ಆಗಸ್ಟ್ 08 ಗುರುವಾರ, ಮಂಡ್ಯ
ಮತ್ತೆ ಕಲ್ಯಾಣದ ಭಾಗವಾಗಿ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಪ್ರಾಕೃತಿಕ ವಿಕೋಪದಿಂದ ಮನುಕುಲ ತಲ್ಲಣಿಸಿದೆ. ಒಂದು ಕಡೆ ಅತಿವೃಷ್ಟಿ, ಇನ್ನೊಂದೆಡೆ ಅನಾವೃಷ್ಟಿ. ಇದಕ್ಕೆ ಮೂಲ ಕಾರಣ ಮನುಷ್ಯ. ತನ್ನ ಆಸೆಗಳನ್ನು ಮಿತಿಯಲ್ಲಿಟ್ಟುಕೊಂಡಿದ್ದರೆ ಇಂಥ ಪ್ರಾಕೃತಿಕ ವಿಕೋಪಗಳಿಂದ ಸ್ವಲ್ಪಮಟ್ಟಿಗೆ ಪಾರಾಗಬಹುದಿತ್ತು. ಸಾರ್ವಜನಿಕರು ಸಂತ್ರಸ್ತರಿಗೆ ಸಾಧ್ಯವಾದ ನೆರವು; ಬಟ್ಟೆ, ಆಹಾರ, ಹಣವನ್ನು ಉದಾರವಾಗಿ ನೀಡಬೇಕು. ಇಂದು ಹೆಚ್ಚು ಜನರನ್ನು ಪೀಡಿಸುತ್ತಿರುವುದು ಜಾತಿ. ಶರಣರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಜಾತಿ ಅಳಿದು ಹೋಗುವುದು. ಕಲ್ಯಾಣದಲ್ಲಿ ಇದ್ದ 770 ಅಮರ ಗಣಂಗಳು ವಿವಿಧ ಜಾತಿಯವರು. ಅವರೆಲ್ಲರೂ ಜಾತಿಯನ್ನು ಮೀರಿ ಅನುಭವ ಮಂಟಪ ಎನ್ನುವ ಒಂದು ವೇದಿಕೆಯಡಿ ಬಂದರು. ವೃತ್ತಿ ಬೇರೆ ಕಾಯಕ ಬೇರೆ. ನಿತ್ಯ ಮಾಡುವ ಕೆಲಸ-ಕಾರ್ಯಗಳು ವೃತ್ತಿ. ಕಾಯಕ ವ್ಯಕ್ತಿಯ ಹಿತವನ್ನು, ಸಮಾಜದ ಹಿತವನ್ನು ಗಮನಿಸುವುದು. ಕಾಯಕದಲ್ಲಿ ಮೋಸ, ವಂಚನೆಗೆ ಅವಕಾಶವಿಲ್ಲ. ವೇಶ್ಯಾ ವೃತ್ತಿ ಒಂದು ಕಾಯಕವಾಗಲಾರದು. ಶರಣರು ಸತ್ಯ ಹೇಳಿದ್ದರಿಂದ ಪರೋಹಿತಷಾಹಿಯ ಆಕ್ರೋಷಕ್ಕೆ ತುತ್ತಾದರು. ಬಾಲಕನಾಗಿದ್ದಾಗಲೇ ಬಸವಣ್ಣ ತನ್ನ ಅಕ್ಕನಿಗಿಲ್ಲದ ಜನಿವಾರ ತನಗೆ ಬೇಡ ಎಂದು ಪ್ರತಿಭಟಿಸಿ ಮನೆಯಿಂದ ಹೊರನಡೆದರು. ಇಂದಿನ ಮಂತ್ರಿಗಳಿಗೂ ಅಂದಿನ ಬಸವಣ್ಣನವರಿಗೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ತನ್ನ ಆದರ್ಶಗಳಿಗೆ ಧಕ್ಕೆಯಾದ ಕೂಡಲೆ ಬಸವಣ್ಣ ರಾಜಿನಾಮೆ ನೀಡಿದರು. ಕಾಯಕಶೀಲರಿಗೆ ಮಾತ್ರ ಮಹಾಮನೆ ಮತ್ತು ಅನುಭವ ಮಂಟಪಕ್ಕೆ ಪ್ರವೇಶವಿತ್ತು. ಆಸೆ, ಆಮಿಷವಳಿದವರು ಶರಣರು. ಸತ್ಯಶುದ್ಧ ಕಾಯಕ ಮಾಡುವವರಿಗೆ ಬಡತನವಿಲ್ಲ ಎನ್ನುವುದನ್ನು ಶರಣರು ನಡೆದು ತೋರಿದರು. ಈ ಪರಂಪರೆ ನಾಡಿನಲ್ಲಿ ಎಲ್ಲೆಡೆ ಬೆಳೆದು ಬರಬೇಕಿದೆ. ಎಲ್ಲರೂ ಕಾಯಕಶೀಲರಾದರೆ ರಾಜ್ಯದ ಭಂಡಾರ ತುಂಬಿ ತುಳುಕುವುದು. ಇಷ್ಟಲಿಂಗ ಪೂಜೆ ಜಾರಿಗೆ ಬಂದರೆ ದೇವಸ್ಥಾನಗಳನ್ನು ಕಟ್ಟುವ ಅವಶ್ಯಕತೆಯಿಲ್ಲ. ದೇಹವೇ ದೇವಾಲಯವಾದಾಗ ಮೋಸ, ವಂಚನೆ, ಸುಳ್ಳು ಹೇಳಲು ಸಾಧ್ಯವಾಗದು. ಇಂಥ ಅರಿವನ್ನು ನಮಗೆ, ಜನಪ್ರತಿನಿಧಿಗಳಿಗೆ, ವಿದ್ಯಾರ್ಥಿಗಳಿಗೆ ಮೂಡಿಸುವ ಪ್ರಯತ್ನವೇ ಮತ್ತೆ ಕಲ್ಯಾಣ. ಜಾತಿ, ಧರ್ಮ, ಪಕ್ಷಾತೀತವಾಗಿ ವ್ಯಕ್ತಿಗಳನ್ನು ಪರಿವರ್ತನೆ ಮಾಡುವುದು. ಜನಸಾಮಾನ್ಯರನ್ನು ಬದಲಾಯಿಸುವುದು ಸುಲಭ, ನೇತಾರರನ್ನು ಬದಲಾಯಿಸುವುದೇ ಕಷ್ಟ. ಹಾಗಾಗಿ ಮೊದಲು ಅವರನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು. ನೇತಾರ ಬದಲಾವಣೆಯಾದರೆ ಮತದಾರ ಖಂಡಿತವಾಗಿಯೂ ಬದಲಾಣೆಯಾಗುವನು. ವಿದ್ಯಾರ್ಥಿಗಳಲ್ಲಿ ಬದಲಾಗುವ ಮನಸ್ಸಿದೆ. ಅವರಿಗೆ ಸರಿಯಾದ ಮಾರ್ಗದರ್ಶನ ಬೇಕಿದೆ. ಹಾಗಾಗಿಯೇ ಈ ಮತ್ತೆ ಕಲ್ಯಾಣ ಎಂದರು.
`ಕಲ್ಯಾಣ ಕ್ರಾಂತಿ ಮತ್ತು ಆನಂತರ’ ವಿಷಯ ಕುರಿತಂತೆ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನಟರಾಜ್ ಹುಳಿಯಾರ್ ಕಲ್ಯಾಣ ಅನ್ನುವುದೊಂದು ಸ್ಥಳವಲ್ಲ; ಪರಿಕಲ್ಪನೆ, ಕನಸು, ಆದರ್ಶ. ಸಮಾಜದಲ್ಲಿದ್ದ ಅಸಮಾನತೆಗಳನ್ನು ತೊಡಗಿಸಬೇಕು ಎನ್ನುವ ಭಾವನೆ ನಮ್ಮ ಹಿರಿಕರಿಗೆ ಅನ್ನಿಸಿದ್ದರ ಫಲವೇ ಕಲ್ಯಾಣ ರಾಜ್ಯ. ಬಸವಣ್ಣನ ಕನಸಿನ `ಕಲ್ಯಾಣ’ದ ಬಿಕ್ಕಟ್ಟಿನ ನಂತರ ವಚನಕಾರರು ದಿಕ್ಕಾಪಾಲಾದರು. ಇದು ದುರಂತಮಯ ಘಟ್ಟವಾದಂತೆ ಕನಸಿನ ಘಟ್ಟವೂ ಹೌದು. ಅಂದು ವಚನಗಳನ್ನು ರಕ್ಷಿಸಿದ್ದರ ಫಲವೆ ಇಂದು ಮತ್ತೆ ಕಲ್ಯಾಣಕ್ಕೆ ಮುನ್ನುಡಿ ಬರೆಯಲು ಸಾಧ್ಯವಾಗಿರುವುದು. ಬಸವಣ್ಣನ ಕಲ್ಯಾಣದ ಕನಸಿನಿಂದ ನಾಯಕರು ಭ್ರಮನಿರಸನಗೊಂಡಿರಬಹುದು. ಆದರೆ ಜನಸಾಮಾನ್ಯರು ಈ ಕನಸನ್ನು ಬಿಟ್ಟುಕೊಡುವವರಲ್ಲ. ಬಸವಣ್ಣನವರಿಗೆ ಅಂದು ತುರ್ತಾಗಿ ಬೇಕಾದದ್ದು ಪ್ರಿಂಟಿಂಗ್ ಪ್ರೆಸ್ ಎಂದು ಪಿ ಲಂಕೇಶ್ ಹೇಳುತ್ತಿದ್ದರು. ವಚನ ಚಳುವಳಿ ಮುಂದೆ ಜನಪದ ಕಲೆಯಾಗಿ ಬೆಳೆಯಿತು. ಜನಸಾಮಾನ್ಯರು ವಚನಗಳನ್ನು ರಕ್ಷಣೆ ಮಾಡಿದ್ದರಿಂದ ಅವು ಇಂದು ನಮಗೆ ಸಿಕ್ಕಿವೆ. ಕಲ್ಯಾಣವು ಅರಂಭಿಸಿದ ಸಮ ಸಮಾಜ ನಿರ್ಮಾಣದ, ಆದರ್ಶದ ಕನಸನ್ನು ನಾವ್ಯಾರೂ ಬಿಟ್ಟು ಕೊಡಬಾರದು. ಶರಣರು ಒಬ್ಬರನ್ನೊಬ್ಬರು ಹೊಗಳಿ ಬೆಳೆದವರಲ್ಲ; ವಿಮರ್ಶಿಸಿ ಬೆಳೆದವರು. ಬಸವಣ್ಣ ತಾಯಿ, ತಂದೆ, ಸ್ನೇಹಿತ, ಚಿಂತಕ, ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ… ಮಂಟೆಸ್ವಾಮಿ, ಮಲೆಮಹದೇಶ್ವರರೊಳಗೂ ಬಸವಣ್ಣನ ಚಿಂತನೆಗಳು ಅಡಗಿವೆ. ಸಾಹಿತ್ಯ, ಧರ್ಮ, ವೈಚಾರಿಕ ಚಿಂತನೆಗಳ ಕೊಂಡಿಯಾಗಿ ಉಳಿದಿರುವುದು ವಚನ ಸಾಹಿತ್ಯವೊಂದೇ. ನೊಂದ ಜಾತಿಗಳಿಂದ ಬಂದ ಜನರು ದೊಡ್ಡನಾಯಕರಾಗುವರು. ವಚನ ಚಳುವಳಿಯ ಒಳಗೆ ಇಂದಿನ ಸಕಲ ಪ್ರಶ್ನೆಗಳೂ ಇವೆ. ಸಕಲ ಜಾತಿ, ಕಾಯಕಗಳ ಮೂಲಕ ವಚನಜ್ಞಾನ ಮೂಡಿಬಂದಿದೆ. ವಚನ ಸಾಹಿತ್ಯದ ರಚನೆ ಇಂದಿಗೂ ಮುಂದುವರಿದಿದೆ. ಜನಪದರ ಸಾಮರಸ್ಯದ ಕೊಡುಗೆ ಅನನ್ಯವಾದುದು. ಭಾರತದ ಅನೇಕ ಧರ್ಮಗಳು ಹೊರಗಿನವು; ಬಸವ ಧರ್ಮ, ಲಿಂಗಾಯತ ಧರ್ಮ ಮಾತ್ರ ಒಳಗಿನದು. ಇದು ಎಲ್ಲರೂ ಅಂಗೀಕಾರ ಮಾಡುವ, ಅಪ್ಪಿಕೊಳ್ಳುವ ಧರ್ಮ. ವಚನಗಳ ಅಧ್ಯಯನಕ್ಕೇ ತಮ್ಮ ಜೀವನವನ್ನು ಮುಡಿಪಾಗಿಸಿದ್ದ ಎಂ ಎಂ ಕಲ್ಬುರ್ಗಿಯವರ ಕಗ್ಗೊಲೆ `ಕೆಟ್ಟಿತ್ತು ಕಲ್ಯಾಣ’ ಎನ್ನುವುದನ್ನು ಸಾಂಕೇತಿಸುತ್ತದೆ. ವಚನ ಸಾಹಿತ್ಯ ಜಾತ್ಯತೀತ ನಿಲುವಿಗೆ ಬದ್ಧರಾಗುವಂತೆ ಯುವಕರನ್ನು ಪ್ರೇರೇಪಿಸುವುದು. ಹೀಗಾಗಿ ವಚನಗಳ ತಿಳುವಳಿಕೆಯನ್ನು ಯುವಕರಿಗೆ ತಿಳಿಸಬೇಕಾಗಿದೆ. ಧರ್ಮವನ್ನು ಹಿಂಸೆಗೆ ಬಳಸುವವರು ಧರ್ಮವನ್ನು ಓದಿದವರಲ್ಲ. ಕಲ್ಯಾಣವೆಂದರೆ ಸಹಭಾಗಿತ್ವ, ಎಲ್ಲರ ದನಿಗಳನ್ನು ಕೇಳಿಸಿಕೊಳ್ಳುವುದು, ನ್ಯಾಯ, ಸಂವಾದ, ದುರಹಂಕಾರವನ್ನು ಬಿಟ್ಟ ಭಾಷೆ. ಕಲ್ಯಾಣದ ಪರಿಭಾಷೆ ಹಳೆಯ ಪರಿಭಾಷೆಗೆ ಸಿಲುಕಿಕೊಳ್ಳದೆ ಹೊಸ ಪರಿಭಾಷೆಗೆ ಒಗ್ಗಿಕೊಳ್ಳಬೇಕು. ಬಸವಣ್ಣ ಚಳುವಳಿಯನ್ನು ಸಾಂಸ್ಕೃತಿಕವಾಗಿ ಬದಲಾವಣೆಗೆ ಪ್ರಯತ್ನಿಸಿದ್ದ ಕಾರಣ ಅವರ ಚಳುವಳಿ ಕುಸಿಯಿತು. ಮಠಮಾನ್ಯಗಳು ವಚನಗಳನ್ನು ಬಿತ್ತುವ ಪ್ರಯತ್ನ ಮಾಡುತ್ತಿವೆ. ನಿದ್ದೆಯಲ್ಲಿ ಎದ್ದಂತೆ ಮತ್ತೆ ಕಲ್ಯಾಣದ ಕನಸಿಗೆ ವಾಪಾಸಾಗಿದ್ದೇವೆ. ವಚನಕಾರರ ಚಳುವಳಿಯಲ್ಲಿ ಆರ್ಥಿಕ ಪ್ರಶ್ನೆಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಇಂದು ಶ್ರಮಜೀವಿಗಳನ್ನು, ಕೃಷಿಕರನ್ನು ನಿರ್ನಾಮ ಮಾಡುವ ಹುನ್ನಾರಗಳು ನಡೆದಿವೆ. ಪೇಜಾವರ ಶ್ರೀಗಳು ಮೊದಲು ತಾವು ವಚನ ಸಾಹಿತ್ಯದ ಮೊದಲ ಎರಡು ಸಂಪುಟಗಳನ್ನು ಓದಿದರೆ ಅವರು ವಚನ ಧರ್ಮಕ್ಕೇ ಬರುವುದರಲ್ಲಿ ಅನುಮಾನವಿಲ್ಲ ಎಂದರು.
ವಚನಕಾರ್ತಿಯರು ಮತ್ತು ಕಾಯಕ ಕುರಿತಂತೆ ಮಾತನಾಡಿದ ಡಾ. ಎಂ ಎಸ್ ಆಶಾದೇವಿ `ಮತ್ತೆ ಕಲ್ಯಾಣ’ ಅಭಿಯಾನ ಎಂ ಎಂ ಕಲ್ಬುರ್ಗಿಯವರ ಕನಸು ನನಸು ಮಾಡುವ ಯೋಜನೆ. ಕಾಯಕಕ್ಕೆ ದೊಡ್ಡ ಮಹತ್ವವನ್ನು ನೀಡಿದವರು ಶರಣೆಯರು. ಕಾಯಕವನ್ನು ಪುರಷರಷ್ಟೇ ಸಮಾನವಾಗಿ, ಒಂದೇ ವೇದಿಕೆಯ ಮೇಲೆ ತರುವ ಪ್ರಯತ್ನ ವಚನಕಾರ್ತಿಯರದು. ವಚನಕಾರ್ತಿಯರಿಗೆ ಕಾಯಕ ಒಂದು ಪ್ರಾಯೋಗಿಕ ದಾರಿಯಾಗಿತ್ತೇ ಹೊರತು; ಜೀವನೋಪಯದ ದಾರಿಯಾಗಿರಲಿಲ್ಲ. ಕಾಯಕದ ಬಗೆಗೆ ಆತ್ಮವಿಶ್ವಾಸವನ್ನು ಘನತೆಯನ್ನು ತಂದುಕೊಟ್ಟವರು ವಚನಕಾರ್ತಿಯರು. ಕಾಯಕದ ತೀವ್ರತೆ ಗಂಡಿಗಿಂತ ಹೆಣ್ಣಿನಲ್ಲಿ ಹೆಚ್ಚು ತೀವ್ರವಾದುದಾಗಿದೆ ಎಂದು ವಚನಕಾರ್ತಿಯರು ನಡೆದು ತೋರಿಸಿದರು. ಇಂದು ಮಹಿಳೆ ಮಾಡುವ ಕೆಲಸಗಳನ್ನು ಕಾಯಕ ಎಂದು ಗುರುತಿಸದೇ ಇರುವುದು ದುರದೃಷ್ಟಕರ ಸಂಗತಿ. ಗೃಹಿಣಿಯ ಕೆಲಸವೂ ಕಾಯಕವೇ. ಮಹಿಳೆಯರು ತಮಗೆ ಬೇಕಾದುದೆಲ್ಲವನ್ನೂ ತಮ್ಮ ಕಾಯಕದಿಂದಲೇ ಪಡೆದುಕೊಳ್ಳುವವರು. ಅಕ್ಕಮ್ಮ `ಸಮಶೀಲ, ಸಮಗ್ರಾಹಕ’ ಕೇವಲ ಹೆಣ್ಣಿಗೆ ಒಡ್ಡಿರುವ ಸವಾಲಷ್ಟೇ ಅಲ್ಲ; ಪುರುಷರಿಗೂ ಅನ್ವಯಿಸುವುದು ಎನ್ನುವರು. ದೇವದಾಸಿಯ ಹಿನ್ನೆಲೆಯಲ್ಲಿ ಬಂದ ಅಕ್ಕಮ್ಮ ವ್ರತ ಹೀನರಿಗೆ ದೇವರು ಒಲಿಯುವುದಿಲ್ಲ ಎಂದು ಹೇಳುವಳು. ತನ್ನ ವ್ಯಕ್ತಿತ್ವದ ಆಗುಹೋಗುಗಳಿಗೆ `ತಾನೇ ಪ್ರಾಮಾಣು’ ಎಂದವರು ಶರಣೆಯರು. ನಾನು ಧೀರೆ ಎನ್ನುವದುನ್ನು ಬಲ್ಲೆ ಎನ್ನುವುದನ್ನೂ ಹೇಳುವರು. ದಲಿತರಿಗೆ ಸಿಕ್ಕಷ್ಟು ಆದ್ಯತೆ ಶರಣೆಯರಿಗೆ ಸಿಕ್ಕಿದೆ ಎಂದು ಹೇಳುವುದು ಕಷ್ಟ. ಮಾಡುವ ಯಾವುದೇ ಕೆಲಸಗಳನ್ನು ಉತ್ಕಟವಾಗಿ ಪ್ರೀತಿಸಿದವರು. ಹಾದರ ಕಾಯಕದ ಗಂಗಮ್ಮ `ಆವ ಕಾಯಕ ಮಾಡಿದಡೂ ಒಂದೇ ಕಾಯಕ’ ಎಂದರು. ಸಂಕವ್ವೆ ನಿರ್ಲಜ್ಜೇಶ್ವರ ಎಂದು ಹೇಳುವಾಗ ಯಾವ ನಿರ್ಲಜ್ಜೆಯನ್ನು ಹೇಳುತ್ತಾಳೆ ಎನ್ನುವುದು ಮಾರ್ಮಿಕವಾಗಿದೆ. ಒತ್ತೆಯ ಮೇಲೊಂದು ಒತ್ತೆಯ ಹಿಡಿಯಲಾರೆ ಎನ್ನುವ ಮೂಲಕ ಏಕದೇವೋಪಾಸನೆಯನ್ನು ಸಾರವರು. ನಮ್ಮ ಭಿನ್ನತೆಯಿದ್ದು ಬೆರೆಯಬಹುದು ಎನ್ನುವುದೇ ಮತ್ತೆ ಕಲ್ಯಾಣದ ಮಹದಾಶಯ ಎಂದರು.
*
ಬೇಬಿಮಠದ ಶ್ರೀ ತ್ರಿನೇತ್ರಾನಂದ ಸ್ವಾಮೀಜಿಗಳು* ಮಾತನಾಡಿ ಕತ್ತರಿಯ ಗುಣ ಕತ್ತರಿಸುವುದು. ಸೂಜಿಯ ಗುಣ ಕೂಡಿಸುವುದು. ಸೂಜಿಯಾಗಿ ಕತ್ತರಿಸಿದುದನ್ನು ಹೊಲೆಯುವ ಕೆಲಸವನ್ನು ಪಂಡಿತಾರಾಧ್ಯ ಶ್ರೀಗಳು ಮತ್ತೆ ಕಲ್ಯಾಣದ ಮೂಲಕ ಮಾಡುತ್ತಿದ್ದಾರೆ. 12 ನೆಯ ಶತಮಾನ ಯಾರನ್ನೂ ಹೊರಗಿಡದೆ ಇವ ನಮ್ಮವ, ಇವ ನಮ್ಮವ ಎಂದುದು. ವಚನ ಸಾಹಿತ್ಯ ಎಲ್ಲ ಸಿದ್ಧಾಂತಗಳಿಗಿಂತಲೂ ಮಿಗಿಲಾದುದು. ಜಗತ್ತಿನ ಎಲ್ಲ ಧರ್ಮಗಳ ಸಾರವನ್ನು ಒಳಗೊಂಡಿರುವುದು. ಸ್ವಾರ್ಥ ಕಡಿಮೆಯಾಗಿ ನಿಸ್ವಾರ್ಥ ಹೆಚ್ಚು ಮಾಡುವುದೇ ಎಲ್ಲದಕ್ಕಿಂತ ಮಿಗಿಲಾದ ಸಿದ್ಧಾಂತ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಕೆ ಟಿ ಶ್ರೀಕಂಠೇಗೌಡರು ಸ್ವಾಗತಿಸಿದರೆ, ಅನುಮಪ ಕಾರ್ಯಕ್ರಮ ನಿರ್ವಹಿಸಿದರು. ಮತ್ತೆ ಕಲ್ಯಾಣ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ಸಭೆಯ ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ `ಮೋಳಿಗೆ ಮಾರಯ್ಯ’ ನಾಟಕ ಮನೋಜ್ಞವಾಗಿ ಪ್ರದರ್ಶನಗೊಂಡಿತು. ನಂತರ ನಾಟಕ ಕುರಿತಂತೆ ಕೆಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಮಹಾಕವಿ ಕುವೆಂಪು ಮತ್ತು ಕೆ ವಿ ಶಂಕರೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಸಾಮರಸ್ಯ ನಡಿಗೆಗೆ ಚಾಲನೆ ನೀಡಲಾಯಿತು. ಶರಣರ ಸ್ಥಬ್ಧ ಚಿತ್ರಗಳನ್ನಳ್ಳ ವಿಶೇಷ ವಾಹನದ ಜೊತೆ ವಿವಿಧ ಧಾರ್ಮಿಕ ನೇತಾರರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಕಲಾತಂಡಗಳು ಹೆಜ್ಜೆ ಹಾಕಿದವು. ಮತ್ತೆ ಕಲ್ಯಾಣದ ಧ್ವಜಗಳು ಹಾರಾಡುತ್ತಿದ್ದವು.
ವಿದ್ಯಾರ್ಥಿಗಳೊಡನೆ ಸಂವಾದ
ಆಗಸ್ಟ್ 0೮, ಮಂಡ್ಯ.; ಮತ್ತೆ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ `ವಿದ್ಯಾರ್ಥಿಗಳ ಜೀವನ ಬಂಗಾರದಂತಹ ಜೀವನ’ ಎನ್ನುವ ಮಾತಿದೆ. ಅದು ಸತ್ಯವಾ? ಖಂಡಿತಾ ಇಲ್ಲ. ಇದಕ್ಕೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪವೇ ಕಾರಣ. ಪದವಿಗಳಿಸಿ, ಉದ್ಯೋಗ ದೊರಕಿಸಿಕೊಡುವುದೇ ಶಿಕ್ಷಣದ ಉದ್ದೇಶವಾಗಿದೆ. ವಾಸ್ತವವಾಗಿ ಶಿಕ್ಷಣ ಪಡೆದವರು ಸುಸಂಸ್ಕೃತರಾಗಿ ಸಮ ಸಮಾಜವನ್ನು ನಿರ್ಮಾಣ ಮಾಡುವ ಶಕ್ತಿಯನ್ನು ಪಡೆಯ ಬೇಕಾಗಿತ್ತು. ಆದರೆ ಇಂದು ಮನುಷ್ಯ-ಮನುಷ್ಯರ ಮಧ್ಯೆ ಜಾತಿ, ಮತ, ಪಂಥ, ಭಾಷೆ, ದೇಶ, ಗಡಿರೇಖೆಗಳಂಥ ಗೋಡೆಗಳು ನಿರ್ಮಾಣವಾಗುತ್ತಿವೆ. ನಮ್ಮ ಹಿರಿಯ ಗುರುಗಳು ಹೇಳುತ್ತಿದ್ದರು; ಮಕ್ಕಳಿಗೆ ವ್ಯಾವಹಾರಿಕ, ಔದ್ಯೋಗಿಕ, ಮತ್ತು ಪಾರಮಾರ್ಥಿಕ ಶಿಕ್ಷಣ ನೀಡಬೇಕು ಎಂದು. ಈಗ ಇಂತಹ ಶಿಕ್ಷಣ ದೊರಕುತ್ತಿಲ್ಲ. ಹಿಂದೆ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಕಾಯಕ ಶ್ರದ್ಧೆಯ ಜೊತೆಗೆ ಅನ್ಯೋನ್ಯವಾಗಿ ಬದುಕುವುದನ್ನು ಕಲಿಸಿಕೊಡುತ್ತಿದ್ದರು. ಇಂದು ಆದರ್ಶ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಸಾಧನೆಯಿಲ್ಲದೆ ಸತ್ತರೆ ಸಾವಿಗೆ ಅವಮಾನ. ಸಾಧನೆ ಮಾಡಿ ಸತ್ತರೆ ಸಾವಿಗೂ ಗೌರವ. ಇವತ್ತು ಜಗತ್ತು ವೈಜ್ಞಾನಿಕ, ವೈಚಾರಿಕ, ತಾಂತ್ರಿಕವಾಗಿ ಅದ್ಭುತ ಸಾಧನೆ ಕಂಡಿದೆ. ಇದು ಮಾತ್ರ ಸಾಧನೆಯಲ್ಲ. ಆದರ್ಶ ವ್ಯಕ್ತಿತ್ವ ಕಟ್ಟಿಕೊಳ್ಳುವುದೇ ನಿಜವಾದ ಸಾಧನೆ. ಮನೆಯಿಂದಾಗಿ ಬಹಳ ದೊಡ್ಡವರಾಗಿದ್ದೇವೆ; ಮನಸ್ಸಿನಿಂದ ಬಹಳ ಚಿಕ್ಕವರಾಗಿದ್ದೇವೆ. ಸುಖವನ್ನು ಹುಡುಕಿಕೊಂಡು ಹೊರಗೆ ಹೋಗುತ್ತೇವೆ. ಆದ್ರೆ ಸುಖ ನಮ್ಮಲ್ಲಿಯೇ ಇದೆ ಎನ್ನುವ ಅರಿವು ನಮಗೆ ಆಗಬೇಕಾಗಿದೆ. ಆದರ್ಶಗಳನ್ನಿಟ್ಟುಕೊಂಡು ಬದುಕಿದಾಗ ನಮ್ಮಲ್ಲಿಯೇ ಸುಖ ಕಾಣಬಹುದು. ಪಂಚೇಂದ್ರಿಯಗಳ ಮೇಲೆ ಹತೋಟಿ ಇಟ್ಟುಕೊಳ್ಳಬೇಕು. ಮನಸ್ಸೇ ನಮ್ಮ ಉನ್ನತಿ ಹಾಗೂ ಅವನತಿಗೆ ಕಾರಣ. ಶರಣರು ದೃಢ ಮನಸ್ಸಿನ ಮೂಲಕ ಪಂಚೇಂದ್ರಿಯಗಳ ಮೇಲೆ ಹಿಡಿತವನ್ನಿಟ್ಟುಕೊಂಡಿದ್ದರು. ಶರಣರು ಕಣ್ಣಿಗೆ ಶೃಂಗಾರ ಕಾಡಿಗೆಯಲ್ಲ; ಗುರುಹಿರಿಯನ್ನು ನೋಡುವುದು. ತುಟಿಗಳಿಗೆ ಶೃಂಗಾರ ಬಣ್ಣಹಚ್ಚುವುದಲ್ಲ; ಸತ್ಯವ ನುಡಿವುದು ಎಂದರು. ನಾವು ಸೃಷ್ಟಿಯನ್ನು ಬದಲಾಯಿಸಲು ಸಾಧ್ಯವಿಲ್ಲ; ದೃಷ್ಟಿಯನ್ನು ಬದಲಾಯಿಸಿಕೊಳ್ಳಬೇಕು. ಬಸವಣ್ಣನವರದು ನಯವಾದ ವ್ಯಕ್ತಿತ್ವ ಆದರೆ ಗಟ್ಟಿ ನಿಲುವು. ಹೀಗಾಗಿಯೇ ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಮುಂದೆ ನವ ಸಮಾಜವನ್ನು ನಿರ್ಮಾಣ ಮಾಡುವಂಥವರು. ಆ ಕಾರಣಕ್ಕಾಗಿಯೇ `ಮತ್ತೆಕಲ್ಯಾಣʼ. ಇದರ ಭಾಗವಾಗಿ ವಿದ್ಯಾರ್ಥಿಗಳ ಜೊತೆ ಸಂವಾದ. ಇಂದು ಸಮಾಜದ ರೋಗಪೀಡಿತವಾಗಿದೆ. ಈ ರೋಗಕ್ಕೆ ʼಮತ್ತೆಕಲ್ಯಾಣʼ ಅಭಿಯಾನದ ಮೂಲಕ ಚಿಕಿತ್ಸೆ ನೀಡಬೇಕಾಗಿದೆ. ನಮ್ಮ ಅಂತರಂಗದ ಅವಲೋಕನ, ಧ್ಯಾನ, ಮೌನ, ಪ್ರಾರ್ಥನೆ ಮಾಡುವ ಮೂಲಕ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಬಸವಣ್ಣನವರು ಜಾತಿ, ಕುಲ, ಧರ್ಮದಿಂದ ಹೊರಬಂದು ಸಮ ಸಮಾಜವನ್ನು ನಿರ್ಮಾಣ ಮಾಡಿದರು. ವಿಭೂತಿ ಭಕ್ತಿ, ಜ್ಞಾನ, ಕ್ರಿಯೆಗಳ ಸಂಕೇತ. ಜಾತಿ ಎಲ್ಲ ಕಾಲಕ್ಕೂ ಇದೆ. ಬಸವಣ್ಣನವರು ಅನುಭವ ಮಂಟಪದಲ್ಲಿ ಕಾಯಕ ಜೀವಿಗಳ ಮೂಲಕ ಜಾತಿಯನ್ನು ಹೊಡೆದೋಡಿಸುವ ಪ್ರಯತ್ನ ಮಾಡಿದರು. ಜಗತ್ತಿನ ಮೊಟ್ಟಮೊದಲ ಸಂಸತ್ತು ʼಅನುಭವಮಂಟಪʼ. ಈಗ ನಮ್ಮ ಸಂಸತ್ತಿನಲ್ಲಿ ಅನುಭವ ಮಂಟಪದ ರೀತಿ ಚರ್ಚೆಯಾಗಬೇಕು. ಲಿಂಗಾಯತ ಎನ್ನುವುದು ತತ್ವ ಸಿದ್ಧಾಂತವೇ ಹೊರತು; ಜಾತಿಯಲ್ಲ. ನಮ್ಮ ಮಠದಲ್ಲಿ ಯಾವುದೇ ಜಾತಿ ಇಲ್ಲ. ನಮ್ಮಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧ ಮಾದಿಗ ಜಾತಿಯವರು. ನಮ್ಮಮಠದಲ್ಲಿ ಅಂತರ್ ಜಾತಿಯ ವಿವಾಹಗಳು ನಿರಂತರವಾಗಿ ನಡೆಯುತ್ತಿವೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಜಯಪ್ರಕಾಶ್ ಗೌಡ ಪ್ರಕೃತಿಯ ಮುಂದೆ ನಾವ್ಯಾರು ದೊಡ್ಡವರಲ್ಲ. ಪ್ರಕೃತಿ ಅಂದ್ರೆ ದೇವರು, ದೇವರು ಅಂದ್ರೆ ಪ್ರಕೃತಿ. ಪಂಡಿತಾರಾಧ್ಯ ಸ್ವಾಮೀಜಿಯವರು ಶರಣರ ವಿಚಾರಗಳನ್ನು ಬಿತ್ತಬೇಕು ಎನ್ನುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳ ಮೂಲಕ ಸಾಣೇಹಳ್ಳಿ ಮಠದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿರೋದು ಸಾರ್ಥಕ. ಸಾಣೇಹಳ್ಳಿ ಚಿಕ್ಕಗ್ರಾಮವಾದರೂ ರಂಗಕ್ಷೇತ್ರದಲ್ಲಿ ಇಡೀ ಜಗತ್ತಿನ ಗಮನವನ್ನು ಸೆಳೆದಿದೆ. ಸಾಂಸ್ಕೃತಿಕ ಕ್ಷೇತ್ರದ ಮೂಲಕ ನವ ಸಮಾಜ ನಿರ್ಮಾಣ ಮಾಡುವುದು ಸ್ವಾಮೀಜಿಗಳ ಆಶಯ. ಇವತ್ತಿನ ರಾಜಕಾರಣದಿಂದ ಸಮಾಜ ಲಜ್ಜೆಗೆಟ್ಟಿದೆ. ೧೨ನೆಯ ಶತಮಾನದಲ್ಲಿ ಕಲ್ಯಾಣ ಎಂಬ ಶಬ್ಧಕ್ಕೆ ವಿಶೇಷ ಅರ್ಥ ಇತ್ತು. ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಆ ಮೂಲಕ ಎಲ್ಲರನ್ನು ಒಂದು ವೇದಿಕೆಯಡಿ ತರುವ ಪ್ರಯತ್ನ ಪಟ್ಟರು. ಇಂದಿಗೂ ಸಮಾಜದಲ್ಲಿ ಜಾತಿ, ಧರ್ಮ, ವರ್ಣ ಇವು ಜನರನ್ನು ಕಿತ್ತುತಿನ್ನುತ್ತಿದೆ. ಇದನ್ನು ಹೋಗಲಾಡಿಸಲೆಂದೇ ʼಮತ್ತೆಕಲ್ಯಾಣʼ. ಹಳ್ಳಿಗಳಲ್ಲಿ ಇಂದಿಗೂ ಅಸ್ಪೃಶ್ಯತೆ, ಜಾತಿ-ಜಾತಿ ನಡುವಿನ ಸಂಘರ್ಷ ತುಂಬಿತುಳುಕ್ತಾ ಇದೆ. ಕಾಯಕಕ್ಕೆ ಶರಣರಷ್ಟು ಮಹತ್ವವನ್ನು ಯಾರೂ ಕೊಟ್ಟಿಲ್ಲ. ಇಂದು ಶ್ರಮಕ್ಕೆ ಹೆಚ್ಚು ಬೆಲೆ ಕೊಡದೇ ಸುಖವನ್ನು ಅನುಭವಿಸುತ್ತಿದ್ದೇವೆ. ಇದರಿಂದಾಗಿಯೇ ಸಮಾಜದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ನಮ್ಮ ಮನಸ್ಸು ಗಟ್ಟಿಯಾದರೆ ನಮ್ಮನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಜಾತಿ ಮೊದಲು ಇರಲಿಲ್ಲ. ಪ್ರಾಣಿಗಳ ಹಾಗೆ ಜೀವಿಸುತ್ತಿದ್ದನು. ನಾಗರೀಕತೆ ಬಂದ ಮೇಲೆ ಜಾತಿ ಹುಟ್ಟಿಕೊಂಡಿತು. ʼಅನುಭವಮಂಟಪʼ ಪ್ರಜಾಪ್ರಭುತ್ವದ ಒಂದು ವ್ಯವಸ್ಥೆ. ಇಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿತ್ತು. ಅನುಭವ ಮಂಟಪದ ಆಶಯ ಮತ್ತು ಇಂದಿನ ಲೋಕಸಭೆ ಮತ್ತು ವಿಧಾನ ಸಭೆಗಳ ಆಶಯವೂ ಒಂದೇ.
ಸಂವಾದಕರಾದ ಕೆ ಟಿ ಶ್ರೀಕಂಠೇಗೌಡ ಮಾತನಾಡಿ ಜಾತಿ ರಹಿತ ಸಮಾಜ ಬೇಕು ಎನ್ನವಂಥದ್ದು ಇಂದಿನ ದೊಡ್ಡ ಕೂಗು. ಇಲ್ಲದೇ ಹೋದರೆ ಮನುಷ್ಯನ ವಿನಾಶಕ್ಕೆ ಜಾತಿಯೇ ಕಾರಣವಾಗಬಹುದು. ಜಾತಿ ವ್ಯವಸ್ಥೆ ಹೋಗಲಾಡಿಸಲು ೧೨ನೆಯ ಶತಮಾನದಲ್ಲಿಯೇ ನಾಂದಿಹಾಡಲಾಗಿದೆ. ಅನುಭವ ಮಂಟಪ ಇಡೀ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ನಿರ್ದೇಶಿಸುವ ಸಂಸತ್ತಾಗಿತ್ತು. ಯಾರು ಸಮಾಜದ ತುಳಿತಕ್ಕೆ ಒಳಗಾಗಿರುತ್ತಾರೋ ಅವರಿಗೆ ಮೀಸಲಾತಿಬೇಕು. ಮೇಲ್ವರ್ಗದಲ್ಲಿರುವ ಬಡವರಿಗೂ ಮೀಸಲಾತಿಬೇಕು. ಎಲ್ಲ ಜಾತಿಗಳು ಸಮಸ್ಥಿತಿಗೆ ಬಂದಾಗ ಜಾತಿ ನಿರ್ಮೂಲನೆ ಆಗುತ್ತದೆ. ಇಂದು ಈ ಹಿಂದಿಗಿಂತ ಅಸ್ಪೃಶ್ಯತೆ ಸಾಕಷ್ಟು ಸುಧಾರಣೆಯಾಗಿದೆ. ಮೊದಲು ನಮ್ಮನ್ನು ನಾವು ಪ್ರೀತಿಸಬೇಕು. ಆಮೇಲೆ ಇತರರನ್ನು ಪ್ರೀತಿಸಬೇಕು. ಜಾತಿಯೆಂಬ ವಿಷಸರ್ಪವನ್ನು ಹೋಗಲಾಡಿಸುವ ಸಲುವಾಗಿ `ಮತ್ತೆಕಲ್ಯಾಣʼಅಭಿಯಾನ ಮುನ್ನುಡಿ ಬರೆದಿದೆ. ಒಮ್ಮೆಲೇ ಸಮಾಜದಲ್ಲಿ ಪರಿವರ್ತನೆ ಮಾಡುತ್ತೇವೆ ಎಂದರೆ ಸಾಧ್ಯವಿಲ್ಲ. ಹಸಿವಿನಿಂದ ಬಳಲುವಂತಹವನಿಗೆ ಮೊದಲು ಅನ್ನ ಕೊಡುವುದೇ ಮಾನವಧರ್ಮ. ಸಂವಾದಕ್ಕೆ, ಪ್ರಶ್ನೆಗಳನ್ನು ಕೇಳುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೇ `ಮತ್ತೆಕಲ್ಯಾಣ’ ಎನ್ನುವ ಆಂದಲೋನ ಎಷ್ಟು ವಿಶಾಲವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ನಮ್ಮ ಸಂಕುಚಿತ ಮನಸ್ಸುಗಳನ್ನು ವಿಸ್ತಾರ ಮಾಡಿಕೊಳ್ಳುವುದು ಮತ್ತೆಕಲ್ಯಾಣದ ಒಟ್ಟು ಆಶಯ. ಇಡೀ ಸಮಾಜ ಆರೋಗ್ಯಕರ ರೀತಿಯಲ್ಲಿ ನಿರ್ಮಾಣ ಮಾಡುವ ಬಹುದೊಡ್ಡ ಕಾಯಕದಲ್ಲಿ ಪಂಡಿತಾರಾಧ್ಯ ಶ್ರೀಗಳು ತೊಡಗಿದ್ದಾರೆ. ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕಾದುದು ಎಲ್ಲರ ಕರ್ತವ್ಯ ಎಂದರು.
ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು
ಮತ್ತೆ ಕಲ್ಯಾಣ ಅಭಿಯಾನದ ಉದ್ದೇಶವೇನು?
ಮನಸ್ಸಿನ ಮೇಲೆ ಹತೋಟಿ ಸಾಧಿಸುವುದು ಹೇಗೆ?
ಜಾತಿ-ಜಾತಿ ಮಧ್ಯೆ ಸಂಘರ್ಷವಿದೆ. ಬಸವಣ್ಣನವರ ಜಾತಿಯಲ್ಲಿದ್ದುಕೊಂಡೇ ಅವರ ಜಾತಿಯವರೇ ಹೊಡೆದಾಡುತ್ತಾರಲ್ಲ. ಇದು ಯಾಕೆ?
ಬಸವಣ್ಣನವರು ಬ್ರಾಹ್ಮಣ ಶ್ರೇಷ್ಠ ಕುಲವನ್ನು ತ್ಯಜಿಸಿದರು ಅಂತ ಹೇಳಿದ್ರಿ. ಬ್ರಾಹ್ಮಣ ಕುಲ ಶ್ರೇಷ್ಠವೇ ?
೧೨ನೆಯ ಶತಮಾನದ ಶರಣರ ವಿಚಾರ ಧಾರೆಗಳು ಇಂದು ಹೇಗೆ ಪ್ರಸ್ತುತವಾಗಿವೆ?
ಜಾತಿ ಹೇಗೆ ಹುಟ್ಟಿಕೊಂಡಿತು?
ಹಿಂದಿನಿಂದಲೂ ಜಾತಿಯನ್ನಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ಅದನ್ನು ಹೊಡೆದೋಡಿಸಲು ಏನು ಮಾಡಬೇಕು?
ಬಸವಣ್ಣನ ಅನುಭವ ಮಂಟಪವನ್ನು ಈಗಿನ ಲೋಕಸಭೆ, ವಿಧಾನಸಭೆಗಳಲ್ಲಿ ಕಾಣುವುದು ಯಾವಾಗ?
ಇಂದು ಅಸ್ಪೃಶ್ಯತೆಯನ್ನು ನಿವಾರಣೆ ಯಾಕೆ ಮಾಡಲಾಗಿಲ್ಲ?
ಜಾತಿ ವ್ಯವಸ್ಥೆ ಸಮಾಜದಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆಯಾಗಿದೆ. ಆದ್ರೆ ರಾಜಕಾರಣದಲ್ಲಿ ಯಾಕೆ ಸುಧಾರಣೆಯಾಗಿಲ್ಲ?
ಅರ್ಹತೆಗನುಗುಣವಾಗಿ ಉದ್ಯೋಗವನ್ನು ನೀಡಬೇಕು. ಮೀಸಲಾತಿಗನುಗುಣವಾಗಿ ನೀಡುವುದು ಎಷ್ಟು ಸರಿ ?
ಹೆಚ್ ಎಸ್ ದ್ಯಾಮೇಶ್

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)