ಆಗಸ್ಟ್ ೧೯ ಸೋಮವಾರ, ಬಾಗಲಕೋಟೆ

ಬಾಗಲಕೋಟೆಯಲ್ಲಿ 19ನೇ ದಿನದ ಮತ್ತೆ ಕಲ್ಯಾಣ ಆಂದೋಲನ. ಅಭಿಯಾನದಲ್ಲಿ ಸಾರ್ವಜನಿಕ ಸಮಾವೇಶ. ಅನನ್ಯ ಟಿವಿ-ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ


ಇಲ್ಲಿನ ಶ್ರೀ ಶಿವಾನುಭವ ಮಂಟಪ, ಚರಂತಿ ಮಠದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬಸವಣ್ಣ ತನ್ನ ವೃತ್ತಿಯನ್ನು ಆರಂಭಿಸಿದ್ದು ಬಿಜ್ಜಳನ ಭಂಡಾರದಲ್ಲಿ ಗುಮಾಸ್ತನಾಗಿ. ಅವರು ಆ ಹುದ್ದೆಗೆ ಒಂದು ಗೌರವ ತಂದುಕೊಟ್ಟರು. ಹುದ್ದೆಯಿಂದಲ್ಲ; ನಮ್ಮಿಂದ ಹುದ್ದೆಗೆ ಗೌರವ ಬರುವಂತಾಗಬೇಕು. ಸಕಲ ಜೀವಾತ್ಮರ ಒಳಿತನ್ನು ಬಯಸುವವನೇ ನಿಜವಾದ ಭಕ್ತ. ಧರ್ಮ ದಯಾಮೂಲವಾದುದು. ಪ್ರಾಣಿಬಲಿ, ನರಬಲಿಗಳನ್ನು ಕೊಡುವುದು ಧರ್ಮವಲ್ಲ. ಬಸವ ಧರ್ಮದಲ್ಲಿ ಕೊಲ್ಲುವ, ಹಿಂಸಿಸುವ ಕ್ರಿಯೆಗೆ ಅವಕಾಶವಿಲ್ಲ. ಅಧರ್ಮದಿಂದ ಬಂದುದನ್ನು ಸ್ವೀಕಾರ ಮಾಡದೇ ಇರುವುದೇ ಧರ್ಮ. ಕಾಯಕದಲ್ಲಿ ಪ್ರಾಮಾಣಿಕತೆ ಮತ್ತು ಸಕಲರ ಹಿತವನ್ನು ಬಯಸುವ ಆಶಯವಿದೆ. ಹೀಗಾಗಿ ಕರ್ತವ್ಯಕ್ಕಿಂತ `ಕಾಯಕ’ ಶ್ರೇಷ್ಠ. ಶರಣರು ಹೇಳಿದ ಸತ್ಫಥದಲ್ಲಿ ನಾವು ನಡೆದರೆ ಶರಣರು ಕಂಡ ಕಲ್ಯಾಣ ರಾಜ್ಯವನ್ನು ಇಂದು ನಾವು ನನಸು ಮಾಡಬಹುದು. `ಇಂದಿಂಗೆ, ನಾಳಿಂಗೆ ಬೇಕೆಂದೆನಾದರೆ ತಲೆದಂಡ’ ಎನ್ನುವರು ಬಸವಣ್ಣ. ಇಂಥ ಅಸಂಗ್ರಹ ಬುದ್ಧಿ ನಮ್ಮಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದರೆ ಸಮಸಮಾಜ ಸೃಷ್ಟಿಯಾಗುವುದು. ಶರಣರ ಸ್ವರ್ಗ-ನರಕಗಳು ಪೌರಾಣಿಕವಾದವುಗಳಲ್ಲ. ಶರಣರಿಗೆ ಸ್ವರ್ಗ-ನರಕಗಳಿಲ್ಲ. ಅವರು ಭವರಹಿತರು. ಸ್ವರ್ಗ-ನರಕಗಳು ಗೊಡ್ಡು, ಹುಸಿ ಎನ್ನುವರು ಶರಣರು. `ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’. ಇನ್ನೊಬ್ಬರಿಗೆ ನೋವನ್ನುಂಟು ಮಾಡದೆ ಸಾತ್ವಿಕ ಜೀವನ ಸಾಗಿಸುವುದೇ ಸ್ವರ್ಗ. ಇಂಗ್ಲಿಷ್ ಮೋಹದಿಂದಾಗಿ ವಚನಗಳು ನಮ್ಮ ಕನ್ನಡದ ಕಂದಮ್ಮಗಳಿಂದ ದೂರವಾಗುತ್ತಿರುವುದು ದುರದೃಷ್ಟಕರ ಸಂಗತಿ. ಮಕ್ಕಳಿಗೆ ವಚನಗಳನ್ನು ಹೇಳುವ ಕೆಲಸ ಅತ್ಯಂತ ತುರ್ತಾಗಿ ಆಗಬೇಕಿದೆ. ಮತ್ತೆ ಕಲ್ಯಾಣ ಒಂದು ಆಂದೋಲನವೇ ಹೊರತು; ಕಾರ್ಯಕ್ರಮವಲ್ಲ. ಇದು ಕೇವಲ ವೇದಿಕೆಯ ಮೇಲಿರುವವ ಹೊಣೆಗಾರಿಕೆಯಲ್ಲ; ಎಲ್ಲರ ಹೊಣೆಗಾರಿಕೆಯೂ ಹೌದು. ಇಂದು ಜನರಿಗೆ ಧರ್ಮದ ಹಸಿವಿದೆ. ನಿಜವಾದ ಧರ್ಮವನ್ನು ಕೊಡುವ ಜವಬ್ದಾರಿ ಧರ್ಮಗುರುಗಳ ಮೇಲಿದೆ ಎಂದರು.
ಚರಂತಿ ಮಠದ ಶ್ರೀ ಪ್ರಭುಸ್ವಾಮಿಗಳು ಮಾತನಾಡಿ ಸ್ವರ್ಗ-ನರಕಗಳು ನಮ್ಮ ಕಣ್ಣಮುಂದೆಯೇ ಇವೆ. ನೆರೆ ಸಂತ್ರಸ್ತರನ್ನು, ದನಕರಗಳು ಈಗಿರುವ ಸ್ಥಿತಿಯನ್ನು ನೋಡಿದರೆ ಅದೇ ನರಕ. ಅವರಿಗೆ ನೆರವು ನೀಡಿ ಅವರು ಮತ್ತೆ ನೆಮ್ಮದಿಯಿಂದ ಬದುಕುವಂತೆ ಮಾಡುವುದೇ ಸ್ವರ್ಗ. ಶರಣ ಸಾಹಿತ್ಯವನ್ನು ಕೇವಲ ಹೇಳುವುದು, ಕೇಳುವುದಲ್ಲ; ಅದರಂತೆ ನಡೆಯುವುದೇ ಮತ್ತೆ ಕಲ್ಯಾಣ ಎಂದರು. `ವಚನಗಳಲ್ಲಿ ಸ್ವರ್ಗ-ನರಕ’ ಕುರಿತಂತೆ ಎಸ್ ಎಂ ಜಾಮದಾರ ಮಾತನಾಡಿ ಸ್ವರ್ಗ-ನರಕಗಳ ಬಗ್ಗೆ ಹೇಳದವರು-ಕೇಳದವರು ಯಾರೂ ಇಲ್ಲ. ಸ್ವರ್ಗ-ನರಕಗಳನ್ನು ನೋಡಿ ಬಂದವರು ಯಾರೂ ಇಲ್ಲ. ಆದರೂ ಸ್ವರ್ಗ-ನರಕಗಳ ಬಗ್ಗೆ ನಂಬಿಕೆ ವ್ಯಾಪಕವಾಗಿದೆ. ಜಗತ್ತಿನಲ್ಲಿ ಸುಮಾರು ನಾಲ್ಕು ಸಾವಿರ ಧರ್ಮಗಳಿವೆ. ಬಹುತೇಕ ಎಲ್ಲ ಧರ್ಮಗಳಲ್ಲೂ ಸ್ವರ್ಗ-ನರಕಗಳ ನಂಬಿಕೆಯಿದೆ. ಸ್ವರ್ಗ-ನರಕಗಳಿಗೆ ಆಧಾರ ಪಾಪ-ಪುಣ್ಯಗಳು. ಮನುಸ್ಮೃತಿಯಲ್ಲಿ 21 ವಿಧದ ನರಕಗಳಿವೆ. ಬಸವಣ್ಣ ತುಳಿತಕ್ಕೆ, ಶೋಷಣೆಗೆ ಒಳಗಾದ ಶೂದ್ರರನ್ನೆಲ್ಲ ಲಿಂಗಾಯತರನ್ನಾಗಿಸಿ ಸಮಸಮಾಜಕ್ಕೆ ನಾಂದಿಯಾಡಿದ. ಲಿಂಗಾಯತರು ಹಿಂದೂಗಳಲ್ಲ. ಲಿಂಗಾಯತ ಧರ್ಮದಲ್ಲಿ ಸ್ವರ್ಗ-ನರಕಗಳಿಲ್ಲ. ಲಿಂಗಾಯತರು ಸತ್ತರೆ `ಲಿಂಗೈಕ್ಯರಾಗಿದ್ದಾರೆ’ ಎನ್ನುತ್ತಾರೆ. ಅದರ ಅರ್ಥ ಲಿಂಗದಲ್ಲಿ ಐಕ್ಯರಾಗುತ್ತಾರೆ. ಅಂದರೆ ದೇವರಲ್ಲಿ ಲೀನವಾಗುತ್ತಾರೆ, ಜನ್ಮ-ಮರಣಗಳಿಂದ ಮುಕ್ತಿ ಸಿಗುತ್ತದೆ. ಲಿಂಗಾಯತದ ಧರ್ಮಗ್ರಂಥ ವಚನಗಳು. ವೀರಶೈವರ ಧರ್ಮಗ್ರಂಥ ಸಿದ್ಧಾಂತಶಿಖಾಮಣಿ. ದೇವ-ಭಕ್ತ ಭಿನ್ನರಾಗದೆ ಅಭಿನ್ನರಾಗುವುದನ್ನು ಲಿಂಗಾಯತ ಧರ್ಮ ತಿಳಿಸುವುದು. ಇದರಲ್ಲಿ `ಸತ್ಯವ ನುಡಿವುದೇ ಸ್ವರ್ಗ ಮಿಥ್ಯವ ನುಡಿವುದೇ ನರಕ’. ಅವು ಬೇರೆ ಎಲ್ಲಿಯೂ, ಕಾಣದ ಜಾಗದಲ್ಲಿ ಇಲ್ಲ. ಅವು ಸ್ಥಳಗಳಲ್ಲ; ಅನುಭವದ ನೆಲೆಗಳು. `ಪಾಪ-ಪುಣ್ಯವೆಂಬದು ತಮ್ಮ ಇಷ್ಟಕಂಡಿರೋ’ ಎನ್ನುವರು ಬಸವಣ್ಣ. ಲಿಂಗಾಯತ ಧರ್ಮದಲ್ಲಿ ಸ್ವರ್ಗ-ನರಕಗಳ ಪರಿಕಲ್ಪನೆ ವಿಶಿಷ್ಟ ಮತ್ತು ವಿಶೇಷವಾಗಿವೆ. ಬುದ್ಧನ ತತ್ವದ ಪರಿಕಲ್ಪನೆಗಳಿಗೆ ಲಿಂಗಾಯ ಧರ್ಮ ಹೆಚ್ಚು ಸಮೀಪವಾಗಿದೆ ಎಂದರು.
`ವಚನಗಳ ಅನುಪಾಲನೆ; ಸಮಸ್ಯೆಗಳ ನಿವಾರಣೆ’ ಕುರಿತಂತೆ ಅಕ್ಕ ಅನ್ನಪೂರ್ಣತಾಯಿ ಮಾತನಾಡಿ ಮತ್ತೆ ಕಲ್ಯಾಣ ಎನ್ನುವುದು ಒಂದು ಪದವಲ್ಲ; ಬೆಳಕಿನ ಪುಂಜ. ಬೆಳಕು ಇಂದು ಎಲ್ಲರಿಗೂ ಅಗತ್ಯವಿದೆ. ಬಸವಣ್ಣನವರನ್ನು ಬಿಟ್ಟು ಜಗತ್ತಿನ ಉದ್ದಾರ ಸಾಧ್ಯವಿಲ್ಲ. ಕಾಲ, ದೇಶಾತೀತವಾದ, ವೈಜ್ಞಾನಿಕ, ವೈಚಾರಿಕ ನಿಧಿಗಳು ವಚನಗಳು. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ ವಚನಗಳು ಅಂದು-ಇಂದು-ಮುಂದು ಎಂದೆಂದೂ ಪ್ರಸ್ತುತವಾದವು. ಸತ್ಯದ ಆಚರಣೆಯೇ ಭಗವಂತ ಎಂದವರು ಶರಣರು. ವಚನಗಳು ಜೀವನದ ವಿಶ್ವವಿದ್ಯಾಲಯದಲ್ಲಿ ಅನುಭವದಿಂದ ಮೂಡಿ ಬಂದ ಬೀಜ ಮಂತ್ರಗಳು. ಪ್ರತಿಯೊಂದು ವಚನವೂ ಪರಿಪೂರ್ಣವಾಗಿವೆ. ಎಲ್ಲ ಕ್ಷೇತ್ರಗಳನ್ನು ಮುಟ್ಟಬಲ್ಲ, ತಟ್ಟಬಲ್ಲ ಶಕ್ತಿ ವಚನಗಳಿವೆ. ವಚನಗಳ ಪಾಲನೆ ಕೇವಲ ಸ್ವಾಮಿಗಳು, ಸಾಹಿತಿಗಳಿಗೆ ಮಾತ್ರ ಸೀಮಿತವಲ್ಲ; ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಗತ್ತಿನ ಸಮಸ್ತ ಸಂಕಟಗಳಿಗೆ ವಚನಗಳು ಮದ್ದಾಗಬಲ್ಲವು. `ಶರಣ’ನಾದವನೇ ವಾಸ್ತವಿಕ ಸೂಪರ್ ಮ್ಯಾನ್. ವಚನಗಳನ್ನು ಹೇಳುವುದು, ಕೇಳುವುದು ಮಾತ್ರವಲ್ಲ ಅನುಷ್ಠಾನಕ್ಕೆ ಮೊದಲು ಮುಂದಾಗಬೇಕು. ಶರಣನ ಮುಖ್ಯ ಲಕ್ಷಣ ಕಾಯಕ. ಆ ಕಾಯಕ ಸತ್ಯಶುದ್ಧವಾಗಿರಬೇಕು. ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರದ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಗಮನಿಸಬೇಕು. ಇಂದಿನ ಗೃಹಿಣಿಯರೆಲ್ಲ `ಈಸಕ್ಕಿಯಾಸೆ ನಿಮಗೇಕೆ’ ಎಂದು ಗಂಡನನ್ನೇ ಪ್ರಶ್ನಿಸಿದ 12 ನೆಯ ಶತಮಾನದ ಆಯ್ದಕ್ಕಿಲಕ್ಕಮ್ಮನಾದರೆ ಭ್ರಷ್ಟಾಚಾರ ತನ್ನಿಂದ ತಾನೇ ದೂರವಾಗವುದು. ಹಣದ ಗಳಿಕೆಯೇ ಗಳಿಕೆಯಲ್ಲ; ಆಂತರಿಕ ನೆಮ್ಮದಿಯ ಗಳಿಕೆಯೇ ನಿಜವಾದ ಗಳಿಕೆ. ಸಂಗ್ರಹ ಬುದ್ಧಿ ನಮ್ಮಿಂದ ದೂರವಾಗಬೇಕು. ಅಂಗಕ್ಕೆ ಬಡತನವೇ ಹೊರತು ಮನಕ್ಕೆ ಬಡತನವಿಲ್ಲ ಎನ್ನುವ ವಚನಕಾರರ ಮಾತು ಸದಾಸ್ಮರಣೀಯವಾದುದು. ವಚನಗಳು ಮಕ್ಕಳಿಗೆ ಹಾಲು ಕುಡಿಸುವಾಗ ಹೇಳುವ ಲಾಲಿಹಾಡುಗಳಾಗಬೇಕು. ಪ್ರತಿಯೊಬ್ಬರೂ ದಿನಕ್ಕೆ ಐದು ವಚನಗಳನ್ನು ಓದುವ ಸಂಕಲ್ಪ ಮಾಡಬೇಕು ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಸಿದ್ದಲಿಂಗದೇವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಬೀಳೂರು ಗುರುಬಸವ ಮಹಾಸ್ವಾಮಿಗಳವರ ದೇವಸ್ಥಾನದಿಂದ ಸಾಮರಸ್ಯ ನಡಿಗೆ ಆರಂಭವಾಯಿತು. ವಿವಿಧ ಧರ್ಮದ ಮುಖಂಡರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು, ಕಲಾತಂಡಗಳು ಶರಣರ ಸ್ತಬ್ಧ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದ ಜೊತೆ ಶಿವಾನುಭವ ಮಂಟಪ ಚರಂತಿಮಠವನ್ನು ತಲುಪಿದರು. ವೇದಿಕೆಯ ಮೇಲೆ ವಿವಿಧ ಮಠಗಳ ಮಠಾಧೀಶರು ಉಪಸ್ಥಿತರಿದ್ದರು. ನೆರೆ ಸಂತ್ರಸ್ಥರಿಗೆ 16689 ರೂಪಾಯಿಗಳನ್ನು ಸಾರ್ವಜನಿಕರು ದೇಣಿಗೆಯಾಗಿ ನೀಡಿದರು.
- ಹೆಚ್ ಎಸ್ ದ್ಯಾಮೇಶ್
ವಿದ್ಯಾರ್ಥಿಗಳೊಂದಿಗೆ ಸಂವಾದ
ಆಗಸ್ಟ್ 19; ಬಾಗಲಕೋಟೆ; ಇಲ್ಲಿನ ಶ್ರೀ ಶಿವಾನುಭವ ಮಂಟಪ-ಚರಂತಿ ಮಠದಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತ ಮನುಷ್ಯ ಆಧುನಿಕವಾಗಿ ತುಂಬ ಎತ್ತರದ ಸ್ಥಾನದಲ್ಲಿರುವಂತೆ ನೈತಿಕವಾಗಿ ಅಷ್ಟೇ ಅಧಃಪತನ ಹೊಂದಿದ್ದಾನೆ. ಬುದ್ದಿಯ ಜೊತೆಗೆ ನೈತಿಕ ನೆಲೆಗಟ್ಟನ್ನು ರೂಡಿಸಿಕೊಳ್ಳಬೇಕು. ಮನುಷ್ಯನ ಮೌಲ್ಯಗಳನ್ನು ಹಣ-ಅಧಿಕಾರ-ಅಂತಸ್ತುಗಳಿಂದ ಅಳೆಯುತ್ತಿರುವುದು ದುರಾದುಷ್ಟಕರ ಸಂಗತಿ. `ಮನೆ ನೋಡಾ ಬಡವರು, ಮನ ನೋಡ ಘನ ಸಂಪನ್ನರು’ ಎನ್ನವ ಶರಣರ ನುಡಿಯಂತೆ ಮನೆಗಿಂತ ಮನಸ್ಸು ದೊಡ್ಡದಾಗಬೇಕು. ವಿಜ್ಞಾನದ ಜೊತೆಗೆ ಆತ್ಮಜ್ಞಾನವೂ ಬೇಕು. ಇಂದು ನಡೆ-ನುಡಿಗಳ ನಡುವೆ ತುಂಬ ಅಂತರವಿದೆ. ರೈತರು ಬಳಸುವ ಚಕ್ಕಡಿಗಳಿಗೆ ಗಾಲಿಗಳು ಮುಖ್ಯ. ಆ ಗಾಲಿಗಳಿಗಿಂತಲೂ ಅವುಗಳ ಕೊನೆಗೆ ಹಾಕುವ ಕಡೆಗೀಲುಗಳು ಇನ್ನೂ ಮುಖ್ಯ. ಕಡೆಗೀಲುಗಳನ್ನು ಉಪೇಕ್ಷಿಸಿದರೆ ಅನಾಹುತ ಕಟ್ಟಿಟ್ಟಬುತ್ತಿ. ನಮ್ಮ ದೇಹವೆಂಬ ಬಂಡಿಗೆ ಶರಣರ ವಿಚಾರಗಳೇ ಕಡೆಗೀಲು. ವಿದ್ಯಾರ್ಥಿಗಳಿಗೆ ಇಂತಹ ಕಡೆಗೀಲಿನ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದಿಂದ ಹಿಡಿದು ಪದವಿ ಹಂತದವರೆಗೂ ವಚನ ಸಾಹಿತ್ಯವನ್ನು ಪಠ್ಯಕ್ರಮದಲ್ಲಿ ಸೇರಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ.
ಮನುಷ್ಯ ಪ್ರಕೃತಿಯನ್ನು ಭೋಗದವಸ್ತುವಂತೆ ಅವ್ಯಾಹತವಾಗಿ ದಾಳಿಯಿಡುತ್ತಿದ್ದಾನೆ. ಆ ಕಾರಣಕ್ಕಾಗಿಯೇ ನೆರೆ-ಬರ. ಮುಂದೆ ಇಂತಹ ವಿಪತ್ತುಗಳು ಬರಬಾರದೆಂದರೆ ಮನುಷ್ಯ ತನ್ನ ಆಸೆಗೆ ಕಡಿವಾಣ ಹಾಕಿ ಪ್ರಕೃತಿಯನ್ನು ತಾನಿರುವಂತೆ ಬಿಡಬೇಕು. ಹೆಣ್ಣು, ಹೊನ್ನು ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ ಎಂದು ಶರಣರು ಹೇಳಿದರು. ಶರಣರಿಗೆ ಸಂಗ್ರಹ ಪ್ರವೃತ್ತಿ ಇಲ್ಲದಿರುವ ಕಾರಣಕ್ಕಾಗಿ ಸಂತೋಷವಾಗಿದ್ದರು. ಸಂಗ್ರಹ ಪ್ರವೃತ್ತಿ ಮನುಷ್ಯನನ್ನು ಸ್ವಾರ್ಥಿಯನ್ನಾಗಿಸುತ್ತಿದೆ. ಸತ್ಯ ಶುದ್ಧ ಕಾಯಕ ಮಾಡುವವರಿಗೆ ಬಡತನವೇ ಇಲ್ಲವೆಂದು ಶರಣರು ಹೇಳಿದ್ದಾರೆ. ಕಾಯಕದಿಂದ ಬಂದ ಸಂಪತ್ತನ್ನು ದಾಸೋಹದ ರೂಪದಲ್ಲಿ ಶರಣರು ಮತ್ತೆ ಸಮಾಜಕ್ಕೆ ನೀಡುತ್ತಿದ್ದರು. ದಾಸೋಹ ಬೇರೆ, ದಾನ ಬೇರೆ. ದಾನ ಕೊಡುವ ಶಕ್ತಿ ದೇವರಿಗಿದೆ. ದಾಸೋಹ ಮಾಡುವ ಶಕ್ತಿ ಮನುಷ್ಯರಿಗಿದೆ. ದಾಸೋಹದಲ್ಲಿ ಕೊಡುವವನು ದೊಡ್ಡವನಲ್ಲ; ಪಡೆಯುವವನು ಚಿಕ್ಕವನಲ್ಲ. ಅಸಮಾನತೆ ಎಲ್ಲ ಕ್ಷೇತ್ರಗಳಲ್ಲಿದೆ. ಇವುಗಳನ್ನು ಹೊಡೆದೋಡಿಸಲು ವಚನಕಾರರ ವಿಚಾರಗಳನ್ನು ಅರಿತು ಆಚರಣೆಗೆ ತರಬೇಕು. ವಿದ್ಯಾರ್ಥಿಗಳೇ ನಾಳಿನ ನೇತಾರರು. ನೀವು ಶರಣರ ನೈತಿಕ ನೆಲೆಗಟ್ಟಿನ ಮೇಲೆ ತಮ್ಮ ಬದುಕನ್ನ ಕಟ್ಟಿಕೊಳ್ಳಬೇಕೆನ್ನುವುದೇ ‘ಮತ್ತೆ ಕಲ್ಯಾಣ’ದ ಆಶಯ. ಇಲ್ಲಿ ಯಾರೂ ಮೇಲಲ್ಲ; ಕೀಳಲ್ಲ. ಯಾರನ್ನಾದರೂ ಪ್ರಶ್ನಿಸುವ ಮನೋಭಾವ ಬೆಳೆಸುವಂಥದ್ದೇ ಸಂವಾದದ ಆಶಯ. ಅರಿವು-ಆಚಾರವುಳ್ಳ ಯಾರಾದರೂ ಲಿಂಗದೀಕ್ಷೆ ನೀಡಬಹುದು; ಸ್ವಾಮಿಗಳೇ ಆಗಬೇಕೆಂದೆನೂ ಇಲ್ಲ. ಕಾಯಕ ಮತ್ತು ಜ್ಞಾನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಲೋಕ ಕೆಟ್ಟಿದೆ ಅಂತ ಧೂಷಣೆ ಮಾಡುವುದಕ್ಕಿಂತ ನಾನು ಸರಿಯಾದರೆ ಲೋಕ ಸರಿಯಾಗುತ್ತದೆ ಎನ್ನುವ ಸಕರಾತ್ಮಕ ಯೋಚನೆ ನಮ್ಮಲ್ಲಿ ಮೂಡಬೇಕು. ಜಾತಿಗೊಂದು ಮಠ ಹುಟ್ಟಿಕೊಂಡಿರುವುದು ತಪ್ಪಲ್ಲ. ಮಠಗಳು ಮೌಢ್ಯಗಳನ್ನು ಬಿತ್ತುವುದು, ಜಾತಿಯ ಕಿಚ್ಚನ್ನು ಹಚ್ಚುವುದು, ವೈಭೋಗದ ಜೀವನವನ್ನು ನಡೆಸುವುದಾದರೆ ಅಂತಹ ಮಠಗಳ ವಿರುದ್ಧ ಆ ಮಠದ ಸಮುದಾಯವೇ ಸಿಡಿದೇಳಬೇಕು. ಮಸೀದಿ-ಮಂದಿರಕ್ಕಿಂತ ಮನುಷ್ಯರ ಮನಸ್ಸನ್ನು ಕಟ್ಟುವ ಕಾರ್ಯ ಆಗಬೇಕು ಎಂದರು.
ಸಂವಾದಕ ಈಶ್ವರ ಮಂಟೂರು ಮಾತನಾಡಿ ಯಾವ ವಚನಗಳಲ್ಲೂ ಪುರುಷ-ಸ್ತ್ರೀ ಎನ್ನುವ ತರತಮವಿಲ್ಲ. ವಚನಕಾರರು ಒಳಗೆ ಸುಳಿವಾತ್ಮ ಹೆಣ್ಣೂ ಅಲ್ಲ; ಗಂಡೂ ಅಲ್ಲ ಎನ್ನುವ ನಿಲುವನ್ನು ಹೊಂದಿದ್ದರು. ಪೂಜ್ಯರು ಸ್ಮಶಾನದ ಕಡೆ ಹೊರಟವರ ಬಳಿ ಧರ್ಮವನ್ನು ತೆಗೆದುಕೊಂಡು ಹೋಗದೆ ಬಾಳಿ ಬದುಕಬೇಕಾದ ವಿದ್ಯಾರ್ಥಿಗಳ ಬಳಿ `ಮತ್ತೆ ಕಲ್ಯಾಣ’ದ ಮೂಲಕ ತಂದಿರುವುದು ಅತ್ಯಂತ ಶ್ಲಾಘನೀಯ. ವಚನಕಾರರ ಅಂಕಿತಗಳು ಪುರುಷಪ್ರಧಾನವಾಗಿಯೇ ಇವೆ ಎನ್ನುವುದು ಸರಿಯಾದ ತಿಳುವಳಿಕೆಯಲ್ಲ. ವಚನಕಾರರ ದೇವರು ನಿರಾಕಾರ, ಸಾವಿಲ್ಲದ, ರೂಹಿಲ್ಲದ ರೂಪ. ಪಟ್ಟಭದ್ರಾಹಿತಾಸಕ್ತರ ಕಾರಣದಿಂದ 12ನೆಯ ಶತಮಾನದಲ್ಲಿ ಚಳುವಳಿ ನಡೆಯಿತು. ಶರಣರ ಆ ವಿಚಾರಗಳನ್ನು ಮತ್ತೆ ಮರುಸ್ಥಾಪಿಸುವುದೇ ಮತ್ತೆ ಕಲ್ಯಾಣ. ಶರಣರು ಸಕಲ ಜೀವರಾಶಿಗಳಿಗೆ ಒಳಿತಾಗಲಿ ಎಂದರೇ ಹೊರತು ಯಾವುದೋ ಒಂದು ನಿರ್ದಿಷ್ಠ ಪ್ರಾಣಿ, ಪಕ್ಷಿಗಳೆ ಹೇಳಲಿಲ್ಲ. ಪುರಾಣಕಾರರ ಕಲ್ಪನೆಗೂ, ಶರಣರ ಕಲ್ಪನೆಗೂ ತುಂಬ ವ್ಯತ್ಯಾಸವಿದೆ. ಪುರಾಣಕಾರರಲ್ಲಿ ಕಲ್ಪನೆಯಿದ್ದರೆ ಶರಣರಲ್ಲಿ ವಾಸ್ತವತೆಯಿದೆ. ಅಂಗಡಿಯ ಬಾಗಿಲು ಮುಚ್ಚಿಕೊಂಡು ಭಾಗ್ಯದ ಲಕ್ಷ್ಮಿ ಬಾರಮ್ಮ ಎಂದು ಹಾಡಿದರೆ ಲಕ್ಷ್ಮೀ ಬರಲ್ಲ. ಅಂಗಡಿಯ ಬಾಗಿಲನ್ನು ತೆರೆದು ವ್ಯಾಪಾರ ಮಾಡಿದರೆ ಲಕ್ಷ್ಮೀ ಬರುತ್ತಾಳೆ. ಬಸವಾದಿ ಶಿವಶರಣರು ಮೂರ್ತಿ ಪೂಜೆಯನ್ನು ಖಂಡಿಸಿದರು. ಮೂರ್ತಿಯೊಳಗೆ ದೇವರಿದೆ, ಆ ಮೂರ್ತಿಯೊಳಗೆ ಎಲ್ಲವೂ ಅಡಗಿದೆ ಎಂದು ತಿಳಿಯುವುದು ತಪ್ಪು. ಭಾವಚಿತ್ರದಲ್ಲಿರುವ ಭಾವನೆಗಳನ್ನು ಪೂಜೆ ಮಾಡಬೇಕೇ ವಿನಃ ಪೂರ್ತಿ ಪೂಜೆ ಸಲ್ಲದು. ಬಸವಣ್ಣನವರಿಗೆ ಭೇದರಹಿತ ಸಮಾಜ ನಿರ್ಮಾಣ ಮಾಡುವ ಆಶಯವಿತ್ತು. ಮಂತ್ರವನ್ನು ಮೀರಿರುವ ಮಂತ್ರವನ್ನು ಒಳಗೊಂಡಿರುವ ಹೆಸರೇ ಬಸವಣ್ಣ ಎಂದರು.
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು :
• ಅಸ್ಪೃಶ್ಯತೆ ಎನ್ನುವುದು ಮೊದಲಿನಿಂದಲೂ ಬಂದ ಪಿಡುಗು. ಬಸವಾದಿ ಶಿವಶರಣರೂ ಇದರ ವಿರುದ್ಧ ಹೋರಾಡಿದರು. ಆದರೆ ಈಗಲೂ ಇದು ತುಂಬಿ ತುಳುಕ್ತಾ ಇದೆ. ಇದನ್ನು ನಿವಾರಣೆ ಮಾಡುವುದು ಹೇಗೆ?
• ಮಠಗಳು ಎಲ್ಲಾ ಕಡೆ ಸ್ಥಾಪಿತವಾಗಿವೆ. ಆ ಮಠಗಳು ಬಸವಣ್ಣನವರು ತತ್ವಗಳನ್ನು ಪಾಲಿಸುತ್ತಿವೆಯೇ?
• ಕಲ್ಯಾಣ ರಾಜ್ಯ ನಿರ್ಮಾಣ ನಿರ್ಮಾಣ ಆಗಬೇಕಾದರೆ ಪಟ್ಟಭದ್ರಹಿತಾಹಿತಕ್ತರನ್ನು ಕಟ್ಟಿಹಾಕಬೇಕು ಎನ್ನುವುದು ನನ್ನ ಅಭಿಪ್ರಾಯ. ಇದಕ್ಕೆ ತಮ್ಮ ಅಭಿಪ್ರಾಯವೇನು?
• ಇತ್ತೀಚಿಗೆ ಲಿಂಗಾಯತ ಧರ್ಮದ ಮಹತ್ವವನ್ನು ಸರಿಯಾಗಿ ತಿಳಿಸುತ್ತಿಲ್ಲ. ಮತ್ತೆ ಕಲ್ಯಾಣದ ಮೂಲಕ ತಿಳಿಸಲು ಸಾಧ್ಯವೇ?
• ಕಾಯಕವು ಜ್ಞಾನೋತ್ಪಾದನೆಯ ಮೂಲ ಹೇಗಾಗುತ್ತದೆ?
• ಇತ್ತೀಚಿಗೆ ನುಡಿಯೇ ಬೇರೆ ನಡೆಯೇ ಬೇರೆಯಾಗಿದೆ. ಇದನ್ನು ನಿವಾರಣೆ ಮಾಡುವುದು ಹೇಗೆ?
• ಕಾಯಕ-ದಾಸೋಹದ ಬಗ್ಗೆ ಶರಣರು ಹೇಳಿದರು. ಈಗ ಅದು ಇಲ್ಲ. ಇದನ್ನು ಮತ್ತೆ ಕಲ್ಯಾಣದ ಮೂಲಕ ಪಡೆಯಲು ಸಾಧ್ಯವೇ?
• ಪ್ರತಿಯೊಂದು ಜಾತಿಗೂ ಮಠ ನಿರ್ಮಾಣ ಆಗಿ ಸಮಾಜದಲ್ಲಿ ಮತ್ತಷ್ಟು ಜಾತಿಯ ಕಿಚ್ಚು ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರವೇನು?
• ಎಲ್ಲಾ ಶರಣರು ಪುರುಷ ಪ್ರಧಾನ ವಚನಗಳ ಅಂಕಿತಗಳನ್ನೆ ಇಟ್ಟುಕೊಂಡಿದ್ದಾರೆ ಯಾಕೆ ?
• ಹೆಣ್ಣು ಈ ಕಾಲದಲ್ಲಿ ಎಲ್ಲಾ ರೀತಿಯಲ್ಲಿ ಸಮಾನ ಅವಕಾಶವನ್ನು ಪಡೆದುಕೊಂಡರೂ ಅನೇಕ ಸಮಸ್ಯೆಳನ್ನು ಎದುರಿಸುತ್ತಿದ್ದಾಳೆ. ಇದಕ್ಕೆ ಪರಿಹಾರವೇನು?
• ಜಾತಿ ನಿರ್ಮೂಲನೆ ಮಾಡುವುದು ಮತ್ತೆ ಕಲ್ಯಾಣದ ಮೂಲಕ ಸಾಧ್ಯವೇ?
• ದಾಸೋಹ ಪದ್ದತಿ ಸಮಾಜ ಮೇಲೆ ಪರಿಣಾಮ ಬೀರಿದರೆ ಇನ್ನು ಏನೇನು ಅಭಿವೃದ್ಧಿಯನ್ನು ಕಾಣಬಹುದು?
• `ಮತ್ತೆ ಕಲ್ಯಾಣ’ ಶರಣರ ಸಿದ್ಧಾಂತಗಳನ್ನು ಮನುಷ್ಯರ ಮನಸ್ಸಿಗೆ ಬಿತ್ತುಬೇಕು ಎನ್ನುವ ಆಶಯ ಹೊಂದಿದೆಯೇ?
• ದಾಸೋಹವನ್ನು ಕೆಳವರ್ಗದ ಜನ ಮಾತ್ರ ಸ್ವೀಕಾರ ಮಾಡ್ತಾರೆ. ಇದನ್ನು ಹೋಗಲಾಡಿಸುವುದು ಹೇಗೆ?
• 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಗೆ ಕಾರಣವೇನು?
• ವಚನಕಾರರು ಅಂಕಿತನಾಮವನ್ನು ಏಕೆ ಇಟ್ಟುಕೊಳ್ಳುತ್ತಾರೆ?
• ಆಗಿನ ಕಾಲದಲ್ಲಿ ಜಾತಿರಹಿತ ಸಮಾಜ ಕಟ್ಟಲು ಶರಣರು ಹೋರಾಡಿದರು. ಈಗಿನ ರಾಜಕಾರಣಿಗಳು ಜಾತಿಗೊಂದು ಜಯಂತಿಗಳನ್ನು ಆಚರಣೆ ಮಾಡುತ್ತಾರೆ. ಈಗಿನ ಶರಣರು ಇದರ ವಿರುದ್ಧವಾಗಿ ಏಕೆ ಹೋರಾಟ ಮಾಡುತ್ತಿಲ್ಲ?
• ಇತ್ತೀಚಿನ ದಿನಗಳಲ್ಲಿ ಕೆಲವು ಸ್ವಾಮೀಜಿಗಳವರು ರಾಜಕೀಯದಿಂದ ಸುದ್ಧಿಯಾಗಿದ್ದಾರೆ? ಇದಕ್ಕೆ ತಮ್ಮ ಅಭಿಪ್ರಾಯವೇನು?
• ಪಠ್ಯಪುಸ್ತಕಗಳಲ್ಲಿ ಶರಣರ ಪರಿಚಯ ಮಾಡಿಕೊಳ್ಳುವಾಗ ಅವರ ಜಾತಿಯ ಪರಿಚಯವೂ ಇರುತ್ತದೆ. ಇದರ ಅಗತ್ಯವಿದೆಯೇ?
• ವೀರಶೈವ ಮತ್ತು ಲಿಂಗಾಯತರ ಭಿನ್ನಾಭಿಪ್ರಾಯಗಳಿಂದ ಮತ್ತೆ ಕಲ್ಯಾಣಕ್ಕೆ ಅಡೆತಡೆಗಳೇನಾದರೂ ಆಗಿದೆಯೇ?
• ಗುಡಿಗುಂಡಾರಗಳು ಇತ್ತೀಚಿಗೆ ಮೌಢ್ಯಗಳನ್ನು ಬಿತ್ತುವ ಹೆರಿಗೆ ಮನೆಗಳಾಗಿವೆ? ಇದಕ್ಕೆ ತಮ್ಮ ಅಭಿಪ್ರಾಯವೇನು?
• ತಂದೆ ತಾಯಿಯರೇ ದೇವರೆನ್ನುತ್ತಾರೆ. ದೊಡ್ಡವರಾದ ಮೇಲೆ ತಂದೆ ತಾಯಿಯರನ್ನೇ ಮನೆಯಿಂದ ಹೊರಗಾಕುತ್ತಾರೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
• ಮಠಗಳು ನಿರ್ಮಾಣವಾಗುತ್ತಿರುವುದು ಜನರಲ್ಲಿ ಸಮಾನತೆ ತರುವುದಕ್ಕಾಗಿ. ಆದರೆ ಕೆಲವು ಮಠಾಧೀಶರು ಜಾತಿ-ಧರ್ಮಗಳ ಹೆಸರಿನಲ್ಲಿಯೇ ಸಭೆಸಮಾರಂಭಗಳನ್ನು ಏರ್ಪಡಿಸುತ್ತಾರೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
• ವಂಶಪಾರಂಪರೆಯ ಮಠಗಳು ಹುಟ್ಟುತ್ತಿರುವುದು ಎಷ್ಟು ಸರಿ?
• ವಂಶಪಾರಂಪರೆ ರಾಜರುಗಳಿಗಿರುವಂತೆ ಮಠಗಳಿಗೂ ಬೇಕಾ?
• ಆಧುನಿಕ ವಚನಕಾರರ ರೂಪರರೇಷಗಳೇನು?
• ಸ್ವಾರ್ಥ ಹೆಚ್ಚಾಗಿ ಸಂಬಂಧಗಳು ಹಾಳಾಗುತ್ತವೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
• ಇತ್ತೀಚಿಗೆ ಢಾಂಬಿಕ ಶರಣರು ಹೆಚ್ಚು ಹೆಚ್ಚು ಹುಟ್ಟಿಕೊಂಡಿದ್ದಾರೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
• ಮಾತೆಮಹಾದೇವಿಯವರು ಬಸವಣ್ಣನವರ ವಚನಾಂಕಿತವನ್ನು ತಿದ್ದಿದರು. ಇದು ತಪ್ಪಲ್ವಾ?
• ಅಲ್ಲಮಪ್ರಭುಗಳು ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರ ಗೋಷ್ಠಿ ಎನ್ನಲು ಕಾರಣವೇನು?
• ಬಸವಣ್ಣನವರನ್ನು ಪೂರ್ವಾಚಾರಿ ಎಂದು ಏಕೆ ಕರೆಯುತ್ತಾರೆ?
• ಕಳ್ಳ ಸ್ವಾಮಿಗಳನ್ನು ಯಾಕೆ ತಮ್ಮ ಜೊತೆ ಇಟ್ಟುಕೊಳ್ಳುತ್ತೀರಿ. ಅವರಿಗೆ ಎಸಿ ಕಾರು, ಬಂಗಾರ, ಮೊಬೈಲ್ ಫೋನ್, ಬೆಲೆ ಬಾಳುವ ವಸ್ತುಗಳು ಯಾಕೆ ಬೇಕು? ಇವರನ್ನು ಯಾಕೆ ಉಚ್ಛಾಟನೆ ಮಾಡುತ್ತಿಲ್ಲ ತಾವು?
• ಕಾಯಕ, ದಾಸೋಹ, ಇಷ್ಟಲಿಂಗ ಪೂಜೆಗಳು ಲಿಂಗಾಯತ ಧರ್ಮದ ಆಧಾರವೆಂದು ಯಾಕೆ ಕರೆಯುತ್ತಾರೆ?
• ಆಧುನಿಕ ತಂತ್ರಜ್ಞಾನವಿಲ್ಲದೇ ವಚನ ಸಾಹಿತ್ಯ ಬೆಳೆಯಲು ಸಾಧ್ಯವೇ?
• ಇಂದು ಪ್ರಾಮಾಣಿಕ ವ್ಯಕ್ತಿಗಳ ಹತ್ಯೆಯಾಗುತ್ತಿವೆ. ಇಂಥವನ್ನು ಯುವಕರು ಹೇಗೆ ಎದುರಿಸಬೇಕು?

- ಹೆಚ್ ಎಸ್ ದ್ಯಾಮೇಶ್
9449649850