ಆಗಸ್ಟ್ ೧೮ ಭಾನುವಾರ, ಯಾದಗಿರಿ
ಯಾದಗಿರಿಯಲ್ಲಿ 18 ನೇ ದಿನದ ಮತ್ತೆ ಕಲ್ಯಾಣ ಆಂದೋಲನ. ಅಭಿಯಾನದಲ್ಲಿ ಸಾರ್ವಜನಿಕ ಸಮಾವೇಶ. ಅನನ್ಯ ಟಿವಿ ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ
ಇಲ್ಲಿನ ಶ್ರೀ ಬಸವೇಶ್ವರ ಕಲ್ಯಾಣಮಂಟಪದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನುಡಿದಂತೆ ನಡೆಯದೇ ಇರುವ `ಮಾತು’ ಇಂದಿನ ಬಹುದೊಡ್ಡ ಕಸ. ಶರಣರು ಮಾತಿಗಿಂತ ಕೃತಿಗೆ ಒತ್ತುಕೊಟ್ಟವರು. ನಡೆ-ನುಡಿಯ ಮಧ್ಯದ ಅಂತರವನ್ನು ಹೋಗಲಾಡಿಸಿಕೊಂಡವರು. `ನಡೆ-ನುಡಿಯಲ್ಲಿ ಒಂದು ಜವೆಯಷ್ಟು ವ್ಯತ್ಯಾಸವದರೂ ನೀನು ನನ್ನನ್ನು ಅದ್ದಿ ಎದ್ದು ಹೋಗು’ ಎಂದು ದೇವರಿಗೇ ಸವಾಲು ಹಾಕಿದವರು ಬಸವಣ್ಣ. ಈ ಎದೆಗಾರಿಕೆ ನಮಗೂ ಬಂದರೆ `ಮತ್ತೆ ಕಲ್ಯಾಣ’ ನಿತ್ಯ ಕಲ್ಯಾಣವಾಗವುದು. `ನೂರನೋದಿ ನೂರ ಕೇಳಿದಡೇನು ರೋಷವಳಿಯದನ್ನಕ್ಕ’ - ಅಸ್ಖಲಿತವಾಗಿ ಮಾತನಾಡುವ, ಓದುವ ಜನರಲ್ಲಿ ನುಡಿದಂತೆ ನಡೆ ಇಲ್ಲವಾದರೆ ಅದರಿಂದ ಉಪಯೋಗವೇನು? ಸಮಚಿತ್ತ, ಸಮಭಾವ, ಸಮಕಳೆ ಬಾರದಿದ್ದರೆ ಲಿಂಗಪೂಜೆಯೂ ಒಂದು ಯಾಂತ್ರಿಕ ಕ್ರಿಯೆಯಾಗುವುದು ಎಂದು ಶರಣರು ಎಚ್ಚರಿಸಿದರು. ಜಾತಿ, ಧರ್ಮಾಂಧತೆ, ಅಜ್ಞಾನ, ಭ್ರಷ್ಟತೆ, ಲಿಂಗ ತಾರತಮ್ಯ ಮುಂತಾದ ಸಾಮಾಜಿಕ ಅಂಟುಜಾಡ್ಯಗಳ ಕಸ ಶರಣ ಸಂಸ್ಕೃತಿಯ ಬೆಳೆ ಬೆಳೆಯಲು ಅಡ್ಡಿಯಾಗುತ್ತಿದೆ. ಇಂಥ ಕಸವನ್ನು ಹೋಗಲಾಡಿಸುವ ದಿವ್ಯ ಔಷಧಿ ವಚನಗಳಲ್ಲಿದೆ. 12 ನೆಯ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಶರಣರೆಲ್ಲ ಸೇರಿ ಚರ್ಚಿಸಿ ರಚಿಸಿದವೇ ವಚನಗಳು. ಅವರು ಸಮಾಜದಲ್ಲಿದ್ದ ಜಾತಿಯ ಭೂತವನ್ನು ಹೊಡೆದು ಮಾನವರೆಲ್ಲ ಒಂದು ಎನ್ನುವುದನ್ನು ನಡೆದು ತೋರಿಸಿದರು. ಬುದ್ಧನ ಸಹವಾಸದಿಂದ ಅಂಗುಲಿಮಾಲನಂಥ ಕ್ರೂರಿಯೂ ಬದಲಾವಣೆಯಾದ. ಅದರಂತೆ ಸಜ್ಜನರ ಸಂಗದಿಂದ ದುರ್ಜನರೂ ಸಜ್ಜನರಾಗುವ ಸಾಧ್ಯತೆಯಿದೆ. ಆದರೆ ಬದಲಾವಣೆಯೇ ಆಗಬಾರದೆಂದು ಹಠಹಿಡಿದ ಜಡಜೀವಿಗಳ ಬದಲಾವಣೆ ಅಸಾಧ್ಯ, ಜೀವ ಚೈತನ್ಯವಿರುವ ಮಕ್ಕಳಲ್ಲಿ ಬದಲಾವಣೆ ಖಂಡಿತಾ ಸಾಧ್ಯ. ಈ ಹಿನ್ನೆಲೆಯಲ್ಲಿ ಮಕ್ಕಳ ಜೊತೆ ಸಂವಾದ ನಡೆಸುವುದು `ಮತ್ತೆ ಕಲ್ಯಾಣ ಕಾರ್ಯಕ್ರಮದ ಮುಖ್ಯ ಭಾಗವಾಗಿದೆ. `ಆಳಿಗೊಂಡಿಹೆನೆಂದು ಅಂಜಲದೇಕೆ, ನಾಸ್ತಿಕವಾಡಿಹೆನೆಂದು ನಾಚಲದೇಕೆ’ ಎಂದು ಬಸವಣ್ಣನವರು ಹೇಳುವ ಮೂಲಕ ಶೋಷಿತರಲ್ಲಿ, ತಳವರ್ಗದವರಲ್ಲಿ ಮಾತನಾಡುವ ಧೈರ್ಯ ತುಂಬಿದರು. ಇದರ ಫಲವಾಗಿಯೇ ಕೆಳವರ್ಗದಿಂದ ಬಂದ ಶರಣರೂ ಅತ್ಯಂತ ಉತ್ಕೃಷ್ಟವಾದ ವಚನಗಳನ್ನು ಬರೆಯಲು, ಇಂದಿನ ಬಂಡಾಯ ಸಾಹಿತಿಗಳಿಗಿಂತಲೂ ಮಿಗಿಲಾಗಿ ನೇರ, ನಿಷ್ಠುರ ವಚನಗಳ ರಚನೆ ಮಾಡಲು ಸಾಧ್ಯವಾಯಿತು. `ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋದಡೆ ಎಡಪಾದ ರಕ್ಷೆಯಿಂದ ಲಟಪಟನೆ ಹೊಡೆ’ ಎಂದು ಅಂಬಿಗರ ಚೌಡಯ್ಯ ಹೇಳುವ ಮೂಲಕ ಏಕದೇವೋಪಾಸನೆಯನ್ನು ಹೇಳುವರು. ಇಂದು ಎಲ್ಲೆಲ್ಲೂ ಗುಡಿ ಕಟ್ಟಿಸುವ ಸ್ಪರ್ಧೆ ನಡೆಯುತ್ತಿದೆ. ನಿಜವಾದ ಲಿಂಗಾಯತರು ಗುಡಿಗಳನ್ನು ಕಟ್ಟಿಸುವುದು ಬಸವ ದ್ರೋಹಬಗೆದಂತೆ. ಬಸವಣ್ಣ ಹೇಳಿದಂತೆ ನಡೆಯುವ ಮನೋಸ್ಥೈರ್ಯ ರೂಢಿಸಿಕೊಂಡರೆ ಮತ್ತೆ ಕಲ್ಯಾಣವನ್ನು ಕಟ್ಟಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಗುರು ಮಠಕಲ್ ನ ಖಾಸ ಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ ಮತ್ತೆ ಕಲ್ಯಾಣ ಒಂದು ಸಮುದಾಯದ, ಒಂದು ಉದ್ದೇಶವನ್ನಿಟ್ಟು ಕೊಂಡ, ವೇದಿಕೆಯ, ನಿಗದಿತ ಕಾರ್ಯಕ್ರಮವಲ್ಲ. ಸಮಾಜದ ಎಲ್ಲ ವರ್ಗವನ್ನು ಒಳಗೊಂಡು ಸಾಮರಸ್ಯ ಮೂಡಿಸುವುದೇ ಇದರ ಮುಖ್ಯ ಉದ್ದೇಶ. ಇದೊಂದು ಹೊಸ ಕಲ್ಪನೆ. ಇಂಥ ಕಲ್ಪನೆಯನ್ನು ಸಾಕಾರಗೊಳಿಸಲು ನಮ್ಮ ಯಾದಗಿರಿಯ ಜನತೆಗೆ ಪಂಡಿತಾರಾಧ್ಯ ಶ್ರೀಗಳು ಅವಕಾಶ ಮಾಡಿಕೊಟ್ಟಿರುವುದು ನಮ್ಮ ಭಾಗ್ಯ. ಪೂಜ್ಯರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಯಾದಗಿರಿಯ ಸಮಸ್ತ ಸಮುದಾಯಗಳು, ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ. ಪಂಡಿತಾರಾಧ್ಯ ಶ್ರೀಗಳು ಅತ್ಯಂತ ವೈಚಾರಿಕರು. ಇಡೀ ರಾಜ್ಯಾದ್ಯಾಂತ ಶರಣರ ಆಶಯಗಳನ್ನು ತಿಳಿಸಲು ಹೊರಟಿರುವ ಪೂಜ್ಯರ ಕಾರ್ಯದಲ್ಲಿ ನಾವೂ ಪಾಲ್ಗೊಳ್ಳ ಬಯಸುತ್ತೇವೆ. ಜನರ ಮನದಲ್ಲಿ ಸಾವಿರಾರು ವರ್ಷಗಳಿಂದ ವೈದಿಕ ಪರಂಪರೆಯ ಜಾತಿಯತೆ, ಮೌಢ್ಯತೆಗಳೆಂಬ ಕಸವನ್ನು ತುಂಬಿದ್ದಾರೆ. ಈ ಕಸ ತೆಗೆದು ಶರಣ ಸಂಸ್ಕೃತಿಯೆಂಬ ಬೆಳೆಯನ್ನು ಮತ್ತೆ ಬೆಳೆಯುವುದೇ ಶ್ರೀಗಳ ಆಶಯ. ಪೂಜ್ಯರ ಈ ಆಶಯಕ್ಕೆ ತಕ್ಕಂತೆ ನಾವೆಲ್ಲ ಕಾರ್ಯನಿರ್ವಹಿಸೋಣ ಎಂದರು.
`ಸಮಕಾಲೀನ ಸಂದರ್ಭದಲ್ಲಿ ಶರಣರ ಪ್ರಸ್ತುತತೆ’ ಕುರಿತಂತೆ ಡಾ. ರಂಗರಾಜ ವನದುರ್ಗ ಮಾತನಾಡಿ ಪಂಡಿತಾರಾಧ್ಯ ಶ್ರೀಗಳ `ಮತ್ತೆ ಕಲ್ಯಾಣ’ದ ಕನಸು ಖಂಡಿತ ನನಸಾಗುವುದು. ಇದನ್ನು ನನಸು ಮಾಡುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ನಮ್ಮ ಬರಹದ ನೆಲೆಗಳೇನು, ಭವಿಷ್ಯದ ದಾರಿಯೇನು ಎನ್ನುವ ಪ್ರಶ್ನೆಗಳಿಗೆ ಮತ್ತೆ ಕಲ್ಯಾಣದಲ್ಲಿ ಉತ್ತರ ಕಂಡುಕೊಳ್ಳಬೇಕಾಗಿದೆ. ಪ್ರತಿಕಾಲಘಟ್ಟದಲ್ಲೂ ಮರಿಯಬೇಕಾದ ಮತ್ತು ಮರೆಯಲೇಬಾರದ ಕೆಲವು ಸಂಗತಿಗಳಿವೆ. ಅವುಗಳಲ್ಲಿ 12 ನೆಯ ಶತಮಾನದ ಶರಣರ ಬದುಕು-ಬರಹಗಳನ್ನು ಮರೆಯಲೇಬಾರದು. ಶರಣರ ಪ್ರಸ್ತುತತೆ ಎಂದೆಂದಿಗೂ ಪ್ರಸ್ತುತವಾದವು. ಬಸವಣ್ಣನವರ ಬಗ್ಗೆ ಇರುವಷ್ಟು ಬರಹಗಳು ಬೇರೆ ಯಾವ ವ್ಯಕ್ತಿಗಳ ಬಗ್ಗೆ ಇಲ್ಲ. ನಮ್ಮ ರಾಜ್ಯದಲ್ಲಿ ಅತ್ಯಧಿಕವಾಗಿ ಬಸವಣ್ಣನ ಹೆಸರನ್ನು ಅದರಲ್ಲೂ ವಿಶೇಷವಾಗಿ ತಳ ಸಮುದಾಯದವರಲ್ಲಿ ಹೆಚ್ಚಾಗಿ ಕಾಣಬಹುದು. `ಬಸವ’ನನ್ನು ಬಿಟ್ಟು ಬಹಳ ದಿನ ಬದುಕಲು ಸಾಧ್ಯವಿಲ್ಲ. ಬಸವಣ್ಣನವರಿಗೆ ಕಲ್ಯಾಣ ರಾಜ್ಯ ಕಟ್ಟಬೇಕೆಂಬ ಕನಸಿತ್ತು. ಈ ಕಲ್ಯಾಣ ರಾಜ್ಯದಲ್ಲಿ ಅಂಬೇಡ್ಕರ್, ಗಾಂಧಿ, ರೈತ ಸಂಘದ ನಂಜುಂಡಸ್ವಾಮಿ ಮುಂತಾದವರು ಕಂಡ ಎಲ್ಲ ಕನಸುಗಳೂ ಇವೆ. ದೇವರುಗಳನ್ನು ಮಾಡುವ, ದೇವಾಲಯಗಳನ್ನು ಕಟ್ಟುವ ಪದ್ಧತಿ ಬಹಳ ಹಿಂದಿನಿಂದಲೂ ಇದೆ. ಇದಕ್ಕೆ ಸಾಕಷ್ಟು ಹಣ ಬೇಕು. ಇದಕ್ಕೆ ಬಸವಣ್ಣ `ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ’ ಎಂದು ಹೇಳುವ ಮೂಲಕ ದೇಹವನ್ನೇ ದೇವಾಲಯವನ್ನಾಗಿಸಿಕೊಂಡರು. ದಾನ ಮಾಡುವಲ್ಲಿ ಇರುವ `ಅಹಂಕಾರ’ವನ್ನು ಕಳೆಯಲು `ದಾಸೋಹ’ ಸಂಸ್ಕೃತಿಯನ್ನು ಬೆಳೆಸಿದರು. `ದಾನ’ದ ಸಂಸ್ಕೃತಿ ಬೇಕೋ `ದಾಸೋಹ’ದ ಸಂಸ್ಕೃತಿ ಬೇಕೋ ಎನ್ನುವುದನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಹಣ ಮತ್ತು ಅಧಿಕಾರ ಸಿಕ್ಕರೆ ಎರೆ ಹುಳುಗಳೂ ಸರ್ಪಗಳಾಗುತ್ತವೆ. ಹಣ ಅಧಿಕಾರವಿದ್ದೂ ವಿನಯವಂತಿಕೆಯ ಸಾಕಾರಮೂರ್ತಿಯಾದ ಬಸವಣ್ಣನ ನಾಡಿನ, `ಈಸಕ್ಕಿಯಾಸೆ ನಿಮಗೇಕೆ’ ಎಂದು ಗಂಡನನ್ನೇ ತರಾಟೆಗೆ ತೆಗೆದುಕೊಂಡ ಲಕ್ಕಮ್ಮನ ನಾಡಿನ, ಸ್ವರ್ಗ-ನರಕ, ಹೆಣ್ಣು-ಗಂಡು, ಜಾತಿ-ಮತ-ಧರ್ಮ, ಬಡವ-ಬಲ್ಲಿದ, ಅಕ್ಷರಸ್ಥ-ಅನಕ್ಷರಸ್ಥ, ಮುಂತಾದ ಅಸಮಾನತೆಗಳ ಬೇಧವಿಲ್ಲದ ನಾಡಿನ ಕಡೆ ನಮ್ಮ ನಡೆ ಎಂದರು.
ಶೇಖ್ ಮೆಹಬೂಬಿ ಮಾತನಾಡಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ `ಮತ್ತೆ ಕಲ್ಯಾಣ’ ನಡಿಗೆಯನ್ನು ಮನಃಪೂರ್ವಕವಾಗಿ ಶ್ಲಾಘಿಸುವೆ. ಉದ್ವಿಗ್ನತೆಯನ್ನು ಸಂತೈಸುವಲ್ಲಿ ಶರಣರ ಇಂಥ ನಡೆ ಅತ್ಯಂತ ಅವಶ್ಯ. ನಮ್ಮನ್ನು ನಾವೇ ತಿದ್ದಿಕೊಳ್ಳುವ ಮೂಲಕ ಸ್ವಾಸ್ಥ್ಯ ಸಮಾಜವನ್ನು ಕಟ್ಟಬಹುದು. ಸತ್ಯದ ಅರಿವು ಮೂಡಿಸುವ ಶ್ರೇಷ್ಠ ದನಿ ಶರಣರದ್ದು. ಶೋಷಣೆ ಮಾಡುವವರಲ್ಲಿ ಪಾಪಪ್ರಜ್ಞೆ ಮೂಡಿಸಲು, ನಾವು ಸಾರ್ಥಕ ಬದುಕ ಸಾಗಿಸಲು ದನಿ ಎತ್ತಬೇಕು. ಇಂಥ ಅವಕಾಶ ಮತ್ತೆ ಕಲ್ಯಾಣದ ಮೂಲಕ ನಮಗೆ ದೊರೆತಿದೆ. ನಮ್ಮ ಆಲೋಚನೆಗಳು ಬದಲಾಗದ ಹೊರತು ಭವಿಷ್ಯ ಬದಲಾಗಲು ಸಾಧ್ಯವಿಲ್ಲ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳದ ಹೊರತು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ವ್ಯಕ್ತಿ ಸುಧಾರಣೆಯಾದರೆ ಸಮಾಜ ತನ್ನಿಂದ ತಾನೇ ಸುಧಾರಣೆಯಾಗುವುದು. ಬಸವಣ್ಣನ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಇದಿರ ಅಳಿಯಲುಬೇಡ, ಅನ್ಯರಿಗೆ ಅಸಹ್ಯಪಡಬೇಡ, ಇದೇ ಅಂತರಂಗ ಶುದ್ಧಿ ಮತ್ತು ಇದೇ ಬಹಿರಂಗ ಶುದ್ಧಿ’ ಎನ್ನುವ ವಚನ ಇಡೀ ಜಗತ್ತಿನ ಎಲ್ಲ ಧರ್ಮಗಳ ಸಾರದಂತಿದೆ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಹಳೆ ಪ್ರವಾಸಿ ಬಂಗಲೆಯಿಂದ ಸಾಮರಸ್ಯ ನಡಿಗೆ ಪ್ರಾರಂಭವಾಯಿತು. ನಡಿಗೆಯಲ್ಲಿ ವಿವಿಧ ಧರ್ಮದ ಮುಖಂಡರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಕಲಾ ತಂಡಗಳು ಶರಣರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದ ಜೊತೆ ಹೆಜ್ಜೆ ಹಾಕಿ ಬಸವೇಶ್ವರ ಕಲ್ಯಾಣ ಮಂಟಪ ತಲುಪಿದರು. ನೆರೆ ಸಂತ್ರಸ್ತರ ನಿಧಿಗೆ 12234 ರೂಪಾಯಿ ಸಂಗ್ರಹವಾಯಿತು.
- ಹೆಚ್ ಎಸ್ ದ್ಯಾಮೇಶ್
ವಿದ್ಯಾರ್ಥಿಗಳೊಂದಿಗೆ ಸಂವಾದ
ಆಗಸ್ಟ್ 18, ಯಾದಗಿರಿ; `ಮತ್ತೆ ಕಲ್ಯಾಣ’ದ ನಿಮಿತ್ತ ಇಲ್ಲಿನ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತ ಮಕ್ಕಳು ಪಠ್ಯಪುಸ್ತಕದ ಪಾಠ, ಕವಿತೆ, ಕತೆ, ಚಿಂತನಗಳನ್ನು ಮಾತ್ರ ಓದುತ್ತಿದ್ದೀರಿ. ಅವುಗಳ ಜೊತೆಗೆ ವಚನ ಸಾಹಿತ್ಯವನ್ನೂ ಓದಿ ಅರ್ಥ ಮಾಡಿಕೊಂಡು ಅದನ್ನು ಆಚರಣೆಗೆ ತರವ ಪ್ರಯತ್ನ ಮಾಡಬೇಕು. ವಚನಗಳಲ್ಲಿ ಅರಿವಿನ ಬೆಳಕಿದೆ. ಸಮಸ್ತ ಸಮಸ್ಯೆಗಳಿಗೆ ಪರಿಹಾರವಿದೆ. ಮನುಷ್ಯನ ಬಯಕೆಗಳು ಹತ್ತು ಹಲವು. ಯಾರಿಗೆ ಯಾವ ವಸ್ತು ಬೇಕೆಂದು ತೀರ್ಮಾನಿಸಲು ಸ್ವತಂತ್ರರು. ಮನುಷ್ಯ ಆಸೆ ಆಮಿಷಗಳಿಂದ ಹೊರಬರಲು ವಚನ ಸಾಹಿತ್ಯದ ಅಧ್ಯಯನ ಅಗತ್ಯತೆಯಿದೆ. ದಾಸಿಮಯ್ಯನವರು `ಶರಣರ ಸೂಳ್ನುಡಿಯ ಒಂದರಘಳಿಗೆ ಯಿತ್ತಡೆ ನಿಮ್ಮನಿತ್ತೆ ಕಾಣಾ’ ಎನ್ನುವರು. ಶರಣರ ನುಡಿಮುತ್ತುಗಳು ಕಿವಿಗೆ ಬಿದ್ದರೆ ಸಾಕು ದೇವರೂ ಬೇಡವೆಂದು ಹೇಳಿದರು. ಮೊಬೈಲ್ನಲ್ಲಿ ನಮ್ಮ ಮಕ್ಕಳು ಹಾಡುಗಳನ್ನು ಕೇಳುತ್ತಾರೆ. ಅವು ಅರ್ಥ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಹವಲು ಹಾಡುಗಳು ಮನಸ್ಸನ್ನು ವಿಕಾರಗೊಳಿಸುತ್ತವೆ. ಇದರ ಬದಲಾಗಿ ನಮ್ಮ ಮಕ್ಕಳಿಗೆ ಮಠಗಳ ಮೂಲಕ, ಸಮಾಜದ ಮೂಲಕ ವಚನ ಸಂಸ್ಕಾರ ಕೊಟ್ಟಾಗ ಮನಸ್ಸು ವಿಕಾಸವಾಗುತ್ತದೆ. ನಿಜವಾದ ಸಂಪತ್ತು ಸುಜ್ಞಾನ. ಶರಣರು ಸಂಪತ್ತಿಗೆ ಕವಡೆಕಾಸಿನ ಕಿಮ್ಮತ್ತು ಕೊಟ್ಟಿರಲಿಲ್ಲ. ಸುಜ್ಞಾನವೆಂಬ ಸಂಪತ್ತನ್ನು ಬೆಳೆಸಿಕೊಂಡರು. ಶರಣರ ಬದುಕಿಗೂ ನಮ್ಮ ಬದುಕಿಗೂ ತುಂಬಾ ವ್ಯತ್ಯಾಸ ಕಾಣುತ್ತೇವೆ. ನಾವಿಂದು ಕಾಯಕ ಪ್ರಜ್ಞೆ ಮರೆತಿದ್ದೇವೆ. ಸರಕಾರದ ಅನೇಕ ಯೋಜನೆಗಳು ಜನರನ್ನು ಬೇಡುವ ಭಿಕ್ಷುಕರನ್ನಾಗಿ ಮಾಡಿವೆ. ಸೋಮಾರಿಗಳನ್ನಾಗಿ ಮಾಡಿವೆ. ಸರಕಾರ ಭಾಗ್ಯಗಳನ್ನು ಕೊಡುವುದರ ಬದಲಾಗಿ ದುಡಿಯವ ಕೈಗಳಿಗೆ ಕೆಲಸ ಕೊಟ್ಟು ಕಾಯಕ ಪ್ರಜ್ಞೆಯನ್ನು ಬೆಳೆಸಬೇಕು. ನಾವೆಲ್ಲರೂ ಕಾಯಕ ಪ್ರಜ್ಞೆ ಮೈಗೂಡಿಸಿಕೊಂಡರೆ ಸ್ವರ್ಗವನ್ನು ಕಾಣಬಹುದು. ಸ್ವರ್ಗ ಮತ್ತು ನರಕ ನಮ್ಮ ಬದುಕಿನಲ್ಲೇ ನಾವು ಅನುಭವಿಸುವಂಥದ್ದು. ವಚನಗಳನ್ನು ಓದುತ್ತ ಹೋದ್ರೆ ನಮ್ಮ ಮನಸ್ಸು ವಿಕಾಸವಾಗುವುದಕ್ಕೆ, ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಲಿಕ್ಕೆ ಸಾಧ್ಯ. ಭಕ್ತಿ, ಜ್ಞಾನ, ಕ್ರಿಯೆಯ ಸಂಕೇತ ವಿಭೂತಿ. ನಮ್ಮ ಆಚಾರ ವಿಚಾರಗಳು ಶುದ್ಧವಾಗಿದ್ದರೆ ನಾವೇ ದೇವರಾಗುತ್ತೇವೆ. ಅಜ್ಞಾನ ಕಳೆದು ಸುಜ್ಞಾನ ಕೊಡುವುದು, ಕತ್ತಲೆಯನ್ನು ಕಳೆದು ಬೆಳಕನ್ನು ನೀಡುವುದೇ ಮತ್ತೆ ಕಲ್ಯಾಣ. ಶಾಸ್ತ್ರ ಹೇಳುವಂಥವರು, ಪೂಜಾರಿ-ಪುರೋಹಿತರು ನಮ್ಮ ತಲೆಗೇ ಕೈ ಹಾಕುತ್ತಾರೆ. ಇಂಥವರಿಂದ ಎಚ್ಚರದಿಂದ ಇರುವುದೇ ಮತ್ತೆ ಕಲ್ಯಾಣ. ನಾವು ಯಾವ ಬಟ್ಟೆಯನ್ನು ಧರಿಸುತ್ತೇವೆ; ಎನ್ನುವುದು ಮುಖ್ಯವಲ್ಲ. ಯಾವ ದಾರಿಯಲ್ಲಿ ನಡೆಯುತ್ತೇನೆ ಎನ್ನುವುದು ಮುಖ್ಯ ಎಂದರು.
ಸಂವಾದಕಿ ಮೀನಾಕ್ಷಿ ಬಾಳಿ ಪ್ರಶ್ನೆಗಳಿಗೆ ಉತ್ತರಿಸಿ ಯಾರೋ ಹಲವರು ದುಡಿಯಬೇಕು, ಯಾರೋ ಕೆಲವರು ಕೂತು ಉಣ್ಣಬೇಕು ಎನ್ನುವ ಕಾರಣಕ್ಕೆ ಹುಟ್ಟಿಕೊಂಡಿದ್ದೇ ಜಾತಿ. ಹೆಣ್ಣು ಅಂದರೆ ಶೂದ್ರಳು, ಅಸ್ಪೃಶ್ಯಳೆಂದು ಅನೇಕ ಸವಲತ್ತುಗಳಿಂದ ವಂಚಿತಳನ್ನಾಗಿ ಮಾಡಿರುವುದು ದುರಂತದ ಸಂಕೇತ. ತಾಳಿ ತಾಳ್ಮೆಯ ಸಂಕೇತ ಎನ್ನುವುದಾದರೆ ಈ ತಾಳ್ಮೆ ಗಂಡಿಗೂ ಇರಬೇಕು. ಸನಾತನ ಧರ್ಮದಲ್ಲಿ ತಾಳಿಯಿದೆಯೇ ಹೊರತು ಶರಣ ಧರ್ಮದಲ್ಲಿ ತಾಳಿ ಇಲ್ಲ. ಮಹಿಳೆಯನ್ನು ತನ್ನ ಅಸ್ತಿ ಎನ್ನುವ ರೀತಿಯಲ್ಲಿ ತಾಳಿಯನ್ನು ದಾಖಲಿಸುವುದು ಸರಿಯಲ್ಲ. ಗಂಡ ಸತ್ತ ನಂತರ ತಾಳಿ ಕೀಳೋದು, ಬಳೆ ಹೊಡೆಯೋದು, ಕುಂಕುಮ ಅಳಿಸುವುದು ಅಸಹ್ಯಕರವಾದುದು. ಹೆಣ್ಣು ಎರಡನೆಯ ದರ್ಜೆ ಅಂತ ಭಾವಿಸಿಕೊಳ್ಳುವುದು, ನಡೆದುಕೊಳ್ಳುವುದು ದುರಂತದ ಸಂಗತಿ. 12 ನೆಯ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಾದ ನಂತರ ವಿಚಾರವಾದಿಗಳು, ಶರಣರು ಮೌಢ್ಯಗಳನ್ನು ಬಿತ್ತಲಿಲ್ಲ. ಮೌಢ್ಯಗಳ ವಿರುದ್ಧ ಇವತ್ತಿಗೂ ಹೋರಾಡುತ್ತಲೇ ಬರುತ್ತಿದ್ದಾರೆ. ಮೌಢ್ಯಗಳು ಬಹಳ ಬೇಗ ಹಬ್ಬುತ್ತವೆ. ಅವುಗಳನ್ನು ಹೇಳಲು ಯಾರೂ ಬೇಕಿಲ್ಲ. ಶರಣರ ಪರಂಪರೆಯಲ್ಲಿ ಮಠಗಳು ಇಲ್ಲ. ಭಕ್ತರ ಮನೆಗಳೇ ಮಠಂಗಳು. ಜಾತಿಗೊಂದು ಮಠಗಳು ಹುಟ್ಟಿರುವುದು ರಾಜಕಾರಣಿಗಳಿಗೆ ಅಸ್ತ್ರವಾದಂತಾಗಿದೆ. ಸನಾತನ ಧರ್ಮದಲ್ಲಿ ಯಾವ ಅಸಮಾನತೆಗಳಿದ್ದವೋ ಅವುಗಳನ್ನು ಸುಳ್ಳು ಮಾಡಿ ಸಮಾನತೆಯನ್ನು ತರಲು ಪ್ರಯತ್ನಿಸುವುದೇ ಮತ್ತೆ ಕಲ್ಯಾಣ. ಪ್ರಾಣಿ ಬಲಿ ಕೊಡುವುದು ವೈದಿಕ ಪರಂಪರೆಯಿಂದ ಬಂದದ್ದು. ಅಂತಹ ಪರಂಪರೆಗಳಿಂದ ಹೊರಬರುವುದೇ ಮತ್ತೆ ಕಲ್ಯಾಣ. ಜನರಿಗೆ ತಿಳಿವಳಿಕೆ ಬರಬೇಕಾದರೆ ವಚನಗಳನ್ನು ಓದಿ ಅರ್ಥೈಸಿಕೊಂಡು ಆಚರಣೆಗೆ ತರಬೇಕು. ಮಾಟ, ಮಂತ್ರ ಸುಳ್ಳು, ಅದೊಂದು ಮೂಢನಂಬಿಕೆ, ಅದೊಂದು ಭ್ರಮೆ, ಭಯ. ಅದನ್ನು ನಂಬುವ ಅವಶ್ಯಕತೆಯಿಲ್ಲ. ಹಿಂದೂ ಎನ್ನುವುದೊಂದು ಧರ್ಮ ಅಲ್ಲ. ಲಿಂಗಾಯತ ಧರ್ಮ ಈಗಾಗಲೇ ಇದೆ. ಅದಕ್ಕೆ ಸರಕಾರ ಮಾನ್ಯತೆ ಕೊಡಬೇಕು ಅಷ್ಟೇ. ಶರಣರ ವಿಚಾರಗಳನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬರುವವರೆಲ್ಲರೂ ಲಿಂಗಾಯತರೇ. ತಮ್ಮ ಸ್ವಾರ್ಥದ ಉದ್ದೇಶಕ್ಕಾಗಿ ಪಟ್ಟಭದ್ರ ಹಿತಾಸಕ್ತರು ಜಾತಿಯನ್ನು ಸೃಷ್ಟಿ ಮಾಡಿದ್ದಾರೆ ಎಂದರು.
ಇನ್ನೋರ್ವ ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ 12ನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ಕಂಡ ಸಮ ಸಮಾಜದ ಕನಸನ್ನು ನನಸು ಮಾಡುವುದೇ ಮತ್ತೆ ಕಲ್ಯಾಣ. ಪ್ರಶ್ನೆಗಳನ್ನು ಕೇಳುವುದನ್ನು ಪ್ರೇರೇಪಿಸುವುದೇ ಮತ್ತೆ ಕಲ್ಯಾಣ. ಆತ್ಮ, ಪರಮಾತ್ಮ ಎರಡೂ ಸುಳ್ಳು, ಇವು ಪೂಜಾರಿ ಪುರೋಹಿತರ ಸೃಷ್ಟಿ. ನನ್ನ ಲಗ್ನದಲ್ಲಿ ನನ್ನ ಹೆಂಡತಿ ನನಗೆ ರುದ್ರಾಕ್ಷಿ ಕಟ್ಟಿದ್ದಾಳೆ ಎಂದರು.
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು :
• ವಿಭೂತಿಯನ್ನು ಹಣೆಗೇ ಯಾಕೆ ಧರಿಸುತ್ತಾರೆ?
• ರುದ್ರಾಕ್ಷಿ ಕೊರಳಲ್ಲಿ ಯಾಕೆ ಧರಿಸುತ್ತಾರೆ?
• ಸ್ವಾಮಿಜಿಗಳಾದವರು ಕಾವಿ ಬಟ್ಟೆಗಳನ್ನೇ ಏಕೆ ಧರಿಸಬೇಕು?
• ತಮ್ಮ ಪ್ರಕಾರ ಜಾತಿ ಬೇಧ ಭಾವವೆಂದರೇನು?
• ಮದುವೆ ಸಂದರ್ಭದಲ್ಲಿ ಹೆಣ್ಣಿಗೆ ತಾಳಿ ಕಟ್ಟುತ್ತಾರೆ. ಗಂಡಿಗೆ ಏನು ಕಟ್ಟುತ್ತಾರೆ?
• ನಿಜವಾದ ದೇವರು ಯಾರು?
• ವಿಭೂತಿ ಶರಣ ಸಂಸ್ಕೃತಿಯಾದರೆ ಕುಂಕುಮ ಯಾವ ಸಂಸ್ಕೃತಿ?
• ಗುರು, ಲಿಂಗ, ಜಂಗಮರ ಮಹತ್ವವೇನು?
• ಮಾಟ ಮಂತ್ರ ನಂಬಿಕೆಯೋ ಅಥವಾ ಮೂಢನಂಬಿಕೆಯೋ?
• ಗುರು ಎಂದರೆ ಯಾರು? ಗುರುವಿನ ಲಕ್ಷಣಗಳೇನು?
• ತಾಳಿಗೆ ಮೂರೇ ಗಂಟು ಯಾಕೆ?
• ಕಾವಿ, ಖಾದಿ, ಖಾಕಿಗಳು ಯಾವುದರ ಸಂಕೇತ?
• ಗುರುಗಳ ಲಕ್ಷಣಗಳೇನು ?
• ಹಿಂದೂ ಧರ್ಮವೋ ಜಾತಿಯೋ?
• ಏಕಾಗ್ರತೆ ಬೆಳೆಸಿಕೊಳ್ಳಲು ಏನು ಮಾಡಬೇಕು?
• ದೇವರಿಗೆ ಕುರಿ, ಕೋಳಿ, ಕೋಣಗಳಂತಹ ಪ್ರಾಣಿಗಳನ್ನೇ ಏಕೆ ಬಲಿಕೊಡುತ್ತಾರೆ?
• ಗಂಡ ಸತ್ತರೆ ಯಾಕೆ ತಾಳಿ ತೆಗೆಯುತ್ತಾರೆ? ಬಳೆ ಹೊಡೆಯುತ್ತಾರೆ? ಕುಂಕುಮ ಅಳಿಸುತ್ತಾರೆ ಯಾಕೆ?
• ಜಾತಿಗೊಂದು ಮಠಗಳ ಅವಶ್ಯಕತೆಯಿದೆಯೇ?
- ಹೆಚ್ ಎಸ್ ದ್ಯಾಮೇಶ್
9449649850

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)