ಆಗಸ್ಟ್ ೧೩ ಮಂಗಳವಾರ, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರದಲ್ಲಿ 13ನೇ ದಿನದ ಮತ್ತೆ ಕಲ್ಯಾಣ ಆಂದೋಲನ. ಅಭಿಯಾನದಲ್ಲಿ ಸಾರ್ವಜನಿಕ ಸಮಾವೇಶ. ಅನನ್ಯ ಟಿವಿ ನೇರಪ್ರಸಾರ‌ ವೀಕ್ಷಿಸಲು - ಕ್ಲಿಕ್ ಮಾಡಿ


ಇಲ್ಲಿನ ಕೆಇಬಿ ಸಮುದಾಯ ಭವನದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮವೇಶದ ನೇತೃತ್ವ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಜನರಿಗೆ ತಾವು ಯಾಕೆ ದೇವರನ್ನು ಪೂಜಿಸುತ್ತಿದ್ದೇವೆ ಎನ್ನುವ ಕಲ್ಪನೆಯೂ ಇಲ್ಲ. ಬೂಟಾಟಿಕೆಯ ಪೂಜೆ ವ್ಯರ್ಥ. ನಮ್ಮೊಳಗಿನ ಕತ್ತಲೆಯನ್ನು ಕಳೆದುಕೊಳ್ಳಲು ಬೇಕಾದುದು ಸುಜ್ಞಾನ. ಈ ಸುಜ್ಞಾನದಿಂದ ಅಂತರಂಗದ ಕತ್ತಲೆಯನ್ನು ಕಳೆದುಕೊಳ್ಳಲು ಸಾಧ್ಯವೇ ಹೊರತು; ಸ್ಥಾವರ ದೇವರ ಪೂಜೆಯಿಂದಲ್ಲ. ನಮ್ಮ ನಮ್ಮ ದೇಹವೇ ಜಂಗಮ ದೇವಾಲಯ. ಇದನ್ನೇ ಪೂಜಿಸಬೇಕು. ಅಂದರೆ ನಮ್ಮನ್ನು ನಾವೇ ಅರಿಯಬೇಕು. ಈ ರೀತಿ ಶರಣರು ತನ್ನ ದೇವರನ್ನು ತಾನೇ ಮುಟ್ಟಿ ಪೂಜಿಸುವ ಅವಕಾಶ ಕಲ್ಪಿಸಿಕೊಟ್ಟರು. ಕಾಡುವ, ಬೇಡುವ ದೇವರುಗಳಿಗೆ ಮಾರು ಹೋಗದೆ ತನ್ನಲ್ಲಿರುವ ಶಿವನ ಸಂಕೇತವಾಗಿ ಇಷ್ಟಲಿಂಗ ಪೂಜೆಯನ್ನು ಜಾರಿಯಲ್ಲಿ ತಂದರು. ಹೆಣ್ಣು-ಗಂಡು, ಜಾತಿ-ಮತಗಳನ್ನು ಅಳಿಸಿ ಭಾವೈಕ್ಯತೆ ಬೆಳೆಸಲು ಇಷ್ಟಲಿಂಗ ಪೂಜೆ ಸಹಕಾರಿ. ನಮ್ಮ ದೇಶದಲ್ಲಿ ಸಾವಿರಾರು ದೇವರುಗಳಿದ್ದರೂ ಪ್ರಾಕೃತಿಕ ಅನಾಹುತಗಳಿಂದ ತನ್ನ ಭಕ್ತರನ್ನು ಪಾರು ಮಾಡಲು ಸಾಧ್ಯವಾಗಿಲ್ಲ. ನದಿಯ ಮರಳು ಬಗಿದು ಮಾರಿದ್ದೇವೆ, ಮರ-ಗಿಡಗಳನ್ನು ಕಡಿದು ಬಯಲು ಮಾಡಿದ್ದೇವೆ. ಹೀಗಾಗಿಯೇ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿವೆ. ಪ್ರಕೃತಿಯನ್ನು ಅದಿರುವಂತೆ ಬಿಡುವುದೇ ನಾವು ಮಾಡುವ ದೊಡ್ಡ ಪೂಜೆ. ದೇವನೊಬ್ಬನೇ ನಾಮ ಹಲವು. ಆತ ಪ್ರಕೃತಿಯ ಕಣ ಕಣದಲ್ಲೂ ಇದ್ದಾನೆ. ದೇವರನ್ನೂ ಜಾತಿಯ ಮಿತಿಗೆ ಒಳಪಡಿಸಿರುವುದು ಮನುಷ್ಯನ ಸಂಕುಚಿತ ಮತಿಯನ್ನು ಸೂಚಿಸುತ್ತದೆ. `ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ. ಜಲವೊಂದೆ ಶೌಚಾಚ ಮನಕ್ಕೆ’ ಎಂದು ಹೇಳುವ ಮೂಲಕ ಪ್ರಕೃತಿಯನ್ನು ಸಮಾನವಾಗಿ ಕಾಣುವ ಬಗೆಯನ್ನು ಶರಣರು ಹೇಳಿದರು. ಬದಲಾವಣೆ ಒಮ್ಮೆಲೆ, ಎಲ್ಲರಿಂದಲೂ ಏಕಕಾಲಕ್ಕೆ ಆಗಲು ಸಾಧ್ಯವಿಲ್ಲ. ಒಂದರಿಂದೇ ಹಲವು. ಹನಿ ಹನಿಗೂಡಿ ಹಳ್ಳ. ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಂಖ್ಯೆ ಕಡಿಮೆ ಇರಬಹುದು. ಇಂಥ ಕೆಲವರೇ ಸಮಾಜ ಪರಿರ್ತನೆಗೆ ಮುಂದಾಗಬೇಕು ಎಂದರು.
`ಮೂಢ ರೂಢಿಗಳ ಅಳಿಸಿದ ಶರಣರು’ ಕುರಿತಂತೆ ಮಾತೆ ಗಂಗಾದೇವಿ ಮಾತನಾಡಿ ಅತಿಯಾಗಿ ಒಂದೇ ಸಂಗತಿ, ವಿಷಯಕ್ಕೆ ಅಂಟಿಕೊಂಡರೆ ಅದೇ ಕ್ರಮೇಣ ಮೂಢನಂಬಿಕೆಯಾಗುವುದು. ಮೂಢನಂಬಿಕೆಗಳು ವ್ಯಕ್ತಿಯ ಸಮಯ, ಶ್ರಮ, ಹಣವನ್ನು ವ್ಯರ್ಥ ಮಾಡುವವು. ಇದರಿಂದ ಪ್ರಗತಿ ಕುಂಠಿತಗೊಳ್ಳುವುದು. ಮೂಢನಂಬಿಕೆಗಳ ಪಾಶ ಹರಿದಲ್ಲದೆ ವೈಚಾರಿಕತೆ ಮೂಡಲು ಸಾಧ್ಯವಿಲ್ಲ. ಬಸವಣ್ಣನವರು ಅತ್ಯಂತ ವೈಚಾರಿಕರು. ಪೌರಾಣಿಕ ಕಲ್ಪನೆಗಳ ದೇವರನ್ನು ಹೀಗಳೆದರು. ದೇಹವನ್ನೇ ದೇವಾಲಯವನ್ನಾಗಿಸಿ, ಆತ್ಮವನ್ನೇ ದೇವರನ್ನಾಗಿಸಿಕೊಂಡರು. ಬಾಹ್ಯ ಸ್ವಚ್ಛತೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆಂತರಿಕ ಸ್ವಚ್ಛತೆ. ಅರಿಷಡ್ವರ್ಗಗಳನ್ನು ಕಳೆದುಕೊಳ್ಳುವುದರ ಮೂಲಕ, ಶರಣರ ವಚನಗಳ ಅಧ್ಯಯನ, ಅನುಷ್ಠಾನದ ಮೂಲಕ ಆಂತರಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು. ಮೂಢನಂಬಿಕೆಗಳು ಕೇವಲ ಹೊರಗಷ್ಟೇ ಇಲ್ಲ ನಮ್ಮ ದೇಹದ ಅವಯವಗಳಲ್ಲೂ - ಎಡ ಕನಿಷ್ಠ, ಬಲ ಶ್ರೇಷ್ಠ, ಕಾಲು ಕನಿಷ್ಠ, ತಲೆ ಶ್ರೇಷ್ಠ ಎನ್ನುವ ಮೂಢನಂಬಿಕೆ ಇದೆ. ನೀರು ಕನಿಷ್ಠವೂ ಅಲ್ಲ ಶ್ರೇಷ್ಠವೂ ಅಲ್ಲ. ನೀರು ನೀರೇ. ಬಹಳವೆಂದರೆ ಶುದ್ಧ, ಅಶುದ್ಧ ಎಂದು ವಿಂಗಡಿಸಬಹುದಷ್ಟೇ. ಮಾಡಿದ ಪಾಪಗಳನ್ನು ತೊಳೆದುಕೊಳ್ಳಲು ಅದು ಮೈಗಂಟಿದ ಕೊಳೆಯಲ್ಲ. ಪಶ್ಚಾತ್ತಾಪದಿಂದ ಮಾತ್ರ ಪಾಪ ಕಳೆದುಕೊಳ್ಳಲು ಸಾಧ್ಯ. ಇತರರ ಮನಸ್ಸನ್ನು ನೋಯಿಸುವುದು, ಇನ್ನೊಬ್ಬರಿಗೆ ಘಾತವ ಮಾಡುವುದೂ ಪಾಪವೇ. ಶರಣರು ಎಡಗೈಯ ಮೇಲೆಯೇ ದೇವರನಿಟ್ಟು ಪೂಜಿಸುವ ಮೂಲಕ ಎಡಗೈಗೂ ಶ್ರೇಷ್ಠತೆಯನ್ನು ತಂದುಕೊಟ್ಟರು. ಶ್ರಮಿಕರು ಶ್ರಮಿಸದಿದ್ದರೆ ಪೂಜಾರಿ ಪುರೋಹಿತರ ಜೀವನ ನಡೆಯದು. ಹೀಗಾಗಿಯೇ ಶರಣರು ಎಲ್ಲ ಕಾಯಕವೂ ಮುಖ್ಯ ಎಂದು ಕಾಯಕ ಸಂಸ್ಕೃತಿಯನ್ನು ಬೆಳೆಸಿದರು ಎಂದರು.
`ಶರಣರ ಸಾಮಾಜಿಕ ಕ್ರಾಂತಿ’ ಕುರಿತಂತೆ ಡಾ. ಎಲ್ ಹನುಮಂತಯ್ಯ ಮಾತನಾಡಿ ಭಾರತವನ್ನು ಈ ಹಿಂದೆ 500-600 ಜನ ಸಾಮಂತರು ಆಳ್ವಿಕೆ ಮಾಡುತ್ತಿದ್ದರು. ಅವರಲ್ಲಿ ಒಗ್ಗಟ್ಟಿಲ್ಲದೆ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರು. ಇದೆಲ್ಲವನ್ನು ಹೋಗಲಾಡಿಸಿ ಎಲ್ಲರೂ ಒಂದಾಗಿ ಬಾಳಬೇಕೆನ್ನುವ ಉದ್ದೇಶದಿಂದ ಬುದ್ಧನ ಬೌದ್ಧ ಧರ್ಮ ಜಾರಿಗೆ ಬಂತು. ದಾರಿ ತಪ್ಪಿದ ಧರ್ಮಗಳನ್ನು ಸರಿದಾರಿಗೆ ತರಲೆಂದೆ ಕಾಲ ಕಾಲಕ್ಕೆ ಸಾಧು-ಸಂತರು ಉದಯಿಸಿದರು. ಮನುಧರ್ಮ ಅಸಮಾನತೆಯ ಆಗರವಾಗಿತ್ತು. ಮನುಷ್ಯರ ಹುಟ್ಟನ್ನೂ ಸಹ ಅವೈಜ್ಞಾನಿಕವಾಗಿ ಶ್ರೇಣೀಕರಣ ಮಾಡಲಾಯಿತು. ಇದರಿಂದಾಗಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚಾಯಿತು. ನ್ಯಾಯ ತೀರ್ಮಾನವೂ ಕೂಡ ಧರ್ಮಾಧಾರಿತವಾಗಿತ್ತು. ಈ ಎಲ್ಲ ಅಸಮಾನತೆಗಳನ್ನು ಹೋಗಲಾಡಿಸಲೆಂದೇ ಬಸವಣ್ಣ 12 ನೆಯ ಶತಮಾನದಲ್ಲಿ ಚಳುವಳಿಯನ್ನು ಆರಂಭಿಸಿದರು. ಈ ಚಳುವಳಿ ಶೋಷಣೆಗೆ ಒಳಾಗಾದ, ತಳಸಮುದಾಯದ ಜನರನ್ನೇ ಒಳಗೊಂಡಿತ್ತು. ಬುದ್ಧನ ನಂತರ ಬಸವಣ್ಣನೊಬ್ಬನೇ ಇಂಥ ಮಹತ್ಕಾರ್ಯಕ್ಕೆ ಮುಂದಾಗಿರುವುದು. ಆದರೂ ಇಂದಿಗೂ ಅಸಮಾನತೆ ಹೋಗಲಾಡಿಸಲು ಸಾಧ್ಯವಿಲ್ಲ. ಸಾವಿರಾರು ವರ್ಷಗಳಿಂದ ಶೋಷಣೆಯ ಕೂಪಕ್ಕೆ ತಳ್ಳಿದ ಭಾರತ ಭವ್ಯ ಭಾರತವೋ? ಎಂದು ಕೇಳಬೇಕಾಗಿದೆ. ಮೊಟ್ಟಮೊದಲಿಗೆ ಪ್ರಜಾಪ್ರಭುತ್ವದ ಕಲ್ಪನೆಯನ್ನು ಕೊಟ್ಟು, ಎಲ್ಲ ಜನರೂ ಸಮಾನರು ಎಂದು ಹೇಳಿದವರು ಶರಣರು. ವಚನ ಚಳುವಳಿ, ಕನ್ನಡದಲ್ಲಿ, ಕರ್ನಾಟಕದಲ್ಲಿ ನಡೆದುದು ಜಗತ್ತಿಗೇ ಮಾದರಿಯಾದುದು. ಆದರೆ ದುರ್ದೈವದ ಸಂಗತಿ ಇಂಥ ನಾಡಿನಲ್ಲಿಯೇ ಇನ್ನೂ ಅನೇಕ ಅಸಮಾನತೆಗಳು ವಿಜೃಂಭಿಸುತ್ತಿವೆ. ಬಸವಣ್ಣ `ಮಾದರ ಚೆನ್ನಯ್ಯನ ಮನೆಯ ಮಗ ನಾನು’, `ಉನ್ನತ ಕುಲದಲ್ಲಿ ಹುಟ್ಟಿದವನೆಂದು ಕಷ್ಟತನದ ಹೊರೆಯ ಹೊರಿಸದಿರಯ್ಯ’ ಎನ್ನುವ ಮೂಲಕ ಮೊಟ್ಟಮೊದಲು ಜಾತಿಯ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು. ನಮ್ಮ ದೇಶದಲ್ಲಿ ಬುದ್ಧಿಗೆ ಇರುವ ಬೆಲೆ ಶ್ರಮಕ್ಕಿಲ್ಲ. ಅವಕಾಶ ಸಿಕ್ಕರೆ ಕನಿಷ್ಠರೂ ಶ್ರೇಷ್ಠರಾಗುವರು. ಅಸೆ, ರೋಷ ಅಳಿದವರು ಶರಣರು. ಶೌಚಾಲಯ ಸ್ವಚ್ಛ ಮಾಡುವ ಭಂಗಿಗಳು ಪರಮ ಶ್ರೇಷ್ಠ ಶರಣರು. ಪೂಜೆ ಮಾಡುವವ, ಕಸ ಗುಡಿಸುವವ ಇಬ್ಬರೂ ಶ್ರೇಷ್ಠರೆಂದರು ಶರಣರು. ದೇವಾಲಯ ಕಟ್ಟಿಸುವ ಹಣವನ್ನು ಶಾಲೆ ಕಟ್ಟಿಸಲು ಬಳಸಿದ್ದರೆ ನಮ್ಮ ದೇಶದಲ್ಲಿ ಅನಕ್ಷರತೆಯೇ ಇರುತ್ತಿರಲಿಲ್ಲ. ನಾವು ಸೃಷ್ಟಿಸಿರುವ ದೇವರಗಳಲ್ಲೂ ಅಸಮಾನತೆ ಎದ್ದು ಕಾಣುತ್ತಿದೆ. ಕೆಳವರ್ಗದ ದೇವರುಗಳಿಗೆ ಕೋರೆಹಲ್ಲುಗಳು, ಉಗ್ರ ಸ್ವರೂಪವನ್ನು ನೀಡಲಾಗಿದೆ. ಶಿವ ಸಾಮಾನ್ಯ ಜನರ ಪ್ರತಿನಿಧಿ. ಅವೈಜ್ಞಾನಿಕತೆ, ಮೂಢನಂಬಿಕೆಗಳನ್ನು ಧಿಕ್ಕರಿಸಿದವರು ಶರಣರು. ಇಂಥ ಶರಣರ ಸಾಹಿತ್ಯವನ್ನು ಪಾಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮತ್ತೆ ಕಲ್ಯಾಣ ಒಂದು ದಿನದ ಆಚರಣೆಯಾಗದೆ ನಿತ್ಯದ ಜನಾಂದೋಲನವಾಗಬೇಕು ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಶಾಂತಾ ಸ್ವಾಗತಿಸಿದರೆ ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು. ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನಗೊಂಡಿತು.
ನಗರಕೇಂದ್ರ ಗ್ರಂಥಾಲಯದಿಂದ ಆರಂಭವಾದ ಸಾಮರಸ್ಯ ನಡಿಗೆಯಲ್ಲಿ ಜನಪ್ರತಿನಿಧಿಗಳು, ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದೊಂದಿಗೆ ಕೆ ಇ ಬಿ ಸಮುದಾಯ ಭವನ ತಲುಪಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ:
ಆಗಸ್ಟ್ 13, ಚಿಕ್ಕಬಳ್ಳಾಪುರ; ಮತ್ತೆ ಕಲ್ಯಾಣದ ನಿಮಿತ್ತ ಇಲ್ಲಿನ ಕೆಇಬಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಗಳು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ 12ನೆಯ ಶತಮಾನ ಕನ್ನಡ ನಾಡಷ್ಟೇ ಅಲ್ಲ; ಜಗತ್ತಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯುವಂಥದ್ದು. ಇದಕ್ಕೂ ಮುನ್ನ ಕನ್ನಡ ನೆಲದಲ್ಲಿ ಪಂಪ, ರನ್ನ, ಪೊನ್ನ, ಜನ್ನರ ಹಳೆಗನ್ನಡವಿತ್ತು. ಇದನ್ನು ಎಲ್ಲರೂ ಓದಿ ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಲೌಕಿಕವೇ ಬೇರೆ ಪಾರಮಾರ್ಥಿಕವೇ ಬೇರೆ ಎನ್ನುವ ಮನೋಭಾವ ಬಲವಾಗಿ ಬೇರೂರಿತ್ತು. ನಂತರ ಬಂದ ಶರಣರು ತಮ್ಮ ವಚನಗಳಲ್ಲಿ `ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ’ ಎನ್ನುವ ಮೂಲಕ ಇವೆರಡು ಒಂದೇ ಎಂದು ಸಾರಿದರು. ಇಂಥ ವಚನಗಳನ್ನು ಜನಸಾಮಾನ್ಯರು ಓದಿ ಅರ್ಥ ಮಾಡಿಕೊಳ್ಳಲು ಸುಲಭವಾಗಿದ್ದವು. ನಂತರ ಇದೇ ಸಾಹಿತ್ಯ ವಚನ ಸಾಹಿತ್ಯ ಎಂದು ಜನಜನಿತವಾಗಿತ್ತು. ವಚನಗಳ ಮೂಲಕ ಜನರು ಮೌಢ್ಯಗಳ ದಾಸರಾಗಿ ತಪ್ಪು ಹೆಜ್ಜೆಗಳನ್ನಿಡುತ್ತಿರುವುದರ ಬಗ್ಗೆ, ದೋಷಗಳನ್ನು ಹುಡುಕಿ ತಿದ್ದುವ ಮೂಲಕ ಎಚ್ಚರಿಸಿದರು. ಆದರೆ ಇಂದೂ ಸಹ ನೀರಿನಲ್ಲಿ ಮುಳುಗಿದರೆ, ಮರ ಸುತ್ತಿದರೆ ಸಮಸ್ಯೆಗಳು ದೂರವಾಗುತ್ತವೆ ಎನ್ನುವ ಮೌಢ್ಯ ತುಂಬಿ ತುಳುಕ್ತಾ ಇದೆ. ನೀರಿನಲ್ಲಿ ಮುಳುಗುವುದರಿಂದ, ಮರ ಸುತ್ತುವುದರಿಂದ ಮನ ಶುದ್ಧವಾಗುವುದಿಲ್ಲ. ಅಂತರಂಗದ ಮನ ಶುದ್ಧವಾಗದೆ ಬಾಹ್ಯ ಬದುಕು ಶುದ್ಧವಾಗದು. 12ನೆಯ ಶತಮಾನ ಜಗತ್ತಿಗೇ ಹೊಸ ಮಾರ್ಗವನ್ನು ತೋರಿಸಿತು ಎಂದು ಹೆಮ್ಮೆಯಿಂದ ಹೇಳ್ತಿವಿ. ಹೇಳೋದು ಅಷ್ಟೇ ಅಲ್ಲ; ಆಚರಣೆಗೆ ತರಬೇಕು. ಮಾತು ಕೃತಿಯಲ್ಲಿ ಹೊಂದಾಣಿಕೆ ಇಲ್ಲದಿರುವುದೇ ನಿರೀಕ್ಷಿಸಿದಷ್ಟು ಸಮಾನತೆಗಳನ್ನು ಸಾಧಿಸಲಾಗಿಲ್ಲ. ಶರಣರು ಮೊದಲು ನಡೆದರು ನಂತರ ನುಡಿದರು. ಅವರ ಬದುಕು ಪಾರದರ್ಶಕವಾಗಿತ್ತು. ಹಾವು ಅಪಾಯಕಾರಿಯಲ್ಲ; ವಿಷ ಅಪಾಯಕಾರಿ. ಮನುಷ್ಯ ತನ್ನ ಬುದ್ದಿಯನ್ನು ಶುದ್ಧಿ ಮಾಡಿಕೊಳ್ಳದಿದ್ದರೆ ಹಾವಿನ ವಿಷಕ್ಕಿಂತಲೂ ಅಪಾಯಕಾರಿಯಾಗುವುದು. ಸಜ್ಜನರ ಸಂಗದಿಂದ ನಮ್ಮಲ್ಲಿರುವ ವಿಷಗಳನ್ನು ಕಡಿಮೆಮಾಡಿಕೊಳ್ಳಬಹುದು.
ಇಂದು ಕರ್ನಾಟಕವೂ ಸೇರಿದಂತೆ ಕೆಲ ರಾಜ್ಯಗಳಲ್ಲಿ ನೆರೆಹಾವಳಿಯಿಂದ ಜನ-ಜಾನುವಾರುಗಳು ತುಂಬಾ ಕಷ್ಟಕ್ಕೀಡಾಗಿವೆ. ಇಂತಹ ಸಂದರ್ಭದಲ್ಲಿ ನಮ್ಮ ಹೊಣೆಗಾರಿಕೆ ಏನು? ಎಂದು ಪ್ರತಿಯೊಬ್ಬರೂ ಪ್ರಶ್ನಿಸಿಕೊಂಡು ಅದಕ್ಕೆ ಉತ್ತರವನ್ನೂ ಕಂಡಕೊಳ್ಳಬೇಕು. ನೊಂದವರಿಗೆ ಸಹಾಯ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಆಗ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಸಾರ್ಥಕವಾಗುತ್ತದೆ. ಕಲ್ಯಾಣ ಅಂದ್ರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಕತ್ತಲೆಯಲ್ಲಿರುವವರಿಗೆ ಬೆಳಕು ತೋರುವುದು, ಅಜ್ಞಾನದಲ್ಲಿರುವವರನ್ನು ಸುಜ್ಞಾನದ ಕಡೆ ಕೊಂಡೊಯ್ಯುವುದು. ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಆಗ ನಿಮ್ಮ ಮನಸ್ಸಿನ ಗೊಂದಲಗಳು ದೂರವಾಗಿ ದಾರಿ ಸ್ಪಷ್ಟವಾಗುತ್ತದೆ. ಧರ್ಮಗಳು ಜಾತಿಗಳಾಗಿ, ಮತಗಳಾಗಿ ಸಂಕುಚಿತತೆಯ ವ್ಯಾಪ್ತಿ ಹೊಂದಿರುವುದು ವಿಷಾದದ ಸಂಗತಿ. ಅದು ಧರ್ಮದ ತಪ್ಪಲ್ಲ; ಅನುಯಾಯಿಗಳ ತಪ್ಪು. ಎಲ್ಲಾ ಧರ್ಮಗಳ ಸಾರ ಒಂದೇ. ತುಳಿತಕ್ಕೆ ಒಳಗಾದವರಿಗೆ ಸಾರ್ವಜನಿಕವಾಗಿ ಮಾತನಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದು ‘ಅನುಭವ ಮಂಟಪ’. ಲಿಂಗಾಯತ ಧರ್ಮ 12ನೆಯ ಶತಮಾನದಲ್ಲೇ ಅಸ್ತಿತ್ವದಲ್ಲಿತ್ತು. ಜಾತೀಯತೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ ಸಾಧು-ಸಂತರು-ಶರಣರನ್ನೇ ಒಂದೊಂದು ಜಾತಿಗೆ ಸೀಮಿತ ಮಾಡಿಕೊಂಡಿರುವುದು ದುರ್ದೈವದ ಸಂಗತಿ. ಇದನ್ನು ಹೋಗಲಾಡಿಸುವ ಆಶಯವೇ ‘ಮತ್ತೆ ಕಲ್ಯಾಣ’ ಅಭಿಯಾನದ ಉದ್ದೇಶ. ನಮ್ಮನ್ನು ನಾವು ಅರ್ಥಮಾಡಿಕೊಂಡು ಸರಿ ದಾರಿಯಲ್ಲಿ ನಡೆದರೆ ನಾವೇ ದೇವರಾಗುತ್ತೇವೆ. ನಾವೆಲ್ಲರೂ ಮಾನವ ಕುಲ, ನಾವೆಲ್ಲರೂ ಒಂದು ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಜಾತಿಯ ದುರಹಂಕಾರ ಕಳೆದುಕೊಂಡು ಒಂದಾಗಿ ಬದುಕಬೇಕು. ಪ್ರಕೃತಿಯಲ್ಲಿ ಅನೇಕ ಜಾತಿಯ ಗಿಡಮರಗಳಿವೆ. ಅವೆಲ್ಲವನ್ನು ನಾವು ಸಸ್ಯಜಾತಿ ಎಂದು ಕರೆಯುತ್ತೇವೆ. ಇವು ಎಂದು ಸಂಘರ್ಷಕ್ಕೆ ಒಳಗಾಗಿ ಜಗಳವಾಡಿಲ್ಲ. ಅನ್ಯೋನ್ಯವಾಗಿ ಬದುಕಿ ನಿಸ್ವಾರ್ಥ ಸೇವೆ ಮಾಡುತ್ತವೆ. ಇಂಥ ಸೌಹಾರ್ದಯುತ ಬದುಕು ಮಾನವನದ್ದೂ ಆಗಬೇಕು ಎಂದರು.
ಸಂವಾದಕರಾದ ಡಾ. ಮಾತೆ ಶಿವಜ್ಯೋತಿ ಮಾತನಾಡಿ ಜನಮಾನಸದಲ್ಲಿ ನೆಲೆಸಿರುವ ಮೌಢ್ಯಗಳನ್ನು ಹೊಡೆದೋಡಿಸಲು, ಮನಸ್ಸಿಗೆ ಶಾಂತಿ ನೀಡುವ ಉದ್ದೇಶದಿಂದ ಜಾಗೃತಿಮೂಡಿಸಲು ಉದ್ದೇಶದಿಂದ ಪೂಜ್ಯರು ಮತ್ತೆ ಕಲ್ಯಾಣ ಅಭಿಯಾನವನ್ನು ಆಯೋಜಿಸಿದ್ದಾರೆ. ಇದು ಅತ್ಯಂತ ಶ್ಲಾಘನೀಯ. ಬಸವಣ್ಣ ನಮ್ಮಂತೆಯೇ ಮನುಷ್ಯರು. ನಾವೂ ಬಸವಣ್ಣನವರಂತೆ ಸಾಧನೆ ಮಾಡಲು ಸಾಧ್ಯ. `ಮಣ್ಣ ಬಿಟ್ಟು ಮಡಿಕೆಯಿಲ್ಲ, ತನ್ನ ಬಿಟ್ಟು ದೇವರಿಲ್ಲ’ ಎಂದರಿತು ತಮ್ಮೊಳಗಿನ ಚೈತನ್ಯದ ಮೂಲಕ ಸಾಧಕರಾದರು. ದಿನ ನಿತ್ಯವೂ ಒಂದೊಂದೇ ಹೆಜ್ಜೆ ಒಳ್ಳೆಯದರ ಕಡೆ ಇಡುತ್ತಾ ಹೋದರೆ ನಾವೇ ದೇವರಾಗುತ್ತೇವೆ. ಸಮಾಜ ಒಳ್ಳೆಯ ರೀತಿಯಲ್ಲಿ ಬೆಳೆದರೆ ಅದೇ ಕಲ್ಯಾಣ. ಶರಣರು 12ನೆಯ ಶತಮಾನದಲ್ಲಿ ಕ್ರಾಂತಿ ಮಾಡಿದರು. ಆ ಕ್ರಾಂತಿಯಲ್ಲಿ ಎಲ್ಲ ವರ್ಗದ ಜನರು ಸೇರಿ ಸಮಾಜದ ಏಳ್ಗೆಯ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅದೇ ಮಾದರಿಯಲ್ಲಿ ಮತ್ತೆ ಕಲ್ಯಾಣ ಅಭಿಯಾನದ ಮೂಲಕ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರು ನಡೆಯುತ್ತಿದ್ದಾರೆ ಎಂದರು.
ಸಹಮತ ವೇದಿಕೆಯ ಸಂಯೋಜಕ ಅನಂತ ನಾಯಕ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಸಮಾಜದಲ್ಲಿ ಬದಲಾವಣೆ ಬರುವುದು ಜಾಗೃತಿ ಬಂದಾಗ. ಪ್ರಜಾಪ್ರಭುತ್ವ ಮೂಲ ಕಲ್ಪನೆ ಒಳ್ಳೆಯದೇ. ಇದರಿಂದಾಗಿಯೇ ನಾವು ಇಂದು ಒಬ್ಬರಿಗೊಬ್ಬರು ಪ್ರಶ್ನೆ ಮಾಡುವ ಶಕ್ತಿ ಪಡೆದುಕೊಂಡಿದ್ದೇವೆ. ಪ್ರಜಾಪ್ರಭುತ್ವ ಬಲಗೊಳ್ಳಬೇಕೆಂದರೆ ನಾವೂ ಬಲಗೊಳ್ಳಬೇಕು. ಬಹುತೇಕ ರಾಜಕಾರಣಿಗಳ ನಡೆ-ನುಡಿ ಬೇರೆ ಬೇರೆಯಾಗಿರುತ್ತದೆ. ಅವರ ನಡೆ-ನುಡಿ ಒಂದಾಗುವಂತೆ ಅವರನ್ನು ಜಾಗೃತಗೊಳಿಸುವ ಹೊಣೆಗಾರಿಕೆಯೂ ಪ್ರಜೆಗಳ ಮೇಲಿದೆ. ದೇವಸ್ಥಾನಗಳ ಹೆಸರಿನಲ್ಲಿ ಮೂಢನಂಬಿಕೆ, ತಾರತಮ್ಯ ನಡೀತಾ ಇದೆ. ಇಂತಹ ದೇವಸ್ಥಾನಗಳನ್ನು ತಿರಸ್ಕರಿಸಬೇಕು. ಬದಲಾಗಿ ನಮ್ಮ ದೇಹವೇ ದೇವಾಲಯ, ಆತ್ಮವೇ ದೇವರು ಎನ್ನುವ ಭಾವನೆ ನಮಗೆ ಬರಬೇಕು ಎಂದರು.
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು :
ಅನುಭವ ಮಂಟಪ ಸ್ಥಾಪನೆಯ ಉದ್ದೇಶ ಮತ್ತು ಅದರ ಪ್ರಸ್ತುತತೆಯೇನು?
ಬಸವಣ್ಣ ಎಲ್ಲರನ್ನು ಇವ ನಮ್ಮವ, ಇವ ನಮ್ಮವ ಎನ್ನುತ್ತಿದ್ದರು. ಆದರೆ ಇತ್ತೀಚಿಗೆ ಲಿಂಗಾಯತ ಮತ್ತು ವೀರಶೈವ ಎನ್ನುವ ಗೊಂದಲ ಸೃಷ್ಟಿಯಾಗಿದೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
ಪ್ರತಿಯೊಬ್ಬ ವಚನಕಾರರನ್ನು ಒಂದೊಂದು ಜಾತಿಗೆ ಸೀಮಿತ ಮಾಡಿಕೊಂಡಿದ್ದೇವೆ. ಇದು ಎಷ್ಟರ ಮಟ್ಟಿಗೆ ಸರಿ?
ಕಾಯಕವೇ ಕೈಲಾಸ ಎಂದು ಹೇಳಿ ಕಾಯಕವನ್ನೇ ಬಿಟ್ಟು ದೇವಸ್ಥಾನಗಳನ್ನು ಸುತ್ತುತ್ತಾರೆ. ಇದು ಸರಿಯೇ?
ಅಪ್ಲಿಕೇಶನ್ ನಲ್ಲಿ ಜಾತಿ ಕಾಲಂ ಇರುತ್ತೆ. ಇದು ಎಷ್ಟಮಟ್ಟಿಗೆ ಸರಿ?
- ಹೆಚ್ ಎಸ್ ದ್ಯಾಮೇಶ್