ಆಗಸ್ಟ್ ೨೩ ಶುಕ್ರವಾರ, ಶಿವಮೊಗ್ಗ
ಶಿವಮೊಗ್ಗದಲ್ಲಿ 23ನೇ ದಿನದ ಮತ್ತೆ ಕಲ್ಯಾಣ ಆಂದೋಲನ. ಅಭಿಯಾನದಲ್ಲಿ ಸಾರ್ವಜನಿಕ ಸಮಾವೇಶ. ಅನನ್ಯ ಟಿವಿ ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ
ಇಲ್ಲಿನ ಕುವೆಂಪು ರಂಗಮಂದಿರದಲ್ಲಿ `ಮತ್ತೆ ಕಲ್ಯಾಣ’ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಜಾತಿ, ಮತ, ಪಂಥ, ಪಕ್ಷಗಳ ಹೆಸರಿನಲ್ಲಿ ಕಲ್ಲಾಗಿರುವ ಮನಸ್ಸುಗಳು ಇಂದು ಮೃದುತ್ವ ಪಡೆದುಕೊಳ್ಳಬೇಕಿದೆ. `ನೂರನೋದಿ ನೂರ ಕೇಳಿದಡೇನು? ಆಸೆ ಅರಿಯದು; ರೋಷ ಬಿಡದು’ ಎನ್ನುವಂತಾದರೆ ಮತ್ತೆ ಕಲ್ಯಾಣವೂ ವ್ಯರ್ಥ. ಆಡುವ, ಕೇಳುವ ಮೂಲಕ ಆಸೆ, ರೋಷಗಳನ್ನು ಕಳೆದುಕೊಳ್ಳುವ ಕೆಲಸವಾಗಬೇಕು. ಮೃದುತ್ವ ಪ್ರತಿಯೊಬ್ಬರೂ ತಮ್ಮಿಂದ ತಾವೇ ಮಾಡಿಕೊಳ್ಳಬೇಕಾದ ಕಾರ್ಯವೇ ಹೊರತು; ಇನ್ನೊಬ್ಬರಿಂದ ಆಗದ ಕೆಲಸ. ಹೊರಗಿನಿಂದ ಪ್ರೇರಣೆ ನೀಡಬಹುದಷ್ಟೇ. `ಇವನಾರವ, ಇವನಾರವ ಎನ್ನದೆ ಬಾ ಬಂಧು’ ಎನ್ನುವ ಹೃದಯವಂತಿಕೆ ಬರಬೇಕು. ಇಂದು ವೇದಿಕೆಯ ಮಾತುಗಳಿಗಿಂತ ವ್ಯಾವಹಾರಿಕ ಬದುಕು ಮುಖ್ಯವಾಗುತ್ತಿದೆ. ವ್ಯಾವಹಾರಿಕ ಬದುಕು ಮುಖ್ಯ ನಿಜ. ಆದರೆ ವೇದಿಕೆಯ ಮಾತುಗಳೂ ವ್ಯಾವಹಾರಿಕ ಬದುಕಿಗೆ ಅಗತ್ಯವಾಗಿ ಬೇಕು ಎನ್ನುವುದನ್ನು ನಾವು ಮನಗಾಣಬೇಕು. `ಮನವರಿಯದ ಕಳ್ಳತನವಿಲ್ಲ’ ಎನ್ನುವಂತೆ ನಾವು ಆಡುವ ಮಾತುಗಳು ಮನದೊಡೆಯ ಮಹದೇವ ಮೆಚ್ಚುವಂತಿರಬೇಕು. ಇಂದು ಮಾತುಗಳಿಗೆ ಕೊರತೆಯಿಲ್ಲ; ಅನುಷ್ಠಾನಕ್ಕೆ ತರುವಲ್ಲಿ ಕೊರತೆಯಿದೆ. ನಮ್ಮ ಮಾತು ಮಂತ್ರ, ಜ್ಯೋತಿರ್ಲಿಂಗ, ಮಾಣಿಕ್ಯವಾಗಬೇಕು. ಮಾತಿಗೆ ತಕ್ಕ ಕೃತಿ ಇದ್ದಾಗ ಆ ವ್ಯಕ್ತಿಗೆ ಮೌಲ್ಯ ಬರುವುದು. ಇಲ್ಲದೇ ಹೋದರೆ ಮಾತು ಗಾಳಿಯ ಗೋಪುರವಾಗುವುದು. ಶರಣರದ್ದು ಮೊದಲು ನಡೆ ನಂತರ ನುಡಿ. ಆಚಾರ-ವಿಚಾರಗಳ ಸಂಗಮವೇ ಶರಣತ್ವ. ಶರಣತ್ವದೆಡೆಗೆ ಕರೆದೊಯ್ಯುವ ಶಕ್ತಿ ವಚನ ಸಾಹಿತ್ಯಕ್ಕಿದೆ. ವಚನಗಳ ಅಧ್ಯಯನ, ಮನನ, ಅನುಷ್ಠಾನ ನಿರಂತರವಾಗಿ ನಡೆಯಬೇಕು. ವಚನಗಳು ನಮಗೆ ನಾವೇ ಹೇಳಿಕೊಳ್ಳುವಂಥವೇ ಹೊರತು ಇನ್ನೊಬ್ಬರಿಗೆ ಉಪದೇಶ ಮಾಡುವಂಥವಲ್ಲ. ಮನಶುದ್ಧತೆಯೇ ಆತ್ಮ ಕಲ್ಯಾಣವೂ ಹೌದು; ಲೋಕಕಲ್ಯಾಣವೂ ಹೌದು ಎಂದರು.
ಸಾನಿಧ್ಯ ವಹಿಸಿದ್ದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ ಮತ್ತೆ ಕಲ್ಯಾಣ ಕಾರ್ಯಕ್ರಮ ತುಂಬ ರಚನಾತ್ಮಕವಾದುದು. `ಮತ್ತೆ’ ಅನ್ನುವುದು ಅರ್ಥಪೂರ್ಣವಾದ ಶಬ್ದ. ಅಂದು 12 ನೆಯ ಶತಮಾನದಲ್ಲಿ ಆಡಿದ ಶರಣರ ಮಾತುಗಳು ನಿಂತಿವೆ. ಆ ಮಾತುಗಳು ಮುಂದುವರಿಯಲು ನಿಮ್ಮಿಂದ `ಮತ್ತೆ’ ಎನ್ನುವ ಪ್ರಶ್ನೆ ಬಂದಿದೆ. ಅದಕ್ಕೆ ಉತ್ತರವೇ ಕಲ್ಯಾಣ. `ಮತ್ತೆ’ಗಳಿಗೆ ಕೊನೆಯಿಲ್ಲ. ಎಷ್ಟು ಮತ್ತೆಗಳನ್ನು ಆದರೂ ಮತ್ತೆ, ಮತ್ತೆ ಕಲ್ಯಾಣ ಆಗಲೇಬೇಕು. ಅಂಥ ಕಲ್ಯಾಣ ಇಲ್ಲಿಯೂ ಸೃಷ್ಟಿಯಾಗಿದೆ. ಕಲ್ಯಾಣ ಕ್ರಾಂತಿಯ ಆರಂಭವಾದುದು ಅಕ್ಕನಾಗಮ್ಮನಿಂದ. ಮುಕ್ತಾಯವಾದುದೂ ಅಕ್ಕನಾಗಮ್ಮನಿಂದಲೇ. ಬಸವಣ್ಣನಲ್ಲಿ ಪ್ರಶ್ನೆಗಳು ಹುಟ್ಟಿದ್ದೇ ಅಕ್ಕನಾಗಮ್ಮನಿಂದ. `ನಾನಾ ಸಾಹೇಬನ ಎಂಟು’ ಎನ್ನುವಂತೆ ಹುಚ್ಚು ದೊರೆಯ ಕೈಗೆ ಸಿಕ್ಕ ಕಲ್ಯಾಣ ನುಚ್ಚುನೂರಾಯಿತು. ನುಚ್ಚುನೂರಾಗಿದ್ದ ಶರಣರನ್ನೆಲ್ಲ ಸಂಘಟಿಸಿದ್ದು ಅಕ್ಕನಾಗಮ್ಮ. ನಮ್ಮ ಜಿಲ್ಲೆಯಿಂದ ಕಲ್ಯಾಣಕ್ಕೆ ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ಶರಣ-ಶರಣೆಯರನ್ನು ನೀಡಿ ಬಡವಾಗಿತ್ತು. ಆ ಬಡತವನ್ನು ಹೋಗಲಾಡಿಸಲು ಎನ್ನುವಂತೆ ವಚನಸಾಹಿತ್ಯದ ಸಂಪತ್ತನ್ನು ತಂದು ನಮ್ಮ ಜಿಲ್ಲೆಗೆ ಸಿರಿತನ ತಂದುಕೊಟ್ಟವಳು ಅಕ್ಕನಾಗಮ್ಮ. ದೇವರಿಗೆ ಆಶ್ರಯ ದೇಹವೇ ಹೊರತು; ದೇವಾಲಯವಲ್ಲ. ಮತ್ತೆ ಕಲ್ಯಾಣ ಅತ್ಯಂತ ತುರ್ತು. ಇವುಗಳನ್ನು ಉಪೇಕ್ಷಿಸಿದರೆ ನಮ್ಮನ್ನು ನಾವೇ ಕಳೆದುಕೊಂಡಂತೆ ಎಂದರು.
ಬಸವ ಮರುಳಸಿದ್ಧ ಸ್ವಾಮಿಜಿ ಶರಣ ಹೆಜ್ಜೆ ಗುರುತುಗಳಲ್ಲಿ ಇಂದಿನ ಪೀಳಿಗೆಗೆ ಬೇಕಾದ ಮಾರ್ಗದರ್ಶನದ ಕುರುಹುಗಳಿವೆ. ಆ ಕುರುಹುಗಳ ಮೇಲಿರುವ ಧೂಳನ್ನು ಒರೆಸಿ ಆ ಹೆಜ್ಜೆಯಲ್ಲಿ ನಾವೂ ಹೆಜ್ಜೆ ಹಾಕುವಂತೆ ಮಾಡುವುದೇ ಮತ್ತೆ ಕಲ್ಯಾಣ. ಈ ಅಭಿಯಾನ ಇಡೀ ನಾಡಿನಾದ್ಯಂತ ಸಂಚಲನವನ್ನೇ ಉಂಟು ಮಾಡಿದೆ. ಎಡ ಪಂಥ ಮತ್ತು ಬಲ ಪಂಥಗಳ ನಡುವೆ ಸಂವಾದವನ್ನು ಏರ್ಪಡಿಸುವುದೇ ಮತ್ತೆ ಕಲ್ಯಾಣ. ಅಂಗುಲಿಮಾಲ ಮಹಾ ಕ್ರೂರಿ. ಅಂಥವನನ್ನೂ ಪರಿವರ್ತಿಸಿದ್ದು ಬುದ್ಧನ ಮುಖಾಮುಖಿ. ಇದೇ ರೀತಿ ಸುಜ್ಞಾನಿದೇವ ಎನ್ನುವ ಶರಣ ಮಾತಂಗತಮ್ಮ ಎನ್ನುವ ಕ್ರೂರಿಯನ್ನು `ನನ್ನಯ್ಯ’ ಎನ್ನುವ ಶರಣನನ್ನಾಗಿಸಿದ. ಎಡ-ಬಲಗಳೆರಡರ ಮುಖಾಮುಖಿಯಿಂದ ಸಮಾಜದ ಒಳಿತು ಸಾಧ್ಯ. ಅನುಭವ ಮಂಟಪದಲ್ಲಿಯೂ ಪರಸ್ಪರ ಭಿನ್ನಾಭಿಪ್ರಾಯಗಳಿದ್ದಾಗ್ಯೂ ಒಟ್ಟಾಗಿ ಕುಳಿತು ಸಮಾಜ ಮುಖಿ ಚಿಂತನೆ ನಡೆಸಿದ್ದರು. ಇಂದು ಸಹ ನಾವೂ ಅದೇ ಕೆಲಸವನ್ನು ಮಾಡಬೇಕಿದೆ. ನಾವು ನಮ್ಮ ನಮ್ಮ ಸಣ್ಣತನಗಳನ್ನು ಬಿಟ್ಟು ಹೃದಯವಂತರಾಗಿ `ಮಧ್ಯಮ ಮಾರ್ಗ; ಬಸವ ಮಾರ್ಗ’ ಕಂಡುಕೊಳ್ಳಬೇಕು. ಎಡ-ಬಲಗಳ ಸಂಗಮವೇ ಬಸವ ಧರ್ಮ. ಬಸವಣ್ಣ ಹಿಡಿದ ದಾರಿ ಎಡವೂ ಅಲ್ಲದ; ಬಲವೂ ಅಲ್ಲದ ಸತ್ಯದ ದಾರಿ. ಪಕ್ಷ-ಪಂಗಡಗಳ ಅತಿರೇಕಗಳು ಒಳ್ಳೆಯದಲ್ಲ. ಎಲ್ಲರೂ ತಮ್ಮ-ತಮ್ಮ ಅಹಂಗಳನ್ನು ಬಿಟ್ಟು ಒಳಿತನ್ನು ಹಾರೈಸುವ ಕಲ್ಯಾಣವಾಗಲಿ. ಕಲ್ಯಾಣ ಪಟ್ಟಣವಲ್ಲ; ಒಳಿತಿಗೆ ಪರ್ಯಾಯ. ಶರಣರ ಘನತೆಯುತ ಬದುಕು ಕಲ್ಯಾಣ ನಗರವನ್ನು ಒಳಿತಾಗಿ ಬದಲಾಯಿಸಿತು. ಅಂತರಂಗ-ಬಹಿರಂಗ ಶುದ್ಧಿಯೇ ಆತ್ಮಾವಲೋಕನ. ಆತ್ಮಸಾಕ್ಷಿಯ ಮುಂದೆ ಸುಳ್ಳು ಹೇಳಲು ಸಾಧ್ಯವಿಲ್ಲ. ಇಷ್ಟಲಿಂಗವೇ ನಮ್ಮ ಆತ್ಮಸಾಕ್ಷಿಯಾಗಬೇಕು. ಕಲ್ಯಾಣ ಒಂದು ಸಮುದಾಯಕ್ಕಲ್ಲ; ಸಮಸ್ತರ ಕಲ್ಯಾಣ ಎಂದರು.
`ಕಾಯಕ-ದಾಸೋಹ’ ಕುರಿತಂತೆ ಡಾ ಸಿ ಸೋಮಶೇಖರ್ ಮಾತನಾಡಿ ಬಸವಾದಿ ಶರಣರು ವಿಶ್ವಕ್ಕೆ ಕೊಟ್ಟ ಸಂದೇಶ ಅನನ್ಯ ಮತ್ತು ಅಪೂರ್ವವಾದುದು. ಮಠಾಧಿಪತಿಗಳೊಬ್ಬರು ಮಾಡುವ ಕೆಲಸ ಏನು ಎನ್ನುವುದನ್ನು ಪಂಡಿತಾರಾಧ್ಯ ಶ್ರೀಗಳು `ಮತ್ತೆ ಕಲ್ಯಾಣ’ದ ಮೂಲಕ ತೋರಿಸಿಕೊಟ್ಟಿದ್ದಾರೆ. ಬಸವಾದಿ ಶರಣರ ಚಳುವಳಿಯ ಮೂಲ ಉದ್ದೇಶ ಆತ್ಮ ಕಲ್ಯಾಣ ಮತ್ತು ಲೋಕಕಲ್ಯಾಣ. ಕಾಯಕ-ದಾಸೋಹದ ಸಂದೇಶ ಅನನ್ಯವಾದುದು. ಇಡೀ ವಿಶ್ವಕ್ಕೆ ಸ್ತ್ರೀ ಸಮಾನತೆಯ ರಣಕಹಳೆ ಊದಿದವರು ಬಸವಾದಿ ಶಿವಶರಣರು. ಮೂಢನಂಬಿಕೆ, ಪರಿಸರಪ್ರೇಮ, ಜಾತ್ಯತೀತ ಕಲ್ಪನೆ, ಕಾಯಕ-ದಾಸೋಹ ಸಿದ್ಧಾಂತಗಳು ಶರಣರು ಜಗತ್ತಿಗೆ ನೀಡಿದ ಕೊಡುಗೆ. ಶರಣರು ಭವರೋಗ ವೈದ್ಯರು. ಅವರು ಸ್ಪರ್ಶಿಸದ ಕ್ಷೇತ್ರವಿಲ್ಲ. ಉದರ ಪೋಷಣೆಗೆ ಮಾಡುವ ವೃತ್ತಿ ಕಾಯಕವಲ್ಲ; ಅದು ದುಡಿದು ತಿನ್ನುವ, ಬೆವರಿನ ಸಂಸ್ಕೃತಿ. ಇಲ್ಲಿ ಮೇಲು-ಕೀಳು, ದೊಡ್ಡದು-ಚಿಕ್ಕದು ಎನ್ನುವುದಿಲ್ಲ. ಕಾಯಕದ ಪ್ರತಿಫಲ ಸಮಾನವಾಗಿರಬೇಕೆನ್ನುವ ಕಾರಣಕ್ಕೆ ಬಂದುದೇ ದಾಸೋಹ ಪ್ರಜ್ಞೆ. ಆಯ್ದಕ್ಕಿಲಕ್ಕಮ್ಮ `ಈಸಕ್ಕಿಯಾಸೆ ನಿಮಗೇಕೆ? ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ’ ಎಂದು ಕೇಳುವ ಮೂಲಕ ಸ್ವಾರ್ಥತತೆ ಮತ್ತು ಸಂಗ್ರಹತೆಯನ್ನು ನಿರಾಕರಿಸುವ ಛಾತಿ ತೋರಿಸುವರು. ನುಲಿಯ ಚಂದಯ್ಯ ಲಿಂಗದೇವನನ್ನೂ ಕಾಯಕಕ್ಕೆ ತೊಡಗಿಸುತ್ತಾರೆ. ಕಾಡಿ ಬೇಡಿ ಮಾಡುವುದು ದಾಸೋಹ-ಕಾಯಕವಲ್ಲ. ಮಾಡುವಲ್ಲಿ ಹುಸಿಯಿರಬಾರದು. ದೇಹವನ್ನು ದಂಡಿಸಿ ಗಳಿಸುವುದು ಕಾಯಕ. ಕಸಗುಡಿಸುವ ಕಾಯಕ, ದೇಶವನ್ನು ಆಳುವ ಪ್ರಧಾನಮಂತ್ರಿಯ ಕಾಯಕ ಎರಡೂ ಒಂದೇ ಎಂದು ಶರಣರು ಸಾಧಿಸಿ ತೋರಿಸಿದರು. ಮನಶುದ್ದವಿಲ್ಲದವನಿಗೆ ದ್ರವ್ಯದ ಬಡತನವಲ್ಲದೆ ಚಿತ್ತ ಶುದ್ಧ ಕಾಯಕ ಮಾಡುವವರಿಗೆ ಎತ್ತೆಎತ್ತೆ ನೋಡಿದಡತ್ತತ್ತ ಲಕ್ಷ್ಮಿ ತಾನೇ ತಾನಾಗಿಪ್ಪಳು ಎನ್ನುವರು ಆಯ್ದಕ್ಕಿ ಲಕ್ಕಮ್ಮ. ಶರಣರು ಭಗವಂತನನ್ನು ಬೇಡಿದರೇ ಹೊರತು; ಅನ್ಯರನ್ನಲ್ಲ. ಗುರು-ಲಿಂಗ-ಜಂಗಮರೂ ಚರಸೇವೆಯನ್ನು ಮಾಡಬೇಕು ಎನ್ನುವ ನೀತಿ ಸಂಹಿತೆಯನ್ನು ಕೊಟ್ಟವರು ಶರಣರು. ಕಾಯಕ ಪೂಜೆಯಲ್ಲ; ಕೈಲಾಸ. ನಾವು ಮಾಡುವ ಮಾನವೀಯ ಸೇವೆಯಲ್ಲಿ ಕಾಯಕವಿದೆ. ದಾಸೋಹ ದಾನವಲ್ಲ. ಕರ್ಮಸಿದ್ಧಾಂತವನ್ನು ದಾಸೋಹ ಸಿದ್ದಾಂತವನ್ನಾಗಿಸಿದರು ಶರಣರು. ಅವಶ್ಯವಿದ್ದಷ್ಟನ್ನೇ ಇರಿಸಿಕೊಂಡು ಸಮಾಜಕ್ಕೆ ಅರ್ಪಿಸುವುದು ದಾಸೋಹ. ಶರಣ ಸಿದ್ದಾಂತದ ಪ್ರತಿರೂಪವೇ ಇಂದಿನ ಸಮಾಜವಾದ. ಅಕ್ಷರ ದಾಸೋಹಕ್ಕೆ ಮೂಲ ಶರಣರ ಅನ್ನ ದಾಸೋಹ. ಕುಟುಂಬದ ಒಳಿತೇ ದೇಶದ ಒಳಿತು ಎನ್ನುವ ಇಂದಿನ ಸಂದರ್ಭದಲ್ಲಿ ಬಸವಣ್ಣ ಮಂತ್ರಿಯಾಗಿದ್ದೂ ವಸ್ತ್ರದೊಳಗೊಂದೆಳೆಯ ಕೂಡಿಟ್ಟೆನಾದಡೆ ತಲೆದಂಡ ಎನ್ನುವರು. ಜಂಗಮ ಅಂದರೆ ಸಮಾಜ. ಯುವ ಶಕ್ತಿಗೆ ಶರಣ ಸಂಸ್ಕೃತಿಯನ್ನು ತುಂಬುವ ಮತ್ತೆ ಕಲ್ಯಾಣ, ಮತ್ತೆ ಮತ್ತೆ ಕಲ್ಯಾಣ ಆಗಿ ಯಶಸ್ವಿಯಾಗಲಿ ಎಂದರು.
`ಕ್ರಾಂತಿಗಂಗೋತ್ರಿ ಅಕ್ಕನಾಗಮ್ಮ’ ಕುರಿತಂತೆ ಡಾ. ವಿಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿ ಬಸವಣ್ಣನ ಅಕ್ಕ, ಚೆನ್ನಬಸವಣ್ಣನ ತಾಯಿ ಅಕ್ಕನಾಗಮ್ಮನದು ಮೇರು ವ್ಯಕ್ತಿತ್ವ. ಆಕೆ ತ್ರಿವಿಧ ದಾಸೋಹಿ. ಕಲ್ಯಾಣದ ಕ್ರಾಂತಿಯಲ್ಲಿ ವಿರೋಧಿಗಳೊಂದಿಗೆ ಕಾದಾಡಿದ ವೀರ ಯೋಧೆ. ಮಗ ಚನ್ನಬಸವಣ್ಣನನ್ನು ಕೊಲೆ ಮಾಡಿದವನನ್ನೂ ಕ್ಷಮಿಸಿದ ಕ್ಷಮಯಾಧರಿತ್ರಿ. ಕೇವಲ ಕುಲೋದ್ದಾರಕನಾಗಿದ್ದ ಬಸವಣ್ಣನನ್ನು ಲೋಕೋಧ್ಧರಕನ್ನಾಗಿ ಮಾಡಿದ ಮಹಾತಾಯಿ. ವಚನಕಾರರಲ್ಲಿಯೇ ಅತ್ಯಂತ ಹೆಚ್ಚು ವಚನ ರಚಿಸಿದವರು ಅಕ್ಕನಾಗಮ್ಮ. ಆದರೆ ಕಲ್ಯಾಣದ ಕ್ರಾಂತಿಯಾದಾಗ ತನ್ನ ಸಾಹಿತ್ಯವನ್ನು ಕಡೆಗಣಿಸಿ ಅನ್ಯ ವಚನಕಾರರ ವಚನಗಳನ್ನು ಸಂರಕ್ಷಿಸುವ ಕೆಲಸ ಮಾಡಿದ ನಿಸ್ವಾರ್ಥಿ. ಅಕ್ಕನಾಗಮ್ಮನ ಕೇವಲ 16 ವಚನಗಳು ಮಾತ್ರ ಲಭ್ಯವಿವೆ. ಆ ಒಂದೊಂದು ವಚನವೂ ಅದ್ಭುತವಾಗಿವೆ. ಅಂಗವನ್ನು ಲಿಂಗವ ಮಾಡಿಕೊಂಡ ಮೊದಲ ಮಹಿಳೆ ನಾಗಮ್ಮ. ಅಂತಹ ಲಿಂಗದ ಮಹತ್ವವವನ್ನು ಹೇಳುವ ಪ್ರಯತ್ನವೇ `ಮತ್ತೆ ಕಲ್ಯಾಣ’. ಬಸವಣ್ಣನಿಗೆ ಹೆಜ್ಜೆ-ಹೆಜ್ಜೆಗೂ ಧೈರ್ಯ, ಪ್ರೋತ್ಸಾಹ ತುಂಬಿ ಮುನ್ನಡೆಸಿದವಳು. ಬಸವಣ್ಣನಿಗೆ ಕುತಂತ್ರಿಗಳ ನಡುವೆಯೇ ಇದ್ದು ಅವರನ್ನು ಸರಿಮಾಡಬೇಕೆಂದು ಬುದ್ಧಿವಾದ ಹೇಳುವಳು. ಅಕ್ಕನಾಗಲಾಂಬಿಕೆ ಕಾಲಜ್ಞಾನಿ. ಬಿಜ್ಜಳನ ಹತ್ಯೆ ಮಾಡಿದವರು ಶರಣರಲ್ಲ; ಚಾಲುಕ್ಯ ರಾಜ್ಯದ ಸಾಮಂತರು. ಕಲ್ಯಾಣದ ಕ್ರಾಂತಿಯಾದಾಗ ಪ್ರಾಣ ಕೊಟ್ಟಾದರೂ ವಚನ ಉಳಿಸುವೆ ಎಂದು ಛಲತೊಟ್ಟ ದೀರೆ. ಶರಣರಿಗೆ ಇಷ್ಟಲಿಂಗ ಹಿಡಿಯುವುದನ್ನು ಹೇಳಿಕೊಟ್ಟಂತೆಯೇ ಖಡ್ಗ ಹಿಡಿಯವ ಕಲೆಯನ್ನೂ ಹೇಳಿಕೊಟ್ಟವಳು. ಶರಣರು ಆತ್ಮ ರಕ್ಷಣೆಗೆ ಶಸ್ತ್ರ ಹಿಡಿಯುತ್ತಾರೆ ಹೊರತು ಆಕ್ರಮಣಕ್ಕಲ್ಲ. ಅವರು ಹೇಡಿಗಳಲ್ಲ. ಕೊನೆಗೆ ಇಂದಿನ ತರೀಕೆರೆಯ ಬಳಿ ಇರುವ ಎಣ್ಣೆ ಹೊಳೆಯಲ್ಲಿ ಲಿಂಗೈಕ್ಯರಾಗುತ್ತಾರೆ. ಇಂದು ವಚನ ಸಾಹಿತ್ಯ ಉಳಿದಿದ್ದರೆ ಅದು ಅಕ್ಕನಾಗಮ್ಮನಿಂದ ಎಂದು ಹೇಳಿದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ವಿಧಾನಪರಿಷತ್ ಸದಸ್ಯ ರುದ್ರೇಗೌಡರು ಸ್ವಾಗತಿಸಿದರೆ, ಎಸ್ ಪಿ ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು. ಕಾಂತೇಶ್ ಕದರಮಂಡಲಗಿ ವಂದಿಸಿದರು. ಕಾರ್ಯಕ್ರಮದ ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ `ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಂಡಿತು. ನಾಟಕ ಮುಗಿದ ಮೇಲೆ ಪ್ರೇಕ್ಷಕರು ನಾಟಕದ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡರು.
ವೇದಿಕೆಯ ಮೇಲೆ ಶ್ರೀ ಪ್ರಭುಸ್ವಾಮಿಗಳು, ಫಾದರ್ ವೀರೇಶ್ ಮೋರಸ್, ಫಾದರ್ ಲಾರೆನ್ಸ್ ಮುಂತಾದವರು ಉಪಸ್ಥಿತರಿದ್ದಾರೆ.
ಸಂಜೆ 5 ಗಂಟೆಗೆ ಸಾಮರಸ್ಯ ನಡಿಗೆ ಶ್ರೀ ಶಿವಪ್ಪನಾಯಕ ವೃತ್ತದಿಂದ ಆರಂಭವಾಯಿತು. ಈ ಸಂದರ್ಭದಲ್ಲಿ ರೈತ ಮುಖಂಡ ಬಸವರಾಜಪ್ಪ, ಬೆನಕಪ್ಪ, ಕೆ ಎಲ್ ಅಶೋಕ್, ಮರುಳಸಿದ್ಧ ಸ್ವಾಮಿಗಳು ಆಶಯ ನುಡಿಗಳನ್ನು ಆಡಿದರು. ಮುಂದರವರಿದ ಸಾಮರಸ್ಯ ನಡಿಗೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದೊಂದಿಗೆ ಕುವೆಂಪು ರಂಗಮಂದಿರಕ್ಕೆ ಬಂದು ತಲುಪಿದರು. ನೆರೆ ಸಂತ್ರಸ್ಥರ ನಿಧಿ 34042 ರೂಪಾಯಿಗಳು ಸಂಗ್ರಹವಾಯಿತು.
ವಿದ್ಯಾರ್ಥಿಗಳೊಂದಿಗೆ ಸಂವಾದ
ಆಗಸ್ಟ್ 23; ಶಿವಮೊಗ್ಗ; ಇಲ್ಲಿನ ಬಿ ಆರ್ ಅಂಬೇಢ್ಕರ್ ಭವನದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸಿ ಇದು ವಿಜ್ಞಾನ-ತಂತ್ರಜ್ಞಾನದ ಯುಗ. ನಮಗೆ ನಾಗರಿಕತೆ ಬಂದಿದೆ, ಸಂಸ್ಕೃತಿ ಕಡಿಮೆಯಾಗಿದೆ. ಶಿಕ್ಷಣ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶದವರೆಗೂ ಹಬ್ಬಿದೆ. ಆದರೆ ಈ ಶಿಕ್ಷಣ ನುಮ್ಮ ಹಿರಿಯರ ಆಶಯಗಳನ್ನು ಈಡೇರಿಸುವಂತೆ ಇದೆಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪ್ರತಿಭೆ ಅಂಕಗಳನ್ನು ಅವಲಂಬಿಸಿರುವುದು ದುರದೃಷ್ಟಕರ ಸಂಗತಿ. ಹೆಚ್ಚು ಅಂಕಗಳನ್ನು ಗಳಿಸಿದವರೇ ಜೀವನದಲ್ಲಿ ಗೆಲ್ಲುತ್ತಾರೆ ಅಂತ ಏನೂ ಇಲ್ಲ. ಬೇಕಾದಷ್ಟು ಜನ ಪರೀಕ್ಷೆಗಳಲ್ಲಿ ಫೇಲಾಗಿ ಬದುಕಿನ ಪರೀಕ್ಷೆಯಲ್ಲಿ ಸಫಲರಾಗಿದ್ದಾರೆ. ಶಿಕ್ಷಣ ನಮಗೆ ಆತ್ಮಬಲ, ಆತ್ಮವಿಶ್ವಾಸ ಮೂಡಿಸುವಂತಾಗಬೇಕು. ಸತ್ಯದ ಅರಿವು ಮತ್ತು ಸದ್ಗುಣಗಳು ಶಿಕ್ಷಣದ ಬುನಾದಿಯಾಗಬೇಕು. ಬುದ್ಧಿ ಬೇರೆ ವಿವೇಕ ಬೇರೆ. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನವು ವಿವೇಕವನ್ನು ಬೆಳೆಸಿಕೊಳ್ಳುವ ಮಾರ್ಗ ಬೇಕು. ಸೂಳೆ ಸಂಕವ್ವೆ ಶರಣರ ಸಂಗದಿಂದ `ಶರಣೆ’ಯಾದಳು. ಸತ್ಯಕ್ಕ ಕಸಗುಡಿಸುವಾಗ ಹೊನ್ನು, ವಸ್ತ್ರ ಬಿದ್ದದ್ದರೆ ಅದನ್ನು ಕಸವೆಂದು ಎತ್ತಿ ಬಿಸಾಕುವ ಸಮಚಿತ್ತವನ್ನು ಪಡೆದುಕೊಂಡಿದ್ದಳು. ಪೋಷಕರು ಔದ್ಯೋಗಿಕ ಶಿಕ್ಷಣದ ಜೊತೆ ವಚನಕಾರರ ಬದುಕು-ಬರಹಗಳನ್ನು ಪರಿಚಯಿಸುವ ಕಾರ್ಯವನ್ನೂ ಮಾಡಬೇಕು. ಇಂದಿನ ನಮ್ಮ ಶಿಕ್ಷಣದಲ್ಲಿ ಸತ್ಯದ ದಾರಿಯಲ್ಲಿ ನಡೆಯಲಿಕ್ಕೆ ಅವಕಾಶವೇ ಇಲ್ಲವೇನೋ ಎನ್ನುವ ವಾತಾವರಣ ನಿರ್ಮಾಣವಾಗಿರುವುದು ವಿಷಾದದ ಸಂಗತಿ. ಶಿಕ್ಷಣದ ಜೊತೆಗೆ ಸಂಸ್ಕೃತಿ, ನೈತಿಕ ನೆಲೆಗಟ್ಟು ಮುಖ್ಯವಾಗಬೇಕು. ಹಿರಿಯರು ಮಕ್ಕಳ ಪ್ರಶ್ನೆ ಮಾಡುವ ಹಕ್ಕುನ್ನು ಮೊಟಕುಗೊಳಿಸಬಾರದು. ಶರಣರು ಅನುಭವ ಮಂಟಪದ ಮೂಲಕ ಪ್ರತಿಯೊಬ್ಬರಿಗೂ ಪ್ರಶ್ನೆ ಮಾಡುವ ಸ್ವತಂತ್ರವನ್ನು ನೀಡಿದ್ದರು. ಅದರ ಫಲವೇ ವಚನಗಳು. ವಚನ ಅಂದ್ರೆ ಭಾಷೆ, ಪ್ರಮಾಣ, ಬೆಳಕು. ನಾಳಿನ ಸಮಾಜ ನಿಮ್ಮದು. ನಿಮ್ಮ ಹೊಣೆಗಾರಿಕೆ ತುಂಬ ಇದೆ. ಆದ್ದರಿಂದ ವಿದ್ಯಾರ್ಥಿಗಳು ನೈತಿಕ ನೆಲೆಗಟ್ಟನ್ನು ಬೆಳೆಸಿಕೊಳ್ಳಬೇಕು. ನಮ್ಮ ಗುರುಗಳಾದ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಜಾತಿ ವಿಚಾರದ ಪ್ರಶ್ನೆ ಬಂದಾಗ `ಶಿಕ್ಷಣಕ್ಕೆ ಜಾತಿ ಹಚ್ಚಿಯೇ ನಮ್ಮ ಸಮಾಜ ಹಿಂದುಳಿದವರು. ಯಾರೂ ಮಕ್ಕಳಲ್ಲಿ ಜಾತಿಯ ಬೀಜವನ್ನು ಬಿತ್ತಬಾರದು. ಒಂದು ವೇಳೆ ನಿಮಗೆ ಜಾತಿಯೇ ಮುಖ್ಯ ಎನ್ನುವುದಾದರೆ ನಾವು ನಮ್ಮ ತತ್ವ ಸಿದ್ಧಾಂತಕೆ ಅಂಟಿಕೊಳ್ಳುವವರೇ ಹೊರತು ಪೀಠಕಲ್ಲ’ ಎಂದು ಮಾರ್ಮಿಕವಾಗಿ ಹೇಳಿದ್ದರು. ಇಷ್ಟಲಿಂಗ ಮನಸ್ಸಿನ ಏಕಾಗ್ರತೆಗೆ ಪುಷ್ಟಿ ನೀಡುತ್ತದೆ. ಲಿಂಗಪೂಜೆಯಲ್ಲಿ ಯೋಗ ಮತ್ತು ಧ್ಯಾನವಿದೆ. ಆದ್ದರಿಂದ ಶಿವಯೋಗ ಎಂದು ಕರೆಯುತ್ತಾರೆ. ಜ್ಯೋತಿಷಿಗಳು ಶ್ರೀಮಂತರನ್ನೇ ಗುರಿಯನ್ನಾಗಿರಿಸಿಕೊಂಡಿರುವುದರ ಮರ್ಮವನ್ನು ಅರಿಯಬೇಕು. ಇಷ್ಟಲಿಂಗ ಯಾರಿಗೂ ಅನಿವಾರ್ಯವಲ್ಲ. ಲಿಂಗ ಒಂದು ಸಾಧನವೇ ಹೊರತು ಅದೇ ಅಂತಿಮ ಗುರಿಯಲ್ಲ. ದೇಹದ ಒಳಗಿರುವ ಚೇತನವೇ ಆತ್ಮ. ಅದಕ್ಕೆ ಜಾತಿ, ಬಣ್ಣ, ಜೀವ ಇರುವುದಿಲ್ಲ ಎಂದರು.
ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ಎಲ್ಲಾ ಸ್ವಾಮಿಗಳು ದೇವಸ್ಥಾನಗಳನ್ನು ಕಟ್ಟುವುದಿಲ್ಲ. ಶರಣ ತತ್ವವನ್ನು ಒಪ್ಪಿಕೊಂಡಿರುವವರು ದೇಹವನ್ನೇ ದೇಹಾಲಯವನ್ನಾಗಿ ಮಾಡಿಕೊಳ್ಳುವನರು. ಸಗಣಿಗೆ ಸಂಸ್ಕಾರ ಕೊಟ್ಟಾಗ ವಿಭೂತಿಯಿಗುತ್ತದೆ. ವಿಭೂತಿಯನ್ನು ಧರಿಸುವುದರಿಂದ ನಮ್ಮಲ್ಲಿರುವ ದುರ್ಗುಣಗಳು ದೂರವಾಗುವವು. ಭಕ್ತಿ, ಜ್ಞಾನ, ಕ್ರಿಯೆಗಳ ಸಂಕೇತವೇ ವಿಭೂತಿ. ಮಾಡಿಯೂ ಮಾಡದಂತಿರುವ ಭಾವವೇ ಶೂನ್ಯ ಸಂಪಾದನೆ. ಮಗುವಿಗೆ ಹಾಲುಕುಡಿಸುವುದು ಅನುಭವ. ಹಾಲು ಕುಡಿಸುವಂಥ ಸಂದರ್ಭದಲ್ಲಿ ತಾಯಿಯ ವಾತ್ಸಲ್ಯ, ಪ್ರೀತಿಯೇ ಅನುಭಾವ. ಪದಗಳಿಂದ ವಿವರಿಸಲಾಗದ್ದು ಅನುಭಾವ. ದೇವರನ್ನು ಎಲ್ಲೂ ಹುಡಕಬೇಕಾಗಿಲ್ಲ. ನಿನ್ನಲೇ ಇದೆ ಎಂದು ಇಷ್ಟಲಿಂಗದ ಕುರುಹನ್ನು ಶರಣರು ನೀಡಿದರು. ನಾವು ಸತ್ತಾಗ ನಮ್ಮ ಗುರುತು ಇರದೆ ನಮ್ಮ ಸಾಧನೆಯೇ ಗುರುತಾಗಬೇಕು.
ಸಂವಾದಕರಾಗಿ ಆಗಮಿಸಿದ್ದ ಶ್ರೀ ಪ್ರಭು ಸ್ವಾಮೀಜಿ ಮಾತನಾಡಿ ಶರಣರು ಜಾತಿ, ಮತ, ಪಂಥಗಳಿಂದ ಹೊರಬಂದವರು. ಸಾವಿನ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗುವಂತೆ ಬದುಕಿನಲ್ಲಿಯೂ ಒಗ್ಗಟ್ಟಾಗಿಯೇ ಇರಬೇಕು. ಪಂಡಿತಾರಧ್ಯ ಶ್ರೀಗಳು ಮತ್ತೆ ಕಲ್ಯಾಣದ ಮೂಲಕ ನಮ್ಮೆಲ್ಲರನ್ನು ಒಂದು ಮಾಡಲು ಬಂದಿರುವುದು ಶ್ಲಾಘನೀಯ ಸತ್ತು ಹೋಗುವ ವ್ಯಕ್ತಿಗಳನ್ನು ಬದುಕಿಸುವವರು ಸ್ವಾಮಿಗಳಲ್ಲ; ಸತ್ತು ಹೋಗುವ ಸಮಾಜವನ್ನು ಬದುಕಿಸುವವರು ನಿಜವಾದ ಸ್ವಾಮಿಗಳು. ಅಂತಹ ಸ್ವಾಮಿಗಳೇ ಪಂಡಿತಾರಾಧ್ಯ ಸ್ವಾಮಿಗಳು. ಕನ್ನಡ ಭಾಷೆ ಉಳಿಯಲಿಕ್ಕೆ ಕಾರಣ ವಚನ ಸಾಹಿತ್ಯ. ನಮ್ಮ ಬದುಕಿಗೆ ಭವ್ಯತೆ ಬರಬೇಕಾದರೆ ಬಸವಣ್ಣನ ಆಚಾರ-ವಿಚಾರಗಳು ನಮ್ಮವಾಗಬೇಕು.
ಚಿಂತಕಿ ವಿಜಯಲಕ್ಷ್ಮೀ ಬಾಳೆಕುಂದ್ರಿ ಮಾತನಾಡಿ ಸಂಸಾರದಲ್ಲಿದ್ದುಕೊಂಡೆ ಆತ್ಮಜ್ಞಾನದ ಜೊತೆಗೆ ತತ್ವಜ್ಞಾನವನ್ನು ಬೆಳೆಸಿಕೊಳ್ಳಬಹುದು. ನಂಬಿಕೆಯಿಲ್ಲದೆ ಸಮಾಜದಲ್ಲಿ ಬದುಕುವುದು ಕಷ್ಟ. ಮೂಢನಂಬಿಕೆ ವಿನಾಶಕಾರಿ. ನಂಬಿಕೆ ಪ್ರಗತಿ. ಶೋಷಿತರು, ಹಿಂದುಳಿದವರು, ತುಳಿತಕ್ಕೆ ಒಳಗಾದವರಿಗೆ ಮೀಸಲಾತಿಬೇಕು. ನಮ್ಮಲ್ಲಿ ಜಾತಿ ಪದ್ಧತಿ ಬಂದದ್ದು ವೃತ್ತಿಗಳಿಂದ. ಇಂತಹ ಜಾತಿಯಿಂದ ಹೊರಬಂದು ಜಾತ್ಯಾತೀತ ಸಮಾಜ ನಿರ್ಮಾಣ ಮಾಡಬೇಕೆನ್ನುವುದೇ ಮತ್ತೆ ಕಲ್ಯಾಣದ ಆಶಯ. ಧ್ಯಾನದಿಂದ ಒತ್ತಡ ಕಡಿಮೆಯಾಗಿ ರೋಗಗಳು ದೂರವಾಗುತ್ತವೆ. ನೆರೆ ಬಂದಿರುವುದು ದೇವರು ಕೊಟ್ಟ ಶಾಪದಿಂದಲ್ಲ. ಪ್ರಕೃತಿಯ ವಿಕೋಪದಿಂದ. ಇದನ್ನು ದೇವರ ಶಾಪ ಎಂದು ಹೇಳುವುದು ಮೂರ್ಖತನ. ಮನುಷ್ಯ ಪ್ರಕೃತಿಯ ಸಮತೋಲನ ಕಾಪಾಡುವುದರಲ್ಲಿ ಎಡವಿರುವುದು ದುರ್ದೈವದ ಸಂಗತಿ. ಅನುಭವ ಲೌಕಿಕ. ಅನುಭಾವ ಅಲೌಕಿಕವಾದದದ್ದು.
ಸಂವಾದಕ ಹೆಚ್ ಎಸ್ ದ್ಯಾಮೇಶ್ ಮಾತನಾಡಿ ಕಷ್ಟಪಟ್ಟು ಓದಿದರೆ ಕಷ್ಟವೇ ಆಗುತ್ತದೆ; ಇಷ್ಟಪಟ್ಟು ಓದಿದರೆ ಎಲ್ಲವೂ ಇಷ್ಟವೇ ಆಗುತ್ತದೆ. ಸಂಸಾರಿಗಳ ಜೀವನವನ್ನು ಸನ್ಯಾಸಿಗಳೂ ಒಪ್ಪಿಕೊಂಡಿದ್ದಾರೆ. ಇದಕ್ಕೆ ಬಸವಣ್ಣನೇ ಒಳ್ಳೆಯ ನಿದರ್ಶನ. ವಚನಗಳನ್ನು ಕೇವಲ ಸಾಹಿತ್ಯಕ್ಕಾಗಿ ಅಲ್ಲ; ಬದುಕಿಗಾಗಿ ಅಧ್ಯಯನ ಮಾಡಬೇಕು. ಮತ್ತೆ ಕಲ್ಯಾಣ ಕೇವಲ ಕಾರ್ಯಕ್ರಮವಲ್ಲ; ಇದೊಂದು ಅಭಿಯಾನ; ಪ್ರಕ್ರಿಯೆ, ಚಳುವಳಿ, ಕ್ರಾಂತಿ. ಬಸವಣ್ಣನವರ ಆದರ್ಶಗಳು ಮುಖ್ಯವೇ ಹೊರತು ಅವರ ಪ್ರತಿಮೆಯಲ್ಲ. ತಮ್ಮ ಗುರುತು ಉಳಿಯಬೇಕೆಂದು ಶರಣರು ಬದುಕಲಿಲ್ಲ. ಅವರ ಬದುಕು ನಮಗೆ ಮಾದರಿಯಾದುದರಿಂದ ನಾವು ಅವರ ಗುರುತನ್ನು ಇಟ್ಟುಕೊಂಡಿದ್ದೇವಷ್ಟೇ ಎಂದರು.
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು :
• ಶರಣರ ಎಂದು ಕರೆಯಬೇಕಾದರೆ ಅವನಿಗಿರುವ ಅರ್ಹತೆಗಳೇನು?
• ಅಕ್ಕಮಹಾದೇವಿ ಜನಸಿದ ಸ್ಥಳ ಯಾಕೆ ಇನ್ನು ಅಭಿವೃದ್ಧಿಯಾಗಿಲ್ಲ?
• ವಿದ್ಯಾರ್ಥಿಗಳು ಓದಿನಲ್ಲಿ ಅನಾಸಕ್ತಿ ಹೊಂದುತ್ತಾರೆ? ಇದಕ್ಕೆ ಪರಿಹಾರ ವಚನಗಳಲ್ಲಿದೆಯೇ?
• ಬಸವಣ್ಣನವರು ಏಕತೆಗಾಗಿ ಹೋರಾಟ ಮಾಡಿದರು. ನೀವು ಪಂಚಪೀಠವನ್ನು ಯಾಕೆ ಮಾಡಿಕೊಂಡಿದ್ದೀರಿ?
• ಜನಸಾಮಾನ್ಯರು ಸತ್ತರೆ ಸ್ಮಶಾನದಲ್ಲಿ ಊಳುತ್ತಾರೆ. ಸ್ವಾಮಿಗಳು ಸತ್ತರೆ ಸ್ಮಶಾನದಲ್ಲಿ ಯಾಕೆ ಊಳುವುದಿಲ್ಲ?
• ಬಸವಣ್ಣನವರು ಬ್ರಾಹ್ಮಣದಿಂದ ಹೊರಬಂದು ಲಿಂಗಾಯತ ಧರ್ಮಕ್ಕೆ ಯಾಕೆ ಬರುತ್ತಾರೆ?
• ಜಾತಿಗೊಂದು ಮಠ, ಮಠಕ್ಕೊಬ್ಬ ಸ್ವಾಮಿಗಳು ಇದ್ದಾರೆ. ಇದರಿಂದ ಜಾತಿಯನ್ನು ಹೇಗೆ ಹೋಗಲಾಡಿಸುತ್ತೀರಿ?
• ಸ್ವಾಮೀಜಿಯವರು ಕಾವಿ ಬಟ್ಟೆಗಳನ್ನೇ ಯಾಕೆ ಹಾಕುತ್ತಾರೆ?
• ಮೀಸಲಾತಿಯ ಅವಶ್ಯಕತೆ ಇದೆಯೇ?
• ಅನುಭವ ಮಂಟಪದಲ್ಲಿ ನಡೆ-ನುಡಿ ಇತ್ತು. ಪ್ರಸ್ತುತ ಸಮಾಜ ನಡೆ-ನುಡಿ ಇಲ್ಲ. ಇದಕ್ಕೆ ತಮ್ಮ ಅಭಿಪ್ರಾಯವೇನು?
• ಶರಣರು ಹೆಣ್ಣು, ಹೊನ್ನು, ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ ಎಂದು ಹೇಳಿದರು. ಹಾಗಾದರೆ ನಾವು ಆಸೆಯನ್ನೇ ಬಿಡಬೇಕಾ?
• ಲಿಂಗಪೂಜೆಯಿಂದ ಆಗುವ ಅನುಕೂಲವೇನು? ನನಗೂ ಸಹ ಲಿಂಗಪೂಜೆ ಮಾಡುವ ಹಂಬಲವಿದೆ. ಸಮಯದ ಅಭಾವವಿದೆ ಏನು ಮಾಡುವುದು?
• ಕಣ್ಣಿಗೆ ಕಾಣುವ ದೇವರನ್ನು ಪ್ರೀತಿಸುವುದಿಲ್ಲ. ಆದ್ರೆ ಕಣ್ಣಿಗೆ ಕಾಣದೇ ಇರುವ ದೇವರನ್ನು ಪ್ರೀತಿಸುವುದು ಎಷ್ಟರಮಟ್ಟಿಗೆ ಸರಿ?
• ಅಂತರ್ ಜಾತಿ ವಿವಾಹದ ಬಗ್ಗೆ ತಮ್ಮ ಅಭಿಪ್ರಾಯವೇನು?
• ಎಲ್ಲಾ ಪೋಷಕರು ಡಾಕ್ಟರ್, ಇಂಜಿನಿಯರ್ ಆಗ್ಬೇಕು ಅಂತ ಬಯಸುತ್ತಾರೆ. ಸ್ವಾಮೀಜಿ ಆಗು ಅಂತ ಯಾರು ಹೇಳುವುದಿಲ್ಲ. ಇದಕ್ಕೆ ಕಾರಣವೇನು ?
• ಕಂಪ್ಯೂಟರ್ ಯುಗದಲ್ಲಿಯೂ ಸಹ ಮೂಢನಂಬಿಕೆಯನ್ನು ನಂಬುತ್ತಾರಲ್ಲ. ಇದಕ್ಕೆ ಕಾರಣವೇನು?
• ಅನುಭಾವ ಮತ್ತು ಅನುಭವಕ್ಕಿರುವ ವ್ಯತ್ಯಾಸವೇನು?
• ಪೂಜಾರಿ ಮತ್ತು ದೇವರ ಮಧ್ಯೆ ಮಧ್ಯೆವರ್ತಿಗಳ ಅವಶ್ಯಕತೆಯಿಲ್ಲ. ಇವರ ನಿರ್ಮೂಲನೆ ಮಾಡಲು ಮತ್ತೆ ಕಲ್ಯಾಣ ಯಾವ ರೀತಿ ಕಾರ್ಯ ಹಮ್ಮಿಕೊಂಡಿದೆ?
• ಶರಣರು ಪೂಜಿಸಲು ಬೇರೆ ಯಾವುದೇ ರೀತಿಯ ಆಧಾರಗಳನ್ನಿಟ್ಟುಕೊಳ್ಳಬಹುದಿತ್ತು. ಯಾಕೆ ಇಷ್ಟಲಿಂಗವನ್ನೇ ಆಧಾರವನ್ನಾಗಿ ಇಟ್ಟುಕೊಂಡರು?
• ಲಿಂಗ ಪೂಜೆ ಅನಿವಾರ್ಯವೇ ?
- ಹೆಚ್ ಎಸ್ ದ್ಯಾಮೇಶ್
9449649850

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)