯ ಮಾತುಗಳೇ ವಚನಕಾರರ ಸಂವಿಧಾನ. ಇಂಥ ಪ್ರತಿಯೊಂದು ಮಾತಿಗೂ ಸಂವಿಧಾನದಲ್ಲಿ ಮೂರ್ನಾಲ್ಕು ಆರ್ಟಿಕಲ್ ಗಳಿವೆ. ಬಸವಣ್ಣನವರ ದೃಷ್ಟಿಯಲ್ಲಿ ಭಕ್ತ ಮತ್ತು ಭವಿ ಎರಡೇ ಕುಲಗಳು. ಇಂದಿನ ಸಂಸತ್ತಿನ ಕಲ್ಪನೆ ಬುದ್ಧನ ಕಾಲದಲ್ಲಿಯೂ ಇತ್ತು. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎನ್ನುವಂತೆ ಇತಿಹಾಸವನ್ನು ನೆನಪಿಸುವ ಕೆಲಸವನ್ನು ಪಂಡಿತಾರಾಧ್ಯ ಶ್ರೀಗಳು `ಮತ್ತೆ ಕಲ್ಯಾಣ’ದ ಮೂಲಕ ಮಾಡಿಕೊಡುತ್ತಿದ್ದಾರೆ. ಪ್ರಜೆಗಳು ಪ್ರಭುಗಳೇ ಹೊರತು; ಫಲಾನುಭವಿಗಳಲ್ಲ. ಮತ್ತೆ ಕಲ್ಯಾಣದ ಮೂಲಕ ನಮ್ಮ ಪರಂಪರೆ, ಸಂಸ್ಕೃತಿಯನ್ನು ನೆನಪಿಸುವ ಕೆಲಸವನ್ನು ಮತ್ತೆ ಕಲ್ಯಾಣ ಮಾಡುತ್ತಿದೆ. ಈ ಕಾರ್ಯಕ್ರಮ ಎಲ್ಲೆಲ್ಲಿ ನಡೆಯುತ್ತದೆಯೋ ಅಲ್ಲಿಗೆ ನಮ್ಮ ಸಮಾನ ಮನಸ್ಕ ಜನರನ್ನು ಕಳುಹಿಸಿಕೊಟ್ಟರೆ ಅದೇ ನಾವು ಅವರೊಟ್ಟಿಗೆ ಇಡುವ ಹೆಜ್ಜೆ. ಪಂಡಿತಾರಾಧ್ಯ ಶ್ರೀಗಳ ಸಭೆಯಲ್ಲಿ ಸಮಯಕ್ಕೆ ಮಹತ್ವವಿದೆ. ಸಮಯವನ್ನು ಯಾರೂ ಮೀರುವಂತಿಲ್ಲ. ನಾನೂ ಸಭಾಪತಿಯಾಗಿದ್ದವನು. ಸಮಯ ಮೀರಿದ್ದಕ್ಕೆ ಕ್ಷಮೆಯಾಚಿಸುವೆ ಎಂದರು.
`ಶರಣರ ದೃಷ್ಟಿಯಲ್ಲಿ ಪರಿವರ್ತನೆ’ ಕುರಿತಂತೆ ಶಿವಮೊಗ್ಗ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಮಾತನಾಡಿ ನಮ್ಮ ಸಮಾಜ ಮತ್ತು ಸಂಸ್ಕೃತಿ ಎಂದೂ ಬರಡಲ್ಲ ಎನ್ನುವುದು ಬೆಳಗ್ಗಿನ ವಿದ್ಯಾರ್ಥಿಗಳ ಸಂವಾದದಿಂದ ನನಗೆ ಮನವರಿಕೆಯಾಯಿತು. ಬಸವಾದಿ ಶರಣರು ಇದ್ದದ್ದನ್ನು ಬುಡಮೇಲು ಮಾಡಲು ಬರಲಿಲ್ಲ. ಅಂತರಂಗದ ತಿಳುವಳಿಕೆಯ ಮೂಲಕ ನಮ್ಮ ಶುದ್ಧಿಯನ್ನು ಮಾಡಿಕೊಳ್ಳಬೇಕಾಗಿದೆ. ಇಂದು ಧೂಳು ನಮ್ಮ ಮುಖದ ಮೇಲಿದೆ. ಆದರೆ ನಾವು ಕನ್ನಡಿಯನ್ನೇ ಒರೆಸುತ್ತಿದ್ದೇವೆ. ದೋಷ ನಮ್ಮಲ್ಲಿಯೇ ಇಟ್ಟುಕೊಂಡು ಹೊರಗೆ ಸರಿಮಾಡುವ ಪ್ರಯತ್ನ ಮಾಡುವುದು ವ್ಯರ್ಥ ಪ್ರಯತ್ನವೇ ಸರಿ. ಬದಲಾಗಿ ನಮ್ಮ ಧೂಳನ್ನು ನಾವೇ ಒರೆಸಿಕೊಳ್ಳುವ ಕೆಲಸವೇ ಮತ್ತೆ ಕಲ್ಯಾಣ. ಇದು ಕನ್ನಡ ನಾಡಿನ ಹೆಮ್ಮೆಯ ಸಂಗತಿ. ಬಸವಾದಿ ಶಿವಶರಣರು ಆದ್ಯತೆ ಕೊಟ್ಟದ್ದು ಅಂತರಂಗ ಶುದ್ಧಿಗೆ. ಬಸವಣ್ಣನ ಮೇಲೂ ಆರೋಪಗಳು ಬಂದಿದ್ದವು. `ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಡೆ ಅದನ್ನು ಕೈಯೆತ್ತಿ ಮುಟ್ಟಿದೆನಾದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ’ ಎನ್ನುವ 12 ನೆಯ ಶತಮಾನದ ಕಸಗುಡಿಸುವ ಸತ್ಯಕ್ಕನ ಮಾತು ಇಂದು ನಮ್ಮ ಮಾತಾಗಬೇಕು. ಸತ್ಯ ಶುದ್ಧನಾಗುವ, ಇತರರಿಗೆ ಮಾದರಿಯಾಗುವ ಪ್ರಯತ್ನ ನಮ್ಮದಾಗಬೇಕು. ವಚನ ಧರ್ಮ ಯಾರದ್ದೋ ಸ್ವತ್ತಲ್ಲ; ಅದು ನಾಡಿನ ಸಂಪತ್ತು. ಅದು ನಮ್ಮ ಸಂಪತ್ತಾಗಬೇಕು. ಸಮಾಜಕ್ಕೆ ದಾರಿ ತೋರಿಸಬೇಕಾದವರು ಗುರುಗಳು. ಆದರೆ ಎಲ್ಲರೂ ಪಂಡಿತಾರಾಧ್ಯ ಗುರುಗಳೇ ಆಗದಿರುವುದು ನಮ್ಮ ದುರ್ದೈವ್ಯ. ಧಾರವಾಹಿಗಳು ಯುವಕರನ್ನಷ್ಟೇ ಅಲ್ಲ ಗೃಹಿಣಿಯರನ್ನೂ ದಾರಿತಪ್ಪಿಸುತ್ತಿವೆ. 12ನೆಯ ಶತಮಾನದ 33 ಶರಣೆಯರ ದಾರಿ ನಮ್ಮದಾಗಬೇಕು. ವೇಶ್ಯೆಯೂ ಉನ್ನತ ಸ್ಥಾನ ಪಡೆಯಬಹುದು, ಸಮಾನ ಬದುಕನ್ನು ಬದುಕಬಹುದು ಎನ್ನುವುದನ್ನು ತೋರಿಸಿಕೊಟ್ಟದ್ದು 12 ನೆಯ ಶತಮಾನ. ಅಕ್ಕಮಹಾದೇವಿಯಂತಹ ಕ್ಯಾರೆಕ್ಟರ್ ಇಂದಿಗೂ ಎಲ್ಲಿಗೂ ಇಲ್ಲ. ಬಸವಾದಿ ಶರಣರು ಇವತ್ತಿಗೂ ಮಾರ್ಗದರ್ಶಕ, ಪೂರಕ. ಒಳಗೆ ಸುಳಿವಾತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ ಎನ್ನುವ ಮೂಲಕ ಸಮಾನತೆಯನ್ನು ಸಾರಿದವರು ಶರಣರು. ಸೋಮಾರಿತನದ ಬದುಕನ್ನು ಶರಣರು ನಿರಾಕರಿಸಿ ಕಾಯಕ ಸಿದ್ಧಾಂತವನ್ನು ಕೊಟ್ಟರು. ನಮ್ಮ ಬದುಕಿನ ಎಲ್ಲ ತಿರುವುಗಳಿಗೂ ಬೆಳಕು ನೀಡುವಂಥವು ವಚನಸಾಹಿತ್ಯ. ಬದ್ಧತೆಯ ಬದುಕನ್ನು ಮತ್ತೆ ಕಲ್ಯಾಣ ನನ್ನಲ್ಲಿ ರೂಪಿಸಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಎಂ ಮೋಹನ್ ಆಳ್ವ ಮಾತನಾಡಿ ನಾನು ಬಸವಣ್ಣ ಮತ್ತು ಅವರ ತತ್ವಗಳ ಬಗ್ಗೆ ಅಪಾರ ನಂಬಿಕೆಯುಳ್ಳವ, ಅದರಂತೆ ನಡೆಯುವವ. ಅದರಂತೆ ನಮ್ಮ ನಾಡಿನ ಅನೇಕಾನೆಕ ದಾರ್ಶನಿಕರ ಬಗ್ಗೆಯೂ ಗೌರವವಿದೆ. ಬಸಣ್ಣನವರ ಬಗ್ಗೆ ವಿಶೇಷ ಗೌರವ ಯಾಕೆಂದರೆ ಅವರು ಕಾಯಕ ತತ್ವಕ್ಕೆ ಮನ್ನಣೆ ಕೊಟ್ಟದ್ದು. ಬಸವಣ್ಣನ ಆಶಯಗಳು ಇವತ್ತಿಗೂ ಪ್ರಸ್ತುತ. 21 ನೆಯ ಶತಮಾನದಲ್ಲಿರುವ ನಮಗೆ ಧರ್ಮ ಮತ್ತು ಮತ, ಜಾತಿಗಳ ವ್ಯತ್ಯಾಸ ಗೊತ್ತಾಗುತ್ತಿಲ್ಲ. ಧರ್ಮ ಮತವಲ್ಲ. ಜಾತಿಗಳು ಹಲವಾರು ಸಮಾಜ ಒಂದೆಂಬ ಭಾವನೆ ಮರೆಯಾಗುತ್ತಿದೆ. ಪರಂಪರೆಯನ್ನು ಪರಿಷ್ಕರಿಸಿ ಅಳವಡಿಸಿಕೊಳ್ಳಬೇಕು. ಪರಿಷ್ಕರಿಸುವುದರ ಮೂಲಕವೇ ಬದಲಾವಣೆ ಸಾಧ್ಯ. ಬಸವಣ್ಣ ಅಂತರಂಗವನ್ನು ಮೊದಲು ಹೇಳಿ ಬಹಿರಂಗವನ್ನು ನಂತರ ಹೇಳಿದವರು. ಬಸವಣ್ಣನವರ ಮೇಲಿರುವಷ್ಟೇ ಗೌರವ ಪಂಡಿತಾರಾಧ್ಯ ಶ್ರೀಗಳ ಮೇಲಿದೆ. ನಮ್ಮ ಮತ್ತು ಶ್ರೀಗಳ ನಡುವಿನ ಸಂಬಂಧ ಸಾಂಸ್ಕೃತಿಕವಾದುದು. ನಮ್ಮ ಸಾಂಸ್ಕೃತಿಕ ತಂಡ ಸಾಣೇಹಳ್ಳಿ, ದಾವಣಗೆರೆ ಮುಂತಾದ ಕಡೆ ಪ್ರದರ್ಶನ ನೀಡುವಲ್ಲಿ ಪೂಜ್ಯರು ನೀಡಿದ ಸಹಕಾರವನ್ನು ಮರೆಯುವಂತಿಲ್ಲ. ಮತ್ತೆ ಕಲ್ಯಾಣದ ಅವಶ್ಯಕತೆ ಇಂದು ಅತ್ಯಂತ ಅವಶ್ಯವಾಗಿದೆ ಎಂದರು.
ಯು ಹೆಚ್ ಉಮರ್ ಸ್ವಾಗತಿಸಿದರೆ, ರೇಮಂಡ್ ಡಿ ಕುನ್ಹಾ ವಂದಿಸಿದರು. ತಾರಾನಾಥ್ ಗಟ್ಟಿ ಕಾಪಿಕಾಡ್ ನಿರ್ವಹಿಸಿದರು. ಸಮಾವೇಶದ ಆರಂಭದಲ್ಲಿ ಸಾಣೇಹಳ್ಳಿಯ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು.
ಇದಕ್ಕೂ ಮುನ್ನ ವಿದ್ಯಾರ್ಥಿಗಳಿಗೆ `ವಚನಗಳು ಮತ್ತು ಸಹಬಾಳ್ವೆ’ ಕುರಿತ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಪದವಿಪೂರ್ವ ಕಾಲೇಜು ಮಟ್ಟದಲ್ಲಿ ಅಕ್ಷಿತ್ ಪ್ರಥಮ, ರೇಖಾ ದ್ವಿತೀಯ, ಜಿನುಜಾನ್ ತೃತೀಯ ಹಾಗೂ ಪದವಿ ಮಟ್ಟದಲ್ಲಿ ಅನನ್ಯ ಪ್ರಥಮ, ಅರ್ಜುನ, ನಾಗನ ಕುಮಾರ್ ದ್ವಿತೀಯ, ನಿವೇದಿತಾ ತೃತೀಯ ಸ್ಥಾನ ಪಡೆದುಕೊಂಡರು.
ಸಾಮರಸ್ಯ ಯಾತ್ರೆಯಲ್ಲಿ ವಿವಿಧ ಧರ್ಮ, ಜಾತಿ, ಪಕ್ಷದ ನೇತಾರರು, ವಿದ್ಯಾರ್ಥಿಗಳು, ಸಾರ್ವಜನಿಕರು, ಕಲಾತಂಡಗಳು ಭಾಗವಹಿಸಿದ್ದವು.
ಬೆಳಗ್ಗೆ 11 ರಿಂದ 1 – ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ.
ಅಗಸ್ಟ್ 3; ಮಂಗಳೂರು; ಇಲ್ಲಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಂಡಿದ್ದ ಮತ್ತೆ ಕಲ್ಯಾಣದ ಭಾಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಖಾಲಿ ಚೀಲದಂತೆ. ಈ ಚೀಲಕ್ಕೆ ಏನನ್ನಾದರೂ ತುಂಬುವ ಮುನ್ನ ಬಹು ಎಚ್ಚರಿಕೆ ವಹಿಸಬೇಕು. ಮಕ್ಕಳು ಮಕ್ಕಳು ತಮ್ಮ ಆದರ್ಶ ವ್ಯಕ್ತಿತ್ವ ಕಟ್ಟಿಕೊಳ್ಳಲು ಬಸವಾದಿ ಶರಣರು ಹಾಕಿ ಕೊಟ್ಟ ಮಾರ್ಗವನ್ನು ತುಂಬುವುದೇ ಮತ್ತೆ ಕಲ್ಯಾಣ. ಬಸವಾದಿ ಶಿವಶರಣರು ಅನುಭವ ಮಂಟಪದ ಮೂಲಕ ಸಮಾಜದ ಓರೆ ಕೊರೆಗಳನ್ನು ತಿದ್ದುವ ಈ ಕೆಲಸ ಮಾಡಿದರು. 12 ನೆಯ ಶತಮಾನದಲ್ಲಿ ಇದ್ದ ಅನಿಷ್ಠಗಳು ಈಗಲೂ ಇವೆ. ನಾಗರೀಕತೆ ಹೆಚ್ಚಿದೆ; ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಅಧೋಗತಿಗೆ ಇಳಿದಿದ್ದೇವೆ. ಇಂದಿನ ಮಕ್ಕಳು ನೂರಕ್ಕೆ ನೂರನ್ನು ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಜೀವನದ ಸಮಾಜದಲ್ಲಿ ಬದುಕಲು ವಿಫಲವಾಗುತ್ತಿರುವುದನ್ನು ನಾವು ಕಾಣುತ್ತಿರಬಹುದು. ಬೌದ್ಧಿಕ ಶಿಕ್ಷಣದ ಜೊತೆ ನೈತಿಕ, ಸಾಮಾಜಿಕ, ಸಾಂಸ್ಕೃತಿ ಶಿಕ್ಷಣ ನೀಡಬೇಕು. ದೈಹಿಕವಾಗಿ ಸಬಲರಾಗಿರುವಂತೆ ಬೌದ್ಧಿಕವಾಗಿ, ಮಾನಸಿಕವಾಗಿಯೂ ಸಬಲರಾಗಬೇಕು. ನೈತಿಕ ನೆಲೆಗಟ್ಟಿಲ್ಲದ ಶಿಕ್ಷಣ ಬಹು ಅಪಾಯಕಾರಿಯಾದುದು. ನೈತಿಕತೆ ಇಲ್ಲದ ಸಮಾಜ ಬಹುಬೇಗನೇ ಬಿದ್ದು ಹೋಗುವುದು. ಪ್ರತಿಯೊಂದು ಮಗುವೂ ಆದರ್ಶ ವ್ಯಕ್ತಿಯಾಗುವ ಒಳತುಡಿತ ಇದೆ. ಆದರೆ ಅದಕ್ಕೆ ತಕ್ಕಂತೆ ವಾತಾವರಣವನ್ನು ನಾವು ಕಲ್ಪಿಸುತ್ತಿಲ್ಲ. ತನ್ನ ತಾನರಿತಡೆ ತಾನೇ ದೇವ ಎಂದು ಶರಣರು ಹೇಳುವರು. ಹಾಗಾಗಿ ನಾವು ಮೊದಲು ನಮ್ಮನ್ನು ನಾವು ಅರಿಯುವ ಕೆಲಸ ಮಾಡಿಕೊಳ್ಳಬೇಕು. ಹಣ ಸಂಪಾದನೆಯಷ್ಟೇ ಅಲ್ಲ; ಮನೋಸ್ಥೈರ್ಯವನ್ನೂ ಸಂಪಾದಿಸಿಕೊಂಡರೆ ಹೇಡಿಗಳಂತೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಫೇಲಾಗುವುದೇ ಪಾಸಾಗಲು ಎನ್ನುವ ಭಾವ ಮಕ್ಕಳಲ್ಲಿ ಬೆಳೆಯಬೇಕು. ಅಂಕ ಗಳಿಕೆಗಿಂತ ಜೀವನ ಮುಖ್ಯ.
ಈ ಸಂವಾದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಾಗತೀಹಳ್ಳಿ ಚಂದ್ರಶೇಖರ್ ಪಂಡಿತಾರಾಧ್ಯ ಶ್ರೀಗಳವರ ಬದ್ಧತೆಗೆ ಮರುಳಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಮತ್ತೆ ಕಲ್ಯಾಣ ಎನ್ನುವಲ್ಲಿ `ಕಲ್ಯಾಣ’ ಶಬ್ದದಷ್ಟೇ ಮೌಲ್ಯ `ಮತ್ತೆ’ ಅನ್ನುವುದಕ್ಕೂ ಇದೆ. ಒಮ್ಮೆ ಕಸ ಗುಡಿಸಿದರೆ ಸಾಲದು; ಮತ್ತೆ ಮತ್ತೆ ಗುಡಿಸುತ್ತಲೇ ಇರಬೇಕು. ನಮ್ಮ ಮನೆಯ ಕಸ(ರಜ)ವನ್ನು ಸ್ವಚ್ಛಗೊಳಿಸುವ ಕಾಯಕ ನಮ್ಮದೇ ಆಗಬೇಕು. ಸಾರ್ವಜನಿಕ ಜೀವನದಲ್ಲಿ ಇರುವವರೆಲ್ಲರಿಗೂ ಕಸ ಯಾವುದೆಂದು ತಿಳಿದಿದೆ. ಕೃತಕ ವೇಗ ನಮ್ಮ ಮಧ್ಯ ಬಂದಿದೆ. ವೇಗವಾಗಿ ಸಾಗುತ್ತಿದ್ದೇವೆ ಆದರೆ ಅದಕ್ಕೆ ಗೊತ್ತು, ಗುರಿಯಿಲ್ಲವಾಗಿದೆ. ಸ್ವಾರ್ಥ ಹೆಡೆಯಾಡುತ್ತಿದೆ. ಯಾರನ್ನೂ, ಯಾವುದನ್ನೂ ನಂಬದ ವಿಚಿತ್ರವಾದ ಸಿನಿಕತನ ಆವರಿಸಿಕೊಂಡಿದೆ. ಹಣದಲ್ಲಿ ಮಾತ್ರ ನಂಬಿಕೆಯಿದೆ. ಹೇಗಾದರೂ ಮಾಡಿ ದಿನಬೆಳಗಾದರೆ ಹಣ-ಹೆಸರು ಬರಬೇಕೆನ್ನುವ ಹುಂಬುತನಕ್ಕೆ ನಾವು ಇಂದು ಬಿದ್ದಿದ್ದೇವೆ. ವಿಜ್ಞಾನ ಮನುಷ್ಯನ ಸಕಲರೋಗಗಳಿಗೂ ಮದ್ದನ್ನು ಕಂಡುಹಿಡಿದಿದೆ. ವಿಜ್ಞಾನಕ್ಕೂ ಒಂದು ಮಿತಿಯಿದೆ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ವಚನಕಾರರು ಅಂತರಂಗ-ಬಹಿರಂಗ ಶುದ್ಧಿಗಳರಡನ್ನೂ ಹೇಳಿದರು. ಈಗ ಬಹಿರಂಗ ಶುದ್ಧಿಯಾಗಿದೆ. ಅಂತರಂಗ ಶುದ್ಧಿಯಾಗಬೇಕಿದೆ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎನ್ನುವ ಬಸವಣ್ಣನವರ ಮಾತು ಅತ್ಯದ್ಭುತವಾದುದು. ನಾವೂ ಜಂಗಮರಾಗಬೇಕು. ಸ್ಥಿರಗೊಂಡ ಮನುಷ್ಯ ನಾಶವಾಗುವನು. ಅಲೆಮಾರಿತನ ಲೋಕದರ್ಶನ ನೀಡುತ್ತದೆ. ದೇಶ, ಭಾಷೆಗಳ ಗಡಿ ಅಲೆಮಾರಿತನಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ. ವಲಸೆಯನ್ನು ವಿರೋಧಿಸಬಾರದು. ನಾವು ವಿಶ್ವಮಾನವರಾಗಬೇಕು. ಎಲ್ಲರೊಂದಿಗೆ ಹಂಚಿ ಉಣ್ಣುವ, ಬದುಕಿ, ಬಾಳುವ ವಿಶಾಲ ಭಾವನೆಯನ್ನು ವಚನಕಾರರು ಹೊಂದಿದ್ದರು. ಆ ಭಾವನೆ ನಾವೂ ಹೊಂದಬೇಕು. ಇಂದು ಎಲೆಕ್ಟ್ರಾನಿಕ್ ಮಾಧ್ಯಮಗಳು, ಜಾಹಿರಾತು ಜಾಲಗಳ ಮೂಲಕ, ಮೌಢ್ಯಗಳನ್ನು ಬಿತ್ತುವ ಮೂಲಕ ಇಂದಿನ ಪೀಳಿಗೆಯನ್ನು ದಾರಿತಪ್ಪಿಸುತ್ತಿವೆ. ಸಾಮಾಜಿಕ ಜಾಲತಾಣಗಳು ವ್ಯಕ್ತಿಯ ಸ್ವಾತಂತ್ರ್ಯದ ಪರಮೋಚ್ಛ ಸ್ಥಿತಿಯನ್ನು ನೀಡಿವೆ. ಅದರ ಸದುಪಯೋಗ-ದುರುಪಯೋಗ ನಮ್ಮ ಕೈಯಲ್ಲಿಯೇ ಇದೆ. ಮಕ್ಕಳು ಅನ್ಯ ಜಾತಿಯ, ಧರ್ಮದ ಸ್ನೇಹಿತರನ್ನು ಹೊಂದಬೇಕು. ಇದು ನಿಮ್ಮ ವಿಶಾಲ ಮನೋಭಾವನೆ ಬೆಳೆಯಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೊಳಗೂ ಅಕ್ಕಮಹಾದೇವಿ, ಬಸವಣ್ಣನವರು ಇದ್ದಾರೆ. ಅವರ ಬೆಳವಣಿಗೆಗೆ ನೀವು ತೆರೆದುಕೊಳ್ಳಬೇಕು. ಇದು ಇಂದಿನ ಆಧುನಿಕ ಸಮಾಜದ ಸವಾಲು. ನಮಗೆ ಸೂರ್ಯನಷ್ಟು ಬೆಳಕು ಕೊಡಲಾಗದಿದ್ದರೂ ನಮ್ಮ ವ್ಯಾಪ್ತಿಯಲ್ಲಿ ದೀಪವಾಗಿಯಾದರೂ ಬೆಳಗೊಣ ಎಂದರು. .
ಪ್ರಶ್ನೆ: ತ್ರಿವಳಿ ತಲಾಕ್ ನಂತೆ ಹಿಂದೂಗಳ ಮಹಿಳೆಯರಿಗೂ ಮರುಮದುವೆ ಯಾಕೆ ಸಾಧ್ಯವಾಗಿಲ್ಲ.
ಪಂ ಶ್ರೀ: ಖಂಡಿತವಾಗಿಯೂ ಯಾವುದೇ ಧರ್ಮದವರಿಗೂ ಇದು ಅನ್ವಯಿಸುತ್ತದೆ.
ಪ್ರಶ್ನೆ: ಯುವ ಜನತೆಯ ಚಂಚಲತೆಗೆ ಕಾರಣಗಳೇನು?
ನಾಗತೀಹಳ್ಳಿ : ಚಂಚಲತೆ ಎಲ್ಲರಿಗೂ ಇದೆ. ಅದನ್ನೂ ಸರಳೀಕರಸುವುದು ಬೇಡ. ಯೋಗದಿಂದ ಮನಸ್ಸನ್ನು ನಿಯಂತ್ರಿಸಬಹುದು.
ಪ್ರಶ್ನೆ: ನೈತಿಕತೆಯ ಶಿಕ್ಷಣ ಹೇಗೆ ಪಡೆಯಬೇಕು?
ನಾಗತೀಹಳ್ಳಿ: ಗಣಿತ, ವಿಜ್ಞಾನದಲ್ಲೂ ನೈತಿಕ ಮೌಲ್ಯಗಳು ಇರುತ್ತವೆ. ಕೊರೆಯಿರುವಲ್ಲಿ ಸರಿಮಾಡಬೇಕು.
ಪ್ರಶ್ನೆ: ಜಾತಿ ನಿರ್ಮೂಲನೆ ಸಾಧ್ಯವೇ?
ಪಂ ಶ್ರೀ : ಮೀಸಲಾತಿ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಬೇಕು.
ಪ್ರಶ್ನೆ: ಗ್ರಹಣವೆಂದು ಮನೆಯ ನೀರನ್ನು ಹೊರಹಾಕಿದ್ದೇವೆಯೇ ಹೊರತು ನದಿಯ ನೀರನ್ನು ಯಾರಾದರೂ ಹೊರಹಾಕಿದ್ದಾರಾ?
ಪಂ ಶ್ರೀ: ಈ ಪ್ರಜ್ಞೆ ಎಲ್ಲರಿಗೂ ಬರಬೇಕು. ಶಿರಹೊನ್ನ ಕಳಸ ಎಂದು ನಂಬಿ ವಿವೇಕದಿಂದ ಬಳಸಬೇಕು.
ಪ್ರಶ್ನೆ: ಬದುಕು ನಶ್ವರ ಎಂದ ಮೇಲೆ ಜೀವನದಲ್ಲಿ ಯಾಕೆ ಎಲ್ಲದಕ್ಕೂ ಪ್ರಾಮುಖ್ಯತೆ ನೀಡಬೇಕು?
ನಾಗತಿಹಳ್ಳಿ: ಬದುಕು ನಶ್ವರದಲ್ಲೂ ಶಾಶ್ವತ. ಬದುಕಿನ ಪ್ರತಿ ಕ್ಷಣವೂ ಅನುಭವಿಸಬೇಕು. ಮನುಷ್ಯ ತುಂಬ ಪ್ರೀತಿಸುವುದು ತನ್ನ ದೇಹವನ್ನೇ. ನನಗಾಗಿ ಅಲ್ಲ; ನನ್ನವರಿಗಾಗಿ ಬದಕಬೇಕು. ಪ್ರತಿ ದಿನವೂ ಇದೇ ಕಡೆ ದಿನ ಎಂದು ಭಾವಿಸಿ ಬದುಕಬೇಕು.
ಹುಟ್ಟು ಸಾವು ಬದುಕು ಇವುದರಲ್ಲಿ ಯಾವುದು ಮುಖ್ಯ?
ಹುಟ್ಟು ಸಾವು ಮರೆತು ಬಿಡಬೇಕು. ಬದಕನ್ನು ಮಾತ್ರ ಬದುಕಬೇಕು.
ಪ್ರಶ್ನೆ: ಮತ್ತೆ ಕಲ್ಯಾಣದ ಆಶಯವೇನು?
ಪಂ ಶ್ರೀ: ಅಂತರಂಗ-ಬಹಿರಂಗ ಶುದ್ಧಿ.
ಜಾತಿ ವ್ಯವಸ್ಥೆಯ ಬಗ್ಗೆ ಬಸವಣ್ಣನವರ ಅಭಿಪ್ರಾಯವೇನು?
ನಾಗತೀಹಳ್ಳಿ: ಒಂದು ದಿನ ಮಾತ್ರದಲ್ಲಿ ಜಾತಿ ವ್ಯವಸ್ಥೆಯನ್ನು ತೊಡೆಯಲು ಅಸಾಧ್ಯ. ಮೇಲು ಜಾತಿ, ಕೀಳು ಜಾತಿ ಎನ್ನುವುದಿಲ್ಲ. ಅನ್ಯರ ಸಂಕಟದಲ್ಲಿ ಪಾಲ್ಗೊಳ್ಳಬೇಕು. ಮನುಷ್ಯರನ್ನು ಮನುಷ್ಯರಂತೆ ಪರಿಗಣಿಸಿದರೆ ಸಾಕು. ಧರ್ಮದ ಹೆಸರಿನ ದುರಭಿಮಾನ ಖಂಡನೀಯವಾದುದು.
ಪಂಶ್ರೀ: ಕಾಯಕಶ್ರದ್ಧೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸಾಗುವುದಿಲ್ಲ.
ಹೀಗೆ ನೂರಾರು ಪ್ರಶ್ನೆಗಳಿದ್ದರೂ ಸಮಯಾಭಾವದಿಂದ ಸಂವಾದವನ್ನು ಮೊಟಕುಗೊಳಿಸಲಾಯಿತು. - ಹೆಚ್ ಎಸ್ ದ್ಯಾಮೇಶ್





ಆಗಸ್ಟ್ 04 ಭಾನುವಾರ, ಹಾಸನ


ಹಾಸನದಲ್ಲಿ ಮತ್ತೆ ಕಲ್ಯಾಣ ಆಂದೋಲನ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ



ಹಾಸನ, ಆಗಸ್ಟ್ 4; ಇಲ್ಲಿನ ಹಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಮಾವೇಶದ ಸಾನ್ನಿಧ್ಯವಹಿಸಿದ್ದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸಮಾಜ ನಿಂತ ನೀರಿನಂತಾಗಿದೆ. ಆ ನೀರು ಕೊಳೆತು, ಮಲೆತು, ರೋಗರುಜಿನಗಳು ಹರಡಿ ನರಳುವಂತಾಗಿದೆ. ಬಾಹ್ಯವಾಗಿ ನಾವು ಸುಂದರವಾಗಿ ಕಂಡರೂ ಒಳಗೆ ಕೊಳೆತು ನಾರುತ್ತಿದ್ದೇವೆ. ಬದ್ಧತೆಯಿಲ್ಲದೆ ದ್ವಂದ್ವ ಮನೋಭಾವನೆಯಿಂದ ನರಳುತ್ತಿದ್ದೇವೆ. 12 ನೆಯ ಶತಮಾನದ ಶರಣರು ತಮಗೆ ಅನಿಸಿದ್ದನ್ನು ಹೇಳುವ ಗಟ್ಟಿತನವನ್ನು ಬೆಳಸಿಕೊಂಡಿದ್ದರು. ಆದರೆ ಇಂದು ನಾವು ಹೊತ್ತುಬಂದಂತೆ ಕೊಡೆಹಿಡಿಯುವ ಕೆಲಸ ಮಾಡುತ್ತಿದ್ದೇವೆ. ಆತ್ಮವಂಚನೆ ಹೊರಗಿನವರಿಗೆ ಕಾಣುವಂಥದ್ದಲ್ಲ; ನಮ್ಮಳೊಗೆ ನಾವು ನೋಡಿಕೊಂಡಾಗ ತಿಳಿಯುತ್ತು. ಹೀಗಾಗಿಯೇ ಶರಣರು ಹೆಚ್ಚು ಒತ್ತುಕೊಟ್ಟದ್ದು ಆಂತರಿಕ ಶುದ್ಧಿಗೆ. ಮನಸ್ಸೇ ಮಾನವನ ಅವನತಿಗೆ, ಉನ್ನತಿಗೆ ಕಾರಣವಾಗುವುದು. `ಮತ್ತೆ ಕಲ್ಯಾಣ’ ಲೋಕ ಕಲ್ಯಾಣದ ಜೊತೆ ಆತ್ಮ ಕಲ್ಯಾಣವೂ ಆಗಬೇಕೆನ್ನುವುದು ಆಶಯ ಹೊಂದಿದೆ. ಇಂದು ನಮ್ಮ ಮಕ್ಕಳು ಓದುಗಾರರಾಗಿದ್ದರೆಯೇ ಹೊರತು ಸಂಸ್ಕಾರವಂತರಾಗುತ್ತಿಲ್ಲ. ಇಂದು ಸಮಾಜಘಾತುಕ ಕಾರ್ಯಗಳು ನಡೆಯುತ್ತಿರುವುದು ಹೆಚ್ಚಾಗಿ ಓದಿದವರಿಂದಲೇ ಎನ್ನುವುದನ್ನು ಯಾರಾದರೂ ಒಪ್ಪಿಕೊಳ್ಳುವರು. ಶರಣರು ಅನುಭವ ಮಂಟಪದ ಮೂಲಕ ಸಂಸ್ಕಾರವನ್ನು ನೀಡುವ ಕೆಲಸ ಮಾಡಿದರು. ನಡೆಯುವವನು ಎಡುವವನಲ್ಲದೆ ಕುಳಿತವನು ಎಡಹುವವೇ ಎನ್ನುವಂತೆ ಏನೂ ಮಾಡದವರನ್ನು ಯಾರೂ ಟೀಕಿಸುವುದಿಲ್ಲ. ಏನಾದರೂ ಒಳಿತನ್ನು ಮಾಡಲು ಹೊರಟಾಗ ಟೀಕೆ-ಟಿಪ್ಪಣಿಗಳು ಸಹಜ. ಆಗ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. ಮನಸ್ಸಿಗೆ ಅಕ್ಕನ, ಅಣ್ಣನ ವಚನಗಳ ಮೂಲಕ ನಮಗೆ ನಾವೇ ಸಂಸ್ಕಾರ ಕೊಟ್ಟುಕೊಳ್ಳಬೇಕು. ನಿಜವಾದ ಮಾಯೆ ಹೊರಗಿರುವುದಿಲ್ಲ; ಒಳಗೇ ಇವೆ. ಕಾಮ, ಕ್ರೋಧ, ಮದ, ಮತ್ಸರಗಳನ್ನು ಮನಸ್ಸಿನಲ್ಲಿಯೇ ಧಮನ ಮಾಡಲು ಸತ್ಸಂಗ, ಅಧ್ಯಯನ ಬೇಕು. ಆದರ್ಶಗಳನ್ನು ಬಿಡದೆ ಸಂಪಾದಿಸುವುದು ತಪ್ಪೇನಲ್ಲ. ಬೆಂಕಿ ಇಡುವುದು ಸುಲಭ; ಬೆಳಕು ಕೊಡುವುದು ಕಷ್ಟಕರವಾದುದು. ಸುಳಿದಾಡುವ ಗಾಳಿಯಲ್ಲಿ ದೀಪಬೆಳಗುವ ಕಷ್ಟಕರವಾದ ಕೆಲಸವನ್ನು ಮತ್ತೆ ಕಲ್ಯಾಣ ಮಾಡುತ್ತಿದೆ. ನಾವು ಹೇಳುವ ಮಾತುಗಳನ್ನು ಮಾಧ್ಯಮಗಳು ಆಂಶಿಕವಾಗಿ ಮಾತ್ರ ಪ್ರಕಟಿಸಿ ಜನರಲ್ಲಿ ಅಸಮಧಾನ ಮೂಡಿಸುವುದು ಸರಿಯಲ್ಲ. ಮಾಧ್ಯಮಗಳು ಜನರಿಗೆ ಪೂರ್ಣವಾಗಿ ಮಾಹಿತಿ ಒದಗಿಸಬೇಕು.
ಲಿಂಗಾಯತ ಒಂದು ಜಾತಿಯಲ್ಲ; ಒಂದು ತತ್ವ. ಅದನ್ನು ಯಾರು ಒಪ್ಪಿಕೊಂಡರೂ ಅವರು ಲಿಂಗಾಯತರೇ. ಅದು ಯಡಿಯೂರಪ್ಪ ಇರಲಿ, ಸಿದ್ದರಾಮಯ್ಯ ಇರಲಿ, ಕುಮಾರಸ್ವಾಮಿ ಇರಲಿ ಅವರೆಲ್ಲರೂ ಲಿಂಗಾಯತರೇ. ಟಿಪ್ಪು ಜಯಂತಿಷ್ಟೇ ಅಲ್ಲ; ಎಲ್ಲ ಜಯಂತಿಗಳನ್ನು ರದ್ದುಗೊಳಿಸಬೇಕು.ಇವುಗಳಿಗೆ ಖರ್ಚು ಮಾಡುವ ಕೋಟಿ ಕೋಟಿ ಹಣವನ್ನು ಕರೆಕಟ್ಟೆಗಳ ಹೂಳೆತ್ತಲು, ಕೆರೆ ತುಂಬಿಸಲು, ಬಳಸಬೇಕು. ಮಹತ್ಮರ ಮಾಹಿತಿಯನ್ನು ಆದಿನ ಶಾಲಾ ಕಾಲೇಜುಗಳಲ್ಲಿ ತಿಳಿಸುವಂತಾಗಬೇಕು.
ಎಲ್ಲಿಯವರೆಗೂ ಜಾತಿ ಹೋಗುವುದಿಲ್ಲವೋ ಅಲ್ಲಿಯವರೆಗೂ ಮೀಸಲಾತಿ ಇರಬೇಕು ಎನ್ನುವ ನಮ್ಮ ಮಾತಿನಲ್ಲಿ ಯಾವ ದೋಷವಿದೆ?
`ನ್ಯಾಯ ನಿಷ್ಠುರಿ, ದಕ್ಷಿಣ್ಯ ಪರ ನಾನಲ್ಲ. ಲೋಕ ವಿರೋಧಿ ಶರಣ ಯಾರಿಗೂ ಅಂಜುವವನಲ್ಲ’ ಎನ್ನುವ ಮಾತಿನಂತೆ ನಾವು ನಡೆದುಕೊಳ್ಳುತ್ತಿದ್ದೇವೆ.
ಇಲ್ಲಿನ ಚಿಂತಕರ ಮಾತುಗಳನ್ನು ಸ್ವಾಮಿಗಳು, ರಾಜಕೀಯ ನೇತರರು ಕೇಳಬೇಕು ಎಂದು ನಾವು ಬಯಸುತ್ತೇವೆ. ರಾಜಕೀಯ ನೇತರರು ಬದಲಾವಣೆಯಾದರೆ ಸಮಾಜ ಬದಲಾವಣೆಯಾಗುತ್ತದೆ ಎನ್ನುವ ಭಾವನೆ ನಮ್ಮದು ಎಂದರು.
`ಮನವೆಂಬ ಕಲ್ಯಾಣ’ ಎನ್ನುವ ವಿಷಯ ಕುರಿತಂತೆ ಉಪನ್ಯಾಸ ನೀಡಿದ ಚಿತ್ರದುರ್ಗದ ಡಾ. ಲೋಕೇಶ ಅಗಸನಕಟ್ಟೆ ಇಂದು ನಮ್ಮ ನಡೆಯನ್ನು ಮೆಚ್ಚುವವರಿಗಿಂತ ಚುಚ್ಚುವವರೇ ಹೆಚ್ಚು. ಮತ್ತೆ ಕಲ್ಯಾಣ ಜಾಗೃತಿಯ ಅಭಿಯಾನವಾಗಿರುವಂತೆ; ಪಂಡಿತಾರಾಧ್ಯ ಶ್ರೀಗಳವರು ತಮ್ಮನ್ನು ತಾವು ಅಗ್ನಿದಿವ್ಯಕ್ಕೆ ಒಳಪಡಿಸಿಕೊಳ್ಳುವ ಮಾಧ್ಯಮವಾಗಿದೆ. ಮನಸ್ಸೇ ಒಳಿತಿಗೂ ಕೆಡುಕಿಗೂ ಕಾರಣ. ಮತ್ತೆ ಕಲ್ಯಾಣ ಹೊರಟ ಈ ಸಂದರ್ಭದಲ್ಲಿ ಜಗತ್ತು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಏನಾದರೂ ಅನಾಹುತವಾದರೆ ಮೊದಲು ಸಾಯುವವನೇ ಮನುಷ್ಯ. 12 ನೆಯ ಶತಮಾನದ ವಚನಕಾರರು ಸಮಾಜವಾದಿ ಸಿದ್ಧಾಂತಗಳನ್ನೇ ಮಂಡಿಸಿದ್ದರು. ಸಮ ಸಮಾಜವನ್ನು ನಿರ್ಮಿಸುವ ಕನಸನ್ನು ಹೊತ್ತವರು ಅವರು. ಇಂದು ಸಂಪತ್ತು ಕೇವಲ ಕೆಲವರ ಕೈಯಲ್ಲಿಯೇ ಏಕೀಕರಣಗೊಳ್ಳುತ್ತಿದೆ. ಇದು ಅತ್ಯಂತ ಅಪಾಯಕಾರಿಯಾದ ಸಂಗತಿ. ಹೊರಗಿರುವ ಕಲ್ಯಾಣ ಭೌಗೋಳಿಕ ಕಲ್ಯಾಣ. ಮನಸ್ಸಿನ ಒಳಗಿನ ಇನ್ನೊಂದು ಕಲ್ಯಾಣವಿದೆ. ಬಸವಣ್ಣನ ಕಲ್ಯಾಣದಲ್ಲಿ ಸತ್ಯಶುದ್ಧರಿಗಲ್ಲದೆ ಅನ್ಯರಿಗೆ ಪ್ರವೇಶಿಸುವುದೇ ಕಷ್ಟವಾಗಿತ್ತು. ಗುರುವಾದಡೂ ಕಾಯಕ-ದಾಸೋಹ ಮಾಡಬೇಕಿತ್ತು. ತಾನೂ ಬದುಕಿ, ಇತರರನ್ನೂ ಬದುಕಲು ಬಿಡಬೇಕೆನ್ನುವುದೇ ಶರಣರ ಆಶಯವಾಗಿತ್ತು. ನಾವು ಲೋಕನೀತಿಯನ್ನು ಹೇಳುತ್ತೇವೆ; ಅನುಷ್ಟಾನಕ್ಕೆ ತರಲಾಗುತ್ತಿಲ್ಲ. ಗಾಂಧಿಜಿಯೂ ಪಾಶ್ಚಾತ್ಯ ಚಿಂತನೆಯನ್ನು ಒಪ್ಪುತ್ತಿರಲಿಲ್ಲ. ಮತೀಯವಾದಕ್ಕಿಂತ ಜಾತಿವಾದ ಹೆಚ್ಚು ಅಪಾಯಕಾರಿ. ಕಾಯಕಕ್ಕೆ ಘನತೆಯನ್ನು ತರುವ ಸಲುವಾಗಿ ಶರಣರು ತಮ್ಮ ಹೆಸರಿನ ಜೊತೆಗೆ ತಮ್ಮ ಕಾಯಕದ ಹೆಸರನ್ನೂ ಸೇರಿಸಿಕೊಂಡಿದ್ದರು. ಮತ್ತೆ ಕಲ್ಯಾಣದ ಆಶಯ ಸಹಮತ. ಸಂಪತ್ತಿನ ಹಂಚಿಕೆ ಶ್ರೀಮಂತರಿಗೆ ಬೇಕಾಗಿಲ್ಲ, ಅಕ್ಷರ ಜ್ಞಾನ ಕೆಲವರಿಗೆ ಬೇಕಾಗಿಲ್ಲ. ಇಂಥ ದಿನಮಾನದಲ್ಲಿ ಮತ್ತೆ ಕಲ್ಯಾಣ ಒಂದು ಭರವಸೆಯ ಆಂದೋಲನವಾಗಿದೆ. ಜನಸಾಮಾನ್ಯರೇ ಆಂದೋಲನದ ಕೇಂದ್ರ ಬಿಂದುವಾಗಬೇಕು. ಇಂದು ಜಗತ್ತು ಸಂವೇದನೆಯನ್ನು ಕಳೆದುಕೊಂಡಿದೆ. ಸ್ವಾರ್ಥ ರಹಿತ ಸಮಾಜದ ನಿರ್ಮಾಣದ ಆಶಯ ಶರಣರದ್ದು. ಲೋಕಾಂತ ಮತ್ತು ಏಕಾಂತ ಎರಡರ ಸಮನ್ವಯವನ್ನು ಮಾಡಿದವರು 12 ನೆಯ ಶತಮಾನದ ಶರಣರು. ಮಾಧ್ಯಮಗಳು ಹೇಳುವುದೇ ಪರಮಸತ್ಯ ಎನ್ನುವ ಭ್ರಮೆಯಲ್ಲಿರುವ ಹೊತ್ತಿನಲ್ಲಿ `ಮತ್ತೆ ಕಲ್ಯಾಣ’ ಮರುಭೂಮಿಯ ಓಯಸಿಸ್ಸನಂತಿದೆ. ಈ ಯಾತ್ರೆ ನಮ್ಮನ್ನು ನಾವು ಸ್ವಚ್ಛಗೊಳಿಸುವ ಯಾತ್ರೆಯೂ ಆಗಲಿ. ಮಠದ ಭಕ್ತರು ಒಂದಾಗುವುದು ಸುಲಭ ಆದರೆ ಮಠದ ಮಠಾಧೀಶರು ಒಂದಾಗುವುದು ಕಷ್ಟಕರ ಸಂಗತಿ. ಮಠಾಧೀಶರು ಒಂದಾಗುವ ಸಂಯೋಗ ಈಗ `ಮತ್ತೆ ಕಲ್ಯಾಣ’ದ ಮೂಲಕ ಆಗುತ್ತಿದೆ. ಮಕ್ಕಳೊಡನೆ ನಡೆಯುವ ಸಂವಾದಗೋಷ್ಠಿ ಅತ್ಯಂತ ಪರಿಣಾಮಕಾರಿಯಾಗಿತ್ತು ಎಂದರು.
`ವಚನಕಾರರಲ್ಲಿ ಮಹಿಳಾ ಅಸ್ಮಿತೆ’ ಕುರಿತು ದಾವಣಗೆರೆಯ ಉಪನ್ಯಾಸಕಿ ಸುಮತಿ ಮಾತನಾಡಿ ಮಾತೃಪ್ರಧಾನ ಕುಟುಂಬದಲ್ಲಿ ಮಹಿಳೆಗೆ ಅಗ್ರಸ್ಥಾನವಿತ್ತು. ಆದರೆ ಇಂದು ಪುರುಷಪ್ರಧಾನ ಸಮಾಜದಲ್ಲಿ ಎಲ್ಲ ಸ್ವಾತಂತ್ರ್ಯಗಳನ್ನು ಕಳೆದುಕೊಂಡು ನಿಕೃಷ್ಟವಾಗಿ ಬದುಕುತ್ತಿದ್ದಾಳೆ. ಅಂಥದ್ದರಲ್ಲಿ 12 ನೆಯ ಶತಮಾನದಲ್ಲಿ ಎಂಥ ಹೀನಾಯ ಸ್ಥಿತಿ ಇದ್ದಿತೆಂಬ ಕಲ್ಪನೆ ಮಾಡಿಕೊಳ್ಳಲು ಭಯವಾಗುತ್ತದೆ. ತುಳಿತಕ್ಕೆ ಒಳಗಾದ ಮಹಿಳೆಯರಿಗೆ ಸಮಾನ ಸ್ಥಾನ ಮಾನ ನೀಡಿದ್ದು ಶರಣರದ್ದು. ತನ್ನ ಅಕ್ಕನಿಗಿಲ್ಲದ ಜನಿವಾರದ ಸಂಸ್ಕಾರ ನನಗೂ ಬೇಡ ಎಂದು; ಮಹಿಳಾ ಸ್ವಾತಂತ್ರ್ಯಕ್ಕಾಗಿ ಎಂಟನೆಯ ವಯಸ್ಸಿನಲ್ಲಿಯೇ ಮನೆಬಿಟ್ಟು ಹೊರಡುತ್ತಾರೆ. ಧರ್ಮ ಇಲ್ಲದವರಿಗೆ ಧರ್ಮವನ್ನು, ದೇವರಿಲ್ಲದವರಿಗೆ ದೇವರನ್ನು ಕೊಟ್ಟರು. ವಚನಕಾರರು ಮಿಡಿದ ಮಹಿಳಾ ಅಸ್ಮಿತೆ ಜಗತ್ತೇ ಬೆರಗಾಗುವಂಥದ್ದು. ಆತ್ಮಕ್ಕೆ ಲಿಂಗಭೇದವಿಲ್ಲ ಎಂದು ಮೊದಲು ಗಟ್ಟಿಯಾಗಿ ಹೇಳಿದವರು ವಚನಕಾರರು. ಹೆಣ್ಣು, ಹೊನ್ನು, ಮಣ್ಣು ಮಾಯೆ ಎನ್ನುತ್ತಿದ್ದವರಿಗೆ ಮನದ ಮುಂದಣ ಆಸೆಯೇ ಮಾಯೆ ಎಂದರು. ಚಟ್ಟು-ಮುಟ್ಟು-ಸೂತಕ ಎಂದು ಹೆಣ್ಣನ್ನು ಹೊರಗಿಡುವ ಪದ್ಧತಿ ಈಗಲೂ ಕೆಲವೆಡೆ ಇದೆ. ಆದರೆ ವಚನಕಾರರು ಹೊಲೆಗಂಡಲ್ಲದೆ ಪಿಂಡದ ಆಶ್ರಯವೆಲ್ಲಿ ಎಂದು ಪ್ರಶ್ನಿಸಿದರು. ನಮ್ಮ ಸೂತಕ ಕಳೆದುಕೊಳ್ಳಬೇಕಾದುದು ತನುವಿನಲ್ಲಲ್ಲ; ಮನದಲ್ಲಿ. ಭಕ್ತರಾದವಳಿಗೆ, ಲಿಂಗಧರಿಸಿದವಳಿಗೆ ಯಾವ ಸೂತಕವೂ ಇಲ್ಲ ಎಂದು ಸಾರಿದರು. ಹೆಣ್ಣನ್ನು ಪ್ರತ್ಯಕ್ಷ ದೇವತೆಯಾಗಿ ನೋಡಿದವರು. ಇಂದು ಸಾಮೂಹಿಕ ಅತ್ಯಾಚಾರವೂ ನಡೆಯುತ್ತಿದೆ ಎಂದರೆ ತಲೆತಗ್ಗಿಸಬೇಕಾಗುತ್ತದೆ. ಹೆಣ್ಣಿಗೆ ಕೆಲವೆಡೆ ಇಂದೂ ದೇವಸ್ಥಾನದಲ್ಲಿ ಪ್ರವೇಶವಿಲ್ಲ. ಇಂಥವಕ್ಕೆಲ್ಲ ನಮಗೆ ವಚನಕಾರರ ವಚನಗಳು ದಾರಿದೀಪವಾಗಬೇಕು ಎಂದರು.
ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಡಾ ದೇವರಾಜು ಸ್ವಾಗತಿಸಿದರು. ವೇದಿಕೆಯ ಮೇಲೆ ಶ್ರೀ ರುದ್ರಮುನಿ ಸ್ವಾಮಿಗಳು, ಶ್ರೀ ಜಯಚಂದ್ರಶೇಖರ ಸ್ವಾಮಿಗಳು, ಶ್ರೀ ಸದಾಶಿವಾಚಾರ್ಯ ಸ್ವಾಮಿಗಳು, ಶಾಸಕರಾದ ಲಿಂಗೇಶ್, ಪ್ರೀತಂಗೌಡ, ಕಸಪ ಅಧ್ಯಕ್ಷ ಮರದೇಗೌಡ ಉಪಸ್ಥಿತರಿದ್ದರು.
ಹೆಚ್ ಎಸ್ ದ್ಯಾಮೇಶ್
ಬೆಳಗ್ಗೆ 11 ಗಂಟೆಗೆ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ
ಹಾಸನ, ಆಗಸ್ಟ್ 4; ಇಲ್ಲಿನ ಹಸನಾಂಬ ಕಲಾಕ್ಷೇತ್ರದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಸಾನ್ನಿಧ್ಯವಹಿಸಿ ಮಾತನಾಡಿ ಭಗವಂತ ಕೃಪೆ ತೋರಿದರೆ ಏನು ಬೇಕಾದರೂ ಸಾಧನೆ ಮಾಲಿಕ್ಕೆ ಸಾಧ್ಯ, ಹಾಗಾದರೆ ಭಗವಂತ ಕೃಪೆ ತೋರುವುದು ಹೇಗೆ ? ಬಹಳ ಜನ ನಾವು ಅಂದುಕೊಂಡಿರುವಂತೆ ಧ್ಯಾನ, ಪೂಜೆ, ಪ್ರಾರ್ಥನೆಗಳಿಂದ ದೇವರು ಒಲಿಯುತ್ತಾನೆ ಎಂದು. ಆದರೆ ದೇವರು ಧ್ಯಾನ, ಪೂಜೆ ಪ್ರಾರ್ಥನೆಗಿಂತ ಮುಖ್ಯವಾಗಿ ನಡೆ-ನುಡಿ ಶುದ್ಧವಾದಂತಹ ಜೀವನ ಮುಖ್ಯ. ಸಕಲ ಜೀವಾತ್ಮರ ಒಳಿತು ಬಯಸುವಂತಹ ಮನೋಸ್ಥಿತಿ. ಯಾರಿಗೂ ಕೇಡನ್ನು ಬಯಸದೆ ಎಲ್ಲರ ಏಳ್ಗೆಯಲ್ಲಿ ನನ್ನ ಏಳ್ಗೆಯಿದೆ ಎನ್ನುವ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಂಡಾಗ ಭಗವಂತ ತನ್ನಷ್ಟಕ್ಕೆ ತಾನೆ ಒಲಿಯುತ್ತಾನೆ. ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿವೆ. ಒಂದು ಕಡೆ ಅತಿ ವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿ. ಒಂದು ಕಡೆ ಭೂಕಂಪ ಇನ್ನೊಂದು ಕಡೆ ಬಿರುಗಾಳಿ, ಒಂದು ಕಡೆ ಅಗ್ನಿಸ್ಪೋಟ ಮತ್ತೊಂದು ಕಡೆ ಜಲಸ್ಪೋಟ. ಈ ಅನಾಹುತಕ್ಕೆ ಕಾರಣ ದೇವರ ಶಾಪವಲ್ಲ; ಮನುಷ್ಯ ಪ್ರಕೃತಿಯ ಮೇಲೆ ನಡೆಸಿದ ಅನ್ಯಾಯ. ಮನುಷ್ಯ ತಾನು ಮಾತ್ರ ಸುಖವಾಗಿ ಇರಬೇಕೆಂದು ಕಬಳಿಸುವ, ದೋಚುವ, ಬಾಚುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾನೆ. ಈ ಭಾಗವನ್ನು ಮಲೆನಾಡು ಎಂದು ಮೊದಲು ಕರೆಯಲಾಗುತ್ತಿತ್ತು. ಈ ತಿಂಗಳಿನಲ್ಲಿಯಂತೂ ವಿಪರೀತ ಮಳೆಯಾಗಿ ಕಾಲಿಡಲೂ ಆಗುತ್ತಿರಲಿಲ್ಲ. ಅಷ್ಟೊಂದು ಮಳೆ ಬರುತ್ತಿತ್ತು. ಕಾಡುಗಳು ತುಂಬಾ ಸಮೃದ್ಧಿಯಾಗಿದ್ದವು. ಮರಗಳು ಎತ್ತರವಾಗಿದ್ದವು. ಆದರೆ ಈಗ ಕಾಡುಗಳು ಹಿಂದಿನಷ್ಟು ದಟ್ಟವಾಗಿ, ವಿಶಾಲವಾಗಿ ಇಲ್ಲ. ಕಾರಣ ಮನುಷ್ಯ ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು, ಇನ್ನಷ್ಟು ಸುಖವಾಗಿರಲು ಕಾಡುಗಳನ್ನು ಕಡಿಯಲು ಪ್ರಾರಂಭ ಮಾಡಿದ. ಗುಡ್ಡ ಬೆಟ್ಟಗಳನ್ನು ನಾಶ ಮಾಡಿದ. ಅದರ ಪರಿಣಾಮವಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿವೆ. ಪ್ರಕೃತಿಯನ್ನು ಮನಸ್ಸಿಗೆ ಬಂದಂತೆ ಬಳಸುತ್ತಿದ್ದಾನೆ. ಒಂದು ಕಡೆ ಪ್ರಕೃತಿಯನ್ನು ನಾಶ ಮಾಡುವವರು ನಾವೇ; ಇನ್ನೊಂದೆಡೆ ದೇವರನ್ನು ಬೇಡುವವರೂ ನಾವೇ. ಇದಕ್ಕಾಗಿ ಹೋಮ, ಅಭಿಷೇಕ ಇತ್ಯಾದಿ ಮಾಡುತ್ತೇವೆ. ಇವುಗಳಿಂದ ಶಾಪಗಳನ್ನು ವಿಮುಕ್ತಿಗೊಳಿಸಿಕೊಳ್ಳಲು ಸಾಧ್ಯವಿಲ್ಲ. ದುರಾಸೆಗೆ ಮನುಷ್ಯ ಕಡಿವಾಣ ಹಾಕಿಕೊಳ್ಳದಿದ್ದರೆ ಅನಾಹುತ ತಪ್ಪಿದ್ದಲ್ಲ. ಬದಲಾಗಿ ನಮ್ಮ ನಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಪ್ರಾಕೃತಿಕ ಸಮತೋಲನಕ್ಕೆ ಏನು ಮಾಡಬೇಕು, ನಮ್ಮ ಗಾಳಿ ಶುದ್ಧವಾಗಿರಬೇಕು, ನಮ್ಮ ನೀರು ಶುದ್ಧವಾಗಿರಬೇಕು, ನಮ್ಮ ಭೂಮಿ ಸತ್ವಯುತವಾಗಿರಬೇಕು. ಇವೆಲ್ಲಾ ಆಗಬೇಕೆಂದರೆ ಮನುಷ್ಯ ತಮ್ಮ ದುರಾಸೆಗೆ ಕಡಿವಾಣ ಹಾಕಿಕೊಳ್ಳಬೇಕು. ಬುದ್ಧ ಒಂದು ಕಾಲದಲ್ಲಿ ಹೇಳಿದ್ದು “ಆಸೆಯೇ ದುಖಃಕ್ಕೆ ಮೂಲ” ಎಂದು. ಹಾಗಾದರೆ ಆಸೆಯೇ ಬೇಡವೆ? ಬೇಕು. ಅದು ದುರಾಸೆಯಾಗದ ಹಾಗೆ ಎಚ್ಚರವಹಿಸಬೇಕು. ಆದರೆ ಇವತ್ತು ಮನುಷ್ಯನ ಆಸೆಗಳಿಗೆ ಒಂದು ಮಿತಿ ಇಲ್ಲ. ಅದನ್ನೇ ಅಂಬಿಗರ ಚೌಡಯ್ಯ “ಬಡತನಕ್ಕೆ ಉಂಬುವ ಚಿಂತೆ, ಉಂಡರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ, ಬದುಕಾದರೆ ಕೇಡಿನ ಚಿಂತೆ, ಕೆಡದಾದರೆ ಮರಣದ ಚಿಂತೆ, ಇಂತಿ ಹಲವು ಚಿಂತೆಗಳಲ್ಲಿಪ್ಪರ ಕಂಡೆ ಶಿವ ಚಿಂತೆಯಲ್ಲಿಪ್ಪರೊಬ್ಬರನು ಕಾಣೆ” ಎಂದು ಹೇಳಿರುವುದು. ಇಂದು ಕೂಡಿಡುವುದಕ್ಕೆ ಒಂದು ಮಿತಿಯೇ ಇಲ್ಲ. ಒಂದು ಕಡೆ ಅತಿಯಾದ ಶ್ರೀಮಂತರರು, ಇನ್ನೊಂದು ಕಡೆ ಅತೀ ಬಡವರನ್ನು ಕಾಣುತ್ತೇವೆ. ಇವರಿಬ್ಬರ ನಡುವೆ ಸಮತೋಲನವನ್ನು ಸಾದಿಸಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಈ ಸಂಗ್ರಹ ಪ್ರವೃತ್ತಿ. ಇದನ್ನೇ ಶರಣರು ಸಲ್ಲದು ಎಂದು ಹೇಳುತ್ತಾರೆ. ಶರಣರು ಹೇಳಿರುವುದು ದುಡಿದು ಊಟ ಮಾಡಬೇಕು. ಆದರೆ ಕೂಡಿಡಬಾರದು. ಈ ಕೂಡಿಡಬಾರದೆಂಬುದನ್ನೆ ದಾಸೋಹ ಎಂದು ಕರೆದರು. ಈ ಜಗತ್ತಿನಲ್ಲಿರುವ ನಾವು ಬಹಳ ನೆಮ್ಮದಿಯಿಂದ ಇರಬೇಕೆಂದರೆ ಪ್ರತಿಯೊಬ್ಬರೂ ಕೂಡ ಒದಿಲ್ಲೊಂದು ಕಾಯಕ ಮಾಡಬೇಕು. ಕೆಲಸದಲ್ಲಿ ಮೇಲು ಕೀಳು ಇದೆ. ಆದರೆ ಕಾಯಕದಲ್ಲಿ ಮೇಲು ಕೀಳು ಇಲ್ಲ. ಉಪದೇಶ ಮಾಡುವ ಸ್ವಾಮಿ, ಕಸಗುಡಿಸುವವ, ಡಿ ಸಿ ಎಲ್ಲರು ಒಂದೇ. ಸತ್ಯಕ್ಕ ಕಸಗುಡಿಸಿದಳು. ಆದರೆ ಆಕೆ ಕೀಳಾಗಿರಲಿಲ್ಲ. ಹರಳಯ್ಯ ಚಪ್ಪಲಿ ಹೊಲಿದರು. ಅವರು ಕೀಳಲ್ಲ. ಮೇಲು ಕೀಳು ಎಂಬ ತಾರತಮ್ಯ ಭಾವನೆಯನ್ನು ಕಿತ್ತಾಕಿ ಎಲ್ಲರಲ್ಲೂ ಸಮಾನತೆಯನ್ನು ಮೂಡಿಸುವ ನಿಟ್ಟಿನಲ್ಲಿ ಕಾಯಕ ಶ್ರದ್ಧೆಯನ್ನು ಶರಣರು ಬೆಳೆಸಿದರು. ಶರಣರು ಹೇಳುತ್ತಾರೆ “ಗುರುವಾದರೂ ಕಾಯಕದಿಂದಲೆ ಜೀವನ್ಮುಕ್ತಿ ಎಂದು. ಗುರು ಲಿಂಗ, ಜಂಗಮವಾದರೂ ಮೊದಲು ಕಾಯಕ ಮಾಡಬೇಕು. ನಾವು ದುಡಿದ ದುಡಿಮೆಯನ್ನು ನಾನೊಬ್ಬನೆ ಬಳಸದೇ ಸಮಾಜದ ಉಪಯೋಗಕ್ಕಾಗಿ ಬಳಸುವುದನ್ನೇ ದಾಸೋಹ ಎಂದರು. ಕಾಯಕ-ದಾಸೋಹ ಪ್ರಜ್ಞೆ ಸಮಾಜದಲ್ಲಿ ಮೂಡಿದರೆ ಎಲ್ಲಿಯೂ ಬಡತನ ಮತ್ತು ಸಂಗ್ರಹ ಪ್ರವೃತ್ತಿ ಇರುವುದಿಲ್ಲ. ಯುವ ಪೀಳಿಗೆಯ ಮೆಲೆ ತುಂಬಾ ಹೊಣೆಗಾರಿಕೆ ಇದೆ. ವಿದ್ಯಾರ್ಥಿಗಳೆಂದರೆ ಮುಂದಿನ ನಾಗರಿಕರು, ನಾಳಿನ ಸಮಾಜವನ್ನು ಕಟ್ಟುವ ಹೊಣೆಗಾರಿಕೆ ನಿಮ್ಮ ಮೆಲೆಯೆ ಇದೆ. ನಾಳೆ ನಾವು ಕಟ್ಟುವ ಸಮಾಜ ಹೇಗಿರಬೇಕೆಂದು ವಿದ್ಯಾರ್ಥಿಗಳು ಈಗ ಚಿಂತನೆ ನಡೆಸಬೇಕು. ಇವತ್ತಿನ ಹಾಗೆ ಅನ್ಯಾಯ ವಂಚನೆ ಮೋಸ ದ್ರೋಹ ಇವುಗಳು ಹೀಗೆಯೇ ಮುಂದುವರೆಯಬೇಕೇ ಅಥವಾ ಇವುಗಳಲ್ಲಿ ಪರಿವರ್ತನೆಯನ್ನೇನಾದರೂ ತರಬೇಕೆ? ಇದು ಈಗೆ ಮುಂದುವರೆದರೆ ಒಬ್ಬರು ಇನ್ನೊಬ್ಬರನ್ನು ದ್ವೇಷ ಮಾಡುತ್ತಾ ಹೊಡೆದಾಡುತ್ತಾ ನೆಮ್ಮದಿಯನ್ನು ಕಳೆದುಕೊಳ್ಳುತ್ತಾ ಇರಬೆಕಾಗುತ್ತದೆ. ಆದುದರಿಂದ ಸಮಾಜದ ಎಲ್ಲ ಅನಾರೋಗ್ಯಕರ ವಾತಾವರಣವನ್ನು ಬೇರು ಸಹಿತ ಕಿತ್ತುಹಾಕಲು ಶರಣರು ನಡೆದ ದಾರಿಯಲ್ಲಿ ನಮ್ಮ ವಿದ್ಯಾರ್ಥಿ ಸಮೂಹ ನಡೆಯಬೇಕು. ನಿಮ್ಮ ಜೊತೆಗೆ ನಿಮ್ಮ ತಂದೆ ತಾಯಿಗಳೂ ನಡೆಯುವಂತೆ ಮಾಡಬೇಕು. ಸಮಾಜದಲ್ಲಿ ಯಾರೇ ತಪ್ಪು ಮಾಡಿದರು ಅವರನ್ನು ಪ್ರಶ್ನೆ ಮಾಡಬೇಕು. ಪ್ರಶ್ನೆ ಮಾಡುವಾಗ ನಮ್ಮ ಸೌಜನ್ಯವನ್ನೂ ಕೂಡ ಕಳೆದುಕೊಳ್ಲಬಾರದು. ಇನ್ನೊಬ್ಬರ ಬಗ್ಗೆ ಅವಹೇಳನದ ಮಾತುಗಳನ್ನು ಹೇಳುವುದು ಸರಿಯಾದುದಲ್ಲ. ನಾಲಗೆ ಒಳ್ಳೆಯದಾದರೆ ನಾಡೆಲ್ಲಾ ಒಳ್ಳೆಯದು. ಸತ್ಯವನ್ನು ಮುಚ್ಚಿಡಬಾರದು. ನಮ್ಮ ಮೇಲೆ ಈಗ 3 ದಿನಗಳಿಂದ ಮೆಚ್ಚಿಗೆಯ ಮಾತುಗಳೂ ಟೀಕೆಯ ಮಾತುಗಳೂ ಬರುತ್ತಿವೆ. ನಾವು ಸತ್ಯವನ್ನು ಇದ್ದ ಹಾಗೆ ಹೇಳಿದರೆ ಅನೇಕರಿಗೆ ಇಷ್ಟವಾಗುವುದಿಲ್ಲ. ಆದರೆ ಸಾಮಾಜಿಕ ಚಿಂತನೆ ಮತ್ತು ಕಳಕಳಿಯಿಂದಾಗಿ ನಾವು ಸತ್ಯವನ್ನು ಹೇಳುತ್ತಿದ್ದೇವೆ. ಮಕ್ಕಳು ಓದಿನ ಜೊತೆ ವಿವೇಚನಾ ಶೀಲರಾಗಬೇಕು. ಕಾಯಕ, ದಾಸೋಹ ಗುಣವನ್ನು ಬೆಳೆಸಿಕೊಳ್ಳಬೇಕು. ಅಂತರಂಗದ ವಿಚಾರವನ್ನು ನೀವು ಹೆಚ್ಚಿಸಿಕೊಳ್ಳಬೇಕು ಮಾನಸಿಕವಾಗಿ ಸದೃಢರಾಗಬೇಕು ಇದಕ್ಕೆ ವಚನಗಳು ಸಹಕಾರಿ. ಕನಿಷ್ಟ 10 ವಚನಗಳನ್ನಾದರು ಕಂಠಪಾಟ ಮಾಡಿದರೆ ಅವು ನಿಮಗೆ ಸ್ಥೈರ್ಯ ನೀಡುತ್ತವೆ. ನಮ್ಮ ನಿಜವಾದ ದೇವರು ನಮ್ಮ ಮಕ್ಕಳು. ಆದುದರಿಂದ ಮಕ್ಕಳ ಜೊತೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.
ಸಮಾಲೋಚಕರು:
1. ಗಂಗಾದರ ಬಹುಜನ
2. ನಾಗರಾಜ್ ಎ. ಸಿ
ಪ್ರಶ್ನೆ: ದೀಪಕ್:- ಅಂತರ್ಜಾತಿ ವಿವಾಹ ಕಾನೂನು ಜಾರಿಗೊಳಿಸಿದೆ, ಆದರೆ ಜನರಲ್ಲಿ ಇನ್ನೂ ಈ ಬಗ್ಗೆ ಅರಿವು ಮೂಡಿಲ್ಲ ಯಾಕೆ?
ಉತ್ತರ:- ಯಾರನ್ನೂ ಬಲವಂತವಾಗಿ ಅಂತರ್ಜಾತಿ ವಿವಾಹವಾಗುವಂತೆ ಬಲವಂತ ಮಾಡುವಂತಿಲ್ಲ. ಮದುವೆ ಎರಡು ಹೃದಯಗಳ ನಡುವಿವ ಒಲುಮೆಗೆ ಸಂಬಂದಿಸಿದ ವಿಚಾರ. ಮದುವೆಯಾಗುವವರು ಪ್ರೌಢರಾಗಿದ್ದು ಜಾತಿ ಪರಿಗಣಿಸದೇ ಮದುವೆಯಾಗಲು ಅವಕಾಶವಿದೆ. ಆದರೆ ಜಾತಿವಾದಿ ಮನಸ್ಸುಗಳು ಇನ್ನೂ ಇವತ್ತಿನ ಕಾಲಘಟ್ಟಕ್ಕೆ ಹೊಂದಿಕೊಳ್ಳದಿರುವುದರಿಂದ, ಸಮಸಮಾಜಕ್ಕಾಗಿ ಹೋರಾಡಿದ ಬಸವಣ್ಣನವರ ಚಿಂತನೆಗಳನ್ನು ಪಾಲಿಸದಿರುವುದರಿಂದ, ಶರಣರ ಪರಿಕಲ್ಪನೆ ಒಪ್ಪಿಕೊಳ್ಳುವಷ್ಟು ನಾವು ಪ್ರಬುದ್ದರಾಗದಿರುವುದರಿಂದ ಕಾನೂನು ಜಾರಿಯಲ್ಲಿದ್ದರೂ ಮನಃ ಪರಿವರ್ತನೆ ಆಗುತ್ತಿಲ್ಲ
ಪ್ರಶ್ನೆ: ಜಾತಿ ವ್ಯವಸ್ಥೆ ಯಾಕೆ ಬಂತು?
ಉತ್ತರ:- ಸಿಂದೂ ನಾಗರಿಕತೆಗಿಂತ ಹಿಂದೆ ವರ್ಣ ವ್ಯವಸ್ಥೆ ಇರಲಿಲ್ಲ. ಆದರೆ ಕುಲಗಳು ಇದ್ದವು. ಆರ್ಯರ ಗಮನದ ನಂತರ ಸುಮುತಿ ಭಾರ್ಗವ ಮನುಸ್ಮ್ರತಿ ರಚನೆ ಮಾಡುತ್ತಾನೆ. ಅದರಲ್ಲಿ 4 ವರ್ಣಗಳಿದ್ದು, ನಂತರ ಜಾತಿ ವ್ಯವಸ್ಥೆ ಜಾರಿಗೆ ಬರುತ್ತದೆ. ಆದರೆ ವೃತ್ತಿಯು ಮುಂದುವರೆಯಿತು. ನಾಗರಿಕತೆ ಬರುವುದಕ್ಕಿಂತ ಮೊದಲು ಜಾತಿಯತೆ ಇರಲಿಲ್ಲ, ಯಾವಾಗ ನಾನು ಬುದ್ದಿವಂತ, ಶ್ರೀಮಂತ, ಮೇಲು ಎಂಬ ಭಾವನೆ ಜಾಸ್ತಿಯಾಯಿತೋ ಆಗ ಜಾತಿ ಜಾಸ್ತಿಯಾಗಿ ಬೆಳೆಯಿತು.
ಪ್ರಶ್ನೆ: ಅತ್ಯಾಚಾರ, ದುರಾಚಾರ ಜಾಸ್ತಿ ಇದೆ. ಮತ್ತೆ ಕಲ್ಯಾಣ ಸಾಧ್ಯವೇ?
ಉತ್ತರ:- ಮತ್ತೆ ಕಲ್ಯಾಣದ ಮೂಲಕ ವೆಲ್ಲವನ್ನೂ ನಿರ್ಮೂಲನೆ ಮಾಡುತ್ತೇವೆ ಎಂದೇನೂ ಅಲ್ಲ. ಆದರೆ ಸುಮ್ಮನೆ ಕುಳಿತರೆ ಸಮಾಜದ ಅನ್ಯಾಯ ಅಳಿಸಲು ಆಗದು. ಆದುದರಿಂದ ಇದೊಂದು ಪ್ರಯತ್ನ. ಇದರಿಂದ ಸಾಧ್ಯವಾದಷ್ಟು ಬದಲಾವಣೆ ಆಗುತ್ತದೆ ಎಂಬ ನಂಬಿಕೆ ನಮಗಿದೆ. ಮಹಾನುಭಾವರು ಹುಟ್ಟಿದ್ದೇ ಸಮಾಜದ ಕೊಳೆ ತೊಳೆಯುವುದಕ್ಕಾಗಿ. ಅಂತಹ ಪ್ರಯತ್ನವೇ ಮತ್ತೆ ಕಲ್ಯಾಣ.
ಪ್ರಶ್ನೆ:- ಹಳ್ಳಿಗಳಲ್ಲಿ ಮತ್ತೆ ಕಲ್ಯಾಣ ಮಾಡುವ ಮೂಲಕ ಹಳ್ಳಿಗಳಲ್ಲಿರುವ ಮೌಢ್ಯ ನಾಶ ಮಾಡಬಹುದಲ್ಲವೇ?
ಉತ್ತರ:- ಭಾರತೀಯರಲ್ಲಿ ದೇವಸ್ಥಾನಗಳ ಬಗ್ಗೆ ಅಗಾಧವಾದ ನಂಬಿಕೆ ಇದೆ. ಈ ನಂಬಿಕೆಗಳನ್ನು ಹೋಗಲಾಡಿಸುವ ಪ್ರಯತ್ನ ಬಸವಣ್ಣನವರು ಮಾಡಿದರು. ಅಂಬೇಡ್ಕರ್, ಗಾಂದಿ, ಕೆರೆಗೆ ಪ್ರವೇಶ, ದೇವಸ್ಥಾನಕ್ಕೆ ಪ್ರವೇಶಕ್ಕಾಗಿ ಹೋರಾಡಿದರು. ಇದನ್ನು ಗಮನಿಸಿಯೇ ಶರಣರು ದೇವರು ದೇವಸ್ಥಾನಗಳಲ್ಲಿ ಮಾತ್ರ ಇಲ್ಲ; ನಮ್ಮಲ್ಲಿಯೇ ಇದೆ, ಆದುದರಿಂದ ಇಷ್ಟಲಿಂಗ ಪೂಜೆಯನ್ನು ತಂದು ದೇಹವೇ ದೇವಾಲಯ ಎಂದು ಜಾರಿಗೆ ತಂದರು. ಹಳ್ಳಿಗಳಲ್ಲಿ ಶರಣರ ಚಿಂತನೆ ಜಾರಿಗಾಗಿ ಹಿಂದೆ `ಶ್ರಾವಣ ಸಂಜೆ’ ಎಂಬ ಕಾರ್ಯಕ್ರವಗಳನ್ನು ಮಾಡಲಾಗಿದೆ.
ಪ್ರಶ್ನೆ:-ಸಾಮಾಜಿಕ ದೌರ್ಜನ್ಯಕ್ಕೆ ವಿದ್ಯೆ ಮತ್ತು ಶ್ರೀಮಂತಿಕೆ ಕಾರಣವೇ?
ಉತ್ತರ:- ಹೌದು. ಇಂದು ವಿದ್ಯಾವಂತರಿಂದ ಮತ್ತು ಶ್ರೀಮಂತರಿಂದಲೆ ಸಾಮಾಜಿಕ ಶೋಷಣೆ ಹೆಚ್ಚಾಗುತ್ತಿದೆ. ನಾವು ಮಾತ್ರ ಸುಖವಾಗಿರಬೆಕೆಂದು ವಿದ್ಯಾವಂತ ವರ್ಗ ಸೃಷ್ಟಿಮಾಡುತ್ತಿದೆ.
ಪ್ರಶ್ನೆ:- ಜಾತಿಯನ್ನು ಬುಡ ಸಮೇತ ಕಿತ್ತಾಕಲು ಎನು ಮಾಡಬೇಕು?
ಉತ್ತರ:-ಜಾತಿ ದೇಹಕ್ಕೆ ಅಂಟಿದ ಚರ್ಮವಾಗಿದೆ. ಜಾತಿಯನ್ನು ಪೂರ್ಣವಾಗಿ ಕಿತ್ತಾಕುವುದು ಕನಸಾಗಿದೆ. ಬುದ್ದ, ಗಾಂಧಿ, ಬಸವಣ್ಣ ಜಾತಿ ಕಿತ್ತಾಕಲು ಪ್ರಯತ್ನಿಸಿ ಸಫಲರಾಗಲಿಲ್ಲ. ಅದಕ್ಕೆ ಬದಲಾಗಿ ಮತೀಯ ಸಾಮರಸ್ಯ ಉಂಟು ಮಾಡಿ ಬದುಕಬೇಕು. ಎಲ್ಲರು ನಮ್ಮವರೇ ಎಂದು ಬದುಕಬೇಕು.
ಪ್ರಶ್ನೆ:-ಸಂವಿಧಾನದಲ್ಲಿ ಜಾತಿಗೆ ಮಹತ್ವ ನೀಡಲಾಗಿದೆ. ಸಮವಿಧಾನವನ್ನು ಬದಲಾಯಿಸುವ ಮೂಲಕ ಜಾತಿಯನ್ನು ನಾಶ ಮಾಡಬಹುದಲ್ಲವೇ?
ಉತ್ತರ:- ಸಂವಿಧಾನ ಅಂದು ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ವಿಶೇಷ ಸೌಲಭ್ಯಗಳನ್ನು ನೀಡಿದೆ. ಇಂದಿನ ಪೀಳಿಗೆ ಸಂವಿಧಾನದ ಮೂಲ ಆಶಯಗಳನ್ನು ತಿಳಿಯಬೇಕು. ಸಂವಿಧಾನ ಎಲ್ಲಾ ಸಮುದಾಯಗಳಿಗೂ ಮೀಸಲಾತಿ ನೀಡಿದೆ. ಮುಂದಿನ ದಿನಗಳಲ್ಲಿ ಅಗತ್ಯ ಕಂಡು ಬಂದಾಗ ಬದಲಾವಣೆ ಮಾಡಲಾಗುವುದು.
ಪ್ರಶ್ನೆ:-ಲಿಂಗಾಯತರು ಬೇರೆ ಜಾತಿಯವರನ್ನು ಮನೆಯೊಳಗೆ ಬಿಟ್ಟುಕೊಳ್ಳದಿರುವುದರಿಂದ ಅವರು ಬಸವಣ್ಣನವರ ಅನುಯಾಯಿಗಳು ಹೇಗಾಗುತ್ತಾರೆ ?
ಉತ್ತರ:-ಶರಣರು ಎಲ್ಲಿಯೂ ಈ ರೀತಿಯ ಚಿಂತನೆಗಳಿಗೆ ಬೆಂಬಲ ನೀಡಿಲ್ಲ. ಆದುದರಿಂದ ನೀವು ನಿಮ್ಮ ತಂದೆ ತಾಯಿಗಳಿಗೆ ಅಸ್ಪೃಶ್ಯತೆ ಆಚರಿಸದಂತೆ ಮನವರಿಕೆ ಮಾಡಿಕೊಡಿ.
ಪ್ರಶ್ನೆ:- ಈಗ ವೀರಶೈವರೇ ಪ್ರತ್ಯೇಕ ಧರ್ಮ, ಲಿಂಗಾಯತರೇ ಪ್ರತ್ಯೇಕ ಧರ್ಮ ಮಾಡಿಕೊಳ್ಳುತ್ತಿರುವುದು ಬಸವಣ್ಣನವರ ಸಮಾನತೆಯ ತತ್ವಕ್ಕೆ ಮಾನವ ದರ್ಮಕ್ಕೆ ವಿರುದ್ಧವಲ್ಲವೇ?
ಉತ್ತರ:- ಲಿಂಗಾಯತ ಧರ್ಮದ ಪ್ರಶ್ನೆ ಬರುವುದಿಲ್ಲ. ಆಡಳಿತಾತ್ಮಕವಾಗಿ ಲಿಂಗಾಯತ ಧರ್ಮದ ಮಾನ್ಯತೆ ವಿಚಾರವಿದೆ. ಲಿಂಗಾಯತರು ಬಸವಣ್ಣನವರ ತತ್ವಗಳನುಸಾರ ಪ್ರತ್ಯೇಕ ಧರ್ಮದ ವಿಚಾರ ಪ್ರಸ್ತಾಪಿಸುತ್ತಿದ್ದಾರೆ.
ಪ್ರಶ್ನೆ:-ಧೂಮಪಾನ ಮತ್ತು ಮಧ್ಯಪಾನ ಕೆಟ್ಟದಾದರೂ ಏಕೆ ಸರ್ಕಾರ ನಿಷೇಧಿಸಿಲ್ಲ?
ಉತ್ತರ: ಸರ್ಕಾರ ಮಾಡಿದೆ. ನಾವು ಮೊದಲು ದುಶ್ಚಟಗಳನ್ನು ಬಿಡಬೇಕು. ಸರ್ಕಾರ ಅಧಿಕಾರಿಗಳ ಮೂಲಕ ದಂಡವಾಕಿ ಪರಿವರ್ತನೆ ಮಾಡಲು ಪ್ರಯತ್ನಿಸುತ್ತಿದೆ.
ಪ್ರಶ್ನೆ:- ಅರ್ಜಿಗಳಲ್ಲಿ ಜಾತಿ ಏಕೆ ಕೇಳಬೇಕು?
ಉತ್ತರ:-ಎಲ್ಲರು ಜಾತಿ ಕಾಲಂಗಳಲ್ಲಿ ಏನನ್ನೂ ಬರೆಯದೇ ಬಿಟ್ಟರೆ ಮುಂದೆ ಸರ್ಕಾರ ಜಾತಿ ಕಾಲಂ ತೆಗೆದುಹಾಕುತ್ತದೆ. ಮೀಸಲಾತಿಯ ಉದ್ದೇಶದಿಂದ ಜಾತಿ ನಮೂದಿಸಲಾಗಿದೆ. ಆಡಳಿತಾತ್ಮಕ ಕಾರಣದಿಂದ.
ಇನ್ನೂ ಮುಂತಾದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.
-ಹೆಚ್ ಎಸ್ ದ್ಯಾಮೇಶ್



ಆಗಸ್ಟ್ 05 ಸೋಮವಾರ, ಕೊಡಗು


ಕೊಡಗಿನಲ್ಲಿ 5ನೇ ದಿನದ ಮತ್ತೆ ಕಲ್ಯಾಣ ಆಂದೋಲನ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ



ಇಲ್ಲಿನ ಕಾವೇರಿಹಾಲ್ನಲ್ಲಿ `ಮತ್ತೆ ಕಲ್ಯಾಣದ’ ಭಾಗವಾಗಿ ಆಯೋಜಿಸಲಾಗಿದ್ದ `ಸಾರ್ವಜನಿಕ ಸಮಾವೇಶ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮಕ್ಕಳನ್ನು ದೇವರೆಂದು ಭಾವಿಸಿದರೆ ದೆವ್ವದ ಕೆಲಸ ನಡೆಯುವುದಿಲ್ಲ. ಮಾನವ ದೇವನಾಗಬೇಕು. ಶರಣರ ನುಡಿಮುತ್ತುಗಳು ಸದಾ ನಮ್ಮ ಕಿವಿಯಮೇಲೆ ಬೀಳುತ್ತಿದ್ದರೆ ಸದ್ಗುಣಗಳು ತಾನಾಗಿಯೇ ರೂಢಿಗತವಾಗುತ್ತದೆ. ಇಂಥ ಹಂಬಲ ಇಲ್ಲಿ ಕುಳಿತಿರುವ ಮಕ್ಕಳಲ್ಲಿ ಕಾಣುತ್ತಿದ್ದೇವೆ. ಮತ್ತೆ ಕಲ್ಯಾಣದ ಮುಂದುವರೆಕೆಯ ಭಾಗವಾಗಿ ಮುಂದಿನ ದಿನಗಳಲ್ಲಿ ಮಕ್ಕಳ ಜೊತೆ ವ್ಯಾಪಕವಾಗಿ ಸಂವಾದ ಮಾಡುವ ಆಶಯವನ್ನು ಹೊಂದಿದ್ದೇವೆ. ಸಾಣೇಹಳ್ಳಿಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರವನ್ನು ಆಯೋಜಿಸಲಾಗುವುದು. ಆ ಅವಕಾಶವನ್ನು ಮಕ್ಕಳು ಬಳಸಿಕೊಳ್ಳಬೇಕು. ಈ ಸಹಮತ ವೇದಿಕೆಯಲ್ಲಿ ಸ್ವಾಮಿಗಳು, ಅನ್ಯ ಧಾರ್ಮಿಕ ಮುಖಂಡರು, ರಾಜಕಾರಣಿಗಳು ಭಾಗವಹಿಸಿದ್ದರೂ ಅವರು ಮಾತನಾಡದೆ ಇಲ್ಲಿನ ಚಿಂತಕರ ಮಾತನ್ನು ಕೇಳುವುದರ ಮೂಲಕ ದೊಡ್ಡತನ ತೋರುತ್ತಿದ್ದಾರೆ. ಇಂಥ ಕೇಳುವ ಮನೋಭಾವ ಎಲ್ಲರಿಗೂ ಬರಬೇಕು ಎಂದರು.
`ವಚನ ಚಳುವಳಿಯ ವೈಶಿಷ್ಟ್ಯ’ ಕುರಿತಂತೆ ಬೆಂಗಳೂರಿನ ಜಿ ಎನ್ ನಾಗರಾಜ್ ಮಾತನಾಡಿ ಮತ್ತೆ ಕಲ್ಯಾಣ ದೇಶಕ್ಕೆ ಮಹತ್ವದ್ದು. ಜಾತಿ ವ್ಯವಸ್ಥೆಯ ಅಸಮಾನತೆಯನ್ನು ತೊಡೆದು ಹಾಕುವ ಉದ್ದೇಶದ ಆಶಯ. ವಚನಕಾರರು ಕುಲವನ್ನು ಅರಸಿದವರಲ್ಲ. ವೈಚಾರಿಕ ಹಿನ್ನೆಲೆಯುಳ್ಳದ್ದು ವಚನ ಚಳುವಳಿ. ಒಂದೇ ಕಾಲಘಟ್ಟದಲ್ಲಿ 30ಕ್ಕಿಂತ ಹೆಚ್ಚು ಮಹಿಳೆಯರು ವೈಚಾರಿಕ ಸಂವಾದಕ್ಕೆ ಇಳಿದದ್ದನ್ನು ಪ್ರಪಂಚಲ್ಲಿ ಬೇರೆ ಎಲ್ಲೂ ನೋಡಲು ಸಾಧ್ಯವಿಲ್ಲ. ಜಾತಿ ಮತ್ತು ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಅನೇಕ ಪರಿಣಾಮಕಾರಿ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ದೇವಾಲಯವನ್ನು ನಿರಾಕರಿಸಿದ ಯಾವ ಧರ್ಮವೂ ಜಗತ್ತಿನಲ್ಲಿ ಇಲ್ಲ; ಇದ್ದರೆ ಅದು ವಚನ ಧರ್ಮ ಮಾತ್ರ. ವಚನಕಾರರು ದೇಹಾಲಯದ ಕಲ್ಪನೆಯನ್ನು ಕಟ್ಟಿಕೊಟ್ಟರು. ಸ್ತ್ರೀ-ಪುರುಷರಿಬ್ಬರಿಗೂ ಸಮಾನ ಅವಕಾಶ ನೀಡಿದರು. ಕಾಯಕವೇ ತೀರ್ಥಕ್ಷೇತ್ರ ಎಂದು ಮನಗಾಣಿಸಿದರು. ಮಹಿಳಾ ಅಸಮಾನತೆಯನ್ನು ತೊಲಗಿಸದೆ ಜಾತಿಯ ಅಸಮಾನತೆ ಹೋಗಲು ಸಾಧ್ಯವಿಲ್ಲ. ಜಾತಿ ನಿರ್ಮೂಲನೆಗೆ ಪ್ರಯತ್ನ ಮಾಡಿದ ಕಾರಣಕ್ಕೆ ಅಂದು ಪ್ರಭುತ್ವ ಕಲ್ಯಾಣ ರಾಜ್ಯವನ್ನು ನರಕ ಮಾಡಿದರು. ಸಂವಿಧಾನ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವವನ್ನು ಹೇಳುತ್ತದೆ. ಆದರೆ ರಾಜಕೀಯ ವಿಕೃತಿಗಳು ಇದನ್ನು ಸಾಕಾರಗೊಳಿಸಲು ಬಿಡುತ್ತಿಲ್ಲ. ಕಾಯ ಮತ್ತು ಕಾಯಕದ ನಡುವಿನ ತತ್ವವನ್ನೇ ವಚನಕಾರರು ತಮ್ಮ ವಚನಗಳಲ್ಲಿ ನುಡಿದದ್ದಲ್ಲದೆ, ನಡೆದು ತೋರಿದರು. ತಾವು ಮಾಡುವ ಕಾಯಕವನ್ನೇ ಆಧಾರವಾಗಿ ಇಟ್ಟುಕೊಂಡು ಬಿಡಿಬಿಡಿಯಾಗಿ ವರ್ಣಿಸಿದ್ದಾರೆ. ಇಂಥ ವರ್ಣನೆ ಆಧ್ಯಾತ್ಮಿಕ ಸಂಗತಿಯ ಜೊತೆ ಬೆಸೆದಿದ್ದಾರೆ. ಜಗತ್ತಿನಲ್ಲಿ ಇಂಥ ವೈಚಾರಿಕ ನಡೆ-ನುಡಿ ಎಲ್ಲೂ ಸಿಗಲು ಸಾಧ್ಯವಿಲ್ಲ ಎಂದರು.
`ಇಂದಿನ ಅಗತ್ಯ – ಬಸವ ತತ್ವ’ ಕುರಿತಂತೆ ಬೆಂಗಳೂರಿನ ಡಾ, ಕೆ ಷರೀಪಾ ಮಾತನಾಡಿ ವಚನ ಚಳುವಳಿಯನ್ನು ಕಟ್ಟಿದವರು ಸೂಫಿಗಳು ಮತ್ತು ಸಂತರು. 900 ವರ್ಷಗಳಾದರೂ ಅವರ ಆಶಯ ಈಡೇರಿಲ್ಲ. ಮೌಢ್ಯಗಳು ಇನ್ನೂ ವಿಜೃಂಭಿಸುತ್ತಿವೆ. `ಮತ್ತೆ ಕಲ್ಯಾಣ’ ಇದೊಂದು ಸಾತ್ವಿಕ ಹೋರಾಟ. ಬಂಡವಾಳವೇ ಮಾತನಾಡುತ್ತಿರುವ ಕಾಲದಲ್ಲಿ ನಾವು ಕುಳಿತ್ತಿದ್ದೇವೆ. ಜಾಗತಿಕ ಯುದ್ಧದ ಕರಿಮೋಡ ಕವಿದ ವಾತಾವರಣದಲ್ಲಿ ಇದೊಂದು ಆಶಾದಯಕ ಸಂಗತಿ. ಮನುಷ್ಯತ್ವದ ಸ್ಥಾನದಲ್ಲಿ ಮನುವನ್ನು ಪ್ರತಿಷ್ಠಾಪಿಸುವ ಕೆಲಸ ಸಲ್ಲ. ದಲಿತರನ್ನು, ಮಹಿಳೆಯರನ್ನು, ಮುಸ್ಲಿಮರನ್ನು ಅಪರಾಧಿಗಳಂತೆ ಕಾಣಲಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ಮರುಸ್ಥಾಪನೆ ಮಾಡುವುದು ಇಂದಿನ ತುರ್ತು ಅಗತ್ಯ. ಕೊಂಡಿಮಂಚಣ್ಣನ ವ್ಯಕ್ತಿತ್ವದಂತವರು ಎಲ್ಲ ಸಮಾಜದಲ್ಲಿಯೂ ಇದ್ದಾರೆ. ಅವರನ್ನು ಗುರುತಿಸುವ ಕೆಲಸವಾಗಬೇಕು. ಜಲವೊಂದೇ ಶೌಚಾಚ ಮನಕ್ಕೆ ಎನ್ನುವ ಮೂಲಕ ಜಾತಿ, ಲಿಂಗ ಸಮಾನತೆಯನ್ನು ಎತ್ತಿಹಿಡಿದರು. ಕೋರ್ಟಗಳ ಆದೇಶಗಳನ್ನೂ ಉಲ್ಲಂಘಿಸುವ ಪಟ್ಟಭದ್ರ ಹಿತಾಸಕ್ತರು ನಮ್ಮ ಮುಂದೆ ಇದ್ದಾರೆ. ಸಮೂಹಸನ್ನಿಗೆ ವಿವೇಕ ಇರುವುದಿಲ್ಲ. ಯುವಕರು ಇಂಥವಕ್ಕೆ ಬಲಿಯಾಗಬಾರದು. ಮತ್ತೆ ಕಲ್ಯಾಣ ಚಳುವಳಿಯಲ್ಲಿ `ಷರಿಪಾ’ ಕೂಡ ಇದ್ದಾಳೆ ಎನ್ನುವ ಸಂದೇಶ ಎಲ್ಲ ಕಡೆ ಪಸರಿಸಲಿ. ಸಮಾಜವನ್ನು ಕಟ್ಟುವ, ಸೌಹಾರ್ಧತೆಯನ್ನು ಬೆಳೆಸುವ ಈ ಕೆಲಸ ಅತ್ಯಂತ ತುರ್ತಿನ ಸಂಗತಿ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ ಎಸ್ ದೇವಯ್ಯ ಮಾತನಾಡಿ ಇದೊಂದು ದೊಡ್ಡ ಅದ್ಭುತ ಕಾರ್ಯ. ಮಕ್ಕಳಿಗೆ ಪ್ರಶ್ನೆ ಕೇಳುವ ಅವಕಾಶ ನೀಡಿದ್ದು ಇನ್ನೊಂದು ಮಹತ್ಕಾರ್ಯ. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಶರಣರ ವಿಚಾರ ತಿಳಿದುಕೊಳ್ಳುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ರಾಜಕೀಯೇತರವಾಗಿ ಆಡಳಿತ ನಡೆಯಬೇಕು. ಮತದಾರರನ್ನು ಓಟ್ ಬ್ಯಾಂಕ್ ಆಗಿ ಮಾತ್ರ ನೋಡಬಾರದು. ಇಂಥ ವೇದಿಕೆ ಮುಂದುವರಿಯಬೇಕು. ಇಂಥ ಕೆಲಸಗಳಿಗೆ ನಮ್ಮ ಸಹಕಾರ, ಸಹಾಯ ಸದಾ ಇರುತ್ತದೆ ಎಂದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
ಅಗಸ್ಟ್ 5, ಕೊಡಗು; ಇಲ್ಲಿನ ಕಾವೇರಿಹಾಲ್ನಲ್ಲಿ `ಮತ್ತೆ ಕಲ್ಯಾಣದ’ ಭಾಗವಾಗಿ ಆಯೋಜಿಸಲಾಗಿದ್ದ `ವಿದ್ಯಾರ್ಥಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ದೇವರು ನಮಗೆ ಕರುಣಿಸಿರುವ ಬಹೊದೊಡ್ಡ ವರ ಮಾತು ಮತ್ತು ವಿವೇಕ. ಮಾತುಗಳನ್ನು ಆಡಿದಂತೆ ನಡೆಯಬೇಕು. ಮಾತು ಮತ್ತು ಕೃತಿಯ ಮಧ್ಯೆ ಹೊಂದಾಣಿಕೆಯಿಲ್ಲದೆ ಇರುವುದರಿಂದ ಸಮಸ್ಯೆಗಳು ಸಾಲು ಸಾಲಾಗಿ ಸೃಷ್ಟಿಯಾಗುತ್ತಿವೆ. ದೇವರಿಗೇ ಸವಾಲು ಹಾಕುವ ನೈತಿಕ ಸ್ಥೈರ್ಯ ಶರಣರಿಗಿತ್ತು. ಬಸವಣ್ಣ ನನ್ನ ನಡೆ ಮತ್ತು ನುಡಿಯಲ್ಲಿ ಒಂದು ಕೂದಲಿನಷ್ಟು ವ್ಯತ್ಯಾಸವಾದರೂ ನೀನೆದ್ದಿ ಹೋಗು ಎನ್ನುವ ನೈತಿಕ ಸ್ಥೈರ್ಯವನ್ನು ತೋರುವರು. ಇಂದು ಜಾತಿ ವಿಜೃಂಭಿಸುತ್ತಿದೆ. ಇವನಾರವ, ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ ಎನ್ನುವಂತಾದರೆ ಬದುಕು ಸಹ್ಯವಾಗುತ್ತದೆ. ಬಾಂಧವ್ಯಗಳು ಕೃತಕವಾಗದೆ ಪ್ರೀತಿಯಿಂದ ಕೂಡಿರಬೇಕು. ಏನೇನೋ ಕಾರಣಕ್ಕೆ ಸಮಸ್ಯೆಗಳು ಸೃಷ್ಟಿಯಾಗುವವು. ಅವುಗಳನ್ನು ತಾಳ್ಮೆ, ವಿವೇಕದಿಂದ ಬಗೆಹರಿಸಿಕೊಳ್ಳಬೇಕು. ಬಹಿರ್ಮುಖ ಆಲೋಚನೆಗಿಂತ; ಅಂತರ್ಮುಖ ಆಲೋಚನೆಗಳಿಗೆ ಮುಖ ಮಾಡಬೇಕು. ಮಾನವ ದುರಾಸೆಯಿಂದ ಸರ್ವನಾಶವಾಗುವ ಸಾಧ್ಯತೆಯಿದೆ. ಹಣದಿಂದ ಎಂದಿಗೂ ನೆಮ್ಮದಿ, ಶಾಂತಿ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮೊಳಿಗೆ ಮಾರಯ್ಯನವರು ಹೇಳಿದ ಆನೆ, ಕುದುರೆ, ಬಂಡಿ, ಬಂಡಾರವಿರ್ದಡೇನು… ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜ, ಸಾವಿಂಗೆ ಸಂಗಡವಾರೂ ಇಲ್ಲ’ ಎಂದು ಹೇಳಿದುದು ಬಹು ಮಾರ್ಮಿಕವಾಗಿದೆ. ಸಂಪತ್ತಿನ ಹಿಂದೆ ಓಡುವುದನ್ನು ನಿಲ್ಲಿಸಬೇಕು. ಸತ್ಯಶುದ್ಧ ಕಾಯಕದ ಮೂಲಕ ಬಂದುದು ಮಾತ್ರ ಸಂಪಾದನೆ. ಅದನ್ನು ತಾನೊಬ್ಬನೇ ಬಳಸಿಕೊಳ್ಳದೆ ದಾಸೋಹ ಮಾಡಬೇಕು. ಇಂಥ ವಿಷಯಗಳು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ. ಈ ಹಿನ್ನೆಲೆಯಲ್ಲಿಯೇ ಮತ್ತೆ ಕಲ್ಯಾಣದ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ಸಂವಾದ ಏರ್ಪಡಿಸಿರುವುದು ಎಂದರು.
ಡಾ ಪ್ರಕಾಶ್ ಕೂಡಿಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿಕೊಡುತ್ತ ಕಾಯಕಕ್ಕೆ ದೈವತ್ವದ ಮಹತ್ವ ನೀಡಿದರು. ಮತ್ತೆ ಕಲ್ಯಾಣವಲ್ಲ; ಮತ್ತೆ, ಮತ್ತೆ ಕಲ್ಯಾಣವಾಗಬೇಕು ಎಂದರು.
ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು
ಜಾತಿ-ಮತಗಳು ದೂರವಾಗುವುದು ಕನಸಾ?
12 ನೆಯ ಶತಮಾನದಲ್ಲಿಯೇ ಲಿಂಗ ಸಮಾನತೆಯ ಕೊರತೆಯನ್ನು ನೀಗುವ ಪ್ರಯತ್ನ ನಡೆದಿತ್ತು. ಆದರೆ ಇದುವರೆಗೂ ಅದು ಸಾಧ್ಯವಿಲ್ಲ ಯಾಕೆ?
ಹೆಂಡತಿ ವಿದೇಶಕ್ಕೆ ಹೋಗುವಾಗ ಗಂಡನ ಅನುಮತಿ ಪತ್ರಬೇಕು. ಸರಿನಾ?
ರಾಜಕೀಯವೆಂಬ ಅರಾಜಕತೆ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಕಲ್ಯಾಣ ಯಶಸ್ವಿಯಾಗುತ್ತಾ?
ಬಸವಣ್ಣ ಮತ್ತು ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಮೀಸಲಿಡುವುದು ಎಷ್ಟು ಸರಿ?
ಲಿಂಗಾಯತ ಮತ್ತು ಹಿಂದೂ ಧರ್ಮಎರಡೂ ಒಂದೇ ಅಥವ ಬೇರೆ ಬೇರೆಯೇ?
ಮೀಸಲಾತಿ ಯಾಕೆ ಬೇಕು?
ಜಪ-ತಪಗಳು ಶಿವನನ್ನು ಒಲಿಸಿಕೊಳ್ಳುವ ದಾರಿ ಎನ್ನುತ್ತಾರೆ. ಇದು ನಿಜವೇ?
ವೇದ, ಪುರಾಣ, ಶಾಸ್ತ್ರಗಳನ್ನು ಸಂಪೂರ್ಣವಾಗಿ ಯಾಕೆ ವಚನಕಾರರು ತಿರಸ್ಕರಿಸಿದ್ದಾರೆ. ಸತ್ಯಕ್ಕೆ ಹೆಚ್ಚು ಮಹತ್ವವನ್ನು ಶರಣರು ನೀಡಿದ್ದರು.ಆದರೆ ಇಂದಿನ ಜನರು ಸುಳ್ಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ ಯಾಕೆ?
ಧರ್ಮಾತೀತವಾದ ಮಠಗಳು ಯಾವುದೋ ಒಂದು ಧರ್ಮದ ಪರವಾಗಿ ಯಾಕೆ ಕೆಲಸ ಮಾಡುತ್ತಿವೆ?
ಧರ್ಮ ಯಾಕೆ ಬೇಕು? ಬೇಕಾದರೆ ಎಂಥ ಧರ್ಮ ಬೇಕು?
ಆಚಾರ-ವಿಚಾರಗಳಿಗೆ ಧರ್ಮದ ಹೆಸರನ್ನು ಇಟ್ಟುಕೊಳ್ಳುವುದು ಎಷ್ಟು ಸರಿ?
ಶಾಲೆಯಲ್ಲಿ ಎಲ್ಲರೂ ಸಮಾನರು ಅಂತಾರೆ ವಿದ್ಯಾರ್ಥಿ ವೇತನ ನೀಡುವಾಗ ಯಾಕೆ ತಾರತಮ್ಯ ಮಾಡುತ್ತಾರೆ?
12 ಮತ್ತು 21 ಶತಮಾನದ ನಡುವೆ ವಚನ ಚಳುವಳಿ ಯಾಕೆ ನಿರಂತರತೆಯನ್ನು ಕಾಯ್ದುಕೊಳ್ಳಲಿಲ್ಲ?
ಬಸವಣ್ಣನವರ ಅನುಭವ ಮಂಟಪ ಪ್ರಜಾಪ್ರಭುತ್ವದ ಮೂಲ ಎಂದು ಹೇಳುತ್ತಾರೆ. ಹೇಗೆ?
ಬಸವಣ್ಣನವರ ಪ್ರಕಾರ ದಾಸೋಹದ ಅರ್ಥವೇನು?
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆ ಹಾಡಿದರು. ಕೊಡಗಿನ ಅಕ್ಕನಬಳಗದ ಸದಸ್ಯರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಟಿ ಪಿ ರಮೇಶ್ ಸ್ವಾಗತಿಸಿದರು. ಮುನೀರ್ ಅಹಮದ್ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯ ಮೇಲೆ ಕೆ ಎಸ್ ದೇವಯ್ಯ, ಶಾಸಕ ಎಂ ಪಿ ಅಪ್ಪಚ್ಚು ರಂಜನ್, ಶ್ರೀ ಸದಾಶಿವ ಸ್ವಾಮಿಗಳು, ಮಹಮ್ಮದ್ ರಫಿ, ಮೌಲಾನ ಅಬ್ದುಲ್ ಹಕೀಮ್, ಶ್ರೀ ಮಹಂತ ಸ್ವಾಮಿಗಳು, ರೆವೆರೆಂಡ್ ಫಾದರ್, ಜೋಸೆಫ್, ಪ್ರಕಾಶ್ ಕೂಡಿಗೆ, ಶಿವಪ್ಪ, ಯಾಕೂಬ್, ಬೇಬಿ ಮ್ಯಾಥ್ಯೂವ್, ಜಿ ಎನ್ ನಾಗರಾಜ್, ಕೆ ಷರೀಪಾ ಮುಂತಾದವರು ಉಪಸ್ಥಿತರಿದ್ದರು.
ಬೆಳಗ್ಗೆ 10.30 ರಿಂದ ಸಮಾರಸ್ಯ ನಡಿಗೆಯು ಮಹದೇವಪೇಟೆಯ ಶ್ರೀ ಬಸವೇಶ್ವರ ದೇವಾಲಯದ ಬಳಿಯಿಂದ ಆರಂಭವಾಗಿ ಕಾವೇರಿ ಹಾಲ್ ಬಂದು ತಲುಪಿತು. ಸ್ಥಬ್ಧಚಿತ್ರಗೊಂದಿಗೆ ವಿವಿಧ ಧರ್ಮದ ಗುರುಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
- ಹೆಚ್ ಎಸ್ ದ್ಯಾಮೇಶ್



ಆಗಸ್ಟ್ 06 ಮಂಗಳವಾರ, ಮೈಸೂರು


ಮೈಸೂರಿನಲ್ಲಿ 6ನೇ ದಿನದ ಮತ್ತೆ ಕಲ್ಯಾಣ ಸಂವಾದ - ಅನನ್ಯ ಟಿವಿ ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ



ಮತ್ತೆ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ನಾಗರೀಕತೆ ಬಾಹ್ಯ ಬದುಕನ್ನು ಎತ್ತರಿಸಿದರೆ, ಸಂಸ್ಕೃತಿ ಆಂತರಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇಂದು ಇವೆರಡರ ಸಮನ್ವಯವಾಗಬೇಕು. ನಾಗರೀಕತೆಯ ನಾಗಾಲೋಟದಿಂದ ಸ್ವರ್ಗ ಮುಟ್ಟಲು ಸಾಧ್ಯವಿಲ್ಲ. ನಾನು ಪರಿಶುದ್ಧನಾಗದೆ ಲೋಕಕಲ್ಯಾಣವೆಂಬುದು ಒಂದು ಭ್ರಮೆ. ಬಸವಣ್ಣನವರದು ತಾಯ್ತನದ ಹೃದಯ. ಜಗದ ತಪ್ಪನ್ನು ತಮ್ಮ ಮೇಲೆ ಹಾಕಿಕೊಂಡು ಇತರರಿಗೆ ಮನವರಿಕೆ ಮಾಡಿಕೊಡುವರು. ಆತ್ಮಕಲ್ಯಾಣದ ಅವಲೋಕನ ಪ್ರತಿಯೊಬ್ಬರಿಗೂ ಬಂದರೆ ಲೋಕಕಲ್ಯಾಣ ತನ್ನಿಂದ ತಾನೇ ಆಗುವುದು. ಶರಣರ ಆಲೋಚನಾ ಮಟ್ಟಕ್ಕೂ ನಮ್ಮ ಇಂದಿನ ಆಲೋಚನಾ ಮಟ್ಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಶರಣರ ಕಾಯಕ ಶ್ರದ್ಧೆ ಸಮಾಜದಲ್ಲಿ ಮೂಡಿ ಬಂದ್ರೆ ಮತ್ತೆ ಕಲ್ಯಾಣ ಸಾರ್ಥಕವಾಗುವುದು. ಸಂಪತ್ತಿನಿಂದ ಸುಖ ಸಾಧ್ಯವಿಲ್ಲ. ಕೋಟಿ ಕೋಟಿ ಸಂಪಾದಿಸುವವರೂ ಆತ್ಮಹತ್ಯೆ ಮಾಡಿಕೊಳ್ಳುವವರು ಯಾಕೆ ಎಂಬುದನ್ನು ಮನಗಾಣಬೇಕು. ನಾಗರಿಕತೆ ಬಂದು ಸಂಸ್ಕೃತಿ ಹೋಗಿದೆ. ಸಂಸ್ಕೃತಿ ಅಂತರಂಗದ ಶಕ್ತಿಯನ್ನು ಹೆಚ್ಚಿಸುವುದು. ದಯೆ. ಕಾಯಕ, ಸತ್ಯ, ಪ್ರಾಮಾಣಿಕತೆ ಮುಂತಾದ ಮೌಲ್ಯಗಳೇ ಸಂಸ್ಕೃತಿ. ಶರಣರ ಮೌಲ್ಯಗಳ ಕುರಿತು ಹೇಳಲಿಲ್ಲ; ನಡೆದರು. ಆತ್ಮಾವಲೋಕನವೇ ಲೋಕಕಲ್ಯಾಣಕ್ಕೆ ನಾಂದಿ. ಸಕಾರಾತ್ಮಕ ಚಿಂತನೆ ನಮ್ಮಲ್ಲಿ ಬರಬೇಕು. ತಾನು ದುಡಿದು ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕೆಲವರು ಊಟ ಮಾಡುವಾಗ ಬೆವರು ಸುರಿಸಿದರೆ ಇನ್ನು ಕೆಲವರು ಕೆಲಸ ಮಾಡುವಾಗ ಬೆವರು ಸುರಿಸುವರು. ಕೆಲಸ ಮಾಡುವಾಗ ಬೆವರು ಸುರಿಸುವವರು ನಾವಾಗಬೇಕು. ಚಪ್ಪಲಿ ಹೊಲಿಯುವ ಕೆಲಸ ಶ್ರೇಷ್ಠವಲ್ಲ; ಅಧ್ಯಾಪಕ ವೃತ್ತಿ ಕೀಳಲ್ಲ. ಇಂದು ಆತ್ಮ ಕಲ್ಯಾಣವನ್ನು ಮರೆತು ಲೋಕಕಲ್ಯಾಣದ ಕಡೆ ಯೋಚಿಸುವುದೇ ಅನಾಹುತಗಳಿಗೆ ಕಾರಣ. ಶರಣರು ನಡೆದಂತೆ ನುಡಿದರು, ನುಡಿದಂತೆ ನಡೆದರು. ಹೀಗಾಗಿಯೇ ಶರಣರಿಗೆ ಆತ್ಮಬಲ ಬಂದುದು. ಮಕ್ಕಳಿಗೆ ವಚನಗಳನ್ನು ಹೇಳುವ, ಅಳವಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಬೇಕು. ಶರಣರ ಛಲ ನಮ್ಮದಾದರೆ ನಾಡು ಸುಂದರವಾಗುವಲ್ಲಿ ಅನುಮಾನವಿಲ್ಲ. ಶರಣರು ಆಡಿದ ಪ್ರತಿಯೊಂದು ಮಾತೂ ಮಂತ್ರ. ಅಂತರಂಗದ ಸಾಕ್ಷಿಪ್ರಜ್ಞೆಯನ್ನು ಸಾಯಿಸಿಕೊಂಡವರಿಗೆ ವಚನಧರ್ಮದ ಅವಶ್ಯಕತೆಯಿದೆ. ಮತ್ತೆ ಕಲ್ಯಾಣ ಕೇವಲ ಶಬ್ದವಲ್ಲ; ಆಚರಣೆ. ಸತ್ಕಾರ್ಯಗಳನ್ನು ಮಾಡುವಾಗ ವಿಜ್ಞಗಳು ಹೆಚ್ಚು. ಅಂಥ ವಿಜ್ಞಗಳನ್ನು ನಾವು ಸ್ವೀಕರಿಸಿಯೇ ಮುಂದುವರಿಯವ ದೃಢ ಸಂಕಲ್ಪ ಮಾಡಿದ್ದೇವೆ ಎಂದರು.
21 ನೆಯ ಶತಮಾನಕ್ಕೆ ಬಸವ ತತ್ವ ಕುರಿತಂತೆ ಮಾತನಾಡಿದ ಧಾರವಾಡದ ಚಿಂತಕ ಡಾ. ರಂಜಾನ್ ದರ್ಗಾ ಮಾತನಾಡಿ ಬಸವ ತತ್ವ ಕುರಿಂತಂತೆ ನಮ್ಮ ಯುವಕರಿಗೆ ಬಸವ ಪರಂಪರೆಯ ಇತಿಹಾಸವನ್ನು ಸರಿಯಾಗಿ ಹೇಳಿಲ್ಲ. ಜಗತ್ತಿನ ಹೊಸ ಧರ್ಮಗಳಲ್ಲಿ ಒಂದು. ಇದು ಪರ್ಯಾಯ ಸಂಸ್ಕೃತಿ, ದರ್ಶವನ್ನು ನೀಡಿದೆ. ಜಾತಿಪ್ರಜ್ಞೆಯು ಬಸವ ಪ್ರಜ್ಞೆಗೆ ವಿರುದ್ಧವಾದುದು. ಮಾನವತೆಯ ಏಕತೆಯ ಬಹುದೊಡ್ಡ ಪರಂಪರೆಯನ್ನು ಬಸವಣ್ಣನವರು ಹೇಳಿದ್ದಾರೆ. ಮನುಷ್ಯ ಜಾತಿ ಒಂದೇ ಸತ್ಯ. ಲಿಂಗೀ ಬ್ರಾಹ್ಮಣರಾಗುವ ಅಪಾಯವನ್ನು ತಪ್ಪಿಸಬೇಕಿದೆ. ಮಕ್ಕಳಿಗೆ ಬಸವ ಚಿಂತನೆಯನ್ನು ತಿಳಿಸದೆ ದೊಡ್ಡ ತಪ್ಪು ಮಾಡಿದ್ದೇವೆ. ವೈಚಾರಿಕತೆಯ ಹಿನ್ನೆಲೆಯಲ್ಲಿ ಐರೋಪ್ಯ ಖಂಡ ಕತ್ತಲೆಯಲ್ಲಿತ್ತು. ನಮ್ಮ ಕಸುಗುಡಿಸುವ ಸತ್ಯಕ್ಕ 12 ನೆಯ ಶತಮಾನದಲ್ಲಿ ವಚನ ಬರೆದ ಸಂದರ್ಭದಲ್ಲಿ ಇಂಗ್ಲಿಷ್ ಸಾಹಿತ್ಯದ ಒಂದೇ ಒಂದು ಸಾಲೂ ರಚಿತವಾಗಿರಲಿಲ್ಲ. ದುಡಿಯುವ ಜನರ, ಮಹಿಳೆಯರ, ಹಿಂದುಳಿದವರ ಸಾಹಿತ್ಯ ವಚನ ಸಾಹಿತ್ಯ. ಒಂದು ವಚನ ಸಾಮಾಜಿಕ, ಸಾಹಿತ್ಯಕ, ಆರ್ಥಿಕ ಮುಂತಾದ ಬಹುಮುಖವನ್ನು ಆಯಾಮವನ್ನು ಒಂದಿದೆ. ಒಂದು ವಚನ 21 ನೆಯ ಶತಮಾನದ ಸಮಸ್ಯೆಗಳನ್ನು ಹೊಡೆದೋಡಿಸಬಲ್ಲುದು. ಬಸವವಣ್ಣನವರ ಚಿಂತನೆಯ ಕ್ರಮ ಅದ್ಭುತ. ಪ್ರಕೃತಿ ಬಸವಣ್ಣನವರಂಥ ಇನ್ನೊಂದು ಕೂಸನ್ನು ಹಡೆದಿಲ್ಲ. ದುಡಿಯುವ ಜನರ ಮೊದಲ ನಾಯಕ, ಸಂಘಟಕ ಬಸವಣ್ಣ. `ಲಿಂಗವ ಪೂಜಿಸಿ ಫಲವೇನಯ್ಯ? ಸಮರತಿ, ಸಮಕಳೆ, ಸಮಸುಖವ ಅರಿಯದನ್ನಕ್ಕ’ ಎನ್ನುವ ಮೂಲಕ ಪೂಜೆಯಲ್ಲಿ ಫಲವನ್ನು ಕಂಡುಕೊಂಡಿದ್ದಾರೆ. 21 ನೆಯ ಮಹತ್ವದ ಬೀಜ 12 ನೆಯ ಶತಮಾನದ ವಚನ ಚಳುವಳಿಯಲ್ಲಿದೆ. ಏಕದೇವೋಪಾಸನೆಯನ್ನು ಮೊದಲು ಹೇಳಿದವರು ಬಸವಣ್ಣ. ಕಲ್ಯಾಣದಲ್ಲಿ ಕೊಡುವವರುಂಟು; ಬೇಡುವವರಿರಲಿಲ್ಲ. ಮೊದಲ ಆರ್ಥಶಾಸ್ತ್ರಜ್ಞ ಬಸವಣ್ಣ. ಅನುಭಾವ ಅನುಭವವಿಲ್ಲದೆ ಬರುವುದಿಲ್ಲ. ಬಸವ ಧರ್ಮ ಜನರ ಮಧ್ಯೆ ಹುಟ್ಟಿದ್ದು. ಇದು ಸಮೂಹ ನಾಯಕತ್ವದ ಧರ್ಮ. ಬಸವಣ್ಣನ ಪಾರ್ಲಿಮೆಂಟಿನಲ್ಲಿ 770 ಸದಸ್ಯರಿದ್ದರು. ವಚನ ಸಾಹಿತ್ಯ ವಿಶ್ವ ಸಾಹಿತ್ಯ. ಅದು ಆತ್ಮಗೌರವವನ್ನು, ಮಾನವ ಘನತೆಯನ್ನು ಎತ್ತಿಹಿಡಿಯುವ ಸಾಹಿತ್ಯ. ಜಗತ್ತಿನ ಖರ್ಚಿಲ್ಲದ ದೇವರು ಇಷ್ಟಲಿಂಗ. ಸ್ವರ್ಗ-ನರಕಗಳಿಲ್ಲದ ಧರ್ಮ. ಇಡೀ ಜಗತ್ತು ಒಂದು ಜೀವಜಾಲದಲ್ಲಿದೆ ಎಂದವರು. ಬಸವಣ್ಣನ ಧರ್ಮದಲ್ಲಿ ಮನುಷ್ಯನಿಗೆ ದೇವರಗಿಂತ ದೊಡ್ಡಸ್ಥಾನವಿದೆ ಎಂದರು.
`ಆತ್ಮಕಲ್ಯಾಣ-ಲೋಕಕಲ್ಯಾಣ’ ವಿಷಯ ಕುರಿತಂತೆ ಮಾತನಾಡಿದ ಬೆಂಗಳೂರಿನ ಚಿಂತಕಿ ಡಾ. ಬಿ ಟಿ ಲಲಿತಾ ನಾಯಕ್ ಮಾತನಾಡಿ ಆತ್ಮ ಕಲ್ಯಾಣವಿಲ್ಲದೆ ಲೋಕ ಕಲ್ಯಾಣ ಸಾಧ್ಯವಿಲ್ಲ. ಆತ್ಮವಿಲ್ಲದ ಜೀವಿಯಲ್ಲ. ಜೀವಪರವಾದ ನಿಲುವನ್ನು ತಳೆಯಲು ಮತ್ತು ಆ ಸಂದೇಶವನ್ನು ಸಾರಲು 12 ನೆಯ ಶತಮಾನದ ಶರಣರು ಮಾಡಿದ ಪ್ರಯತ್ನ ಇಂದಿಗೂ ಆಶ್ಚರ್ಯವನ್ನುಂಟುಮಾಡುತ್ತಿದೆ. ಜ್ಞಾನದ ಬೆಳಕು ನೀಡುವ ವ್ಯವಸ್ಥೆ ಶರಣರಲ್ಲಿತ್ತು. ಕೇವಲ ಮೂರ್ನಾಲ್ಕು ಸಾಲುಗಳಲ್ಲಿರುವ ವಚನಗಳು ಜಗತ್ತನ್ನೇ ಬದಲಿಸಬಲ್ಲವು. ಇಂಥ ವಚನಗಳು ಬಂದು ಶತಶತಮಾನಗಳಾದರೂ ಅವನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದೇವೆ. ಇಂದು ನಾವು ಅಕ್ಷರ ವಿದ್ಯೆಯನ್ನು ಮಾತ್ರ ಕಲಿತಿದ್ದೇವೆ. ನಾವು ನಮ್ಮ ನಡವಳಿಕೆಯನ್ನು ಕ್ರಿಯೆಯಲ್ಲಿ ತರುವಲ್ಲಿ ವಿಫಲರಾಗಿದ್ದೇವೆ. ಪಾತಾಳಕ್ಕೆ ಇಳಿದಿರುವ ನಮ್ಮನ್ನು ಮೇಲೆತ್ತಲು ಹೊರಟಿರುವುದೇ ಮತ್ತೆ ಕಲ್ಯಾಣ. ಭ್ರಷ್ಟಾಚಾರ, ಮೌಢ್ಯ, ಸ್ವಾರ್ಥಕ್ಕೆ ಕಾರಣ ನಮ್ಮಲ್ಲಿ ತತ್ವ ಸಿದ್ಧಾಂತ ವಿಲ್ಲದೇ ಇರುವುದೇ ಆಗಿದೆ. ಇಂದು ಕೇವಲ ಹಣದ ಹಿಂದೆ ಮಾತ್ರ ಬಿದ್ದಿರುವುದೇ ಆಗಿದೆ. ದೇವರು ಮತ್ತು ದೆವ್ವಗಳು ಬಡ ಜನರಿಗೆ ಬಹಳ ಸಹಾಯ ಮಾಡುತ್ತವೆ. ಸತ್ಯ, ದಯೆ, ಪ್ರಾಮಾಣಿಕತೆಯೇ ನಿಜ ದೇವರು. ದೇವಸ್ಥಾನಗಳಿಗೆ ಹೋಗಿ ಲಂಚಕೊಟ್ಟು ಪಾಪದ ಕೆಲಸಗಳಿಗೆ ಅನುಮತಿ ಕೇಳುವುದು ಎಷ್ಟು ಸರಿ. ರಾಜಕಾರಣಿಗಳಿಗೆ ಭವಿಷ್ಯಕಾರುರು ಕಂಡ ಕಂಡ ಕಲ್ಲು, ಮಣ್ಣು, ಮರಗಳಿಗೆ ದೀರ್ಘದಂಡ ಹೊಡೆಯುವಂತೆ ಹೇಳಿದರೂ ಗೆಲ್ಲುವವನು ಒಬ್ಬನೇ ಎನ್ನುವ ಸತ್ಯ ನಮ್ಮ ರಾಜಕಾರಣಿಗಳಿಗೆ ತಿಳಿಯದೇ? ದೇವರು ಮತ್ತು ದೆವ್ವಗಳನ್ನು ಬಳಸಿಕೊಂಡು ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎನ್ನುವ ಅರಿವು ನಮಗೆ ಬರಬೇಕೆಂದರೆ ವಚನಗಳನ್ನು ಓದಬೇಕು. ವಚನಕಾರರು ಬೂಟಾಟಿಕೆ ಬರೆದವರಲ್ಲ. `ಕೈದು ಕೊಡಬಹುದಲ್ಲದೆ ಕಲಿತನವ ಕೊಡಬಹುದೇ ಎನ್ನುವ ವಚನ ಎಷ್ಟು ತೀಕ್ಷ್ಣವಾಗಿದೆ ಅನ್ನುವುದನ್ನು ಅರಿಯಬೇಕು. ಇಂಥ ಜ್ಞಾನ, ತಿಳುವಳಿಕೆ ವಚನಗಳಲ್ಲಿದೆ. ಅವುಗಳನ್ನು ನಮ್ಮ ಮಕ್ಕಳಿಗೆ ಹೇಳುವ ಮೂಲಕ ಆತ್ಮ ಕಲ್ಯಾಣ-ಲೋಕಕಲ್ಯಾಣದ ಕಡೆ ಹೆಜ್ಜೆ ಇಡಬೇಕು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿ ಕೆ ಗೋವಿಂದರಾವ್ ಮಾತನಾಡಿ ಬಸವಣ್ಣನವರ ಕ್ರಾಂತಿ ಯಶಸ್ವಿಯಾಗಬೇಕಾದರೆ ಕಾರ್ಯಕ್ರಮಗಳಲ್ಲಿ ಸ್ವಾಗತ ಮತ್ತು ವಂದನಾರ್ಪಣೆಗಳನ್ನು ಬಿಡಬೇಕು. ನಮ್ಮ ಅಹಂಕಾರಗಳು ಕೆಲವು ಪ್ರಕಟಿತ ಇನ್ನು ಕೆಲವು ಅಪ್ರಕಟಿತವಾಗಿರುತ್ತವೆ. ಈ ಅಹಂಕಾರವನ್ನು ನಿರಸನ ಮಾಡಿಕೊಳ್ಳುವುದೇ ನಮ್ಮ ಬದುಕಿನ ಆಧ್ಯತೆಯಾಗಬೇಕು. ಬಸವಣ್ಣ, ಅಕ್ಕನ ವಿನಯವಂತಿಕೆ ನಮ್ಮಲ್ಲಿ ಅಳವಡಬೇಕು. ವಚನಗಳಲ್ಲಿ ಮೃದುತ್ವ, ನಯ, ವಿನಯ, ಅಂತಃಶಕ್ತಿಯನ್ನು ಗುರುತಿಸುವ ಮನಸ್ಸು ನಮ್ಮದಾಗಬೇಕು. ಬಸವಣ್ಣನ ದೇವರು `ಅಗಮ್ಯ, ಅಗೋಚರ, ಜಗದಗಲ, ಮುಗಿಲಗಲ, ಪಾತಾಳದಿಂದತ್ತತ್ತ...’ ಈ ವಚನ ಓದುವುದೇ ಅದ್ಭುತವಾದ ಅನುಭವ. ಅಮೂರ್ತಕ್ಕೆ ಮೂರ್ತ ಸ್ವರೂಪ ಕೊಡುವ ಯತ್ನ ಬಹಳ ಹಿಂದಿನಿಂದಲೂ ನಡೆದಿದೆ. `ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎನ್ನುವ ಮಾತು ಎಂಥ ಅರ್ಥಗರ್ಭಿತವಾದುದು. ಬಸವಣ್ಣನವರ ದೇವರು ಒಂದು ಮಾರ್ಗವೇ ಹೊರತು ಅಂತಿಮವಲ್ಲ. ಬಸವ ಯುಗ ವಿವೇಕ, ವಿನಯದ ಯುಗ. ಯಾವ ವಚನಗಳಲ್ಲೂ ಅಂತಿಮ ಗುರಿಯನ್ನು ಹೇಳಿಲ್ಲ. ಪ್ರಕೃತಿಗೂ ತೃಪ್ತಿಇಲ್ಲ. ಹೀಗಾಗಿ ಪ್ರತಿಕ್ಷಣವೂ ಪ್ರಕೃತಿ ಹೊಸದನ್ನು ಸೃಷ್ಟಿಸುತ್ತದೆ. ವಚನಗಳನ್ನು ಓದುವುದೇ ನಾವು ಪ್ರಕೃತಿಯ ಹತ್ತಿರಕ್ಕೆ ಹೋಗುವ ಮಾರ್ಗ. ವಚನ ಕಾಲಕ್ಕೆ ಎಂದಿಗೂ ನಾವು ಕೃತಜ್ಞರಾಗಿರಬೇಕು. ಹೃದಯಕ್ಕೆ ಮುಟ್ಟಿ ಅಲ್ಲಿ ಅರಳಲು ಸಾಧ್ಯವಾಗುವುದು ವಚನಗಳಿಂದ ಮಾತ್ರ. 12 ನೆಯ ಶತಮಾನ ಜಗತ್ತಿನಲ್ಲಿಯೇ ಅದ್ಭುತವಾದ ಯುಗ. ಆ ಯುಗವನ್ನು ನಾವು ಮತ್ತೆ ಮತ್ತೆ ಪಾಲಿಸುವುದೇ ಇಂದಿನ ಅತ್ಯಗತ್ಯ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆ ಹಾಡಿದರು. ಶರಣ ಮಹದೇವಪ್ಪ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೊ ಎಸ್ ಜಿ ಶಿವಶಂಕರ ಕರ್ಯಕ್ರಮ ನಿರೂಪಿಸಿದರು. ಸಮಾರಂಭದ ನಂತರ ಸಾಮರಸ್ಯ ಭೋಜನ ಏರ್ಪಡಿಸಲಾಗಿತ್ತು.
ಸಾಮರಸ್ಯ ನಡಿಗೆ ಮಳೆಯ ನಡುವೆಯೂ ಗನ್ ಹೌಸ್ ಬಳಿ ಇರುವ ಬಸವ ಪುತ್ತಳಿಯಿಂದ ಆರಂಭವಾಗಿ ಅಂಬೇಡ್ಕರ್ ಪ್ರತಿ ಬಳಿ ಮುಕ್ತಾಯಗೊಂಡಿತು. ಬಸವಾದಿ ಶಿವಶರಣರ ಸ್ಥಬ್ಧ ಚಿತ್ರದೊಂದಿಗೆ ವಿವಿಧ ಧಾರ್ಮಿಕ ನೇತಾರರು, ಜನಪ್ರತಿನಿಧಿಗಳು, ಕಲಾ ತಂಡಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳೊಂದಿಗೆ ಸಂವಾದ
ಮೈಸೂರು, ಆಗಸ್ಟ್ 06; ಮತ್ತೆ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಕಲಾಮಂದಿರದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ನಾವು ಮಾತನಾಡಿದ ಮಾತುಗಳನ್ನು ಮಾಧ್ಯಮದವರು ಯಥಾವತ್ತಾಗಿ ಪ್ರಕಟಿಸದೇ ಇದ್ದಾಗ ಅನೇಕರಲ್ಲಿ ಸಂಶಯಗಳು ಹುಟ್ಟುವುದು ಸಹಜ. ಮೀಸಲಾತಿ ಕುರಿತಂತೆ ನಮ್ಮ ನಿಲುವು; ಎಲ್ಲಿಯವರೆಗೆ ಈ ಸಮಾಜದಲ್ಲಿ ಅಸಮಾನತೆಗಳು ಇವೆಯೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎನ್ನುವುದು. `ಮತ್ತೆ ಕಲ್ಯಾಣ’ದ ಉದ್ದೇಶ 12ನೆಯ ಶತಮಾನದಲ್ಲಿ ವಚನಕಾರರು ಬಿತ್ತಿದ ಬೀಜವನ್ನು ಮತ್ತೆ ಬೆಳೆಯುವುದಾಗಿದೆ. ಕಟ್ಟಡಗಳನ್ನು ಕಟ್ಟುವುದು ಸುಲಭ. ಮನಸ್ಸುಗಳನ್ನು ಕಟ್ಟುವುದು ಕಷ್ಟ. ಇಂದು ಬೆಂಕಿ ಇಡುವವವರೇ ಹೆಚ್ಚು; ಬೆಳಕು ನೀಡುವವರು ಬಹಳ ಕಡಿಮೆ. ಒಳ್ಳೆಯ ಕಾರ್ಯ ಮಾಡುವವರನ್ನು ಪ್ರೋತ್ಸಾಹಿಸಬೇಕಾಗಿದೆ. ಮೀಸಲಾತಿಯ ಬಗೆಗಿನ ನಮ್ಮ ನಿಲುವನ್ನು ಕೇಳುವವರು ನಮ್ಮ ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧ ಹರಿಜನವರು ಎನ್ನುವುದನ್ನು ತಿಳಿದಿರಿಲಿ. ನಮ್ಮ ಮಠ ಯಾವುದೇ ಜಾತಿಗೆ ಸೀಮಿತವಲ್ಲ. ನಮ್ಮ ಮಠದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಸಹಪಂಕ್ತಿ ಊಟದ ವ್ಯವಸ್ಥೆ ಇತ್ತು. ಆಗ ಸಮಾಜದವರು ಪ್ರಶ್ನಿಸಿದಾಗ ಶಿವಕುಮಾರ ಶ್ರೀಗಳು ಹೇಳಿದ್ದು; ನಾವು ಪೀಠವನ್ನು ಬೇಕಾದರೂ ತ್ಯಜಿಸುವೆವು, ಆದರೆ ನಮ್ಮ ಆದರ್ಶಗಳನ್ನಲ್ಲ ಎಂದು. ಮಕ್ಕಳು ಈ ದೇಶವನ್ನು ಕಟ್ಟುವಂಥವರು. ಮಕ್ಕಳು ಖಾಲಿ ಚೀಲವಿದ್ದಂತೆ. ಖಾಲಿ ಚೀಲದಲ್ಲಿ ಏನು ತುಂಬಬೇಕು ಎನ್ನುವ ಅರಿವು ತುಂಬುವ ವ್ಯಕ್ತಿಗೆ ಇರಬೇಕು. ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ, ನೈತಿಕ, ಪಾರಮಾರ್ಥಿಕ ಶಿಕ್ಷಣನೀಡಬೇಕು. ಅರಿವು ಬೇರೆ ಬುದ್ಧಿ ಬೇರೆ. ಅರಿವನ್ನು ಹೆಚ್ಚಿಸುವ ಶಿಕ್ಷಣ ಬೇಕು. ಎಲೆಕ್ಟ್ರಾನಿಕ್ ಮಾಧ್ಯಮಗಳು ಜನರನ್ನು ದಿಕ್ಕುತಪ್ಪಿಸುತ್ತವೆ. ವಿದ್ಯರ್ಥಿಗಳು ವಿಚಾರವಂತಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ನಡೆ-ನುಡಿಯಲ್ಲಿ ಸಾಮ್ಯತೆಯಿರಬೇಕು. ಕಾಯಕ ಶ್ರದ್ಧೆ ಅತೀ ಮುಖ್ಯ. ಕಾಯಕ ಅಂದ್ರೆ ಸತ್ಯ ಶುದ್ಧವಾದ ಕೆಲಸ. ತನ್ನ ಅನ್ನವನ್ನು ಇನ್ನೊಂದು ಜೀವಿಗೆ ತೊಂದರೆಯಾಗದಂತೆ ಹೇಗೆ ಪಡೆದುಕೊಳ್ಳಬೇಕು ಎನ್ನುವ ಅರಿವು ಇರಬೇಕು.
ಸಂವಾದಕರಾದ ಹೆಚ್ ಜನಾರ್ಧನ್ ಮಾತನಾಡಿ 800 ವರ್ಷಗಳ ಹಿಂದೆ ಬರೆದ ವಚನಗಳು ನಮಗೆ ಎಲ್ಲಾ ರೀತಿಯ ಬದುಕಿಗೆ ಅನಿವಾರ್ಯವಾಗಿದೆ. ಇಂದಿನ ಸಮಾಜ ಬಹುತೇಕ ಭ್ರಮೆ ಮತ್ತು ಸುಳ್ಳುಗಳಲ್ಲಿಯೇ ಜೀವಿಸುತ್ತಿದೆ. ಸುಳ್ಳು ಹೇಳಿ ನಿರ್ಮಲವಾಗಿ, ನೆಮ್ಮದಿಯಾಗಿ ಬಹಳ ದಿನ ಬದುಕುವುದಕ್ಕೆ ಆಗುವುದಿಲ್ಲ. ಅಜ್ಞಾನವೆಂಬ ತೊಟ್ಟಿಲು, ಜ್ಞಾನವೆಂಬ ಶಿಶುವನ್ನು ಮಲಗಿಸಿ ನೇಣು ಎನ್ನುವ ಹಗ್ಗಕಟ್ಟಿ ತೂಗ್ತಾ ಇದ್ದಾಳೆ ಭ್ರಮೆಯೆನ್ನುವ ತಾಯಿ ಎಂದು ಅಲ್ಲಮಪ್ರಭುಗಳು ಹೇಳುವರು. ಮಾನವನ ಆರೋಗ್ಯಕರ ಬದುಕಿಗೆ ವಚನಸಾಹಿತ್ಯ ಪೂರಕವಾಗಿ ನಿಲ್ಲುವುದು. ಹಾಗಾಗಿಯೇ ನಾವು ಇಂದು ವಚನಗಳತ್ತ ಮುಖ ಮಾಡಬೇಕಾಗಿದೆ ಎಂದರು.
ಸಂವಾದಕ ಪ್ರೊ ಮೊರಬದ ಮಲ್ಲಿಕಾರ್ಜುನ ಮಾತನಾಡಿ ಆರಂಭದಲ್ಲಿ ದೊಡ್ಡ ಸಮುದ್ರ ಸಣ್ಣ ಸಣ್ಣ ಝರಿಗಳಾಗಿಯೇ ಹರಿಯುತ್ತವೆ. ಹಾಗೆಯೇ ಈ ಮತ್ತೆ ಕಲ್ಯಾಣ ಮುಂದೊಂದು ದಿನ ವಿಶಾಲ ಹರವನ್ನು ಹೊಂದುವುದರಲ್ಲಿ ಯಾವ ಅನುಮಾನವೂ ಇಲ್ಲ. ಮಕ್ಕಳಲ್ಲಿ ವಚನಗಳು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿ ನಿಲ್ಲವವು. ಪರಸ್ಪರ ಸಂವಾದ, ಪ್ರಶ್ನೋತ್ತರ, ವಿವೇಕದ ಮೂಲಕ ವಿಚಾರಗಳನ್ನು ಹಂಚಿಕೊಳ್ಳಬೇಕು. ಶರಣರು ದೇವರಿಗೇ ಪ್ರಶ್ನೆ ಮಾಡುವಷ್ಟು ವಿವೇಕವನ್ನು ರೂಢಿಸಿಕೊಂಡಿದ್ದರು. ಅವರ ವಿವೇಕ ಇಂದು ನಮ್ಮದಾಗಬೇಕು.
ಸಂವಾದದಲ್ಲಿ ವಿದ್ಯಾರ್ಥಿಗಳಿಂದ ಕೇಳಿಬಂದ ಪ್ರಶ್ನೆಗಳು
• ತಂದೆ ಉನ್ನತ ಹುದ್ದೆಯಲ್ಲಿದ್ದು ಅವರ ಮಕ್ಕಳು ಕಡಿಮೆ ಅಂಕಗಳಿಸಿದರೂ ಅವರಿಗೆ ಮೀಸಲಾತಿಯ ಆಧಾರದ ಮೇಲೆ ಹುದ್ದೆಯನ್ನು ಕೊಡಿಸುವುದು ಸರಿಯೇ?
• ಮತ್ತೆ ಕಲ್ಯಾಣ ಕಾರ್ಯಕ್ರಮದ ಉದ್ದೇಶವೇನು? ಈ ಕಾರ್ಯಕ್ರಮ ಮುಗಿದ ಮೇಲೆ ಮುಂದಿನ ಕಾರ್ಯತಂತ್ರವೇನು?
• ಜಾತಿ ಆಧಾರದ ಹಲೆ ಶಾಲಾ-ಕಾಲೇಜುಗಳಲ್ಲಿ ಮಕ್ಕಳನ್ನು ದಾಖಲಾತಿ ಮಾಡಿಸಿಕೊಳ್ಳುತ್ತಾರೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
• ವಚನಗಳನ್ನು ಹೇಳುವುದರ ಮೂಲಕ ಜನಗಳನ್ನು ಹೇಗೆ ಬದಲಾವಣೆ ಮಾಡುತ್ತೀರಿ?
• ಮೇಲ್ಜಾತಿಯವರು ಕೆಳಜಾತಿಯವರ ಮಧ್ಯೆ ಜಗಳವಾದಾಗ ಮೇಲ್ಜಾತಿಯವರದೇ ತಪ್ಪಿದ್ದರೂ ಕೆಳಜಾತಿಯವರನ್ನು ಕಾನೂನಾತ್ಮಕವಾಗಿ ಶಿಕ್ಷಿಸುತ್ತಾರೆ. ಇದು ಸರಿಯೇ?
• ಕರ್ನಾಟಕಲ್ಲಿ ಅನೇಕ ಮಠಗಳು ಸ್ಥಾಪನೆಯಾಗಿವೆ. ಆ ಎಲ್ಲಾ ಮಠಗಳು ಬಸವಣ್ಣನವರ ತತ್ವಗಳನ್ನು ಅನುಸರಿಸುತ್ತಿವೆಯೇ?
• ಮತ್ತೆ ಕಲ್ಯಾಣ ಕಾರ್ಯಕ್ರಮದ ಮೂಲಕ ಜಾತಿಯನ್ನು ಹೇಗೆ ನಿವಾರಣೆ ಮಾಡುತ್ತೀರಿ?
• ಜಾತಿಮುಕ್ತ ಸಮಾಜವನ್ನು ಕಟ್ಟಲಿಕ್ಕೆ ವಿದ್ಯಾರ್ಥಿಗಳು ಏನು ಮಾಡಬೇಕು?
• 12ನೆಯ ಶತಮಾನದಲ್ಲಿ ಅಲ್ಲಮಪ್ರಭುವಿನ ಶೂನ್ಯಪೀಠದ ಬಗ್ಗೆ ಹೇಳುವಿರಾ?
- ಹೆಚ್ ಎಸ್ ದ್ಯಾಮೇಶ್



ಆಗಸ್ಟ್ 08 ಗುರುವಾರ, ಮಂಡ್ಯ


ಮತ್ತೆ ಕಲ್ಯಾಣದ ಭಾಗವಾಗಿ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಪ್ರಾಕೃತಿಕ ವಿಕೋಪದಿಂದ ಮನುಕುಲ ತಲ್ಲಣಿಸಿದೆ. ಒಂದು ಕಡೆ ಅತಿವೃಷ್ಟಿ, ಇನ್ನೊಂದೆಡೆ ಅನಾವೃಷ್ಟಿ. ಇದಕ್ಕೆ ಮೂಲ ಕಾರಣ ಮನುಷ್ಯ. ತನ್ನ ಆಸೆಗಳನ್ನು ಮಿತಿಯಲ್ಲಿಟ್ಟುಕೊಂಡಿದ್ದರೆ ಇಂಥ ಪ್ರಾಕೃತಿಕ ವಿಕೋಪಗಳಿಂದ ಸ್ವಲ್ಪಮಟ್ಟಿಗೆ ಪಾರಾಗಬಹುದಿತ್ತು. ಸಾರ್ವಜನಿಕರು ಸಂತ್ರಸ್ತರಿಗೆ ಸಾಧ್ಯವಾದ ನೆರವು; ಬಟ್ಟೆ, ಆಹಾರ, ಹಣವನ್ನು ಉದಾರವಾಗಿ ನೀಡಬೇಕು. ಇಂದು ಹೆಚ್ಚು ಜನರನ್ನು ಪೀಡಿಸುತ್ತಿರುವುದು ಜಾತಿ. ಶರಣರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಜಾತಿ ಅಳಿದು ಹೋಗುವುದು. ಕಲ್ಯಾಣದಲ್ಲಿ ಇದ್ದ 770 ಅಮರ ಗಣಂಗಳು ವಿವಿಧ ಜಾತಿಯವರು. ಅವರೆಲ್ಲರೂ ಜಾತಿಯನ್ನು ಮೀರಿ ಅನುಭವ ಮಂಟಪ ಎನ್ನುವ ಒಂದು ವೇದಿಕೆಯಡಿ ಬಂದರು. ವೃತ್ತಿ ಬೇರೆ ಕಾಯಕ ಬೇರೆ. ನಿತ್ಯ ಮಾಡುವ ಕೆಲಸ-ಕಾರ್ಯಗಳು ವೃತ್ತಿ. ಕಾಯಕ ವ್ಯಕ್ತಿಯ ಹಿತವನ್ನು, ಸಮಾಜದ ಹಿತವನ್ನು ಗಮನಿಸುವುದು. ಕಾಯಕದಲ್ಲಿ ಮೋಸ, ವಂಚನೆಗೆ ಅವಕಾಶವಿಲ್ಲ. ವೇಶ್ಯಾ ವೃತ್ತಿ ಒಂದು ಕಾಯಕವಾಗಲಾರದು. ಶರಣರು ಸತ್ಯ ಹೇಳಿದ್ದರಿಂದ ಪರೋಹಿತಷಾಹಿಯ ಆಕ್ರೋಷಕ್ಕೆ ತುತ್ತಾದರು. ಬಾಲಕನಾಗಿದ್ದಾಗಲೇ ಬಸವಣ್ಣ ತನ್ನ ಅಕ್ಕನಿಗಿಲ್ಲದ ಜನಿವಾರ ತನಗೆ ಬೇಡ ಎಂದು ಪ್ರತಿಭಟಿಸಿ ಮನೆಯಿಂದ ಹೊರನಡೆದರು. ಇಂದಿನ ಮಂತ್ರಿಗಳಿಗೂ ಅಂದಿನ ಬಸವಣ್ಣನವರಿಗೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ತನ್ನ ಆದರ್ಶಗಳಿಗೆ ಧಕ್ಕೆಯಾದ ಕೂಡಲೆ ಬಸವಣ್ಣ ರಾಜಿನಾಮೆ ನೀಡಿದರು. ಕಾಯಕಶೀಲರಿಗೆ ಮಾತ್ರ ಮಹಾಮನೆ ಮತ್ತು ಅನುಭವ ಮಂಟಪಕ್ಕೆ ಪ್ರವೇಶವಿತ್ತು. ಆಸೆ, ಆಮಿಷವಳಿದವರು ಶರಣರು. ಸತ್ಯಶುದ್ಧ ಕಾಯಕ ಮಾಡುವವರಿಗೆ ಬಡತನವಿಲ್ಲ ಎನ್ನುವುದನ್ನು ಶರಣರು ನಡೆದು ತೋರಿದರು. ಈ ಪರಂಪರೆ ನಾಡಿನಲ್ಲಿ ಎಲ್ಲೆಡೆ ಬೆಳೆದು ಬರಬೇಕಿದೆ. ಎಲ್ಲರೂ ಕಾಯಕಶೀಲರಾದರೆ ರಾಜ್ಯದ ಭಂಡಾರ ತುಂಬಿ ತುಳುಕುವುದು. ಇಷ್ಟಲಿಂಗ ಪೂಜೆ ಜಾರಿಗೆ ಬಂದರೆ ದೇವಸ್ಥಾನಗಳನ್ನು ಕಟ್ಟುವ ಅವಶ್ಯಕತೆಯಿಲ್ಲ. ದೇಹವೇ ದೇವಾಲಯವಾದಾಗ ಮೋಸ, ವಂಚನೆ, ಸುಳ್ಳು ಹೇಳಲು ಸಾಧ್ಯವಾಗದು. ಇಂಥ ಅರಿವನ್ನು ನಮಗೆ, ಜನಪ್ರತಿನಿಧಿಗಳಿಗೆ, ವಿದ್ಯಾರ್ಥಿಗಳಿಗೆ ಮೂಡಿಸುವ ಪ್ರಯತ್ನವೇ ಮತ್ತೆ ಕಲ್ಯಾಣ. ಜಾತಿ, ಧರ್ಮ, ಪಕ್ಷಾತೀತವಾಗಿ ವ್ಯಕ್ತಿಗಳನ್ನು ಪರಿವರ್ತನೆ ಮಾಡುವುದು. ಜನಸಾಮಾನ್ಯರನ್ನು ಬದಲಾಯಿಸುವುದು ಸುಲಭ, ನೇತಾರರನ್ನು ಬದಲಾಯಿಸುವುದೇ ಕಷ್ಟ. ಹಾಗಾಗಿ ಮೊದಲು ಅವರನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು. ನೇತಾರ ಬದಲಾವಣೆಯಾದರೆ ಮತದಾರ ಖಂಡಿತವಾಗಿಯೂ ಬದಲಾಣೆಯಾಗುವನು. ವಿದ್ಯಾರ್ಥಿಗಳಲ್ಲಿ ಬದಲಾಗುವ ಮನಸ್ಸಿದೆ. ಅವರಿಗೆ ಸರಿಯಾದ ಮಾರ್ಗದರ್ಶನ ಬೇಕಿದೆ. ಹಾಗಾಗಿಯೇ ಈ ಮತ್ತೆ ಕಲ್ಯಾಣ ಎಂದರು.
`ಕಲ್ಯಾಣ ಕ್ರಾಂತಿ ಮತ್ತು ಆನಂತರ’ ವಿಷಯ ಕುರಿತಂತೆ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನಟರಾಜ್ ಹುಳಿಯಾರ್ ಕಲ್ಯಾಣ ಅನ್ನುವುದೊಂದು ಸ್ಥಳವಲ್ಲ; ಪರಿಕಲ್ಪನೆ, ಕನಸು, ಆದರ್ಶ. ಸಮಾಜದಲ್ಲಿದ್ದ ಅಸಮಾನತೆಗಳನ್ನು ತೊಡಗಿಸಬೇಕು ಎನ್ನುವ ಭಾವನೆ ನಮ್ಮ ಹಿರಿಕರಿಗೆ ಅನ್ನಿಸಿದ್ದರ ಫಲವೇ ಕಲ್ಯಾಣ ರಾಜ್ಯ. ಬಸವಣ್ಣನ ಕನಸಿನ `ಕಲ್ಯಾಣ’ದ ಬಿಕ್ಕಟ್ಟಿನ ನಂತರ ವಚನಕಾರರು ದಿಕ್ಕಾಪಾಲಾದರು. ಇದು ದುರಂತಮಯ ಘಟ್ಟವಾದಂತೆ ಕನಸಿನ ಘಟ್ಟವೂ ಹೌದು. ಅಂದು ವಚನಗಳನ್ನು ರಕ್ಷಿಸಿದ್ದರ ಫಲವೆ ಇಂದು ಮತ್ತೆ ಕಲ್ಯಾಣಕ್ಕೆ ಮುನ್ನುಡಿ ಬರೆಯಲು ಸಾಧ್ಯವಾಗಿರುವುದು. ಬಸವಣ್ಣನ ಕಲ್ಯಾಣದ ಕನಸಿನಿಂದ ನಾಯಕರು ಭ್ರಮನಿರಸನಗೊಂಡಿರಬಹುದು. ಆದರೆ ಜನಸಾಮಾನ್ಯರು ಈ ಕನಸನ್ನು ಬಿಟ್ಟುಕೊಡುವವರಲ್ಲ. ಬಸವಣ್ಣನವರಿಗೆ ಅಂದು ತುರ್ತಾಗಿ ಬೇಕಾದದ್ದು ಪ್ರಿಂಟಿಂಗ್ ಪ್ರೆಸ್ ಎಂದು ಪಿ ಲಂಕೇಶ್ ಹೇಳುತ್ತಿದ್ದರು. ವಚನ ಚಳುವಳಿ ಮುಂದೆ ಜನಪದ ಕಲೆಯಾಗಿ ಬೆಳೆಯಿತು. ಜನಸಾಮಾನ್ಯರು ವಚನಗಳನ್ನು ರಕ್ಷಣೆ ಮಾಡಿದ್ದರಿಂದ ಅವು ಇಂದು ನಮಗೆ ಸಿಕ್ಕಿವೆ. ಕಲ್ಯಾಣವು ಅರಂಭಿಸಿದ ಸಮ ಸಮಾಜ ನಿರ್ಮಾಣದ, ಆದರ್ಶದ ಕನಸನ್ನು ನಾವ್ಯಾರೂ ಬಿಟ್ಟು ಕೊಡಬಾರದು. ಶರಣರು ಒಬ್ಬರನ್ನೊಬ್ಬರು ಹೊಗಳಿ ಬೆಳೆದವರಲ್ಲ; ವಿಮರ್ಶಿಸಿ ಬೆಳೆದವರು. ಬಸವಣ್ಣ ತಾಯಿ, ತಂದೆ, ಸ್ನೇಹಿತ, ಚಿಂತಕ, ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ… ಮಂಟೆಸ್ವಾಮಿ, ಮಲೆಮಹದೇಶ್ವರರೊಳಗೂ ಬಸವಣ್ಣನ ಚಿಂತನೆಗಳು ಅಡಗಿವೆ. ಸಾಹಿತ್ಯ, ಧರ್ಮ, ವೈಚಾರಿಕ ಚಿಂತನೆಗಳ ಕೊಂಡಿಯಾಗಿ ಉಳಿದಿರುವುದು ವಚನ ಸಾಹಿತ್ಯವೊಂದೇ. ನೊಂದ ಜಾತಿಗಳಿಂದ ಬಂದ ಜನರು ದೊಡ್ಡನಾಯಕರಾಗುವರು. ವಚನ ಚಳುವಳಿಯ ಒಳಗೆ ಇಂದಿನ ಸಕಲ ಪ್ರಶ್ನೆಗಳೂ ಇವೆ. ಸಕಲ ಜಾತಿ, ಕಾಯಕಗಳ ಮೂಲಕ ವಚನಜ್ಞಾನ ಮೂಡಿಬಂದಿದೆ. ವಚನ ಸಾಹಿತ್ಯದ ರಚನೆ ಇಂದಿಗೂ ಮುಂದುವರಿದಿದೆ. ಜನಪದರ ಸಾಮರಸ್ಯದ ಕೊಡುಗೆ ಅನನ್ಯವಾದುದು. ಭಾರತದ ಅನೇಕ ಧರ್ಮಗಳು ಹೊರಗಿನವು; ಬಸವ ಧರ್ಮ, ಲಿಂಗಾಯತ ಧರ್ಮ ಮಾತ್ರ ಒಳಗಿನದು. ಇದು ಎಲ್ಲರೂ ಅಂಗೀಕಾರ ಮಾಡುವ, ಅಪ್ಪಿಕೊಳ್ಳುವ ಧರ್ಮ. ವಚನಗಳ ಅಧ್ಯಯನಕ್ಕೇ ತಮ್ಮ ಜೀವನವನ್ನು ಮುಡಿಪಾಗಿಸಿದ್ದ ಎಂ ಎಂ ಕಲ್ಬುರ್ಗಿಯವರ ಕಗ್ಗೊಲೆ `ಕೆಟ್ಟಿತ್ತು ಕಲ್ಯಾಣ’ ಎನ್ನುವುದನ್ನು ಸಾಂಕೇತಿಸುತ್ತದೆ. ವಚನ ಸಾಹಿತ್ಯ ಜಾತ್ಯತೀತ ನಿಲುವಿಗೆ ಬದ್ಧರಾಗುವಂತೆ ಯುವಕರನ್ನು ಪ್ರೇರೇಪಿಸುವುದು. ಹೀಗಾಗಿ ವಚನಗಳ ತಿಳುವಳಿಕೆಯನ್ನು ಯುವಕರಿಗೆ ತಿಳಿಸಬೇಕಾಗಿದೆ. ಧರ್ಮವನ್ನು ಹಿಂಸೆಗೆ ಬಳಸುವವರು ಧರ್ಮವನ್ನು ಓದಿದವರಲ್ಲ. ಕಲ್ಯಾಣವೆಂದರೆ ಸಹಭಾಗಿತ್ವ, ಎಲ್ಲರ ದನಿಗಳನ್ನು ಕೇಳಿಸಿಕೊಳ್ಳುವುದು, ನ್ಯಾಯ, ಸಂವಾದ, ದುರಹಂಕಾರವನ್ನು ಬಿಟ್ಟ ಭಾಷೆ. ಕಲ್ಯಾಣದ ಪರಿಭಾಷೆ ಹಳೆಯ ಪರಿಭಾಷೆಗೆ ಸಿಲುಕಿಕೊಳ್ಳದೆ ಹೊಸ ಪರಿಭಾಷೆಗೆ ಒಗ್ಗಿಕೊಳ್ಳಬೇಕು. ಬಸವಣ್ಣ ಚಳುವಳಿಯನ್ನು ಸಾಂಸ್ಕೃತಿಕವಾಗಿ ಬದಲಾವಣೆಗೆ ಪ್ರಯತ್ನಿಸಿದ್ದ ಕಾರಣ ಅವರ ಚಳುವಳಿ ಕುಸಿಯಿತು. ಮಠಮಾನ್ಯಗಳು ವಚನಗಳನ್ನು ಬಿತ್ತುವ ಪ್ರಯತ್ನ ಮಾಡುತ್ತಿವೆ. ನಿದ್ದೆಯಲ್ಲಿ ಎದ್ದಂತೆ ಮತ್ತೆ ಕಲ್ಯಾಣದ ಕನಸಿಗೆ ವಾಪಾಸಾಗಿದ್ದೇವೆ. ವಚನಕಾರರ ಚಳುವಳಿಯಲ್ಲಿ ಆರ್ಥಿಕ ಪ್ರಶ್ನೆಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಇಂದು ಶ್ರಮಜೀವಿಗಳನ್ನು, ಕೃಷಿಕರನ್ನು ನಿರ್ನಾಮ ಮಾಡುವ ಹುನ್ನಾರಗಳು ನಡೆದಿವೆ. ಪೇಜಾವರ ಶ್ರೀಗಳು ಮೊದಲು ತಾವು ವಚನ ಸಾಹಿತ್ಯದ ಮೊದಲ ಎರಡು ಸಂಪುಟಗಳನ್ನು ಓದಿದರೆ ಅವರು ವಚನ ಧರ್ಮಕ್ಕೇ ಬರುವುದರಲ್ಲಿ ಅನುಮಾನವಿಲ್ಲ ಎಂದರು.
ವಚನಕಾರ್ತಿಯರು ಮತ್ತು ಕಾಯಕ ಕುರಿತಂತೆ ಮಾತನಾಡಿದ ಡಾ. ಎಂ ಎಸ್ ಆಶಾದೇವಿ `ಮತ್ತೆ ಕಲ್ಯಾಣ’ ಅಭಿಯಾನ ಎಂ ಎಂ ಕಲ್ಬುರ್ಗಿಯವರ ಕನಸು ನನಸು ಮಾಡುವ ಯೋಜನೆ. ಕಾಯಕಕ್ಕೆ ದೊಡ್ಡ ಮಹತ್ವವನ್ನು ನೀಡಿದವರು ಶರಣೆಯರು. ಕಾಯಕವನ್ನು ಪುರಷರಷ್ಟೇ ಸಮಾನವಾಗಿ, ಒಂದೇ ವೇದಿಕೆಯ ಮೇಲೆ ತರುವ ಪ್ರಯತ್ನ ವಚನಕಾರ್ತಿಯರದು. ವಚನಕಾರ್ತಿಯರಿಗೆ ಕಾಯಕ ಒಂದು ಪ್ರಾಯೋಗಿಕ ದಾರಿಯಾಗಿತ್ತೇ ಹೊರತು; ಜೀವನೋಪಯದ ದಾರಿಯಾಗಿರಲಿಲ್ಲ. ಕಾಯಕದ ಬಗೆಗೆ ಆತ್ಮವಿಶ್ವಾಸವನ್ನು ಘನತೆಯನ್ನು ತಂದುಕೊಟ್ಟವರು ವಚನಕಾರ್ತಿಯರು. ಕಾಯಕದ ತೀವ್ರತೆ ಗಂಡಿಗಿಂತ ಹೆಣ್ಣಿನಲ್ಲಿ ಹೆಚ್ಚು ತೀವ್ರವಾದುದಾಗಿದೆ ಎಂದು ವಚನಕಾರ್ತಿಯರು ನಡೆದು ತೋರಿಸಿದರು. ಇಂದು ಮಹಿಳೆ ಮಾಡುವ ಕೆಲಸಗಳನ್ನು ಕಾಯಕ ಎಂದು ಗುರುತಿಸದೇ ಇರುವುದು ದುರದೃಷ್ಟಕರ ಸಂಗತಿ. ಗೃಹಿಣಿಯ ಕೆಲಸವೂ ಕಾಯಕವೇ. ಮಹಿಳೆಯರು ತಮಗೆ ಬೇಕಾದುದೆಲ್ಲವನ್ನೂ ತಮ್ಮ ಕಾಯಕದಿಂದಲೇ ಪಡೆದುಕೊಳ್ಳುವವರು. ಅಕ್ಕಮ್ಮ `ಸಮಶೀಲ, ಸಮಗ್ರಾಹಕ’ ಕೇವಲ ಹೆಣ್ಣಿಗೆ ಒಡ್ಡಿರುವ ಸವಾಲಷ್ಟೇ ಅಲ್ಲ; ಪುರುಷರಿಗೂ ಅನ್ವಯಿಸುವುದು ಎನ್ನುವರು. ದೇವದಾಸಿಯ ಹಿನ್ನೆಲೆಯಲ್ಲಿ ಬಂದ ಅಕ್ಕಮ್ಮ ವ್ರತ ಹೀನರಿಗೆ ದೇವರು ಒಲಿಯುವುದಿಲ್ಲ ಎಂದು ಹೇಳುವಳು. ತನ್ನ ವ್ಯಕ್ತಿತ್ವದ ಆಗುಹೋಗುಗಳಿಗೆ `ತಾನೇ ಪ್ರಾಮಾಣು’ ಎಂದವರು ಶರಣೆಯರು. ನಾನು ಧೀರೆ ಎನ್ನುವದುನ್ನು ಬಲ್ಲೆ ಎನ್ನುವುದನ್ನೂ ಹೇಳುವರು. ದಲಿತರಿಗೆ ಸಿಕ್ಕಷ್ಟು ಆದ್ಯತೆ ಶರಣೆಯರಿಗೆ ಸಿಕ್ಕಿದೆ ಎಂದು ಹೇಳುವುದು ಕಷ್ಟ. ಮಾಡುವ ಯಾವುದೇ ಕೆಲಸಗಳನ್ನು ಉತ್ಕಟವಾಗಿ ಪ್ರೀತಿಸಿದವರು. ಹಾದರ ಕಾಯಕದ ಗಂಗಮ್ಮ `ಆವ ಕಾಯಕ ಮಾಡಿದಡೂ ಒಂದೇ ಕಾಯಕ’ ಎಂದರು. ಸಂಕವ್ವೆ ನಿರ್ಲಜ್ಜೇಶ್ವರ ಎಂದು ಹೇಳುವಾಗ ಯಾವ ನಿರ್ಲಜ್ಜೆಯನ್ನು ಹೇಳುತ್ತಾಳೆ ಎನ್ನುವುದು ಮಾರ್ಮಿಕವಾಗಿದೆ. ಒತ್ತೆಯ ಮೇಲೊಂದು ಒತ್ತೆಯ ಹಿಡಿಯಲಾರೆ ಎನ್ನುವ ಮೂಲಕ ಏಕದೇವೋಪಾಸನೆಯನ್ನು ಸಾರವರು. ನಮ್ಮ ಭಿನ್ನತೆಯಿದ್ದು ಬೆರೆಯಬಹುದು ಎನ್ನುವುದೇ ಮತ್ತೆ ಕಲ್ಯಾಣದ ಮಹದಾಶಯ ಎಂದರು.
* ಬೇಬಿಮಠದ ಶ್ರೀ ತ್ರಿನೇತ್ರಾನಂದ ಸ್ವಾಮೀಜಿಗಳು* ಮಾತನಾಡಿ ಕತ್ತರಿಯ ಗುಣ ಕತ್ತರಿಸುವುದು. ಸೂಜಿಯ ಗುಣ ಕೂಡಿಸುವುದು. ಸೂಜಿಯಾಗಿ ಕತ್ತರಿಸಿದುದನ್ನು ಹೊಲೆಯುವ ಕೆಲಸವನ್ನು ಪಂಡಿತಾರಾಧ್ಯ ಶ್ರೀಗಳು ಮತ್ತೆ ಕಲ್ಯಾಣದ ಮೂಲಕ ಮಾಡುತ್ತಿದ್ದಾರೆ. 12 ನೆಯ ಶತಮಾನ ಯಾರನ್ನೂ ಹೊರಗಿಡದೆ ಇವ ನಮ್ಮವ, ಇವ ನಮ್ಮವ ಎಂದುದು. ವಚನ ಸಾಹಿತ್ಯ ಎಲ್ಲ ಸಿದ್ಧಾಂತಗಳಿಗಿಂತಲೂ ಮಿಗಿಲಾದುದು. ಜಗತ್ತಿನ ಎಲ್ಲ ಧರ್ಮಗಳ ಸಾರವನ್ನು ಒಳಗೊಂಡಿರುವುದು. ಸ್ವಾರ್ಥ ಕಡಿಮೆಯಾಗಿ ನಿಸ್ವಾರ್ಥ ಹೆಚ್ಚು ಮಾಡುವುದೇ ಎಲ್ಲದಕ್ಕಿಂತ ಮಿಗಿಲಾದ ಸಿದ್ಧಾಂತ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಕೆ ಟಿ ಶ್ರೀಕಂಠೇಗೌಡರು ಸ್ವಾಗತಿಸಿದರೆ, ಅನುಮಪ ಕಾರ್ಯಕ್ರಮ ನಿರ್ವಹಿಸಿದರು. ಮತ್ತೆ ಕಲ್ಯಾಣ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ಸಭೆಯ ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ `ಮೋಳಿಗೆ ಮಾರಯ್ಯ’ ನಾಟಕ ಮನೋಜ್ಞವಾಗಿ ಪ್ರದರ್ಶನಗೊಂಡಿತು. ನಂತರ ನಾಟಕ ಕುರಿತಂತೆ ಕೆಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಮಹಾಕವಿ ಕುವೆಂಪು ಮತ್ತು ಕೆ ವಿ ಶಂಕರೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಸಾಮರಸ್ಯ ನಡಿಗೆಗೆ ಚಾಲನೆ ನೀಡಲಾಯಿತು. ಶರಣರ ಸ್ಥಬ್ಧ ಚಿತ್ರಗಳನ್ನಳ್ಳ ವಿಶೇಷ ವಾಹನದ ಜೊತೆ ವಿವಿಧ ಧಾರ್ಮಿಕ ನೇತಾರರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಕಲಾತಂಡಗಳು ಹೆಜ್ಜೆ ಹಾಕಿದವು. ಮತ್ತೆ ಕಲ್ಯಾಣದ ಧ್ವಜಗಳು ಹಾರಾಡುತ್ತಿದ್ದವು.
ವಿದ್ಯಾರ್ಥಿಗಳೊಡನೆ ಸಂವಾದ
ಆಗಸ್ಟ್ 0೮, ಮಂಡ್ಯ.; ಮತ್ತೆ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ `ವಿದ್ಯಾರ್ಥಿಗಳ ಜೀವನ ಬಂಗಾರದಂತಹ ಜೀವನ’ ಎನ್ನುವ ಮಾತಿದೆ. ಅದು ಸತ್ಯವಾ? ಖಂಡಿತಾ ಇಲ್ಲ. ಇದಕ್ಕೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪವೇ ಕಾರಣ. ಪದವಿಗಳಿಸಿ, ಉದ್ಯೋಗ ದೊರಕಿಸಿಕೊಡುವುದೇ ಶಿಕ್ಷಣದ ಉದ್ದೇಶವಾಗಿದೆ. ವಾಸ್ತವವಾಗಿ ಶಿಕ್ಷಣ ಪಡೆದವರು ಸುಸಂಸ್ಕೃತರಾಗಿ ಸಮ ಸಮಾಜವನ್ನು ನಿರ್ಮಾಣ ಮಾಡುವ ಶಕ್ತಿಯನ್ನು ಪಡೆಯ ಬೇಕಾಗಿತ್ತು. ಆದರೆ ಇಂದು ಮನುಷ್ಯ-ಮನುಷ್ಯರ ಮಧ್ಯೆ ಜಾತಿ, ಮತ, ಪಂಥ, ಭಾಷೆ, ದೇಶ, ಗಡಿರೇಖೆಗಳಂಥ ಗೋಡೆಗಳು ನಿರ್ಮಾಣವಾಗುತ್ತಿವೆ. ನಮ್ಮ ಹಿರಿಯ ಗುರುಗಳು ಹೇಳುತ್ತಿದ್ದರು; ಮಕ್ಕಳಿಗೆ ವ್ಯಾವಹಾರಿಕ, ಔದ್ಯೋಗಿಕ, ಮತ್ತು ಪಾರಮಾರ್ಥಿಕ ಶಿಕ್ಷಣ ನೀಡಬೇಕು ಎಂದು. ಈಗ ಇಂತಹ ಶಿಕ್ಷಣ ದೊರಕುತ್ತಿಲ್ಲ. ಹಿಂದೆ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಕಾಯಕ ಶ್ರದ್ಧೆಯ ಜೊತೆಗೆ ಅನ್ಯೋನ್ಯವಾಗಿ ಬದುಕುವುದನ್ನು ಕಲಿಸಿಕೊಡುತ್ತಿದ್ದರು. ಇಂದು ಆದರ್ಶ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಸಾಧನೆಯಿಲ್ಲದೆ ಸತ್ತರೆ ಸಾವಿಗೆ ಅವಮಾನ. ಸಾಧನೆ ಮಾಡಿ ಸತ್ತರೆ ಸಾವಿಗೂ ಗೌರವ. ಇವತ್ತು ಜಗತ್ತು ವೈಜ್ಞಾನಿಕ, ವೈಚಾರಿಕ, ತಾಂತ್ರಿಕವಾಗಿ ಅದ್ಭುತ ಸಾಧನೆ ಕಂಡಿದೆ. ಇದು ಮಾತ್ರ ಸಾಧನೆಯಲ್ಲ. ಆದರ್ಶ ವ್ಯಕ್ತಿತ್ವ ಕಟ್ಟಿಕೊಳ್ಳುವುದೇ ನಿಜವಾದ ಸಾಧನೆ. ಮನೆಯಿಂದಾಗಿ ಬಹಳ ದೊಡ್ಡವರಾಗಿದ್ದೇವೆ; ಮನಸ್ಸಿನಿಂದ ಬಹಳ ಚಿಕ್ಕವರಾಗಿದ್ದೇವೆ. ಸುಖವನ್ನು ಹುಡುಕಿಕೊಂಡು ಹೊರಗೆ ಹೋಗುತ್ತೇವೆ. ಆದ್ರೆ ಸುಖ ನಮ್ಮಲ್ಲಿಯೇ ಇದೆ ಎನ್ನುವ ಅರಿವು ನಮಗೆ ಆಗಬೇಕಾಗಿದೆ. ಆದರ್ಶಗಳನ್ನಿಟ್ಟುಕೊಂಡು ಬದುಕಿದಾಗ ನಮ್ಮಲ್ಲಿಯೇ ಸುಖ ಕಾಣಬಹುದು. ಪಂಚೇಂದ್ರಿಯಗಳ ಮೇಲೆ ಹತೋಟಿ ಇಟ್ಟುಕೊಳ್ಳಬೇಕು. ಮನಸ್ಸೇ ನಮ್ಮ ಉನ್ನತಿ ಹಾಗೂ ಅವನತಿಗೆ ಕಾರಣ. ಶರಣರು ದೃಢ ಮನಸ್ಸಿನ ಮೂಲಕ ಪಂಚೇಂದ್ರಿಯಗಳ ಮೇಲೆ ಹಿಡಿತವನ್ನಿಟ್ಟುಕೊಂಡಿದ್ದರು. ಶರಣರು ಕಣ್ಣಿಗೆ ಶೃಂಗಾರ ಕಾಡಿಗೆಯಲ್ಲ; ಗುರುಹಿರಿಯನ್ನು ನೋಡುವುದು. ತುಟಿಗಳಿಗೆ ಶೃಂಗಾರ ಬಣ್ಣಹಚ್ಚುವುದಲ್ಲ; ಸತ್ಯವ ನುಡಿವುದು ಎಂದರು. ನಾವು ಸೃಷ್ಟಿಯನ್ನು ಬದಲಾಯಿಸಲು ಸಾಧ್ಯವಿಲ್ಲ; ದೃಷ್ಟಿಯನ್ನು ಬದಲಾಯಿಸಿಕೊಳ್ಳಬೇಕು. ಬಸವಣ್ಣನವರದು ನಯವಾದ ವ್ಯಕ್ತಿತ್ವ ಆದರೆ ಗಟ್ಟಿ ನಿಲುವು. ಹೀಗಾಗಿಯೇ ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಮುಂದೆ ನವ ಸಮಾಜವನ್ನು ನಿರ್ಮಾಣ ಮಾಡುವಂಥವರು. ಆ ಕಾರಣಕ್ಕಾಗಿಯೇ `ಮತ್ತೆಕಲ್ಯಾಣʼ. ಇದರ ಭಾಗವಾಗಿ ವಿದ್ಯಾರ್ಥಿಗಳ ಜೊತೆ ಸಂವಾದ. ಇಂದು ಸಮಾಜದ ರೋಗಪೀಡಿತವಾಗಿದೆ. ಈ ರೋಗಕ್ಕೆ ʼಮತ್ತೆಕಲ್ಯಾಣʼ ಅಭಿಯಾನದ ಮೂಲಕ ಚಿಕಿತ್ಸೆ ನೀಡಬೇಕಾಗಿದೆ. ನಮ್ಮ ಅಂತರಂಗದ ಅವಲೋಕನ, ಧ್ಯಾನ, ಮೌನ, ಪ್ರಾರ್ಥನೆ ಮಾಡುವ ಮೂಲಕ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಬಸವಣ್ಣನವರು ಜಾತಿ, ಕುಲ, ಧರ್ಮದಿಂದ ಹೊರಬಂದು ಸಮ ಸಮಾಜವನ್ನು ನಿರ್ಮಾಣ ಮಾಡಿದರು. ವಿಭೂತಿ ಭಕ್ತಿ, ಜ್ಞಾನ, ಕ್ರಿಯೆಗಳ ಸಂಕೇತ. ಜಾತಿ ಎಲ್ಲ ಕಾಲಕ್ಕೂ ಇದೆ. ಬಸವಣ್ಣನವರು ಅನುಭವ ಮಂಟಪದಲ್ಲಿ ಕಾಯಕ ಜೀವಿಗಳ ಮೂಲಕ ಜಾತಿಯನ್ನು ಹೊಡೆದೋಡಿಸುವ ಪ್ರಯತ್ನ ಮಾಡಿದರು. ಜಗತ್ತಿನ ಮೊಟ್ಟಮೊದಲ ಸಂಸತ್ತು ʼಅನುಭವಮಂಟಪʼ. ಈಗ ನಮ್ಮ ಸಂಸತ್ತಿನಲ್ಲಿ ಅನುಭವ ಮಂಟಪದ ರೀತಿ ಚರ್ಚೆಯಾಗಬೇಕು. ಲಿಂಗಾಯತ ಎನ್ನುವುದು ತತ್ವ ಸಿದ್ಧಾಂತವೇ ಹೊರತು; ಜಾತಿಯಲ್ಲ. ನಮ್ಮ ಮಠದಲ್ಲಿ ಯಾವುದೇ ಜಾತಿ ಇಲ್ಲ. ನಮ್ಮಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧ ಮಾದಿಗ ಜಾತಿಯವರು. ನಮ್ಮಮಠದಲ್ಲಿ ಅಂತರ್‌ ಜಾತಿಯ ವಿವಾಹಗಳು ನಿರಂತರವಾಗಿ ನಡೆಯುತ್ತಿವೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಜಯಪ್ರಕಾಶ್‌ ಗೌಡ ಪ್ರಕೃತಿಯ ಮುಂದೆ ನಾವ್ಯಾರು ದೊಡ್ಡವರಲ್ಲ. ಪ್ರಕೃತಿ ಅಂದ್ರೆ ದೇವರು, ದೇವರು ಅಂದ್ರೆ ಪ್ರಕೃತಿ. ಪಂಡಿತಾರಾಧ್ಯ ಸ್ವಾಮೀಜಿಯವರು ಶರಣರ ವಿಚಾರಗಳನ್ನು ಬಿತ್ತಬೇಕು ಎನ್ನುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳ ಮೂಲಕ ಸಾಣೇಹಳ್ಳಿ ಮಠದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿರೋದು ಸಾರ್ಥಕ. ಸಾಣೇಹಳ್ಳಿ ಚಿಕ್ಕಗ್ರಾಮವಾದರೂ ರಂಗಕ್ಷೇತ್ರದಲ್ಲಿ ಇಡೀ ಜಗತ್ತಿನ ಗಮನವನ್ನು ಸೆಳೆದಿದೆ. ಸಾಂಸ್ಕೃತಿಕ ಕ್ಷೇತ್ರದ ಮೂಲಕ ನವ ಸಮಾಜ ನಿರ್ಮಾಣ ಮಾಡುವುದು ಸ್ವಾಮೀಜಿಗಳ ಆಶಯ. ಇವತ್ತಿನ ರಾಜಕಾರಣದಿಂದ ಸಮಾಜ ಲಜ್ಜೆಗೆಟ್ಟಿದೆ. ೧೨ನೆಯ ಶತಮಾನದಲ್ಲಿ ಕಲ್ಯಾಣ ಎಂಬ ಶಬ್ಧಕ್ಕೆ ವಿಶೇಷ ಅರ್ಥ ಇತ್ತು. ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಆ ಮೂಲಕ ಎಲ್ಲರನ್ನು ಒಂದು ವೇದಿಕೆಯಡಿ ತರುವ ಪ್ರಯತ್ನ ಪಟ್ಟರು. ಇಂದಿಗೂ ಸಮಾಜದಲ್ಲಿ ಜಾತಿ, ಧರ್ಮ, ವರ್ಣ ಇವು ಜನರನ್ನು ಕಿತ್ತುತಿನ್ನುತ್ತಿದೆ. ಇದನ್ನು ಹೋಗಲಾಡಿಸಲೆಂದೇ ʼಮತ್ತೆಕಲ್ಯಾಣʼ. ಹಳ್ಳಿಗಳಲ್ಲಿ ಇಂದಿಗೂ ಅಸ್ಪೃಶ್ಯತೆ, ಜಾತಿ-ಜಾತಿ ನಡುವಿನ ಸಂಘರ್ಷ ತುಂಬಿತುಳುಕ್ತಾ ಇದೆ. ಕಾಯಕಕ್ಕೆ ಶರಣರಷ್ಟು ಮಹತ್ವವನ್ನು ಯಾರೂ ಕೊಟ್ಟಿಲ್ಲ. ಇಂದು ಶ್ರಮಕ್ಕೆ ಹೆಚ್ಚು ಬೆಲೆ ಕೊಡದೇ ಸುಖವನ್ನು ಅನುಭವಿಸುತ್ತಿದ್ದೇವೆ. ಇದರಿಂದಾಗಿಯೇ ಸಮಾಜದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ನಮ್ಮ ಮನಸ್ಸು ಗಟ್ಟಿಯಾದರೆ ನಮ್ಮನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಜಾತಿ ಮೊದಲು ಇರಲಿಲ್ಲ. ಪ್ರಾಣಿಗಳ ಹಾಗೆ ಜೀವಿಸುತ್ತಿದ್ದನು. ನಾಗರೀಕತೆ ಬಂದ ಮೇಲೆ ಜಾತಿ ಹುಟ್ಟಿಕೊಂಡಿತು. ʼಅನುಭವಮಂಟಪʼ ಪ್ರಜಾಪ್ರಭುತ್ವದ ಒಂದು ವ್ಯವಸ್ಥೆ. ಇಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿತ್ತು. ಅನುಭವ ಮಂಟಪದ ಆಶಯ ಮತ್ತು ಇಂದಿನ ಲೋಕಸಭೆ ಮತ್ತು ವಿಧಾನ ಸಭೆಗಳ ಆಶಯವೂ ಒಂದೇ.
ಸಂವಾದಕರಾದ ಕೆ ಟಿ ಶ್ರೀಕಂಠೇಗೌಡ ಮಾತನಾಡಿ ಜಾತಿ ರಹಿತ ಸಮಾಜ ಬೇಕು ಎನ್ನವಂಥದ್ದು ಇಂದಿನ ದೊಡ್ಡ ಕೂಗು. ಇಲ್ಲದೇ ಹೋದರೆ ಮನುಷ್ಯನ ವಿನಾಶಕ್ಕೆ ಜಾತಿಯೇ ಕಾರಣವಾಗಬಹುದು. ಜಾತಿ ವ್ಯವಸ್ಥೆ ಹೋಗಲಾಡಿಸಲು ೧೨ನೆಯ ಶತಮಾನದಲ್ಲಿಯೇ ನಾಂದಿಹಾಡಲಾಗಿದೆ. ಅನುಭವ ಮಂಟಪ ಇಡೀ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ನಿರ್ದೇಶಿಸುವ ಸಂಸತ್ತಾಗಿತ್ತು. ಯಾರು ಸಮಾಜದ ತುಳಿತಕ್ಕೆ ಒಳಗಾಗಿರುತ್ತಾರೋ ಅವರಿಗೆ ಮೀಸಲಾತಿಬೇಕು. ಮೇಲ್ವರ್ಗದಲ್ಲಿರುವ ಬಡವರಿಗೂ ಮೀಸಲಾತಿಬೇಕು. ಎಲ್ಲ ಜಾತಿಗಳು ಸಮಸ್ಥಿತಿಗೆ ಬಂದಾಗ ಜಾತಿ ನಿರ್ಮೂಲನೆ ಆಗುತ್ತದೆ. ಇಂದು ಈ ಹಿಂದಿಗಿಂತ ಅಸ್ಪೃಶ್ಯತೆ ಸಾಕಷ್ಟು ಸುಧಾರಣೆಯಾಗಿದೆ. ಮೊದಲು ನಮ್ಮನ್ನು ನಾವು ಪ್ರೀತಿಸಬೇಕು. ಆಮೇಲೆ ಇತರರನ್ನು ಪ್ರೀತಿಸಬೇಕು. ಜಾತಿಯೆಂಬ ವಿಷಸರ್ಪವನ್ನು ಹೋಗಲಾಡಿಸುವ ಸಲುವಾಗಿ `ಮತ್ತೆಕಲ್ಯಾಣʼಅಭಿಯಾನ ಮುನ್ನುಡಿ ಬರೆದಿದೆ. ಒಮ್ಮೆಲೇ ಸಮಾಜದಲ್ಲಿ ಪರಿವರ್ತನೆ ಮಾಡುತ್ತೇವೆ ಎಂದರೆ ಸಾಧ್ಯವಿಲ್ಲ. ಹಸಿವಿನಿಂದ ಬಳಲುವಂತಹವನಿಗೆ ಮೊದಲು ಅನ್ನ ಕೊಡುವುದೇ ಮಾನವಧರ್ಮ. ಸಂವಾದಕ್ಕೆ, ಪ್ರಶ್ನೆಗಳನ್ನು ಕೇಳುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೇ `ಮತ್ತೆಕಲ್ಯಾಣ’ ಎನ್ನುವ ಆಂದಲೋನ ಎಷ್ಟು ವಿಶಾಲವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ನಮ್ಮ ಸಂಕುಚಿತ ಮನಸ್ಸುಗಳನ್ನು ವಿಸ್ತಾರ ಮಾಡಿಕೊಳ್ಳುವುದು ಮತ್ತೆಕಲ್ಯಾಣದ ಒಟ್ಟು ಆಶಯ. ಇಡೀ ಸಮಾಜ ಆರೋಗ್ಯಕರ ರೀತಿಯಲ್ಲಿ ನಿರ್ಮಾಣ ಮಾಡುವ ಬಹುದೊಡ್ಡ ಕಾಯಕದಲ್ಲಿ ಪಂಡಿತಾರಾಧ್ಯ ಶ್ರೀಗಳು ತೊಡಗಿದ್ದಾರೆ. ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕಾದುದು ಎಲ್ಲರ ಕರ್ತವ್ಯ ಎಂದರು.
ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು
ಮತ್ತೆ ಕಲ್ಯಾಣ ಅಭಿಯಾನದ ಉದ್ದೇಶವೇನು?
ಮನಸ್ಸಿನ ಮೇಲೆ ಹತೋಟಿ ಸಾಧಿಸುವುದು ಹೇಗೆ?
ಜಾತಿ-ಜಾತಿ ಮಧ್ಯೆ ಸಂಘರ್ಷವಿದೆ. ಬಸವಣ್ಣನವರ ಜಾತಿಯಲ್ಲಿದ್ದುಕೊಂಡೇ ಅವರ ಜಾತಿಯವರೇ ಹೊಡೆದಾಡುತ್ತಾರಲ್ಲ. ಇದು ಯಾಕೆ?
ಬಸವಣ್ಣನವರು ಬ್ರಾಹ್ಮಣ ಶ್ರೇಷ್ಠ ಕುಲವನ್ನು ತ್ಯಜಿಸಿದರು ಅಂತ ಹೇಳಿದ್ರಿ. ಬ್ರಾಹ್ಮಣ ಕುಲ ಶ್ರೇಷ್ಠವೇ ?
೧೨ನೆಯ ಶತಮಾನದ ಶರಣರ ವಿಚಾರ ಧಾರೆಗಳು ಇಂದು ಹೇಗೆ ಪ್ರಸ್ತುತವಾಗಿವೆ?
ಜಾತಿ ಹೇಗೆ ಹುಟ್ಟಿಕೊಂಡಿತು?
ಹಿಂದಿನಿಂದಲೂ ಜಾತಿಯನ್ನಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ಅದನ್ನು ಹೊಡೆದೋಡಿಸಲು ಏನು ಮಾಡಬೇಕು?
ಬಸವಣ್ಣನ ಅನುಭವ ಮಂಟಪವನ್ನು ಈಗಿನ ಲೋಕಸಭೆ, ವಿಧಾನಸಭೆಗಳಲ್ಲಿ ಕಾಣುವುದು ಯಾವಾಗ?
ಇಂದು ಅಸ್ಪೃಶ್ಯತೆಯನ್ನು ನಿವಾರಣೆ ಯಾಕೆ ಮಾಡಲಾಗಿಲ್ಲ?
ಜಾತಿ ವ್ಯವಸ್ಥೆ ಸಮಾಜದಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆಯಾಗಿದೆ. ಆದ್ರೆ ರಾಜಕಾರಣದಲ್ಲಿ ಯಾಕೆ ಸುಧಾರಣೆಯಾಗಿಲ್ಲ?
ಅರ್ಹತೆಗನುಗುಣವಾಗಿ ಉದ್ಯೋಗವನ್ನು ನೀಡಬೇಕು. ಮೀಸಲಾತಿಗನುಗುಣವಾಗಿ ನೀಡುವುದು ಎಷ್ಟು ಸರಿ ?
ಹೆಚ್ ಎಸ್ ದ್ಯಾಮೇಶ್