ಆಗಸ್ಟ್ ೧೫ ಗುರುವಾರ, ಚಿತ್ರದುರ್ಗ

ಚಿತ್ರದುರ್ಗದಲ್ಲಿ 15ನೇ ದಿನದ ಮತ್ತೆ ಕಲ್ಯಾಣ ಆಂದೋಲನ. ಅಭಿಯಾನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ. ಅನನ್ಯ ಟಿವಿ ನೇರಪ್ರಸಾರ‌ ವೀಕ್ಷಿಸಲು - ಕ್ಲಿಕ್ ಮಾಡಿ


ಇಲ್ಲಿನ ತರಾಸು ರಂಗಮಂದಿರದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಇಂದು ಬಹುತೇಕ ಗ್ರಾಮೀಣರು ಕೃಷಿಯಿಂದ ವಿಮುಖರಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಅಲ್ಲಿ ಸ್ವಾಭಿಮಾನ ಕಳೆದುಕೊಂಡು ಕಂಡವರ ಕೈಯಲ್ಲಿ ಕೆಲಸ ಮಾಡುತ್ತ ನರಕದ ಜೀವನ ಸಾಗಿಸುತ್ತಿದ್ದಾರೆ. ಅಂಥವರಿಗೆ ಶ್ರೀಗಂಧ ಬೆಳೆದು ಶ್ರೀಮಂತರಾಗಿರುವ ಕವಿತಾ ಅವರ ಬದುಕು ಮಾದರಿಯಾಗಬೇಕು. ಈ ರೀತಿಯ ನೈತಿಕ ಬಲ, ಸ್ಪೂರ್ತಿ ತುಂಬುವುದೇ ಮತ್ತೆ ಕಲ್ಯಾಣದ ಉದ್ದೇಶ. ನಮ್ಮ ನಮ್ಮ ಕೆಲಸಗಳನ್ನು ಸತ್ಯ ಶುದ್ಧವಾಗಿ ಮಾಡುವುದೇ ಕಾಯಕ. ಅದೇ ಶಿವನ ಸೇವೆ. ಹೀಗೆ ಮಾಡಿದರೆ ಶಿವನನ್ನು ನಾವು ಹುಡುಕಿಕೊಂಡು ಹೋಗಬೇಕಿಲ್ಲ; ಶಿವನೇ ನಮ್ಮನ್ನು ಹುಡುಕಿಕೊಂಡು ಬರುವನು. 12 ನೆಯ ಶತಮಾನದ ಮೇದಾರ ಕೇತಯ್ಯ ಚಿನ್ನವನ್ನು ಹುಳುವೆಂದು ಭಾವಿಸಿ ಕಾಡಿನಲ್ಲಿಯೇ ಬಿಟ್ಟು ಬಂದವನು. ಸಂಪತ್ತಿನ ಹಿಂದೆ ಹೋಗುವುದನ್ನು ಬಿಟ್ಟು ಮಾಡುವ ಕಾಯಕವನ್ನೇ ನಿಸ್ಪೃಹತೆಯಿಂದ ಮಾಡಿದರೆ ಬದುಕು ಆನಂದದ ನಂದನವನ ಆಗುವುದು. ಶರಣರು ಸಮ ಸಮಾಜವನ್ನು ಕಟ್ಟಿದ್ದು ಕಾಯಕದ ಮೂಲಕವೇ. ಇಂದಿಗೂ ಕಾಯಕವೊಂದೇ ಸರ್ವ ಸಾಮಾಜಿಕ ರೋಗಗಳಿಗೂ ಮದ್ದು. ಬರೀ ಕಾಯಕ ಮಾಡುವುದಷ್ಟೇ ಅಲ್ಲ; ಕಾಯಕದಿಂದ ಬಂದ ಆದಯದಲ್ಲಿ ದಾಸೋಹವನ್ನೂ ಮಾಡಬೇಕು. ಕಾಯಕ-ದಾಸೋಹ ಪ್ರಜ್ಞೆ ಮೈಗೂಡಿಸಿಕೊಳ್ಳುವ ಜಾಗೃತಿಯನ್ನು ಮೂಡಿಸುವುದು ಮತ್ತೆ ಕಲ್ಯಾಣದ ಪ್ರಮುಖ ಉದ್ದೇಶಗಳಲ್ಲೊಂದು. ಮುಂದೆ ಸಾಣೇಹಳ್ಳಿಯಲ್ಲಿ ಯುವಕರಿಗೆ ವಚನಕಾರರ ಬದುಕು-ಬರಹಗಳನ್ನು ಕುರಿತಂತೆ ತರಬೇತಿ ನೀಡಲಾಗುವುದು ಎಂದರು.
ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್ ಬಿಲ್ಲಪ್ಪ ಮಾತನಾಡಿ ಮತ್ತೆ ಕಲ್ಯಾಣ ಜನರನ್ನು ಜಾಗೃತಗೊಳಿಸುವ ಅರಿವಿನ ಕಾರ್ಯಕ್ರಮ. ಶರಣರ ಜೀವನದ ಶ್ರೇಷ್ಠತೆ ಅರಿವು. ಅರಿವು ಪ್ರತಿಯೊಬ್ಬರಿಗೂ ಬೇಕು. ಶರಣರ ಆಚಾರ-ವಿಚಾರಗಳಿಂದ ಅಂತರಂಗದ ಪರಿಶುದ್ಧತೆಯನ್ನು ತಿಳಿದುಕೊಳ್ಳಬಹುದು. ಶರಣರ ಕಾಯಕದ ಶ್ರೇಷ್ಠತೆಯ ಮಟ್ಟವನ್ನು ವರ್ಣಿಸಲು ಸಾಧ್ಯವಿಲ್ಲ. ಕಾಯಕದ ಗೌರವದ ಬಗ್ಗೆ ಕೆಲವರು ಮಾತನಾಡಿದ್ದಾರೆ. ಆದರೆ ಗುರು-ಲಿಂಗ-ಜಂಗಮರಿಗಿಂತ ಶ್ರೇಷ್ಠ ಕಾಯಕ. ಕರ್ತವ್ಯವೇ ಪೂಜೆ ಎಂದು ಮೊದಲು ಹೇಳಿದವರು ಶರಣರು. ಕಸಗುಡಿಸುವ ಸತ್ಯಕ್ಕನ ಕಾಯಕ ನಿಷ್ಠೆ ಅನುಪಮವಾದುದು. ಆಕೆ ತಾನು ಕಸ ಗುಡಿಸುವಾಗ ಬಂಗಾರ, ವಸ್ತ್ರ, ಹೊನ್ನು ಬಿದ್ದಿದ್ದರೆ ನಾನು ಅವುಗಳನ್ನು ಕೈಯೆತ್ತಿ ಮುಟ್ಟಿದೆನಾದರೆ ನಿಮ್ಮಾಣೆ ಎಂದು ಪ್ರತಿಜ್ಞೆ ಮಾಡುವಳು. ಕಾಯಕ ಸತ್ಯ, ಶುದ್ಧವಾಗಿರಬೇಕು. ಎಲ್ಲ ಸಮಸ್ಯೆಗಳಿಗೆ ಕಾರಣ; ಆಕರ್ಷಣೆ ಮತ್ತು ಮಾಲೀಕತ್ವ. ಈ ಹಿನ್ನೆಲೆಯಲ್ಲಿಯೇ ಶರಣರು ಸಂಗ್ರಹ ಬುದ್ಧಿಯನ್ನು ತಿರಸ್ಕರಿಸಿ ದಾಸೋಹ ಪ್ರಜ್ಞೆಯನ್ನು ಬೆಳೆಸಿದರು. ಶರಣರ ಅಂತರಂಗ ಮೌಢ್ಯಗಳಿಗೆ ಅವಕಾಶವಿಲ್ಲದಷ್ಟು ಶುದ್ಧಿಯಾಗಿತ್ತು. ಶರಣರ ಜೀವನದಲ್ಲಿ ಸೂತಕ, ಪಾತಕಗಳು ಇರಲೇ ಇಲ್ಲ. ದೇಹ, ಬುದ್ದಿ, ಮನಸ್ಸುಗಳೇ ಎಲ್ಲ ಎಂದು ಭಾವಿಸಿದ್ದರು. ಪೌರಾಣಿಕ ಕಲ್ಪನೆಗಳಿಗೆ ಅವರಲ್ಲಿ ಅವಕಾಶವಿರಲಿಲ್ಲ. ದೇವರಿಗೂ ಕೆಲಸ ಕೊಟ್ಟವರು ಅವರು. ಇಂದಿನ ದಿನ ಶ್ರೇಷ್ಠವಾದರೆ ನಿನ್ನೆಯೂ ಶ್ರೇಷ್ಠವಾಗುತ್ತದೆ, ನಾಳೆಯೂ ಶ್ರೇಷ್ಢವಾಗುತ್ತದೆ. ಶರಣರ ಜೀವನದ ಮೌಲ್ಯಗಳು ಸಂವಿಧಾನದಲ್ಲಿ ಪ್ರತಿಧ್ವನಿಸುತ್ತಿವೆ. ಜಾತ್ಯಾತೀತ ಶಬ್ದದ ಬಳಕೆಯಿಲ್ಲದೆ ಅವರು ಜಾತ್ಯತೀತವಾಗಿ ಬದುಕಿದರು. ಬೂಟಾಟಿಕೆಯ ಬದುಕು ಶರಣರದ್ದಲ್ಲ. ಜೀವನ ಮೌಲ್ಯಗಳನ್ನು ಅನುಸರಿಸದೇ, ಸಂವಿಧಾನಕ್ಕೆ ಬದ್ಧತೆಯನ್ನು ತೋರಿಸದೆ, ಕಾನೂನಿಗೆ ಗೌರವ ತೋರದೆ ಇರುವುದೇ ಅನೇಕ ಬಿಕ್ಕಟ್ಟುಗಳಿಗೆ ಕಾರಣ. ಶ್ರೇಷ್ಠ ಮೌಲ್ಯಗಳನ್ನು ನಮ್ಮ ಜೀವನದ ಭಾಗವಾಗಿ ಮಾಡಿಕೊಳ್ಳದ ಹೊರತು ಕಾನೂನಿನಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯವಿಲ್ಲ. ಪ್ರಶ್ನಿಸುವ ಮನೋಭಾವ ಬೆಳೆಯದೆ ಪ್ರಜಾಪ್ರಭುತ್ವ ಸಾರ್ಥಕವಾಗದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸಾರ್ವಭೌಮರು ಎನ್ನುವ ತಿಳುವಳಿಕೆ ಸಾಮಾನ್ಯರಿಗೂ ಬರಬೇಕು ಎಂದರು.
ಶರಣರ ಕೃಷಿ ಕುರಿತಂತೆ ಕವಿತಾ ಮಿಶ್ರ ಮಾತನಾಡಿ ನಾನು ಮದುವೆಯಾದ ಮನೆ ಕೃಷಿ ಪ್ರಧಾನವಾದುದು. ನಾನು ಬಿ ಇ ಪದವೀಧರೆ. 25 ವರ್ಷಗಳ ಹಿಂದೆಯೇ 40 ಸಾವಿರ ಸಂಬಳ ಬರುವ ಕೆಲಸ ಸಿಕ್ಕಿತ್ತು. ಕೆಲಸಕ್ಕೆ ಹೋಗುವುದು ಬೇಡ ಎಂದು ಗಂಡ ಮತ್ತು ಗಂಡನ ಮನೆಯವರು ಹೇಳಿದರು. ನಾನೇನಾದರು ಸಾಧನೆ ಮಾಡಬೇಕು ಎಂದಾಗ; ನಮ್ಮದು 30 ಎಕರೆ ಭೂಮಿ ಇದೆ ಅದರಲ್ಲಿಯೇ ಏನಾದರೂ ಸಾಧನೆ ಮಾಡು ಎಂದರು. ನನಗೆ ಹೊಲ-ಮನೆ ಕೆಲಸ ಹೊಸದು. ಆದರೂ ಪ್ರಯತ್ನಿಸಿ ನೋಡೋಣವೆಂದು 11 ಬೋರ್ ಕೊರೆಸಿದರೂ ನೀರು ಬರಲಿಲ್ಲ. ಕೊನೆಗೆ 12 ನೆಯ ಬೋರಿನಲ್ಲಿ ಒಂದೂವರೆ ಇಂಚು ಮಾತ್ರ ನೀರು ಸಿಕ್ಕಿತು. ಅದರಲ್ಲಿಯೇ ಛಲಬಿಡದೆ ದಾಳಿಂಬೆ ಕೃಷಿಯಲ್ಲಿ ಮುಂದುವರಿಸಿದಾಗ ಲಕ್ಷ-ಲಕ್ಷ ಹಣ ಕಾಣುವಂತಾಯಿತು. ಕೃಷಿ ಕಾಯಕ ಅತ್ಯಂತ ಕಠಿಣ. ರೈತ ಸುಮ್ಮ ಸುಮ್ಮನೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ನನಗೆ ಹೋರಾಟದ ಶಕ್ತಿಕೊಟ್ಟದ್ದೇ ನನ್ನ ಗಂಡ. ಏಕ ಬೆಳೆ ಪದ್ಧತಿ ಅತ್ಯಂತ ಅಪಾಯಕಾರಿ. ದಾಳಿಂಬೆ, ಮಾವು, ಶ್ರೀಗಂಧ, ಚಿಕ್ಕು, ಬೇವು ಮುಂತಾದ ಅನೇಕ ತೋಟಗಾರಿಕೆ ಬೆಳೆಗಳ ಜೊತೆಗೆ ದನಕರುಗಳು, ಕೋಳಿ, ಕುರಿಗಳನ್ನೂ ಸಾಕಿದ್ದೇನೆ. ಇಂಥ ಮಿಶ್ರ ಬೇಸಾಯ ಪದ್ಧತಿಯಿಂದ ನಿತ್ಯವೂ ಹಣ ಹರಿದು ಬರುತ್ತದೆ. ನಾನು ಸಾವಿರ ಸಾರಿ ಬಿದ್ದು ಒಂದು ಸಾರಿ ಎದ್ದವಳು. ಎಬ್ಬೆಟ್ಟು ಒತ್ತುವ ರೈತನೂ ಕೋಟಿಯೊಳಗೆ ಮಾತನಾಡಬೇಕೆಂಬುದು ನನ್ನ ಆಸೆ. ಅದಕ್ಕೆ ಶ್ರೀಗಂಧ ಬೆಳೆಯುವುದೇ ಮಾರ್ಗ. ಶ್ರೀಗಂಧ ಬೆಳೆಯಲು ಯಾರೂ ಆತಂಕ ಪಡಬೇಕಾಗಿಲ್ಲ. ಅದರ ಸುರಕ್ಷತೆಗಾಗಿ ಅನೇಕ ತಾಂತ್ರಿಕ ಉಪಕರಣಗಳು ಇಂದು ಲಭ್ಯವಿವೆ. ಸರಕಾರದ ಬೆಂಬಲವೂ ಇದೆ. ಜಗತ್ತನ್ನೇ ಅಲ್ಲಾಡಿಸುವ ಶಕ್ತಿ ರೈತರಿಗಿದೆ. ಶ್ರೀಗಂಧದ ಕಳ್ಳತನ ಮಾಡುವ ವೀರಪ್ಪನ್ನೇ ಅಷ್ಟು ಫೇಮಸ್ ಆಗಿರಬೇಕಾದರೆ ಶ್ರೀಗಂಧ ಬೆಳೆಯುವ ನಾವು ಯಾಕೆ ಫೇಮಸ್ ಆಗಬಾರದು. ಆರ್ಥಿಕ ಹಿನ್ನೆಲೆಯಲ್ಲಿ ನನ್ನ ಮಗಳು ನನ್ನ ಅಸ್ತಿತ್ವಕ್ಕೆ ಸವಾಲಾಗುವಂತಹ ಪ್ರಶ್ನೆಕೇಳಿದ್ದಳು. ಆಕೆಗೆ ಉತ್ತರ ಕೊಡುವ ಸಲುವಾಗಿ ಶ್ರೀಗಂಧದ ಸಸಿಗಳ ನರ್ಸರಿ ಮಾಡುತ್ತಿದ್ದೇನೆ. ಅದೊಂದು ಉದ್ಯಮವಾಗಿದೆ. ಯಾವ ಉದ್ಯಮಿಗೂ ಕಡಿಮೆ ಇಲ್ಲದಂತೆ ಹಣಕಾಸಿನ ವಹಿವಾಟು ನಡೆಸುತ್ತಿದ್ದೇನೆ. ರೈತನದು ಕೊಡುವ ಕೈ ಹೊರತು; ಬೇಡುವ ಕೈಯಲ್ಲ ಎನ್ನುವುದನ್ನು ಪ್ರತಿಯೊಬ್ಬ ರೈತರೂ ಅರ್ಥಮಾಡಿಕೊಳ್ಳಬೇಕು ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ದ್ಯಾಮಣ್ಣ ಸ್ವಾಗತಿಸಿದರೆ ವೀರೇಶ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಬೆಳಗ್ಗೆ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಸಾಮರಸ್ಯ ನಡಿಗೆ ಆರಂಭವಾಯಿತು. ವಿವಿಧ ಧರ್ಮದ ಮುಖಂಡರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು, ಕಲಾತಂಡಗಳು ಶರಣರ ಸ್ತಬ್ಧ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದ ಜೊತೆ ತರಸು ರಂಗಮಂದಿರವನ್ನು ತಲುಪಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ
ಆಗಸ್ಟ್ 15, ಚಿತ್ರದುರ್ಗ; ಮತ್ತೆ ಕಲ್ಯಾಣದ ನಿಮಿತ್ತ ಇಲ್ಲಿನ ತರಾಸು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತ ಬ್ರಿಟೀಷರಿಂದ ಸ್ವಾತಂತ್ರ್ಯ ಬಂದದ್ದು ಎಲ್ಲರಿಗೂ ಗೊತ್ತು. ಆದರೆ ಸ್ವಾತಂತ್ರ್ಯ ಕಳೆದುಕೊಂಡಿದ್ದು ಯಾವಾಗ? ಸಂವಿಧಾನ ರಚನೆಯಾಗಿರುವುದು ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವ ಕಾರಣಕ್ಕೆ. ಆದರೆ ಇಂದು ಸಮಾನ ಅವಕಾಶ ಮರೀಚಿಕೆಯಾಗುತ್ತಿದೆ. 12ನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ಜಾತಿ, ಮತ, ಪಂಗಡಗಳನ್ನು ಬಿಟ್ಟು ನಾವೆಲ್ಲಾ ಶಿವನ ಮಕ್ಕಳು ಎಂದು ಭಾವಿಸಿ ಜೀವನ ನಡೆಸಬೇಕೆಂದು. ಶರಣರ ವಿಚಾರಗಳನ್ನು ಅರ್ಥಮಾಡಿಕೊಂಡು ಆ ದಾರಿಯಲ್ಲಿ ನಡೆದರೆ ನೆಮ್ಮದಿಯ ಬದುಕು ನಮ್ಮದಾಗುತ್ತದೆ. ಸೂರ್ಯ, ಚಂದ್ರ, ಗಾಳಿ, ಮಳೆ, ಬೆಂಕಿಗೆ ಜಾತಿಯಿಲ್ಲ; ಇವುಗಳನ್ನು ಬಳಸಿಕೊಳ್ಳುವ ನಾವು ಜಾತಿಗಳನ್ನು ಮಾಡಿಕೊಂಡಿರುವುದು ವಿಪರ್ಯಾಸ. ಈ ನಾಡಿನಲ್ಲಿ ಎರಡು ವರ್ಗಗಳಿವೆ; ಒಂದು ಉಣ್ಣುವ ವರ್ಗ, ಮತ್ತೊಂದು ದುಡಿಯುವ ವರ್ಗ. ಗುರು, ಲಿಂಗ, ಜಂಗಮ ಯಾರೇ ಆದರೂ ಕಾಯಕ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು. ಇಂದು ನಾವು ಮಾಡುವ ಉದ್ಯೋಗಗಳಲ್ಲಿ ವಂಚನೆ, ಮೋಸ, ಕಪಟ ಇರಬಹುದು. ಆದ್ರೆ ಶರಣ `ಕಾಯಕ’ದಲ್ಲಿ ಮೋಸ, ಕಪಟ, ವಂಚನೆಗಳಿಲ್ಲ. ತನ್ನ ದುಡಿಮೆಯ ಆದಾಯದಲ್ಲಿ ಸ್ವಲ್ಪವಾದರೂ ದಾಸೋಹ ರೂಪದಲ್ಲಿ ಸಮಾಜಕ್ಕೆ ನೀಡಬೇಕು. ಪೂಜೆಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಸಾಕಷ್ಟು ಶೋಷಣೆಗಳು ಆಗ್ತಾ ಇವೆ. ಸ್ಥಾವರ ಪೂಜೆಯಿಂದ ಯಾರಿಗಾದರೂ ಒಳಿತಾಗಿದೆಯೇ? ಖಂಡಿತಾ ಇಲ್ಲ. ಈ ಹಿನ್ನೆಲೆಯಲ್ಲಿಯೇ ಶರಣರು ತನ್ನ ತಾನರಿತರೆ ತಾನೇ ದೇವ ನೋಡಾ ಎಂದುದು. ರಾಜಕಾರಣಿಗಳಿಗೆ ನಿಜವಾದ ದೇವರು ಮತದಾರರು. ಶರಣರು ಯಜ್ಞಯಾಗದಿಗಳನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿ, ವ್ಯಕ್ತಿ ಪೂಜೆಗೆ ಹೆಚ್ಚು ಮಹತ್ವ ನೀಡಿದರು. ದೇಹವನ್ನೇ ದೇವಾಲಯ ಮಾಡಿಕೊಂಡರು. ಕಾಮ ಕ್ರೋಧ, ಲೋಭ, ಮೋಹ, ಮದ ಮತ್ಸಗಳೆಂದು ದುರ್ಗಣಗಳನ್ನು ಸುಡಲಿಕ್ಕೆ ಅಂತರಂಗದಲ್ಲೇ ಯಜ್ಞಮಾಡಬೇಕೆಂದರು. ಶರಣರ ಕಲ್ಪನೆಯ ಕಾಯಕ ಶ್ರದ್ಧೆ ನಮ್ಮೆಲ್ಲರಿಗೆ ಬಂದರೆ ಎಲ್ಲ ಅಸಮಾನತೆಗಳು ದೂರವಾಗುತ್ತವೆ. ಈಗ ಜಲಪ್ರಳವಾಗಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಮುಂದೆ ಹತ್ತು ವರ್ಷಕ್ಕೆ ಆಗುವಷ್ಟು ನೀರು ಪೋಲಾಗಿದೆ. ಮತ್ತೆ ಕಲ್ಯಾಣ ಕಾರ್ಯಕ್ರಮ ಬರಿ ಭಾಷಣವಲ್ಲ, ಗೋಷ್ಠಿಯಲ್ಲ. ಇದು ಅಂತರಂಗವನ್ನು ಶುದ್ಧಿಗೊಳಿಸುವ ಅಭಿಯಾನ. ಜಾತಿಗೊಂದು ಮಠ ಇರೋದು ತಪ್ಪಲ್ಲ. ಆ ಮಠಗಳು ಒಂದು ಜಾತಿಗೆ ಸೀಮಿತವಾಗಬಾರದು. ಮೌಢ್ಯಗಳನ್ನು ಬಿತ್ತುವ ಕೆಲಸ ಮಾಡಬಾರದು. ರಾಜಕಾರಣಿಗಳಿಗೆ ವಿದ್ಯಾರ್ಹತೆಗಿಂತ ಸಾಮಾಜಿಕ ಕಳಕಳಿ ಮುಖ್ಯ. ಲೋಕ ಕೆಟ್ಟಿದೆ ಅನ್ನುವ ಕಾರಣಕ್ಕೇ ಮತ್ತೆ ಕಲ್ಯಾಣ ಕಾರ್ಯಕ್ರಮ ಮಾಡುತ್ತಿರುವುದು. ಯಾವ ಸಂತರು ಜಾತಿಯ ವಿರುದ್ಧವಾಗಿ ಹೋರಾಟ ಮಾಡಿದ್ರೋ ಅವರ ಹೆಸರಿನಲ್ಲೇ ಜಾತಿ, ಉಪಜಾತಿಗಳು ನಿರ್ಮಾಣವಾಗುತ್ತಿರುವುದು ದುರ್ದೈವದ ಸಂಗತಿ. ಮಠಗಳು ನೇರವಾಗಿ ರಾಜಕೀಯ ಮಾಡಬಾರದು. ಜಾತಿಯನ್ನು ಮೀರಿದ ಧರ್ಮವೇ ಲಿಂಗಾಯತ ಧರ್ಮ. ಇದು ಈಗ ಜಾತಿಯಾಗಿರುವುದು ವಿಷಾದದ ಸಂಗತಿ.
ಸಂವಾದಕ ಡಾ. ಲೋಕೇಶ್ ಅಗಸನಕಟ್ಟೆ ಮಾತನಾಡಿ ಇಂದು ನೈತಿಕತೆ ಸಂಪೂರ್ಣವಾಗಿ ಅಧಃಪತನ ಹೊಂದಿದೆ. ಬಸವ, ಬುದ್ಧ, ಗಾಂಧಿ, ಅಂಬೇಡ್ಕರ್ ಇವರಿಗೆ ನೈತಿಕತೆ ಗಟ್ಟಿಯಾಗಿತ್ತು. ಆ ಕಾರಣಕ್ಕಾಗಿಯೇ ಅವರು ರೂಪಿಸಿದ ಚಳುವಳಿಗಳು ಯಶಸ್ವಿಯಾದವು. ಈಗ ಮತ್ತೆ ಕಲ್ಯಾಣ ಅಭಿಯಾನವೂ ನೈತಿಕತೆಯನ್ನು ಬೆಳೆಸಲು ಪ್ರೇರಣೆಯಾದ ವಚನಗಳ ಬೀಜ ಬಿತ್ತಲು. ಪರಿವರ್ತನೆ ಕೇವಲ ಕೆಲವರಿಗೆ ಮಾತ್ರ ಸೀಮಿತವಲ್ಲ; ಸ್ವಾಮೀಜಿಗಳು, ರಾಜಕಾರಣಿಗಳು, ಜನಸಾಮಾನ್ಯರಲ್ಲೂ ಆಗಬೇಕಾಗಿದೆ. ಜನಸಾಮಾನ್ಯರು ಜಾತಿಯನ್ನು ಹುಟ್ಟುಹಾಕಿಲ್ಲ. ವ್ಯವಸ್ಥೆಯೇ ಜಾತಿಯನ್ನು ಹುಟ್ಟು ಹಾಕಿದೆ. ಈ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ತೊಲಗಲು ಇನ್ನು ಸ್ವಲ್ಪ ಕಾಲ ಬೇಕಾಗಿದೆ. ರಾಜಕೀಯ ಮತ್ತು ಧಾರ್ಮಿಕ ಬೇರೆ ಬೇರೆಯಲ್ಲ ಎರೆಡೂ ಒಂದೇ.
ಇನ್ನೋರ್ವ ಸಂವಾದಕ ಕರಿಯಪ್ಪ ಮಾಳಿಗೆ ಮಾತನಾಡಿ 12ನೆಯ ಶತಮಾನದ ಕಲ್ಯಾಣದ ಚಳುವಳಿ ಜಗತ್ತಿನ ಬಹುದೊಡ್ಡ ಚಳುವಳಿ. ಅದರ ಆಶಯವನ್ನು ಪುನರ್ ರೂಪಿಸಿಕೊಳ್ಳುವುದೇ ಮತ್ತೆ ಕಲ್ಯಾಣ. ಇಂದು ಶರಣರ ಆಲೋಚನೆಗಳನ್ನು ನಾವು ಓದಿಗೆ ಮಾತ್ರ ಸೀಮಿತಗೊಳಿಸಿದ್ದೇವೆಯೇ ಹೊರತು ಅನುಷ್ಠಾನಕ್ಕೆ ತರುತ್ತಿಲ್ಲ. ಶರಣರು ಮಾತನಾಡುತ್ತಿರಲಿಲ್ಲ; ಅವರ ನಡೆಯೇ ಮಾತಾಗಿತ್ತು. ಕೇವಲ ತತ್ವ ಸಿದ್ಧಾಂತಗಳಿಂದ ಬದಲಾವಣೆ ಅಸಾಧ್ಯ. ನಮ್ಮೊಳಗೆ ನಾವು ಬದಲಾವಣೆ ಆಗಬೇಕು. ಮೂಲಭೂತವಾದ ಹೋಗಬೇಕೆಂದರೆ ಮೊದಲು ನಾವು ವೈಯುಕ್ತಿಕವಾಗಿ ಬದಲಾವಣೆ ಆಗಬೇಕು. ವೈಯುಕ್ತಿಕ ಬದಲಾವಣೆಯೇ ವಚನ ಸಾಹಿತ್ಯದ ಮೂಲ ಆಶಯ. ಶಿಕ್ಷಕರಲ್ಲಿ ಗುಣಮಟ್ಟವಿದೆ. ಆದ್ರೆ ಅದನ್ನು ಹೇಳುವ, ಕೇಳುವವರಲ್ಲಿ ಗುಣಮಟ್ಟದ ಅವಶ್ಯಕತೆಯಿದೆ. ಶರಣರ ಒಂದು ವಚನ ಸಾಕು ನಮ್ಮನ್ನು ನಾವು ಪರಿವರ್ತಿಸಿಕೊಳ್ಳಲು ಎಂದರು.
ವೇದಿಕೆಯ ಮೇಲೆ ಶ್ರೀ ಶಿವಲಿಂಗಾನಂದ ಸ್ವಾಮಿಗಳು, ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು, ಶ್ರೀ ಈಶ್ವರಾನಂದಪುರಿ ಸ್ವಾಮಿಗಳು, ಶ್ರೀ ಕೃಷ್ಣಾನಂದ ಸ್ವಾಮಿಗಳು ಉಪಸ್ಥಿತರಿದ್ದರು. ಪ್ರಶ್ನೋತ್ತರದಲ್ಲಿ ಸಂಸದ ನಾರಾಯಣಸ್ವಾಮಿ ಮಾತನಾಡಿದರು. ಶಾಸಕ ಚಂದ್ರಪ್ಪ, ಮಾಜಿ ಸಂಸದ ಚಂದ್ರಪ್ಪ ಮುಂತಾದವರು ಉಪಸ್ಥಿತರಿದರು. ಸಾಮರಸ್ಯದ ನಡಿಗೆಯಲ್ಲಿ
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು :
• 12ನೆಯ ಶತಮಾನದಲ್ಲಿದ್ದ ಹೋರಾಟ ಮನೋಭಾವ, ಸ್ವಾತಂತ್ರ್ಯ ಪೂರ್ವದಲ್ಲಿದ್ದ ಹೋರಾಟದ ಮನೋಭಾವ ಈಗ ಯಾಕಿಲ್ಲ?
• ತತ್ವಕ್ಕೂ ಮೂಲಭೂತವಾದಕ್ಕೂ ಏನು ವ್ಯತ್ಯಾಸ?
• ಇವತ್ತು ಜಾತಿಗೊಂದು ಮಠ ನಿರ್ಮಾಣ ಮಾಡಿದ್ದಾರೆ. ಇದರಿಂದ ಬಸವಾದಿ ಶರಣರ ಆಶಯವನ್ನು ಈಡೇಸಲಿಕ್ಕೆ ಸಾಧ್ಯವೇ?
• ಇಂದಿನ ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಕ್ಷಣಬೇಕು?
• ಬಸವಾದಿ ಶಿವಶರಣರು ವೇದ ಪುರಾಣಗಳನ್ನು ನಂಬುತ್ತಿರಲಿಲ್ಲ. ಆದರೂ ಅವರಿಗೆ ಅಷ್ಟೊಂದು ಜ್ಞಾನ ಎಲ್ಲಿಂದ ಪ್ರಾಪ್ತವಾಯಿತು?
• ಮಠಗಳು ರಾಜಕೀಯ ಪ್ರವೇಶ ಮಾಡುವುದು ಸರಿಯೇ?
• ಗ್ರಾಮೀಣ ಪ್ರದೇಶದಲ್ಲಿರುವವರಿಗೆ ಕಲ್ಯಾಣ ಅಭಿಯಾನವನ್ನು ಹೇಗೆ ರೂಪಿಸುತ್ತೀರಿ?
• ಲಿಂಗಾಯತ ಅನ್ನುವುದು ಜಾತಿಯೋ, ಧರ್ಮವೋ?
• ಬಸವಾದಿ ಶಿವಶರಣರ ವಿಚಾರಗಳನ್ನು ತಿಳಿದವರಲ್ಲೇ ಸಾಕಷ್ಟು ಅಸಮಾನತೆಗಳಿವೆ. ಇನ್ನು ಅನಕ್ಷರಸ್ಥರಿಗೆ ಸಮಾನತೆಯ ವಿಚಾರಗಳನ್ನು ಹೇಗೆ ತಿಳಿಸುವಿರಿ?
- ಹೆಚ್ ಎಸ್ ದ್ಯಾಮೇಶ್
9449649850