ಆಗಸ್ಟ್ ೧೬ ಶುಕ್ರವಾರ, ಬಳ್ಳಾರಿ
ಬಳ್ಳಾರಿಯಲ್ಲಿ 16ನೇ ದಿನದ ಮತ್ತೆ ಕಲ್ಯಾಣ ಆಂದೋಲನ.
ಮತ್ತೆ ಕಲ್ಯಾಣ ಅಭಿಯಾನದಲ್ಲಿ 'ಸಾರ್ವಜನಿಕ ಸಮಾವೇಶ' ಅನನ್ಯ ಟಿವಿ-ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ
ಇಲ್ಲಿನ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಭಾರತ ಬಹುತ್ವದ ದೇಶ. ಆದರೆ ಇಂದು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಳ್ಳುವುದು ತುಂಬ ಕಷ್ಟಕರವಾಗುತ್ತಿದೆ. ಧರ್ಮದಲ್ಲೂ ಕೊಳ್ಳುಬಾಕು ಸಂಸ್ಕೃತಿ ಕಾಲಿಟ್ಟದೆ. ಶಿಬಿರಗಳ ಮೂಲಕ ಆತ್ಮಾಸಾಕ್ಷಾತ್ಕರ ಸಾಧ್ಯವಿಲ್ಲ. ಅಂತರಂಗ ಶುದ್ಧಿಯಾಗದೆ; ಆತ್ಮಾಸಾಕ್ಷಾತ್ಕರ ಸಾಧ್ಯವಿಲ್ಲ. ಅನೇಕ ಪ್ರಾಣಿ-ಪಕ್ಷಿಗಳಿಗೆ ಮನುಷ್ಯನಿಗಿಂತ ಅದ್ಭುತ ಜ್ಞಾನವಿದೆ. ಆದರೆ ಅವುಗಳಿಗೆ ತನ್ನ ತಾನಾರೆಂದು ತಿಳಿಯುವ ಜ್ಞಾನವಿಲ್ಲ. ತನ್ನ ತಾನಾರೆಂದು ತಿಳಿಸುವುದೇ ನಿಜವಾದ ಧರ್ಮ. ಧರ್ಮ ತನ್ನೊಳಗೆ ತಾನೇ ಸಾಧನೆ ಮಾಡುವಂಥದ್ದು. ಧರ್ಮ ಅಂತರಂಗದ ಕೃಷಿಯಾಗಬೇಕೇ ಹೊರತು; ಬಾಹ್ಯವಾಗಿ ತೋರುವ ಆಡಂಬರವಾಗಬಾರದು. ಶರಣರ ದೃಷ್ಟಿಯಲ್ಲಿ ಸ್ವರ್ಗ-ನರಕಗಳು ಬೇರೆ ಎಲ್ಲಿಯೂ ಇಲ್ಲ. `ಅಯ್ಯ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’. ಯಾವ ಧರ್ಮಗಳೂ ಮೇಲೂ ಅಲ್ಲ ಕೀಳೂ ಅಲ್ಲ. ಶ್ರೇಷ್ಠತೆ-ಕನಿಷ್ಠತೆ ಬರುವಂಥದ್ದು ಧರ್ಮದ ಅನುಯಾಯಿಗಳ ನಡವಳಿಕೆಗಳಿಂದ. ಮತ್ತೆ ಕಲ್ಯಾಣದಲ್ಲಿ ಎಲ್ಲ ಧರ್ಮಿಯರೂ ಇದ್ದು, ಇದು ನಮ್ಮದು ಎಂದು ಭಾಗವಹಿಸುತ್ತಿದ್ದಾರೆ. ಇಂಥ ಸೌಹಾರ್ಧತೆ ಎಲ್ಲ ಕಾಲಕ್ಕೂ ಇರಬೇಕೇ ಹೊರತು; ನಟನೆಯಾಗಬಾರದು. ಮಾನವೀಯತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಧರ್ಮೀಯರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಶರಣರು ಕಾಲ, ಕಾಸು, ಕಾಯಕಕ್ಕೆ ಮಹತ್ವ ಕೊಟ್ಟಿದ್ದರು. ಇದೇ ಮಹತ್ವವನ್ನು ನಾವೂ ನಮ್ಮ ಬದುಕಿನಲ್ಲಿ ಕೊಟ್ಟರೆ ತನ್ನಿಂದ ತಾನೇ ಅಭಿವೃದ್ಧಿ ಹೊಂದುವೆವು. `ಮತ್ತೆ ಕಲ್ಯಾಣ’ ಸಂಭ್ರಮಿಸುವ, ಪೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮವಲ್ಲ; ಅರಿವನ್ನು ಮೈಗೂಡಿಸಿಕೊಳ್ಳುವ ಕಾರ್ಯಕ್ರಮ. ಅಜ್ಞಾನ, ಜಾತೀಯತೆ, ಮೌಢ್ಯ, ಭ್ರಷ್ಟಾಚಾರ, ಅತಿವೃಷ್ಟಿ, ಅನಾವೃಷ್ಟಿಯಂಥ ಸಮಸ್ಯೆಗಳನ್ನು ವಚನಗಳ ಅರಿವಿನಲ್ಲಿ ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಇಲ್ಲಿನ ಸಹಮತ ವೇದಿಕೆ ತನ್ನ ಸಂಘಟನೆಯನ್ನು ಮುಂದುವರಿಸಿ ಜಾತಿ, ಕೋಮು ಗಲಭೆಗಳಾಗದೆ ಸಾಮರಸ್ಯವನ್ನು ಮೂಡಿಸುವ ಕಾರ್ಯ ಮಾಡಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಪ್ರಭುಸ್ವಾಮಿಗಳು ಮಾತನಾಡಿ ಸರ್ವ ಧರ್ಮ ಸಮನ್ವಯ ಸಾರುವ ಕೆಲಸ ಮತ್ತೆ ಕಲ್ಯಾಣದ್ದು. ಬಳ್ಳಾರಿಯಲ್ಲಿ ಕನ್ನಡ – ತೆಲಗು ಭಾಷಾ ಸಾಮರಸ್ಯವಿದೆ. ಬುದ್ಧ, ಪೈಗಂಬರ್, ಏಸು ಮುಂತಾದ ಎಲ್ಲರೂ ಕಲ್ಯಾಣವನ್ನು ಬಯಸಿದ್ದರು. ಸಾಧು ಸಂತರು ಜಾತಿ, ಮತ, ದೇಶ, ಭಾಷೆಗಳೆನ್ನುವ ಸಂಕುಚಿತತೆಯನ್ನು ತೊಡೆಯಬೇಕೆಂದರು. ಧರ್ಮಗಳು ಆಚರಣೆಯಲ್ಲಿ ಅಲ್ಲ; ನಡೆಯಲ್ಲಿ ಇರಬೇಕು. ಧರ್ಮಗಳ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ತುರ್ತು. ಧರ್ಮಗಳ ಬಗ್ಗೆ ವಿತಂಡವಾದ ಬೇಡ. ಬಸವಣ್ಣ ಅಂದ್ರೆ ಕನ್ನಡ; ಕನ್ನಡ ಅಂದ್ರೆ ಬಸವಣ್ಣ. ದೇವರ ಭಾಷೆ ಸಂಸ್ಕೃತ. ಸಾಮಾನ್ಯರ ಭಾಷೆ ಕನ್ನಡ. ಇಂಥ ಕನ್ನಡವನ್ನೇ ದೇವ ಬಾಷೆಯಾಗಿಸಿದವರು ಶರಣರು. ಶರಣರ ಕಾಯಕ-ದಾಸೋಹ ಪ್ರಜ್ಞೆ ನಮಗೆ ಬಂದರೆ ಜಗತ್ತಿನಲ್ಲಿಯೇ ಬಡತನವಿರುವುದಿಲ್ಲ. ಜಾತಿ ಮನೆಯೊಳಗಿರಬೇಕೇ ಹೊರತು ಸಾರ್ವಜನಿಕವಾಗಿ ಬೇಡ ಎಂದರು.
ಕನ್ನಡದ ವಚನ ಧರ್ಮ ಕುರಿತಂತೆ ಪ್ರೊ ಎಸ್ ಜಿ ಸಿದ್ಧರಾಮಯ್ಯ ಮಾತನಾಡಿ ಇಂದು ಯುವ ಜನತೆಯೊಂದಿಗೆ ಮಾತುಕತೆ ಕಡಿಮೆಯಾಗಿರುವುದರಿಂದಲೇ ಯುವಕರು ದಿಕ್ಕುತಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಕಲ್ಯಾಣ ಅರಿವಿನ ಆಂದೋಲನವಾಗಿದೆ. ಕುಟುಂಬದ ಚರಿತ್ರೆಯೇ ಗೊತ್ತಿಲ್ಲದಿದ್ದಾಗ ಇತಿಹಾಸದ ಬಗ್ಗೆ ಸುಳ್ಳನ್ನು ನಂಬಿಸಿ ಭ್ರಮೆಯೊಳಗೆ ಬದುಕುವಂತಾಗಿದೆ. ಚಾತುರ್ವಣಗಳು ಇನ್ನಿಲ್ಲದ ಅಸಮಾನತೆಗಳನ್ನು ಸೃಷ್ಟಿಸಿದ್ದವು. ಇವುಗಳನ್ನು ವಿರೋಧಿಸಿಯೇ ಬೌದ್ಧ, ಜೈನ ಮುಂತಾದ ಧರ್ಮಗಳು ಹುಟ್ಟಿಕೊಂಡವು. ಬಸವ ಧರ್ಮ ಪ್ರಜಾಸತ್ತಾತ್ಮಕವಾದುದು. ಶರಣ ಚಳುವಳಿಯ ಉಪ ಉತ್ಪನ್ನವಾಗಿ ಹುಟ್ಟಿಕೊಂಡದ್ದೇ ವಚನ ಸಾಹಿತ್ಯ. ಸಾಂಸ್ಕೃತಿಕ, ಧಾರ್ಮಿಕ ಹೊಸಹತುವಿನ ಹಿಡಿತದಿಂದ ಇಂದಿಗೂ ಬಿಡುಗಡೆ ಸಾಧ್ಯವಾಗುತ್ತಿಲ್ಲ. ಬಸವಾದಿ ಶರಣರ ಹೋರಾಟಕ್ಕೆ ವಚನಗಳೇ ಪ್ರಮಾಣ. ವಚನ ಧರ್ಮ ಸ್ಪಷ್ಟವಾದ ಇತಿಹಾಸವನ್ನೊಳಗೊಂಡ ಧರ್ಮ. ಬಸವಣ್ಣನೂ ಅವಮಾನ, ನೋವು, ಸಂಕಟಗಳನ್ನು ಅನುಭವಿಸಿಯೇ ಚಾತುರ್ವಣ ಧರ್ಮದಿಂದ ಹೊರ ಬಂದು ಎಲ್ಲರನ್ನೂ ಒಳಗೊಳ್ಳುವ ಧರ್ಮವೊಂದನ್ನು ಹುಟ್ಟುಹಾಕಿದರು. ನಾನು ದಾಸ-ದಾಸಿಯರ ಸಂಗಕ್ಕೆ ಹುಟ್ಟಿದ ಮಗ ಎನ್ನುವ ಮೂಲಕ ತಮ್ಮನ್ನು ತಾವು ಅಪವರ್ಣೀಕರಣಕ್ಕೆ ಒಳಗು ಮಾಡಿಕೊಂಡರು. ಗಾಂಧೀಜಿಯ ಸರಳ ಜೀವನದ ಹಿನ್ನೆಲೆಯಲ್ಲಿಯೇ ಇಡೀ ದೇಶ ಅವರನ್ನು ಮಹಾತ್ಮ ಎಂದು ಒಪ್ಪಿಕೊಂಡಿರುವುದು. ನಾವು ಮಾತನಾಡುವ ಕನ್ನಡ ಭಾಷೆಯೊಳಗೆ ಹುಟ್ಟಿದ ಧರ್ಮವೇ ವಚನ ಧರ್ಮ. ನಮ್ಮನ್ನು ಜ್ಞಾನಿಗಳನ್ನಾಗಿ, ಅರಿವಿಗೆ ತೆರೆದುಕೊಳ್ಳುವಂತೆ ಮಾಡಿದ ಧರ್ಮ ವಚನ ಧರ್ಮ. ಜ್ಞಾನ ಕ್ರಿಯಾತ್ಮಕವಾದುದು. ಶರಣರ ಶಕ್ತಿ ಇರುವುದೇ ಅರಿವನ್ನು ಕ್ರಿಯೆಗೆ ಒಳಪಡಿಸುವಲ್ಲಿ. ಸತ್ಯ ಶುದ್ಧ ಕಾಯಕ-ದಾಸೋಹಗಳು ವಚನಕಾರರು ನೀಡಿದ ಅಪೂರ್ವ ಕೊಡುಗೆ. `ಕಾಯಕವೇ ಕೈಲಾಸ’ ಎನ್ನುವ ಮೂಲಕ ಮಾಡುವ ಕಾಯಕದಲ್ಲಿಯೇ ದೇವರನ್ನು ಕಂಡವರು. ವೈದಿಕರ ದಾನಕ್ಕೂ ಶರಣ ದಾಸೋಹಕ್ಕೂ ಸಾಕಷ್ಟು ವ್ಯತ್ಯಾವಿದೆ. ದಾನದಲ್ಲಿ ಮೇಲರಿಮೆ-ಕೀಳರಿಮೆಗಳಿವೆ. ಆದರೆ ದಾಸೋಹದಲ್ಲಿ ಇಬ್ಬರೂ ಸಮಾನ. ವಚನ ಧರ್ಮ ಅರಿವಿನ ಬೆಳಕು ನೀಡಿ ಬಾಳುವಂತೆ ಮಾಡುವುದು. ಕಾಯಕದಿಂದ ಯಾರಿಗೂ ರಿಯಾಯಿತಿ ಇರಲಿಲ್ಲ. `ಸಮಗ್ರಾಹಕ’ ಎನ್ನುವ ಮೂಲಕ ವೇಶ್ಯಾ ವೃತ್ತಿಗೂ ಘನತೆ ತಂದುಕೊಟ್ಟವರು ಶರಣರು. ವೇಶ್ಯರಿಗೂ `ಪುಣ್ಯಸ್ತ್ರೀ’ರನ್ನಾಗಿಸಿದುದು ವಚನ ಚಳುವಳಿಯ ದೊಡ್ಡ ಪಲ್ಲಟ ಎಂದರು.
ವಚನಕಾರರ ಆರ್ಥಿಕ ಚಿಂತನೆ ಕುರಿತಂತೆ ಜಯಶ್ರೀ ಸುಕಾಲೆ ಮಾತನಾಡಿ ಬಸವಣ್ಣನವರ ನೇತೃತ್ವದಲ್ಲಿ ಶರಣರು ಕಾಯಕತತ್ವವನ್ನು ಮೈಗೂಡಿಸಿಕೊಂಡು ಉತ್ಪಾದಕ ಶಕ್ತಿಯನ್ನು ಹೆಚ್ಚಿಸಿದರು. ದೇಶದ ಖಜಾನೆ ತುಂಬುವುದು ಆ ದೇಶದ ಜನರ ಕಾಯಕ ಪ್ರಜ್ಞೆಯಿಂದ. ಕಾಯಕದಲ್ಲಿ ಯಾವುದೂ ಮೇಲಲ್ಲ; ಕೀಳಲ್ಲ. ಬಸವಣ್ಣ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ. ಸಾಲ ಕೊಡುವುದಾದರೆ ಶರಣರಿಗೆ ಕೊಡಿ. ಒಂದು ವೇಳೆ ಆ ಸಾಲ ವಾಪಸ್ ಬಂದರೂ ಸರಿ ಬರದಿದ್ದರೂ ಸರಿ ಎನ್ನುವ ನಿಲುವನ್ನು ಬಸವಣ್ಣ ಹೊಂದಿದ್ದರು. ಜಗತ್ತಿನ ಎಲ್ಲ ಅರ್ಥಶಾಸ್ತ್ರಗಳು ಸೋತರೂ ಶರಣರ ಅರ್ಥಶಾಸ್ತ್ರ ಸೋಲಲಿಲ್ಲ. `ಮನಶುದ್ಧವಿಲ್ಲದವರಿಗೆ ದ್ರವ್ಯದ ಬಡತನವಲ್ಲದೆ ಸತ್ಯ ಶುದ್ಧ ಕಾಯಕ ಮಾಡುವವರಿಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು’ ಎನ್ನುವ ಸತ್ಯಕ್ಕನ ಮಾತು ವಚನಕಾರರ ಅರ್ಥಶಾಸ್ತ್ರಕ್ಕೆ ಹಿಡಿದ ಕನ್ನಡಿಯಾಗಿತ್ತು. ಶರಣರು ಸ್ವತಂತ್ರ ಧೀರರು. ವಚನಕಾರರ ಕಾಯಕ-ದಾಸೋಹ ಪ್ರಜ್ಞೆ ಇಂದಿನವರಿಗೆ ಬಂದರೆ ಜಾಗತಿಕ ಆರ್ಥಿಕ ಕುಸಿತ, ದಿವಾಳಿ ಸಾಧ್ಯವಾಗುವುದಿಲ್ಲ. ಬಹುತೇಕ ಧರ್ಮಗಳು ಆರ್ಥಿಕ ಶಕ್ತಿಯ ಮೇಲೆ ನಿಂತಿವೆ. ಆದರೆ ಶರಣರ ಧರ್ಮ ನೈತಿಕ ಶಕ್ತಿಯ ಮೇಲೆ ನಿಂತಿತ್ತು. ಆ ಕಾರಣಕ್ಕಾಗಿಯೇ ಆ ಧರ್ಮ ಇಂದಿಗೂ, ಎಂದೆಂದಿಗೂ ಪ್ರಸ್ತುತ. ಅವರಲ್ಲಿ ದುಂದುವೆಚ್ಚಕ್ಕೆ, ಸಂಗ್ರಹಕ್ಕೆ ಆಸ್ಪದವಿರಲಿಲ್ಲ. `ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ತಲೆದಂಡ’ ಎನ್ನುವರು ಬಸವಣ್ಣನವರು. ಮೋಳಿಗೆ ಮಾರಯ್ಯ `ಹುರುಳಿದ ಸಿರಿಯ ನೆಚ್ಚಿ ಕೆಡಬೇಡ’, ಕಾಳವ್ವೆ `ಆಸೆಯೆಂಬುದು ಭವದ ಬೀಜ ನಿರಾಸೆಯೆಂಬುದು ನಿತ್ಯ ಮುಕ್ತಿ’, ಅಲ್ಲಮ ಪ್ರಭು `ಆಸೆಯುಳ್ಳವ ಪ್ರಸಾದಿಯಲ್ಲ’ ಎಂದು ಹೇಳುವ ಮೂಲಕ ವಚನಕಾರರು ಅರ್ಥಶಾಸ್ತ್ರವನ್ನು ಎತ್ತಿ ಹಿಡಿದರು ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಪನ್ನರಾಜು ಸ್ವಾಗತಿಸಿದರೆ, ಸಿದ್ಧಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿ ಎಸ್ ಟಿ ರುದ್ರಪ್ಪ ವಂದಿಸಿದರು. ಮುನ್ಸಿಪಲ್ ಹೈಸ್ಕೂಲ್ ಮೈದಾನದಿಂದ ಸಾಮರಸ್ಯ ನಡಿಗೆ ಆರಂಭವಾಯಿತು. ವಿವಿಧ ಧರ್ಮದ ಮುಖಂಡರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು, ಕಲಾತಂಡಗಳು ಶರಣರ ಸ್ತಬ್ಧ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದ ಜೊತೆ ಜೋಳದರಾಶಿ ದೊಡ್ಡನಗೌಡ ರಂಗಮಂದಿರವನ್ನು ತಲುಪಿದರು. ವೇದಿಕೆಯ ಮೇಲೆ ವಿವಿಧ ಧರ್ಮದ ಮುಖಂಡರು ಉಪಸ್ಥಿತರಿದ್ದರು. ನೆರೆ ಸಂತ್ರಸ್ಥರಿಗೆ 17500 ರೂಪಾಯಿಗಳನ್ನು ಸಾರ್ವಜನಿಕರು ದೇಣಿಗೆಯಾಗಿ ನೀಡಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ
ಆಗಸ್ಟ್ 16, ಬಳ್ಳಾರಿ; `ಮತ್ತೆ ಕಲ್ಯಾಣ’ದ ನಿಮಿತ್ತ ಇಲ್ಲಿನ ಬಸವರಾಜೇಶ್ವರಿ ಕಾಲೇಜಿನ ಶರಣ ಮಂಟಪದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತ ಮನುಷ್ಯ ಹುಟ್ಟುತ್ತ ವಿಶ್ವಮಾನವ, ಬೆಳೆದಂತೆ ಅಲ್ಪ ಮಾನವನಾಗುತ್ತಿದ್ದಾನೆ. ಬಾಲ್ಯದಲ್ಲಿ ಮಕ್ಕಳಿಗೆ ಕ್ರೂರ ಜೀವಜಂತುಗಳ ಮೇಲೂ ದ್ವೇಷವಿರುವುದಿಲ್ಲ. ಕ್ರಮೇಣ ದ್ವೇಷ, ಅಸೂಯೆ, ಸ್ವಾರ್ಥ ಮುಂತಾದವುಗಳನ್ನು ಬೆಳೆಸಿಕೊಳ್ಳುತ್ತ ತನ್ನ ಒಡಹುಟ್ಟಿದವರನ್ನೇ ದ್ವೇಷಿಸುವ ಹಂತಕ್ಕೆ ಬರುತ್ತಾನೆ. ಈ ಅಲ್ಪ ಮಾನವತೆಯಿಂದ ಮತ್ತೆ ವಿಶ್ವಮಾನವತೆಯ ಕಡೆಗೆ ಕರೆದುಕೊಂಡು ಹೋಗುವ ಮಾರ್ಗವೇ ‘ಮತ್ತೆ ಕಲ್ಯಾಣ’. ನಾವು ಎಂತಹ ಬಟ್ಟೆ ಧರಿಸುತ್ತೇವೆ ಎನ್ನುವುದು ಮುಖ್ಯವಲ್ಲ; ಯಾವ ಬಟ್ಟೆ(ದಾರಿ)ಯಲ್ಲಿ ನಡೆಯುತ್ತೇವೆ ಎನ್ನುವುದು ಬಹುಮುಖ್ಯ. ಕಾವಿ ತ್ಯಾಗದ ಸಂಕೇತ, ಖಾದಿ ಶುಭ್ರತೆಯ ಸಂಕೇತ, ಖಾಕಿ ಸಂರಕ್ಷಣೆಯ ಸಂಕೇತ. ಇವುಗಳ ಮಹತ್ವ ಮರೆತು ದಾರಿ ತಪ್ಪಿದ ವಾತಾವರಣ ಇಂದು ನಿರ್ಮಾಣ ಆಗಿದೆ. ಇಂಥ ಬಟ್ಟೆ ಧರಿಸಿದವರು ಸರಿಯಾಗಬೇಕಾದರೆ ಮೊದಲು ಅಂತರಂಗ ಶುದ್ಧಿ ನಂತರ ಬಹಿರಂಗ ಶುದ್ಧಿ ಮಾಡಿಕೊಳ್ಳಬೇಕು.
ಮನುಷ್ಯ ಮನೆಯಿಂದ ಶ್ರೀಮಂತನಾಗುವುದು ಮುಖ್ಯವಲ್ಲ; ಮನಸ್ಸಿನಿಂದಾಗಬೇಕು. ಇವತ್ತು ನುಡಿಮುತ್ತುಗಳಿಗೆ ಕೊರತೆಯಿಲ್ಲ; ನುಡಿಯಂತೆ ನಡೆಯೂ ಮುಖ್ಯವಾಗಬೇಕು. `ಮಾತು ಬೆಳ್ಳಿ ಮೌನ ಬಂಗಾರ’. ಮಾತಿಗಿಂತ ಮೌನಕ್ಕೇ ಹೆಚ್ಚು ಮೌಲ್ಯ. ಬಸವಣ್ಣ `ನುಡಿದರೆ’ ಮುತ್ತಿನ ಹಾರದಂತೆ, ಸ್ಪಟಿಕದ ಸಲಾಕೆಯಂತೆ, ಲಿಂಗಮೆಚ್ಚಿ ಹೌದೌದು ಎನ್ನುವಂತೆ ಇರಬೇಕು ಎಂದರು. ಹೊರಗಿನ ಸೌಂದರ್ಯಕ್ಕಿಂತ ಒಳಗಿನ ಸೌಂದರ್ಯ ಬಹಳ ಮುಖ್ಯ. ಕಲ್ಲಿನಲ್ಲಿ ಹೊನ್ನಿರುವಂತೆ, ಮರದಲ್ಲಿ ಅಗ್ನಿಯಿರುವಂತೆ, ಹಾಲಿನಲ್ಲಿ ತುಪ್ಪವಿರುವಂತೆ ನಮ್ಮ ಅಂತರಂಗದಲ್ಲಿ ಶಿವನಿದ್ದಾನೆ. ಅರಿವೆನ್ನುವ ಗುರುವಿನ ಮೂಲಕ ಶಿವನನ್ನು ಕಾಣುವ ಸಂಸ್ಕಾರ ಬೇಕು. ಈ ಅರಿವು ಬಸವಾದಿ ಶರಣರ ವಚನಗಳಲ್ಲಿದೆ. ಜಗತ್ತೆಲ್ಲ ಕೆಟ್ಟಿರುವಾಗ ನಾನೊಬ್ಬ ಮಾತ್ರ ಯಾಕೆ ಒಳ್ಳೆಯವನಾಗಿರಬೇಕು ಎಂದು ಯೋಚಿಸದೆ ತಾನು ಕೆಡದೇ ಇರುವುದರ ಬಗ್ಗೆ ಚಿಂತನೆ ಮಾಡಬೇಕು. ನಾವು ಉರಿಯುವ ಸೂರ್ಯನೇ ಆಗಬೇಕಿಲ್ಲ; ಬೆಳಗುವ ಕಿರು ದೀಪವಾದರೂ ಸಾಕು. ನಿಜವಾದ ಜ್ಞಾನ ಅರಿವನ್ನು ಪಡೆಯುವುದು, ಅಜ್ಞಾನವನ್ನು ತೊಲಗಿಸುವುದು, ಕತ್ತಲೆಯಿಂದ ಬೆಳಕಿನಡೆಗೆ ಕರೆದುಕೊಂಡು ಹೋಗುವಂಥದ್ದು. ಇದು ನಮ್ಮ ಶಿಕ್ಷಣದ ಮೂಲಕ ಆಗಬೇಕು. `ತನ್ನ ತಾ ತಾನರಿತಡೆ ತಾನೇ ದೇವ ನೋಡ’ ಎನ್ನುವಂತೆ ತನ್ನನ್ನು ತಾನು ಅರ್ಥ ಮಾಡಿಕೊಳ್ಳುವುದೇ ನಿಜವಾದ ದೇವರು. ಹೇಡಿಗಳಂತೆ ನರಿ ಬುದ್ಧಿಯವರಾಗದೆ ಧೀರೋದಾತ್ತ ವ್ಯಕ್ತಿತ್ವವನ್ನಿಟ್ಟುಕೊಂಡು ಬದುಕುಬೇಕು. ನಾವು ಬದಲಾದರೆ ಜಗತ್ತು ಬದಲಾಗುತ್ತದೆ. ಒಂದರಿಂದಲೇ ಅನೇಕ. ಹಿಂದೆಲ್ಲಾ ಇಷ್ಟೊಂದು ಮೌಢ್ಯಗಳು ಇರಲಿಲ್ಲ. ಇತ್ತೀಚಿಗೆ ಮಾಧ್ಯಮಗಳಿಂದ ಮೌಢ್ಯಗಳ ಪ್ರಚಾರ ಹೆಚ್ಚಾಗಿದೆ. ಕೆಲ ಜ್ಯೋತಿಷಿಗಳು ಮಾಧ್ಯಮಗಳ ಮುಂದೆ ಕುಳಿತು ನಮ್ಮ ಮೆದುಳಿಗೇ ಕೈ ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಎಚ್ಚರದಿಂದ ಇರಬೇಕು. ದೇವನೊಬ್ಬ ನಾಮ ಹಲವು. ಏಕದೇವ ನಿಷ್ಠೆ ನಮ್ಮಲ್ಲಿ ಬರಬೇಕು. ದೇವರು ಖಂಡಿತವಾಗಿಯೂ ಇದ್ದಾನೆ. ಆದರೆ ಅವನನ್ನು ಕಾಣುವ ಇಚ್ಛಾಶಕ್ತಿ ನಮಗೆ ಬೇಕು ಎಂದರು.
ಸಂವಾದಕ ಎಸ್ ಜಿ ಸಿದ್ಧರಾಮಯ್ಯ ಪ್ರಶ್ನೆಗಳಿಗೆ ಉತ್ತರಿಸುತ್ತ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎನ್ನುವ ಚಾತುವರ್ಣ ಪದ್ಧತಿಯಿಂದಾಗಿ ಜಾತಿ ವ್ಯವಸ್ಥೆ ಹುಟ್ಟಿಕೊಂಡಿತು. ಇದನ್ನು ವಿರೋಧಿಸಿಯೇ ಬಸವಾದಿ ಶರಣರ ಚಳುವಳಿ ಉದಯವಾಯಿತು. `ಅನುಭವ ಮಂಟಪ’ದ ಮೂಲಕ ಗಂಡು-ಹೆಣ್ಣೆನ್ನದೆ ಎಲ್ಲ ಜಾತಿಯವರು ಒಟ್ಟಾಗಿ ಕುಳಿತುಕೊಳ್ಳುವ, ಚರ್ಚಿಸುವ ಮೂಲಕ ಸಮ ಸಮಾಜದ ಕನಸನ್ನು ಕಾಯಕಜೀವಿಗಳಲ್ಲಿ ಬಿತ್ತಿದರು. ದಾನ ಕೊಡುವವನ ಕೈ ಮೇಲಿರುತ್ತೆ, ಪಡೆಯುವವನ ಕೈ ಕೆಳಗಿರುತ್ತೆ. ಆದರೆ ಶರಣರ `ದಾಸೋಹ’ದಲ್ಲಿ ಇಬ್ಬರೂ ಸಮಾನರು. ಇಂದಿನ ಸಾಮಾಜಿಕ ರೋಗಗಳಿಗೆ `ಬಸವ ಪ್ರಜ್ಞೆ’ಯೊಂದೇ ದಿವ್ಯ ಔಷಧಿ. ಅದು ‘ಮತ್ತೆ ಕಲ್ಯಾಣ’ದ ಮೂಲಕ ಇಂದು ದೊರೆಯುತ್ತಿದೆ. ನಮ್ಮ ದೇಶ ಬಹುಸಂಸ್ಕೃತಿಯ ದೇಶ. ಯಾವ ದೇಶದಲ್ಲಿಯೂ ಇಷ್ಟು ವೈವಿದ್ಯತೆಯಿಲ್ಲ. ವೈವಿದ್ಯತೆಯಲ್ಲಿ ಏಕತೆ ಕಾಣುತ್ತಿರುವುದು ಭಾರತ. ಇಂದು ಯಾವುದೇ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೋ ಅವರೆಲ್ಲರೂ ಬಹುತೇಕ ಸರಕಾರಿ ಶಾಲೆಗಳಲ್ಲಿಯೇ ಓದಿದ್ದಾರೆ. ವಚನ ಸಾಹಿತ್ಯ ಎಲ್ಲರನ್ನೂ ಒಳಗೊಂಡು ರಚನೆಯಾಗಿದ್ದು. ಕೆಲವರದೇ ಸ್ವತ್ತಾಗಿದ್ದ ಸಂಸ್ಕೃತ ಭಾಷೆಯನ್ನು ತಿರಸ್ಕರಿಸಿ ಅಚ್ಛಗನ್ನಡದ ಮೂಲಕ ವಚನ ಸಾಹಿತ್ಯ ರಚಿಸಿದರು ಎಂದರು.
ಸಂವಾದಕ ಜಗದೀಶ ಬಸಾಪುರ ಪ್ರಶ್ನೆಗಳಿಗೆ ಉತ್ತರಿಸುತ್ತ ಮನುಷ್ಯನ ವೈಯುಕ್ತಿಕ ಮತ್ತು ಸಮಾಜಿಕ ಖಿನ್ನತೆಗೆ ವಚನ ಸಾಹಿತ್ಯವೇ ಮದ್ದು. ಶರಣರ ಪ್ರತಿಯೊಂದು ವಚನಗಳೂ ಅಂತರಂಗದ ಅರಿವನ್ನು ಹೆಚ್ಚಿಸುವುದು. ಶರಣರು ಮೂರ್ತಿ ಪೂಜೆ ಖಂಡಿಸಿ ವ್ಯಕ್ತಿ ಪೂಜೆಯನ್ನು ಜಾರಿಗೆ ತಂದರು. ಅಂತರಂಗದ ಪ್ರಜ್ಞೆಯೇ ಸಮಷ್ಠಿ ಪ್ರಜ್ಞೆಯೂ ಆಗಿದ್ದರೆ ಆ ಕೆಲಸ-ಕಾರ್ಯಗಳನ್ನು ಮಾಡಲು ಹಿಂಜರಿಕೆ ಬೇಡ ಎಂದರು.
ಆರಂಭದಲ್ಲಿ ಶಿವ ಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ವೀರಸಂಗಯ್ಯ ಸ್ವಾಗತಿಸಿದರೆ, ಶಿವಲಿಂಗಪ್ಪ ಹಂದಿಯಾಳ್ ವಂದಿಸಿದರು.
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು :
• ಶರಣರ ಕಲ್ಪನೆಯಲ್ಲಿ `ದೇವರು’ ಎಂದರೇನು?
• ವಚನ ಚಳುವಳಿ ಯಾವುದಕ್ಕಾಗಿ ಇಂದು ನಮಗೆ ಮುಖ್ಯ?
• ಬಸವಣ್ಣನವರು ಜಾತಿಯನ್ನು ಖಂಡಿಸಿ, ಸಮಸಮಾಜಕ್ಕೆ ಮುಂದಾದರು. ಆದರೆ ಜಾತಿ ಈಗಲೂ ಮುಂದುವರಿದಿದೆ ಯಾಕೆ?
• ಅನುಭವ ಮಂಟಪಕ್ಕೆ ಯಾವುದಾದರೂ ತತ್ವ-ಸಿದ್ಧಾಂತವಿದೆಯೇ?.
• ಬಸವಣ್ಣನವರು ಮೂರ್ತಿ ಪೂಜೆಯನ್ನು ಖಂಡಿಸಿದ್ದರು. ಆದರೆ ಇಂದು ಬಸವಣ್ಣನವರನ್ನೇ ಮೂರ್ತಿಯನ್ನಾಗಿ ಪೂಜೆ ಮಾಡುತ್ತಾರೆ. ಇದು ಎಷ್ಟು ಸರಿ?
• ಆಹಾರದ ಹಕ್ಕು ಇದೆ ಅಂತ ಪ್ರಾಣಿಗಳನ್ನು ಹಿಂಸಿಸಿ ಕೊಂದು ತಿನ್ನುವುದು ಎಷ್ಟರ ಮಟ್ಟಿಗೆ ಸರಿ?
• ಮಾನವೀಯತೆಯ ತಳಹದಿಯ ಮೇಲೆ ನಿಂತಿರುವ ಲಿಂಗಾಯತ ಧರ್ಮ ವಿಶ್ವಧರ್ಮವಾಗುವುದು ಯಾವಾಗ?
• ಜಾತಿ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತು ಹಾಕಲು ಸಾಧ್ಯವೇ?
• ಮೂರು ಬಟ್ಟಿನ ವಿಭೂತಿಯ ಸಂಕೇತವೇನು?
• ಬಸವಣ್ಣನವರ ಸಾಮಾಜಿಕ ಚಳುವಳಿ ಕರ್ನಾಟಕ್ಕೆ ಮಾತ್ರ ಯಾಕೆ ಸೀಮಿತವಾಗಿದೆ?
• ಮೂಢನಂಬಿಕೆ ಹಾಗೂ ಕರ್ಮಸಿದ್ಧಾಂತಗಳಿಗೆ ಶಾಶ್ವತ ಪರಿಹಾರ ಇದೆಯೇ?
• ದೇವರಿದ್ದಾನೆ ಎಂದು ಹೇಗೆ ತಿಳಿಯುವುದು?
• ಬಸವಣ್ಣನವರು 12ನೆಯ ಶತಮಾನದಲ್ಲಿ ಅಂತರ್ ಜಾತಿಯ ವಿವಾಹ ಮಾಡಿಸಿದರು. 21ನೆಯ ಶತಮಾನದಲ್ಲಿ ಇದು ಯಾಕೆ ಸಾಧ್ಯವಿಲ್ಲ?
• ವಚನ ಸಾಹಿತ್ಯ ಆರ್ಯದಿಂದ ಬಂದದ್ದೋ ದ್ರಾವಿಡದಿಂದ ಬಂದದ್ದೋ?
- ಹೆಚ್ ಎಸ್ ದ್ಯಾಮೇಶ್
9449649850

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)