ಆಗಸ್ಟ್ ೨೧ ಬುಧವಾರ, ಕೊಪ್ಪಳ

ಕೊಪ್ಪಳದಲ್ಲಿ 21ನೇ ದಿನದ ಮತ್ತೆ ಕಲ್ಯಾಣ ಆಂದೋಲನ. ಅಭಿಯಾನದಲ್ಲಿ ಸಾರ್ವಜನಿಕ ಸಮಾವೇಶ. ಅನನ್ಯ ಟಿವಿ-ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ


ಇಲ್ಲಿನ ಶ್ರೀ ಶಿವಾನುಭವ ಮಂಟಪ, ಚರಂತಿ ಮಠದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬಸವಣ್ಣನವರು ತಮ್ಮ ವಚನವೊಂದರಲ್ಲಿ ಉಲ್ಲೇಖಿಸಿದಂತೆ `ಕಾಲಲ್ಲಿ ಗುಂಡು, ಕೊರಳಲ್ಲಿ ಬೆಂಡನ್ನು ಕಟ್ಟಿಕೊಂಡು ಇತ್ತ ತೇಲಲೂ ಆಗದ, ಮುಳುಗಲೂ ಆಗದ’ ಸಂದಿಗ್ಧ ಸ್ಥಿತಿಯಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ನಮಗೆ ದಿಕ್ಕಾಗುವುದು ಬಸವಾದಿ ಶರಣರ ಬದುಕು-ಬರಹಗಳು. ಅವರ ಆಲೋಚನೆಯ ಬೆಳಕಿನಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ. `ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ’ ಎನ್ನುವಂತೆ ಮಂದಿರ, ಮಸೀದಿ, ಚರ್ಚುಗಳಿಗೆ ಹೋದಾಗ ಮಾತ್ರ ಪ್ರಾರ್ಥನೆ ಸಲ್ಲಿಸಿ ನಂತರ ಮತ್ತದೆ ಮೋಸ, ವಂಚನೆ, ಸ್ವಾರ್ಥದ ಬದಕುನ್ನು ಸಾಗಿಸುವವರು ಎಲ್ಲಿಯೂ ಸಲ್ಲುವುದಿಲ್ಲ. ಭಗವಂತನ ಬಳಿ ಸಲ್ಲಬೇಕೆಂದರೆ ವಚನಕಾರರು ಹೇಳಿದಂತೆ ಅಂತರಂಗ-ಬಹಿರಂಗ ಶುದ್ಧಿಯಾಗಬೇಕು. ಸಕಲ ಜೀವಜಂತುಗಳ ಹಿತ ಬಯಸುವ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅಂತರಂಗದ ಶುದ್ಧಿ ತಿರ್ಥಕ್ಷೇತ್ರಗಳಿಗೆ ಹೋಗಿ ಮುಳಗಿ-ಎದ್ದರೆ ಆಗುವದಿಲ್ಲ. ನಿತ್ಯವೂ ದೇವರನ್ನು ಪೂಜಿಸುವ ಪೂಜಾರಿಗಳಿಗೆ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಾಗಿಲ್ಲದಿರುವುದನ್ನು ನಾವು ಗಮನಿಸಬೇಕು. ಹೀಗಾಗಿಯೇ ವಚನಕಾರರು ದೇಹವನ್ನೇ ಗುಡಿ ಮಾಡಿಕೊಂಡು ದುಡಿದರೆ ಶಿವ ಖಂಡಿತ ಒಲಿಯುವನು ಎಂದು ಹೇಳಿದುದು. ಸೋಮಾರಿಗಳನ್ನು ಭಗವಂತ ಎಂದಿಗೂ ಮೇಲೆತ್ತಲು ಸಾಧ್ಯವಿಲ್ಲ. ದೇಹ, ಮನಸ್ಸು, ಬುದ್ಧಿಯನ್ನು ಶುದ್ಧವಾಗಿಟ್ಟುಕೊಂಡರೆ ಅದೇ ಸಾರ್ಥಕ ಬದುಕು. ಅರಿವು-ಆಚಾರ ಒಂದಾಗದ ಹೊರತು ವ್ಯಕ್ತಿತ್ವ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಹೊರಗೆ ಹಾಕಿರುವ ವೇಷಗಳಿಗಿಂತ ಒಳಗಿನ ವೇಷಗಳನ್ನು ಕಳಚಬೇಕು. ಪ್ರತಿಯೊಂದು ಧರ್ಮದ ಮೂಲ ಉದ್ದೇಶ; ವ್ಯಕ್ತಿಯ ಸಣ್ಣತನಗಳನ್ನು ಕಳೆದು ಬೆಳಕು ಮೂಡಿಸುವುದು. ಒಳಗಿನ ಬೆಳಕು ಮೂಡಲು ಆಚಾರ-ವಿಚಾರ ಶುದ್ಧಿ, ಸಜ್ಜನರ ಸಂಗ ಮುಖ್ಯವಾದುದು. ಹಣದ ಹಿಂದೆ ಜಗತ್ತು ಓಡುತ್ತಿದೆ. ಸಿರಿವಂತಿಕೆಯಿಂದ ಯಾರೂ ಜನಮಾನಸದಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ. ನೈತಿಕ ನೆಲೆಟ್ಟನ್ನು ಭದ್ರಪಡಿಸಿಕೊಂಡರೆ ಸೂರ್ಯ ಚಂದ್ರರಿರುವ ತನಕ ಜನಮಾನಸದಲ್ಲಿರುಬಹುದು. ಬುದ್ಧ, ಏಸು, ಗಾಂಧಿ, ಬಸವಣ್ಣ ಮೊದಲಾದ ಸಂತರು ಇದಕ್ಕೆ ಸಾಕ್ಷಿ. ಬುದ್ಧನ `ಆಸೆಯೇ ದುಃಖಕ್ಕೆ ಮೂಲ’ ಎನ್ನುವ ಸತ್ಯವನ್ನು ಮನವರಿಕೆ ಮಾಡಿಕೊಂಡರೆ ಸಾಕು. ಆಸೆ ದುರಾಸೆಯಾಗಬಾರದು. ಶರಣರು ಅರ್ಥ, ಕುಲ, ಅಧಿಕಾರ ಮದವನ್ನು ಕಳೆದುಕೊಂಡು ಶ್ರೇಷ್ಠರಾದರು. ಶ್ರೇಷ್ಠತೆ-ಕನಿಷ್ಠತೆ ಮಾಡುವ ಕಾಯಕದಿಂದ ಬರುವುದು. ಅಧಿಕಾರ ಇಂದು ಮದೋನ್ಮತ್ತರನ್ನಾಗಿ ಮಾಡುತ್ತಿದೆ. ತಾವು ನಂಬಿದ ತತ್ವಕ್ಕಾಗಿ ರಾಜಿನಾಮೆ ನೀಡಿದ ಮೊದಲ ರಾಜಕಾರಣಿ ಬಸವಣ್ಣ. ಕಲ್ಯಾಣ ಎಂದರೆ ನಮ್ಮನ್ನು ನಾವು ಒಳಿತಿನ ಕಡೆ ಕರೆದುಕೊಂಡು ಹೋಗುವುದು. ಇಂಥ ಕಲ್ಯಾಣದ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲೂ ಇದೆ. ವ್ಯಕ್ತಿ ಬದಲಾವಣೆಯಾಗದೆ ಸಮಾಜದ ವ್ಯಕ್ತಿತ್ವ ನಿರ್ಮಾಣವಾಗದು ಎಂದರು.
`ಕಲ್ಯಾಣ ರಾಜ್ಯದ ಕನಸುಗಳು’ ಕುರಿತು ಡಾ. ಸಿದ್ಧನಗೌಡ ಪಾಟೀಲ್ ಮಾತನಾಡಿ ಜಾತಿ, ಮತ, ಭಾಷೆ, ಪ್ರಾಂತ್ಯಗಳೆನ್ನದೆ ನೊಂದವರ, ಬೆಂದವರ, ಸಂತ್ರಸ್ತರ ನೆರವಿಗೆ ಬರುವುದೇ ಕಲ್ಯಾಣದ ಆಶಯ. ಮತಾಂಧತೆ ಬೇರೆ, ಧರ್ಮೀಯತೆ ಬೇರೆ. ಮತಾಂಧರನ್ನು ಒಟ್ಟುಗೂಡಿಸುವುದೇ ಧರ್ಮೀಯತೆ. ಬಸವಣ್ಣನವರ ಆಶಯ; ದಯವಿಲ್ಲದ ಧರ್ಮವಾವುದಯ್ಯಾ ಎನ್ನುವುದಾಗಿತ್ತು. ಆದರೆ ಇಂದು ಧಮನವೇ ಧರ್ಮದ ಮೂಲವಯ್ಯ ಎನ್ನುವಂತಾಗಿದೆ. ಇಂಥ ಪ್ರಕ್ಷುಬ್ಧ ಸಮಯದಲ್ಲಿ ಮತ್ತೆ ಕಲ್ಯಾಣದ ಅನಿವಾರ್ಯತೆಯಿದೆ. ನಮ್ಮ ಎಲ್ಲ ಸಾಧು ಸಂತರು ಮಾನವಧರ್ಮದ ಬೆಳಕು ಬೀರಿದ್ದಾರೆ. ಆದರೆ ಇಂದು ಮತೀಯವಾದ ಆ ಬೆಳಕನ್ನು ನಂದಿಸುವ ಕೆಲಸ ಮಾಡುತ್ತಿದೆ. ಈ ಬಗ್ಗೆ ಎಚ್ಚರಿಕೆಯಿಂದಿರಬೇಕು. ದೇವಾಲಯ, ಚರ್ಚು, ಮಸೀದಿಗಳು ಕೇವಲ ಸಂಕೇತಗಳೇ ಹೊರತು ಭಾವನೆಗಳಲ್ಲ. ಪೂಜೆ ಒಳಗಿನ ಶ್ರದ್ಧೆಗೆ ಸಂಬಂಧಪಟ್ಟದ್ದೇ ಹೊರತು ಹೊರಗಿನ ದೇವರಲ್ಲಿ ಅಲ್ಲ. ಈ ಹಿನ್ನೆಲೆಯಲ್ಲಿಯೇ ವಚನಕಾರರು ದೇಹವೇ ದೇವಾಲಯ ಎಂದದ್ದು. ಸಂವಿಧಾನದ ಮೂಲ ಆಶಯ ಮನುಷ್ಯನನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಉನ್ನತೀಕರಿಸುವುದೇ ಆಗಿದೆ. ಈ ಎಲ್ಲ ಆಶಯಗಳನ್ನೇ ಕಲ್ಯಾಣದ ವಚನಕಾರರೂ ಹೇಳಿದುದು. ಕಸಗುಡಿಸುವ ಸತ್ಯಕ್ಕ `ದಾರಿಯಲ್ಲಿ ಹೊನ್ನು ವಸ್ತ್ರ ಬಿದ್ದಿದಡೆ ಅದನ್ನು ನಾನು ಕೈ ಎತ್ತಿ ಮುಟ್ಟಿದೆನಾದಡೆ ನಿಮ್ಮಾಣೆ’ ಎನ್ನುವ ಚಿಂತನೆ ನಮಗಿಂದು ಅವಶ್ಯವಾಗಿದೆ. ಮತ್ತೆ ಕಲ್ಯಾಣ ಕಾಲ ಘಟ್ಟದ ಕಲ್ಯಾಣವಲ್ಲ; ಸಮ ಸಮಾಜದ, ಸಹಜೀವನದ ಪ್ರತೀಕ. ವಚನಕಾರರೆಲ್ಲರೂ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ವಿಜ್ಞಾನಶಾಸ್ತ್ರಗಳನ್ನು ಹೇಳಿದರಲ್ಲದೆ ಅದರಂತೆ ನಡೆದು ತೋರಿಸಿದರು. ಚೆನ್ನಬಸವಣ್ಣ ಹೇಳಿದ ಅರ್ಥ, ಅಹಂಕಾರ, ಕುಲ ಮದಗಳೇ ಇಂದು ಅಸಮತೋಲನಕ್ಕೆ, ದ್ವೇಷಕ್ಕೆ, ದಳ್ಳುರಿಗೆ ಕಾರಣವಾಗಿವೆ. ಶೇ 72 ರಷ್ಟು ಸಂಪತ್ತು ಕೇವಲ ಶೇ 1 ರಷ್ಟು ಜನರ ಬಳಿಯಿದೆ. ಅಧಿಕಾರ ಅಹಂಕಾರ ಮದವನ್ನು ಬೆಳೆಸುತ್ತಿದೆ. ಕುಲ ಮದಗಳೂ ವಿಜೃಂಭಿಸುತ್ತಿವೆ. ಈ ಮೂರು ಮದಗಳ ಬಗ್ಗೆ ಅಂದೇ ವಚನಕಾರರು ಎಚ್ಚರಿಸಿದ್ದಾರೆ. ಸಹಮತ ವೇದಿಕೆ ಎಂದರೆ ಎಲ್ಲ ಮತದವರೂ ತಮ್ಮ ಸಹಮತವನ್ನು ತೋರುವುದೇ ಆಗಿದೆ. ಜಗತ್ತಿನ ಧರ್ಮಗಳೆಲ್ಲ ತಮ್ಮ ಧರ್ಮದೊಳಗಿದ್ದೇ ಹೇಗೆ ಶಾಂತಿಯ ಜೀವನ ನಡೆಸಬೇಕೆನ್ನುವುದನ್ನು ಹೇಳಿವೆ. ಆದರೆ ಬಸವಣ್ಣ ಅನ್ಯ ಧರ್ಮಗಳ ಜೊತೆ ಹೇಗೆ ಶಾಂತಿಯಿಂದ ಬದುಕಬೇಕು ಎನ್ನುವುದನ್ನು ಹೇಳಿದ ಮೊದಲಿಗರು. ಮನೆಯಲ್ಲಿ ಅವರವರ ಧರ್ಮವಿರಲಿ. ಬೀದಿಗೆ ಬಂದಾಗ ಸಂವಿಧಾನವೇ ನಮ್ಮ ಧರ್ಮವಾಗಲಿ. ವಚನಕಾರರ ವಚನಗಳ ಮಾದರಿ ಬೆನ್ನ ಹಿಂದಿನ ಬೆಳಕಾಗಿದೆ. ಆ ಬೆಳಕಿನಲ್ಲಿ ನಾವು ಮುನ್ನಡೆಯಬೇಕಿದೆ. ಧಾರ್ಮಿಕ ಮಿತಿಗಳು ಮೀರಿ ಮನುಷ್ಯತ್ವದ ಕಡೆ ಹೊಗಬೇಕಾಗಿದೆ. ಜಾತಿ, ಧರ್ಮಗಳನ್ನು ನಿರಾಕರಿಸಿ ಮಾನವ ಧರ್ಮದ ಕಡೆ ಸಾಗುವುದೇ ಮತ್ತೆ ಕಲ್ಯಾಣ ಎಂದರು.
`ಶರಣರ ಸಮ ಸಮಾಜ’ ಕುರಿತು ಸಾವಿತ್ರಿ ಮಜುಂದಾರ ಮಾತನಾಡಿ ಇಂದು ನಾವೆಲ್ಲ ಸ್ವಲ್ಪಮಟ್ಟಿಗೆ ಕೆಲ ಅಸಮಾನತೆಗಳನ್ನು ಬದಿಗಿಟ್ಟು ಒಂದೇ ವೇದಿಕೆಯ ಮೇಲೆ ಸೇರಿದ್ದೀವಿ ಅಂದ್ರೆ ಅದಕ್ಕೆ 12 ನೆಯ ಶತಮಾನದ ಅಣ್ಣ ಬಸವಣ್ಣನೇ ಕಾರಣ. ಅಂದಿನ ಸಂಪ್ರದಾಯ ಮತ್ತು ಸನಾತನವಾದಿಗಳು ಮಹಿಳೆಯರಿಗೆ ಸಮಾನತೆಯನ್ನು ಕೊಟ್ಟಿರಲಿಲ್ಲ. ಆದರೆ ಬಸವಣ್ಣ ಇಂಥ ಶೋಷಣೆಗೆ ಒಳಗಾದ ಎಲ್ಲರನ್ನು `ಬಾ ಬಂಧು’ ಎಂದು ಅಪ್ಪಿಕೊಳ್ಳುವುದರ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದರು. ಸಮಾಜೋದ್ಧಾರ್ಮಿಕ ವೇದಿಕೆಯಾದ ಅನುಭವ ಮಂಟಪದಿಂದ ಹೊರ ಬಂದ ವಚನಗಳು ಮತ್ತು ನಮ್ಮ ಈಗಿನ ಸಂವಿಧಾನವೇ ಮಹಿಳೆಯರಿಗೆ ಧರ್ಮಗ್ರಂಥಗಳು. ಶಿಕ್ಷಣದಿಂದ ಅಭಿವೃದ್ಧಿಯಲ್ಲ; ಶಿಕ್ಷಣವೇ ಅಭಿವೃದ್ಧಿ. ಇಂದು ಮಕ್ಕಳಿಗೆ ನೈತಿಕ ಶಿಕ್ಷಣ ಬೇಕಾಗಿದೆ. ವಚನ ಸಾಹಿತ್ಯದಲ್ಲಿ ಇಂಥ ನೈತಿಕ ಶಿಕ್ಷಣ ಸಿಗುತ್ತದೆ. ಮನುಷ್ಯ ಧರ್ಮದ ನೆಲೆಗಳು ವಚನಗಳಲ್ಲಿವೆ. ವಚನಕಾರರು ಕಾಯಕವನ್ನು ಹೇಳಿದರೆ ಸನಾತನಿಗಳು ಕರ್ಮ ಸಿದ್ಧಾಂತವನ್ನು ಹೇಳಿದ್ದಾರೆ. ಸನಾತನಿಗಳು ನರಕ, ಸ್ವರ್ಗ ಎನ್ನುವುದರ ಮೂಲಕ ಜನರ ಮನಸ್ಸಿನಲ್ಲಿ ಭಯವನ್ನು ಬಿತ್ತಿ ಹೆದರಿಸುತ್ತಿದ್ದರು. ಅದರಲ್ಲೂ ಹೆಣ್ಣುಮಕ್ಕಳಂತೂ ಅನೇಕ ನೇಮ-ವ್ರತಗಳಲ್ಲಿ ನರಳಿ, ಸೊರಗಿ ಹೋಗಿದ್ದಾರೆ. ಇಂದಿನ ಯುವಕರು ಮತ್ತೆ ಕಲ್ಯಾಣದಲ್ಲಿ ಭಾಗವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಮಹಿಳೆಯರು ಟಿವಿಯಲ್ಲಿ ಬರುವ ಜೋತಿಷ್ಯ, ಶಾಸ್ತ್ರ ನಂಬಬೇಡಿ. ನಮ್ಮ ಶ್ರಮ, ಸಾಮರ್ಥ್ಯವೇ ನಮ್ಮನ್ನು ಕಾಪಾಡಬಲ್ಲವು. ಮಂತ್ರದಿಂದ ಮಕ್ಕಳಾಗುವುದಿಲ್ಲ; ಗಂಡ-ಹೆಂಡತಿ ಸಾಮರಸ್ಯದಿಂದ ಬದುಕಿದರೆ ಮಕ್ಕಳಾಗುವವು. ಯಜ್ಞ, ಯಾಗ, ಹೋಮಗಳು ನಮಗೆ ಬೇಕಿಲ್ಲ. ಬಸವಣ್ಣನ ಖರ್ಚಿಲ್ಲದ ಇಷ್ಟಲಿಂಗವೊಂದೇ ಸಾಕು. ಅಂದೂ ಜಾತಿ, ಧರ್ಮ, ವರ್ಗ, ಲಿಂಗ, ಭಾಷೆಗಳ ಅಸಮಾನತೆಯಿತ್ತು. ವಚನಕಾರರಿಂದಾಗಿಯೇ ಕನ್ನಡ ಶ್ರೀಮಂತವಾಗಿದೆ. ವರ್ಣಾಶ್ರಮ ಪದ್ಧತಿಯಂತೆ ಯಾರೂ ತಲೆಯಿಂದ, ಕೈಯಿಂದ, ಹೊಟ್ಟೆಯಿಂದ, ಕಾಲಿನಿಂದ ಹುಟ್ಟಿಲ್ಲ. ಎಲ್ಲರ ಹುಟ್ಟಿನ ಗುಟ್ಟೂ ಒಂದೇ. ಯಾರೂ ಶ್ರೇಷ್ಠರಲ್ಲ; ಕನಿಷ್ಠರೂ ಅಲ್ಲ. ಹಳ್ಳಿ-ನಗರಗಳಲ್ಲಿ ಜಾತಿಯಿಲ್ಲ; ರಾಜಕಾರಣಿಗಳ ಓಟ್ ಬ್ಯಾಂಕಿನಲ್ಲಿದೆ. ಬಸವಣ್ಣನ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ ಇತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದುದರಲ್ಲಿ ಮಹಿಳೆಯರ ಕೊಡುಗೆಯಿದೆ ಎನ್ನುವುದನ್ನು ಇಂದಿನ ಪುರುಷ ರಾಜಕಾರಣಿಗಳು ಮರೆತಂತಿದೆ. ಅಕ್ಕಮಹಾದೇವಿ ಇಂದಿಗೂ ಪ್ರಸ್ತುತ. ಕೌಟುಂಬಿಕ ದೌರ್ಜನ್ಯ ಮಾಡುವವರನ್ನು ಒಲೆಗಿಕ್ಕಬೇಕಿದೆ. ಕೊಳ್ಳುಬಾಕು ಸಂಸ್ಕೃತಿಯಿಂದ ಮಹಿಳೆಯರೂ ಭ್ರಷ್ಟಾಚಾರಕ್ಕೆ ಮೂಲವಾಗುತ್ತಿದ್ದಾರೆ ಎಂದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಮೌಲಾನ ಮಹಮ್ಮದ ಅಲಿ ಇಮಾಯತಿ ಮಾತನಾಡಿ `ಮತ್ತೆ ಕಲ್ಯಾಣ’ ಬಹಳ ಅವಶ್ಯವಾಗಿದೆ ಇಂದು ಬೇಕಾಗಿದೆ. ಬುದ್ಧ, ಅಂಬೇಡ್ಕರ್, ಏಸು, ದಯಾನಂದ ಸರಸ್ಪತಿ, ಪೈಗಂಬರ್, ಮೌಲಾನ ಮುಂತಾದ ಮಹನಿಯರ ಬಗ್ಗೆ ಪುಸ್ತಕದಲ್ಲಿ ಓದಿದ್ದೇನೆ. ಆದರೆ ಇಂದು ಪಂಡಿತಾರಾಧ್ಯ ಶ್ರೀಗಳವರಲ್ಲಿ ಅವರೆಲ್ಲರನ್ನೂ ಕಂಡಿದ್ದೇನೆ. ಮನಷ್ಯರ ಕಲ್ಯಾಣವಾದರೆ ರಾಜ್ಯದ ಕಲ್ಯಾಣವಾಗುವುದು. ಮನುಷ್ಯನ ಕಲ್ಯಾಣವೇ ರಾಜ್ಯದ ಕಲ್ಯಾಣ. ಇದನ್ನು ಖುರಾನ್ ನಲ್ಲಿಯೂ ಹೇಳಿದೆ. ನಾವಿಂದು ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ಹೊಡೆದುಕೊಂಡು ಸಾಯುತ್ತಿದ್ದೇವೆ. ಸೌಹಾರ್ಧತೆಯೇ ನಮ್ಮ ಧರ್ಮವಾಗಬೇಕು. ಧರ್ಮ ಯಾರೊಬ್ಬರ ಸ್ವತ್ತಲ್ಲ. ಮನಷ್ಯರ ಕಲ್ಯಾಣವೇ ಧರ್ಮ. ಇಂಗ್ಲೀಷರ ಒಡೆದು ಆಳುವ ನೀತಿಯನ್ನು ಮುಂದುವರಿಸಿ ಇಂದಿನ ರಾಜಕಾರಣಿಗಳು ಧರ್ಮವನ್ನು ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಸಂವಿಧಾನ ಅತ್ಯಂತ ವೈಜ್ಞಾನಿಕವಾಗಿದೆ. ಶಕ್ತಿ ಮತ್ತು ಶಾಂತಿಗಳೆರಡೂ ಜಗತ್ತಿನ ಏಳ್ಗೆಗೆ ಬೇಕು ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಶಿವಕುಮಾರ ಕುಕನೂರ ಸ್ವಾಗತಿಸಿದರೆ ಹನುಮೇಶ್ ಕಲ್ಮಂಗಿ ಕಾರ್ಯಕ್ರಮ ನಿರ್ವಹಿಸಿದರು. ಬಸವರಾಜ್ ಬಳ್ಳುಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ `ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಂಡಿತು. ನಾಟಕ ಮುಗಿದ ಮೇಲೆ ಪ್ರೇಕ್ಷಕರು ನಾಟಕದ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡರು.
ಪ್ಯಾಟಿ ಈಶ್ವರ ದೇವಸ್ಥಾನದಿಂದ ಆರಂಭವಾದ ಸಾಮರಸ್ಯ ನಡಿಗೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದೊಂದಿಗೆ ಶಿವಶಾಂತವೀರ ಮಂಗಲ ಭವನಕ್ಕೆ ಬಂದು ತಲುಪಿದರು. ನೆರೆ ಸಂತ್ರಸ್ಥರ ನಿಧಿ 7268 ರೂಪಾಯಿಗಳು ಸಂಗ್ರಹವಾಯಿತು.
ವಿದ್ಯಾರ್ಥಿಗಳೊಂದಿಗೆ ಸಂವಾದ
ಆಗಸ್ಟ್ 21, ಕೊಪ್ಪಳ; ಇಲ್ಲಿನ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತ ಕೊಳಲ ದನಿಗೆ ಸರ್ಪ ತಲೆದೂಗುವಂತೆ ಮನುಷ್ಯ ಸಹ ಒಳ್ಳೆಯ ವಿಚಾರಗಳನ್ನು ಕೇಳಿದ ಕೂಡಲೇ ತಲೆದೂಗುತ್ತಾನೆ. ಆದರೆ ಅದೇ ಒಳ್ಳೆಯ ವಿಚಾರಗಳನ್ನು ಅನುಷ್ಟಾನಕ್ಕೆ ತರಲು ಮಾತ್ರ ಮುಂದಾಗುವುದಿಲ್ಲ. ಇದಕ್ಕೆ ಕಾರಣ ಬದ್ಧತೆಯ ಕೊರತೆ, ಮನಸ್ಸಿನ ಚಂಚಲತೆ. ಶಿಕ್ಷಣದ ಮೂಲ ಉದ್ದೇಶವೇ ಮನಸ್ಸುನ್ನು ಏಕಾಗ್ರತೆಗೊಳಿಸುವುದು. ಮನುಷ್ಯನ ಮನಸ್ಸನ್ನು ಮಂಗನಿಗೆ ಹೋಲಿಸುವರು. ಮನುಷ್ಯ ಮಂಗನಂತಾಗದೆ ಮಹಾದೇವನಂತಾಗಬೇಕು. ನಾವು ಹೊರಗಡೆ ಸುಖಿಗಳಂತೆ ನಟಿಸುತ್ತೇವೆ. ಆದರೆ ಆಂತರ್ಯದಲ್ಲಿ ದುಃಖ,ದುಮ್ಮಾನ, ಸಂಕಟಗಳು ಇದ್ದೇ ಇರುತ್ತವೆ. ಯಾರು ತನ್ನೊಳಗೇ ಸಂಪತ್ತನ್ನು ಕಂಡುಕೊಳ್ಳುತ್ತಾರೋ ಅವರು ಪರಮಸುಖಿಗಳು. ಸುಖವೆಂಬುದು ಮನಸ್ಸಿಗೆ ಸಂಬಂಧಿಸಿದ್ದು ಎನ್ನುವುದನ್ನು ಮರೆತು ಹೊರಗಿನ ಸುಖಗಳ ಭ್ರಮೆಯಲ್ಲಿದ್ದೇವೆ. ಶರಣರು ಯಾವುದೇ ಶಾಲಾ ಕಾಲೇಜಿಗೆ ಹೋದವರಲ್ಲ. ಕಾಯಕದ ಮೂಲಕ ಜ್ಞಾನದ ಬೆಳಕನ್ನು ಕಂಡುಕೊಂಡವರು. ಆತ್ಮ ಜ್ಞಾನದ ಮೂಲಕ ಲೋಕಕಲ್ಯಾಣ ಮತ್ತು ಆತ್ಮಕಲ್ಯಾಣವನ್ನು ಮಾಡಿಕೊಂಡರು. ಅಜ್ಞಾನದಿಂದ ಅಹಂಕಾರ-ಮಮಕಾರ, ಮನಚಂಚಲ, ಇಂದ್ರಿಯ ಉದ್ರೇಕ, ದೇಹಮೋಹ, ಅತಿ ಆಕಾಂಕ್ಷೆ, ರಾಗದ್ವೇಷಗಳು ಹುಟ್ಟುವವು. ಶರಣರು ಇಷ್ಟಲಿಂಗಧಾರಣೆಯ ಮೂಲಕ ಅಂತರ್ ಮುಖಿಗಳಾಗಿ ತನ್ನೊಳಗನ್ನು ತಾನೇ ಕಂಡುಕೊಂಡರು. ಗುಡಿಗಂಡಾರಗಳನ್ನು ತಿರಸ್ಕರಿಸಿ ನನಗೆ ನಾನೇ ದೇವನಾಗುವುದನ್ನು ಕಲಿಸಿದರು. ದೇಹವನ್ನೇ ದೇವಾಲಯ ಮಾಡಿಕೊಂಡರು. ಸುಜ್ಞಾನಿಗಳಾದವರು ಪಾಪ, ದ್ರೋಹ, ವಂಚನೆ ಮಾಡುವುದಿಲ್ಲ. ಹೃದಯವೈಶಾಲ್ಯತೆ ಅವರಲ್ಲಿರುತ್ತದೆ. ಇಂತಹ ಗುಣಗಳನ್ನು ನಾವೂ ಬೆಳೆಸಿಕೊಳ್ಳಬೇಕಾದರೆ ಶರಣರ ವಚನಗಳನ್ನು ಓದಿ ಅರ್ಥೈಸಿಕೊಂಡು ಆಚರಣೆಗೆ ತರಬೇಕು. ಶರಣರ ವಚನಗಳು ಬೆಳಕಿನ ಪುಂಜಗಳು. ವಚನ ಸಂಸ್ಕೃತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಂಥದ್ದೇ ಸಂವಾದದ ಆಶಯ. ವಿದ್ಯಾರ್ಥಿಗಳು ತಮ್ಮ ಒಳಗಿನ ಭಾವನೆಗಳನ್ನು, ಗೊಂದಲಗಳನ್ನು, ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬೇಕಾದರೆ ಮೊದಲು ಪ್ರಶ್ನೆ ಮಾಡುವ ಮನೋಗುಣ ಬೆಳೆಸಿಕೊಳ್ಳಬೇಕು. ದೇವರ ಹೆಸರಿನಲ್ಲಿ ಪಟ್ಟಭದ್ರ ಹಿತಾಸಕ್ತರು, ಪುಜಾರಿ ಪುರೋಹಿತರು ಪ್ರಾಣಿ ಬಲಿಕೊಡುತ್ತಾರೆ. ಯಾರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಮೀಸಲಾತಿ ಬೇಕು. ನಮ್ಮನ್ನು ಮೌಢ್ಯಕ್ಕೆ ತಳ್ಳಿ ತಮ್ಮ ಬೇಳೆ ಬೇಯಿಸಿಕೊಳ್ಳಲಿಕ್ಕೆ ಜ್ಯೋತಿಷ್ಯ ಹುಟ್ಟಿಕೊಂಡಿತು. ಶರಣರು ಕರ್ಮ ಸಿದ್ಧಾಂತಗಳನ್ನು ಒಪ್ಪಲಿಲ್ಲ. ಇನ್ನೊಬ್ಬರಿಗೆ ನೋವವನ್ನು ಕೊಡದಿರುವುದೇ ದಯೆ. ಜಂಗಮ ಅಂದರೆ ಜಾತಿ ಅಲ್ಲ; ಧರ್ಮ ಅಲ್ಲ. ಯಾರಿಗೆ ಅರಿವು ಆಚಾರವಿರುತ್ತದೆಯೋ ಅವನೇ ನಿಜ ಜಂಗಮ. ಅವರ ಮೂಲಕ ಮನೆಯೇ ಅನುಭವ ಮಂಟಪವಾಗಲಿ ಎನ್ನುವ ಕಾರಣಕ್ಕಾಗಿ ಜಂಗಮರನ್ನು ಮನೆಗೆ ಕರೆಸುವ ಪದ್ಧತಿ ಇದೆ.
ಸಂವಾದಕ ಸಿದ್ದನಗೌಡ ಪಾಟೀಲ್ ಮಾತನಾಡಿ ಏನು? ಎಲ್ಲಿ? ಹೇಗೆ? ಏಕೆ? ಎನ್ನುವ ಪ್ರಶ್ನೆಗಳನ್ನು ಕೇಳದೆ ಎಲ್ಲವನ್ನೂ ಒಪ್ಪಿಕೊಳ್ಳುವುದೇ ಮೂಢನಂಬಿಕೆ. ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭದಲ್ಲಿ ಅಭ್ಯಾಸ ಮಾಡದೇ ದೇವರಿಗೆ ಕೈ ಮುಗಿದರೆ ಪಾಸಾಗುವುದಿಲ್ಲ. ಸತತ ಅಭ್ಯಾಸದಿಂದ ಪಾಸಾಗುವುದು. ಕೈಮುಗಿಯುವುದರಿಂದಲೇ ನಾನು ಪಾಸಾಗುತ್ತೇನೆ ಎನ್ನುವುದು ಮೂಢನಂಬಿಕೆ. ಇದು ಎಲ್ಲರಲ್ಲೂ ಇದೆ. ಜಾತಿ ಎನ್ನುವುದೂ ಮೂಢನಂಬಿಕೆಯೇ. ಮೀಸಲಾತಿ ಹಿಂದುಳಿದವರು ಮುಂದುವರೆಯಬೇಕು ಎನ್ನುವ ಕಾರಣಕ್ಕಾಗಿ ನೀಡಿರುವಂಥ ತಾತ್ಕಾಲಿಕ ಕ್ರಮ. ಜಾತಿ ಮತ್ತು ಮೀಸಲಾತಿಗೆ ಪರಿಹಾರವೆಂದರೆ ಎಲ್ಲರಿಗೂ ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಉಚಿತವಾಗಿ ಶಿಕ್ಷಣ ಕೊಡಬೇಕು. ಜ್ಯೋತಿಷ್ಯರ ಹೇಳುವವರು ಟಿವಿಯವರಿಗೆ ದುಡ್ಡು ಕೊಟ್ಟು ಟಿವಿಯಲ್ಲಿ ಬಂದು ಜ್ಯೋತಿಷ್ಯ ಹೇಳುತ್ತಾರೆ. ಅವರು ಹೇಳುವುದೆಲ್ಲ ಸುಳ್ಳು. ಟಿವಿಯಲ್ಲಿ ಬರುವ ಜ್ಯೋತಿಷ್ಯವನ್ನು ನಂಬಬೇಡಿ. ನಮ್ಮ ಆತ್ಮವಿಶ್ವಾಸವೇ ನಮ್ಮ ಭವಿಷ್ಯ. ಜಾತಿಗಳು ಮಾನವ ನಿರ್ಮಿತ. ನಾಗರೀಕತೆಗಿಂತ ಪೂರ್ವದಲ್ಲಿ ಕೆಲಸ ಕಾರ್ಯಗಳನ್ನು ಹಂಚಿಕೊಳ್ಳಲು ಒಬ್ಬೊಬ್ಬರು ಒಂದೊಂದು ಕೆಲಸವನ್ನು ಮಾಡುತ್ತಿದ್ದರು. ಇದನ್ನೆ ವಚನಕಾರರು `ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ..’ ಎಂದುದು. ಮುಂದೆ ಇದೇ ಜಾತಿಯಾಗಿ ರೂಪಗೊಂಡಿತು. ಮನುಶಾಸ್ತ್ರ ಬರುವ ಹೊತ್ತಿಗೆ ಪುರೋಹಿತಶಾಹಿ ಮತ್ತು ರಾಜರ ಕುತಂತ್ರದಿಂದ ಜಾತಿ ಇನ್ನೊಷ್ಟು ಬಲಗೊಂಡಿತು. ನನ್ನ ಜಾತಿಯೇ ಶ್ರೇಷ್ಠ ಎನ್ನುವುದೇ ಜಾತಿ ವ್ಯವಸ್ಥೆಯ ಸಮಸ್ಯೆ. ಜಾತಿಯಿಂದ ಬುದ್ಧಿವಂತಿಕೆಯನ್ನು ಅಳೆಯಲಾಗುವುದಿಲ್ಲ. ಹೀಗೆ ಜಾತಿ ಮಧ್ಯೆದಲ್ಲಿ ಬಂದದ್ದೇ ಹೊರತು ಹುಟ್ಟಿನಿಂದ ಬಂದದ್ದಲ್ಲ. ವ್ಯಕ್ತಿ ಯಾವುದೇ ಒಂದು ವಸ್ತುವನ್ನು ಸೃಷ್ಠಿಸಲು ಅಥವ ಒಂದು ವಸ್ತುವನ್ನು ಇನ್ನೊಂದು ವಸ್ತುವಾಗಿ ಬದಲಾಯಿಸಲು ಸಾಧ್ಯವಿಲ್ಲ. ಕಣ್ಕಟ್ಟು ವಿದ್ಯೆಯನ್ನು ನಂಬಬಾರದು. ಮಾಧ್ಯಮಗಳು ಉದ್ಯಮವಾಗಿವೆ. ಟಿ ಆರ್ ಪಿಗಾಗಿ ಸುಳ್ಳು ಸುಳ್ಳು ಸುದ್ದಿಯನ್ನು ಹಬ್ಬಿಸಿ ಜನರನ್ನು ದಿಕ್ಕು ತಪ್ಪಿಸುತ್ತಿವೆ. 12 ನೆಯ ಶತಮಾನದ `ಅನುಭವ ಮಂಟಪ’ವೂ ಒಂದು ಅಧಿವೇಶನ. ಬುದ್ಧ ಸಮಾಜದಿಂದ ಹೊರಗಿದ್ದು ಸಮಾಜವನ್ನು ಕಟ್ಟಿದರೆ; ಶರಣರು ಸಮಾಜದ ಒಳಗಿದ್ದೇ ಸಮಾಜ ಕಟ್ಟಿದರು. ವರ್ತಮಾನದಲ್ಲಿದ್ದು ಇತಿಹಾಸವನ್ನು ನೋಡುವುದೇ ‘ಮತ್ತೆ ಕಲ್ಯಾಣ’. ಜಾತಿಯನ್ನು ಬಿಟ್ಟು ಧರ್ಮದ ಕಡೆಗೆ ಹೋಗಬೇಕು. ಕೊನೆಗೆ ಧರ್ಮವನ್ನೂ ಬಿಟ್ಟು ಮಾನವತೆಯ ಕಡೆ ಹೋಗಬೇಕು. ಯುವ ಜನಾಂಗ ಜಾಗೃತಿಯಾಗಬೇಕು. ಅನೇಕ ಕಡೆ ಭಕ್ತರು ಸ್ವಾಮೀಜಿಯವರ ಬಳಿ ಬರುವರು. ಇಲ್ಲಿ ಸ್ವಾಮೀಜಿಯವರೇ ಜನರ ಬಳಿ ಬಂದಿದ್ದಾರೆ. ಇದು ಇಂದು ಆಗಬೇಕಾದ ಕಾರ್ಯ. ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ಬಂದ ನೆನಪಿನಲ್ಲಿ ವಿದ್ಯಾರ್ಥಿಗಳು ವಿದೇಶೀ ವಸ್ತುಗಳನ್ನು ಬಹಿಷ್ಕಾರ ಮಾಡಿ ಸ್ವದೇಶಿ ವಸ್ತುಗಳನ್ನು ಬಳಸಿ ನಮ್ಮ ನಾಡಿನ ಆರ್ಥಿಕತೆಯನ್ನು ಹೆಚ್ಚಿಸುತ್ತೇವೆ ಎನ್ನುವ ಸಂಕಲ್ಪ ಮಾಡಬೇಕು ಎಂದರು.
ಇನ್ನೋರ್ವ ಚಿಂತಕಿ ಸಾವಿತ್ರಿ ಮಜುಂದಾರ ಮಾತನಾಡಿ ಮನುಷ್ಯನಲ್ಲಿ ಪರಿಪೂರ್ಣತೆ ಬರಲು ಶರಣರ ಧರ್ಮವೇ ರಹದಾರಿ. ಶರಣರು ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆದರು. ನಮ್ಮನ್ನು ನಾವು ಆತ್ಮವಿಮರ್ಶೆ ಮಾಡಿಕೊಂಡು ಲೋಕವಿಮರ್ಶೆಗೆ ಒಳಗು ಮಾಡಿಕೊಳ್ಳಬೇಕು. ದೇವರು, ದೆವ್ವ ಮನುಷ್ಯನ ದೇಹದಲ್ಲಿ ಇರುವುದಿಲ್ಲ. ನಾವು ಯಾವುದೇ ಮೂಢನಂಬಿಕೆಗಳನ್ನು ನಂಬುವುದಕ್ಕಿಂತ ಮುಂಚೆ ವೈಜ್ಞಾನಿಕವಾಗಿ ಯೋಚಿಸಬೇಕು. ಅನೇಕ ಕೌಟುಂಬಿಕ ಕಲಹಗಳಿಗೆ ಲಿಂಗತಾರತಮ್ಯವೇ ಕಾರಣ. ಶರಣರು ಶ್ರೇಷ್ಠ-ಕನಿಷ್ಠಗಳೆಂಬ ಅನಿಷ್ಟಗಳನ್ನು ತೊಡೆದು ಹಾಕಿ ಸಮಸಮಾಜವನ್ನು ನಿರ್ಮಾಣ ಮಾಡಲು ಹೋರಾಡಿದರು. ವಿವಾಹ ವೈಯುಕ್ತಿಕ ಅಭಿಪ್ರಾಯವಾಗಬೇಕೇ ಹೊರತು ಬಲವಂತ ಆಗಬಾರದು. ಅಂತರ್ ಜಾತಿ ವಿವಾಹದಲ್ಲಿ ಇಬ್ಬರಿಗೂ ಒಮ್ಮತದ ಅಭಿಪ್ರಾಯವಿದ್ದು, ತಮ್ಮ ಕಾಲಮೇಲೆ ತಾವು ನಿಂತುಕೊಂಡು, ಪೋಷಕರ ಮನವೊಲಿಸಿ ವಿವಾಹವಾಗಬೇಕು.
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು :
• ದೇವರನ್ನು ಒಲಿಸಲು ಪ್ರಾಣಿಬಲಿಯನ್ನು ಕೊಡುತ್ತಾರೆ. ಇದಕ್ಕೆ ಬಸವಣ್ಣನವರು ಏನು ಹೇಳುತ್ತಾರೆ?
• ಬಸವಣ್ಣನವರ ಪ್ರಕಾರ ಮಾನವನ ಬದುಕು ಯಾವ ಕಾರ್ಯಗಳಿಂದ ಪರಿಪೂರ್ಣಗೊಳ್ಳುತ್ತದೆ?
• 12ನೆಯ ಶತಮಾನದಲ್ಲಿ ಅಂತರ್ ಜಾತಿ ವಿವಾಹ ಮಾಡಿದರು. 21ನೆಯ ಶತಮಾನದಲ್ಲಿ ಅಂತರ್ ಜಾತಿ ವಿವಾಹಗಳು ಯಾಕೆ ಆಗುತ್ತಿಲ್ಲ?
• ಭೂಮಿಯ ಮೇಲೆ ದೈವೀಶಕ್ತಿ ಅಥವ ದುಷ್ಟ ಶಕ್ತಿಗಳಿವೆಯೇ?
• ಹೆಣ್ಣಿಗೆ ಅರ್ಹತೆಯಿದ್ದರೂ ಮನೆಯಲ್ಲಿ ಮೂಢನಂಬಿಕೆಯಿಂದಾಗಿ ಅವಳನ್ನು ಅವಕಾಶದಿಂದ ವಂಚಿತಳನ್ನಾಗಿ ಮಾಡುತ್ತಿದ್ದಾರೆ. ಯಾಕೆ?
• ಶಿಕ್ಷಣದಲ್ಲಿ ಯಾವುದೇ ಸೌಲಭ್ಯ ಪಡೆಯಬೇಕಾದರೆ ಜಾತಿ ಕೇಳುತ್ತಾರೆ? ಇದು ಎಷ್ಟರಮಟ್ಟಿಗೆ ಸರಿ?
• ಇಷ್ಟಲಿಂಗದ ಬದಲಾಗಿ ಕಲ್ಲು ಕೈಯಲ್ಲಿಟ್ಟುಕೊಂಡು ಪೂಜೆ ಮಾಡಬಹುದಲ್ಲವೇ?
• ಜಾತಿ ವ್ಯವಸ್ಥೆಯಿಂದ ಮೀಸಲಾತಿ ಕೊಡುವುದಾದರೆ ಹಿಂದುಳಿದವರಲ್ಲಿ ಸಾಮಾನ್ಯರೂ ಇದ್ದಾರೆ. ಇವರು ಮುಂದುವರಿಯುವುದು ಹೇಗೆ ಸಾಧ್ಯ?
• ಜ್ಯೋತಿಷ್ಯ ಎನ್ನುವುದು ಸತ್ಯವೋ, ಸುಳ್ಳೋ?
• ಜಾತಿ ಹೇಗೆ ಹುಟ್ಟಿಕೊಂಡಿತು?
• ತರಳಬಾಳು ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧ ಮಾದಿಗರ ಜಾತಿಯವರು. ಈಗ ತರಳಬಾಳು ಶಾಖಾಮಠಕ್ಕೆ ಉತ್ತರಾಧಿಕಾರಿಗಳನ್ನಾಗಿ ಮಾದಿಗ ಜಾತಿಯವರನ್ನೇ ಮಾಡುತ್ತೀರಾ?
• ದೇವರ ಹೆಸರಿನಲ್ಲಿ ವ್ರತ ಮಾಡುವುದರಿಂದ ಅದು ದೇವರಿಗೆ ಸಲ್ಲುತ್ತದೆಯೇ?
• ಜಾತಿಗಳ ಹೆಸರಿನಲ್ಲಿ ಮಠಗಳು ಏಕೆ ಬೇಕು?
• ಶರಣರು ಕರ್ಮಸಿದ್ಧಾಂತವನ್ನು ಒಪ್ಪಿಕೊಂಡಿದ್ದರೇ?
• ಮತ್ತೆ ಕಲ್ಯಾಣ ಎಂದರೇನು?
• ಮಾಟ-ಮಂತ್ರಗಳು ಸತ್ಯವೋ ಸುಳ್ಳೋ?
• ಶರಣರು ಪುನರ್ ಜನ್ಮವನ್ನು ಒಪ್ಪಿಕೊಂಡಿದ್ದರಾ?
• ದೇವಸ್ಥಾನಗಳ ಮುಂದೆ ಗಂಟೆ ಏಕೆ ಕಟ್ಟುತ್ತಾರೆ?
• ದಯೆ ಎಂದರೇನು?
• ನಾವು ಭಗವಂತನ ಮನೋರಂಜನೆಗಾಗಿಯೇ ಹುಟ್ಟಿದ್ದೇವೆಯೇ?
• ಅಂತರ್ ಮುಖಿಯಾಗುವುದು ಹೇಗೆ?

- ಹೆಚ್ ಎಸ್ ದ್ಯಾಮೇಶ್
9449649850