ಆಗಸ್ಟ್ ೧೨, ಸೋಮವಾರ, ಕೋಲಾರ

ಕೋಲಾರದಲ್ಲಿ 12ನೇ ದಿನದ ಮತ್ತೆ ಕಲ್ಯಾಣ ಸಮಾವೇಶ.ಅನನ್ಯ ಟಿವಿ - ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ


ಇಲ್ಲಿನ ಟಿ ಚೆನ್ನಯ್ಯ ರಂಗಮಂದಿರದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಇಂದು ಬೆಳಕು ಬೀರುವವರಿಗಿಂತ; ಭ್ರಮೆಗಳನ್ನು ಬಿತ್ತುವವರೇ ಹೆಚ್ಚಾಗಿದ್ದಾರೆ. ನಮಗೆ ಬೆಳಕು ಬೇಕೋ ಅಥವ ಭ್ರಮೆ ಬೇಕೋ ಯೋಚಿಸಬೇಕು. ಬೆಳಕು ಬೇಕು ಎನ್ನುವವರು ವಚನಗಳ ಕಡೆ, ಭ್ರಮೆ ಬೇಕು ಎನ್ನುವವರು ದೇವಸ್ಥಾನಗಳು, ಮಠಗಳು, ಜೋತಿಷ್ಯಗಳು, ಹೊತ್ತಿಗೆಗಳು, ಗಿಳಿಶಾಸ್ತ್ರ ಮುಂತಾದ ಮೌಢ್ಯಬಿತ್ತುವವರ ಕಡೆ ಮುಖ ಮಾಡಬೇಕು. ಹೊರಗಿನ ಕತ್ತಲೆ ಕಳೆಯುವುದು ಸುಲಭ. ಒಳಗಿನ ಕತ್ತಲೆಯನ್ನು ಗುರುತಿಸುವುದು, ಹೋಗಲಾಡಿಸುವುದು ಅಷ್ಟು ಸುಲಭವಲ್ಲ. ಕಾಮ, ಕ್ರೋಧ, ಮೋಹ, ಮದ, ಮತ್ಸರ, ದ್ವೇಷ, ಅಜ್ಞಾನ, ಅಸೂಯೆ ಮುಂತಾದವುಗಳು ಒಳಗಿನ ಕತ್ತಲೆ. ಸಾಹಿತ್ಯದ ಅಧ್ಯಯನ, ಸಜ್ಜನರ ಸಹವಾಸವೇ ಒಳಗಿನ ಕತ್ತಲೆಯನ್ನು ಕಳೆದುಕೊಳ್ಳುವ ವಿಧಾನ. ಮೈ, ಕೈ, ತಲೆ, ಬಟ್ಟೆಗಳನ್ನು ತೊಳೆಯುವುದು ಸುಲಭ. ಮನಸ್ಸಿನ ಕೊಳೆಯನ್ನು ತೊಳೆಯಲು ನೀರು, ಸಾಬೂನು ಸಹಾಯ ಮಾಡದು. ಸಜ್ಜನರ ಒಡನಾಟ ಹೆಚ್ಚಬೇಕು. ಆದರೆ ಇಂದು ಸಜ್ಜನರ ಸಂಗಕ್ಕಿಂತ ದುರ್ಜನರ ಸಂಗವೇ ಹೆಚ್ಚಾಗುತ್ತಿದೆ. ದುರ್ಜನರ ಸಂಗ ಬಚ್ಚಲ ನೀರ ಮಿಂದಂತೆ. ದುರ್ಜನರು ಒಳಗೂ, ಹೊರಗೂ ಕಾಡುವರು. ಎಲ್ಲರೂ ಗೋಮುಖವ್ಯಾಘ್ರರೇ ಆಗಿರುವಾಗ ನಾವು ಯಾರನ್ನು ನಂಬುವುದು ಎನ್ನುವ ಪ್ರಶ್ನೆ ಹಲವರದು. ಒಳ್ಳೆಯವರು ಇಲ್ಲದೇ ಇರಬಹುದು; ಅವರ ವಿಚಾರಗಳು ಸಾಹಿತ್ಯದ ರೂಪದಲ್ಲಿವೆ. ಅವುಗಳ ಅಧ್ಯಯನ ಅನುಷ್ಠಾನಕ್ಕೆ ಮುಂದಾಗಬೇಕು. ಅಧ್ಯಯನ ಪ್ರವೃತ್ತಿಯೇ ಕಡಿಮೆಯಾಗಿರುವುದು ದುರದೃಷ್ಟಕರ ಸಂಗತಿ. `ತನಗೆ ಮುನಿವವಗೆ ತಾ ಮುನಿಯಲೇಕಯ್ಯ’ . ಎನ್ನುವ ಬವಣ್ಣನವರ ಮಾತಿನಂತೆ ನಕಾರಾತ್ಮಕ ಚಿಂತನೆಗಿಂತ ಸಕಾರಾತ್ಮಕ ಚಿಂತನೆ ಹೆಚ್ಚಾಗಬೇಕು. ಸಕಾರಾತ್ಮಕ ಯೋಚನೆಗಳೇ ಕಟ್ಟುವ ಕ್ರಿಯೆಯಲ್ಲಿ ಸಹಾಯ ಮಾಡುತ್ತವೆ. ಇಂದು ವಿವಿಧ ಸಂಘ ಸಂಸ್ಥೆಗಳ ಸಂಘಟಕರಿಗೆ ಮೊದಲು ಕಲ್ಯಾಣದ ಬೆಳಕು ಬೇಕಾಗಿದೆ. ನಮ್ಮದೇ ಆದ ಗೋಡೆಗಳನ್ನು ಒಡೆದು ಎಲ್ಲರನ್ನೂ ಒಂದು ಕಡೆ ಕೂಡಿಸುವುದೇ ಮತ್ತೆ ಕಲ್ಯಾಣದ ಮೊದಲ ಹೆಜ್ಜೆ. 12 ನೆಯ ಶತಮಾನದಲ್ಲಿ ಕಳ್ಳತನ ಮಾಡುವ, ಹೆಂಡ ಮಾರುವ, ವೇಶ್ಯಾವೃತ್ತಿ ಮಾಡುವವರೂ ಸೇರಿದಂತೆ ಹಲವರು ಇದ್ದರು. ಬಸವಣ್ಣ ಅವರೆಲ್ಲರನ್ನೂ ಪರಿವರ್ತಿಸುವ ಪ್ರಯತ್ನದಲ್ಲಿ ಯಶಸ್ವಿಯಾದರು. ಒಡೆಯುವುದು ಸುಲಭ ಕಟ್ಟುವುದು ಕಷ್ಟ. ಕಷ್ಟದ ದಾರಿಯೇ ನಮ್ಮದಾಗಬೇಕು. ಬಡತನ ನಿವಾರಣೆ ಮಾಡಲು ಹೊಸ ಯೋಜನೆಗಳನ್ನು ಸರಕಾರ ಘೋಷಿಸುವ ಅವಶ್ಯಕತೆಯಿಲ್ಲ. ಬಡತನ ಬರದಂತೆ ಕಾಯಕ ಶ್ರದ್ಧೆಯನ್ನು ಮೈಗೂಡಿಸಿಕೊಳ್ಳವ ಯೋಜನೆಗಳನ್ನು ಜಾರಿಗೆ ತರಬೇಕು. ದೂರದೃಷ್ಟಿ ನಮ್ಮ ಇಂದಿನ ರಾಜಕೀಯ ನೇತಾರರಿಗೆ ಕಡಿಮೆ. ನಮ್ಮ ಕರ್ನಾಟಕ ಸರಕಾರ ಒಂದು ವರ್ಷದ ಮಟ್ಟಿಗೆ ಇತರೆ ಎಲ್ಲ ಯೋಜನೆಗಳನ್ನು ರದ್ದುಗೊಳಿಸಿ ಕರ್ನಾಟಕದ ಎಲ್ಲ ಕೆರೆ-ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಬೇಕು. ಸರಕಾರಗಳು ಜನರಿಗೆ ಬೇಡುವುದನ್ನು ಕಲಿಸುತ್ತಿವೆಯೋ ಹೊರತು ಕೊಡುವುದನ್ನು ಕಲಿಸುತ್ತಿಲ್ಲ. `ಬೇಡುವವರಿಲ್ಲದೆ ನಾನು ಬಡವನಾದೆನಯ್ಯ’, `ಬೇಡು ಬೇಡಲೆ ಹಂದೆ’ ಎಂದು ಶರಣರು ದೇವರಿಗೇ ಸವಾಲು ಹಾಕುವರು. `ಗುರುವಾದಡೂ ಕಾಯಕದಿಂದಲೇ ವೇಷದ ಪಾಶ ಹರಿವುದು’ ಎನ್ನುವ ಮೂಲಕ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದರು. ಈ ಪ್ರಜ್ಞೆಯನ್ನು ಇಂದಿನ ಯುವಕರಲ್ಲಿ ಬೆಳೆಸಬೇಕು. ಯುವಕರು ಮನಸ್ಸು ಮಾಡಿದರೆ ನಾಡಿನ ಭಾಗ್ಯವಿದಾತರಾಗಬಹುದು. ಜವಾಬ್ದಾರಿ ಸ್ಥಾನದಲ್ಲಿರುವವರು ಪೂಜೆ, ಪುನಸ್ಕಾರಗಳ ಮೂಲಕ ಇಂದಿನ ಪೀಳಿಗೆಯನ್ನು ಮತ್ತೆ ಮೌಢ್ಯಕ್ಕೆ ಎಳೆಯುತ್ತಿದ್ದಾರೆ. ಕಾಯ ಮತ್ತು ಕಾಯಕವೇ ಕೈಲಾಸ ಎಂದು ಶರಣರು ಹೇಳಿದರು. ವಿಲಾಸಿ ಜೀವನದ ಬದಲಿಗೆ ವಿಕಾಸ ಜೀವನವನ್ನು ಅಪ್ಪಿಕೊಳ್ಳಬೇಕು. ಅಂತರಂಗದ ವಿಕಾಸವಾಗದೆ ಬಹಿರಂಗದ ವಿಕಾಸ ಸಾಧ್ಯವಾಗದು. ಆದರ್ಶ ಸಮಾಜವನ್ನು ಕಟ್ಟಿದರೆ ಅದು ಎಂದೂ ಬಿದ್ದು ಹೋರುವಂಥದ್ದಲ್ಲ. ಶರಣರು ತಮ್ಮ ಕುರುಹನ್ನು ಬಿಟ್ಟವರಲ್ಲ; ಅರಿವನ್ನು ಕೊಟ್ಟವರು. ಕುರುಹು ದಾರಿತಪ್ಪಿಸುತ್ತದೆ. ಅರಿವು ದಾರಿ ತೋರಿಸುತ್ತದೆ. ಅರಣ್ಯ ನಾಶ, ಪ್ರಕೃತಿಯನ್ನು ಭೋಗದ ವಸ್ತುವನ್ನಾಗಿಸಿದ್ದೇ ಇಂದಿನ ಪ್ರಾಕೃತಿಕ ವಿಕೋಪಕ್ಕೆ ಕಾರಣ. ಮತ್ತೆ ಕಲ್ಯಾಣ-ಸಹಮತ ವೇದಿಕೆಯ ಜಿಲ್ಲಾ ಸಮಿತಿಗಳ ಮೂಲಕ ನೆರೆ ಸಂತ್ರಸ್ತರಿಗೆ ಸಹಾಯ ನೀಡುವ ಕಾರ್ಯವನ್ನು ಮಾಡಬೇಕೆಂದು ಕರೆ ನೀಡಿದ್ದೇವೆ. ಸಾರ್ವಜನಿಕರೂ ಸಹ ಹೆಚ್ಚಿನ ಸಹಾಯ ನೀಡಲು ಸನ್ನದ್ಧರಾಗಬೇಕು ಎಂದರು.
`ವಚನಕಾರರ ಬದುಕು-ಬರಹ’ ಕುರಿತಂತೆ ಡಾ. ಹೆಚ್ ಎಲ್ ಪುಷ್ಪಾ ಮಾತನಾಡಿ ತರಗತಿಯ ಪಠ್ಯಗಳು ನಿಮಿತ್ತ ಮಾತ್ರ. ಅದನ್ನೂ ಮೀರಿದಂತೆ ವಿದ್ಯಾರ್ಥಿಗಳು ಬದುಕನ್ನು ಕಂಡುಕೊಳ್ಳುವ ಕ್ರಿಯೆಗೆ ಒಳಗಾಗಬೇಕು. ವಚನಕಾರರ ಬದುಕು-ಬರಹಗಳು ಬೇರೆ ಬೇರೆ ಯಾಗಿರಲಿಲ್ಲ. ಕಲ್ಯಾಣ ಸಾಮಾಜಿಕ, ಸಾಹಿತ್ತಿಕ, ರಾಜಕೀಯ, ಧಾರ್ಮಿಕ ಸಂಗತಿಗಳ ಮುಖ್ಯ ಕೇಂದ್ರವಾಗಿತ್ತು. ಇಂದಿನ ಮೌಲ್ಯ ನಾಳೆಗೆ ಅಪಮೌಲ್ಯವಾಗುವ, ಚದುರಿದ ಮನಸ್ಸಿನ ಯುವ ಪೀಳಿಗೆ ನಮ್ಮ ಮುಂದೆ ಇದೆ. ಇಂಥ ಸಂದರ್ಭದಲ್ಲಿ ಮತ್ತೆ ಕಲ್ಯಾಣದ ಅವಶ್ಯಕತೆ ತುಂಬ ಇತ್ತು. ಭಾರತ ಬಹುಸಂಸ್ಕೃತಿಯ ಬಹುತ್ವವುಳ್ಳ ನಾಡು. ವಿಪ್ರ ಕುಲದಲ್ಲಿ ಹುಟ್ಟಿದ ಬಸವಣ್ಣನವರಿಗೆ ತನ್ನ ಕುಲವೇ ಉಸಿರುಗಟ್ಟಿಸುವಂತೆ ಮಾಡಿತ್ತು. ಈ ಕಾರಣಕ್ಕಾಗಿಯೇ ಬಸವಣ್ಣ ತನ್ನ ಕುಲದ ಹಂಗು ತೊರೆದು ಹೊರಬಂದರು. ಕಾಯಕ-ದಾಸೋಹಗಳೇ ವಚನಕಾರರ ವ್ರತ, ನಿಯಮ, ನಿಷ್ಠೆಯಾಗಿತ್ತು. ದೇಹವನ್ನೇ ದೇವಾಲಯವನ್ನಾಗಿಸಿಕೊಳ್ಳುವ ಸರಳ ವಿಚಾರಗಳನ್ನು ಉನ್ನತೀಕರಿಸಿದರು. ಏಕ ದೈವ, ಧರ್ಮದ ಕೆಳಗೆ ಕಾಯಕ ಜೀವಿಗಳನ್ನೆಲ್ಲ ಒಂದು ಕಡೆ ಸೇರಿಸುವ ಕೆಲಸವನ್ನು ಬಸವಣ್ಣ ಮಾಡಿದರು. ವಚನಕಾರರು ತಮ್ಮ ಅನುಭವಕ್ಕೆ ಬಂದುದನ್ನು ಮಾತ್ರ ವಚನವಾಗಿಸಿದರು. ದೇವರನ್ನು ನಾವು ಬಿಟ್ಟರೂ ದೇವರು ನಮ್ಮನ್ನು ಬಿಡದೇ ಇರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಬಸವಣ್ಣ ಡಂಭಾಚಾರದ ಪೂಜೆಯನ್ನು ನಿರಾಕರಿಸಿ `ನಿಮ್ಮ ನಿಮ್ಮ ತನುವ, ಮನವ ಸಂತೈಸಿಕೊಳ್ಳಿ’ ಎಂದರು. ವಚನಕಾರರ ಪ್ರತಿಯೊಂದು ವಚನಗಳೂ ಆತ್ಮ ಕಥಾನಕವೇ ಆಗಿವೆ. ಇಂದು ಸಂವಿಧಾನವಿದ್ದೂ ಜಾರಿಗೆ ತರಲಾಗದ್ದನ್ನು ನಂಬಿಕೆ, ಪ್ರೀತಿ ವಿಶ್ವಾಸದಿಂದ ಬದಲಾವಣೆಯನ್ನು ಬಸವಣ್ಣ ಅಂದು ತಂದರು. ತಳಸಮುದಾಯದ ಕಾಯಕಜೀವಿಗಳೇ ಬಸವಣ್ಣನ ಕಲ್ಯಾಣದ ಶಕ್ತಿಕೇಂದ್ರವಾಗಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧಮನ ಮಾಡುತ್ತಿರುವ ಈ ಕಾಲದಲ್ಲಿ ಬಸವಣ್ಣ ಅನುಭವ ಮಂಟಪದ ಮೂಲಕ ನೀಡಿದ್ದ ಸ್ವಾತಂತ್ರ್ಯ ಬೆರಗನ್ನುಂಟು ಮಾಡುವಂಥದ್ದು. ಕೈಲಾಸಕ್ಕಿಂತ ಕಾಯಕ ಮಾಡಿ ಗಳಿಸುವ ಕೂಲಿ ದೊಡ್ಡದು, ಕುಲಕ್ಕಿಂತ ಕಾಯಕ ದೊಡ್ಡದು, ಕುಲದ ಹಂಗಿಲ್ಲದೆ ಹೊಸ ಸಮಾಜವನ್ನು ಕಟ್ಟಬೇಕು ಎನ್ನುವ ಕನಸು ಕಂಡವವರು ಶರಣರು. ಏಸು, ಬುದ್ಧರ ಹೋರಾಟವೂ ಇದೇ ಆಗಿತ್ತು. ಇದಕ್ಕೆ ಸಂಘಟನಾತ್ಮಕ ರೂಪ ಕೊಟ್ಟ ಹೆಗ್ಗಳಿಕೆ ಬಸವಣ್ಣನವರಿಗೆ ಸಲ್ಲಬೇಕು. ಇಂದಿನ ಆರ್ಥಿಕ ಸಂಕಷ್ಟಗಳಿಗೆ ಕಾರಣ ಜನರಲ್ಲಿ ಕಾಯಕ-ದಾಸೋಹ ಪ್ರಜ್ಞೆ ಇಲ್ಲದಿರುವುದೇ ಆಗಿದೆ. ಕಂಬಾಲಪಲ್ಲಿ ಘಟನೆ ಕೋಲರಕ್ಕೆ ಒಂದು ಕಪ್ಪುಚುಕ್ಕಿಯಾಗಿ ಉಳಿದಿದೆ. 12 ನೆಯ ಶತಮಾನದಲ್ಲಿದ್ದ ಸಮಸ್ಯೆಗಳೇ ಇಂದು ಬೇರೆ ಬೇರೆ ಮುಖವಾಡ ಹೊತ್ತು 21 ನೆಯ ಶತಮಾನದ ನಮ್ಮ ಮುಂದೆ ಬಂದಿವೆ. ಹಣ ಸಂಪಾದನೆಯಿಂದ ಅಹಂ, ದಬ್ಬಾಳಿಕೆ ಹೆಚ್ಚಾಗಿದೆ. ಆದರೆ ವಚನಕಾರರು ಸಂಗ್ರಹ ಬುದ್ಧಿಯನ್ನು ವಿರೋಧಿಸಿದರು. ಅಕ್ಕಮಹಾದೇವಿ ಮುಂತಾದ ವಚನಕಾರ್ತಿಯರು ಇಂದಿನ ಮಹಿಳೆಯರಿಗೆ ಮಾದರಿಯಾದವರು. 12 ನೆಯ ಶತಮಾನದ ವಚನಕಾರರ ಬದುಕು-ಬರಹಗಳನ್ನು ಇಂದಿನ ಜನರ ಬಳಿಗೆ ಕರೆದುಕೊಂಡು ಹೋಗುವ ಪ್ರಯತ್ನವೇ ಮತ್ತೆ ಕಲ್ಯಾಣ ಎಂದರು.
`ಮನುಕುಲದ ಕನಸು ಕಲ್ಯಾಣ’ ವಿಷಯ ಕುರಿತಂತೆ ಡಾ. ಕೆ ವೈ ನಾರಾಯಣಸ್ವಾಮಿ ಮಾತನಾಡಿ ಶರಣರ ನಡೆ-ನುಡಿಗಳು ಜೀವ ಸಂವಿಧಾನವಾಗಿವೆ. ಇಷ್ಟು ಶತಮಾನಗಳು ಕಳೆದರೂ ಶರಣರ ಆಚಾರ-ವಿಚಾರಗಳನ್ನು ತಮ್ಮ ಬದುಕಿನಲ್ಲಿ ಸೂಚ್ಯವಾಗಿ ಹಿಡಿದಿಟ್ಟುಕೊಂಡು ಬಂದಿರುವುದೇ ಆಶ್ಚರ್ಯಕರವಾಗಿದೆ. ವಚನಗಳು ಶರಣರ ಎದೆಯ ದನಿಯ ಪಿಸು ಮಾತುಗಳು. ಅದರ ಝುಳು-ಝುಳು ನಿನಾದವೇ ಮತ್ತೆ ಕಲ್ಯಾಣ. ಬಸವಾದಿ ಶರಣರು ಮಾಡಿದ್ದು ಪ್ರಯೋಗ. ಅದನ್ನು ನಾವಿಂದು ಆಂದೋಲನ, ಚಳುವಳಿ ಎಂದು ಕರೆಯುತ್ತಿದ್ದೇವೆ. ವಚನಗಳು ಮನುಕುಲವನ್ನು ಒಗ್ಗೂಡಿಸುವ ಸಂವಿಧಾನ. ವಚನಕಾರರು ಕೇವಲ ಕರ್ನಾಟಕವನ್ನುದ್ದೇಶಿಸಿ ಮಾತನಾಡುವುದಿಲ್ಲ; ಇಡೀ ಮನುಕುಲವನ್ನು ಉದ್ದೇಶಿಸಿ ಮಾತನಾಡಿದರು. ಮನುಷ್ಯನ ಸ್ವಾರ್ಥದ ವಿರುದ್ಧದ ನಡೆ ವಚನಕಾರರದು. ಮಾನವ ಜಗತ್ತಿನಲ್ಲಿ ಎಲ್ಲಿಯೂ ನಡೆಯದ ಸಂಗತಿಯನ್ನು ಕನ್ನಡದ ನೆಲದಲ್ಲಿ ವಚನಕಾರರು ನಡೆಸಿಕೊಟ್ಟರು. ಭೂಮಿ ಕಂಡ, ಮಾನವ ಕುಲದ ಸ್ವಪ್ನ ಈ ಕಲ್ಯಾಣ. ಯಾವ ಭಾಷೆಯಲ್ಲೂ, ಯಾವ ಭಾಗದಲ್ಲೂ ಈ ಪರಿಯ ಪ್ರಯೋಗ ನಡೆದಿಲ್ಲ. 12 ನೆಯ ಶತಮಾನದಲ್ಲಿ ಶರಣರು ಹಚ್ಚಿದ ಕಲ್ಯಾಣದ ಪ್ರಣತೆಯ ಬೆಳಕು ಆರದಂತೆ ನೋಡಿಕೊಳ್ಳುವ ಜವಾಬ್ದಾರಿ ಕನ್ನಡಿಗರ ಮೇಲಿದೆ. ಅಂಚಿನಲ್ಲಿದ್ದವರನ್ನು ತನ್ನ ಕಕ್ಷೆಗೆ ತೆಗೆದುಕೊಂಡದ್ದು ವಚನಕಾರರು ಮಹತ್ವದ ಸಂಗತಿ. ನೆಲಕ್ಕೆ, ಜಲಕ್ಕೆ, ಪ್ರಕೃತಿಗೆ ಹೊಂದಿರುವ ಕೀಳನ್ನು ಬಿಡಿಸುವ ಕೆಲಸ ಮಾಡಿದವರು ವಚನಕಾರರು. ಕೋಟ್ಯಾಂತರ ಜನರ ಬದುಕಿನ ಬದಲಾವಣೆಗೆ ಮಾಡಿದ ಪ್ರಯತ್ನ ಜಗತ್ತಿನ ದೊಡ್ಡ ವಿದ್ಯಮಾನ. ದೇವರನ್ನು ಪ್ರೀತಿಸುವ ಮಾರ್ಗವನ್ನು ವಚನಕಾರರು ಹೇಳಿಕೊಟ್ಟರು. ಇಂದು ನೀರಿಗೂ ರಾಕ್ಷತ್ವವನ್ನು ತಂದುಕೊಟ್ಟವರು ಮನುಷ್ಯರು. ಜಲ ಜವರಾಯ, ಜಲ ರಾಕ್ಷಸ ಎನ್ನುವ ಪದಪಂಜಗಳೇ ಅಸಮಂಜಸವಾದುದು. ವೇಮನ, ಕೈವಾರ ನಾರಯಣಪ್ಪನವರೂ ವಚನಕಾರರ ವಿವೇಕವನ್ನೇ ಮುಂದುವರಿಸಿದರು. ಹಿಂಸೆ, ದ್ವೇಷ, ಪ್ರೀತಿ, ನಂಬುಗೆ ನಮ್ಮ ಒಳಗೇ ಇವೆ. ನಾವು ಬದುಕುವುದಷ್ಟೇ ಮುಖ್ಯವಲ್ಲ; ಸಕಲ ಜೀವಾತ್ಮರಿಗೆ ಲೇಸನ್ನು ಬಯಸಬೇಕೆಂದು ಹೇಳಿಕೊಟ್ಟವರು ವಚನಕಾರರು. ಇದೇ ಆಶಯವನ್ನು ಮತ್ತೆ ಕಲ್ಯಾಣವೂ ಹೊಂದಿದೆ. ಕೆಡುಕಿಗೆ ಅಸಾಧ್ಯವಾದ ಬದ್ಧತೆ ಇರುತ್ತದೆ. ಇದಕ್ಕೆ ವಿರುದ್ಧವಾಗಿ ಮತ್ತೆ ಕಲ್ಯಾಣ ಹೆಜ್ಜೆಹಾಕಬೇಕಿದೆ. ಶರಣರ ತತ್ವ-ಸಿದ್ಧಾಂತಗಳನ್ನು ನೋಡುವ ಕಣ್ಣಿನ ಕುರುಡನ್ನು ತೆಗೆಯುವ, ಕಿವಿಯ ಕಿವುಡುತನವನ್ನು ಹೋಗಲಾಡಿಸುವ ಪ್ರಯತ್ನವೇ ಮತ್ತೆ ಕಲ್ಯಾಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ನಂಗಲಿ ಮಾತನಾಡಿ 12 ನೆಯ ಶತಮಾನದ ವಚನ ಚಳುವಳಿ ಮತ್ತು ಹೋರಾಟ 800 ವರ್ಷಗಳ ಕಾಲ ಅಜ್ಞಾತದಲ್ಲಿತ್ತು. ವಚನಗಳಿಗೆ ಸಾಹಿತ್ಯದ ಸ್ಥಾನಮಾನ ನೀಡಲೂ ಹಿಂದುಮುಂದು ನೋಡಲಾಗಿತ್ತು. ಸಾಹಿತ್ಯ ರಚನೆ ವಚನಕಾರರ ಉದ್ದೇಶವಾಗಿರಲಿಲ್ಲ. ಹೋರಾಟವೇ ಅವರ ಉದ್ದೇಶವಿತ್ತು. ಇಂದು ವಚನ ಸಾಹಿತ್ಯಕ್ಕೆ ಮತೀಯ ಮೇಕಅಪ್ ಗಳಿಂದಾಗಿ ಅದರ ನಿಜ ಸ್ವರೂಪ ಗೊತ್ತಾಗುತ್ತಿಲ್ಲ. ಡಾ. ಎಲ್ ಬಸವರಾಜ್ ಮೇಕ್ಅಪ್ ಕಳಚಿ ನಿಜ ಸ್ವರೂಪವನ್ನು ಬೆಳಕಿಗೆ ತಂದರು. ಮೌಖಿಕ ಪರಂಪರೆಯ ಮೂಲಕ ಮಂಟೆಸ್ವಾಮಿಯಲ್ಲಿ ಕಲ್ಯಾಣದ ಬೆಳಕಿದೆ. ಅಲ್ಲಮಪ್ರಭು ಮತ್ತು ಮಂಟೇಸ್ವಾಮಿ ಒಂದೇ. ವಚನ ಸಾಹಿತ್ಯವನ್ನು ಒಳಗೊಳ್ಳುವುದಾದರೆ ಮಂಟೇಸ್ವಾಮಿ ಅಥವ ಅಲ್ಲಮನ ಮೂಲಕ ಒಳಗೊಳ್ಳಬೇಕು. ಮಾಲೂರು ಸಂತರ ತಾಲ್ಲೂಕು. ಕೈವಾರ ತಾತಯ್ಯ ತೆಲುಗಿನಲ್ಲಿ ಬರೆದರೂ ಕನ್ನಡದಲ್ಲಿ ಗುರುತಿಸಿಕೊಂಡವರು. ಮತೀಯ ಶಕ್ತಿಗಳು ಬೆಳೆಯಲು ಅವಕಾಶವನ್ನೇ ಕೋಲಾರ ಜಿಲ್ಲೆಯ ಸಂತರು ಕೊಡಲಿಲ್ಲ. ನಾವು ವಚನಕಾರರ ವಾರಸುದಾರರಾಗಬೇಕು. ಲಿಂಗವನ್ನು ಮೈಮೇಲೆ ಧರಿಸದ ಗುಪ್ತ ಭಕ್ತರೂ ಇದ್ದರು. ಅವರು ಸರ್ವಾಂಗವೂ ಲಿಂಗವೆಂದರು. ಇಂಥ ಶರಣರ ವಿಚಾರಧಾರೆಗಳನ್ನು ಮತ್ತೆ ಮತ್ತೆ ಜನರಬಳಿ ತೆಗೆದುಕೊಂಡು ಹೋಗುವ ಮೂಲಕ ಜನರನ್ನು ಕಲ್ಯಾಣದ ಕಡೆ ಕರೆದುಕೊಂಡು ಹೋಗಬೇಕಿದೆ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಹ ಮಾ ರಾಮಚಂದ್ರ ಸ್ವಾಗತಿಸಿದರು. ಹೆಚ್ ಎ ಪುರುಷೋತ್ತಮರಾವ್ ಕಾರ್ಯಕ್ರಮ ನಿರ್ವಹಿಸಿದರು. ಪಿಚ್ಚಳ್ಳಿ ಶ್ರೀನಿವಾಸ್ ವಂದಿಸಿದರು. ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನಗೊಂಡಿತು.
ಅಂಬೇಡ್ಕರ್ ವೃತ್ತದಿಂದ ಆರಂಭವಾದ ಸಾಮರಸ್ಯ ನಡಿಗೆಯಲ್ಲಿ ವಿವಿಧ ಧರ್ಮದ ಮುಖಂಡರು, ಜನಪ್ರತಿನಿಧಿಗಳು, ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದೊಂದಿಗೆ ಚೆನ್ನಯ್ಯ ರಂಗಮಂದಿರ ತಲುಪಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ:
ಆಗಸ್ಟ್ 12, ಕೋಲಾರ; ಮತ್ತೆ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಟಿ ಚೆನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉತ್ತರಿಸುತ್ತ ನಾವು 21ನೆಯ ಶತಮಾನದಲ್ಲಿದ್ದು; 12ನೆಯ ಶತಮಾನದ ಬಗ್ಗೆ ಚಿಂತನೆ ಮಾಡ್ತಾ ಇದ್ದೇವೆ. ಇದಕ್ಕೆ ಕಾರಣ ಇಂದಿನ ಸಮಸ್ಯೆಗಳೆಲ್ಲವಕ್ಕೂ 12ನೆಯ ಶತಮಾನದ ಶರಣರು ವಚನಗಳ ರೂಪದಲ್ಲಿ ಪರಿಹಾರವನ್ನು ತಿಳಿಸಿರುವುದು. ಶರಣರ ಆಲೋಚನೆಗಳನ್ನೇ ಮತ್ತೆ ಜನಮಾನಸದಲ್ಲಿ ಬಿತ್ತುವ ಕೆಲಸವೇ ಈ ‘ಮತ್ತೆ ಕಲ್ಯಾಣ’. ಶರಣರು ಅಸಮಾನತೆಗೆ ಮೂಲ ಕಾರಣವಾಗಿದ್ದ ದೇವರು, ದೇವಸ್ಥಾನಗಳ ವಿರುದ್ಧ ತಿರುಗಿಬಿದ್ದು ಸಮಸಮಾಜ ನಿರ್ಮಾಣ ಮಾಡಿದರು. ಆದರೆ ಈಗಲೂ ಅನೇಕ ಕಡೆ ದೇವಸ್ಥಾನಗಳಲ್ಲಿ ಪಟ್ಟಭದ್ರರ ದಬ್ಬಾಳಿಕೆ ಅತಿಯಾಗಿದೆ. ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗಿದೆ. ಇಂಥ ಗುಡಿಗಳ ಹಂಗನ್ನು ತೊರೆದು ಇಷ್ಟಲಿಂಗವನ್ನು ದಯಪಾಲಿಸಿದರು. ಶರಣರು `ದೇಹವೆ ದೇಗುಲ’ ಎನ್ನುವ ಮೂಲಕ ಗುಡಿಗಳನ್ನು ಕಟ್ಟುವವರನ್ನು, ಪೂಜೆ ಮಾಡುವವರನ್ನು ವಿಡಂಬನೆ ಮಾಡಿದ್ದಾರೆ. ಬಸವಣ್ಣ `ನಾನೇನ ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ, ದೇಹವೇ ದೇಗುಲ..’ ಎನ್ನುತ್ತಾರೆ. ಹಾಗಂತ ಬಸವಣ್ಣ ಬಡವನಲ್ಲ. ಅಸಮಾನತೆಯನ್ನು ದೂರ ಮಾಡುವ ಸಲುವಾಗಿ ದೇಹವನ್ನೇ ದೇವಾಲಯ ಮಾಡಿಕೊಂಡು ನರನೇ ದೇವನಾಗುವ ಪರಿಯನ್ನು ತಿಳಿಸಿಕೊಟ್ಟರು.
ಶರಣರು ಕಾಯಕ-ದಾಸೋಹಕ್ಕೆ ಎಲ್ಲಿಲ್ಲದ ಮಹತ್ವ ನೀಡಿದ್ದರು. ಯಾವ ಕಾಯಕವೂ ಮೇಲಲ್ಲ, ಕೀಳಲ್ಲ. ಆ ಕಾಯಕದ ಮೂಲಕವೇ ದೇವರನ್ನು ಕಾಣುವ ಅಧ್ಯಾತ್ಮಿಕ ದಾರಿಯನ್ನು ಕಂಡುಕೊಂಡಿದ್ದರು. ಕಾಯಕದಿಂದ ಬಂದ ಫಲವನ್ನು ಹಂಚಿ ಉಣ್ಣುವ ದಾಸೋಹಪ್ರಜ್ಞೆಯನ್ನೂ ಮೈಗೂಡಿಸಿಕೊಂಡಿದ್ದರು. ಇದರಿಂದಾಗಿ ಸಮ ಸಮಾಜದ ನಿರ್ಮಾಣ ಮಾಡಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಪರೀಕ್ಷೆ ಸಂದರ್ಭದಲ್ಲಿ ಕಂಡ ಕಂಡ ದೇವರುಗಳಿಗೆ ಹೋಗುವ ಬದಲು ಶ್ರಮವಹಿಸಿ ಅಭ್ಯಾಸ ಮಾಡ್ಬೇಕು. ನಮ್ಮ ಆಪಾತ್ಕಲದಲ್ಲಿ ದೇವರುಗಳೆಲ್ಲ ನಾಟ್ ರೀಚೆಬಲ್ ಆಗುವವು. ಅವುಗಳನ್ನು ನಂಬುವ ಬದಲಾಗಿ ತಮ್ಮನ್ನು ತಾವೇ ನಂಬುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಶ್ರವಣ, ಮನನ, ನಿದಿಧ್ಯಾಸನದ ಮೂಲಕ ಕಲಿಕೆಯ ಪ್ರಕ್ರಿಯೆಯನ್ನು ಜಾರಿಯಲ್ಲಿಡಬೇಕು. ಆಗ ದೇವರುಗಳಿಗೆ ಹರಕೆಕಟ್ಟಿಕೊಳ್ಳುವ, ಪರೀಕ್ಷೆಗಳಿಗೆ ಭಯಪಡುವ ಅವಶ್ಯಕತೆ ಬರುವುದಿಲ್ಲ.
ವಿವಿಧ ಧರ್ಮಗಳು ಇರುವುದು ತಪ್ಪಲ್ಲ. ಎಲ್ಲಾ ಧರ್ಮಗಳ ಸಾರ ಒಂದೇ. ಇದನ್ನೇ ಬಸವಣ್ಣನವರು `ದಯವಿಲ್ಲದ ಧರ್ಮ ಅದಾವುದಯ್ಯಾ’ ಎಂದದ್ದು. ಇಲ್ಲಿ ಧರ್ಮಗಳ ತಪ್ಪಿಲ್ಲ; ತಪ್ಪಿರುವುದು ಧರ್ಮದ ಅನುಯಾಯಿಗಳಲ್ಲಿ. ಆ ಧರ್ಮಗಳನ್ನು ಮುನ್ನೆಡೆಸಿಕೊಂಡು ಹೋಗುವಂಥವರು ಆ ಧರ್ಮಗಳ ಸಾರವನ್ನು ತಿಳಿದವರಾಗಿರಬೇಕು. ಸಕಲಜೀವಾತ್ಮರಿಗೆ ಒಳಿತನ್ನು ಬಯಸುವುದೇ ನಿಜವಾದ ಧರ್ಮ. ಭಾಷೆ, ಪ್ರಮಾಣ, ಆಣೆಗಳು ಇನ್ನೊಬ್ಬರನ್ನು ವಂಚಿಸುವ ಕಪಟ ನಾಟಕವಾಗಬಾರದು. ಅಂತರಂಗದಲ್ಲಿ ಶಿವನಿದ್ದಾನೆ ಎನ್ನುವ ಅರಿವಿನ್ನಿಟ್ಟುಕೊಂಡು ಆಣೆ, ಪ್ರಮಾಣ, ಭಾಷೆ ಮಾಡಬೇಕು. ಶರಣರು ಯಾರ ಮುಂದೆಯೂ ಕೈಯೊಡ್ಡಲಿಲ್ಲ. ಕೈಯಿಂದ ದುಡಿಯುವ ಕಾಯಕವನ್ನು ಕಲಿಸಿದರು. ಕೈ ಎತ್ತಿ ಕೊಡುವ ದಾಸೋಹ ಪ್ರಜ್ಞೆಯನ್ನು ಬೆಳೆಸಿದರು. ಕಾಯಕದಿಂದ ಬಂದ ಸಂಪತ್ತನ್ನು ದಾಸೋಹ ರೂಪದಲ್ಲಿ ನೀಡಿದರೆ ಆರ್ಥಿಕ ಸಮಾನತೆಯನ್ನು ಕಾಣಬಹುದು. ಆ ಮೂಲಕ ಶರಣರು ಸಮಸಮಾಜದ ಬೀಜವನ್ನು ಬಿತ್ತಿದರು. ಇಂದು ಮತ್ತೆ ಆ ಬೀಜವನ್ನು `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಜನಮಾನಸದಲ್ಲ ಬಿತ್ತಲಾಗುತ್ತಿದೆ.
ಇಂದು ನಮ್ಮ ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಟಿ, ಇನ್ನೊಂದು ಕಡೆ ಅನಾವೃಷ್ಟಿ. ಇವೆರಡರ ಮಧ್ಯೆ ಸಮತೋಲನ ಬರುವಂತೆ ಕಾರ್ಯಯೋಜನೆಯನ್ನು ತುರ್ತಾಗಿ ಸರಕಾರ ರೂಪಿಸಬೇಕು. ಬಹುಷಃ 10 ವರ್ಷಗಳಿಗೆ ಇಡೀ ರಾಜ್ಯಕ್ಕೆ ಆಗಬಹುದಾಗಿದ್ದ ನೀರು ಸಮುದ್ರ ಸೇರಿದೆ. ಅಲ್ಲದೆ ಅನೇಕ ಅನಾಹುತಳನ್ನೂ ಸೃಷ್ಟಿಸಿದೆ. ಹೀಗೆ ಹೆಚ್ಚಾದ ನೀರನ್ನು ಬರಗಾಲಕ್ಕೊಳಗಾಗುವ ಪ್ರದೇಶಗಳ ಕೆರೆ-ಕಟ್ಟೆಗಳಿಗೆ ತುಂಬಿಸುವ ಕಾರ್ಯಕ್ಕೆ ಸರ್ಕಾರ ದೀರ್ಘಾವಧಿ ಯೋಜನೆಗಳನ್ನು ಕೂಡಲೇ ಕೈಗೆತ್ತಿಕೊಳ್ಳುವ ಅನಿರ್ವಾತೆಯನ್ನು ಸರಕಾರ ಗಮನಿಸಬೇಕು. ಸರಕಾರ ಎಲ್ಲಾ ಜಯಂತಿಯನ್ನು ನಿಷೇಧ ಮಾಡಿ ಆ ಹಣವನ್ನು ಕರೆಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯಗಳಿಗೆ ಸದ್ಭಳಕೆ ಮಾಡಿಕೊಳ್ಳಬೇಕು. ಜನ ಕೈಯೊಡ್ಡುವ ಯೋಜನೆಗಳನ್ನು ರದ್ದುಗೊಳಿಸಿ ಜನ ಕೈ ಎತ್ತಿ ಕೊಡಲು ಪ್ರೇರೇಪಿಸುವ ಕೆರೆತುಂಬಿಸುವಂಥ ಕಾರ್ಯಯೋಜನೆಗಳನ್ನು ಜಾರಿಗೆ ತರಬೇಕು ಎಂದು ನಾವು ಈ ವೇದಿಕೆಯಿಂದ ಹಕ್ಕೊತ್ತಾಯವನ್ನು ಮಂಡಿಸುತ್ತಿದ್ದೇವೆ ಎಂದರು.
ರಾಜಕೀಯ ಮುಖಂಡರಾದ ಕೆ ಹೆಚ್ ಮುನಿಯಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಇತ್ತೀಚಿಗೆ ಅನೇಕ ಧರ್ಮಗಳು, ಜಾತಿಗಳು, ಉಪಜಾತಿಗಳು ಹುಟ್ಟಿಕೊಂಡು ಸಂಘರ್ಷಗಳಿಗೆ ಎಡೆಯಾಗುತ್ತಿದೆ. ಜಾತಿ-ಉಪಜಾತಿಗಳ ಸಂಘ-ಸಂಸ್ಥೆಗಳು ಪರಸ್ಪರ ತಮ್ಮ ಸ್ವಾರ್ಥ, ಹಿತ ಕಾಪಾಡಿಕೊಳ್ಳುವಲ್ಲಿ ಸ್ಪರ್ಧೆಯುಂಟಾಗಿ ಸಾಮರಸ್ಯ ಕದಡುವ ಸನ್ನಿವೇಶಗಳು ಸೃಷ್ಟಿಯಾಗುತ್ತಿರುವುದು ದುರದೃಷ್ಟಕರ ಸಂಗತಿ. ಶರಣರ ಆಶಯಗಳಿಗೆ ಅನುಗುಣವಾಗಿಯೇ ಸಂವಿಧಾನದ ರಚನೆಯಾಗಿದೆ. ಸಂವಿಧಾನವನ್ನು ಆಚರಣೆಗೆ ತರುವುದೂ ವಚನಕಾರರ ಆಶಯವನ್ನು ಜಾರಿಗೆ ತಂದಂತೆಯೇ ಆಗುತ್ತದೆ ಎಂದರು.
ವೇದಿಕೆಯ ಮೇಲೆ ಜಿ ಚನ್ನಪ್ಪ, ಚಂದ್ರಶೇಖರಪ್ಪ, ಮೇಶಕ್ ಪಾಷಾ, ಗೀತಾ, ಹನೀಫ್, ಅನಂತ್ ನಾಯಕ ಇತರರಿದ್ದರು.
ಶಿವಸಂಚಾರದ ಕಲಾವಿದರು ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ವಚನಗಳನ್ನು ಹಾಡುತ್ತಿದ್ದುದು ವಿಶೇಷವಾಗಿತ್ತು.
ವಿದ್ಯಾರ್ಥಿಗಳ ಪ್ರಶ್ನೆಗಳು:
ಇಂದು ಅನೇಕ ಮಠಗಳು ಜಾತಿ ರಾಜಕಾರಣ ಮಾಡುತ್ತಿವೆ. ಇದು ಸರಿಯೇ?
ಅನುಭವ ಮಂಟಪ ಕಟ್ಟಿದವರು ಕಾಯಕ ಜೀವಿಗಳು. ಈಗ ಜಾಗತೀಕರಣದ ಕಾಲದಲ್ಲಿ ‘ಮತ್ತೆ ಕಲ್ಯಾಣ’ ಕಟ್ಟಲು ಸಾಧ್ಯವೇ?
ಶಿಕ್ಷಣದ ಖಾಸಗೀಕರಣ ಹೆಚ್ಚಾಗಿ ಶರಣರ ವಿಚಾರಗಳು ನಶಿಸುತ್ತಿವೆ. ಇದಕ್ಕೆ ಪರಿಹಾರವೇನು?
ಭಾಷೆ, ಆಣೆ, ಪ್ರಮಾಣಗಳಿಗೆ ಇಂದು ಅರ್ಥವಿದೆಯೇ?
ಸಮಾಜದಲ್ಲಿನ ಅಸಮಾನತೆಗೆ ಸಂಪತ್ತೇ ಕಾರಣ. ಇದಕ್ಕೆ ‘ಮತ್ತೆ ಕಲ್ಯಾಣ’ದಲ್ಲಿ ಪರಿಹಾರವಿದೆಯೇ?
ಟಿಪ್ಪು ಜಯಂತಿ ಆಚರಣೆ ಮಾಡುವುದು ತಪ್ಪಾ?
ಒಂದೇ ದೇಶವಿರುವ ಹಾಗೆ ಒಂದೇ ಧರ್ಮ, ಒಂದೇ ಜಾತಿ ಏಕೆ ಇರಬಾರದು?
ಅನುಭವ ಮಂಟಪದ ವಿಶಾಲ ಅರ್ಥವೇನು?
ಕಾಯಕ-ದಾಸೋಹದ ಮೂಲಕ ಆರ್ಥಿಕ ಸಮಾನತೆಯನ್ನು ಶರಣರು ತಂದರು ಎಂದು ಹೇಳುತ್ತೀರಿ. ಇದು ಹೇಗೆ?
ಇಂದಿನ ದಿನಮಾನದಲ್ಲಿ ಜಾತಿ, ಮತ, ಧರ್ಮರಹಿತ ಸಮಾಜ ನಿರ್ಮಾಣ ಮಾಡುವ ಉದ್ದೇಶ ಈಡೇರುವುದೇ?
ಪ್ರತಿಭೆಯ ಆಧಾರದ ಮೇಲೆ ಸೌಲಭ್ಯಗಳನ್ನು ಒದಗಿಸಬೇಕೋ ಅಥವಾ ಜಾತಿ ಆಧಾರದ ಮೇಲೆ ಸೌಲಭ್ಯಗಳನ್ನು ಒದಗಿಸಬೇಕೋ?
- ಹೆಚ್ ಎಸ್ ದ್ಯಾಮೇಶ್