ಆಗಸ್ಟ್ ೧೪ ಬುಧವಾರ, ತುಮಕೂರು
ತುಮಕೂರಿನಲ್ಲಿ 14ನೇ ದಿನದ ಮತ್ತೆ ಕಲ್ಯಾಣ ಆಂದೋಲನ. ಅಭಿಯಾನದಲ್ಲಿ ಸಾರ್ವಜನಿಕ ಸಮಾವೇಶ. ಅನನ್ಯ ಟಿವಿ ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ
ಇಲ್ಲಿನ ಶ್ರೀ ಸಿದ್ಧವಿನಾಯಕ ಕಲ್ಯಾಣ ಮಂಟಪದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಇಂದು ಸತ್ಯವನ್ನು ಬಿಡದ, ಸುಳ್ಳನ್ನ ಅಪ್ಪಿಕೊಳ್ಳದ ದ್ವಂದ್ವ ನಿಲುವು ಹಲವರಲ್ಲಿದೆ. ಸತ್ಯ ಹೇಳುವ ನೈತಿಕತೆ ಬೆಳೆಸಿಕೊಳ್ಳಬೇಕು. ಇನ್ನೊಬ್ಬರ ದೋಷಗಳನ್ನು ಹೇಳುವ ನೈತಕತೆ ನಮಗೆ ಬರಬೇಕು. ವಚನಕಾರರು ಮೊದಲು ತಮ್ಮನ್ನು ತಾವು ಸರಿಪಡಿಸಿಕೊಂಡು ನಂತರ ಲೋಕವನ್ನು ಸರಿಪಡಿಸುವ ಕೆಲಸ ಮಾಡಿದರು. ಬುದ್ಧ, ಏಸು ಮುಂತಾದ ಸಂತರು ಮಾಡಿದ್ದೂ ಇದನ್ನೇ. ವ್ಯಕ್ತಿ ಅಂತರಂಗದ ಕಲ್ಯಾಣ ಮರೆತರೆ ಲೋಕಕಲ್ಯಾಣ ಮಾಡಲು ಸಾಧ್ಯವಿಲ್ಲ. ಬದುಕು ಸುಂದರವಾಗಿರಬೇಕಾದರೆ ವ್ಯಕ್ತಿ ತನ್ನ ಮನಸ್ಸನ್ನು ದೊಡ್ಡದು ಮಾಡಿಕೊಳ್ಳಬೇಕು. ಇಚ್ಛಾಶಕ್ತಿ ಕಡಿಮೆಯಾಗುತ್ತಿರುವ ಕಾರಣಕ್ಕೆ ವ್ಯಕ್ತಿತ್ವ ಕುಂಠಿತಗೊಳ್ಳುತ್ತಿದೆ. ತಪ್ಪು ಮಾಡುವುದು ದೊಡ್ಡದಲ್ಲ; ತಪ್ಪನ್ನು ತಿದ್ದಿಕೊಳ್ಳುವ ದೊಡ್ಡತನ ದೊಡ್ಡದು. ಬಸವಣ್ಣನವರದು ತಾಯಿಯ ಹೃದಯ. ಲೋಕದ ಜನರ ತಪ್ಪುಗಳನ್ನು ತಮ್ಮ ಮೇಲೆ ಆರೋಪಿಸಿಕೊಂಡು ಅವರನ್ನು ತಿದ್ದುವ ಪ್ರಯತ್ನ ಮಾಡಿದರು. ಬಸವಣ್ಣ ಕಾಯಕ ಜೀವಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅವರಿಗೆ ಸ್ವಾಭಿಮಾನ ಮೂಡಿಸುವ ಕೆಲಸ ಮಾಡಿದರು. ಯಾವ ಕಾಯಕವೂ ಶ್ರೇಷ್ಠವಲ್ಲ; ಕನಿಷ್ಠವೂ ಅಲ್ಲ ಎನ್ನುವ ಮೂಲಕ ಕಾಯಕ ಪ್ರಜ್ಞೆಯನ್ನು ಬೆಳೆಸಿದರು. ಶರಣರು ಶಿವನನ್ನು ಹೊರಗೆಲ್ಲೂ ಹುಡುಕದೆ ತಮ್ಮ ಕಾಯ ಮತ್ತು ಕಾಯಕದಲ್ಲಿಯೇ ಕಂಡುಕೊಂಡರು. ನಮ್ಮ ದೇಹ ಶಿವನಿರುವ ತಾಣ. ಈ ಹಿನ್ನೆಲೆಯಲ್ಲಿ ನಮ್ಮ ದೇಹವನ್ನು ಚರಂಡಿಯ ಕೊಚ್ಚೆಯಾಗಿಸದೆ ದೇವಾಲಯವನ್ನಾಗಿಸಿಕೊಳ್ಳಬೇಕು. ಇಂದು ನಾಡಿನಲ್ಲಿ ವಿಚಾರವಂತರಿಗೆ ಕೊರತೆಯಿಲ್ಲ; ಆಚಾರವಂತರಿಗೆ ಕೊರತೆಯಿದೆ. ಕೆಲ ವಿಚಾರವಂತರು ವಚನಗಳನ್ನು ತಮಗೆ ಬೇಕೆಂದ ಹಾಗೆ, ತಮ್ಮ ಮೂಗಿನ ನೇರಕ್ಕೆ ಅರ್ಥೆಸಿಕೊಳ್ಳುತ್ತಿರುವುದು ದುರದೃಷ್ಟಕರ. ಪ್ರಾಣಿ ಹತ್ಯೆ ಮಾಡಿ ತಿನ್ನುವುದನ್ನು ಬಸವಣ್ಣ ಎಲ್ಲಿಯೂ ಹೇಳಿಲ್ಲ. `ದಯವೇ ಬೇಕು ಸಕಲ ಜೀವಾತ್ಮರಲ್ಲಿ’ ಎನ್ನುವ ಮೂಲಕ ಶರಣರು ಸಮಾಜದಲ್ಲಿ ಅಹಿಂಸಾ ತತ್ವವನ್ನು ಎತ್ತಿ ಹಿಡಿದರು. ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ದುರ್ಬಳಕೆ ಮಾಡಿಕೊಂಡಿದ್ದರ ಫಲವಾಗಿಯೇ ಪ್ರಕೃತಿ ನಮ್ಮನ್ನು ರಕ್ಷಿಸದೆ ವಿನಾಶದ ಅಂಚಿನತ್ತ ತಳ್ಳುತ್ತಿದೆ. ಮತ್ತೆ ಕಲ್ಯಾಣ ಕೇವಲ ತತ್ವ ಬೋಧನೆಯ ಕಾರ್ಯಕ್ರಮವಲ್ಲ; ಬದುಕಿನ ವಿಧಾನವನ್ನು ಬದಲಾಯಿಸಿಕೊಳ್ಳುವ, ಕಾಲ, ಕಾಸು, ಕಾಯಕಗಳ ಮಹತ್ವವನ್ನ ತಿಳಿಸುವು ಅಭಿಯಾನ ಎಂದರು.
`ಭರವಸೆಯ ಬೆಳಕು ಶರಣರು’ ಕುರಿತಂತೆ ಈಶ್ವರ ಮಂಟೂರು ಮಾತನಾಡಿ 12ನೆಯ ಶತಮಾನ ಜಗತ್ತಿಗೇ ಬೆಳಕಿನ ಸಂಪುಟ. ವಚನಕಾರರು ತಮ್ಮ ವಚನ ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನು ವಿಶ್ವಮಟ್ಟಕ್ಕೆ ಎತ್ತರಿಸಿದರು. ಬಸವಣ್ಣ ಭಾರತದ ಭಾಗ್ಯ. ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ನಿರ್ಮಾಣ ಮಾಡಿದರು. ಮತ್ತೆ ಕಲ್ಯಾಣ ಅಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಬೇಕೇಬೇಕಾದ ಕಾರ್ಯಕ್ರಮ. ಬಸವ ತತ್ವವೇ ಭಾರತದ ಸತ್ವ. ವಿಶ್ವವೇ ನನ್ನದೆಂಬ ವಿಶಾಲ ಹೃದಯಿಗಳು ಶರಣರು. ಬಿದ್ದವರನ್ನೆತ್ತಲು ಬಂದ ಶಿವಯೋಗಿ ಬಸವಣ್ಣ. ಬಸವಣ್ಣ ಕೇವಲ ಒಬ್ಬ ವ್ಯಕ್ತಿಯಲ್ಲ; ಶಕ್ತಿ. ಬಸವಣ್ಣನಿಂದ ಲೋಕ ಬದುಕಿತ್ತು. ದ್ವೇಷಿಸುವವರನ್ನೂ ಪ್ರೀತಿಸುವ ಗುಣ ಶರಣರದ್ದಾಗಿತ್ತು. ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಸಹಮತ ವೇದಿಕೆ ಮಾರ್ಗದರ್ಶಿಯಾಗಿದೆ. ಶರಣಿಗೆ, ಶರಣು ಶರಣಾರ್ಥಿ ಎಂದು ಹೇಳುವ ವಿನಯ ಶರಣರದ್ದು. ದೇವನೊಬ್ಬ ನಾಮ ಹಲವು ಎನ್ನುವ ವೈಚಾರಿಕ ಪ್ರಜ್ಞೆ ಶರಣರದ್ದಾಗಿತ್ತು. ನಮಗೆ ನಾವೇ ಮೌಢ್ಯತೆಗಳ ಮೊಳೆಗಳನ್ನು ಹೊಡೆದುಕೊಂಡು ಮೂಲೆಗುಂಪಾಗಬಾರದು. ಈ ಹಿನ್ನೆಲೆಯಲ್ಲಿಯೇ ಶರಣರು `ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯ’, `ಬತ್ತುವ ಜಲವ, ಒಣಗುವ ಮರವ ಪೂಜಿಸದಿರು’ ಎಂದುದು. ಮನುಷ್ಯನಿಗಿಂತ ಮಾನವೀಯತೆ ಮುಖ್ಯ. ಬುದ್ಧಿವಂತರಿಗಿಂತ; ಹೃದಯವಂತರ ಅವಶ್ಯಕತೆ ಇಂದು ಹೆಚ್ಚಿದೆ. ಬಸವಣ್ಣ ಸಂಕಲನವೇ ಹೊರತು; ವ್ಯವಕಲನವಲ್ಲ. ಬೀಗುವ ಗುಣಕ್ಕಿಂತ; ಬಾಗುವ ಗುಣ ನಮ್ಮದಾಗಬೇಕು. ಆಗ ನಮ್ಮ ಕಲ್ಯಾಣ ಮತ್ತು ಲೋಕ ಕಲ್ಯಾಣ ಸಾಧ್ಯವಾಗುತ್ತದೆ ಎಂದರು.
ಶರಣ ಚಿಂತನೆಗಳ ಅನುಸಂಧಾನ ಕುರಿತಂತೆ ಮಾತನಾಡಿದ ಡಾ. ಸಬಿತಾ ಬನ್ನಾಡಿ ಮಾತನಾಡಿ 12 ನೆಯ ಶತಮಾನ 21 ಆಗಿದೆ. ಹಿಂತಿರುಗಿ ನೋಡಿದರೆ ಇಡೀ ಯಾತ್ರೆ ಒಂದು ರೂಪಕವಾಗಿ ಕಾಣುತ್ತದೆ. ನಿರಾಶರಾಗುವಷ್ಟು ವಿಪ್ಲವಗಳು ಇಂದು ನಮ್ಮ ಮಧ್ಯೆ ನಡೆಯುತ್ತಿವೆ. ಇಂಥಹ ಹೊತ್ತಿನಲ್ಲಿ ವಚನಗಳು ಮಾತ್ರ ನಮಗೆ ಚೈತನ್ಯ ನೀಡಬಲ್ಲವು. ವಚನಗಳ ಓದು ಇನ್ನೊಬ್ಬರಿಗಾಗಿ ಅಲ್ಲ; ನಮಗಾಗಿ. ನಮ್ಮೊಳಗೆ ನಾವು ದೇವರನ್ನು ಕಂಡುಕೊಳ್ಳದಿದ್ದರೆ ಲೋಕದೊಳಗೆ ಬೇರೆ ಏನನ್ನೂ ಕಂಡುಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿಯೇ ಶರಣರು ನಡೆ-ನುಡಿ ಸಿದ್ಧಾಂತಕ್ಕೆ ಬದ್ಧರಾಗಿ ಬದುಕಿದ್ದು, ಅವರಿಗೆ ದಿಟ್ಟತನ ಬಂದದ್ದು. ದುಃಖ, ಸಂಕಟ, ಕಷ್ಟಗಳಿಗೆ ಜಾತಿ, ಕುಲ, ಗೋತ್ರಗಳಿರುವುದಿಲ್ಲ. ಪ್ರತಿ ಧರ್ಮದ ಹುಟ್ಟು ತ್ಯಾಗಮೂಲವೇ ಆಗಿದ್ದರೂ ಅದು ಕ್ರಮೇಣ ಭಯ, ಭೋಗಮೂಲವಾಗುವ ಅಪಾಯ ಎದುರಿಸುತ್ತವೆ. ಮನುಷ್ಯ ತಾನು ಶ್ರೀಮಂತನಾದಂತೆ ತನ್ನ ದೇವರನ್ನೂ ಶ್ರೀಮಂತಗೊಳಿಸುವ ಅಹಂಕಾರಿಯಾಗುತ್ತಿದ್ದಾನೆ. ಅಂಥ ದೇವರು ಜನಸಾಮಾನ್ಯರಿಂದ ದೂರವಾಗುವನು. ದೇವರಿಗೆ ವೈಭವಗಳಿಗಿಂತ ಅಂಬಲಿಯೇ ಇಷ್ಟ. ಕಣ್ಣಿಗೆ ಕಾಣುವ ಜೀವ ರೂಪದ ದೇವರುಗಳನ್ನು ಬಿಟ್ಟು ಕಾಣದ ದೇವರನ್ನು ಹುಡುಕಿ ಹುಡುಕಿ ಬಳಲುತ್ತಿದ್ದೇವೆ. ಹಣ ಮಾಡುವುದರಲ್ಲಿಯೇ ಇಂದು ಹೆಣವಾಗುತ್ತಿದ್ದೇವೆ. ಸಾಮುದಾಯಿಕತೆಯ ಪಾಠ ಹೇಳುವ ವಚನಗಳೇ ಮುಂದಿನ ಪೀಳಿಗೆಗೆ ತುಂಬಿದ ನಿಧಿಗಳು. ಆಧುನಿಕ ಲೋಕದಲ್ಲಿ ಎಲ್ಲಿಲ್ಲದ ತವಕ, ತಲ್ಲಣ, ಆತುರ ಎದ್ದು ಕಾಣುತ್ತಿವೆ. ಮನುಷ್ಯನಿಗೆ ಬೇಕಾದುದು ಶಾಂತಿಯೋ ಅಶಾಂತಿಯೋ ಎಂದು ನಾವು ನಾವೇ ತೀರ್ಮಾನಿಸಬೇಕು. ಅತಿಯಾದ ಸಿರಿವಂತಿಕೆಯನ್ನು ನಿರಾಕರಿಸಬೇಕು. ಹಾಗದಾಗ ಮಾತ್ರ ಸಮಾನತೆ ಸಾಧ್ಯ ಮತ್ತು ನನ್ನೊಳಗೆ ದೇವರನ್ನು ಕಾಣಲು ಸಾಧ್ಯ. ಶರಣರ ನಡೆಯನ್ನು ಉಳಿಸಿಕೊಳ್ಳದಿರುವುದು ಜಗತ್ತಿನ ದೌರ್ಭಾಗ್ಯ. ಕೇವಲ ಹಣ ಮಾಡುವ ಗುರಿ ಮಾತ್ರ ನಮ್ಮ ಮುಂದಿದೆಯೇ ಹೊರತು ದಾರಿಗಳ ಬಗ್ಗೆ ಯೋಚಿಸುತ್ತಿಲ್ಲ. ಇಂಥ ಹಣ ನಮಗೆ ನೆಮ್ಮದಿ ತರುವುದಿಲ್ಲ. ವಚನಗಳೆನ್ನುವ ಕಣ್ಣು ನಮಗೆ ಸಹಾಯ ಮಾಡುತ್ತವೆ. ಮಮತೆಯೇ ಸಮತೆಗೆ ದಾರಿ. ಅಧಿಕಾರ, ಸಂಸ್ಥೆ, ಧರ್ಮಗಳೆಲ್ಲವೂ ಸ್ವಹಿತದ ಆಯುಧಗಳಾಗಿವೆ. ಶರಣರದು ಒಲಿದು, ಒಲಿಸುವಕೊಳ್ಳುವ ದಾರಿಯಾಗಿತ್ತು. ದಿಟ್ಟತನದ ದಾರಿ ಕಲ್ಯಾಣದ ದಾರಿ. ಈ ಕಷ್ಟದ ದಾರಿಯೇ ನಮ್ಮದೂ ಆಗಬೇಕು ಎಂದರು.
ಡಾ. ಸಿ ಸೋಮಶೇಖರ್ ಮಾತನಾಡಿ ಮತ್ತೆ ಕಲ್ಯಾಣ ವಿಶಿಷ್ಟ, ವಿಭಿನ್ನ ಅಭಿಯಾನ. ಶರಣರ ಚಿಂತನೆಯನ್ನು ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಕೇಂದ್ರೀಕರಿಸಿರುವುದು ಅತ್ಯಂತ ಸ್ತುತ್ಯಾರ್ಹ. ಇಂದು ಗುರು-ಶಿಷ್ಯರ ಸಂಬಂಧ ಅತ್ಯಂತ ವಿಡಂಬನಾತ್ಮಕವಾಗಿದೆ. ಅಧಿಕಾರ, ಹಣ, ಕೀರ್ತಿಯಂಥ ಕ್ಷಣಿಕ ಸುಖಗಳ ಹಿಂದೆ ಸಾಗುತ್ತಿರುವವರಿಗೆ ಮತ್ತೆ ಕಲ್ಯಾಣ ಬೆಳಕಾಗಿ ಕಾಣುತ್ತಿದೆ. ಜಗತ್ತಿನ ಯಾವ ಸಾಧು-ಸಂತರೂ ಸ್ತ್ರೀ ಸ್ವಾತಂತ್ರ್ಯದ ಮಾತನಾಡದೆ ಇರುವಾಗ ವಚನಕಾರರು ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ರಣಕಹಳೆ ಊದಿದರು. ಕಾಯಕ-ದಾಸೋಹ ಸೂತ್ರಗಳು ಮಾತ್ರ ಯುವಕರನ್ನು ಸಾರ್ಥಕ ಜೀವನದ ಕಡೆಗೆ ಒಯ್ಯಬಲ್ಲವು. ಬುದ್ದಿವಂತರಾಗಿದ್ದೇವೆಯೇ ಹೊರತು ವಿವೇಕಿಗಳಾಗಿಲ್ಲ. ಮತ್ತೆ ಕಲ್ಯಾಣ ನೆಮ್ಮದಿಯ ಕಡೆ, ಸತ್ಯದ ಕಡೆಗೆ, ಶರಣ ಚಿಂತನೆಯ ಕಡೆ ಕರೆದುಕೊಂಡು ಹೋಗುವ ಮಂತ್ರದಂಡ. ಸಾಣೇಹಳ್ಳಿ ಶ್ರೀಗಳು ಮಾಡುತ್ತಿರುವ ಇಂಥ ಕೆಲಸಗಳನ್ನು ಪ್ರತಿಯೊಬ್ಬ ಸ್ವಾಮಿಗಳೂ ಮಾಡಬೇಕು ಎಂದರು.
ಸಾಮರಸ್ಯ ನಡಿಗೆ: ಟೌನ್ ಹಾಲ್ ಸರ್ಕಲ್ ನಿಂದ ಆರಂಭಗೊಂಡ ಸಾಮರಸ್ಯ ನಡಿಗೆಯಲ್ಲಿ ಶ್ರೀ ಸಿದ್ಧಲಿಂಗ ಸ್ವಾಮಿಗಳು, ಈಶ್ವರಾನಂದಪುರಿ ಸ್ವಾಮಿಗಳು, ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ವೀರೇಶಾನಂದ ಸರಸ್ವತಿ ಸ್ವಾಮಿಗಳು, ಶ್ರೀ ಇಮ್ಮಡಿ ಕರಿಬಸವೇಶ್ವರ ರಾಜೇಂದ್ರ ಸ್ವಾಮಿಗಳು, ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಅಟವಿ ಶಿವಲಿಂಗ ಸ್ವಾಮಿಗಳು, ಲಲಿತಾರವೀಶ್, ಮೌಲಾನಾ ಮಹಮ್ಮದ್ ಉಮರ್ ಅನ್ಸಾರಿ, ಮುಷ್ತಾಕ್ ಅಹಮದ್, ಎಸ್ ನಾಗಣ್ಣ, ಅನಂತ್ ನಾಯಕ್, ಆರ್ ಸುರೇಶ್, ಟಿ ಆರ್ ಸತೀಶ್ ಮುಂತಾದವರು ಭಾಗವಹಿಸಿದ್ದರು. ಕಲಾತಂಡಗಳು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಶರಣರ ಸ್ಥಬ್ದ ಚಿತ್ರವುಳ್ಳ ವಿಶೇಷ ವಾಹನದ ಜೊತೆ ಹೆಜ್ಜೆಹಾಕಿ ಸಿದ್ಧಿವಿನಾಯಕ ಕಲ್ಯಾಣಮಂಟಪ ತಲುಪಿದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಹೆಚ್ ಎನ್ ರಾಜಶೇಖರ್ ಸ್ವಾಗತಿಸಿದರೆ, ಲಿಂಗರಾಜು ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ
ಆಗಸ್ಟ್ 14, ತುಮಕೂರು; ಮತ್ತೆ ಕಲ್ಯಾಣದ ನಿಮಿತ್ತ ಇಲ್ಲಿನ ಶ್ರೀ ಸಿದ್ಧವಿನಾಯಕ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತ ಮಾನವನ ಪರಮಶತೃ ಅಜ್ಞಾನ. ಅಜ್ಞಾನವಿದ್ದಲ್ಲಿ ಸರ್ವನಾಶ ಶತಃಸಿದ್ಧ. ಹೊನ್ನು, ಹೆಣ್ಣು, ಮಣ್ಣೇ ಸಂಪತ್ತೆಂದು ಭಾವಿಸಿ ಅವುಗಳ ಹಿಂದೆ ಬಿದ್ದು ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಅಲ್ಲಪ್ರಭುಗಳು ಜ್ಞಾನವೇ ನಿಜವಾದ ಒಡವೆ, ಸಂಪತ್ತು ಎಂದಿದ್ದಾರೆ. ಬುದ್ಧಿವಂತಿಕೆ ಬೇರೆ, ಜ್ಞಾನ ಬೇರೆ. ಇಂದಿನ ಶಾಲಾಕಾಲೇಜುಗಳಲ್ಲಿ ಕೇವಲ ಬುದ್ಧಿವಂತಿಕೆಯನ್ನು ಮಾತ್ರ ಕಲಿಸುತ್ತಿವೆ. ವಿದ್ಯಾರ್ಥಿಗಳಿಗೆ ಔದ್ಯೋಗಿಕ, ವ್ಯಾವಹಾರಿಕ, ಪಾರಮಾರ್ಥಿಕ ಶಿಕ್ಷಣವೂ ಬೇಕು. ಪದವಿಗಾಗಿ ಶಿಕ್ಷಣ ನೀಡುತ್ತಿರುವುದು ವಿಷಾದದ ಸಂಗತಿ. ಬೌದ್ಧಿಕವಾಗಿ ಅತ್ಯುನ್ನತ ಸ್ಥಾನದಲ್ಲಿರುವವರಿಂದಲೇ ಸಮಾಜಘಾತುಕ ಕಾರ್ಯಗಳು ನಡೆಯುತ್ತಿವೆ. ಇಂತಹ ಬುದ್ಧಿವಂತಿಕೆ ಬೇಕಾಗಿಲ್ಲ. ನೈತಿಕವಾಗಿ ನಮ್ಮ ಮಕ್ಕಳು ಸದೃಢರಾಗಬೇಕು. ಕೇವಲ ದೇಹ ಸುಂದರವಾದರೆ ಸಾಲದು; ಮನಸ್ಸು ಸುಂದರವಾಗಿರಬೇಕು. ಬಸವಣ್ಣ ಕುಕ್ಕುಟ, ಶ್ವಾನ, ಗಜಗಳಿಗೆ ವಿಶೇಷವಾದ ಜ್ಞಾನವಿದೆ. ಆದರೆ ಆ ಜ್ಞಾನ ಭಗವಂತನನ್ನು ಅರಿಯುವಲ್ಲಿ ವಿಫಲವಾಗಿದೆ. ಆದರೆ ಮನುಷ್ಯ ತನ್ನ ತಾನರಿತರೆ ತಾನೇ ದೇವನಾಗುವನು. ನಮ್ಮಲ್ಲಿ ಗುಪ್ತವಾಗಿರುವ ಅನಿಷ್ಟ ಗುಣಗಳನ್ನು ದೂರ ಮಾಡಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುವುದೇ ಸುಜ್ಞಾನ. `ಮನೆ ನೋಡ ಬಡವರು; ಮನ ಘನ ಸಂಪನ್ನರಯ್ಯ’ ಎಂದು ಬಸವಣ್ಣ ಹೇಳುವಂತೆ ನಾವು ದೊಡ್ಡ ದೊಡ್ಡ ಕಟ್ಟಡಗಳಿಂದ ದೊಡ್ಡವರಾಗುವುದಿಲ್ಲ; ಒಳ್ಳೆಯ ಗುಣಗಳಿಂದಲೇ ದೊಡ್ಡವರಾಗುವುದು ಎನ್ನುವ ತಿಳುವಳಿಕೆ ನಮಗೆ ಇರಬೇಕು.
ಅನುಭವ ಮಂಟಪದಲ್ಲಿ ಶರಣರು ಜಾತಿ, ಮತ ಮುಂತಾದ ಅಸಮಾನತೆಗಳನ್ನೆಲ್ಲ ತೊಡೆದು ಒಟ್ಟಾಗಿ ಕೂತು ಸಮಸ್ತ ಸಮಾಜದ ಆಗುಹೋಗುಗಳನ್ನು ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಹೀಗೆ ನಮ್ಮ ನಮ್ಮ ಮನೆಗಳೇ ಅನುಭವ ಮಂಟಪಗಳಾಗಬೇಕು. ಇಂದು ಪ್ರತಿಯೊಬ್ಬರ ಮನೆಯ ದೇವರ ಕೋಣೆ ದೇವರುಗಳ ಮ್ಯೂಜಿಯಂ ನಂತಾಗಿವೆ. ಅಲ್ಲಿ ಕಾಲಿಡಲು ಜಾಗವೇ ಇಲ್ಲ. ಶರಣರು ಇಂಥ ಜಡ ದೇವರುಗಳನ್ನು ತಿರಸ್ಕರಿಸಿದರು. ದೇಹವನ್ನೇ ದೇವಲಯವನ್ನಾಗಿ, ಆತ್ಮವನ್ನೇ ಪರಮಾತ್ಮನನ್ನಾಗಿ ಮಾಡಿಕೊಂಡು ಕಾಯಕ-ದಾಸೋಹಗಳ ಮೂಲಕ ಪೂಜಿಸಿದರು. ಇಂಥ ಶರಣರ ತಿಳುವಳಿಕೆಯನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಅದರಂತೆ ನಡೆಯುವ ಜವಾಬ್ದಾರಿ ಹೊರಬೇಕು. ಈ ಹಿನ್ನೆಲೆಯಲ್ಲಿಯೇ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಮೂಲಕ ಶರಣರ ವಿಚಾರಗಳನ್ನು ಮಕ್ಕಳಲ್ಲಿ ಬಿತ್ತಲಾಗುತ್ತಿದೆ. ಪ್ರೀತಿ, ವಿಶ್ವಾಸ, ಕರುಣೆ, ದಯೆ ನಮ್ಮ ಬದುಕಾಗಬೇಕು. ಪ್ರತಿಯೊಬ್ಬರಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತೆ. ಒಳ್ಳೆಯತನವನ್ನು ರೂಢಿಸಿಕೊಳ್ಳಲು ಸಜ್ಜನರ ಸಂಘ, ಪ್ರಾರ್ಥನೆ, ಒಳ್ಳೆಯ ಚಿಂತನೆಗಳ ಅವಶ್ಯಕತೆಯಿದೆ. ಶಿಷ್ಯನಿಗೆ ಗುರುವೇ ವಂದಿಸುವಂತೆ ಬೆಳೆಸುವುದೇ ನಿಜ ಗುರುವಿನ ಆಶಯವಾಗಬೇಕು. ಎಲ್ಲಿಯವರೆಗೂ ಜಾತಿ ಇರುತ್ತೋ ಅಲ್ಲಿಯವರೆಗೂ ಮೀಸಲಾತಿ ಬೇಕು. `ಇಂದಿಂಗೆ, ನಾಳೆಗೆಂದು ಕುದಿದೆನಾದಡೆ ತಲೆದಂಡ’, `ಈಸಕ್ಕಿಯಾಸೆ ನಿಮಗೇಕೆ” ಎನ್ನುವ ಮೂಲಕ ಶರಣರು ಸಂಗ್ರಹ ಪ್ರವೃತ್ತಿ ವಿರೋಧಿಸಿದರು ಎಂದರು.
ಸಂವಾದಕ ಹೆಚ್ ವಿ ವೀರಭದ್ರಯ್ಯ ಮಾತನಾಡಿ ಗುರು ಶಿಷ್ಯನ ಸಮಸ್ತ ಕಲ್ಯಾಣವನ್ನು ಬಯಸುತ್ತಾನೆ. ಶಿಕ್ಷಕ ಒಂದು ವಿಷಯ ಕುರಿತಂತೆ ಮಾತ್ರ ತಿಳುವಳಿಕೆ ಹೇಳುವನು. ಮಾನವರೆಲ್ಲರೂ ಒಂದೇ ಎಂದು ಸಾರಿದವರು ಶರಣರು. ಸ್ವಾಮೀಜಿಯವರು ನಾವೆಲ್ಲರೂ ಕಲ್ಯಾಣದ ಕಡೆಗೆ ಹೋಗುವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.
ಸಂವಾದಕ ನಾಗಭೂಷಣ ಬಗ್ಗನಾಡು ಮಾತನಾಡಿ ಶರಣರು ವೈಚಾರಿಕ ಬೀಜವನ್ನು ಬಿತ್ತಿದರು. ಆದರೆ ನಮ್ಮ ಮಹಾಮರೆವಿನಿಂದಾಗಿ ವಚನಕಾರರ ಬದುಕು-ಬರಹಗಳು ಕೇವಲ ಒಂದು ಸಾಹಿತ್ಯವನ್ನಾಗಿ ನೋಡುತ್ತಿದ್ದೇವೆ. ವಚನಗಳು ಶರಣರ ಬದುಕಿನ ವಿಧಾನ ಎನ್ನುವುದನ್ನು ನಾವು ಅರಿಯಬೇಕು. ಅಂದು ಶ್ರಮಿಕ ಸಮುದಾಯ ಸೇರಿ `ಅನುಭವ ಮಂಪಟಪ’ ಕಟ್ಟಿ ಆಮೂಲಕ ಸಮಸಮಾಜದ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಿದರು. ಇಂದು ಅದೇ ಕನಸನ್ನು ಮತ್ತೊಮ್ಮೆ `ಮತ್ತೆ ಕಲ್ಯಾಣ’ದ ಮೂಲಕ ಪೂಜ್ಯರು ಬಿತ್ತುತ್ತಿರುವುದು ಶ್ಲಾಘನೀಯ. ಜಾತಿಯ ಕಂದಕವನ್ನು ನಿರ್ಮೂಲನೆ ಮಾಡುವುದು ಬಸವಣ್ಣನವರ ಬಹುದೊಡ್ಡ ಸವಾಲಾಗಿದ್ದಿತು. ಸಮಸಮಾಜ ನಿರ್ಮಾಣ ಮಾಡಲು ಸಹಪಂಕ್ತಿ ಬೋಜನ, ಅಂತರ್ ಜಾತಿ ವಿವಾಹಗಳನ್ನು ಶರಣರು ಮುಂಚೂಣಿಗೆ ತಂದರು. ಇಂದು ಜಾತಿ ವ್ಯವಸ್ಥೆ ವಜ್ರಕ್ಕಿಂತಲೂ ಕಠೋರವಾಗಿ ನಿರ್ಮಾಣವಾಗಿದೆ. ಕೆಲವರಿಗೆ ಜಾತಿ ಹೆಸರು ಹೇಳುವುದು ಅಹಂ ಆಗಿದ್ದರೆ; ಇನ್ನು ಕೆಲವರಿಗೆ ಅವಮಾನವಾಗಿದೆ. ಶರಣರು ತಮ್ಮ ಕಾಯಕದ ಮೂಲಕ ಜಾತಿಯನ್ನು ಗುರುತಿಸಿಕೊಂಡಿದ್ದರು. ಬರೀ ಆರ್ಥಿಕವಾಗಿ ಸಮಾನತೆ ಬಂದರೆ ಸಾಲದು ಸಾಮಾಜಿಕವಾಗಿ ಸಮಾನತೆ ಬರಬೇಕು. ಶರಣರು ದೇವಾಲಯಗಳನ್ನು ಜಂಗಮ ರೂಪಕ್ಕೆ ತಂದು ದೇಹವನ್ನೇ ದೇವಾಲಯ ಮಾಡಿಕೊಂಡರು.ಇದು ಇಂದು ನಮಗೆ ಮಾದರಿಯಾಗಬೇಕು.
ಚಿಂತಕ ಎಸ್ ಜಿ ಸಿದ್ಧರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿ ರಾಜಕಾರಣಿಗಳು ವಿದ್ಯಾವಂತರೇ ಆಗಬೇಕಾಗಿಲ್ಲ. ಇಂದಿನ ಅನೇಕ ಪದವಿಗಳನ್ನು ಪಡೆದ ರಾಜಕಾರಣಿಗಳು ಮಾಡುವ ಅವಾಂತರಗಳು ಕಡಿಮೆಯೇನಲ್ಲ. ಪ್ರಜಾಪ್ರತಿನಿಧಿಗಳಿಗೆ ಸಂವಿಧಾನದ ತಿಳುವಳಿಕೆ ಇಲ್ಲ. ಪ್ರತಿಯೊಬ್ಬ ರಾಜಕಾರಣಿಗೂ ಸಂವಿಧಾನ ಕುರಿತಂತೆ ಕಾರ್ಯಾಗಾರಗಳನ್ನು ಆಯೋಜಿ ತಿಳುವಳಿಕೆಯನ್ನು ನೀಡಬೇಕು. ಕೆಲವರಿಗೆ ರಾಜಕೀಯ ಸಿದ್ಧಾಂತಗಳ ಅರಿವಿದ್ದರೂ ಸ್ವಾರ್ಥ ತುಂಬಿಕೊಂಡಿದೆ. ಜಾತಿ ಮತ್ತು ಹಣಕ್ಕೆ ಮತಗಳನ್ನು ಮಾರಿಕೊಂಡಿದ್ದರಿಂದ ನಿಜವಾದ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ಸಹಮತ ವೇದಿಕೆಯ ಸಂಯೋಜಕ ಅನಂತನಾಯಕ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಇಂದು ಸಮಾಜದಲ್ಲಿ ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ತಾರತಮ್ಯವನ್ನು ಕಾಣುತ್ತೇವೆ. ಆರ್ಥಿಕ ತಾರತಮ್ಯಕ್ಕಿಂತ ಸಾಮಾಜಿಕ ತಾರತಮ್ಯ ಹೆಚ್ಚು ಘೋರವಾದುದು. ಇದರಿಂದ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಮನುಧರ್ಮದ ವಿರುದ್ಧವಾಗಿಯೇ ವಚನಕಾರರ ಚಳುವಳಿ ಹುಟ್ಟಿಕೊಂಡದ್ದು. ಶರಣರಿಗೆ ಪ್ರೋತ್ಸಾಹ ನೀಡಿದ ರಾಜ ಕಳಚೂರಿಯೂ ತಳಸಮುದಾಯಕ್ಕೆ ಸೇರಿದವನು ಎನ್ನುವುದನ್ನು ಗಮನಿಸಬೇಕು ಎಂದರು.
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು :
• 12ನೆಯ ಶತಮಾನದಲ್ಲಿ ವಚನ ಕ್ರಾಂತಿಯಾಗಿತ್ತು. ಈಗ ಅದರ ಬಗ್ಗೆ ಅರಿವು ಮೂಡಿಸುವುದು ಹೇಗೆ?
• ಒಬ್ಬ ಮನುಷ್ಯನಲ್ಲಿ ಒಳ್ಳೆತನ ಮತ್ತು ಕೆಟ್ಟತನ ಇರುತ್ತೆ. ಒಳ್ಳೆತನವನ್ನೇ ಮೈಗೂಡಿಸಿಕೊಳ್ಳುವುದು ಹೇಗೆ?
• ಬಸವಣ್ಣನವರ ಫೋಟೋ ಪೂಜೆ ಮಾಡುವುದರಿಂದ ಅದೂ ಸಹ ಮೂಢನಂಬಿಕೆ ಆಗುವುದಿಲ್ವಾ?
• ಹಿಂದಿನ ಗುರುಗಳಿಗೂ ಇಂದಿನ ಶಿಕ್ಷಕರಿಗೂ ಇರುವ ವ್ಯತ್ಯಾಸವೇನು?
• ಮತ್ತೆ ಕಲ್ಯಾಣದ ಮೂಲಕ ಎಷ್ಟು ಅಂತರ್ ಜಾತಿಯ ವಿವಾಹಗಳನ್ನು ಮಾಡಿಸಿದ್ದೀರಿ?
• ಈ ವೇದಿಕೆಯ ಮೂಲಕ ಜಾತಿ ವ್ಯವಸ್ಥೆಯನ್ನು ಹೇಗೆ ನಿರ್ಮೂಲನೆ ಮಾಡಬಹುದು?
• ಮೀಸಲಾತಿಯ ನಡುವೆಯೂ ಸಮಾನತೆಯನ್ನು ಹೇಗೆ ಬಗೆಹರಿಸುತ್ತೀರಿ?
• ಒಂದೇ ಸಮುದಾಯದ ವಿದ್ಯಾರ್ಥಿಗಳನ್ನು ಮಾತ್ರ ಆ ಸಮುದಾಯದವರು ಪ್ರೋತ್ಸಾಹಿಸುತ್ತಿರುವುದು ಎಷ್ಟು ಸರಿ?
• ಮನೆಯಲ್ಲಿ, ಶಾಲೆಯಲ್ಲಿ ಸಮಾನತೆಯನ್ನು ನೋಡುತ್ತೇವೆ. ಆದರೆ ಇದು ಸಮಾಜದಲ್ಲಿ ಕಾಣುತ್ತಿಲ್ಲ ಯಾಕೆ?
• ಇತ್ತಿಚಿನ ದಿನಗಳಲ್ಲಿ ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡದವರೇ ಮುಂದುವರಿದಿದ್ದಾರೆ. ಸಾಮಾನ್ಯರು ಹಿಂದಿದ್ದಾರೆ. ಹೀಗಿದ್ದೂ ಮತ್ತೆ ಮೀಸಲಾತಿಯ ಅವಶ್ಯಕತೆ ಇದೆಯೇ?
• ದೇವರು ಮತ್ತು ದೇವಾಲಯಗಳ ಮೇಲೆ ವಚನಕಾರರ ನಿವಾಲುವುಗಳೇನು?
• ವಚನ ಸಾಹಿತ್ಯ ರಾಷ್ಟಪ್ರೇಮವನ್ನು ಹೇಗೆ ತುಂಬಿಕೊಂಡಿದೆ?
• ವಚನಕಾರರು ದುರಂತದಲ್ಲಿ ಅಂತ್ಯವಾದುದ್ದು ಏಕೆ?
- ಹೆಚ್ ಎಸ್ ದ್ಯಾಮೇಶ್
9449649850

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)