ಆಗಸ್ಟ್ ೨೫ ಭಾನುವಾರ, ಹಾವೇರಿ
ಹಾವೇರಿಯಲ್ಲಿ 25ನೇ ದಿನದ ಮತ್ತೆ ಕಲ್ಯಾಣ ಆಂದೋಲನ. ಅಭಿಯಾನದಲ್ಲಿ ಸಾರ್ವಜನಿಕ ಸಮಾವೇಶ. ಅನನ್ಯ ಟಿವಿ ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ
ಇಲ್ಲಿನ ಶ್ರೀ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತಾ ಭಾವ ಚಿತ್ರಗಳಿಗೆ ಪುಷ್ಪಾರ್ಣೆ ಮಾಡುವುದು ಒಂದು ಸಂಕೇತವಾಗಬೇಕೇ ಹೊರತು; ಅಂತಿಮ ಗುರಿಯಾಗಬಾರದು. ಮಹತ್ಮರ, ಹಿರಿಯರ ಫೋಟೋಗಳನ್ನು ಪೂಜೆ ಮಾಡುವುದರ ಬದಲಾಗಿ ಅವರ ಆದರ್ಶ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಮುಖ್ಯವಾಗಬೇಕು. ಇಂದು ಅಸಿ-ಮಸಿ-ಕೃಷಿಗಳಲ್ಲಿ ಮಸಿಗಿಂತ ಕೃಷಿ ಮುಖ್ಯವಾಗಬೇಕು. ನೆಮ್ಮದಿಗೆ ದೇವರ ಸ್ಮರಣೆಯೊಂದೇ ಸಾಲದು; ಕಾಯಕ ಶ್ರದ್ಧೆಯೂ ಬೇಕು. ಜಾತಿ, ಧರ್ಮ, ವರ್ಣ, ಪಂಥದ ಗೋಡೆಗಳನ್ನು ಕೆಡವಿ ಸಮಸಮಾಜ ನಿರ್ಮಾಣ ಮಾಡುವುದು ಇಂದು ಅತ್ಯಗತ್ಯ. ಕಲ್ಯಾಣ ಎಂದರೆ ಬೆಳಕು, ಅಭ್ಯುದಯ, ಲೇಸು. ಕತ್ತಲೆಯಿಂದ ಬೆಳಕಿನಡೆಗೆ ಹೋಗಬೇಕಾದುದೇ ಮತ್ತೆ ಕಲ್ಯಾಣ. ಪ್ರತಿಯೊಬ್ಬರ ಅಂತರಂಗದಲ್ಲಿ ಜ್ಞಾನದ ಜ್ಯೋತಿ ಅಡಕವಾಗಿರುತ್ತದೆ. ಮಂಕು ಕವಿದ ಆ ಜ್ಯೋತಿಯ ಮಂಕು ತೆಗೆಯುವ ಕೆಲಸ ಮತ್ತೆ ಕಲ್ಯಾಣದ್ದು. ವಿದ್ಯಾರ್ಥಿಗಳಿಗೆ ಲೌಕಿಕ, ವ್ಯಾವಹಾರಿಕ ಜ್ಞಾನದ ಜೊತೆಗೆ ಆಧ್ಯಾತ್ಮಿಕ ಜ್ಞಾನವೂ ಬೇಕು. ಅಂತರಂಗ ಮತ್ತು ಬಹಿರಂಗವನ್ನು ಒಂದು ಮಾಡಿಕೊಳ್ಳುವುದೇ ಪರಿಪೂರ್ಣ ಬದುಕಿನತ್ತ ಹೆಜ್ಜೆಯಿಡುವ ಮಾರ್ಗ. ಈ ಮಾರ್ಗಕ್ಕೆ ಶರಣರ ವಚನಗಳು ದಾರಿತೋರಬಲ್ಲವು. ವಚನಗಳ ಓದು, ಅರ್ಥದ ಜೊತೆಗೆ ಆಚರಣೆಗೆ ತರಬೇಕು. ಅಂತರಂಗಕ್ಕೆ ಬೆಳಕನ್ನು ನೀಡುವುದೇ ಶಿಕ್ಷಣದ ಮೂಲ ಉದ್ದೇಶವಾಗಬೇಕು. ಬಹಿರಂಗದ ಶಿಕ್ಷಣ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗಬಾರದು. ಈ ಹಿನ್ನೆಲೆಯಲ್ಲಿಯೇ ಇವತ್ತು ಶಿಕ್ಷಿತರೇ ಹೆಚ್ಚು ಅಪಾಯಕಾರಿಯಾಗಿದ್ದಾರೆ. ಸತ್ಯವನ್ನು ಮರೆಮಾಚಿ ಸುಳ್ಳನ್ನು ವೈಭವೀಕರಿಸಿ ಹೇಳುವುದನ್ನು ಕಾಣುತ್ತೇವೆ. ಮನುಷ್ಯನಿಗಿಂತ ಪ್ರಾಣಿಗಳಲ್ಲೂ ಹೆಚ್ಚು ಜ್ಞಾನ, ತಿಳುವಳಿಕೆಯಿದೆ. ಮನುಷ್ಯನಿಗಿಂತ ಪ್ರಾಮಾಣಿಕವಾಗಿರುತ್ತವೆ. ಮನುಷ್ಯ ಪ್ರಾಣಿಗಳಿಗಿಂತ ಭಿನ್ನ; ಅರಿವು ಮತ್ತು ವಿವೇಕ ಎರಡೂ ಇದೆ. ಆದರೆ ಚಂಚಲ ಮನಸ್ಸು ಅವನನ್ನು ಅಧೋಗತಿಗೆ ತಳ್ಳುತ್ತಿದೆ. ಮನುಷ್ಯ ಹುಲಿ, ಸಿಂಹ, ಆನೆಯಂಥ ಪ್ರಾಣಿಗಳನ್ನೂ ತನ್ನ ಹತೋಟಿಯಲ್ಲಿಡುತ್ತಾನೆ. ಆದರೆ ತನ್ನ ಮನಸ್ಸನ್ನು ಹತೋಟಿಯಲ್ಲಿಡಲು ಸೋತಿದ್ದಾನೆ. ವಿದ್ಯಾರ್ಥಿಗಳಿಗೆ ಶ್ರದ್ಧೆ, ಸದ್ಭಾವನೆ ಮುಖ್ಯ. ಫಲವನ್ನು ನಿರೀಕ್ಷಿಸದೇ ಯಾವುದೇ ಕೆಲಸ ಮಾಡುವುದೂ ಕಾಯಕವೇ. ಉದ್ಯೋಗದಲ್ಲಿ ಮೋಸ, ವಂಚನೆ ಇರಬಹುದು ಆದರೆ ಕಾಯಕದಲ್ಲಿ ಪ್ರತಿಫಲಾಕಾಕ್ಷೆಯಿಲ್ಲ. ಆತ್ಮವಿಶ್ವಾಸ ಬಲಗೊಳ್ಳಲು ಮತ್ತೆ ಮತ್ತೆ ವಚನಗಳನ್ನು ಅಭ್ಯಸಿಸಬೇಕು. ಮುಂದಿನ ಸಮಾಜವನ್ನು ಕಟ್ಟುವ ಹೊಣೆಗಾರಿಕೆ ವಿದ್ಯಾರ್ಥಿಗಳದ್ದು. ಈ ಹಿನ್ನೆಲೆಯಲ್ಲಿ ಮುಂದೆ ನಿಮ್ಮ ಮಕ್ಕಳು ಮತ್ತೆ ನಿಮಗೆ ಇಂಥ ಪ್ರಶ್ನೆ ಮಾಡಬಾರದು. ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುವ ಹಾಗೆ ಮನುಷ್ಯನಿಗೆ ಸಂಸ್ಕಾರ ಕೊಟ್ಟರೆ ದೇವನಾಗುತ್ತಾನೆ. ಯಜ್ಞಯಾಗಾದಿಗಳು ಅಜ್ಞಾನದ ಪರಮಾವಧಿ. ಮನಸ್ಸಿನ ತಲ್ಲಣಗಳನ್ನು ಹೋಗಲಾಡಿಸಲು ಇಷ್ಟಲಿಂಗದ ಮೂಲಕ ಮಾಡುವ ಶಿವಯೋಗ ಸಹಕಾರಿ.
ಶ್ರೀ ಸದಾಶಿವ ಸ್ವಾಮಿಗಳು ಮಾತನಾಡಿ ವಚನ ಸಾಹಿತ್ಯದ ಅಧ್ಯಯನ, ಮನನ, ಅನುಷ್ಠಾನದ ಕೊರತೆಯೇ ಇಂದಿನ ನೈತಿಕತೆಯ ಅಧಃಪತನಕ್ಕೆ ಕಾರಣ. ಇತಿಹಾಸವಿಲ್ಲದವನಿಗೆ ಭವಿಷ್ಯವೂ ಇಲ್ಲ ಎನ್ನುವಂತೆ ನಮ್ಮ ಹಿರಿಯರ ಬದುಕು-ಬರಹಗಳ ಅಧ್ಯಯನದ ಅಗತ್ಯವಿದೆ. ಎಲ್ಲ ಧರ್ಮಗಳೂ ದಯೆಯನ್ನೇ ಹೇಳುತ್ತವೆ. ಅವುಗಳ ಆಳ-ಅಗಲ ಅರಿಯದೆ ಅರೆಬೆಂದ ತಿಳಿವಳಿಕಸ್ಥರಿಂದ ಏಕತೆಗೆ ಧಕ್ಕೆಯುಂಟಾಗುತ್ತಿರುವುದು ವಿಷಾದದ ಸಂಗತಿ. ಕಾವಿ ಬೆಂಕಿಯ ಸಂಕೇತ, ತ್ಯಾಗದ ಸಂಕೇತ. ಮನುಷ್ಯನ ದುರ್ಗಣಗಳನ್ನು ಸುಟ್ಟು ತ್ಯಾಗದ ಗುಣಗಳನ್ನು ಬೆಳೆಸಿಕೊಳ್ಳುವುದು. ಮನುಷ್ಯನ ಮನಸ್ಸು ಶುದ್ಧವಾಗಿದ್ದರೆ ಮನೆ-ಮನ ಎರಡೂ ಶುದ್ಧವಾಗಿರುತ್ತವೆ ಎಂದರು.
ಸಂವಾದಕ ಹೆಚ್ ಎಸ್ ದ್ಯಾಮೇಶ್ ಮಾತನಾಡಿ ತಾಂತ್ರಿಕ, ಆರ್ಥಿಕ ಜ್ಞಾನದ ಜೊತೆಗೆ ಆಧ್ಯಾತ್ಮಿಕ ಜ್ಞಾನವೂ ಅಷ್ಟೇ ಮುಖ್ಯ. ಆಧ್ಯಾತ್ಮಿಕ ನೆಲೆಗಟ್ಟು ಗಟ್ಟಿಯಾದರೆ ಜೀವನದಲ್ಲಿ ಎಂತಹ ಕಷ್ಟಗಳೂ ಬಂದರೂ ಸಮರ್ಥವಾಗಿ ಎದುರಿಸಬಹುದು. ಅಧ್ಯಯನಕ್ಕಿಂತ ಅನುಭವದಿಂದಲೇ ಹೆಚ್ಚಿನ ಜ್ಞಾನ ಬರುತ್ತದೆ. ವ್ಯಕ್ತಿ ಹಾಕುವ ಬಟ್ಟೆ ಮುಖ್ಯವಲ್ಲ. ಅವನಲ್ಲಿರುವ ವ್ಯಕ್ತಿತ್ವ ಮುಖ್ಯ. ಜಾತಿ ಹುಟ್ಟಿನಿಂದ ಬಂದದ್ದಲ್ಲ. ಮಾಡುವ ಕಾಯಕದಿಂದ ಬಂದದ್ದು. ಯಶಸ್ಸಿಗೆ ಯಾವ ಅಡ್ಡದಾರಿಗಳೂ ಇಲ್ಲ. ಪರಿಶ್ರಮವೊಂದೇ ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಬಹುದು ಎಂದರು
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು :
ಶಿಕ್ಷಕರು ಜಾತಿ ಬೇಧ ಮಾಡಬಾರದೆಂದು ಹೇಳುತ್ತಾರೆ. ಆದರೆ ಯಾವುದೇ ದಾಖಲೆಗಳನ್ನು ತುಂಬುವಾಗ ಜಾತಿಯನ್ನು ಕೇಳುತ್ತಾರೆ. ಇದು ಎಷ್ಟರಮಟ್ಟಿಗೆ ಸರಿ?
ಶರಣರು ಸತ್ಯ, ಶುದ್ಧವಾಗಿದ್ದರು. ಈಗ ಅದರ ವಿರುದ್ಧವಾಗಿ ನಡೆಯುತ್ತಾರೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
ಈಗ ಮತ್ತೆ ಕಲ್ಯಾಣದ ಮೂಲಕ ಕಲ್ಯಾಣ ರಾಜ್ಯ ಕಟ್ಟಲಿಕ್ಕೆ ಸಾಧ್ಯನಾ?
ಶರಣರ ಕಾಲದಲ್ಲಿ ನಡೆ ನುಡಿ ಒಂದಾಗಿದ್ದವು. ಈಗ ಬೇರೆ ಬೇರೆಯಾಗಿದೆ. ಕಾರಣವೇನು?
ನೈತಿಕತೆ, ನೈಪುಣ್ಯತೆಯನ್ನು ರೂಢಿಸಿಕೊಳ್ಳಲು ಯಾಕೆ ಸೋತಿದ್ದೇವೆ?
ಸಾಧು ಸಂತರು ಹಾಗೂ ಶರಣರಿಗಿರುವ ವ್ಯತ್ಯಾಸವೇನು?
ವಿವಿಧ ಜಾತಿಯ ಮಠಗಳಿಂದ ಸಮಾಸಮಾಜ ನಿರ್ಮಾಣ ಸಾಧ್ಯವೇ?
ನೆಮ್ಮದಿಯ ಬದುಕನ್ನು ನಡೆಸಲು ದೇವರ ಸ್ಮರಣೆ ಮಾಡಿದರೆ ಜೀವನ ಹೇಗಾಗುತ್ತದೆ?
ಪ್ರಸ್ತುತ ದಿನಮಾನಗಳಲ್ಲಿ ಜಾತಿಗೊಂದು ಮಠ ನಿರ್ಮಾಣವಾಗಿದೆ.ಇದರಿಂದ ಮತ್ತೆ ಕಲ್ಯಾಣ ನಿರ್ಮಾಣ ಮಾಡಲು ಸಾಧ್ಯವೇ?
ಅಣುರೇಣುತೃಣಕಾಷ್ಠಗಳಲ್ಲಿ ದೇವರಿದ್ದಾನೆ ಎನ್ನುವುದು ಶರಣರ ನಂಬಿಕೆ. ಹಾಗಾದರೆ ನಾವೆಲ್ಲ ಮಲಿನ ಮಾಡುತ್ತೇವಲ್ಲ. ಆಗ ದೇವರಿಗೆ ಅವಮಾನ ಮಾಡಿದ ಹಾಗೆ ಆಗುವುದಿಲ್ಲವೇ ?
12ನೆಯ ಶತಮಾನದ ಶರಣರು ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು. ಈಗ ಅಂಕುಡೊಂಕುಗಳನ್ನು ತಿದ್ದಲು ಸಾಧ್ಯವೇ?
ಬಸವಣ್ಣನವರ ಪ್ರಕಾರ ಪಂಚಾಂಗಗಳೆಂದರೇನು?
ಬಸವಣ್ಣನವರು ಹೇಳಿದ್ದು ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ. ಆದ್ರೆ ಕೆಲವು ಸ್ವಾಮಿಗಳು ಗುಡಿಗುಂಡಾರಗಳ ಪ್ರತಿಷ್ಠಾಪನೆಗೆ ಹೋಗುತ್ತಾರೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
ಕಾಯಕ ಜೀವಿಗೆ ದೇವರ ಹಂಗಿದೆಯೇ?
ಯಜ್ಞಯಾಗಗಳಿಂದ ರೋಗಗಳು ನಿವಾರಣೆಯಾಗುತ್ತವೆಯೇ?
ಶರಣರು ಪೂಜೆ ಪುನಸ್ಕಾರವನ್ನು ಯಾಕೆ ಖಂಡಿಸಿದರು?
ದೇವರು ಒಳ್ಳೆಯವರಿಗೂ ಕಷ್ಟಕೊಡುತ್ತಾನೆ. ಕೆಟ್ಟವರಿಗೂ ಕಷ್ಟಕೊಡುತ್ತಾನೆ. ಆದರೆ ಕೆಟ್ಟವನಿಗೆ ಅತೀ ಬೇಗ ಫಲಕೊಡುತ್ತಾನೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
ಎಲ್ಲರೂ ಸಮಾನರು ಎಂದು ಹೇಳುವಾಗ ಲಿಂಗಾಯತ, ವೀರಶೈವ ಧರ್ಮ ಬೇರೆ ಬೇರೆ ಮಾಡುತ್ತಿರುವುದು ಸರಿಯೇ?
ನಮ್ಮನ್ನು ಪುಸ್ತಕದ ಕೀಟಗಳನ್ನಾಗಿ ಮಾತ್ರ ಮಾಡುತ್ತಾರೆ. ವ್ಯಾವಹಾರಿಕ, ಆಧ್ಯಾತ್ಮಿಕ, ನೈತಿಕ ಶಿಕ್ಷಣ ಪಡೆದುಕೊಳ್ಳಲು ಮಾರ್ಗ ಯಾವುದು?
ಸಂನ್ಯಾಸಿಗಳು ಕಾವಿ ಬಟ್ಟೆಯನ್ನೇ ಯಾಕೆ ಧರಿಸುತ್ತಾರೆ?
ಕಾಯಕಕ್ಕೆ ಮತ್ತು ಉದ್ಯೋಗಕ್ಕೆ ಇರುವ ವ್ಯತ್ಯಾಸವೇನು?
ವಚನಗಳು ಸಿದ್ಧಾಂತವಾಗಲು ಸಾಧ್ಯವೇ?
ಸಾರ್ವಜನಿಕ ಸಮಾವೇಶ
ಇಲ್ಲಿನ ಶ್ರೀ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ `ಮತ್ತೆ ಕಲ್ಯಾಣ’ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಆಚರಣೆ ತಪ್ಪಿದ ಆಲೋಚನೆ ಅರ್ಥಹೀನ. ಆಲೋಚನಾ ಹೀನರೇ ಮೌಢ್ಯಗಳಿಗೆ ಬಲಿಯಾಗುವವರು ಮತ್ತು ತಮ್ಮ ಮೌಲ್ಯದ ಕುಸಿತಕ್ಕೆ ಕಾರಣರಾಗುವರು. ನಾವು, ನೀವು ನಮ್ಮ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಶರಣರ ಆಶಯದ ಹಿನ್ನೆಲೆಯಲ್ಲಿ ನಡೆ-ನುಡಿ ಸಿದ್ಧಾಂತವನ್ನು ಅಳವಡಿಸಿಕೊಳ್ಳುವುದು ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವ ದಾರಿ. ಆಲೋಚನೆ-ಆಚರಣೆ-ಬದ್ಧತೆ ಶರಣರ ಮೌಲ್ಯಯುತ ಜೀವನದ ಗುಟ್ಟು. ಇಂದಿನ ರಾಜಕೀಯ ಧುರಿಣರು ಬಸವಣ್ಣನ ಆಲೋಚನೆಗಳನ್ನು ಯೋಚಿಸಿದ್ದರೆ ಕಂಡ ಕಂಡ ದೇವರಿಗೆ ಅಭಿಷೇಕ ಮಾಡಿಸುತ್ತಿರಲಿಲ್ಲ. ಅವರಿಗೆ ಮತದಾರರೇ ದೇವರು. ಬಸವಣ್ಣ `ಒಡೆಯರು ಬಂದರೆ ಗುಡಿ ತೋರಣವ ಕಟ್ಟಿ, ನಂಟರು ಬಂದರೆ ಸಮಯವಿಲ್ಲೆನ್ನಿ ಎನ್ನುವ ಮೂಲಕ ಯಾರಿಗೆ ಆಧ್ಯತೆ ಕೊಡಬೇಕೆಂದು ತಿಳಿಸಿದ್ದಾರೆ. ಸಮಸಮಾಜದ ಆಶಯ ಈಡೇರಲು ಈ ರೀತಿಯ ಬದ್ಧತೆ ಮುಖ್ಯ. ಬಾಲಕ ಬಸವಣ್ಣ ಬಹಿಷ್ಕರಿಸಿದವರನ್ನೇ ಬಹಿಷ್ಕರಿಸುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡರು. ಮತದಾರರನ್ನು ಪ್ರೀತಿಯಿಂದ ಸ್ವಾಗತಿಸಿ ಅವನ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರವನ್ನು ಒದಗಿಸಬೇಕು. ಇದು ನಿಜವಾದ ಜನನಾಯಕನಾದವನು ಮಾಡಬೇಕಾದ ಕಾರ್ಯ. ಈ ಮಾತು ರಾಜಕಾರಣಿಗಳಿಗೆ ಅನ್ವಯವಾಗುವಂತೆ ಸ್ವಾಮಿಗಳಿಗೂ ಅಧಿಕಾರಿಗಳಿಗೂ ಅನ್ವಯಿಸುತ್ತದೆ. ಶರಣರ ವಿಚಾರಗಳನ್ನು ಹೃದ್ಗತ ಮಾಡಿಕೊಂಡು ಆಚರಣೆಯಲ್ಲಿ ತರುವ ಇಚ್ಛಾಶಕ್ತಿ ತೋರಿದರೆ ಕರ್ನಾಟಕವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡಬಹುದು. ಶರಣರು ಪರಮಾನಂದವೇ ಪರಮಾತ್ಮ ಎಂದರು. ಹುಚ್ಚು ಹೊಳೆಯಾಗಿ ಹರಿಯುವ ಬಯಕೆಗಳನ್ನು ಹದ್ದುಬಸ್ತಿನಲ್ಲಿಡುವುದು, ತನು, ಮನ, ಚಿತ್ತ, ಭಾವಗಳಲ್ಲಿ ಶುದ್ಧಿಯನ್ನು ಕಾಪಾಡಿಕೊಳ್ಳುವುದು, ಅಹಂಕಾರವನ್ನು ತ್ಯಜಿಸಿ ವಿನಯವನ್ನು ಬೆಳೆಸಿಕೊಳ್ಳುವುದೇ ಪರಮಾನಂದ. ಶರಣರು ದೇವರ ಹಂಗಿಗೆ ಒಳಗಾಗದೆ `ಮರಣವೇ ಮಹಾನವಮಿ’ ಎಂದರು. ಪ್ರಾಣದ ಭಯವನ್ನು ಕಳೆದುಕೊಳ್ಳುವುದೂ ಪರಮಾನಂದವೇ. ವಿಷಯಗಳ ಹೊಂಡದಲ್ಲಿ ಮುಳುಗೇಳದೆ ಪಂಚೇದ್ರಿಯಗಳ ಮೇಲೆ ಹತೋಟಿ ಹೊಂದುವವನೇ ಮಹಾಜ್ಞಾನಿ. ಶಾಲಾ ಕಾಲೇಜುಗಳಲ್ಲಿ ಓದಿದ ಪದವಿಗಳಿಂದ, ಹಣ, ಅಧಿಕಾರಗಳನ್ನು ಹಿಡಿಯುವುದರಿಂದ ಪರಮಾನಂದ ಸಿಗುವುದಿಲ್ಲ. ಶರಣರು ದಿಕ್ಕುತಪ್ಪಿಸುವ ವಿಚಾರಗಳನ್ನು ಹೇಳಲಿಲ್ಲ; ದಿಕ್ಕು ತೋರಿಸುವ ಮಾರ್ಗವನ್ನೇ ತೋರಿಸಿದ್ದಾರೆ. ಶರಣರ ಆಶಯಗಳನ್ನು ಪ್ರತಿಯೊಬ್ಬರೂ ಜಾರಿಗೇ ತರುವುದೇ ಮತ್ತೆ ಕಲ್ಯಾಣ. ವಿಚಾರವಂತರನೇಕರು ಸ್ವಾಮಿಗಳ ಕಡೆ, ರಾಜಕಾರಣಿಗಳ ಕಡೆ ಬೆರಳು ತೋರಿಸುವ ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಸ್ವಾಮಿಗಳಿಗೆ ಪ್ರಶ್ನೆಗಳನ್ನೇ ಮಾಡಬಾರದು ಎನ್ನುವ ಭಾವನೆ ಹಲವು ಸ್ವಾಮಿಗಳಲ್ಲಿ-ಭಕ್ತರಲ್ಲಿ ಇದೆ. ಇಂದಿನ ಮಕ್ಕೇ ನಾಳಿನ ಪ್ರಜೆಗಳು. ಅಂಥ ಮಕ್ಕಳ ಜೊತೆ ಸಂವಾದ ಮಾಡಬೇಕು. ಕಾನ್ವೆಂಟ್ ಸಂಸ್ಕೃತಿ ಶರಣರ ಸಂಸ್ಕೃತಿಯನ್ನು ನಾಶಮಾಡುತ್ತಿದೆ. ಸಕಲರ ಬದಲಾವಣೆಯಾಗಬೇಕು ಎನ್ನುವುದೇ ಮತ್ತೆ ಕಲ್ಯಾಣದ ಆಶಯ ಎಂದರು.
ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮಿಜಿಗಳು ಮಾತನಾಡಿ ಸರಕಾರದ ಯೋಜನೆಗಳಾದ ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣವಲ್ಲ ಈ ಮತ್ತೆ ಕಲ್ಯಾಣ. ಇದು ಜನಜಾಗೃತಿ ಮಾಡುವ ಕಲ್ಯಾಣ. ಅಪರೂಪದ ಚಿಂತನೆಗಳನ್ನು ಹೊತ್ತು ಈ ಯಾತ್ರೆ ಸಾಗಿದೆ. ವಚನ ಧರ್ಮ ನಾವೆಲ್ಲ ಅರಿತು ಆಚರಿಸಬೇಕಾದ ಮುಖ್ಯ ಧರ್ಮ. ವಚನಗಳು ಅಮೂಲ್ಯವಾದ ಮೌಲಿಕ ಮುಕ್ತಕಗಳು. ಮತ್ತೊಂದು ಭಾಷೆಯ ಸಹಾಯ ತೆಗೆದುಕೊಳ್ಳದೆ 2000 ವರ್ಷದ ಇತಿಹಾಸ ಹೊಂದಿರುವ ಹೆಮ್ಮೆಯ ಭಾಷೆ ಕನ್ನಡ ಭಾಷೆ. ಶರಣರ ವಚನಗಳು ಉರ್ದುವಿನಲ್ಲಿ ಇಲ್ಲ. ಜಗತ್ತಿನ ಎಲ್ಲ ಧರ್ಮಸಾಕ್ತರೂ ಅಧ್ಯಯನ ಮಾಡುವ ಧರ್ಮ ವಚನ ಧರ್ಮ. ವಚನ ಹೇಳುವದಕ್ಕಲ್ಲ; ಆಚರಣೆ ಮಾಡುವವು. ಇವತ್ತು ಮಕ್ಕಳು ಪ್ರಶ್ನೆಗಳನ್ನು ನೋಡಿದರೆ ಶರಣರ ಸಂದೇಶ ತಲುಪಿಸುವಲ್ಲಿ ನಾವು ಎಡವಿದ್ದೇವೆ. ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಅತ್ಯಗತ್ಯವಾಗಿ ವಚನಗಳನ್ನು ತಿಳಿಸಬೇಕು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಅಡಪದ ಅಪ್ಪಣ್ಣನನ್ನು ಬಸವಣ್ಣ ತನ್ನ ಆಪ್ತಸಹಾಕನನ್ನಾಗಿ ಮಾಡಿಕೊಳ್ಳುವ ಮೂಲಕ ಇವನಾರವ, ಇವನಾರವ ಎಂದೆನಿಸದೆ ಎಲ್ಲ ಜಾತಿಯವರನ್ನು ನಮ್ಮ ಮನೆಯ ಮಗನೆಂದೆನಿಸು ಎಂದರು. ವಚನಗಳು ವೇದಿಕೆಗಳ ಮಾತಾಗದೆ ಸಾಮಾನ್ಯರ ಬದುಕಾಗಬೇಕು. 63 ಮಠಗಳನ್ನು ಹೊಂದಿರುವ ಹಾವೇರಿ `ಮರಿ ಕಲ್ಯಾಣ’ ಎಂದೇ ಖ್ಯಾತಿಯಾಗಿದೆ. ಮರಿಕಲ್ಯಾಣದ ಸಹಕಾರ ಮತ್ತೆ ಕಲ್ಯಾಣಕ್ಕೆ ಯಾವತ್ತೂ ಇರುತ್ತದೆ ಎಂದರು.
`ಶರಣರ ಧಾರ್ಮಿಕ ಪ್ರಸ್ತುತೆ’ ಕುರಿತು ಡಾ ಬಸವರಾಜ ಸಬರದ ಮಾತನಾಡಿ ಮತ್ತೆಕಲ್ಯಾಣ ಸಂಚಾರಿ ಅನುಭವ ಮಂಟಪ. ಅಂದಿನ ಅನುಭವ ಮಂಟಪಕ್ಕೆ ಜನ ಹೋದರೆ ಇಂದಿನ ಅನುಭವ ಮಂಟಪ ಜನರೆದುರೇ ಬಂದಿದೆ. ಸಾಮಾನ್ಯರೂ ಆಧ್ಯಾತ್ಮದ ಎತ್ತರಕ್ಕೆ ಏರಬೇಕು ಎನ್ನುವುದೇ ಅನಭವ ಮಂಟಪದ ಆಶಯವಾಗಿತ್ತು. ಇಂದು ಶರಣರ ಬಗ್ಗೆ ಸಾಕಷ್ಟು ಜನ ಗಂಟೆಗಂಟಲ್ಲೆ ಮಾತನಾಡುವರು. ಅಷ್ಟರ ಮಟ್ಟಿಗೆ ವಚನಗಳ ಪ್ರಭಾವ ಜನರ ಮೇಲೆ ಆಗಿದೆ. ಧರ್ಮ ಬೇರೆ ಅಲ್ಲ, ಸಮಾಜ ಬೇರೆ ಅಲ್ಲ, ಚಳುವಳಿ ಬೇರೆ ಅಲ್ಲ. ಹೋರಾಟ ಮತ್ತು ಧರ್ಮವನ್ನು ಕೂಡಿಸಿದ ಜಗತ್ತಿನ ಎಕೈಕ ಚಳುವಳಿ ಶರಣ ಚಳುವಳಿ. 12 ನೆಯ ಶತಮಾದ ಕಲ್ಯಾಣವಲ್ಲ; ಮತ್ತೆ ಕಲ್ಯಾಣ 21 ನೆಯ ಶತಮಾನದ ಇಂದಿನ ಕಲ್ಯಾಣ. ಕಾವಿ, ಖಾಕಿ, ಖಾದಿ ಎಲ್ಲರೂ ಸೇರಿ ಕೂಡುವುದೇ ಕೂಡಲಸಂಗಮ. ಇದು ನಿತ್ಯ ನಿರಂತರವಾಗಬೇಕು. ಜನಸಮಾನ್ಯರು ಮಹಾಜ್ಞಾನಿಗಳು. ಜನರಲ್ಲಿಯೇ ಸಿದ್ಧಾಂತವಿದೆ ಎಂದು ತಿಳಿಸಿಕೊಟ್ಟವರು ಶರಣರು. ಶರಣರು ಜನರ ಮೇಲೆ ಸಿದ್ಧಾಂತವನ್ನು ಹೇರಲಿಲ್ಲ; ಅನ್ಯ ಧರ್ಮಗಳು ಸಿದ್ದಾಂತಗಳು ಹೇರಿದವು. ಸತ್ಯಕ್ಕ, ಕಾಳವ್ವೆ ದೇವರನ್ನೇ ಪ್ರಶ್ನಿಸಿದವರು. ಆದರೆ ಇಂದು ನಾವು ಸಣ್ಣಪುಟ್ಟ ಜನಪ್ರತಿನಿದಿಗಳನ್ನೂ ಪ್ರಶ್ನಿಸಲು ಸಾದ್ಯವಿಲ್ಲ. ಗೊಗ್ಗವ್ವೆ ಹೆಣ್ಣು ಮೋಹಿಸಿ ಗಂಡ ಹಿಡಿದರೆ ಉತ್ತರವಾವುದು ಎಂದು ಪ್ರಶ್ನಿಸುವಳು. ಸಾಮಾನ್ಯ ಜನರ ಅನುಭವವೇ ಜ್ಞಾನವಾಗುವುದು. `ಅರಿವಂ ಪಸರಿಸುವುದೇ ಧರ್ಮ’ ಎಂದು ಪಂಪ ಹೇಳಿದ್ದು. ಧರ್ಮ ಎಂದರೆ ಜ್ಞಾನ, ಸಂಸ್ಕಾರ, ಪ್ರಜ್ಞೆ, ಮಾನವೀಯತೆ ಎಂದು ಹೇಳಿದ್ದು 12 ನೆಯ ಶತಮಾನ. ಆನೇಕ ಆಯ್ಕೆಗಳನ್ನು ಕೊಟ್ಟವರು ಶರಣರು. ಶರಣ ಧರ್ಮದಲ್ಲಿ ಆಯ್ಕೆಗಳಿರುವಂತೆ ಬೇರೆ ಧರ್ಮಗಳಿಲ್ಲ. ಗೊಂದಲವಿರುವಲ್ಲಿಯೇ ಸ್ಪಷ್ಟತೆ ಬುರುವುದು. ಗೊಂದಲವನ್ನು ತೋರಿಸಿದವರು ಶರಣರು. ಶರಣರ ಧರ್ಮ ಒಬ್ಬರ ಧರ್ಮವಲ್ಲ; ಶರಣರೆಲ್ಲ ಸೇರಿ ಕಟ್ಟಿದ್ದು. ಬಸವಣ್ಣ ಅದರ ನಾಯಕನಾಗಿದ್ದರಿಂದ ಬಸವ ಧರ್ಮ ಎಂದು ಕರೆಯುತ್ತವೆ. ಶರಣರು ರಾಜಕೀಯ ನಿಯಂತ್ರಣ ಮಾಡತೊಡಗಿದಾಗಲೇ ಸಮಸ್ಯೆ ಶುರುವಾಯಿತು. ಆರ್ ಎಸ್ ಎಸ್ ನಲ್ಲಿ ಗೊಂದಲವಿಲ್ಲ; ಬಿಜೆಪಿಯಲ್ಲಿದೆ. ಕಮ್ಯುನಿಷ್ಟರಲ್ಲಿ ಗೊಂದಲವಿಲ್ಲ ಆದರೂ ಒಂದು ಸೀಟು ಗೆಲ್ಲಲು ಆಗುತ್ತಿಲ್ಲ. ಸಮಾನ್ಯರೂ ಧರ್ಮವನ್ನು ಕಟ್ಟಬಹುದು ಎಂದು ಜಗತ್ತಿಗೆ ತೋರಿಸಿದವರು ವಚನಕಾರರು. ವಚನ ಸಾಹಿತ್ಯವನ್ನು ಓದಲಾರದಂತೆ ಮಾಡಲೇ ಕೆಲವರು ತರಬೇತಿ ಪಡೆದಿದ್ದಾರೆ. ಬಿಜ್ಜಳ ಬಸವಣ್ಣನ ಪರವಾಗಿದ್ದ; ವೈರಿಯಲ್ಲ. ಬಿಜ್ಜಳ ದೊಡ್ಡ ರಾಜ ಅಲ್ಲ ಕಟುಚೂರಿ. ಅವನ ಮುಖವನ್ನು ಬೆಳಗ್ಗೆ ಎದ್ದು ಯಾರೂ ನೋಡುತ್ತಿದ್ದಲ್ಲ. ಮೊಟ್ಟಮೊದಲು ಮಾರಿಗೆ ಮಾರಿನೋಡಿದವರು ಬಸವಣ್ಣ. ಅವರೇ ನನ್ನ ದೇವರು ಎಂದ. ಅರಿವನ್ನು ಪುನಃಶ್ಚೇತನಗೊಳಿಸುವುದೇ ಧರ್ಮ. ಧರ್ಮದ ವ್ಯಾಖ್ಯಾನವನ್ನು ಸರಳಗೊಳಿಸಿದವರು ಶರಣರು. ದಿನವೂ ಸಾಬೂನು ಹಚ್ಚಿ ಸ್ನಾನ ಮಾಡುವಂತೆ ನಮ್ಮ ಮನದ ಮಲಿನತೆಯನ್ನು ತೊಳೆಯಲು ವಚನಗಳೆಂಬ ಸಾಬೂನು ಬೇಕು. ಶರಣ ಧರ್ಮ ಹೊರತುಪಡಿಸಿ ಯಾವ ಧರ್ಮವೂ ಚಳುವಳಿಯ ಬಗ್ಗೆ ಮಾತನಾಡುವುದಿಲ್ಲ. ಬಸವಣ್ಣ ಸೂಳೆ, ಸಾಂಡಾಲಗಿತ್ತಿ ಎಂದು ಹೇಳಿರುವುದು `ಶರಣ ಸತಿ ಲಿಂಗ ಪತಿ’ ಎನ್ನುವ ಭಾವದಲ್ಲಿ. ಬಹುತ್ವವನ್ನು ಶರಣರು ಬೆಳೆಸಿದರು. ಶರಣರು ವೈದಿಕರನ್ನಷ್ಟೇ ಬೈಯಲಿಲ್ಲ; 63 ಪುರಾತನರನ್ನು, ಅಂಧ ಭಕ್ತಿಯನ್ನು, ಮೌಢ್ಯವನ್ನೂ ವಿರೋಧಿಸಿದರು. ಹಾಸಿಗೆ ಇದ್ದಷ್ಟು ಕಾಲು ಚಾಚುವುದು ದೇಸೀಕರಣ, ಯಾರದದ್ದಾರೂ ಹಾಸಿಗೆಯಲ್ಲಿ ಕಾಲು ಚಾಚುವುದು ಜಾಗತಿಕರಣ ಎಂದರು.
`ಇಂದಿನ ಬೇನೆಗೆ ಅಂದಿನ ಮದ್ದು’ ವಿಷಯ ಕುರಿತು ಡಾ. ಹೆಚ್ ಎಸ್ ಅನುಪಮ ಮಾತನಾಡಿ ಸಂಪತ್ತನ್ನು ಸೃಷ್ಟಿಸಿದವರು `ಕಾಯಕ’ ಜೀವಿಗಳೇ ಹೊರತು ಬಂಡವಾಳಷಾಹಿಗಳಲ್ಲ. ಕಾಯಕ ಶ್ರೇಷ್ಠತೆಯನ್ನು ಎತ್ತಿ ಹಿಡಿದವರು ವಚನಕಾರರು. ಬಸವಾದಿ ವಚನಕಾರರು ಜನಸಾಮಾನ್ಯರಿಗೆ ಅರ್ಥವಾಗುವತ್ತೆ ಮಾತ್ರವಲ್ಲ; ಆಚರಿಸಬಹುದಾದ ಮಾತುಗಳನ್ನು ಆಡಿದರು. ಧರ್ಮವೆಂದರೆ ಆಚರಣೆ, ಲಾಂಛನಗಳು ಮಾತ್ರವಲ್ಲ; ನಡವಳಿಕೆ. ಜನರಿಗೆ ನಿಜವಾದ ಜ್ಞಾನವನ್ನು ಕೊಡಬೇಕಿದ್ದ ಮಾಧ್ಯಮಗಳು, ಮೌಖಿಕ ಪರಂಪರೆಗಳು ಮೌಢ್ಯವನ್ನು ಬಿತ್ತುತ್ತಿವೆ. ಪದಪುಂಜಗಳನ್ನು ಬಳಸಿ ಜನರನ್ನು ಮರಳು ಮಾಡುವ ಕೆಲಸ ಮಾಡುತ್ತಿವೆ. `ಆನೀ ಬಿಜ್ಜಳನಿಗೆ ಅಂಜುವೆನೆ? ಜೋಳವಾಳಿಯವ ನಾನಲ್ಲವಯ್ಯ ವೇಳವಾಳಿಯವ ನಾನು’ ಎನ್ನುವ ಮಾತನ್ನು ಬಸವಣ್ಣ ಹೇಳಿದಂತೆ ಇಂದಿನ ಅಧಿಕಾರಿಗಳು ಹೇಳಲು ಸಾಧ್ಯವೇ? ಎನ್ನುವ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಬಸವಣ್ಣನವರ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,..’ ‘ಇದೊಂದು ವಚನ ಪಾಲನೆಗೆ ಬಂದರೆ ಸಾಕು. ಹೇಳಿದಷ್ಟು ಸುಲಭವಲ್ಲ ಅಳವಡಿಸಿಕೊಳ್ಳುವುದು. ಅನುಭವ ಮಂಟಪ ಇಂದಿನ ಮಟ್ಟಿಗೆ ಅತ್ಯದ್ಭುತ ಕಲ್ಪನೆ. ಊರೂರುಗಳಲ್ಲಿಯೂ ಅನುಭವ ಮಂಟಪವಾಗಬೇಕು. ಇದೂ ಒಂದು ಅನುಭವ ಮಂಟಪ. ನಾವಿಂದು ಸಂಪರ್ಕ ಕ್ರಾಂತಿಯ ನಡುವೆಯೂ ಅಸಂಪರ್ಕಿತರಾಗಿದ್ದೇವೆ. ಆವಿನಹಾಳ ಕಲ್ಲಯ್ಯ `ಅರಿವೆ ಸತ್ಕುಲ’ ಎಂದರು. ಇಂದಿನ ಮಹಿಳೆಯರಿಗೆ ಬಹಳ ಅನುಕೂಲಗಳಿರುವಂತೆ; ಅನಾನುಕೂಲಗಳೂ ಇವೆ. ಅಮುಗೆಯ ರಾಯಮ್ಮ `ಆದ್ಯರ ವೇದ್ಯರ ವಚನಗಳಿಂದ ಕಟ್ಟುಪಾಡುಗಳನ್ನು ಮುರಿಯಬೇಕು, ಅಹಂಕಾರವನ್ನು ಸುಡಬೇಕು, ಮಾಯಾಪ್ರಪಂಚವನ್ನು ನಾನೇ ತೆಗೆಯಬೇಕು ಎಂದು ಮಾತು ಅಂತರಂಗದ ಭದ್ರತೆಗೆ, ನೆಮ್ಮದಿಗೆ ಮುಖ್ಯವಾದ ಮಾತು. ಅಸ್ಪೃಶ್ಯ ನಿವಾರಣೆ ಮತ್ತು ಕಾಯಕ-ದಾಸೋಹ ಸಿದ್ದಾಂತ ಶರಣ ಚಳುವಳಿಯ ಮುಖ್ಯ ಆಶಯವಾಗಿತ್ತು ಎಂದು ಗಾಂಧೀಜಿಯೂ ಹೇಳಿದ್ದರು. ಮೇಲ್ಜಾತಿಯ ಮೊದಲ ವರ್ಗದವರು, ಆಳುವ ಎರಡನೆಯ ವರ್ಗದವರು, ವ್ಯಾಪಾರ ಮಾಡುವ ಮೂರನೆಯ ವರ್ಗದವರು ಕಲ್ಯಾಣದ ಕ್ರಾಂತಿಯಲ್ಲಿ ಭಾಗವಹಿಸಲಿಲ್ಲ. ನಾಲ್ಕನೆಯ ವರ್ಗದವರಾದ ಶ್ರಮಿಕರು ಮಾತ್ರ ಭಾಗವಹಿಸಿದರು. ಬಹುಶಃ ಈಗಲೂ ಕಲ್ಯಾಣ ಕ್ರಾಂತಿಯಲ್ಲಿ ಪಾಲ್ಗೊಳ್ಳುವವರು ಶ್ರಮಿಕರೇ. ಜನರ ಸುಲುವಾಗಿ ಕೆಲಸ ಮಾಡುವವರು ತಮ್ಮನ್ನ ತಾವು ವಿಭಜಿಸಿಕೊಳ್ಳಬಾರದು. ಸಾಂಸ್ಕೃತಿಕ, ಆದ್ಯಾತ್ಮಿಕ ಮತ್ತು ಸಾಮಾಜಿಕ, ಆರ್ಥಿಕವಾಗಿ ಒಗ್ಗೂಡಬೇಕು ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಕಾರ್ಯಕ್ರಮದ ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ `ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಂಡಿತು. ನಾಟಕ ಮುಗಿದ ಮೇಲೆ ಪ್ರೇಕ್ಷಕರು ನಾಟಕದ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡರು. ವೇದಿಕೆಯ ಮೇಲೆ ಶ್ರೀ ಗುದ್ದಲೀಶ ಸ್ವಾಮಿಗಳು, ಶ್ರೀ ಗದೇಶ್ವರ ಸ್ವಾಮಿಗಳು, ಶ್ರೀ ಶಿವಬಸವ ಸ್ವಾಮಿಗಳು, ಶ್ರೀ ಗುರುಸಿದ್ಧ ಸ್ವಾಮಿಗಳು, ಗುರುಲಿಂಗ ಸ್ವಾಮಿಗಳು, ಶ್ರೀ ಶಿವಯೋಗಿ ಸ್ವಾಮಿಗಳು, ಮರುಳಶಂಕರ ಸ್ವಾಮಿಗಳು, ಮಹಂತ ದೇವರು, ಸಯ್ಯದ ಶಾ ಮಹಮ್ಮದ ತಾಜಾವುದ್ಧೀನ ಪೀರ ಖಾದ್ರಿ ಮುಂತಾದ ವಿವಿಧ ಧರ್ಮದ ಮುಖಂಡರು ಉಪಸ್ಥಿತರಿದ್ದರು. ನೆರೆ ಸಂತ್ರಸ್ತರ ನಿಧಿಗೆ 16508 ರೂಪಾಯಿ ಸಂಗ್ರಹವಾಯಿತು.
ಮಧ್ಯಾಹ್ನ 4 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾಯಿತು. ಈ ಸಂದರ್ಭದಲ್ಲಿ ವಿವಿಧ ಧರ್ಮದ ಮುಖಂಡರು ಆಶಯನುಡಿಗಳನ್ನು ಆಡಿದರು. ಮುಂದುವರಿದ ಸಾಮರಸ್ಯ ನಡಿಗೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದೊಂದಿಗೆ ಶಿವಬಸವ ಕಲ್ಯಾಣ ಮಂಟಪಕ್ಕೆ ಬಂದು ತಲುಪಿದರು.
- ಹೆಚ್ ಎಸ್ ದ್ಯಾಮೇಶ್
9449649850

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)