ಆಗಸ್ಟ್ ೧೭ ಶನಿವಾರ, ರಾಯಚೂರು
ರಾಯಚೂರಿನಲ್ಲಿ 17ನೇ ದಿನದ ಮತ್ತೆ ಕಲ್ಯಾಣ ಆಂದೋಲನ. ಅಭಿಯಾನದಲ್ಲಿ ಯುವ ವಿದ್ಯಾರ್ಥಿಗಳೊಂದಿಗೆ ಸಂವಾದ. ಅನನ್ಯ ಟಿವಿ ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ
ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಪ್ರತಿಯೊಬ್ಬರಿಗೂ ಆದರ್ಶ ಬೇಕು. ಆದರೆ ಆದರ್ಶದಂತೆ ನಡೆಯುವಲ್ಲಿ ಸೋಲುತ್ತಿದ್ದೇವೆ. ನುಡಿ ಮುಖ್ಯವಾಗದೆ ನಡೆ ಮುಖ್ಯವಾಗಬೇಕು. ಆದರ್ಶದ ದಾರಿಯಲ್ಲಿ ಸಾಗಿದರೆ ಮಾತ್ರ ಲಿಂಗವ ಪೂಜಿಸಿದ ಫಲ ಪಡೆಯಲು ಸಾಧ್ಯ. ವೈಚಾರಿಕ ಪ್ರಜ್ಞೆಗೆ ತಳಹದಿ ಆದರ್ಶದ ನಡೆ. ಇವನಾರವ, ಇವನಾರವ ಎನ್ನುವುದು ಮುಖ್ಯವಲ್ಲ; ಇವ ನಮ್ಮವ, ಇವ ನಮ್ಮವ ಎನ್ನುವುದು ಮುಖ್ಯ. ಮಾನುಷ್ಯ ಮಾತ್ರರೆಲ್ಲರೂ ನಮ್ಮವ ಎನ್ನುವ ಭಾವ ಬಲಗೊಳ್ಳಬೇಕು. ಶರಣರು ನೊಂದುಕೊಳ್ಳದ ಹಾಗೆ ನಮ್ಮ ನಡಾವಳಿಕೆಯನ್ನು ಬೆಳೆಸಿಕೊಳ್ಳಬೇಕು. ಎಲ್ಲಿಂದೆ ಬಂದೆ, ಎಲ್ಲಿಗೆ ಹೋಗುವೆ ಎನ್ನುವುದಕ್ಕಿಂತ ಇಲ್ಲಿರುವಾಗ ಏನು ಮಾಡಿದೆ ಎನ್ನುವುದು ಮುಖ್ಯ. ಕ್ರಿಮಿಕೀಟ, ಹುಳುಗಳಂತೆ ಬಾಳದೆ ಲೇಸೆನಿಸಕೊಂಡು ನಾಲ್ಕು ದಿನ ಬಾಳಿದರು ಸಾಕು. ಕಾಯಕ ಮಾಡಲಾಗದ ಕಾಯ ಬೇಡವೆಂದವರು ಮೋಳಿಗೆ ಮಾರಯ್ಯ. ಮಾರಯ್ಯ ಕಾಶ್ಮಿರದಲ್ಲಿ ರಾಜನಾಗಿದ್ದವರು. ಕಲ್ಯಾಣಕ್ಕೆ ಬಂದು ಕಟ್ಟಿಗೆ ಕಡಿದು ಮಾರಿ ಜೀವನ ಸಾಗಿಸಿದವರು. ಆದರೆ ಇಲ್ಲಿಯೂ ಅಷ್ಟೇ ಹಾಲು ಕುಡಿಯುವೆ, ಊಟ, ನಿದ್ರೆ ಮಾಡುವೆ. ಇದಕ್ಕಿಂತ ಹೆಚ್ಚಿಗೆ ಇದ್ದರೂ ಏನೂ ಫಲವಿಲ್ಲ. ಹೀಗಾಗಿ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ ಎಂದು ಕರೆಕೊಟ್ಟರು. ಸಂಪತ್ತಿನ ಹಿಂದೆ ಓಡುವ ಮುನ್ನ ಮಾರಯ್ಯನವರ ಮಾತನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹೊನ್ನು, ಹೆಣ್ಣು, ಮಣ್ಣು ಮಾಯೆಗಳಲ್ಲ ಮನದ ಮುಂದಣ ಆಸೆಯೇ ಮಾಯೆ ಎಂದು ಅಲ್ಲಮ ಪ್ರಭು ಹೇಳಿದರು. ಶರಣರು ತೋರಿಸಿಕೊಟ್ಟ ದಾರಿಯಲ್ಲಿ ನಾವು ನಡೆಯುವ ಸಂಕಲ್ಪ ಮಾಡಬೇಕು. ನಮಗ್ಯಾರಿಗೂ ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭುಗಳಾಗುವ ಯೋಗ್ಯತೆಯಿಲ್ಲ. ಆದರೆ ಅವರ ಹಾದಿಯಲ್ಲಿ ಸಾಗುವ ಪ್ರಯತ್ನ ಮಾಡುತ್ತಿದ್ದೇವೆ. ಬಟ್ಟೆಯಿಂದ ವ್ಯಕ್ತಿತ್ವವನ್ನು ಅಳೆಯದೆ; ಗುಣ-ಸ್ವಭಾವಗಳಿಂದ ವ್ಯಕ್ತಿತ್ವವನ್ನು ಅಳೆಯಬೇಕು. ಸಾರ್ಥಕ ಬದುಕನ್ನು ಎಂದಿನಿಂದ ಆರಂಭಿಸಿದ್ದೇವೆಯೋ ಅಂದಿನಿಂದಲೇ ನಮ್ಮ ವಯಸ್ಸು ಶುರುವಾಗುವುದು. ಮನಸ್ಸಿನ ಮೇಲೆ ಹತೋಟಿಯಿಲ್ಲದಿದ್ದರೆ ಸಾರ್ಥಕ ಬದುಕು ಸಾಧ್ಯವಿಲ್ಲ. ವಚನಗಳು ಎಲ್ಲ ವಿಷಯವನ್ನು ಒಳಗೊಂಡಿವೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ಎಲ್ಲ ಮಾಧ್ಯಮ, ಭಾಷೆಗಳಲ್ಲೂ ವಚನಗಳನ್ನು ಅಧ್ಯಯನಕ್ಕೆ ಇಡಬೇಕು ಎಂದರು.
`ಅಂಗದಿಂದ ಲಿಂಗದೆಡೆಗೆ’ ಕುರಿತಂತೆ ಅರವಿಂದ ಜತ್ತಿ ಮಾತನಾಡಿ 12 ನೆಯ ಶತಮಾನದಲ್ಲಿ ಕ್ರಾಂತಿಯಾದಾಗ ಶರಣರ ಕಲ್ಯಾಣವೆಂಬ ಪ್ರಣತೆ ಒಡೆದು ಬೆಳಕು ನಂದಿತ್ತು. ಅಂತಹ ಬೆಳಕು ಮತ್ತೆ ಬೆಳಗಲು ಪಂಡಿತಾರಾಧ್ಯ ಶ್ರೀಗಳು `ಮತ್ತೆ ಕಲ್ಯಾಣ’ ಅಭಿಯಾನವನ್ನು ಆಯೋಜಿಸಿದ್ದಾರೆ. ಶ್ರೀಗಳು ನೇರ, ನಿಷ್ಠುರವಾದಿಗಳು. ಯಾವುದೋ ವ್ಯಕ್ತಿಯನ್ನು ಧರ್ಮ, ಜಾತಿಗಳ ಆಧಾರದ ಮೇಲೆ ಗುರುತಿಸದೆ; ಇವ ನಮ್ಮವ, ಇವ ನಮ್ಮವ ಎನ್ನುವ ವಿಶಾಲ ಮನೋಭಾವ ಹೃದಯದಲ್ಲಿ ಬಂದರೆ ಅದೇ ಕಲ್ಯಾಣ. ಕೇಂದ್ರದ ಬಜೆಟ್ನಲ್ಲಿ ಬಸವಣ್ಣನ ಹೆಸರು ಪ್ರಸ್ತಾಪವಾಗಿದೆ. ಇಡೀ ರಾಷ್ಟ್ರವೇ ಬಸವಣ್ಣನ ತತ್ವಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದೆ. ಜಗತ್ತಿನಲ್ಲಿಯೇ ಜನಿಯನ್ ಡೆಮಾಕ್ರಸಿ ಎಂದರೆ ಬಸವಣ್ಣನ ಅನುಭವ ಮಂಟಪ. `ಶರಣ’ನಾಗುವುದು ಅಷ್ಟು ಸಲಭವಲ್ಲ; ನಡೆ-ನುಡಿಗಳು ಒಂದಾಗಬೇಕು. ಪ್ರತಿಯೊಬ್ಬನೂ ಶಿವಸ್ವರೂಪಿಯೆಂಬ ಭಾವನೆ ಮನದಲ್ಲಿ ಮೂಡಬೇಕು. ಪ್ರಾಣವಿಲ್ಲದ ಜೀವವಿಲ್ಲ. ನಾವು ಎಲ್ಲಿಂದ ಬಂದಿದ್ದೇವೆ, ಎಲ್ಲಿಗೆ ಹೋಗುತ್ತೇವೆ ಎನ್ನುವುದನ್ನು ತಿಳಿಯದೇ ಇದ್ದರೆ ಬದುಕು ವ್ಯರ್ಥ. ನಮ್ಮಲ್ಲಿರುವ ಮೂಲ ಚೈತನ್ಯವೇ ಲಿಂಗ. ಈ ಚೈತನ್ಯದ ಚಲನೆಯೇ ಜೀವನ ಚಕ್ರ. ಪ್ರತಿಯೊಬ್ಬರ ಹುಟ್ಟಿಗೆ ದೊಡ್ಡ ಕಾರಣವೇ ಇದೆ. `ಒಂದು ಎರಡಾದುದು ಹುಟ್ಟು, ಎರಡು ಒಂದಾದುದು ಸಾವು’ ಎಂದು ಬಸವಣ್ಣನವರು ತಿಳಿಯಪಡಿಸಿದ್ದಾರೆ. ತನು, ಮನ, ಘನ ಪ್ರತಿಯೊಬ್ಬರಿಗೂ ಇದೆ. ತನು ಮನದ ಮೇಲೆ ಮಾತ್ರ ನಮ್ಮ ಗಮನವಿದೆಯೇ ಹೊರತು ಘನದ ಮೇಲಿಲ್ಲ. ಲಿಂಗಜೀವಿಯಾದವನು ಘನದ ಕಡೆ ಗಮನಿಸಬೇಕು. ದೇಹದ ಕಡೆ ನೋಡದೆ ಘನದ ಕಡೆ ಗಮನವಿಡಬೇಕು. ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ಎನ್ನುವ ಅರಿವು ನಮಗಾಗಬೇಕು.
`ಶರಣರ ಅವಿಮುಕ್ತ ಸಮಾಜ ರಚನೆ’ ಕುರಿತಂತೆ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ ಬಸವಣ್ಣನ ಕಾರ್ಯಕ್ಷೇತ್ರ `ಕಲ್ಯಾಣ’ ಎಂದೆಂದಿಗೂ ಪವಿತ್ರಕ್ಷೇತ್ರ. ಅವರ ನೇತೃತ್ವದಲ್ಲಿ ರಚನೆಯಾದ ಸಮಾಜವೇ ಅವಿಮುಕ್ತ ಸಮಾಜ. ಸಾಮರಸ್ಯ, ನಿಸ್ವಾರ್ಥತೆಯೇ ಬಸವ ತತ್ವ ಸಂಸ್ಕೃತಿ. ಸಾಮರಸ್ಯ ಪ್ರತಿಯೊಬ್ಬರ ಹಕ್ಕಿನ ಸಂಪತ್ತು. ಬಸವ ಸಂಸ್ಕೃತಿಯಲ್ಲಿ ಸಮಾನತೆಯೇ ಮಂತ್ರ. ಜಗತ್ತಿನಲ್ಲಿ ಎಲ್ಲೆಲ್ಲಿಯೂ ಸಿಗದೇ ಇರುವ ಸ್ಥಾನ-ಮಾನ ಮಹಿಳೆಯರಿಗೆ 12ನೆಯ ಶತಮಾನದ ಶರಣರ ಕಾಲದಲ್ಲಿ ಸಿಕ್ಕಿತ್ತು. ಅವರು ಹೆಣ್ಣನ್ನು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದರು. ಪರಮಾತ್ಮನ ಸೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವವರು ತಾಯಂದಿರು. ತಾಯಂದಿರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಹೆಣ್ಣುಮಕ್ಕಳು ಉನ್ನತ ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಸ್ಥಾನಪಡೆದುಕೊಳ್ಳುವ ಮನಸ್ಸು ಮಾಡಬೇಕು. ಶರಣರದು ಅತ್ಯಂತ ವೈಜ್ಞಾನಿಕ ಧರ್ಮ. ಉಪವಾಸವಿರುವ ವ್ರತದಿಂದಾಗಿ ಹೆಣ್ಣುಮಕ್ಕಳ ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಿ ಪ್ರಾಣಕಳೆದುಕೊಳ್ಳುವ ಸ್ಥಿತಿಗೆ ಬರುತ್ತಿದ್ದಾರೆ. ಶರಣರು ಅರ್ಚನೆ ಪೂಜನೆ ನೇಮವಲ್ಲ; ಪರಧನ, ಪರಸ್ತ್ರೀ, ಪರದೈವಂಗಳಿಗೆ ಎಳೆಸದಿಪ್ಪುದೇ ವ್ರತ ಎಂದರು. ಅಂಥ ವ್ರತ ನಮ್ಮದಾಗಬೇಕು. ನಮ್ಮ ಅಂತರಂಗದಲ್ಲಿ ಅದ್ಭುತ ಶಕ್ತಿಯಿದೆ. ಈ ಶಕ್ತಿಯನ್ನು ಬಳಸಿಕೊಂಡರೆ ನಾವು ಎಲ್ಲ ಭಯಗಳಿಂದ ಮುಕ್ತರಾಗುವೆವು. ಕೆಲಸಗಳ ಮೌಲ್ಯಗಳೆಲ್ಲವೂ ಒಂದೇ. ಬದುಕು ಆಡಂಬರವಾಗಬಾರದು ಎಂದರು.
ಡಾ. ಸೈಯ್ಯದ್ ತಾಜುದ್ದೀನ್ ಅಹ್ಮದ್ ಖಾದ್ರಿ ಸಜ್ಜಾದ್ ನಷೀನ್ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅನೇಕ ಸಾಧು-ಸಂತರು ತ್ಯಾಗ ಬಲಿದಾನ ನೀಡಿದ್ದಾರೆ. ಸಬ್ ಕೆ ಸಾಥ್, ಸಬ್ ಕೆ ವಿಕಾಸ್ ಜೊತೆಗೆ ಸಬ್ ಕೆ ವಿಶ್ವಾಸ್ ಕೂಡ ಆಗಬೇಕು. ಅದರಂತೆ ದೇಶಕ್ಕೆ ಆಪತ್ತು ಬಂದಾಗ ನಾವೆಲ್ಲ ನಮ್ಮ ನಮ್ಮ ಸಂಪ್ರದಾಯ, ರೀತಿನೀತಿಗಳನ್ನು ಬಿಟ್ಟು ದೇಶಕ್ಕಾಗಿ ಕಟಿಬದ್ಧರಾಗೋಣ. ಹೊರಗಿನ ವಿಚಿದ್ರಕಾರಿ ಶಕ್ತಿಗಳು ನಮ್ಮ ದೇಶವನ್ನು ಆತಂಕಕ್ಕೆ ದೂಡುತ್ತಿವೆ. ಇಂತಹ ಸಂದರ್ಭದಲ್ಲಿ ಹಿಂದು, ಮುಸ್ಲಿಮ್, ಕ್ರೈಸ್ತ ಮೊದಲಾದವರೆಲ್ಲ ದೇಶ ರಕ್ಷಣೆಗೆ ಕಟಿಬದ್ಧರಾಗೋಣ ಎಂದರು.
ರೆವರೆಂಡ್ ಆನಂದ ಹೊಸೂರು ಮಾತನಾಡಿ ಬಸವಣ್ಣ ಜಾತಿಯನ್ನು ಹೋಗಲಾಡಿಸು ಅನುಭವ ಮಂಟಪ ಕಟ್ಟಿದರು. ಅವರು ಬಿಟ್ಟು ಹೋದ ವಚನ ಸಾಹಿತ್ಯ ಅನುಕರಣಿಯವಾದುದು. ಈ ವಚನ ಸಾಹಿತ್ಯ ಒಂದು ಜಾತಿ, ಧರ್ಮಕ್ಕೆ ಮಾತ್ರವಲ್ಲ; ಎಲ್ಲರಿಗೂ ಬೇಕು. ಬಸವಣ್ಣನವರ ಕನಸನ್ನು ನನಸು ಮಾಡಲು ಜಾತಿ, ಧರ್ಮ, ಮತ, ಪಂಥಗಳೆನ್ನದೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಅಧಿಕಾರಷಾಹಿಯಲ್ಲೂ ಜಾತಿಯತೆ ವಿಜೃಂಭಿಸುತ್ತಿರುವುದು ದುರದೃಷ್ಟಕರ ಸಂಗತಿ. ತಿನ್ನುವ ಅನ್ನಕ್ಕೂ ವಿಷ ಬೆರೆಸುವ ಮಟ್ಟಕ್ಕೆ ಅಮಾನವೀಯರಾಗುತ್ತಿದ್ದೇವೆ. ಇಂತಹ ಹೊತ್ತಿನಲ್ಲಿ ಮತ್ತೆ ಕಲ್ಯಾಣ ಅತ್ಯಂತ ಅವಶ್ಯಕವಾದುದು ಎಂದರು.
ಡಾ. ಮುಜಪ್ಫರ್ ಅಸ್ಸಾದಿ ಮಾತನಾಡಿ ರಾಜಕೀಯಶಾಸ್ತ್ರದಲ್ಲೂ ವಚನ ಸಾಹಿತ್ಯಕ್ಕೆ ಆದ್ಯತೆ ಇರಬೇಕು. ಜಾಗತಿಕ ಮಾನವ ಹಕ್ಕುಗಳ ಪ್ರತಿಪಾದಕರು ಬಸವಣ್ಣ. ನಾಗರೀಕತೆ, ಆಧುನಿಕತೆ, ಜಾಗತೀಕರಣ, ಸಾಂಸ್ಕೃತಿಕ ಹಿಂಸೆಗಳು ಇಂದು ತೀವ್ರ ಸ್ವರೂಪವನ್ನು ಪಡೆದಿವೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ಥ್ಯಸೇನ್ ನ ಅರ್ಥಶಾಸ್ತ್ರದಲ್ಲಿ ಬಸವಣ್ಣನ ಕೊಡುಗೆಯ ಬಗ್ಗೆ ಪ್ರಸ್ತಾಪವೇ ಇಲ್ಲ. ಇದನ್ನು ನಾವು ವಿರೋಧಿಸಬೇಕು. ಹೊಸ ಅಹಿಂಸಾ ಸಿದ್ಧಾಂತವನ್ನು ನಾವಿಂದು ಕಟ್ಟಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಾಬು ಭಂಡಾರಿಗಲ್ ಮಾತನಾಡಿ ಕನ್ನಡ ನೆಲದಲ್ಲಿ ಅನೇಕ ಚಳುವಳಿಗಳು ನಡೆದಿವೆ. ಆದರೆ ವಚನಕಾರರ ಚಳುವಳಿ ಜಗತ್ತಿಗೇ ಮಾದರಿಯಾದುದು. ಅದೇ ಮಾದರಿಯಲ್ಲಿ `ಮತ್ತೆ ಕಲ್ಯಾಣ’ ನಾಡಿನೆಲ್ಲೆಡೆ ಪಸರಿಸಲಿ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಅಂಬಣ್ಣ ಅರೋಲಿಕರ್ ಸ್ವಾಗತಿಸಿದರೆ, ಗಿರಿಜಾ ರಜಶೇಖರ್ ಮತ್ತು ಮಂಜುನಾಥ ಐಲಿ ಕಾರ್ಯಕ್ರಮ ನಿರ್ವಹಿಸಿ ಮೋಕ್ಷಮ್ಮ ವಂದಿಸಿದರು. ತೀನ್ ಕಂದೀಲ ವೃತ್ತದಿಂದ ಸಾಮರಸ್ಯ ನಡಿಗೆ ಆರಂಭವಾಯಿತು. ವಿವಿಧ ಧರ್ಮದ ಮುಖಂಡರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು, ಕಲಾತಂಡಗಳು ಶರಣರ ಸ್ತಬ್ಧ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದ ಜೊತೆ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರವನ್ನು ತಲುಪಿದರು. ವೇದಿಕೆಯ ಮೇಲೆ ವಿವಿಧ ಧರ್ಮದ ಮುಖಂಡರು ಉಪಸ್ಥಿತರಿದ್ದರು.
- ಹೆಚ್ ಎಸ್ ದ್ಯಾಮೇಶ್
ವಿದ್ಯಾರ್ಥಿಗಳೊಂದಿಗೆ ಸಂವಾದ
ಆಗಸ್ಟ್ 17, ರಾಯಚೂರು; `ಮತ್ತೆ ಕಲ್ಯಾಣ’ದ ನಿಮಿತ್ತ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತ ಇಂದಿನ ವಿದ್ಯಾವಂತರಿಂದಲೇ ಜಗತ್ತಿಗೆ ಬಹುದೊಡ್ಡ ಹಾನಿ ಆಗ್ತಾ ಇದೆ. ನಾವು ಹೆಚ್ಚು ಹೆಚ್ಚು ಶಿಕ್ಷಣ ಪಡೆದ ಹಾಗೆ ಹೆಚ್ಚು ಹೆಚ್ಚು ಭ್ರಷ್ಟರಾಗುತ್ತಿದ್ದೇವೆ. ಹಿಂದೆ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕೆ ನೆರವಾಗುವ ಶಿಕ್ಷಣ ದೊರೆಯುತ್ತಿತ್ತು. ದೇಹ, ಮನಸ್ಸು, ಬುದ್ಧಿಗೆ ಚೈತನ್ಯ ದೊರೆಯುತ್ತಿತ್ತು. ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು. ಕೇವಲ ಪದವಿ ಪಡೆದು ಉದ್ಯೋಗ ಮಾಡುವುದಕ್ಕಷ್ಟೇ ಶಿಕ್ಷಣ ಅಲ್ಲ. ವಿದ್ಯಾರ್ಥಿಗಳಿಗೆ ವ್ಯಾವಹಾರಿಕ, ಆಧ್ಯಾತ್ಮಕ ಮತ್ತು ನೈತಿಕ ಶಿಕ್ಷಣ ನೀಡಬೇಕು. 12 ನೆಯ ಶತಮಾನದ ಶರಣರ `ಅನುಭವ ಮಂಟಪ’ದಲ್ಲಿ ಮನೋಬಲ, ಆತ್ಮವಿಶ್ವಾಸ, ಧೀಃಶಕ್ತಿಯನ್ನು ಬೆಳೆಸುವ ಕೆಲಸ ನಡೆಯುತ್ತಿತ್ತು. ಸಮಾಜದಲ್ಲಿ ತಲೆಎತ್ತಿ ಬದುಕುವಂಥ ಅನೌಪಚಾರಿಕ ಶಿಕ್ಷಣ ದೊರೆಯುತ್ತಿತ್ತು. ಎಲ್ಲ ಕ್ಷೇತ್ರಗಳಲ್ಲಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದನ್ನು ಕಾಣುತ್ತೇವೆ. ಕಾಯಕ ಶ್ರದ್ಧೆ, ದಾಸೋಹ ಪ್ರಜ್ಞೆ, ಪೂಜಾ ವಿಧಾನ ಶಿಕ್ಷಣದ ಮೂಲಕ ಆಗಬೇಕಾಗಿದೆ. ದುಡಿಯದೇ ಧನ ಸಂಪಾದಿಸುವ ವ್ಯಕ್ತಿಗೆ ಮಾನ್ಯತೆ ಹೆಚ್ಚು ದೊರೆಯುತ್ತಿದೆ. ಇದನ್ನು ಹೊಗಲಾಡಿಸಿ ಕಾಯಕ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು. ಶರಣರು ಕಾಯಕ ಶ್ರದ್ಧೆಗೆ ವಿಶೇಷ ಹೊತ್ತು ನೀಡಿದ್ದರು. ಗುರು, ಲಿಂಗ, ಜಂಗಮ ಮುಂದಿದ್ದಡೂ ಕಾಯಕ ಬಿಡಬಾರದೆನ್ನುವ ಸಂಕಲ್ಪ ಅವರದ್ದಾಗಿತ್ತು. ದಾನ ಬೇರೆ, ದಾಸೋಹ ಬೇರೆ. ದಾನ ಕೊಡುವ ಶಕ್ತಿ ಇರುವುದು ದೇವರಿಗೆ. ದಾಸೋಹ ಕೊಡುವ ಶಕ್ತಿ ಇರುವುದು ನರರಿಗೆ. ಈ ಹಿನ್ನೆಲೆಯಲ್ಲಿ ದೇವರ ದಾಸಿಮಯ್ಯನವರು `ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ ಎಂದಿರುವುದು. ಗುಡಿಗೆ ಹೋಗಿ ಸ್ಥಾವರವನ್ನ ಪೂಜಿಸುವುದಕ್ಕಿಂತ ದೇಹವನ್ನೇ ದೇವಾಲಯ ಮಾಡಿಕೊಂಡು ನಮ್ಮೊಳಗಿರುವ ಶಿವಚೈತನ್ಯದ ಮೂಲಕ ಅಂಗೈಯಲ್ಲಿ ಲಿಂಗವನ್ನು ಪೂಜೆ ಮಾಡಿಕೊಳ್ಳುವ ಬಗೆಯನ್ನು ಶರಣರು ತಿಳಿಸಿದ್ದಾರೆ. ಜನ ಅನೇಕ ಮೌಢ್ಯಗಳಿಗೆ ತುತ್ತಾಗಿ ಬದುಕನ್ನೇ ನರಕ ಮಾಡಿಕೊಳ್ಳುತ್ತಿದ್ದಾರೆ. ಈ ಮೌಢ್ಯದಿಂದ ವಿದ್ಯಾರ್ಥಿಗಳು ಹೊರ ಬರಬೇಕು. ದೇವರನ್ನು ಕಾಣಲು ಶ್ರದ್ಧೆ ಮತ್ತು ಗಟ್ಟಿತನ ಬೇಕು. ನೈತಿಕ ಮೌಲ್ಯ ಕುಸಿತಕ್ಕೆ ಕಾರಣ ಸಂಪತ್ತಿನ ಸಂಗ್ರಹದ ಮೋಹ. ಬಸವಾದಿ ಶಿವಶರಣರು ಸಮಾಜದಲ್ಲಿದ್ದ ಅಸಮಾನತೆಗಳನ್ನು ನಿವಾರಣೆ ಮಾಡುವ ಸಲುವಾಗಿಯೇ ಏಕದೇವೋಪಾಸನೆಯನ್ನು ಜಾರಿಗೆ ತಂದರು. ಹಿಂದುಳಿದ, ತುಳಿತಕ್ಕೆ ಒಳಗಾದ ದೀನದಲಿತರಿಗ ಆರ್ಥಿಕ ಸ್ಥಾನಮಾನದ ಜೊತೆಗೆ ಸಾಮಾಜಿಕ ಸ್ಥಾನಮಾನ ಸಿಗುವ ತನಕ ಮೀಸಲಾತಿ ಬೇಕು ಎಂದರು.
ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಉತ್ತರಿಸುತ್ತ ವಿದ್ಯಾರ್ಥಿಗಳ ಮನಸ್ಸಿನಲ್ಲಿರುವ ಇಂದು ಅನೇಕ ಗೊಂದಲಗಳಿವೆ. ಅವುಗಳನ್ನು ನಿವಾರಣೆ ಮಾಡಲು `ಮತ್ತೆ ಕಲ್ಯಾಣ’ ಕಾರ್ಯಕ್ರಮವನ್ನು ಪೂಜ್ಯರು ಹಮ್ಮಿಕೊಂಡಿದ್ದಾರೆ. ದೇವರು ನಿರಾಕಾರ ಮತ್ತು ಅಗೋಚರ. ಈ ಚೈತನ್ಯವನ್ನು ಕಾಣಲು ಶರಣರು ಅಂಗೈಯಲ್ಲಿ ಲಿಂಗವನ್ನು ಕೊಟ್ಟರು. ಇಡೀ ಭಾರತ ಸ್ವಚ್ಛ ಭಾರತ ಅಭಿಯಾನದ ಕಡೆ ಹೋಗ್ತಾ ಇದೆ. ಆದ್ರೆ ಬಸವಣ್ಣನವರ ಆಶಯದಂತೆ ಸ್ವಚ್ಛ ಭಾರತ ಅಭಿಯಾನ ಆಗುತ್ತಿಲ್ಲ. ಕೇವಲ ಬಾಹ್ಯವಾಗಿ ಸ್ವಚ್ಛವಾದರೆ ಸಾಲದು; ನೈತಿಕ ಮೌಲ್ಯಗಳೊಂದಿಗೆ ಅಂತರಂಗ ಶುದ್ಧಿಯೂ ಆಗಬೇಕು. ಅಂಗಕ್ಕೆ ಲಿಂಗಬೇಕು, ಲಿಂಗಕ್ಕೆ ಅಂಗಬೇಕು. ನಮ್ಮೊಳಗಿರುವ ಚೈತನ್ಯವನ್ನು ಹೊರಗೆಡುವುದೇ ಮತ್ತೆ ಕಲ್ಯಾಣ ಅಭಿಯಾನದ ಉದ್ದೇಶ. ನಾವೆಲ್ಲರೂ ಬೇರೆಯವರ ಹತ್ತಿರ ಚಾಟ್ ಮಾಡುತ್ತೇವೆ. ಆದರೆ ನನ್ನ ಮನದೊಡೆಯ ಭಗವಂತನ ಜೊತೆ ಯಾರೂ ಚಾಟ್ ಮಾಡುತ್ತಿಲ್ಲ. ಆ ಮನದೊಡೆಯನ ಜೊತೆ ಚಾಟ್ ಮಾಡವುದೇ ಇಷ್ಟಲಿಂಗಪೂಜೆ ಎಂದರು.
ವಿದ್ಯಾರ್ಥಿಗಳ ಕೆಲ ಪ್ರಶ್ನೆಗಳಿಗೆ ಶಿವ ಸಂಚಾರದ ಕಲಾವಿದರು ವಚನಗಳನ್ನು ಹಾಡುವುದರ ಮೂಲಕ ಉತ್ತರ ನೀಡುತ್ತಿದ್ದುದು ವಿಶೇಷವಾಗಿತ್ತು.
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು :
• ಬಾಲ್ಯದಿಂದಲೂ ನಮ್ಮ ಪೋಷಕರು ದೇವರಿದ್ದಾನೆ ಎಂದು ಹೇಳುತ್ತಾರೆ. ಈ ವಿಜ್ಞಾನ ಯುಗದಲ್ಲೂ ದೇವರಿದ್ದಾನೆಯೇ?
• ಮನುಷ್ಯ ಯಾವಾಗ ಸಂತೋಷಿಯಾಗಿರುತ್ತಾನೆ?
• ಇಂದು ನೈತಿಕ ಮೌಲ್ಯದ ಕೊರತೆಗೆ ಕಾರಣವೇನು? ಇದಕ್ಕೆ ಪರಿಹಾರವೇನು?
• ಪೂಜೆ ಬೇಡ ಅಂದ ಮೇಲೆ ಕೈಯಲ್ಲಿ ಲಿಂಗ ಇಟ್ಟಕೊಂಡು ಪೂಜೆ ಮಾಡುವುದು ಎಷ್ಟು ಸರಿ?
• ಲಿಂಗಾಯತ ಬೇರೆ ವೀರಶೈವ ಬೇರೆ ಅಂತ ಜಾತಿಯನ್ನು ಎತ್ತಿಹಿಡಿಯುತ್ತೀರಿ. ನೀವೇ ಹೀಗೆ ಮಾಡಿದರೆ ಜನಸಾಮಾನ್ಯರ ಸ್ಥಿತಿಯೇನು?
• ನಮ್ಮ ಜೀವನವನ್ನು ಅಭಿವೃದ್ದಿಗೊಳಿಸುವಲ್ಲಿ ಶರಣರ ವಿಚಾರಗಳು ಹೇಗೆ ಸಹಕಾರಿಯಾಗಿವೆ?
- ಹೆಚ್ ಎಸ್ ದ್ಯಾಮೇಶ್
9449649850

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)