ಆಗಸ್ಟ್ 09 ಶುಕ್ರವಾರ, ರಾಮನಗರ

ರಾಮನಗರದಲ್ಲಿ 9 ನೇ ದಿನದ ಮತ್ತೆ ಕಲ್ಯಾಣ ಆಂದೋಲನ | ಮೋಳಿಗೆ ಮಾರಯ್ಯ | ನಾಟಕ ಪ್ರದರ್ಶನ - ಅನನ್ಯ ಟಿವಿ ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ


ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶ ಮತ್ತು ಸಂವಾದ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಭಾಷಣ ಎಂದರೆ ವೇದಿಕೆಯತ್ತ ಧಾವಿಸುವ ನೇತಾರರು ವಿದ್ಯಾರ್ಥಿಗಳೊಂದಿಗೆ, ಸಾರ್ವಜನಿಕರೊಂದಿಗೆ ಸಂವಾದ ಎಂದರೆ ದೂರ ಸರಿಯುವರು. 12ನೆಯ ಶತಮಾನದ ಶರಣರು ಅನುಭವ ಮಂಟಪ ಎನ್ನುವ ಚಾವಡಿಯಲ್ಲಿ ಕುಳಿತು ಸಂವಾದ ಮಾಡುತ್ತಿದ್ದರು. ಅದರ ಫಲವೇ ವಚನಗಳು. ಸಂವಾದದಿಂದ ಅಕ್ಷರದ ಅರಿವಿಲ್ಲದಿದ್ದರೂ ಸುಜ್ಞಾನಿಗಳಾಗಲು ಸಾಧ್ಯ. ಅನಕ್ಷರಸ್ಥರಿಗೂ ವಿವೇಕ ಹೇಳುವುದೇ ಮತ್ತೆ ಕಲ್ಯಾಣ. ರೋಗಪೀಡಿತವಾಗಿರುವ ಇಂದಿನ ಸಮಾಜಕ್ಕೆ ಚಿಕಿತ್ಸೆ ನೀಡುವ ಶಕ್ತಿ ಇರುವಂಥದ್ದು ವಚನಗಳಿಗೆ. `ಮನದ ಮೈಲಿಗೆಯ ತೊಳೆಯಲು ಕೂಡಲ ಸಂಗನ ಶರಣರೊಡನೆ ಅನುಭಾವವ ಮಾಡಬೇಕು’ ಎಂದು ಶರಣರು ಹೇಳಿದರು. ಈ ಹಿನ್ನೆಲೆಯಲ್ಲಿ ನಾವು ಸಜ್ಜನರ ಸಂಗವನ್ನು ಮಾಡುವ ಮೂಲಕ ನಮ್ಮನ್ನು ನಾವು ಆಂತರಿಕವಾಗಿ ಶುದ್ಧಿಯಾಗಬಹುದು. ದೇವರ ದಾಸಿಮಯ್ಯನವರು `ನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗೆಯಿತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥ’ ಎನ್ನುವ ಮೂಲಕ ಶರಣರ ಮಾತು, ಸಹವಾಸ ಎಷ್ಟು ಮಹತ್ವದ್ದು ಎಂದು ಹೇಳುವರು. ಅರಿವಿಗೆ ತಕ್ಕ ಆಚಾರ ಬದುಕಿನಲ್ಲಿ ಬಂದರೆ ಸಾಮಾನ್ಯರೂ ಅಸಾಮಾನ್ಯರಾಗಲು ಸಾಧ್ಯ. ನಡೆ ಮತ್ತು ನುಡಿಯಲ್ಲಿನ ಕಂದಕವನ್ನು ಹೋಗಲಾಡಿಸುವುದೇ ಮತ್ತೆ ಕಲ್ಯಾಣದ ಆಶಯ. ಅಭಿಯಾನದಲ್ಲಿ ಎಷ್ಟು ಜನ ಸೇರುವರು ಎನ್ನುವುದು ಮುಖ್ಯವಲ್ಲ; ಎಷ್ಟ ಜನ ತಮ್ಮನ್ನು ತಾವು ಪರಿವರ್ತನೆಗೆ ಒಳಗಾಗಿದ್ದಾರೆ ಎನ್ನುವುದು ಮುಖ್ಯ. ವ್ಯಕ್ತಿಗತ ವಿಕಾಸವಾಯಿತು ಅಂದ್ರೆ ಸಮಸಮಾಜ ಕಟ್ಟಲಿಕ್ಕೆ ಸಾಧ್ಯ. ಇಂದು ಸಣ್ಣ ಸಣ್ಣ ಪ್ರಸಂಗಗಳಿಗೆ ದುರ್ಬಲರಾಗುತ್ತಿದ್ದೇವೆ. ಮೊದಲು ನಮಗೆ ಮನೋಸ್ಥೈರ್ಯಬೇಕು. ಬದುಕಿನಲ್ಲಿ ಏನೇ ಬಂದರೂ ದಿಟ್ಟತನದಿಂದ ಎದುರಿಸಬೇಕು. ಬದುಕಿನಲ್ಲಿ ಜೀವನೋತ್ಸಾಹವನ್ನು ಕಳೆದುಕೊಳ್ಳಬಾರದು. ಕೇವಲ ಹಣ ಕೂಡಿಟ್ಟುಕೊಳ್ಳಬೇಕು ಎಂದು ಯೋಚನೆ ಮಾಡದೇ ಅದನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವ ಅರಿವು ಮೂಡಿಸುವದನ್ನೇ ಶರಣರು ದಾಸೋಹ ಎಂದು ಹೇಳಿದರು. ಈ ತಿಳುವಳಿಕೆ ಇಂದು ತೀರಾ ಅವಶ್ಯವಾಗಿದೆ ಎಂದರು.
ಆತ್ಮಾವಲೋಕನ ಕುರಿತಂತೆ ಡಾ. ಲತಾ ಮೈಸೂರು ಮಾತನಾಡಿ ವಚನಕಾರರು ಆತ್ಮ ಸಾಕ್ಷಿಯನ್ನೇ ಪರಮಾತ್ಮನ ರೂಪದಲ್ಲಿ ಕಂಡರು. ಅವರಿಗೆ ಇಹವೇ ಕೈಲಾಸ. ಸತ್ಯ ಶುದ್ಧ ಕಾಯಕಗಳೆಲ್ಲವೂ ಸಮಾನ. ಆತ್ಮ ಶೋಧನೆಯಿಂದ ಮಾತ್ರ ವ್ಯಕ್ತಿ ಎತ್ತರಕ್ಕೆ ಏರಲು ಸಾಧ್ಯ. ಅಹಂಕಾರದ ಕೋಟೆಯನ್ನು ನುಚ್ಚುನೂರು ಮಾಡಲು, ವಿಶ್ವಮಾನವನಾಗಲು ಇರುವ ಏಕೈಕ ಮಾರ್ಗ ಆತ್ಮಾವಲೋಕನ. ವಚನ ಸಾಹಿತ್ಯವೆಲ್ಲವೂ ಸಂಪೂರ್ಣವಾಗಿ ನಮ್ಮನ್ನು ಇನ್ನೂ ತಲುಪಿಲ್ಲ. ತಳಜಾತಿಯ ವಚನಕಾರ್ತಿಯರ ವಚನಗಳು ಕಣ್ಮರೆಯಾಗುವಲ್ಲಿ ರಾಜಕೀಯವಡಗಿದೆ. ಶರಣ ಧರ್ಮಕ್ಕೆ ಜೀವಕೊಡುವ ಶಕ್ತಿಯಿದೆ. ಮನಸ್ಸಿನ, ಸಮಾಜದ ಸ್ವಾಸ್ಥ್ಯಕ್ಕೆ ವಚನಗಳೇ ಮದ್ದು. ಮನವರಿಯದ ಕಳ್ಳತನವಿಲ್ಲ ಎನ್ನುವ ಶರಣರು ದೇವರಿಗೆ ಹತ್ತಿರವಾಗುವ ಬಗೆಯೇ ಆತ್ಮಾವಲೋಕನ ಎಂದು ಸಾರಿದರು. ನಮ್ಮ ಮನಸ್ಸಿನ ಕೊಳೆಯನ್ನು ತೊಳೆಯಲು ನಮ್ಮಿಂದ ಮಾತ್ರ ಸಾಧ್ಯ. ತನ್ನೊಳಗಿನ ಅರಿವೇ ಎಲ್ಲ ಚಳುವಳಿಗಳ ಬೀಜ. ನಮ್ಮ ತಿಳುವಳಿಕೆ ನಮ್ಮೊಳಗಿದೆಯೇ ಹೊರತು ಹೊರಗಿನ ಗುಡಿಗುಂಡಾರಗಳಲ್ಲಿಲ್ಲ. ಏನೆಂದರಿಯರು, ಯಾಕಂದರಿಯರು ಕೇವಲ ಆಚರಣಗೆ ಜನ ಮುಗಿಬೀಳುತ್ತಿರುವರು. ದೇಹ ಭೋಗದ ಮಾಧ್ಯಮವಲ್ಲ; ಆತ್ಮದರ್ಶನಕ್ಕೆ ಸಾಧನ. ಲಿಂಗ ಹೊರಗಿನಿಂದ ಕಟ್ಟಿಕೊಳ್ಳುವುದಲ್ಲ; ಅದು ನಮ್ಮ ನಡೆಯಾಗಬೇಕು. ವಚನಕಾರರು ಮೊದಲು ಆತ್ಮವಿಮರ್ಶೆ ನಂತರ ಲೋಕವಿಮರ್ಶೆ ಮಾಡಿದವರು. ಇಂದು ಮೊಬೈಲ್ಗಳ ಬಳಕೆಯಿಂದ ಯುವಕರು ತಮ್ಮ ಪ್ರಜ್ಞೆಯನ್ನೇ ಕಳೆದುಕೊಂಡಿದ್ದಾರೆ. ಮನೆಯೊಳಗೆ ಮನೆಯೊಡೆಯನಿರುವಂತೆ ನೋಡಿಕೊಳ್ಳಬೇಕು. ಅಂತರಂಗ-ಬಹಿರಂಗ ಬೇರೆ ಬೇರೆಯಾಗದೆ ಒಂದೇ ಆಗಬೇಕು. ಮತೀಯವಾದಿಗಳು ಮತ್ತು ವಿಚಾರವಾದಿಗಳು ತಮ್ಮ ತಮ್ಮ ಚೌಕಟ್ಟಿನೊಳಗೆ ಸಿಕ್ಕಿಹಾಕಿಕೊಂಡು ಅಹಂಕಾರದಿಂದ ಬೀಗುತ್ತಿದ್ದಾರೆ. ಇದರಿಂದ ಹೊರಬರಲು ವಚನಗಳು ಪ್ರೇರಣೆ ನೀಡುವವು. ಎಲ್ಲರನ್ನೂ ಒಳಗೊಳ್ಳವ ಆದ್ರತೆಯ ವಿಚಾರವಾದ ನಮಗೆ ಇಂದು ಬೇಕು. ವಚನಗಳು ಮತ್ತು ವಚನಕಾರರು ಎಂದೆಂದಿಗೂ ಪ್ರಸ್ತುತ. ವಚನಗಳೇ ಇಂದಿನ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಬಲ್ಲವು ಎಂದರು.
ಶರಣ ಚಿಂತನೆಯ ಅಗತ್ಯತೆ ಕುರಿತು ಡಾ. ಹೆಚ್ ವಿ ವಾಸು ಮಾತನಾಡಿ ಚಳುವಳಿಕಾರರು ಚಳುವಳಿಯಿಂದಲೇ ಮೇಲೆ ಬಂದ ಮೇಲೆ, ಯಾವುದನ್ನು ವಿರೋಧಿಸುತ್ತಿದ್ದರೋ ಅದಕ್ಕೆ ಅಂದರೆ, ವೈಭೋಗದ ಜೀವನಕ್ಕೆ, ಅಧಿಕಾರಕ್ಕೆ ಅಂಟಿಕೊಳ್ಳುತ್ತಿದ್ದಾರೆ. ಇದರಿಂದಾಗಿಯೇ ಇಂದು ಚಳುವಳಿಗಳು ವಿಫಲತೆಯ ಹಾದಿ ಹಿಡಿದಿವೆ. ಇಡೀ ಸಮಾಜದ ರಚನೆ ಬದಲಾದರೆ ಮಾತ್ರ ಸಮಾನತೆ ಸಾಧ್ಯವಾಗಬಹುದು. ಇನ್ನೊಬ್ಬರ ಹಸಿವನ್ನು ತನ್ನ ಹಸಿವು ಎಂದುಕೊಳ್ಳುವುದೇ ಆಧ್ಯಾತ್ಮದ ಅರಿವು. ಆಧ್ಯಾತ್ಮ ಯಾವುದೇ ಒಂದು ಧರ್ಮದ ಸ್ವತ್ತಲ್ಲ. ಇಹದ ಸಮಸ್ಯೆಗಳನ್ನು ಕುರಿತು ಮಾತನಾಡಿದ ಮೊದಲ ಧರ್ಮ ವಚನ ಧರ್ಮ. ವಚನ ಚಳುವಳಿಯ ನಾಯಕರಾದ ಬಸವಣ್ಣ, ಅಲ್ಲಮರನ್ನೂ ಪ್ರಶ್ನೆಗೆ ಒಳಗು ಮಾಡಿದ ಪರಂಪರೆ ನಮ್ಮದು. ವಚನ ಚಳುವಳಿಯ ಬಗ್ಗೆ ಕರ್ನಾಟಕಕ್ಕೆ ತುಂಬ ಹೆಮ್ಮೆ ಇರಬೇಕಾಗಿತ್ತು. ಆದರೆ ವಚನಕಾರರನ್ನೂ ಒಂದೊಂದು ಜಾತಿಗೆ ಸೀಮಿತಗೊಳಿಸಿದುದರಿಂದ ಕರ್ನಾಟಕವನ್ನು ಬಿಟ್ಟು ವಚನಕಾರರ ಆಶಯಗಳು ಹೊರಗೆ ಹೋಗಲಿಲ್ಲ. ನಮ್ಮ ವೃತ್ತಿಯನ್ನು ಘನವಾಗಿ ಪ್ರೀತಿಸುವುದೇ ದೇವರನ್ನು ಕಾಣುವ ದಾರಿ. ವರಮಹಾಲಕ್ಷ್ಮಿ ಹಬ್ಬದ ಮೌಢ್ಯವನ್ನು ತಿಳಿಸಲೆಂದೇ ಮತ್ತೆ ಕಲ್ಯಾಣ ಕಾರ್ಯಕ್ರಮ. ಬಹುಷಃ ಕಾಫಿ ಡೇಯ ಮಾಲಿಕ ಸಿದ್ಧಾರ್ಥ ವಚನಗಳನ್ನು ಓದಿದ್ದರೆ, ಅರ್ಥಮಾಡಿಕೊಂಡಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಕತ್ತಲೆಯಲ್ಲಿದ್ದ ಬದುಕಿಗೆ ಶರಣರು ಬೆಳಕು ಚೆಲ್ಲಿದವರು. ಇಂಥ ಅಪರೂಪದ ಪರಂಪರೆಯನ್ನು ನಮ್ಮದಾಗಿಸಿಕೊಳ್ಳಬೇಕು. ಕಾಯಕ, ದಾಸೋಹ, ಅರಿವು, ಆಚಾರಗಳ ಮೇಲೆ ವಚನ ಚಳುವಳಿ ನಿಂತಿದೆ. ಸರ್ವೋದ್ಧಾರವನ್ನು ಮುನ್ನಲೆಗೆ ತರಬೇಕು. ಎಡ-ಬಲ ಚಿಂತನೆಗಳಲ್ಲಿ ಸಾಮಾಜಿಕ ಜಾಲತಾಣಗಳು ವಿಭಜನೆಗೊಂಡಿರುವುದು ವಿಪರ್ಯಾಸ. ಮತ್ತೆ ಕಲ್ಯಾಣ ಒಂದು ಅಗ್ನಿಪರೀಕ್ಷೆ. ಪಂಡಿತಾರಾಧ್ಯ ಸ್ವಾಮಿಜಿಗಳು ಆಡಿದ, ಆಡದೇ ಇರುವ ಒಂದೊಂದು ಮಾತಿಗೂ ಟೀಕೆಟಿಪ್ಪಣಿಗಳು ಬರುತ್ತಿರುತ್ತಿವೆ. ಈ ಅಗ್ನಿಪರೀಕ್ಷೆಯನ್ನು ಹಾದುಕೊಂಡೇ ಮತ್ತೆ ಕಲ್ಯಾಣದೆಡೆಗೆ ಹೆಜ್ಜೆ ಹಾಕಬೇಕಿದೆ ಎಂದರೆ.
ವಿರಕ್ತಮಠದ ಶ್ರೀ ಶಿವರುದ್ರ ಸ್ವಾಮಿಗಳು ಮಾತನಾಡಿ ಬಸವಣ್ಣನವರ ಮೊದಲ ಆದ್ಯತೆ ಸ್ತ್ರೀ ಸಮಾನತೆಗೆ. ವಚನಗಳಲ್ಲಿ ಅನುಭಾವವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಂ ಲಿಂ ನಾಗರಾಜು ಮಾತನಾಡಿ ಸರಿಪಡಿಸಲಾಗದ ಜಾತಿ, ಧರ್ಮ, ಅಸಮಾನತೆಯ ಸಮಸ್ಯೆಗಳನ್ನು ಅನುಭವಿಸಿಕೊಂಡೇ ಬರುತ್ತಿದ್ದೇವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿಯೇ ಪಂಡಿತಾರಾಧ್ಯ ಶ್ರೀಗಳು ಮತ್ತೆ ಕಲ್ಯಾಣ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಜಾತಿಯ ಕೇರಿಗಳು ಊರುಗಳಲ್ಲಿ ಇರದಂತಾಗುವ ದಿನಗಳು ಬರಬೇಕು. ಬೇರೊಬ್ಬರ ಜಾತಿಯ ತುತ್ತನ್ನು ಕಿತ್ತು ತಿನ್ನುವ ಪರಾವಲಂಬಿಗಳಾಗಬಾರದು. ಮತ್ತೆ ಕಲ್ಯಾಣ ಒಂದು ದಿನದ ಕಾರ್ಯಕ್ರಮವಲ್ಲ; ನಿರಂತರವಾಗಿ ನಡೆಯುವಂಥದ್ದು. ರಾಮನಗರದ ಸಹಮತ ವೇದಿಕೆ ಇಂಥ ಪ್ರಯತ್ನ ಮಾಡುವುದು ಎಂದರು
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಪ್ರಾಸ್ತಾವಿಕವಾಗಿ ಡಾ ಕುರುವಾ ಬಸವರಾಜ್ ಮಾತನಾಡಿದರು. ಅನುಸೂಯಮ್ಮ ಸ್ವಾಗತಿಸಿದರು. ಚನ್ನವೀರಪ್ಪ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ಶ್ರೀನಿವಾಸ ಕರಿಯಪ್ಪ ವಂದಿಸಿದರು.
ಮಿನಿ ವಿಧಾನಸೌಧದಿಂದ ಆರಂಭವಾದ ಸಾಮರಸ್ಯ ನಡಿಗೆಯಲ್ಲಿ ವಿವಿಧ ಧರ್ಮದ ನೇತಾರರು, ಜನಪ್ರತಿನಿಧಿಗಳು, ಸ್ವಾಮಿಗಳು, ವಿದ್ಯಾರ್ಥಿಳು, ಕಲಾ ತಂಡಗಳು ವಚನಕಾರರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದೊಂದಿಗೆ ಅಂಬೇಡ್ಕರ್ ಭವನಕ್ಕೆ ತಲುಪಿದವು.
ಸಂವಾದದಲ್ಲಿ ಕೇಳಿದ ಪ್ರಶ್ನೆಗಳು:
ಜಾಗತೀಕರಣ ಅಸಮಾನತೆಯನ್ನು ಹೆಚ್ಚಿಸಿದೆ. ಅದಕ್ಕೆ ಔಷಧಿ ವಚನ ಸಾಹಿತ್ಯ. ಇದನ್ನು ಹೋಗಲಾಡಿಸಲು ಮಠಗಳ ಪಾತ್ರವೇನು?
ವಚನ ಸಾಹಿತ್ಯ ಪ್ರಸ್ತುತ ಭೋಗ ಜೀವನಕ್ಕೆ ಅರ್ಥವಾಗುತ್ತಿಲ್ಲ. ಇದಕ್ಕೆ ಪರಿಹಾರವೇನು ?
ಜಾತಿ ರಾಜಕಾರಣಿಗಳಿಗೆ ಈ ಮತ್ತೆ ಕಲ್ಯಾಣ’ ಕಾರ್ಯಕ್ರಮದ ಮೂಲಕ ಪಾಠವಾಗಬೇಕು. ಇದು ಹೇಗೆ ಸಾಧ್ಯ?
ಬಸವಣ್ಣನವರು ಬಯಸಿದ್ದು ಸಮಸಮಾಜದ ನಿರ್ಮಾಣ. ಬಸವಣ್ಣನವರನ್ನು ಮುಂದಿಟ್ಟುಕೊಂಡು ಲಿಂಗಾಯತ ವೀರಶೈವ ಅಂತ ದಿನನಿತ್ಯ ಸಂಘರ್ಷವಾಗುತ್ತಿದೆ ಇದು ಎಷ್ಟರಮಟ್ಟಿಗೆ ಸರಿ?
ಹೆಚ್ ಎಸ್ ದ್ಯಾಮೇಶ್