ಆಗಸ್ಟ್ ೨೨ ಗುರುವಾರ, ದಾವಣಗೆರೆ
ದಾವಣಗೆರೆಯಲ್ಲಿ 22ನೇ ದಿನದ ಮತ್ತೆ ಕಲ್ಯಾಣ ಆಂದೋಲನ. ಅಭಿಯಾನದಲ್ಲಿ ಸಾರ್ವಜನಿಕ ಸಮಾವೇಶ. ಅನನ್ಯ ಟಿವಿ ನೇರಪ್ರಸಾರವೀಕ್ಷಿಸಲು - ಕ್ಲಿಕ್ ಮಾಡಿ
ಇಲ್ಲಿನ ಶ್ರೀ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದದಲ್ಲಿ `ಮತ್ತೆ ಕಲ್ಯಾಣ’ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಉದ್ಯೋಗಕ್ಕೆ ಜಾತಿಯನ್ನು ಹಚ್ಚಿದ್ದರ ಪರಿಣಾಮ ಗುಡಿಕೈಗಾರಿಕೆಗಳು ನಿಂತು ಹೋಗಿವೆ. ಹುಟ್ಟಿದ ಕಾರಣಕ್ಕೆ ಜಾತಿ ಅಂಟಿದೆ. ಮನಸ್ಸು ಮಾಡಿದರೆ ಅಂಟಿದ ಜಾತಿಯನ್ನು ಕಳಚಿ ಮಹಾತ್ಮರಾಗಲು ಸಾಧ್ಯ. ಇದಕ್ಕೆ ವಿಶ್ವಬಂಧು ಮರುಳಸಿದ್ಧರೇ ನಿದರ್ಶನ. ಬಸವಣ್ಣ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯನಿಂದ ಭಿಕ್ಷೆ ಪಡೆದ ಕಾರಣ ಎನ್ನ ಭಕ್ತಿಯ ಪಾತ್ರೆ ತುಂಬಿತು ಎನ್ನುವರು. ಜಾತಿಯನ್ನು ಕೇವಲ ತೊರಿಕೆಗಷ್ಟೇ ಅಲ್ಲ; ಅಂತರಂಗದಿಂದಲೇ ಹೊರಹಾಕಬೇಕು. ರಕ್ತ ಬೇಕಾದಾಗ ರಕ್ತದ ಗುಂಪುಗಳನ್ನು ನೋಡುತ್ತೇವೆಯೇ ಹೊರತು ಜಾತಿ ನೋಡುವುದಿಲ್ಲ. ಒಳಗೆ ಸಂಚರಿಸುವ ರಕ್ತ ಒಂದೇ ಆಗಿರುವಾಗ ಒಟ್ಟಿಗೆ ಬಾಳಲು ಜಾತಿಯ ಅಡ್ಡಗೋಡೆಗಳೇಕೆ ಬೇಕು? ಅಸಾಧ್ಯ ಎನ್ನುವುದು ಮೂರ್ಖರ ಶಬ್ದಕೋಶದಲ್ಲಿ ಮಾತ್ರ ಇರುತ್ತದೆ. ಮೊದಲು ನಾನೊಬ್ಬ ಬದಲಾದರೆ ಸಾಕು ಸಮಾಜ ತನ್ನಿಂದ ತಾನೇ ಸುಧಾರಿಸುವುದು. ಬಸವಣ್ಣ ಹೋರಾಟ ಶುರು ಮಾಡಿದ್ದು ತನ್ನ 8 ನೆಯ ವಯಸ್ಸಿನಲ್ಲಿ. ಅಕ್ಕನಿಗಿಲ್ಲದ ಜನಿವಾರ ನನಗೇಕೆ ಬೇಕು ಎಂದು ಕೇಳುವ ಮೂಲಕ. ಬಸವಣ್ಣ ಜಗತ್ತಿನ ಮೊಟ್ಟಮೊದಲ ಸ್ತ್ರೀವಾದಿ. ಬಸವಣ್ಣನ ತತ್ವಗಳನ್ನು ಪುನರುಚ್ಚಾರ ಮಾಡುವ ನಾವು ಅವುಗಳನ್ನು ಅನುಸರಿಸದೇ ಇದ್ದರೆ ಹೇಗೆ? ಲೋಕಕಲ್ಯಾಣಕ್ಕೆ ಮುನ್ನ ಆತ್ಮಕಲ್ಯಾಣವಾಗಬೇಕು. ವಚನಗಳು ಪ್ರದರ್ಶನದ ಸರಕಾಗಬಾರದು. ಶರಣರು ಒಳಗೊಂದು-ಹೊರಗೊಂದು ಇರಲಿಲ್ಲ. ದೇವರನ್ನು ಒಲಿಸುವ ದಾರಿ; ಅಂತರಂಗ-ಬಹಿರಂಗ ಶುದ್ಧಿ ಎಂದು ಬಲವಾಗಿ ನಂಬಿದ್ದರು, ಅದಂತೆ ನಡೆದುಕೊಂಡರು. ಬಸವಣ್ಣನ ಸಪ್ತಶೀಲಗಳನ್ನು ಬದುಕಿನಲ್ಲಿ ಜಾರಿಗೆ ತಂದರೆ ದೇವರನ್ನು ಹುಡುಕಿಕೊಂಡು ಯಾರೂ ಗುಡಿಗಳಿಗೆ ಹೋಗುವ, ಹೊಸದಾಗಿ ಗುಡಿಕಟ್ಟಿಸುವ ಅವಶ್ಯಕತೆಯಿಲ್ಲ. ಬಸವಾನುಯಾಯಿಗಳು ಗುಡಿಯ ಹಂಗಿನಿಂದ ಹೊರಬಂದು ದೇಹವನ್ನೇ ಗುಡಿ ಮಾಡಿಕೊಳ್ಳಬೇಕು. ದೇಹ ಗುಡಿಯಾದರೆ ಅನಾಚಾರಗಳೆಲ್ಲ ಓಡಿಹೋಗುವವು. ಸಾಮಾಜಿಕ ರೋಗಗಳಿಗೆ ಇದೇ ಮದ್ದು. ಶರಣರ ಆದರ್ಶಗಳನ್ನು ಬೆಳಸಿಕೊಂಡರೆ ಮತ್ತೆ ಕಲ್ಯಾಣ ಸಾಧ್ಯವಾಗುವುದು. ಕಲ್ಯಾಣ ಎಂದರೆ ಮದುವೆ ಮಾಡಿಕೊಳ್ಳುವುದು ಅಥವ ಕಲ್ಯಾಣ ನಗರಕ್ಕೆ ಹೋಗುವುದು ಎಂದಲ್ಲ. ಮನಸ್ಸಿನ ಕೊಳೆ ತೊಳೆಯುವುದು ಅಷ್ಟು ಸುಲಭವಲ್ಲ. ಶರಣರೊಡನೆ ಅನುಭಾವ ಮಾಡುವುದರಿಂದ ಮನಸ್ಸಿನಲ್ಲಿ ಅಡಗಿರುವ ಕಾಮ, ಕ್ರೋಧ, ಮೋಹ, ಮದ, ಮತ್ಸರ ಮುಂತಾದ ಕೊಳೆಯನ್ನು ತೊಳೆದುಕೊಳ್ಳಲು ಸಾಧ್ಯ. ಬಸವಣ್ಣನನ್ನು ಬಿಟ್ಟು ಜಗತ್ತೇ ಇಲ್ಲ. ಕತ್ತಲೆಯಲ್ಲಿಯೂ ಬೆಳಕನ್ನು ನೀಡುವ ಶಕ್ತಿ ವಚನಗಳಿಗಿದೆ. ಮಕ್ಕಳಿಗೆ ವಚನ ಸಂಸ್ಕಾರ ಬೆಳಸುವ ಬಹುದೊಡ್ಡ ಜವಾಬ್ದಾರಿ ಪೋಷಕರ ಮೇಲಿದೆ. ಅದರಲ್ಲೂ ಕನ್ನಡದ ನೆಲದಲ್ಲಿ ವಾಸಿಸುವ ನಮಗೆ ಕರ್ತವ್ಯವಾಗಬೇಕು. ಬದುಕಿನಲ್ಲಿ ಹೊಸ ಬೆಳಕನ್ನು ವಚನಗಳಿಂದ ಕಾಣಲು ಸಾಧ್ಯ. ಹಣ ಸಂಪಾದಿಸಲು ಆದರ್ಶಬೇಕಿಲ್ಲ; ಸಾರ್ಥಕ ಬದುಕ ಬದುಕಲು ಆದರ್ಶಗಳು ಬೇಕು. ಹಣದ ಹಿಂದೆ ಓಡುತ್ತ ಬದುಕನ್ನು ನರಕ ಮಾಡಿಕೊಳ್ಳುತ್ತಿದ್ದೇವೆ. ಮಕ್ಕಳ ಜೊತೆಗಿನ ಸಂವಾದದಲ್ಲಿ ನಮ್ಮ ತಪ್ಪಿನ ಅರಿವಾಗುತ್ತದೆ. ಮಕ್ಕಳು ದಾರಿಬಿಟ್ಟಿಲ್ಲ; ಪೋಷಕರು ದಾರಿ ಬಿಟ್ಟಿದ್ದಾರೆ. ತಪ್ಪು ಮಾಡಿದವರ ಕಡೆ ಬೆರಳು ತೋರಿಸದೆ; ತಮ್ಮ ಅಂತರಂಗದ ಒಳ ಹೊಕ್ಕು ನೋಡಬೇಕಿದೆ. ದಾವಣಗೆರೆಯಲ್ಲಿ ತುಂಬ ಪರಿಣಾಮಕಾರಿಯಾಗಿ ಮತ್ತೆ ಕಲ್ಯಾಣ ನಡೆದಿದೆ. ಜನರಿಗೆ ಅಧ್ಯಾತ್ಮಿಕ, ನೈತಿಕ ಹಸಿವಿದೆ ಎನ್ನುವುದನ್ನು ಇದು ತೋರಿಸುತ್ತದೆ. ಇದು ಪ್ರಾರಂಭವೇ ಹೊರತು; ಮುಕ್ತಾಯವಲ್ಲ. ಸಹಮತ ವೇದಿಕೆಯ ಮೂಲಕ ನಿತ್ಯ ಕಲ್ಯಾಣವಾಗಬೇಕು. ವೇದಿಯ ಸದಸ್ಯರು ಮೊದಲು ದುಶ್ವಟಗಳಿಂದ ಹೊರಬರಬೇಕು. ಸಾಣೇಹಳ್ಳಿಯಲ್ಲಿ 20 ದಿನಗಳ ಕಾಲ ಯುವಕ-ಯುವತಿಯರಿಗೆ ಮತ್ತೆ ಕಲ್ಯಾಣದ ಆಶಯಕ್ಕನುಗುಣವಾಗಿ ಕಾರ್ಯಾಗಾರ ನಡೆಸಲಾಗುವುದು. ಆದೇಶದಿಂದ ಯಾರನ್ನೂ ಬದಲಾಯಿಸಲು ಸಾಧ್ಯವಿಲ್ಲ; ಮನವಿ, ಪ್ರಾರ್ಥನೆಯಿಂದ ಬದಲಾಯಿಸಲು ಖಂಡಿತಾ ಸಾಧ್ಯ. ಸಹಮತ ವೇದಿಕೆಯ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ಆರಂಭವಾಗಿ, ಸಮಯಕ್ಕೆ ಸರಿಯಾಗಿ ಮುಕ್ತಾಯವಾಗುವವು. ಇದು ಶಿಸ್ತು. ಈ ಶಿಸ್ತು ಬದುಕಿನಲ್ಲಿಯೂ ಬರಬೇಕು ಎಂದರು.
`ವಚನಕಾರರಲ್ಲಿ ಜಾತಿ ವಿನಾಶದ ಕಲ್ಪನೆ’ ಕುರಿತು ಡಾ. ರಾಜೇಂದ್ರ ಚೆನ್ನಿ ಮಾತನಾಡಿ ಜನರ ಅಂತಃಕರಣ ಬತ್ತಿಹೋಗಿರುವ ಈ ಸಂದರ್ಭದಲ್ಲಿ ಮತ್ತೆ ಕಲ್ಯಾಣ ಚಾರಿತ್ರಿಕ ಘಟನೆ. ಅಸಹನೆ, ದ್ವೇಷಗಳು ಅನಾವಶ್ಯಕವಾಗಿ ಎಲ್ಲೆಡೆ ವಿಜೃಂಭಿಸುತ್ತಿವೆಎ. ನೆರೆ ಸಂತ್ರಸ್ಥರ ಗಂಜಿ ಕೇಂದ್ರಗಳಲ್ಲೂ ಜಾತಿಯತೆ ಇರುವುದು ದುರದೃಷ್ಟಕರ ಸಂಗತಿ. ಪ್ರವಾಹದಲ್ಲಿ ದೇವರು, ದೇವಾಲಯಗಳೇ ಕೊಚ್ಚಿಹೋಗುತ್ತಿವೆ. ಆದರೆ ಜಾತೀಯತೆ ಮಾತ್ರ ಕೊಚ್ಚಿ ಹೋಗುತ್ತಿಲ್ಲ. ಭಾರತದ ನಾಗರೀಕತೆಯಲ್ಲಿಯೇ ಕಲ್ಯಾಣ ದೊಡ್ಡ ಕನಸು. ಮನುಷ್ಯ ಕುಲವೇ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಶರಣರು ಕಲ್ಯಾಣದ ಕನಸು ಕಂಡರು. ಆ ಎಲ್ಲ ಪ್ರಯೋಗಗಳು ಅರ್ಥಪೂರ್ಣವಾಗಿ ಮತ್ತು ಅಷ್ಟೇ ವಾಸ್ತವವಾಗಿ ಜನರ ಮುಂದೆ ಇಂದು ಬರಬೇಕಿದೆ. ಧರ್ಮ, ಜಾತಿಗಳೆನ್ನದೆ ಸಕಲರನ್ನು ಸಾಮರಸ್ಯದಿಂದ, ಸಹಾನುಭೂತಿಯಿಂದ ನೋಡುವುದು ಕಲ್ಯಾಣ. ಇತಿಹಾಸದ ತಪ್ಪುಗಳುನ್ನು ಸರಿ ಮಾಡುತ್ತೇವೆ ಎನ್ನುವುದು ಕಲ್ಯಾಣದ ದಾರಿಯಲ್ಲ. ಆಯಾ ಕಾಲದ ಅವಶ್ಯಕತೆ, ಸಂಕಷ್ಟಗಳಿಗೆ ತಕ್ಕಂತೆ ವಚನಕಾರರ ಆಶಯಗಳು ನೆರವಿಗೆ ಬರುತ್ತವೆ. ಜಗತ್ತಿನಲ್ಲೇ ಎಲ್ಲಿಯೂ ಆಗದೇ ಇರುವ ಚಳುವಳಿ ನಮ್ಮ ನಾಡಿನಲ್ಲಿ ಆಗಿದೆ ಎನ್ನುವುದರ ಬಗ್ಗೆ ನಮ್ಮ ವಿದ್ಯಾರ್ಥಿಗಳಿಗೆ ಗೊತ್ತಿಲ್ಲ. ಜಾತಿ ನಾಗರೀಕತೆಗೆ ಬಂದ ದೊಡ್ಡ ಶಾಪ. ದಿನದಿಂದ ದಿನಕ್ಕೆ ಜಾತಿಯತೆ ಇನ್ನೂ ಗಟ್ಟಿಗೊಳ್ಳುತ್ತಿರುವುದು ದುರದೃಷ್ಕರ ಸಂಗತಿ. ಜಾತಿ ರಾಜಕಾರಣದ ಒಂದು ಮಾಧ್ಯಮ, ತಂತ್ರವಾಗುತ್ತಿದೆ. ಅಂಬೇಡ್ಕರ್ರ ಸಂವಿಧಾನದ ಮೂಲ ಸ್ವರೂಪ ವಚನಕಾರರಲ್ಲಿದೆ. ವಿಶೇಷವಾಗಿ ಬಸವಣ್ಣನಲ್ಲಿವೆ. ಇಂಥದೇ ಸಂದರ್ಭವನ್ನು ಬಸವಣ್ಣ ಮತ್ತು ವಚನಕಾರರು ಎದುರಿಸಿದ್ದರು. ಬಸವಣ್ಣ ಜಾತಿ ವ್ಯವಸ್ಥೆಯ ಬಗ್ಗೆ, ಪರಿಹಾರದ ಬಗ್ಗೆ ಅನೇಕ ವಚನಗಳನ್ನು ರಚಿಸಿದ್ದಾರೆ. ಜಾತಿ ನಿರ್ನಾಮದ ಬಗ್ಗೆ ಮಾತನಾಡುವವರಿಗೆ ಭಯವನ್ನೊಡ್ಡಲಾಗುತ್ತಿದೆ. ಮೇಲು-ಕೀಳು ಎನ್ನುವ ಶ್ರೇಣೀಕರಣವಾಗಿ, ಕಸುಬುಗಳ ಬಗ್ಗೆ ಅವಮಾನಕರ ಭಾವನೆಯನ್ನು ಬೆಳೆಸಿಕೊಳ್ಳಲಾಯಿತು. ಜಾತಿ ಕಸುಬಿನಿಂದ ಬಂದುದು. ಆ ಕಸಬುಗಳನ್ನು ಕೂಡ ನಮಗೋಸ್ಕರವೇ ಮಾಡುತ್ತಿದ್ದರು ಎನ್ನುವುದನ್ನು ಮೇಲ್ಜಾತಿಯವರು ಮರೆತಿದ್ದಾರೆ. ಇವು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು. ಕೆಲವೇ ಕೆಲವರು ಶ್ರೇಷ್ಠವಾದುದನ್ನೆಲ್ಲ ಪಡೆಯುವ ಹುನ್ನಾರದ ಫಲವಾಗಿ ಜಾತಿಗಳು ಉದಯಿಸಿದವು. ಮನುಷ್ಯ ಸಂಬಂಧಗಳು ನಾಶವಾಗುತ್ತಿವೆ. ಜಾತಿಯ ವಾಸಸ್ಥಾನ ನಮ್ಮ ಮನಸ್ಸು, ಮೆದುಳು. ಇಲ್ಲಿಂದ ಜಾತಿಯನ್ನು ನಿವಾರಿಸಬೇಕು. ಮನಸ್ಸಿನಲ್ಲಿರುವ ಹೊಲಗೇರಿಯನ್ನು ನಿವಾರಣೆ ಮಾಡುವವರೆಗೂ ಜಾತಿಯತೆ ನಿವಾರಣೆ ಸಾಧ್ಯವಿಲ್ಲ. ಭಕ್ತನಾದವನಿಗೆ ಜಾತಿಯಿಲ್ಲ. ಸಕಲಜೀವಾತ್ಮರೂ ಸಮಾನರು ಎನ್ನುವ ಭಾವನೆಯನ್ನು ಜಾತಿ ವ್ಯವಸ್ಥೆ ವಿಕಾರಗೊಳಿಸುತ್ತಿದೆ. ಇವತ್ತಿನ ಮೌಲ್ಯಗಳ ಅವನತಿಯ ಸಂದರ್ಭದಲ್ಲಿ ಮತ್ತೆ ವಚನಕಾರರ ಮಾನವೀಯತೆಗೆ ನಾವು ವಾಪಸ್ ಹೋಗಬೆಕು. ಅದು ನಮ್ಮ ರಾಜಕೀಯ, ನಡವಳಿಕೆ, ನಂಬಿಕೆಯೂ ಆಗಬೇಕು. ಬಸವಣ್ಣನ ಭಕ್ತಿ ಚಲನಶೀಲವಾಗಿತ್ತು ಎಂದರು.
`ವಚನ ಸಾಹಿತ್ಯ ಮತ್ತು ಸಾಮಾಜಿಕ ಒಳಗೊಳ್ಳುವಿಕೆ’ ಕುರಿತು ಅನುಸೂಯ ಕಾಂಬಳೆ ಮಾತನಾಡಿ ಜಾತಿ ವಿಜೃಂಭಿಸುತ್ತಿರುವ ಸಂದರ್ಭದಲ್ಲಿ `ಮತ್ತೆ ಕಲ್ಯಾಣ’ದ್ದು ಮಹದಾಶಯ. ಬಸವಣ್ಣನವರ ಅನುಯಾಯಿಗಳು ಮಾತ್ರ ಇಂಥ ಸಾಹಸದ ಕೆಲಸಕ್ಕೆ ಮುಂದಾಗುವರು. ಜಾತಿಯ ಬಗ್ಗೆ `ಸಂಗದಿಂದ ಅಲ್ಲದೆ ಅಗ್ನಿ ಹುಟ್ಟದು, ಹೂವು ಅರಳದು’ ಎಂದು ಅಕ್ಕಮಹಾದೇವಿ ಮಾರ್ಮಿಕವಾಗಿ ಹೇಳಿದ್ದಾರೆ. ಮೇಲ್ಜಾತಿಯ ವರ್ಗಗಳು ಅಲ್ಪಸಂಖ್ಯಾತರು. ಕೆಳಜಾತಿಯ ಜನರೇ ಬಹುಸಂಖ್ಯಾತರು. ಆದರೂ ಇಂಥ ಬಹುಸಂಖ್ಯಾತರಿಗೆ ಅಧಿಕಾರ ಮತ್ತು ಆಸ್ತಿಯ ಹಕ್ಕನ್ನು ನಿರಕಾರಿಸಲಾಗಿತ್ತು. ವಚನಕಾರರು ದೇವ ಭಾಷೆಯನ್ನು ಬಿಟ್ಟು ಜನರ ಭಾಷೆಯಲ್ಲಿಯೇ ಸಮಾಜವನ್ನು ಕಟ್ಟಿದರು. ಅವರು ಪುಂಡರ ಗೋಷ್ಠಿಯ ಸ್ಥಾನದಲ್ಲಿ ಅನುಭವ ಗೋಷ್ಠಿಯನ್ನು ಸ್ಥಾಪಿಸಿದರು. ಜನರನ್ನು ಒಡೆದಾಳುವ ಧರ್ಮಗಳಿಂದ ಪಾರು ಮಾಡಲು ವಚನಸಾಹಿತ್ಯ ರಚಿತವಾಯಿತು. ಶರಣರ ಬಯಲ ಪ್ರಜ್ಞೆಯೇ ದೊಡ್ಡ ಪ್ರಜಾಸತ್ತಾತ್ಮಕ ನೆಲೆ. `ಆನು ಒಲಿದಂತೆ ಹಾಡುವೆ’ ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರ್ಯ. ತನ್ನನ್ನೂ ಸಹ ಕೀಳೀಕರಿಸಿಕೊಂಡು ತಳವರ್ಗದವರಿಗೆ ಆತ್ಮಬಲ ನೀಡಿದ ಬಸವಣ್ಣನ ಪ್ರಯೋಗ ಇಂದೂ ಕೂಡ ಅವಶ್ಯ. ಮೊದಲು ಅಧ್ಯಾತ್ಮಿಕತೆ ವ್ಯಕ್ತಿ ಕೇಂದ್ರಿತವಾಗಿತ್ತು. ಶರಣರು ಅದನ್ನು ಸಮಾಜಕೇಂದ್ರೀಕರಿಸಿದರು. `ಕೀಳಿಂಗಲ್ಲದೆ ಹಯನು ಕರೆಯುವುದೇ’ ಎನ್ನುವ ಮೂಲಕ ಕೀಳು ಜನರೆಂದು ಜರಿಯುವವರಿಗೆ ಗೌರವ ತಂದುಕೊಟ್ಟರು. ಜನರ ಅಜ್ಞಾನ ಮತ್ತು ಭಯವನ್ನೇ ಬಂಡವಾಳ ಮಾಡಿಕೊಂಡು ದೇವರ ಅಸ್ತಿತ್ವವಾಯಿತು ಎಂದರು ಬುದ್ಧ. ಜನರ ವರ್ತನೆಗಳನ್ನು ತಿದ್ದುವ ಕೆಲಸವನ್ನು ವಚನಗಳು ಮಾಡುತ್ತಿವೆ. ಕಳ್ಳನೂ ಶರಣನಾದುದು ಬಸವಣ್ಣನ ಸಂಪರ್ಕದಿಂದ. ಮನುಷ್ಯ ತನ್ನ ಬದುಕಿನ ಬಗೆಗೆ ಯೋಚಿಸಬೇಕೇ ಹೊರತು; ಕಣ್ಣಿಗೆ ಕಾಣದ ಸ್ವರ್ಗ-ನರಕಗಳ ಬಗ್ಗೆ ಅಲ್ಲ. ಬಸವಣ್ಣ ಕನ್ನಡದ ನೆಲದವನು ಎಂದು ಹೇಳಲು ಹೆಮ್ಮೆ ಎನ್ನಿಸುತ್ತದೆ. ಶಿವ ತತ್ವ ಚಲನಶೀಲವಾದುದು. ಶಿವ ಶೂದ್ರರ ಪ್ರತೀಕ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿ ಸಿದ್ಧರಾಮ ಶರಣರು ಮಾತನಾಡಿ `ಮತ್ತೆ ಕಲ್ಯಾಣ’ ಜಾತ್ರೆಯಲ್ಲ; ಪರಿವರ್ತನೆಯ ಅಭಿಯಾನ. ಪಂಡಿತಾರಾಧ್ಯ ಶ್ರೀಗಳು ಜಾತಿ ರಹಿತ, ಸಮ ಸಮಾಜದ ವೈಭವ ಕಾಣಲು ಮತ್ತೆ ಕಲ್ಯಾಣ ಅಭಿಯಾನ ಆಯೋಜಿಸಿದ್ದಾರೆ. ಇಲ್ಲಿ ಸೇರಿರುವ ಜನರೆಲ್ಲ ಬಸವಣ್ಣನ ಅಮರಗಣಂಗಳು. ನಿಮ್ಮ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆ. ಶರಣರ ವಚನಗಳಿಗೆ ಬದ್ಧರಾಗಿರುವ ಜನ ಈಗಲೂ ಇದ್ದಾರೆ. ದಾವಣಗೆರೆ ದೇವನಗರಿಯಲ್ಲ; ಶರಣನಗರಿಯಾಗಬೇಕು ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಮಂಜುನಾಥ ಕುರ್ಕಿ ಸ್ವಾಗತಿಸಿದರೆ, ಕೆ ಸಿ ಲಿಂಗರಾಜು ಕಾರ್ಯಕ್ರಮ ನಿರ್ವಹಿಸಿದರು. ಸಿರಾಜ್ ಅಹಮ್ಮದ್ ವಂದಿಸಿದರು. ಕಾರ್ಯಕ್ರಮದ ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ `ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಂಡಿತು. ನಾಟಕ ಮುಗಿದ ಮೇಲೆ ಪ್ರೇಕ್ಷಕರು ನಾಟಕದ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡರು.
ಶ್ರೀ ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಸಾಮರಸ್ಯ ನಡಿಗೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದೊಂದಿಗೆ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪಕ್ಕೆ ಬಂದು ತಲುಪಿದರು. ನೆರೆ ಸಂತ್ರಸ್ಥರ ನಿಧಿ 22714 ರೂಪಾಯಿಗಳು ಸಂಗ್ರಹವಾಯಿತು.
ವಿದ್ಯಾರ್ಥಿಗಳೊಂದಿಗೆ ಸಂವಾದ
ಆಗಸ್ಟ್ 22; ದಾವಣಗೆರೆ; ಇಲ್ಲಿನ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸಿ `ಮತ್ತೆ ಕಲ್ಯಾಣ’ ಶಿಸ್ತುಬದ್ಧವಾಗಿ ನಡೆಯುವ ಕಾರ್ಯಕ್ರಮ. ಇದು ಅಬ್ಬರದ ಕಾರ್ಯಕ್ರಮವಲ್ಲ; ಆದರ್ಶದ ಕಾರ್ಯಕ್ರಮ. 12 ನೆಯ ಶತಮಾನದ ಶರಣರು ಆದರ್ಶಗಳನ್ನು ಲೋಕಕ್ಕೆ ಹೇಳುವ ಮುನ್ನ ತಮಗೆ ತಾವೇ ಹೇಳಿಕೊಂಡರು, ಅದರಂತೆ ನಡೆದುಕೊಂಡರು. ಅನ್ಯರ ದೋಷಗಳನ್ನೇ ಪ್ರಮುಖವಾಗಿ ಹೇಳುವ ನಾವು ನಮ್ಮೊಳಗೆ ನೋಡಿಕೊಳ್ಳಬೇಕಿದೆ. 12 ನೆಯ ಶತಮಾನದ ಪೂರ್ವದಲ್ಲಿದ್ದ ಅಸಮಾನತೆಗಳಾದ ಜಾತಿ, ಲಿಂಗ ತಾರತಮ್ಯ, ಭ್ರಷ್ಟಾಚಾರಗಳು ಇಂದು ಮೇರೆ ಮೀರಿವೆ. ಸಮಸಮಾಜ ನಿರ್ಮಿಸುವ ಕಾಯಕದಲ್ಲಿ ಶರಣರು ಯಶಸ್ವಿಯಾಗಿದ್ದರು. ಆದರೆ ಇಂದು ಯಾಕೆ ಅದು ಸಾಧ್ಯವಾಗುತ್ತಿಲ್ಲ ಎಂದು ವಿವೇಚಿಸುವ ಕಾಲ ಕೂಡಿಬಂದಿದೆ. ನಾಳಿನ ನಾಡನ್ನು ಕಟ್ಟಬೇಕಾದವರು ಯುವ ಪೀಳಿಗೆ. ಯುವಕರು ಆಧುನಿಕ ತಂತ್ರಜ್ಞಾನದಿಂದ ದಿಕ್ಕುತಪ್ಪಿದ್ದಾರೆ, ಅವರಿಗೆ ಯಾರೂ ಹೇಳುವಂತಿಲ್ಲ, ಕೇಳುವಂತಿಲ್ಲ ಎಂದು ದೂರುವರು. ಆದರೆ ನಿಜಕ್ಕೂ ಆಶ್ಚರ್ಯದ ಸಂಗತಿ ವಿದ್ಯಾರ್ಥಿಗಳಲ್ಲಿ ಸದ್ಭಾವನೆಯಿದೆ. ಅವರಿಗೆ ಪ್ರೇರಣೆ ನೀಡಿದರೆ ಸಾಕು. ಆಧುನಿಕ ಶಿಕ್ಷಣ ಶರಣರನ್ನಾಗಿ ಮಾಡಬೇಕು. ದುರಾಚಾರಗಳು ಬಹುತೇಕ ನಡೆಯುತ್ತಿರುವುದೇ ವಿದ್ಯಾವಂತರಿಂದ. ಶಿಕ್ಷಣಕ್ಕಿಂತ ಸಂಸ್ಕಾರ ಮುಖ್ಯ. ಅರಿವು ಮತ್ತು ಆಚಾರಗಳು ಒಂದಾಗುವುದೇ ಸಂಸ್ಕಾರ. ಸಂಸ್ಕಾರದ ಕೊರತೆಯಿಂದಾಗಿ ಜನ ಮೌಢ್ಯಗಳಿಗೆ ಒಳಗಾಗುತ್ತಿದ್ದಾರೆ. ಸತ್ಯವನ್ನು ಆಡಬೇಕು ಎನ್ನುವುದ ಜ್ಞಾನ; ಅದರಂತೆ ನಡೆದುಕೊಳ್ಳುವುದೇ ಕ್ರಿಯೆ. ಆದರ್ಶಗಳು ಅರಳವುದು ಒಳಗೇ ಹೊರತು ಹೊರಗಲ್ಲ. ಮನವರಿಯದ ಕಳ್ಳತನವಿಲ್ಲ ಎನ್ನುವಂತೆ ಅಂತರಂಗವನ್ನು ಬೆಳಕಿನ ಕಡೆ ಕರೆದುಕೊಂಡು ಹೋಗುವುದೇ ಮತ್ತೆ ಕಲ್ಯಾಣ. ಪ್ರಾಥಮಿಕ ಹಂತದಿಂದ ವಿಶ್ವ ವಿದ್ಯಾಲಯದ ತನಕ ಎಲ್ಲ ವಿದ್ಯಾರ್ಥಿಗಳಿಗೆ ವಚನಗಳ ಪಠ್ಯದ ಅಳವಡಿಕೆ ಅಗತ್ಯ. ವಚನಗಳಲ್ಲಿ ಈಗಿನ ಕಾಲದಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲ ಶಾಸ್ತ್ರಗಳೂ ಅಡಕವಾಗಿವೆ. ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಪ್ರೋತ್ಸಾಹಿಸಬೇಕೇ ವಿನಾ ಮೊಟುಕುವ ಕಾರ್ಯ ಮಾಡಬಾರದು. ಚನ್ನಬಸವಣ್ಣ ವಯಸ್ಸಿನಲ್ಲಿ ಕಿರಿಯರಾಗಿದ್ದರೂ ಬಸವಣ್ಣ, ಅಲ್ಲಮಪ್ರಭುವಿನಂತಹ ಹಿರಿಯರನ್ನು ಪ್ರಶ್ನಿಸುವರು. ಶರಣರು ಎಲ್ಲಾ ಅಸಮಾನತೆಗಳನ್ನು ದೂರಮಾಡಿದರು. ಅವರ ತತ್ವವಿಚಾರಗಳು ಎಂದೆಂದಿಗೂ ಪ್ರಸ್ತುತ. ಶಿಷ್ಯ ತನ್ನನ್ನು ಮೀರಿ ಬೆಳೆದರೆ ಗುರುವಿಗೆ ಆಗುವ ಸಂತೋಷ ಅಪರಿಮಿತ. ಈಗ ಅಂತಹ ಗುರು-ಶಿಷ್ಯರ ಅವಶ್ಯಕತೆ ಇದೆ. ಯಾವ ಸಮಾಜದಲ್ಲಿ ಉತ್ತಮ ಗುರುವಿಲ್ಲವೋ ಉತ್ತಮ ಶಿಷ್ಯರೂ ಇರುವುದಿಲ್ಲ. ಅಂತಹ ಸಮಾಜ ಮುಂದುವರಿಯಲು ಸಾಧ್ಯವಿಲ್ಲ. ಶರಣರು ದೇಹವೇ ದೇವಾಲಯ ಮಾಡಿಕೊಂಡು ದೇವಾಲಯದ ಭ್ರಮೆಯಿಂದ ಹೊರಬಂದವರು. ದುಶ್ಚಟಗಳಿಂದ ದೂರವಾಗಲು ಸಜ್ಜನರ ಸಂಗ ಅತಿ ಅವಶ್ಯ. ಶರಣರಿಗೆ ಯಾವುದೇ ಜಾತಿಯಿಲ್ಲ. ಅವರ ಜಾತಿ ಮಾನವ ಜಾತಿ.
ದಾದಾಪೀರ್ ನವಿಲೆಹಾಳ್ ಮಾತನಾಡಿ ವಚನಗಳು ನಮ್ಮ ಬದುಕಿನ ಸಂವಿಧಾನ. ಅವು ನಮ್ಮ ಬದುಕಿಗೆ ಬೇಕಾದ ಎಲ್ಲಾ ಪಾಠಗಳನ್ನು ಹೇಳುತ್ತವೆ. ಅಲ್ಲಮಪ್ರಭುಗಳು ಹೇಳಿದಂತೆ ಗುರುಗಳು ವಿದ್ಯಾರ್ಥಿಗಳಿಗಂಜಿ ನಡೆಯಬೇಕಾಗಿದೆ. ಅಧ್ಯಾಪಕರು ಅಂಕ ಗಳಿಕೆಯ ದೃಷ್ಟಿಯಿಂದ ಪಾಠಮಾಡದೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ದೃಷ್ಟಿಯಿಂದ ಪಾಠಮಾಡಬೇಕು. ವಿದ್ಯಾರ್ಥಿಗಳ ಹಂತಕ್ಕೆ ಇಳಿದು ಪಾಠಮಾಡಬೇಕು. ಮೊನ್ನೆ ಪ್ರವಾಹವಾದಾಗ ತೇಲಿ ಹೋಗುತ್ತಿದ್ದ ದೇವರ ಫೋಟೋಗಳು ಹಿಡಿಯುವ ಪ್ರಯತ್ನ ನಡೆಯುತ್ತಿತ್ತು. ಇಲ್ಲಿ ಯಾರು ಯಾರನ್ನು ಕಾಪಾಡುತ್ತಿದ್ದಾರೆ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಜಾತಿ, ಲಿಂಗ ಮುಂತಾದ ತರತಮಗಳು ಮನುಷ್ಯ ಸೃಷ್ಟಿ. ಇವುಗಳನ್ನು ಮೀರುವುದೂ ನಮ್ಮ ಕೈಯಲ್ಲಿಯೇ ಇದೆ. ನಾವು ಯಾವುದೇ ಕಾಯಕದಿಂದ ಶ್ರೇಷ್ಠತೆಯನ್ನು ಪಡೆದುಕೊಳ್ಳಬಹುದು. ಕಾಯಕದಿಂದ ಜ್ಞಾನವನ್ನು ಪಡೆದುಕೂಳ್ಳಬಹುದೇ ಹೊರತು ಜ್ಞಾನದ ಮೂಲಕ ಕಾಯಕ ಮಾಡಿಕೊಳ್ಳುತ್ತೇನೆ ಎಂಬುದು ಭ್ರಮೆ. ಬದಲಾಗಬೇಕಾದದ್ದು ಕೆಟ್ಟವರು. ಸಜ್ಜನರ ಬಲದಿಂದ ದುರ್ಜನರು ದೂರವಾಗಬೇಕು. ಸಂವಿಧಾನತ್ಮಕವಾದ ಸರಕಾರಗಳು ಮಾಡದೇ ಇರುವ ಕೆಲಸಗಳನ್ನು ಮಠಗಳು ಮಾಡುತ್ತಿವೆ. ಜಾತಿಯನ್ನು ಮೀರಿದ ಮಠಗಳು ನಮ್ಮಲ್ಲಿವೆ. ಬಸವಣ್ಣನವರಲ್ಲಿ ಪ್ರಾಮಾಣಿಕೆತೆಗೆ ಹೆಚ್ಚು ಬೆಲೆಯಿತ್ತು. ಆ ಕಾರಣಕ್ಕಾಗಿಯೇ ಅವರಲ್ಲಿ ನೈತಿಕತೆ ಬಂದಿತು.
ಅರುಣಕುಮಾರಿ ಬಿರಾದಾರ ಮಾತನಾಡಿ ವಚನಗಳು ನಮ್ಮನ್ನು ವಾಸ್ತವತೆಯ ಕಡೆಗೆ ಕೊಂಡೊಯ್ಯುತ್ತದೆ. ದೇವರನ್ನು ಪ್ರಶ್ನಿಸುವ ಎದೆಗಾರಿಕೆ ಶರಣರಲ್ಲಿತ್ತು. ಪ್ರತಿಯೊಬ್ಬ ಶರಣರೂ ಕಾಯಕ ಜೀವಿಗಳಾಗಿದ್ದರು. ಅವರು ಆತ್ಮವೇ ದೇವರೆಂದು ತಿಳಿದು ಗುಡಿಗುಂಡಾರಗಳನ್ನು ತಿರಸ್ಕಾರ ಮಾಡಿದರು. ಜಾತಿ ಪರಿಕಲ್ಪನೆಯಿಂದ ನಾವೆಲ್ಲರೂ ಹೊರಬರಬೇಕು. ನಾವು ಬರೀ ಅಕ್ಷರಸ್ಥರಾಗಿದ್ದೇವೆಯೇ ಹೊರತು; ವಿವೇಕಿಗಳಾಗಿಲ್ಲ. ನಮ್ಮ ನಡೆನುಡಿ ಶುದ್ಧಿಯಾಗಿದ್ದರೆ ಯಾವ ಮೌಢ್ಯಾಚರಣೆಗೂ ಅವಕಾಶವಿರುವುದಿಲ್ಲ.
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು :
• ಕರ್ಮಮಾರ್ಗ, ತತ್ವಮಾರ್ಗ, ಯೋಗಮಾರ್ಗ, ಜ್ಞಾನಮಾರ್ಗಗಳಲ್ಲಿ ವಿದ್ಯಾರ್ಥಿಗಳು ಯಾವ ಮಾರ್ಗ ಹಿಡಿಯಬೇಕು?
• ಬಸವಾದಿ ಶಿವಶರಣರ ವಿಚಾರಧಾರೆಗಳು ಪ್ರಸ್ತುತ ದಿನಮಾನಗಳಲ್ಲಿ ಎಷ್ಟರಮಟ್ಟಿಗೆ ಪ್ರಸ್ತುತ?
• ಶಾಲಾ ಕಾಲೇಜುಗಳಲ್ಲಿ ವಚನಗಳನ್ನು ಪಠ್ಯದಲ್ಲಿ ಅಳವಡಿಸಿದ್ದಾರೆ. ಅದರೆ ಅದು ಮಕ್ಕಳ ಮನಸ್ಸಿಗೆ ತಲುಪುತ್ತಿಲ್ಲ. ಇದಕ್ಕೆ ಕಾರಣವೇನು?
• ಇತ್ತೀಚಿಗೆ ಕೋಮವಾದಗಳು ಹೆಚ್ಚಾಗಿವೆ. ಇದನ್ನು ಹೋಗಲಾಡಿಸಲು ವಚನಗಳು ಹೇಗೆ ಸಹಕಾರಿಯಾಗಿವೆ?
• ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಬಸವಣ್ಣನವರು ಹೇಳಿದರು. ಆದರೆ ಇಂದು ದೇವಾಲಯ ಸಂಸ್ಕೃತಿ ಹೆಚ್ಚಾಗಿದೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
• ಗುಡಿಗುಂಡಾರಕ್ಕೆ ಹೋದ್ರು, ಸ್ವಾಮಿಗಳ ಪಾದಕ್ಕೆ ನಮಸ್ಕಾರ ಮಾಡಿದ್ರೂ ಯಾಕೆ ದುಶ್ಚಟಗಳಿಂದ ಜನ ದೂರವಾಗಿಲ್ಲ?
• ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು. ಸಮಾಜದಲ್ಲಿ ಏಕೆ ತಾರತಮ್ಯವಿದೆ?
• ಉದ್ಯೋಗ ಮತ್ತು ಕಾಯಕದ ನಡುವಿನ ವ್ಯತ್ಯಾಸವೇನು?
• ವಚನಕಾರರು ವೇದೋಪನಿಷತ್ತುಗಳನ್ನು ಅಭ್ಯಾಸಿಸಿದ್ದಾರೆಯೇ?
• ಅನುಭವ ಮತ್ತು ಅನುಭಾವಕ್ಕಿರುವ ವ್ಯತ್ಯಾಸವೇನು?
• ಬಸವಣ್ಣನವರು ಜಾತಿ ವಿನಾಶದ ಪರಿಕಲ್ಪನೆ ಹೊಂದಿದ್ದರು. ಆದರೆ ಬಸವಣ್ಣನವರನ್ನೇ ಜಾತಿಗೆ ಸೀಮಿತಗೊಳಿಸಿರುವುದು ಎಷ್ಟರಮಟ್ಟಿಗೆ ಸರಿ?
• ಸುಸಂಸ್ಕತ ಜೀವನಕ್ಕೆ ಆಧ್ಯಾತ್ಮಿಕ ಬೇಕು. ಸಾಧನೆಗೆ ತಂತ್ರಜ್ಞಾನ ಬೇಕು. ಇವೆರಡರಲ್ಲಿ ಯಾವುದನ್ನು ಹಿಡಿಯಬೇಕು?
• ಅಂತರ್ ಜಾತಿ ವಿವಾಹಗಳ ಪ್ರಕ್ರಿಯೆಯನ್ನು ಮತ್ತೆ ಕಲ್ಯಾಣದ ಮೂಲಕ ಹೇಗೆ ಈಡೇರಿಸುತ್ತೀರಿ?
• ಪುಣ್ಯಸ್ತ್ರೀ ಎನ್ನುವ ಪರಿಕಲ್ಪನೆಯೇನು? ಆ ಹೆಸರನ್ನು ಯಾಕೆ ಕರೆಯುತ್ತಾರೆ?
• ಪ್ರಸ್ತುತ ದಿನಮಾನಗಳಲ್ಲಿ ಧಾರ್ಮಿಕ ಮನೋಭಾವನೆಯನ್ನು ಹೇಗೆ ಬೆಳೆಸಿಕೊಳ್ಳಬೇಕು?
• ಲಿಂಗ ಅಸಮಾನತೆ ಸಮಾಜದಲ್ಲಿ ತುಂಬಾ ಇದೆ. ಇದನ್ನು ತೊಲಗಿಸಬೇಕಾದ ಮಾರ್ಗವೇನು?
• ಮತ್ತೆ ಕಲ್ಯಾಣ ಕಾರ್ಯಕ್ರಮದ ಮೂಲಕ ಆಧುನಿಕ ಮಹಿಳೆಯರ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತೀರಿ?
• ಸಕಲ ಜೀವಾತ್ಮರಿಗೆ ಕಲ್ಯಾಣವಾಗಬೇಕಾದರೆ ನಮಗೆ ಯಾವ ಪ್ರಜ್ಞೆ ಇರಬೇಕು?
• ಹಿರಿಯರು ಜಾತಿ ವ್ಯವಸ್ಥೆಯನ್ನು ಮೇಲಿನ ಮಾತಿಗೆ ಬೇಡವೆನ್ನುತ್ತಾರೆ. ಒಳಗಡೆ ಜಾತಿ ವ್ಯವಸ್ಥೆ ಇದೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
• ಬಸವಣ್ಣನವರ ಸಮಸಮಾಜದ ಕಲ್ಪನೆ ಮತ್ತೆ ಕಲ್ಯಾಣದ ಮೂಲಕ ಈಡೇರಿಸುತ್ತದೆಯೇ?
• ವಿದ್ಯಾರ್ಥಿಗಳು ಹೇಗೆ ನಿಸ್ವಾರ್ಥ ಸೇವಾಮನೋಭಾವವನ್ನು ಬೆಳೆಸಿಕೊಳ್ಳಬೇಕು?
• ರಾಜಕಾರಣಿಗಳು ಜಾತಿಯನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ?
• ಯುವಪೀಳಿಗೆ ಹಾಳುಗುತ್ತಿದೆ ಎಂಬ ಮಾತು ಸತ್ಯ. ದಾರಿಯನ್ನು ತೋರಿಸುವ ಹಿರಿಯರು ದಾರಿ ತಪ್ಪಿದ್ದಾರೆ. ಹಾಗಾದರೆ ದಾರಿಯನ್ನು ತೋರಿಸುವವರು ಯಾರು?
• ಶರಣರ ವಿಚಾರದಲ್ಲಿ ಪಾಪ ಮತ್ತು ಪುಣ್ಯಗಳ ಪರಿಕಲ್ಪನೆಯೇನು?
• ಪುರೋಹಿತರು ಜನರನ್ನು ದಿಕ್ಕು ತಪ್ಪಿಸುತ್ತಾರೆ? ಇದಕ್ಕೆ ಕೊನೆಯಿಲ್ವಾ?
- ಹೆಚ್ ಎಸ್ ದ್ಯಾಮೇಶ್
9449649850

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)