ಆಗಸ್ಟ್ 02 ಶುಕ್ರವಾರ, ಉಡುಪಿ
-ಸಾರ್ವಜನಿಕ ಸಮಾವೇಶ
- ಇಲ್ಲಿನ ಪುರಭವನ ಅಜ್ಜರಕಾಡಿನಲ್ಲಿ ನಡೆದ ಮತ್ತೆ ಕಲ್ಯಾಣದ ಸಾನ್ನಿಧ್ಯವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ 12 ನೆಯ ಶತಮಾನ 21 ನೆಯ ಬೇರೆ ಬೇರೆ ಅಲ್ಲ. ಅಂದಿರುವವರೇ ಇಂದೂ ಇದ್ದಾರೆ. ಅಂದಿರುವ ಸಮಸ್ಯೆಗಳೇ ಇಂದೂ ಇವೆ. ವಚನಕಾರರು ಶ್ರದ್ಧೆ, ಭಕ್ತಿ, ಬದ್ಧತೆಯಿಂದ ಆ ಸಮಸ್ಯೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು. ಕಾಲ, ಕಾಯಕ ಮತ್ತು ಕಾಸುಗಳ ಮಹತ್ವವನ್ನು ಮರೆತದ್ದರಿಂದಲೇ ಎಲ್ಲ ಅನಾಹುತಗಳಿಗೆ ದಾರಿಯಾಗಿದೆ. ಇವುಗಳ ಮಹತ್ವ ತಿಳಿದು ನಡೆದುಕೊಳ್ಳಬೇಕು. ಸಂಪತ್ತಿನ ಮದದಲ್ಲಿ ಮೆರೆಯುತ್ತಿರುವ ಜನರನ್ನು ಉದ್ದೇಶಿಸಿಯೇ ಬಸವಣ್ಣ ಹಾವು ಕಚ್ಚಿಸಿದವರನ್ನು ನುಡಿಸಬಹುದು `ಸಿರಿಗರ’ ಹೊಡೆದವರ ನುಡಿಸಲಾಗದು ಎಂದು ಹೇಳಿದುದು. ಸಿರಿಗರ ಮಠಾಧಿಪತಿಗಳಿಗೆ, ರಾಜಕಾರಣಿಗಳಿಗೆ ಇಂದು ಹೊಡೆದಿದೆ. ಹೀಗಾಗಿ ಎಲ್ಲರೂ ಮದವೇರಿದ್ದಾರೆ. ಮತದಾರ ಜಾಗೃತನಾದರೆ ನೇತಾರ ಜಾಗೃತನಾಗುವನು. ಬಸವಣ್ಣ ನೇತರರನ್ನು ಅವಲಂಭಿಸದೆ ಮತದಾರರನ್ನು ಅವಲಂಬಿಸಿದ್ದರು. ಬಸವಣ್ಣ ಮೊದಲು ತಮ್ಮ ವ್ಯಕ್ತಿತ್ವವನ್ನು ತಾವು ತಿದ್ದಿಕೊಂಡರು. ಮೊದಲು ಜಾತಿಯ ಶ್ರೇಷ್ಠತೆಯಿಂದ ಹೊರಬಂದರು. ವಚನಕಾರರ ದಾಸೋಹ ಪ್ರಜ್ಞೆ ಇಂದಿನ ಜನರಿಗೆ ಬರಬೇಕಿದೆ. ವಚನಕಾರರಲ್ಲಿ ಕೂಡಿಡುವ ಪದ್ಧತಿ ಇರಲಿಲ್ಲ. ಅಕ್ಕಿಯನ್ನು ಆಯ್ದು ಜೀವನ ಮಾಡುವ ಮಾರಯ್ಯ ಒಮ್ಮೆ ಹೆಚ್ಚು ಅಕ್ಕಿಯನ್ನು ತಂದಾಗ ಪತ್ನಿ ಲಕ್ಕಮ್ಮ `ಈಸಕ್ಕಿಯಾಸೆ ನಿಮಗೇಕೆ” ಎಂದು ಪ್ರಶ್ನಿಸಿ ಅದನ್ನು ವಾಪಾಸ್ ಕಳುಹಿಸುವ ನೈತಿಕ ಸ್ಥೈರ್ಯ ತೋರಿದಳು. ಇಂಥ ಧೈರ್ಯ ಇಂದು ನಮಗಿದೆಯೇ ಎಂದು ಕೇಳಿಕೊಳ್ಳಬೇಕಾಗಿದೆ. ಬಸವ ತತ್ವವನ್ನು ಆರಿತು ಆಚರಿಸುವ ನಿಷ್ಠೆ ಮತದಾರರಿಗೆ, ನೇತರಾರಿಗೆ ಬರಬೇಕಿದೆ. ತಾತ್ವಿಕ ಬದ್ಧತೆ ಇಲ್ಲದ ಬದುಕು ನರಕವಾಗುವುದು. ಜನ ಮೆಚ್ಚಿ ಶುದ್ಧನಲ್ಲದೆ ಮನ ಮೆಚ್ಚಿ ಶುದ್ಧನಲ್ಲ ಎನ್ನುವ ಮಾತನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಕಾಕಿ, ಕಾವಿ, ಖಾದಿ ಸುಮ್ಮನೆ ಅವು ಬಟ್ಟೆಗಳಲ್ಲ; ಅವುಗಳಿಗಿರುವ ಅರ್ಥವನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಬೇಕು. ಆತ್ಮ ಶುದ್ಧಿಯಿಲ್ಲದೆ ಲೋಕಕಲ್ಯಾಣ ಸಾಧ್ಯವಿಲ್ಲ. ಜಾಗೃತಿ ಸಾಮಾನ್ಯ ಜನರಿಗಿಂತ ಅಧಿಕಾರ ಹೊಂದಿರುವವರಿಗೆ, ಜಾತಿಯ ಮೇಲ್ಪದರದಲ್ಲಿರುವ ಬೇಕಿದೆ. ಇಂಥವರು ಮಾತನಾಡುವ ಬದಲು ವಚನಕಾರರ ಚಿಂತನೆಯನ್ನು ಕೇಳಿ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಶ್ರೇಷ್ಠತೆಯೆಂಬ ವ್ಯಸನದಿಂದ ಹೊರಬರಬೇಕಿದೆ. ನಮ್ಮ ಈ ಮತ್ತೆ ಕಲ್ಯಾಣದ ವೇದಿಕೆಗೆ ಒಂದು ಬದ್ಧತೆ, ಶಿಸ್ತು ಇರುತ್ತದೆ ಎಂದು ಹೇಳಿದರು.
ಬಸವಣ್ಣ ಮತ್ತು ಜನತಂತ್ರ ಕುರಿತು ಉಪನ್ಯಾಸ ನೀಡಿದ ಕಡೂರಿನ ಮಾಜಿ ಶಾಸಕ ವೈ ಎಸ್ ವಿ ದತ್ತ ಮಾತನಾಡಿ ಉಡುಪಿ ಇಂದು ವೈದಿಕ ಯಾತ್ರೆ ಮತ್ತು ವೈಚಾರಿಕ ಯಾತ್ರೆಗೆ ಸಾಕ್ಷಿಯಾಗಿದೆ. ಉಡುಪಿಯ ನೆಲದಲ್ಲಿ ಸರ್ವ ಜನಾಂಗದ ಸಾಮರಸ್ಯದ ಅರಿವನ್ನು ಮತ್ತೆ ಮತ್ತೆ ಮೂಡಿಸಬೇಕಾದ ಅನಿವಾರ್ಯತೆಯಿದೆ. ಇಂಗ್ಲೇಂಡಿನಲ್ಲಿ ನಡೆದ ಮ್ಯಾಗ್ನಾಕಾರ್ಟ್ ಪ್ರಜಾಪ್ರಭುತ್ವದ ಉಗಮದ ಸಂಕೇತವೆಂದೂ, ಪ್ರಾನ್ಸ್ ಕ್ರಾಂತಿ, ರಷ್ಯಾದ ಕ್ರಾಂತಿಗಳೇ ಜನತಂತ್ರದ ಉಗಮ ತಾಣಗಳೆಂದು ಇತಿಹಾಸದಲ್ಲಿ ಓದಿದ್ದೇವೆ. ಆದರೆ ಆಶ್ಚರ್ಯ ಮತ್ತು ಖುಷಿ ಕೊಡುವ ಸಂಗತಿಯೆಂದರೆ ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ಮೊಟ್ಟಮೊದಲಿಗೆ ನೀಡಿದವರು 12 ನೆಯ ಶತಮಾನದ ಬಸವಣ್ಣ. ಜನರೆಲ್ಲ ಕೂಡಲಸಂಗಮದೇವರು, ನಾನೊಬ್ಬನೇ ಭಕ್ತ ಎನ್ನುವುದೇ ಬಸಣ್ಣ ಪ್ರಜಾತಂತ್ರಕ್ಕೆ ನೀಡಿದ ವ್ಯಾಖ್ಯಾನ. ಈ ಮಾತನ್ನು ನಾವು ರಾಜಕಾರಣಿಗಳು ಅನುಸರಿಸಿದ್ದರೆ ಎಂಥ ಬದಲಾವಣೆಯನ್ನು ಕಾಣಲು ಸಾಧ್ಯವಿತ್ತು ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ವ್ಯಷ್ಠಿ ಮತ್ತು ಸಮಷ್ಠಿಗಳ ಮಧ್ಯೆ ಪೂರಕ, ಸಾಮರಾಸ್ಯದ ಬೆಸುಗೆಯಿರಬೇಕು. ಇದೇ ಪ್ರಜಾಪ್ರಭುತ್ವದ ಮೂಲಾಧಾರ. ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ, ಮನವ ಸಂತೈಸಿಕೊಳ್ಳಿ ಎನ್ನುವ ಮೂಲಕ ವ್ಯಷ್ಠಿ ಮತ್ತು ಸಮಷ್ಠಿಯನ್ನು ಬಸವಣ್ಣ ಬೆಸೆದಿದ್ದಾರೆ. ಬಸವಣ್ಣನ ಸಂವಿಧಾನಕ್ಕೆ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ’ ಎನ್ನುವ ಸಪ್ತಶೀಲಗಳೇ ಪ್ರಿಯಾಂಬಲ್. ಸದಾ ಬಸವಣ್ಣ ಬಡವರ, ದೀನ ದಲಿತರ ಪರವಾಗಿದ್ದವರು. ಬಸವಣ್ಣ `ಹೊನ್ನಿನೊಳಗೊಂದೊರೆಯ ಸೀರೆಯೊಳಗೊಂದಳೆಯ ಇಂದಿಂಗೆ, ನಾಳೆಗೆ ಎಂದು ಕೂಡಿಟ್ಟೆನಾದರೆ ತಲೆದಂಡ’ ಎಂದು ಅಂದೇ ಹೇಳಿದ್ದಾರೆ. ಇಂದು ನಾವು ಅಹಿಂದಾ ಚಳುವಳಿಯ ಬಗ್ಗೆ ಮಾತನಾಡುತ್ತೇವೆ. ಬಸವಣ್ಣ ಅಂದೇ ಸೂಳೆ ಸಂಕವ್ವೆಯನ್ನು ಪತಿತ ಪಾವನೆಯನ್ನಾಗಿ ಮಾಡಿದವ. ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ ಎಂದು ಬಸವಣ್ಣ ತನ್ನನ್ನೇ ತಾನು ಕಿರಿದಾಗಿಸಿಕೊಳ್ಳುವ ಮೂಲಕ ಸಮಾನತೆಯನ್ನು ಸಾರಿದವರು. ಎಲ್ಲಿಯವರೆಗೆ ಜನರು ಜನಪರ, ಜೀವಪರ ನಿಲುವುಳ್ಳವರನ್ನ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಜನತಂತ್ರ ಯಶಸ್ವಿಯಾಗದು. ಇಂದು ಸೈದ್ಧಾಂತಿಕ ಬದ್ಧತೆ, ಪ್ರಾಮಾಣಿಕ ನಿಲುವು ರಾಜಕಾರಣಿಗಳಿಗೆ ಇರಬೇಕು. ಜನರಿಗೆ ಅಂಜುವವ ರಾಜಕಾರಣಿಯಾಗಬೇಕು. ಬಸವಣ್ಣನಗಿರುವ ತಾಕತ್ತು ಇಂದಿನ ಯಾವ ದೇಶದ ರಾಜಕಾರಣಿಗಳಿಗೂ ಇಲ್ಲ. ಅಧಿಕಾರ ಇದ್ದಾಗ ಕೆಲಸ ಮಾಡದೆ; ಮಾಜಿ ಆದ ಮೇಲೆ ಹಳಹಳಿಸುವುದರಲ್ಲಿ ಅರ್ಥವಿಲ್ಲ ಎಂದರು.
ವಚನಗಳ ಸಮಾನತೆಯ ಆಶಯ ಕುರಿತಂತೆ ಹಿರೇಯಡ್ಕದ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಮಾತನಾಡಿ ಆಕರ್ಷಕವಾಗಿ ಮಾತನಾಡಿದರೆ ಸಾಲದು ನುಡಿ ಧೀರರಾದಂತೆ ನಡೆ ಧೀರರೂ ಆಗಬೇಕು. ಸಮಾಜದ ವಿಮರ್ಶೆಗಿಂತ ಅಂತರಂಗದ ವಿಮರ್ಶೆಗೆ ಹೆಚ್ಚು ಆದ್ಯತೆ ನೀಡಿದವರು ವಚನಕಾರರು. ನಮ್ಮ ಮಾತು ನಮಗೇ ಆರ್ಥವಾಗದಿರುವ ಈ ದಿನಮಾನಗಳಲ್ಲಿ ಮತ್ತೆ ಕಲ್ಯಾಣದ ಮೂಲಕ ನಮ್ಮನ್ನು ತಿದ್ದುವ ಕಾರ್ಯ ಪೂಜ್ಯರು ಮಾಡುತ್ತಿದ್ದಾರೆ. ಅರಿತರೆ ಶರಣ, ಮರೆತರೆ ಮನುಷ್ಯ ಎನ್ನುವುದರ ಮೂಲಕ ವಚನಕಾರರು ನಮ್ಮನ್ನು ನಾವು ಅರಿತುಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದರು. ಸತ್ಯದ ಹಲವು ಮುಖಗಳನ್ನು ಅರ್ಥೈಸಿಕೊಳ್ಳಲು ವಚನಗಳು ನಮ್ಮ ನೆರವಿಗೆ ಬರುವವು. ಹೊರಗಿನ ಬಣ್ಣ, ಜಾತಿ, ವೇಷಭೂಷಗಳು ಮುಖ್ಯವಲ್ಲ; ಅಂತರಂಗವೇ ಮುಖ್ಯ. ವಚನಕಾರರು ತಮ್ಮ ವಚನದಲ್ಲಿ ಸಮಾನತೆಯ ಆಶಯಗಳನ್ನು ವ್ಯಕ್ತಪಡಿಸಿದ್ದಾರೆ. ಸಿರಿಗರ ಹೊಡೆದವರನ್ನು ನುಡಿಸಲಾಗದು; ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿಯುವರು. ಈ ಮಾತು ಇಂದಿನ ರಾಜಕಾರಣಿಗೆ ಹೆಚ್ಚು ಅನ್ವಯಿಸುವುದು. ಮತ್ತೆ ಕಲ್ಯಾಣದ ಮೂಲಕ ನಾಡಿನೆಲ್ಲಡೆ ಬಸವ ಬೆಳಕನ್ನು ಹರಡಲು ಹೊರಟಿರುವ ಪೂಜ್ಯರಿಗೆ ಯಶಸ್ಸಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೇಟಿ ಮುದಿಯಪ್ಪ ಮಾತನಾಡಿ ವಚನ ಚಳುವಳಿ ಒಂದು ಆದರ್ಶ. ಪ್ರಜಾಪ್ರಭುತ್ವದ ಮಾದರಿಗಳನ್ನು ವಚನಗಳಲ್ಲಿ ಕಾಣಬಹುದು. ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಲೇ ಸಮಾಜದ ಹಿತವನ್ನು ಕಾಪಾಡಿದವರು ವಚನಕಾರರು. ಆತ್ಮನಿರೀಕ್ಷಣೆ ವಚನಗಳ ಮುಖ್ಯ ಆಶಯ. ವಚನಕಾರರ ದಯೆ ಕೇವಲ ಮಾನವರಿಗಷ್ಟೇ ಅಲ್ಲ; ಸಕಲ ಜೀವಾತ್ಮರಿಗೂ ಲೇಸ ಬಯಸಿದುದು. ಗಾಂಧೀಜಿಯ ನಿಲುವು ವಚನ ಮೀಮಾಂಸೆಯ ನಿಲುವೂ ಹೌದು. ವಚನಕಾರರು ಕೇವಲ ಲಿಂಗಾಯತ ಮಾತ್ರವಲ್ಲ ಇಡೀ ವಿಶ್ವಕ್ಕೆ ಸಲ್ಲುವವರು. ಬಸವಣ್ಣ ಯಾರೊಬ್ಬರ ಸ್ವತ್ತಲ್ಲ; ವಿಶ್ವದ ಸಕಲರ ಸ್ವತ್ತು. ಭಾರತೀಯರಲ್ಲಿ ಮಹಿಳಾ ಜಾಗೃತಿ 12 ನೆಯ ಶತಮಾನದಲ್ಲಿ ಹೆಚ್ಚಾಗಿ ಕಂಡಿದೆ. ವಚನಕಾರರಲ್ಲಿ ಕಾಯಕಕ್ಕೇ ಅಗ್ರಸ್ಥಾನ. ಕಾಯದಕ ಪ್ರತಿಫಲವನ್ನು ದಾಸೋಹದ ಮೂಲಕ ಹಂಚುವ ಹೊಸ ಅರ್ಥನೀತಿಯನ್ನು ವಚನಕಾರರು ಕಂಡು ಹಿಡಿದರು. ಇಂದಿನ ಭಾರತೀಯ ಸಮಾಜಕ್ಕೆ ಬಸವಣ್ಣನವರ ಆದರ್ಶಗಳನ್ನು ಮುಂದಿಟ್ಟುಕೊಳ್ಳುವ ಅವಶ್ಯಕತೆಯಿದೆ. ಆಧುನಿಕತೆಯ ದುರಂಹಕಾರ, ಲೋಲುಪತೆ ಮುಂತಾದವುಗಳೆಲ್ಲಕ್ಕೂ ವಚನದಲ್ಲಿ ಉತ್ತರವಿದೆ. ಪ್ರಜಾಪ್ರಭುತ್ವದ ಆಧ್ಯಾತ್ಮಿಕ ಆತ್ಮ ವಚನಗಳು. ಇವು ಬದುಕಿಗೆ ನೆಮ್ಮದಿಯನ್ನು ತಂದುಕೊಡಬಲ್ಲವು. ಈ ಹಿನ್ನೆಲೆಯಲ್ಲಿ ಮತ್ತೆ ಕಲ್ಯಾಣದ ಮೂಲಕ ವಚನ ಬೆಳಕನ್ನು ಪಡೆದುಕೊಳ್ಳೋಣ ಎಂದರು.
ವೇದಿಕೆಯ ಮೇಲೆ ಪ್ರಮೋದ್ ಮಧ್ವರಾಜ್, ಲಾಲಾಜಿ ಆರ್ ಮೆಂಡನ್, ವಿನಯಕುಮಾರ್ ಸೊರಕೆ ಇದ್ದರು. ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ನಿರಂಜನ್, ಕಾರ್ಯಕ್ರಮ ನಿರೂಪಣೆಯನ್ನು ತ್ರಿವೇಣಿ ನೆರವೇರಿಸಿಕೊಟ್ಟರು. ದಿನಕರ್ ಬೇಂಗ್ರೆ ಶರಣು ಸಮರ್ಪಿಸಿದರು.
ಬೆಳಗ್ಗೆ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ
ಉಡುಪಿ, ಆಗಸ್ಟ್ 2; ನಾವೆಲ್ಲರೂ ಕೂಡ ದೇವರ ಮಕ್ಕಳು ಎನ್ನುವ ಭಾವ ನೆಲೆಗೊಳ್ಳಬೇಕು. ಹುಟ್ಟಿನ ಕಾರಣಕ್ಕಾಗಿ ಮೇಲು-ಕೀಳು ಎಂಬುದು ಸರಿಯಲ್ಲ. ಶರಣರು ಗುಡಿ ಸುತ್ತಲು, ತೀರ್ಥಕ್ಷೇತ್ರಗಳನ್ನು ಸಂದರ್ಶಿಸಲು ಹೇಳಿಲ್ಲ. ಸ್ಥವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದರು. ಸತ್, ಚಿತ್, ಅನಂದ ಅನುಭವಿಸುವ, ಹುಟ್ಟುಸಾವುಗಳಿಲ್ಲದ ದೇವರೇ ನಿಜವಾದ ದೇವರು. ಈ ಲಕ್ಷಣಗಳಿಲ್ಲದ ಸ್ಥಾವರ ದೇವರು ದೇವರಲ್ಲ. ಈ ಹಿನ್ನೆಲೆಯಲ್ಲಿ ವಚನಕಾರರು `ತನ್ನ ತಾನರಿತರೆ ತಾನೇ ದೇವ ನೋಡ’ ಎಂದದ್ದು. ಇಂದು ನಾವು ದೇವಾಲಯಕ್ಕಿಂತ ದೇಹಾಲಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗಿದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ನೀವೇ ನಾಳಿನ ಹಿರಿಯರು. ನಿಮಗೆ ನಾವು ಸರಿಯಾದ ಮಾರ್ಗದರ್ಶನ ಮಾಡದಿದ್ದರೆ
ಚಿಂತಕ ನಾ ಮೊಗಸಾಲೆ; ಮತ್ತೆ ಕಲ್ಯಾಣ ಎಂದರೆ ಈಗಿನ ಬೀದರ್ ಜಿಲ್ಲೆಯ ಬಸವಕಲ್ಯಾಣಕ್ಕೆ ಹೋಗುವುದಲ್ಲ. ವೈಯುಕ್ತಿಕ ಕಲ್ಯಾಣಕ್ಕಿಂತ ಲೋಕಕಲ್ಯಾಣ ಮುಖ್ಯ ಎಂದು ಭಾವಿಸಿದವರು ವಚನಕಾರರು. ವಚನ ಸಾಹಿತ್ಯವಲ್ಲ; ಧರ್ಮ. ಇದು ಎಲ್ಲ ಪುರುಷಾರ್ಥಗಳನ್ನು ಹೊಂದಿದೆ. ವಚನ ಎಂದರೆ ಪ್ರಮಾಣ, ಬದ್ಧತೆ. ವಿನಯವೆಂಬುದು ದೇವರಿಗೆ ಸಾಕ್ಷಿಯಾಗಬೇಕು. ದೇವರಿಗಿಂತ ದೊಡ್ಡವ ಮನುಷ್ಯ, ಮನುಷ್ಯನ ಮನಃಸಾಕ್ಷಿ. ದೇವರನ್ನು ನೆನೆಯುವುದೇ ಕಾಯಕವಾಗಬಾರದು. ದೇವರು ಎಷ್ಟು ದೊಡ್ಡವನೋ ಅದಕ್ಕಿಂತ ಕಾಯಕ ದೊಡ್ಡದು. ಮಾತಿನಿಂದ ಹುಟ್ಟಿದ ಧರ್ಮ ವಚನ ಧರ್ಮ. ಇದು ಸಾಂಸ್ಥಿಕ ಧರ್ಮವಲ್ಲ; ಸಾಂಸ್ಕೃತಿಕ ಧರ್ಮ. ಮನಸ್ಸುಳ್ಳವನೇ ಮನುಷ್ಯ. ಆತ ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾನೆ. ಇಂದು ಬಹುತೇಕ ಧರ್ಮಗಳಲ್ಲಿ ತರತಮ ಭಾವಗಳು ಹುಟ್ಟಿಕೊಂಡಿವೆ. ಯಾವುದು ಧರ್ಮವಲ್ಲವೋ ಅದು ಇಂದು ಧರ್ಮವಾಗಿದೆ. ಜನಸಾಮನ್ಯರಿಗೆ ಧರ್ಮದ ಕಲ್ಪನೆ ಯಾವತ್ತೂ ಬರಲಿಲ್ಲ. ಪುರೋಹಿತರು ಹೇಳುವುದೇ ಧರ್ಮವಾಗಿದೆ. ಧರ್ಮ ಎಂದರೆ ವೈಯಕ್ತಿಕವೂ ಹೌದು ಸಾರ್ವಜನಿಕವೂ ಹೌದು. ಇಂದಿನ ಧರ್ಮಗಳು ಆಚರಣೆಗೆ ಒತ್ತುಕೊಡುತ್ತವೆ. ವಚನ ಧರ್ಮವು ಎಲ್ಲ ಧರ್ಮಗಳ ಸಾರವನ್ನು ಹಿಡಿದಿಟ್ಟಿದೆ. ವಚನ ಧರ್ಮವು ದೇವಾಲಯಗಳನ್ನು ನಾಶಮಾಡುವಂತೆ ಹೇಳಿಲ್ಲ ಎಂದರು.
ಉಪನ್ಯಾಸಕ ನಾಗರಾಜ್ ಜಿ ಎಸ್ : 21 ನೆಯ ಶತಮಾನದಲ್ಲಿರುವ ನಾವು ಸಂವಿಧಾನವನ್ನೇ ಅಳಿಸುವ ದಾಷ್ಠ್ಯ ತೋರುತ್ತಿದ್ದೇವೆ. 12 ನೆಯ ಶತಮಾನದಲ್ಲಿ ಬಸವಣ್ಣ ಈ ಹಿನ್ನೆಲೆಯಲ್ಲಿ ಎಷ್ಟು ಕಷ್ಟಪಟ್ಟಿರಬೇಕು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮಲ್ಲಿರುವ ನಕಾರಾತ್ಮಕ ಭಾವನೆಯನ್ನು ಸಕಾರಾತ್ಮಕ ಭಾವನೆಯಾಗಲು ವಚನ ಸಾಹಿತ್ಯದ ಅಧ್ಯಯನ ಮುಖ್ಯ. ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದೇ ಧರ್ಮ. ಮನುಷ್ಯರಲ್ಲಿ ಮಾನವ ಧರ್ಮ ಮುಖ್ಯವಾಗಬೇಕು. ಜಾತಿಯ ಹಂಗಿಲ್ಲದೆ ಇತರರನ್ನ ನೋಡುವ, ಜೊತೆ ಜೊತೆ ಸಾಗುವ ಭಾವನೆ ಬರಬೇಕು. ಅಪ್ಪ-ಅಮ್ಮನನ್ನು ಕಣ್ಣೀರು ಹಾಕಿಸುವ ಕೆಲಸ ವಿದ್ಯಾರ್ಥಿಗಳು ಮಾಡಬಾರದು. ಗುರುಗಳ ಕಣ್ಣಲ್ಲಿ ನೀರು ತರಿಸುವವರು ಮುಂದೆ ರಕ್ತಕಣ್ಣೀರು ಹರಿಸುತ್ತಾರೆ. ವಚನದ ಬೆಳಕಲ್ಲಿ ನಾವೆಲ್ಲ ಸಾಗೋಣ ಎಂದರು.
ವೈ.ಎಸ್.ವಿ.ದತ್ತ : `ಮರದ ಬಾಯಿ ಬೇರೆಂದು ತಳಕ್ಕೆ ನೀರೆರೆಯಬೇಕು’ ಎಂದು ಬಸವಣ್ಣನವರು ಹೇಳಿರುವ ಮಾತನ್ನು ಪಂಡಿತಾರಾಧ್ಯ ಗುರುಗಳು `ಸಮಾಜದ ಬೇರು ಮಕ್ಕಳೆಂದು ಭಾವಿಸಿ’ ಅವರಿಗೆ ವಚನ ತತ್ವದ ನೀರೆರೆಯುವ ಕಾಯಕವೇ ಈ ಮತ್ತೆ ಕಲ್ಯಾಣ. ಈ ಮತ್ತೆ ಕಲ್ಯಾಣ ಎಂದೋ ಪ್ರಾರಂಭವಾಗಬೇಕಿತ್ತು. ತಡವಾದರೂ ಪ್ರಾರಂಭವಾಯಿತಲ್ಲ ಎನ್ನುವುದೇ ಸಮಾಧಾನದ ಸಂಗತಿ. ಶರಣರ ತತ್ವ ಸಿದ್ಧಾಂತಗಳು ಎಲ್ಲರಿಗೂ ಆದರ್ಶ. ಅದರಲ್ಲೂ ನನ್ನಂಥ ರಾಜಕಾರಣಿಗಳಿಗೆ ಇನ್ನೂ ಹೆಚ್ಚು ಆದರ್ಶವಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬಸವಚಿಂತನೆಯತ್ತ ಮುಖಮಾಡುವುದಷ್ಟೇ ಅಲ್ಲ; ಅನುಷ್ಠಾನಕ್ಕೆ ತರಬೇಕಾದ ತುರ್ತು ಇಂದು ಇದೆ ಎಂದರು.
ಸಂವಾದದಲ್ಲಿ ಉಡುಪಿಯ ಎಲ್ಲ ತಾಲ್ಲೂಕಿನಿಂದ ಬಂದ ಆಯ್ದ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡು ತಮ್ಮ ಆತ್ಮಬಲವನ್ನು ಹೆಚ್ಚಿಸಿಕೊಂಡರು.
.jpeg)
.jpeg)
