ಆಗಸ್ಟ್ ೨೦ ಮಂಗಳವಾರ, ಗದಗ
ಗದಗದಲ್ಲಿ ಮತ್ತೆ ಕಲ್ಯಾಣ ಆಂದೋಲನ. ಅಭಿಯಾನದಲ್ಲಿ ನಾಟಕ ಪ್ರದರ್ಶನ. ಅನನ್ಯ ಟಿವಿ ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ
ಇಲ್ಲಿನ ಶ್ರೀ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಇಂದಿನ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳು 12 ನೆಯ ಶತಮಾನದ ಶರಣರ ಪರಿಭಾಷೆಯಲ್ಲಿ ಕಾಯಕ ಮಾಡುತ್ತಿಲ್ಲ. ಆದುದರಿಂದಲೇ ಎಲ್ಲೆಲ್ಲೂ ಅಸಮಾನತೆ ವಿಜೃಂಭಿಸುತ್ತಿದೆ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬಹಳ ಮುಖ್ಯ. ಆಂತರಿಕ ಸೌಂದರ್ಯಕ್ಕೆ ಸತ್ಯ, ಕರುಣೆ, ಪ್ರಾರ್ಥನೆ, ಪ್ರೀತಿ, ವಿಶ್ವಾಸ, ನಿಷ್ಠೆಗಳೇ ಪ್ರಸಾಧನಗಳು. ಇವು ಅಂಗಡಿಯಲ್ಲಿ ಸಿಗುವಂಥವಲ್ಲ. ಮನಸ್ಸಿನ ಒಳಗಿನಿಂದಲೇ ವಿಕಾಸವಾಗಬೇಕು. ಇಂದಿನ ಎಲ್ಲ ಸಾಮಾಜಿಕ ರೋಗಗಳಿಗೆ ಮದ್ದು ವಚನ ಸಾಹಿತ್ಯ. ವಚನಗಳನ್ನು ಅರ್ಥಮಾಡಿಕೊಂಡು ಅನುಷ್ಠಾನಕ್ಕೆ ತರುವ ಸಂಕಲ್ಪ ನಮ್ಮದಾದರೆ ದೇಶ ಎಲ್ಲ ರೀತಿಯಿಂದಲೂ ಸುಭಿಕ್ಷವಾಗುವುದರಲ್ಲಿ ಸಂದೇಹವಿಲ್ಲ. ಮದ್ದೇನೋ ಇದೆ ಆದರೆ ಅದನ್ನು ಸರಿಯಾಗಿ ಬಳಸಲು ಹೇಳಿಕೊಡುವ ವೈದ್ಯರಿಲ್ಲ. ಉಂಡದ್ದನ್ನೇ ತೇಗುತ್ತಾರೆ ಎನ್ನುವಂತೆ; ದ್ವೇಷ, ಅಸೂಯೆ, ಸ್ವಾರ್ಥ, ಅಹಂಕಾರಗಳನ್ನೇ ನಾವಿಂದು ತೇಗುತ್ತಿದ್ದೇವೆ. ಪ್ರತಿಯೊಬ್ಬರೂ ಸತ್ಯ ನಿಷ್ಟೆ ಕಾಯಕದಲ್ಲಿ ತೊಡಗಿ ಸದಾಚಾರದಲ್ಲಿ ಸಾಗಿದರೆ ಶರಣರು ಕಂಡ ಕಲ್ಯಾಣದ ಕನಸು ನನಸಾಗಲು ಸಾಧ್ಯ. ಸೋತವನಿಗೆ ಮಾತ್ರ ಗೆಲ್ಲುವ ಹಕ್ಕಿರುತ್ತದೆ ಎನ್ನುವಂತೆ ಅಂದಿನ ಕಲ್ಯಾಣದ ಸೋಲನ್ನು ಇಂದು ಗೆಲ್ಲುವಂತಹ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಇದಕ್ಕೆ ಮಾಡಬೇಕಾದುದು; `ಲೋಕದ ಡೊಂಕಡ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ, ಮನವ ಸಂತೈಸಿಕೊಳ್ಳಿ’ ಎಂದು ಬಸವಣ್ಣ ಹೇಳಿದಂತೆ ಮೊದಲು ನಾವು ನಮ್ಮ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ದುಷ್ಟನೊಬ್ಬ ಕಡಿಮೆಯಾಗುವಂತೆ ಮಾಡಬೇಕು. ಬದ್ಧತೆ ಮತ್ತು ಗುರಿಗಳಿದ್ದಾಗ ಯಶಸ್ಸು ಖಂಡಿತಾ ಸಾಧ್ಯ. ಪ್ರಾಮಾಣಿಕತೆಗೆ ದೇಶದಲ್ಲಿ ಬೆಲೆಯಿಲ್ಲ, ತುಂಬ ನೋವನ್ನು ಅನುಭವಿಸುವ ವಾತಾವರಣವಿದೆ ಎಂದು ಹಿಂದೆ ಸರಿದರೆ ಇನ್ನೂ ಹೆಚ್ಚು ನೋವನ್ನು ಅನುಭವಿಸಬೇಕಾಗುತ್ತದೆ. ಏಕದಿಂದ ಅನೇಕ. ಒಬ್ಬ ಬದಲಾದರೆ ಅನೇಕರನ್ನು ಬದಲಾಯಿಸಲು ಸಾಧ್ಯ. ಬುದ್ಧ ಅಂಗುಲಿಮಾಲನನ್ನು ಬದಲಾಯಿಸಿದಂತೆ ಭ್ರಷ್ಟರನ್ನೂ ನಾವು ಬದಲಾಯಿಸಬಹುದು. ಮನುಷ್ಯ ಮನುಷ್ಯರ ನಡುವೆ ಭಯ, ದ್ವೇಷ, ಅಸೂಯೆಗಳು ಯಾಕೆ? ಮೂಲತಃ ಯಾವ ವ್ಯಕ್ತಿಯೂ ಕೆಟ್ಟವನಲ್ಲ. ಕ್ರೂರಿಯ ಒಳಗೂ ಮನುಷ್ಯತ್ವ ಸೆಲೆಯೊಂದು ಅಡಗಿರುತ್ತದೆ. ಅದನ್ನು ಪತ್ತೆಹಚ್ಚಿ, ಪ್ರಚೋದಿಸಿ, ವಿಕಾಸಗೊಳಿಸಬೇಕಷ್ಟೇ. ಬಸವಣ್ಣ ಮಾಡಿದ್ದು ಇದೇ ಕೆಲಸವನ್ನೇ. ಬಸವಣ್ಣನ ಬಳಿ ಕಳ್ಳ, ಸುಳ್ಳ, ವಂಚಕ, ವೇಶ್ಯೆ, ಮುಂತಾದವರೆಲ್ಲ ಇದ್ದರು. ಅವರನ್ನೆಲ್ಲ `ಬಾ ಬಂಧು’ ಎಂದು ಅಪ್ಪಿಕೊಂಡದ್ದರ ಪರಿಣಾಮವಗಿ ಅವರೆಲ್ಲ ಜಗಮೆಚ್ಚುವ ಶರಣರಾಗಿ ಬದಲಾದರು. ಸಜ್ಜನರ ಸಂಗದಿಂದ ಹೀನ ಗುಣಗಳನ್ನು ಕಳೆದುಕೊಳ್ಳಲು ಸಾಧ್ಯ. ಜಡತ್ವವನ್ನು ಕಳೆದು ಜಂಗಮತ್ವವನ್ನು ನೀಡುವುದೇ ಮತ್ತೆ ಕಲ್ಯಾಣದ ಆಶಯ. ಇದು ಎಲ್ಲರೂ ಸೇರಿ ಮಾಡುವಂಥದ್ದು. ಇದರ ಹಿಂದೆ ಸಾವಿರ-ಸಾವಿರ ಸಂಖ್ಯೆಯಲ್ಲಿ ಸಾಹಿತಿಗಳು, ಕಲಾವಿದರು, ಚಿಂತಕರು, ಸ್ವಾಮಿಗಳು, ಸಂಘಟಕರು, ವಿದ್ಯಾರ್ಥಿಗಳು ಇದ್ದಾರೆ. ಇದಕ್ಕೆ ವಿರೋಧಗಳು ಇಲ್ಲವೆಂದಲ್ಲ. ವಿರೋಧಗಳೇ ನಮ್ಮನ್ನು ಬೆಳೆಸುವ ಅಂಶಗಳು. ಅವುಗಳನ್ನು ಸ್ವಾಗತಿಸಬೇಕು ಎನ್ನುವ ಮನೋಭಾವ ನಮ್ಮದು. ಕಳೆದ 20 ದಿನಗಳಲ್ಲಿ 20 ಜಿಲ್ಲೆಗಳಲ್ಲಿ ಅಭೂತಪೂರ್ವವಾದ ಸ್ಪಂಧನೆ ದೊರೆತಿದೆ. ಈ ಸ್ಪಂಧನೆಯೇ ನಮಗೆ ಪ್ರೇರಣಾ ಶಕ್ತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ ಜ್ಞಾನ ಮತ್ತು ಕ್ರಿಯೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವು ಒಂದನ್ನೊಂದು ಬಿಟ್ಟರೆ ಅಮಾನ್ಯವಾಗುವವು. ಬದುಕಿಗಗೆ ಎರಡೂ ಅತ್ಯಂತ ಅವಶ್ಯ. ಇಂತಹ ಕ್ರಿಯೆ-ಜ್ಞಾನದ ಸಾಕಾರವೇ ವಚನ ಸಾಹಿತ್ಯ. ಶರಣರದ್ದು ನಡೆ-ನುಡಿ ಸಿದ್ಧಾಂತದ ಬದುಕು. ಅದು ಆದರ್ಶವಾದುದು ಮತ್ತು ಸ್ಥಿರವಾದುದು. ಶರಣರು `ಸತ್ಯವೇ ಸ್ವರ್ಗ, ಮಿಥ್ಯವೇ ನರಕ’ ಎಂದರು. ಸಮಾನತೆ ಅವರ ಕಣಕಣದಲ್ಲೂ ಇತ್ತು. ಸೂಳೆ ಸಂಕವ್ವೆಯಂಥ ವೇಶ್ಯೆಯರೂ ಸಹ ಬಸವಣ್ಣನ ಮಾರ್ಗದರ್ಶನದಲ್ಲಿ ತಮ್ಮ ವೃತ್ತಿಯನ್ನು ಬದಲಾಯಿಸಿಕೊಂಡು ವಚನಗಳನ್ನು ಬರೆಯುವಂಥ ಶ್ರೇಷ್ಠ ಶರಣೆಯಾದರು. ಇಂಥ ಜ್ಞಾನ-ಕ್ರಿಯೆಗಳ ಮಹತ್ವದ ಇತಿಹಾಸವನ್ನು `ಮತ್ತೆ ಕಲ್ಯಾಣ’ದ ಮೂಲಕ ತಿಳಿಸುವ ಕ್ರಾಂತಿಕಾರಕ ಕಾರ್ಯಕ್ರಮವನ್ನು ಪಂಡಿತಾರಾಧ್ಯ ಶ್ರೀಗಳು ಹಮ್ಮಿಕೊಂಡಿದ್ದಾರೆ. ಈ ಕಾರ್ಯ ಖಂಡವಾಗಿರುವ ಸಮಾಜವನ್ನು ಅಖಂಡಗೊಳಿಸುವಲ್ಲಿ ಯಶಸ್ವಿಯಾಗಲಿ ಎಂದರು.
ಡಂಬಳ-ಗದಗದ ಶ್ರೀ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಮಾತನಾಡಿ ಬಸವಣ್ಣನವರ ನೇತೃತ್ವದಲ್ಲಿ ವಿಶಿಷ್ಟವಾದ, ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಚಳುವಳಿ ನಡೆಯಿತು. ಆ ಚಳುವಳಿಗೆ ಎಲ್ಲ ಜೀವರಾಶಿಗಳಿಗೆ ಲೇಸನ್ನು ಬಯಸುವ, ಸಮ ಸಮಾಜವನ್ನು ಸ್ಥಾಪಿಸುವ, ಮೌಢ್ಯಗಳನ್ನು ನಿವಾರಣೆ ಮಾಡುವ ಮಹೋನ್ನತ ಉದ್ದೇಶವಿತ್ತು. ಇಂದು ಅವರ ಆಶಯಗಳನ್ನು ಈಡೇರಿಸುವಲ್ಲಿ ಅಸಡ್ಡೆ ತೋರಿಸುತ್ತಿದ್ದೇವೆ. ಅಸಡ್ಡೆ ತೊಡೆದು ಕ್ರಾಂತಿಯನ್ನು ಮತ್ತೆ ಪುನರ್ ಸ್ಥಾಪಿಸಲು ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ಮತ್ತೆ ಕಲ್ಯಾಣ ನಡೆದಿದೆ. ಅಂದು ಕಲ್ಯಾಣದಲ್ಲಿ ಆರಂಭವಾದ ಕ್ರಾಂತಿ ತರೀಕೆರೆಯ ಎಣ್ಣೆಹೊಳೆಯಲ್ಲಿ ಮುಕ್ತಾಯಗೊಂಡಿತ್ತು. ಇಂದು ತರೀಕೆರೆಯ ಎಣ್ಣೆಹೊಳೆಯಿಂದ ಮತ್ತೆ ಕಲ್ಯಾಣದೆಡೆ ಸಾಗಿರುವುದು ನಿಜಕ್ಕೂ ಅರ್ಥಪೂರ್ಣ. ಇದು ಇಂದಿನ ಸಂವಿಧಾನದ ಆಶಯವೂ ಹೌದು. ಇದೊಂದು ಕಾರ್ಯಕ್ರಮವಲ್ಲ; ಯಾತ್ರೆ. ಈಗ ವಿಸ್ಮೃತಿಯಿಂದ ಹೊರಬಂದು ಕಲ್ಯಾಣ ಕ್ರಾಂತಿಯ ಆಶಯಗಳನ್ನು ಹೊರುವ ಜವಾಬ್ದಾರಿ ನಮ್ಮ ಮೇಲಿದೆ. ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ವಯಸ್ಸಾದವರಷ್ಟೇ ಭಾಗವಹಿಸುತ್ತಿರುವ ಸಂದರ್ಭದಲ್ಲಿ ಪೂಜ್ಯರು `ವಿದ್ಯಾರ್ಥಿಗಳ ಜೊತೆ ಮುಕ್ತ ಸಂವಾದ’ದ ಮೂಲಕ ಯುವಕರನ್ನೂ ಇದರೆಡೆಗೆ ಸೆಳೆಯುವ ಅವಕಾಶ ಮಾಡಿಕೊಟ್ಟಿದ್ದಾರೆ. ಸಂಪೂರ್ಣವಾಗಿ ಮಹಿಳೆಯರಿಗೆ ಸ್ವಾತಂತ್ರ್ಯ ಸಿಕ್ಕ ಕಾಲ 12 ನೆಯ ಶತಮಾನ. 21 ನೆಯ ಶತಮಾನದಲ್ಲಿ ಸಾಧ್ಯವಾಗದ್ದು 12 ನೆಯ ಶತಮಾನದಲ್ಲಿ ಸಾಧ್ಯವಾಗಿತ್ತು ಎನ್ನುವುದಾದರೆ ಇಂದು ನಮ್ಮ ಹೊಣೆಗಾರಿಕೆ ಏನು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
`ಕಲ್ಯಾಣ ಮತ್ತು ಬಹುಜನ’ ಕುರಿತಂತೆ ಡಾ. ಪ್ರಶಾಂತ ನಾಯಕ ಮಾತನಾಡಿ ಶರಣ ಚಳುವಳಿ ನಡೆದದ್ದೇ ತುಳಿತಕ್ಕೊಳಗಾದ, ಶೋಷಣೆಗೆ ಒಳಗಾದ ಬಹುಜನರ ಕಾರಣಕ್ಕಾಗಿ. ಅಂಥ ವಚನಕಾರರು ಬಾಳಿ ಬದುಕಿದ ಪುಣ್ಯಭೂಮಿ ನಮ್ಮ ಕರ್ನಾಟಕ. ಕಾಯಕ, ದಾಸೋಹ, ಮಹಾಮನೆ, ಅನುಭವ ಮಂಟಪಗಳೆಂಬ ಅದ್ಭುತ ಪರಿಕಲ್ಪನೆಗಳನ್ನು ಕೊಟ್ಟವರು ವಚನಕಾರರು. ಅವರು ನಾವು ಚಳುವಳಿ ಮಾಡುತ್ತೇವೆಂದು ಚಳುವಳಿ ಮಾಡಲಿಲ್ಲ. ಸಾಹಿತ್ಯ ರಚಿಸುತ್ತೇವೆಂದು ಸಾಹಿತ್ಯ ರಚಿಸಲಿಲ್ಲ. ಬದುಕಿನ ಶಾಶ್ವತ ಸತ್ಯದ ಹುಡುಕಾಟವೇ ಶರಣರ ಮುಖ್ಯ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ನೆರವಾದದ್ದೇ `ಅರಿವೇ ಗುರು’ ಎಂಬ ತತ್ವ. ಇದೇ ಆಶಯಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಒಳ್ಳೆಯ ಉದ್ದೇಶದಿಂದ ಹೊರಟಿರುವ ಪಂಡಿತಾರಾಧ್ಯ ಶ್ರೀಗಳನ್ನು ಹಲವರು ಪ್ರಶ್ನಿಸುತ್ತಿದ್ದಾರೆ. ಅಂತಹವರಿಗೆ ತಿರುಗಿ ಪ್ರಶ್ನೆ ಕೇಳಬೇಕಾಗಿದೆ ನಿಮಗೆ ನಿಜವಾಗಿಯೂ ಮಾನವೀಯತೆ ಇದೆಯಾ ಎಂದು. ಇಡೀ ವಚನ ಚಳುವಳಿ ಮಾನವೀಯತೆಯ ಬಗ್ಗೆ, ಕೊಡುಕೊಳ್ಳುವಿಕೆ ಬಗ್ಗೆಯೇ ನುಡಿದಿದೆ, ನಡೆದಿದೆ. ಇಂದಿನ ನಮ್ಮ ಹಣ, ಅಧಿಕಾರ, ಅಂತಸ್ಥು ಮುಂತಾದವುಗಳು ಶಾಶ್ವತ ಅಂತ ಯಾವ ಅರ್ಥದಲ್ಲಿ ಬೀಗುತ್ತಿದ್ದೇವೆಯೋ ಗೊತ್ತಿಲ್ಲ. ಜಾತಿಗಳೆಲ್ಲ ಅಹಂಕಾರಗಳಾಗಿ ಬದಲಾಗಿವೆ. ಅಹಂಕಾರವೆಂದರೆ ನಾಶವೆಂದೇ ಅರ್ಥ. ಸ್ವಲ್ಪದಿನಗಳ ಕೆಳಗೆ ಇಂಥ ದಿನ ಪ್ರಳಯವಾಗುತ್ತದೆ ಎಂದು ದಿನದಿನವೂ ಬ್ರೇಕಿಂಗ್ ನ್ಯೂಸ್ ನೀಡುತ್ತಿದ್ದ ಮಾಧ್ಯಮಗಳಿಗೆ ಪಂಡಿತಾರಾಧ್ಯ ಶ್ರೀಗಳು ನಡೆಸಿರುವ ಈ `ಮಾನವೀಯ ಕ್ರಾಂತಿ’ಯ ಬಗ್ಗೆ ಎರಡು ನಿಮಿಷ ಪ್ರಸಾರ ಮಾಡುವ ವ್ಯವಧಾನವಿಲ್ಲದಿರುವುದು ವಿಪರ್ಯಾಸವೇ ಸರಿ. ಬದುಕಿನ ಸತ್ಯ ಬೇರೆಯೇ ಇದೆ. ಏನೇ ಮಾಡಿದರೂ ಸಾಯುವಾಗ ನಮ್ಮ ನೆರವಿಗೆ, ನೋವಿಗೆ ನಮ್ಮ ಹೆಂಡತಿ ಮಕ್ಕಳೂ ಬರುವುದಿಲ್ಲ. ಇಂಥದ್ದರಲ್ಲಿ ನಮ್ಮ ಪಕ್ಕದಲ್ಲಿ ಕೂತವನು ನಮ್ಮ ಜಾತಿಯವನೇ, ಕುಲದವನೇ ಎಂದು ಮನಸ್ಸಿನಲ್ಲಿ ಅಂದುಕೊಳ್ಳುವುದಕ್ಕೂ ನಾಚಿಕೆಪಡಬೇಕು. `ಮತ್ತೆ ಕಲ್ಯಾಣ’ ಪಂಡಿತಾರಾಧ್ಯ ಶ್ರೀಗಳೊಬ್ಬರ ಜವಾಬ್ದಾರಿಯಲ್ಲ; ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು. ಪ್ರಸಿದ್ಧ ಚಿಂತಕರು, ವಾಗ್ಮಿಗಳು ದೊಡ್ಡ ದೊಡ್ಡ ನಗರಗಳಲ್ಲಿ ಭಾಷಣ ಮಾಡಿದರೆ ಸ್ವಾಗತ, ವಂದನಾರ್ಪಣೆ ಮಾಡುವವರನ್ನೂ ಸೇರಿದಂತೆ 15-20 ಜನ ಇರುವುದಿಲ್ಲ. ಆದರೆ ಈ ಅಭಿಯಾನದಲ್ಲಿ ಸಾವಿರ-ಸಾವಿರ ಜನ ಯಾಕೆ ಸೇರುತ್ತಿದ್ದಾರೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ವಚನಕಾರರ ಸಂತಾನವಾದ ನಾವು `ವಿಶ್ವಮಾನವತೆ’ಯನ್ನು ಕೊಡುವ ನೆಲದವರಾಗಬೇಕಿತ್ತು. ವಚನ ಚಳುವಳಿ ನಮ್ಮದು, ಚಳುವಳಿಕಾರರು ನಮ್ಮವರು ಎನ್ನುವ ಅಭಿಮಾನ ಬರಲೇಬೇಕು. ಮರ್ಯಾದೆ ಹತ್ಯೆಯಲ್ಲ; ನಾಚಿಕೆಗೇಡಿನ ಹತ್ಯೆ, ಮನುಷ್ಯತ್ವದ ಹತ್ಯೆ. `ಮತ್ತೆ ಕಲ್ಯಾಣ’ ಸಾಧ್ಯವಾ ಎಂದು ಅನುಮಾನ ಪಟ್ಟವರು ಹಲವರು. ಹೌದು ಸಾಧ್ಯ ಎಂದು ತೋರಿಸಿಕೊಡುತ್ತಿರುವವರು ಪಂಡಿತಾರಾಧ್ಯ ಶ್ರೀಗಳು. ನಾವೂ ಈ ಚಳುವಳಿಯ ಭಾಗವೆಂದು ಹೇಳಿಕೊಳ್ಳಲು ಹೆಮ್ಮೆಪಡಬೇಕು. ಕಾವ್ಯಗಳನ್ನೇ ಚರಿತ್ರೆ ಮಾಡುವ, ಚರಿತ್ರೆಗಳನ್ನೇ ಪಕ್ಕಕಿಡುವ ಕೆಲಸಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವೇದ, ಉಪನಿಷತ್ತುಗಳ ಜ್ಞಾನವನ್ನೂ ಮೀರಿದಂತೆ 21 ನೆಯ ಶತಮಾನದ ವೈಚಾರಿಕತೆ, ವೈಜ್ಞಾನಿಕತೆಯನ್ನೂ ಮೀರಿದಂತೆ 12ನೆಯ ಶತಮಾನದ ವಚನಗಳಿವೆ. ಇದೆ ವಚನಕಾರರ ಅರಿವು. ನಾವೆಲ್ಲರೂ ಬಸವಣ್ಣನೇ ಸಾಂಸ್ಕೃತಿಯ ನಾಯಕ ಎಂದರೆ; ಬಸವಣ್ಣ ಅಲ್ಲಮನನ್ನು ನಾಯಕನನ್ನಾಗಿ ಮಾಡಿದ್ದು ಅವರ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರಗು ನೀಡುವಂತಾಗಿದೆ. ನಾವೆಲ್ಲ ಮನುಷ್ಯರು ಅನ್ನಲು, ನಮ್ಮ ದೇಶವನ್ನು ನಮ್ಮದಾಗಿ ಕಾಪಾಡಿಕೊಳ್ಳಲು `ಮತ್ತೆ ಕಲ್ಯಾಣ’ ಬೇಕು. ನನ್ನ ಕುಲ ಶರಣರ ಕುಲ, ನನ್ನ ಭಾಷೆ ಶರಣರ ಭಾಷೆ, ನನ್ನ ನೆಲ ಶರಣರ ನೆಲ ಎಂದರು.
`ವಚನ ಚಳುವಳಿ ಮಹಿಳಾ ವಿಮೋಚನೆ’ ಕುರಿತಂತೆ ಡಾ ಲೀಲಾ ಸಂಪಿಗೆ ಮಾತನಾಡಿ ಮತ್ತೆ ಕಲ್ಯಾಣ ಎನ್ನುವ ಶಬ್ದವೇ ರೋಮಾಂಚನಕಾರಿಯಾದುದು. ಮುಂದಿನ ಜಾನಂಗವನ್ನು ಕ್ರಾಂತಿಕಾರಕ ಆಲೋಚನೆಗಳಿಗೆ ಒಳಗು ಮಾಡುವುದೇ ಕ್ರಾಂತಿಕಾರಿ ಮತ್ತೆ ಕಲ್ಯಾಣ. 21 ನೆಯ ಶತಮಾನದಲ್ಲೂ `ಮಹಿಳಾ ವಿಮೋಚನೆ’ ಸಾಧ್ಯವಾಗಿಲ್ಲ. ಈ ಬಗ್ಗೆ ನನಗೆ ಮೆತ್ತಗೆ ಮಾತನಾಡಲು ಆಗುವುದಿಲ್ಲ; ಯಾಕೆಂದೆ ನನ್ನೊಳಗೆ ಬೆಂಕಿಯಿದೆ. ನಾನು ಶೋಷಿತ ವೇಶ್ಯೆಯರ ಜೊತೆ ಕೆಲಸ ಮಾಡುವವಳು. ಗರ್ಭದಲ್ಲಿ ಭ್ರೂಣಾವಸ್ಥೆಯಲ್ಲಿರುವ ಹೆಣ್ಣನ್ನು ಕೊಲ್ಲುವ ಅಮಾನಷರು ನಾವಾಗಿದ್ದೇವೆ. ಇಂದು ಲಿಂಗಾನುಪಾತ ಸಾವಿರ ಗಂಡುಗಳಿಗೆ 900 ಹೆಣ್ಣುಗಳಿವೆ. ಸಮಸ್ಯೆಗಳು ಮತ್ತು ಶೋಷಣೆಗಳು ಇಂದಿಗೂ ಜೀವಂತವಾಗಿಯೇ ಇವೆ. ಅವು ರೂಪಾಂತರಗೊಂಡಿವೆಯಷ್ಟೇ. ಇಂದು ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಮಹಿಳೆಯರು ಅನುಭವಿಸುವ ನೋವನ್ನು ಕೇಳುವವರೇ ಇಲ್ಲ. ಇಂದಿಗೂ ಪುರುಷಪ್ರಧಾನ ವ್ಯವಸ್ಥೆಯೇ ಇದೆ. ಇಂದೂ ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆಯನ್ನು ಅನುಭವಿಸುವ ಸ್ಥಿತಿಯಲ್ಲಿ ಮಹಿಳೆಯರಿದ್ದೇವೆ. ಈ ಬಗೆಗೆ ಜಾಗೃತಿಗೊಳಿಸುವ ನಾಯಕರೊಬ್ಬರ ಅವಶ್ಯಕತೆಯಿತ್ತು. ಅದನ್ನು ಪಂಡಿತಾರಾಧ್ಯ ಶ್ರೀಗಳು ಮಾಡುತ್ತಿದ್ದಾರೆ. ಅವರ ಜೊತೆ ನಾವೂ ಹೆಜ್ಜೆ ಹಾಕೋಣ. `ಅಕ್ಕನಿಗಿಲ್ಲದ ಜನಿವಾರ ನಮಗೇಕೆ’ ಎಂದು ಕೇಳಿದ ಬಸವಣ್ಣ. ಇಂಥ ಮನಸ್ಸು ನಮ್ಮದೂ ಆಗಬೇಕು. ಪ್ರಪಂಚದ ಯಾವ ದೇಶದಲ್ಲಿಯೂ `ವಚನ ಸಾಹಿತ್ಯ’ದಂತ ಸಾಹಿತ್ಯವನ್ನು ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಕಾರ್ಲಮಾರ್ಕ್ ಗಿಂತ ಉತ್ಕೃಷ್ಟ ಸಿದ್ಧಾಂತ ವಚನಗಳಿಲ್ಲಿದೆ. ಇಂದು ನಮ್ಮನ್ನು ಮನುಷ್ಯರನ್ನಾಗಿ ನೋಡಿದರೆ ಸಾಕು ಎನ್ನುವ ಸ್ಥಿತಿ ವೇಶ್ಯಾವಾಟಿಕೆಗೆ ಒಳಗಾಗಿರುವ ಮಹಿಳೆಯರು ಹೇಳುತ್ತಿದ್ದಾರೆ ಎಂದರೆ ಎಂಥ ಪರಿಸ್ಥಿಯಲ್ಲಿ ನಮ್ಮ ಅಕ್ಕ-ತಂಗಿಯರು ಇದ್ದಾರೆಂದು ಅರ್ಥಮಾಡಿಕೊಳ್ಳಬೇಕು. ಶರಣರು ಸೂಳೆಸಂಕವ್ವೆಗೆ ಕೊಟ್ಟ ಮರ್ಯಾದೆಯನ್ನು ನಾವು ನಮ್ಮ ಅಕ್ಕ-ತಂಗಿಯರಿಗೂ ನೀಡಬೇಕು. ಇಡೀ ದೇಶದಲ್ಲಿ ನಡೆಯುವ ವೇಶ್ಯಾವಾಟಿಕೆಯಲ್ಲಿ ಕನ್ನಡದ ಹೆಣ್ಣುಮಕ್ಕಳು ಎಲ್ಲ ಕಡೆಯೂ ಸಿಗುತ್ತಾರೆ. ಕೆಲವೆಡೆ ಅವರದೇ ಒಂದು ಬೀದಿಯೂ ಇದೆ ಎಂದರೆ ಎಂಥ ದುಃಸ್ಥಿತಿಗೆ ಸಿಲುಕಿದ್ದಾರೆ ಎಂದು ಯೋಚಿಸಬೇಕು. ಒಮ್ಮೆ ಮಾರಾಟ- ಅಥವ ಮೋಸದ ಜಾಲಕ್ಕೆ ಬಲಿಯಾದರೆ ಮತ್ತೆ ಅವರನ್ನು ವಾಪಾಸ್ ತರಲು ಸಾಧ್ಯವಿಲ್ಲ. ಹೆಣ್ಣುಮಕ್ಕಳು ಕಾಣೆಯಾಗುವ ಹಿನ್ನೆಲೆಯಲ್ಲಿ ವೇಶ್ಯಾವಟಿಕೆ ಜಾಲದ ಸಂಚಿದೆ. ಕಾಣೆಯಾದ ಹೆಣ್ಣುಮಕ್ಕಳನ್ನು ಹುಡುಕುವ, ವಾಪಾಸ್ ತರುವ ಇಚ್ಛಶಕ್ತಿಯೇ ಸಮಾಜಕ್ಕೆ ಇಲ್ಲವಾಗಿದೆ. ಕನ್ಯತ್ವವುಳ್ಳ ಮಹಿಳೆಯ ಜೊತೆ ಸೇರಿದರೆ ಹೆಚ್ ಐ ವಿ ದೂರವಾಗುತ್ತದೆ ಎನ್ನುವ ಮೌಢ್ಯದಲ್ಲಿದ್ದೇವೆ. ಈ ಹಿನ್ನೆಲೆಯಲ್ಲಿ ಬಾಲಕಿಯೊಬ್ಬಳು 11 ಬಾರಿ ಹೊಲಿಗೆ ಹಾಕಿಸಿಕೊಂಡಿದ್ದೇನೆ ಎಂದು ಆಕೆ ಹೇಳಿದಾಗ ನನಗೆ ಕರುಳೇಕಿತ್ತು ಬರುವಂತಾಯಿತು. ಸತಿ ಸಹಗಮ ನ ಪದ್ಧತಿ ಮತ್ತೆ ತರಲು ಹೊರಟಿದ್ದಾರೆ! ಎಂಥ ಅಮಾನವೀಯ! ಕೆಲವು ಕಡೆ ಪುರುಷರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ವಚನ ಸಂಪತ್ತು ಇಡೀ ಜಗತ್ತಿಗೆ ಸಮಾನತೆಯ ಪ್ರತೀಕವಾದ, ಮನುಷ್ಯತ್ವವನ್ನು ಕರುಣಿಸುವ ಬೀಜಗಳು. ಅವುಗಳನ್ನು ಜತನದಿಂದ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಸ್ವಾಗತಿಸಿದರೆ ಕಾರ್ಯಕ್ರಮ ನಿರ್ವಹಿಸಿದರು. ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನಗೊಂಡಿತು. ನಾಟಕ ಮುಗಿದ ಮೇಲೆ ಪ್ರೇಕ್ಷಕರು ನಾಟಕದ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡರು.
ಭೀಷ್ಮಕೆರೆಯಲ್ಲಿರುವ ಶ್ರೀ ಬಸವೇಶ್ವರ ಮೂರ್ತಿಯಿಂದ ಆರಂಭವಾದ ಸಾಮರಸ್ಯ ನಡಿಗೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದೊಂದಿಗೆ ತೋಂಟದಾರ್ಯಮಠಕ್ಕೆ ಬಂದು ತಲುಪಿದರು.
- ಹೆಚ್ ಎಸ್ ದ್ಯಾಮೇಶ್
ವಿದ್ಯಾರ್ಥಿಗಳೊಂದಿಗೆ ಸಂವಾದ
ಆಗಸ್ಟ್ 20; ಗದಗ; ಇಲ್ಲಿನ ಶ್ರೀ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತಾ ವಾದ, ವಿವಾದಗಳು ನಡೆಯುತ್ತವೆ. ಅವು ಸಂವಾದಗಳಾಗಬೇಕು. ಈ ಹಿನ್ನೆಲೆಯಲ್ಲಿ 12ನೆಯ ಶತಮಾನದ `ಅನುಭವ ಮಂಟಪ’ಕ್ಕೆ ವಿಶೇಷ ಸ್ಥಾನಮಾನವಿದೆ. ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ತುಳಿತಕ್ಕೆ, ಶೋಷಣೆ, ಉಪಕ್ಷೆಗೆ ಒಳಗಾದವರು, ಅಕ್ಷರ ಜ್ಞಾನ ಇಲ್ಲದೇ ಇರುವವರು, ಹೆಣ್ಣು-ಗಂಡು, ಜಾತಿ-ವಿಜಾತಿ, ಬಡವ-ಬಲ್ಲಿದ ಮುಂತಾದ ತರತಮಗಳನ್ನೂ ಮೀರಿ ಒಂದೇ ವೇದಿಕೆಯ ಮೇಲೆ ಸಾರ್ವಜನಿಕವಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ನಿರ್ಭೆಡೆಯಿಂದ ಹಂಚಿಕೊಳ್ಳುತ್ತಿದ್ದರು. ಅಲ್ಲಿ ಚಿಂತನ-ಮಂಥನ ನಡೆಸಿ ಬರೆದ ಸಾಹಿತ್ಯವೇ ವಚನಗಳು. ಸಂವಾದದ ಮೂಲಕ ತಮ್ಮನ್ನು ಪ್ರಶ್ನೆಗೆ ಒಳಪಡಿಸಿಕೊಂಡದ್ದಲ್ಲದೆ ಜಗತ್ತಿಗೆ ತಮ್ಮ ವಿಚಾರಗಳನ್ನು ಬಿಟ್ಟು ಹೋಗಿದ್ದಾರೆ. ದೇವರನ್ನು ಒಲಿಸಿಕೊಳ್ಳಲು ದೇವಸ್ಥಾನಗಳ ಪ್ರದಕ್ಷಿಣೆ, ಮರ ಸುತ್ತಿ, ನೀರಿನಲ್ಲಿ ಮುಳುಗಿ ಅಂತ ಹೇಳಲಿಲ್ಲ. `ಕಳಬೇಡ, ಕೊಲಬೇಡ…’ ಎನ್ನುವ ವಚನದ ಆಶಯದಂತೆ ನಿತ್ಯದ ನಡೆ-ನುಡಿಗಳ ಮೂಲಕ ದೇವರನ್ನು ಒಲಿಸಿಕೊಳ್ಳುವ ಪರಿಯನ್ನು ತಿಳಿಸಿದರು. ಮಾತು ಸೂತಕ. ಮಾತಿಗಿಂತ ಮೌನವೇ ಶ್ರೇಷ್ಠ. ಒಂದು ವೇಳೆ ಮಾತನಾಡುವದೇ ಆದರೆ ಮುತ್ತಿನ ಹಾರದಂತೆ, ಸ್ಪಟಿಕದ ಸಲಾಕೆಯಂತೆ ಸ್ಪಷ್ಟವಾಗಿ, ಪಾರದರ್ಶಕವಾಗಿರಬೇಕು. ನಡೆ ಮತ್ತು ನುಡಿ ಒಂದಾಗಿರಬೇಕು. ಇಂದು ನಾವು ನುಡಿಧೀರರಾಗಿದ್ದೇವೆಯೇ ಹೊರತು ನಡೆಧೀರರಾಗಿಲ್ಲ. ಶರಣರು ದೇವರಿಗೆ ಸವಾಲನ್ನು ಹಾಕುವ ನೈತಿಕತೆಯನ್ನು ಹೊಂದಿದ್ದರು. ಬಸವಣ್ಣ ನಾನು ಹಿತ, ಮಿತವಾದ ಮಾತುಗಳನ್ನೇ ಆಡುತ್ತೇನೆ. ನುಡಿದಂತೆ ನಡೆಯುತ್ತೇನೆ, ನಡೆದಂತೆ ನುಡಿಯುತ್ತೇನೆ. ನನ್ನ ನಡೆ ಮತ್ತು ನುಡಿಯಲ್ಲಿ ಸ್ವಲ್ಪ ಕುಂದಾದರೈ ನನ್ನನ್ನು ಅದ್ದಿ ನೀನೆದ್ದು ಹೋಗು ಎಂದು ದೇವರಿಗೆ ಸವಾಲೆಸೆಯುತ್ತಾರೆ. ಶರಣರ ಅನುಭವ ಅನುಭಾವವಾಗಿ ಪರಿಣಾಮಿಸಿತ್ತು. ವಚನ ಎಂದರೆ ಪ್ರಮಾಣ, ಸತ್ಯ, ಬೆಳಕು. ವಚನಗಳನ್ನು ಕೇವಲ ಓದದೆ, ಹಾಡದೆ ಅವುಗಳ ಹಿಂದೆ ಇರುವ ಭಾವವನ್ನು ಗ್ರಹಿಸಿ ಅಳವಡಿಸಿಕೊಳ್ಳುವ ಯತ್ನವನ್ನ ನಿತ್ಯ ಮಾಡಿಕೊಳ್ಳಬೇಕು. ನಾವೆಲ್ಲಾ ಅನೇಕ ಪುಸ್ತಕಗಳನ್ನು ಓದುತ್ತೇವೆ, ವಿಚಾರಗಳನ್ನು ಕೇಳುತ್ತೇವೆ. ಆದ್ರೆ ನಮ್ಮ ಮನಸ್ಸುಗಳು ವಿಕಾಸವಾಗುವುದರ ಬದಲು ವಿಕಾರವಾಗುತ್ತಿವೆ ಎಂದರೆ ನಾವು ಪಠ್ಯದೊಳಗಿನ ಮೌಲ್ಯಗಳನ್ನು ಗುರುತಿಸಿಲ್ಲ ಎನ್ನುವುದೇ ಆಗಿದೆ. ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಜನರನ್ನು ಮೂರು ಗುಂಪುಗಳನ್ನಾಗಿ ಮಾಡಿದರು. ತುಂಬಿದ ಚೀಲ, ತೂತುಬಿದ್ದ ಚೀಲ, ಖಾಲಿ ಚೀಲ. ವಿದ್ಯಾರ್ಥಿಗಳು ಖಾಲಿ ಚೀಲಗಳಿದ್ದಂತೆ. ಈ ಖಾಲಿ ಚೀಲಗಳಲ್ಲಿ ಏನು ತುಂಬಬೇಕು ಎನ್ನುವ ವಿವೇಕ ತುಂಬುವ ವ್ಯಕ್ತಿಗೆ ಇರಬೇಕು. ಯಾವುದನ್ನು ತುಂಬಿದರೆ ಚೀಲದ ಮೌಲ್ಯ ಹೆಚ್ಚಾಗುತ್ತೆ ಎನ್ನುವ ಅರಿವಿರಬೇಕು. ವಿದ್ಯಾರ್ಥಿಗಳಿಗೆ ವಚನ ಸಂಸ್ಕೃತಿಯನ್ನು ಬೆಳೆಸುವುದೇ ‘ಮತ್ತೆ ಕಲ್ಯಾಣ’ದ ಆಶಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮಗೆ ಸಾಧ್ಯವಾದಷ್ಟು ವಚನಗಳನ್ನು ಕಲಿತು ತಮ್ಮ ಮನೋವಿಕಾಸ ಮಾಡಿಕೊಳ್ಳಬೇಕು. ಲಿಂಗಾಯತ ಎನ್ನುವುದು ಪುರಾಣ ಪ್ರಜ್ಞೆಯಿಂದ ಉದಯಿಸಿಲ್ಲ, ವಾಸ್ತವ ಪ್ರಜ್ಞೆಯಿಂದ ಉದಯಿಸಿದುದು. 12ನೆಯ ಶತಮಾನದಲ್ಲೂ ಶರಣರ ವಿಚಾರಗಳನ್ನು ವಿರೋಧಿಸುತ್ತಿದ್ದರು. ಈಗಲೂ ವಿರೋಧಿಸುತ್ತಿದ್ದಾರೆ. ವ್ಯಕ್ತಿಗತ ಬದಲಾವಣೆ ಆಗದೇ ದೇಶ ಬದಲಾವಣೆ ಮಾಡಲು ಸಾಧ್ಯವಿಲ್ಲ. ನಾವು ಇನ್ನೊಬ್ಬರ ಕಡೆ ಬೆರಳು ಮಾಡಿ ತೋರಿಸುವುದರ ಬದಲು ನನ್ನಿಂದಲೇ ಆ ಕೆಲಸ ಶುರುವಾಗಲಿ ಎನ್ನುವ ಸಂಕಲ್ಪ ಮಾಡಬೇಕು. ತಿನ್ನುವ ಆಹಾರ ಮುಖ್ಯವಲ್ಲ; ಆಚಾರ-ವಿಚಾರ ಮುಖ್ಯ. ಬಸವಣ್ಣನವರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಅವರದು ಮಾನವ ಧರ್ಮ. ಅವರು ಸ್ಥಾಪನೆ ಮಾಡಿದ ಧರ್ಮವೇ ಲಿಂಗಾಯತ ಧರ್ಮ. ಲಿಂಗಕಟ್ಟಿದ ಕೂಡಲೇ ಲಿಂಗಾಯತರಾಗಲು ಸಾಧ್ಯವಿಲ್ಲ. ಲಿಂಗಾಯತ ಧರ್ಮದ ಆಚಾರ-ವಿಚಾರಗಳನ್ನು ಅನುಸರಿಸಿದವರು ಎಲ್ಲರೂ ಲಿಂಗಾಯತರೇ. ಧರ್ಮ ಬೇರೆ, ಜಾತಿ ಬೇರೆ. ಧರ್ಮ ಸೂಜಿಯಂತೆ ಕೂಡಿಸುವ ಕೆಲಸ ಮಾಡಿದರೆ, ಜಾತಿ ಕತ್ತರಿಯಂತೆ ಕತ್ತರಿಸುವ ಕೆಲಸ ಮಾಡುತ್ತಿದೆ ಎಂದರು.
ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ ಶರಣರು ಸಮಾಜದಲ್ಲಿ ಸಮಾನತೆಯನ್ನು ತರಬೇಕು ಎನ್ನುವ ಕಾರಣಕ್ಕಾಗಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಇಷ್ಟಲಿಂಗಕ್ಕೆ ಸಾಮಾಜಿಕ ಮತ್ತು ಧಾರ್ಮಿಕ ಆಯಾಮಗಳುಂಟು. ಸಾಮಾಜಿಕ ಆಯಾಮದ ದೃಷ್ಟಿಯಿಂದ ಜಾತಿ, ಲಿಂಗ, ವರ್ಣ ಯಾವುದೇ ತಾರತಮ್ಯ ಇಲ್ಲ. ಧಾರ್ಮಿಕ ಆಯಾಮದಲ್ಲಿ ಗುಡಿ ಗುಂಡಾರಗಳ ಹಂಗನ್ನು ತೊರೆದು ದೇಹವನ್ನೇ ದೇವಾಲಯ ಮಾಡಿಕೊಳ್ಳುವುದು. ಅನುಭವ ಮಂಟಪದ ಸ್ಥಾಪನೆಯ ಉದ್ದೇಶ ತಳ ವರ್ಗವನ್ನು ಮೇಲೆಕ್ಕೆ ಎತ್ತಬೇಕು, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು ಎನ್ನುವುದಾಗಿತ್ತು. ಈ ಹಿನ್ನೆಲೆಯಲ್ಲಿಯೇ ಅದರ ಅಧ್ಯಕ್ಷರನ್ನಾಗಿ ತಳವರ್ಗದ, ಅನುಭಾವಿ ಅಲ್ಲಮಪ್ರಭುಗಳನ್ನೇ ಅಧ್ಯಕ್ಷರನ್ನಾಗಿ ಮಾಡಿದರು. ಯಾವ ವ್ಯಕ್ತಿ ಆತ್ಮಜ್ಞಾನವನ್ನು ಪಡೆದುಕೊಳ್ಳುತ್ತಾನೋ ಅವನು ಮುಕ್ತಿಯನ್ನೂ ಹೊಂದುತ್ತಾನೆ.
ಸಂವಾದಕ ಎಸ್ ಎಸ್ ಹರ್ಲಾಪೂರ ಮಾತನಾಡಿ ಸಾರ್ವಜನಿಕ ಜೀವನದಲ್ಲಿರುವ ಏರುಪೇರು, ಸಂಘರ್ಷ, ಕೀಳರಿಮೆಗಳನ್ನು ತೊಡೆದು ಸಮಸಮಾಜವನ್ನು ಸೃಷ್ಟಿಸುವ ಉದ್ದೇಶದಿಂದ ಸೃಷ್ಟಿಯಾದವುಗಳೇ ವಚನ ಸಾಹಿತ್ಯ. ಇದನ್ನೇ ವಚನಕಾರರು ವಚನಗಳ ರಚನೆಗೆ ಮೂಲಬೇರನ್ನಾಗಿ ಮಾಡಿಕೊಂಡರು. ಅನುಭವ ಮಂಟಪ ಎನ್ನುವುದೊಂದು ಚರ್ಚೆಯ ಸ್ಥಳ. ಶರಣರ ಜೀವನದ ಅನುಭವ, ಚರ್ಚೆಯ ಮೂಲಕ ಹುಟ್ಟಿಕೊಂಡಿರುವ ವಿಚಾರಗಳೇ ವಚನಗಳು ಎಂದರು.
ಸಂವಾದಕ ಶಶಿಧರ ತೋಡಕರ ಮಾತನಾಡಿ ನಾನು ಬದಲಾವಣೆಯಾದರೆ ಇಡೀ ಸಮಾಜವೇ ಬದಲಾವಣೆ ಮಾಡಲು ಸಾಧ್ಯ. ಯುವ ಸಮುದಾಯ ಬದಲಾವಣೆಯಾಗಬೇಕು ಎನ್ನುವ ಕಾರಣಕ್ಕಾಗಿಯೇ ಮತ್ತೆ ಕಲ್ಯಾಣ ಅಭಿಯಾನ. ಶರಣರ ಮಾತುಗಳೇ ಅನುಭಾವದ ಮಾತುಗಳು. ಮನುಷ್ಯ ಹಣ, ಅಧಿಕಾರ, ಕೀರ್ತಿಶನಿ ಮುಂತಾದವುಗಳಿಗೆ ಅಂಟಿಕೊಂಡು ಬದುಕಬಾರದು. ಬಸವಣ್ಣ ಹೇಳುವಂತೆ ನಮ್ಮ ಬದುಕು ಜಂಗಮವಾಗಬೇಕೇ ಹೊರತು ಸ್ಥಾವರವಾಗಬಾರದು.
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು :
• ಬಸವಣ್ಣನವರು ಢಾಂಬಿಕ ಭಕ್ತಿಯನ್ನು ಖಂಡಿಸಿದರು. ಆದರೂ ನಾವೆಲ್ಲರೂ ಢಾಂಬಿಕ ಭಕ್ತಿಯನ್ನೇ ಹೆಚ್ಚಾಗಿ ಮಾಡುತ್ತಿದ್ದೇವೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
• ಲಿಂಗದೀಕ್ಷೆಯ ಮೂಲಕ ಕೇವಲ ಲಿಂಗಾಯತ ಧರ್ಮದ ಪ್ರಚಾರ ಮಾಡಿದ ಹಾಗೆ ಆಗುವುದಿಲ್ಲವೇ?
• ಲಿಂಗಾಯತ ಮತ್ತು ವೀರಶೈವ ಎಂದು ಧರ್ಮ ಕಲಹಗಳು ಯಾಕೆ ಉಂಟಾಗುತ್ತವೆ?
• ವಚನಕಾರರು ಅಂಕಿತ ನಾಮಗಳನ್ನು ಯಾಕೆ ಇಟ್ಟುಕೊಳ್ಳುತ್ತಾರೆ?
• ಮತ್ತೆ ಕಲ್ಯಾಣ ಎನ್ನುವ ಅಭಿಯಾನ ಎಡಪಂಥೀಯ ಪರವೋ, ಬಲಪಂಥೀಯ ಪರವೋ, ನಡುಪಂಥೀಯ ಪರವೋ?
• ವಚನ ಸಾಹಿತ್ಯದ ಮೂಲ ಯಾವುದು?
• ಬಸವಣ್ಣನವರು ಸಮಾನತೆಗಾಗಿ ಹೋರಾಟ ಮಾಡಿದರು. ಈಗ ಆ ಸಮಾನತೆ ಇದೆಯೇ ?
• 12ನೆಯ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಾಯಿತು. ಈಗ ಮತ್ತೆ ಕಲ್ಯಾಣ ಕ್ರಾಂತಿಯಿಂದ ಜನರಲ್ಲಿ ಹೇಗೆ ಬದಲಾವಣೆ ಆಗುತ್ತದೆ?
• ಶರಣರನ್ನು ನಾವ್ಯಾರು ನೋಡಿಲ್ಲ. ಈಗ ಅಂಥವರನ್ನು ಗುರುತಿಸುವುದು ಹೇಗೆ?
• ಲಿಂಗದ ವೈಶಿಷ್ಟ್ಯವೇನು?
• ಬಸವಣ್ಣನವರ ಆಶಯದ ಪ್ರಕಾರ ಧರ್ಮವೆಂದರೇನು?
• 12ನೆಯ ಶತಮಾನದಲ್ಲಿ ಮತ್ತೆ ಕಲ್ಯಾಣ ಎನ್ನುವ ಪರಿಕಲ್ಪನೆಯಿತ್ತು. 21ನೆಯ ಶತಮಾನದಲ್ಲಿಯೂ ಮತ್ತೆ ಕಲ್ಯಾಣ ಪರಿಕಲ್ಪನೆಯ ಅವಶ್ಯಕತೆಯೇನಿದೆ?
• 12ನೆಯ ಶತಮಾನದಲ್ಲಿ ಶರಣರು ಜಾತಿ ಹೋಗಲಾಡಿಸಲಿಕ್ಕೆ ತಮ್ಮ ಜೀವನವನ್ನೇ ತ್ಯಾಗ ಮಾಡಿದರು. ಮತ್ತೆ 21ನೆಯ ಶತಮಾನದಲ್ಲಿ ಜಾತಿಯ ಆಧಾರದ ಮೇಲೆ ಮೀಸಲಾತಿ ಕೊಡುವ ಅವಶ್ಯಕತೆಯಿದೆಯೇ?
• ಅನುಭವ ಮಂಟಪವನ್ನು ಬಸವಣ್ಣನವರು ಸ್ಥಾಪಿಸಿದರು. ಅದರ ಅಧ್ಯಕ್ಷರು ಬಸವಣ್ಣನವರೇ ಆಗುವುದರ ಬದಲಾಗಿ ಅಲ್ಲಮ ಪ್ರಭುಗಳನ್ನು ಅಧ್ಯಕ್ಷರನ್ನಾಗಿ ಯಾಕೆ ಮಾಡಿದರು?
• ಶೂನ್ಯ ಸಿಂಹಾಸನ ಎಂದರೇನು ?
• ಆತ್ಮಜ್ಞಾನ ಮತ್ತು ಮುಕ್ತಿ ಎಂದರೇನು?
• ಇಂದು ಲಿಂಗವನ್ನು ಧರಿಸಿಯೂ ಜಾತಿಯ ತಾರತಮ್ಯ ಮಾಡುತ್ತಾರಲ್ಲ. ಇದು ಸರಿಯೇ ?
• ಅಂಕಿತನಾಮವೆಂದರೇನು?
• ಭ್ರಷ್ಟಾಚಾರ ತುಂಬಿದ ಯುಗದಲ್ಲಿ ಮತ್ತೆ ಕಲ್ಯಾಣದ ಮೂಲಕ ಅದನ್ನು ತೊಲಗಿಸಲು ಸಾಧ್ಯವೇ?
• ಜಾತಿಗೊಂದು ಮಠ ಸ್ಥಾಪನೆ ಮಾಡಿದ್ದಾರೆ. ಇದರಿಂದ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವೇ?
• ಬಸವಣ್ಣನವರು ಮೂರ್ತಿ ಪೂಜೆಯನ್ನು ತಿರಸ್ಕಾರ ಮಾಡಿದರು. ಆದರೆ ಬಸವಣ್ಣನವರ ಮೂರ್ತಿಯನ್ನೇ ಪೂಜೆ ಮಾಡುತ್ತಾರೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
• ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎಂದು ಹೇಳಿದರು. ಈಗ ಮಾಧ್ಯಮದ ಮೂಲಕ ಭಯವೇ ಧರ್ಮದ ಮೂಲವಾಗಿದೆ. ಇದಕ್ಕೆ ಮತ್ತೆ ಕಲ್ಯಾಣ ಹೇಗೆ ಪರಿಹಾರ ಒದಗಿಸಬಲ್ಲುದು ?
• ಯುವ ಜನತೆ ಬಸವ ತತ್ವವನ್ನು ಯಾಕೆ ಅರ್ಥೈಸಿಕೊಳ್ಳುತ್ತಿಲ್ಲ?
• ಲಿಂಗಾಯತ ಮಠಗಳಲ್ಲಿ ಎಸ್ಸಿ ಎಸ್ಟಿ ಸ್ವಾಮಿಗಳನ್ನು ನೇಮಕ ಮಾಡಿಕೊಳ್ಳಬಹುದಲ್ಲಾ?
- ಹೆಚ್ ಎಸ್ ದ್ಯಾಮೇಶ್
9449649850

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)