ಆಗಸ್ಟ್ ೧೧ ಭಾನುವಾರ, ನೆಲಮಂಗಲ
ನೆಲಮಂಗಲದಲ್ಲಿ 11 ನೇ ದಿನದ ʻಮತ್ತೆ ಕಲ್ಯಾಣʼ ಆಂದೋಲನದ
ಸಮಾವೇಶ ಅನನ್ಯ ಟಿವಿ-ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ
ಇಲ್ಲಿನ ಬಸವಣ್ಣದೇವರು ಮಠದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ . ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಆತ್ಮಶೋಧನೆಗೆ ಅವಕಾಶ ಮಾಡಿಕೊಡುವಂಥದ್ದು ಬಸವತತ್ವ. ಮನಸ್ಸೇ ನಮ್ಮ ಯಶಸ್ಸು, ಅಪಯಶಸ್ಸಿಗೆ ಕಾರಣ. ಶರಣರು ಮನಸ್ಸಿನ ಮೇಲೆ ಹತೋಟಿ ಇಟ್ಟುಕೊಳ್ಳಲು ಇಷ್ಟಲಿಂಗ ಪೂಜೆಯನ್ನು ಜಾರಿಗೆ ತಂದರು. ದೇವರ ಬಗ್ಗೆ ಇರುವ ಅಜ್ಞಾನವನ್ನು ಕಳೆದು ಸರಿಯಾದ ಜ್ಞಾನ ನೀಡುವುದೇ ದೀಕ್ಷೆ. ದೇವರು ಮಠ, ಮಂದಿರ, ಚರ್ಚು ಮಸೀದಿಗಳಲ್ಲಿ ಇಲ್ಲ. ದೇವರ ವ್ಯಾಪ್ತಿ ಜಗದಗಲ, ಮಿಗೆಯಗಲ, ನಿಮ್ಮಗಲ, ಅಗಮ್ಯ, ಅಗೋಚರ, ಅಪ್ರತಿಮ ಎಂದು ಬಸವಣ್ಣ ಬಣ್ಣಿಸಿದ್ದಾರೆ. ಚೈತನ್ಯ, ಅರಿವು, ಆನಂದಗಳಿಲ್ಲದ ದೇವರು ದೇವರಲ್ಲ. ಮಣ್ಣಬಿಟ್ಟು ಮಡಕೆಯಿಲ್ಲ, ತನ್ನ ಬಿಟ್ಟು ದೇವರಿಲ್ಲ ಎನ್ನುವಂತೆ ದೇವರು ನಮ್ಮನ್ನು ಬಿಟ್ಟು ಇಲ್ಲ. ದೇವರು-ದೆವ್ವಗಳೆರಡೂ ನಮ್ಮಲ್ಲಿಯೇ ಇವೆ. ದೇವರಾಗಲು ಅರಿವು-ಆಚಾರಗಳು ಒಂದಾಗಬೇಕು. ಇಷ್ಟಲಿಂಗ ದೀಕ್ಷೆ ಪಡೆದು ಪೂಜಿಸುವುದು ಅತ್ಯಂತ ವೈಜ್ಞಾನಿಕವಾದುದು. ಜಾತಿ, ಲಿಂಗ ತಾರತಮ್ಯ, ಮೌಢ್ಯಗಳನ್ನು ಹೋಗಲಾಡಿಸಲು ಕಾಯಕ, ದಾಸೋಹ ಪ್ರಜ್ಞೆ ಮೂಡಲು ಇಷ್ಟಲಿಂಗ ಪೂಜೆ ಸಹಕಾರಿ. ಶರಣ ತತ್ವವನ್ನು ಮೈಗೂಡಿಸಿಕೊಂಡರೆ ಮೌಢ್ಯಗಳಿಗೆ ಆಸ್ಪದವಿರುವುದಿಲ್ಲ. ಮನಸ್ಸು ದುರ್ಬಲವಾದಾಗ ಮೌಢ್ಯಕ್ಕೆ ಒಳಗಾಗುವೆವು. ನಮ್ಮ ಮನಸ್ಸನ್ನು ನಾವು ಅರಿಯಲು ಇಷ್ಟಲಿಂಗ ಪೂಜೆ ಸಹಕಾರಿ. ಒಳಗಿನ ಬೆಳಕನ್ನು ಪಡೆಯುವುದೇ ಶರಣರ ಸಂದೇಶ. ನೆಮ್ಮದಿ, ಆನಂದದಿಂದ ಬದಕಲು ವಚನಗಳ ಅಧ್ಯಯನ, ಅನುಷ್ಠಾನ ಅತ್ಯಗತ್ಯ. ದೃಷ್ಟಿಯಂತೆ ಸೃಷ್ಟಿ. ಎಲ್ಲ ಸಾಮಾಜಿಕ ರೋಗಗಳಿಗೂ ಚಿಕಿತ್ಸೆ ವಚನ ಸಾಹಿತ್ಯದಲ್ಲಿದೆ. ವಚನಸಾಹಿತ್ಯ ಬೇರೆಯವರನ್ನು ಬದಲಾಯಿಸಲು ಅಲ್ಲ; ಆತ್ಮಶೋಧನೆ ಮತ್ತು ಆತ್ಮವಿಕಾಸಕ್ಕೆ ಇರುವುದು. ವಚನದ ಬೀಜಗಳನ್ನು ಬಿತ್ತುವುದೇ ಮತ್ತೆ ಕಲ್ಯಾಣದ ಆಶಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಮಾತನಾಡಿ (ಮಳೆ ಬಂದು ವೇದಿಕೆ ಸ್ಥಾಳಾಂತರಗೊಂಡ ಹಿನ್ನೆಲೆಯಲ್ಲಿ) ಬಸವತತ್ವದ ಬೀಜಕ್ಕೆ ಮಳೆರಾಯ ನೀರನ್ನು ಸಿಂಪಡಿಸಿ ಮೊಳಕೆ ಬರುವಂತೆ ಸಹಕರಿಸಿದ್ದಾನೆ. ಮಳೆ ಬಂದರೂ ಒಬ್ಬರೂ ಕದಲದೆ ಮತ್ತೆ ಈ ವೇದಿಕೆಗೆ ಬಂದಿರುವುದು ನಿಮ್ಮ ಬಸವ ತತ್ವದ ಮೇಲಿನ ನಿಷ್ಠೆಯನ್ನು ತೋರಿಸುತ್ತದೆ. ಈ ಆಗಸ್ಟ್ 11 ನೆಯ ತಾರೀಖು ನಾವು ಪಟ್ಟಾಧೀಕಾರಕ್ಕೆ ಬಂದ ದಿನ. ಇದೇ ದಿನ `ಮತ್ತೆ ಕಲ್ಯಾಣ’ದ ಕಾರ್ಯಕ್ರಮ ನಾವು ಬಯಸದೇ ಇದ್ದರೂ ನಮಗೇ ಬಂದಿರುವುದು ಯೋಗಾಯೋಗ. ಪಂಡಿತಾರಾಧ್ಯ ಶ್ರೀಗಳು ಮತ್ತೆಕಲ್ಯಾಣದ ಕಾರ್ಯಕ್ರಮವನ್ನು ನಿರಂತರವಾಗಿ ಮಾಡಲಿ, ನಾವು ಪೂಜ್ಯರ ಜೊತೆ ನಿರಂತರವಾಗಿ ಜೊತೆಯಾಗಿರುವೆವು. ಬಸವ ತತ್ವ ವಿಶಾಲವಾದ ತತ್ವ, ಚಿಂತನೆ. ಇದರಲ್ಲಿ ಸಂಕುಚಿತತೆ ಲವಲೇಶವೂ ಇಲ್ಲ. ಹೀಗಾಗಿ ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಬೇಕು. ಅದಕ್ಕೆ ನಮ್ಮ ಸಹಕಾರ ಎಂದೆಂದಿಗೂ ಇರುವುದು ಎಂದರು.
`ಶರಣ ತತ್ವ – ಭಾರತದ ಸತ್ವ’ ಕುರಿತಂತೆ ಡಾ. ಮನು ಬಳಿಗಾರ್ ಮಾತನಾಡಿ ಕಾಯಕ, ದಾಸೋಹ, ಲಿಂಗ ಸಮಾನತೆ, ಸಮಸಮಾಜ ಕುರಿತ ಶರಣ ತತ್ವವನ್ನು ಜಗತ್ತಿನಾದ್ಯಂತ ತಿಳಿಸಬೇಕಾಗಿದೆ. ಅನುಭವ ಮಂಟಪ ಈಗಿನ ಸಂಸತ್ತಿನ ಮೂಲಸ್ವರೂಪ. ಬಸವಣ್ಣ ಹಿಂದುಳಿದ ಕುಲಜರನ್ನು ತನ್ನ ಅಪ್ಪ, ಬೊಪ್ಪ ಎಂದು, ಕುಲಕ್ಕೆ ತಿಲಕ ಮಾದಾರ ಚೆನ್ನಯ್ಯ ಎಂದು ಗೌರವಿಸಿದರು. ಶರಣರ ತತ್ವ ಸಿದ್ಧಾಂತಗಳು ಇಸ್ಲಾಂ, ಕ್ರೈಸ್ತ, ಮುಸ್ಲಿಂ ಮುಂತಾದ ಧರ್ಮಗಳಲ್ಲಿವೆ. ಮಾಡುವ ಕಾಯಕಗಳನ್ನು ತನು, ಮನ, ಸತ್ಯಶುದ್ಧವಾಗಿ ಮಾಡಬೇಕು. ಬಂದ ಆದಾಯವನ್ನು ದಾಸೋಹ ರೂಪದಲ್ಲಿ ಬಳಸಬೇಕು ಎನ್ನುವುದು ಶರಣರ ಸಿದ್ದಾಂತವಾಗಿತ್ತು. ಶರಣರ ಈ ತತ್ವಸಿದ್ಧಾಂತಗಳಿಗೆ ಅನುಗುಣವಾಗಿ ಅನ್ನ, ವಿದ್ಯೆ, ಆಶ್ರಯಗಳನ್ನು ನೀಡಿದ ಇಂದಿನ ಶ್ರೀಮಠಗಳಿಗೆ ನಾವು ಕೃತಜ್ಞರಾಗಿರಬೇಕು. ಬಹುತೇಕ ವಚನಗಳು ತಳಸಮುದಾಯದ ವಚನಕಾರರಿಂದಲೇ ಆಗಿವೆ. ಶರಣರು ಮಹಿಳೆಯರಿಗೂ ವಚನ ರಚಿಸುವ ಅವಕಾಶ ನೀಡಿದ್ದರು. ಹೆಣ್ಣನ್ನು ಸಾಕ್ಷಾತ್ ದೇವತೆ ಎಂದು ಗೌರವಿಸಿದರು. ವಚನಗಳನ್ನು ಕೇವಲ ಅಧ್ಯಯನ ಮಾಡಿದರೆ ಸಾಲದು; ಅನುಷ್ಠಾನಕ್ಕೆ ತರಬೇಕು. ನುಡಿದಂತೆ ನಡೆದರೆ ಮಾತ್ರ ನಾವು ಮಾಡುವ ಲಪೂಜೆ ಸಾರ್ಥಕವಾಗುವುದು. ಶರಣರ ಇಂಥ ತತ್ವ ಸಿದ್ದಾಂತಗಳನ್ನು ಮತ್ತೆ ಮತ್ತೆ ಜನಮಾನಸದಲ್ಲಿ ನೆನಪಿಸುವುದೇ ಮತ್ತೆ ಕಲ್ಯಾಣ ಎಂದರು.
`ವಚನಗಳಲ್ಲಿ ಮೌಢ್ಯವಿರೋಧಿ ನೆಲೆ’ ಕುರಿತಂತೆ ಡಾ. ವಸುಂಧರಾ ಭೂಪತಿ ಮಾತನಾಡಿ ನಾವು 21 ನೆಯ ಶತಮಾನದಲ್ಲಿದ್ದರೂ ಪ್ರತಿನಿತ್ಯ ಮೌಢ್ಯಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ 12 ಶತಮಾನದ ವಚನಕಾರರು ಇಂಥ ಮೌಢ್ಯಗಳನ್ನು ಮೆಟ್ಟಿನಿಂತರು. ಇಂದಿಗೂ ಪಂಚಮಿ ಹಬ್ಬದಲ್ಲಿ ಹುತ್ತಕ್ಕೆ ಹಾಲನೆರೆಯುತ್ತಿದ್ದಾರೆ. ಇದನ್ನು ಬಸವಣ್ಣ ಕಲ್ಲ ನಾಗರ ಕಂಡರೆ ಹಾಲನೆರೆಯುವರು, ದಿಟದ ನಾಗರ ಕಂಡರೆ ಕೊಲ್ಲು, ಕೊಲ್ಲು ಎಂಬರು ಎಂದು ವಿಡಂಭಿಸಿದರು. ಸಾಮಾನ್ಯರಷ್ಟೇ ಅಲ್ಲ; ವಿಜ್ಞಾನಿಗಳೂ ರಾಹು ಕಾಲ, ಗುಳಿಕೆ ಕಾಲ, ಶುಭ-ಅಶುಭಗಳನ್ನು ನೋಡುತ್ತಿದ್ದಾರೆ. ಶುಭ ಲಗ್ನದಲ್ಲಿಯೇ ಆದ ಸಾವಿರಾರು ಮದುವೆಗಳು ಮುರಿದು ಬಿದ್ದಿರುವುದನ್ನು ನಾವು ಇಂದು ನೋಡಿದ್ದೇವೆ. ಮದುವೆ ಯಾವ ಗಳಿಗೆಯಲ್ಲಿ ಆಗಿದೆ ಎನ್ನುವುದು ಮುಖ್ಯವಲ್ಲ; ಪರಸ್ಪರ ಪ್ರೀತಿ, ವಿಶ್ವಾಸ ಮುಖ್ಯ. ಈ ಹಿನ್ನೆಲೆಯಲ್ಲಿಯೇ ಬಸವಣ್ಣ `ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ’ ಎಂದುದು. ಯಜ್ಞ-ಯಾಗ, ಹೋಮಾದಿಗಳನ್ನು ಮಾಡುವ, ಕಿಚ್ಚು ದೈವವೆಂದು ಹೇಳುವ ಹಾರುವರು ತಮ್ಮ ಮನೆಗೆ ಬೆಂಕಿ ಹತ್ತಿದಾಗ ಬಚ್ಚಲ ನೀರನ್ನೇ ಎರಚುವರು. ಮಾರಿ, ಮಸಣಿ, ಮೊರ, ಮರ, ನೀರು, ಅಗ್ನಿಗಳು ದೇವರಲ್ಲ; ತನ್ನ ತಾನರಿತರೆ ತಾನೇ ದೇವ ನೋಡ ಎಂದವರು ವಚನಕಾರರು. ವಚನಕಾರರೇ ಕಟ್ಟಿದ ನಮ್ಮ ಸಮಾಜದಲ್ಲಿ ಮತ್ತೆ ಮೌಢ್ಯಗಳು ವಿಜೃಂಬಿಸುತ್ತಿರುವುದು ವಿಷಾದದ ಸಂಗತಿ. ರಜ ಸೂತಕ, ಜನನ ಸೂತಕ ಈಗಲೂ ಚಾಲ್ತಿಯಲ್ಲಿವೆ. ಮಹಿಳೆಯ `ಮುಟ್ಟು’ ಸಹಜ ನೈಸರ್ಗಿಕ ಪ್ರಕ್ರಿಯೆ. ಈ ಮುಟ್ಟನ್ನು ಮುಂದೂಡುವ ಮಾತ್ರೆಗಳೇ ಇಂದು ಹೆಚ್ಚು ಮಾರಾಟವಾಗುತ್ತಿರುವುದು ಆಧುನಿಕ ಮಹಿಳೆಯರ ಮೌಢ್ಯವನ್ನು ತೋರಿಸುತ್ತದೆ. ಮೌಢ್ಯಗಳನ್ನು ವಿರೋಧಿಸುವ ಸಾವಿರಾರು ವಚನಗಳನ್ನು ವಚನಕಾರರು ನಮಗೆ ನೀಡಿದ್ದಾರೆ. ಇವುಗಳನ್ನು ಅಧ್ಯಯನ, ಅನುಷ್ಠಾನ ಮಾಡುವುದರ ಮೂಲಕ ನಾವು ನಮ್ಮ ಮೌಢ್ಯಗಳನ್ನು ಕಳೆದುಕೊಳ್ಳಬೇಕು ಎಂದರು.
ರಾಜ್ಯಸಭಾ ಸದಸ್ಯರಾದ ಎಲ್ ಹನುಮಂತಯ್ಯ ಮಾತನಾಡಿ ಈ ಕಾರ್ಯಕ್ರಮದ ಯಶಸ್ಸಿಗೆ ಅನೇಕರು ಶ್ರಮಿಸಿದ್ದಾರೆ. ಸಂತ ಶಿಶುನಾಳ ಷರೀಪರು `ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ’ ಎಂದರು. ಇದೇ ಪರಿಸ್ಥಿತಿ ಇಂದು ನಮ್ಮ ಭಾರತದ್ದಾಗಿದೆ. ಈ ಸೋರುವುದನ್ನು ತಡೆಯುವ ಪ್ರಯತ್ನವೇ ಮತ್ತೆ ಕಲ್ಯಾಣ. ವಿದ್ಯಾವಂತರು ಮತ್ತು ರಾಜಕಾರಣಿಗಳಲ್ಲಿಯೇ ಮೌಢ್ಯಗಳು ಹೆಚ್ಚು. ಇದಕ್ಕೆ ಅನಿಶ್ಚಿತತೆಯೇ ಕಾರಣವಿರಬಹುದು. ಆದರೆ 12 ನೆಯ ಶತಮಾನದ ವಚನಕಾರರು ನಮಗಿಂತ ಹೆಚ್ಚು ವೈಜ್ಞಾನಿಕವಾಗಿದ್ದರು. ಬಸವಣ್ಣ ಯಾವ ವಿಶ್ವವಿದ್ಯಾಲಯದಲ್ಲೂ ಪಿಹೆಚ್ ಡಿ ಮಾಡಿಲ್ಲ; ಆದರೆ ಬಸವಣ್ಣನ ಮೇಲೆ ಪ್ರತಿಯೊಂದು ವಿಶ್ವವಿದ್ಯಾಲಯಗಳು ಪಿಹೆಚ್ ಡಿ ಮಾಡಿವೆ. ಪ್ರತಿ ತಲೆಮಾರೂ ಒಂದಷ್ಟು ಪಾಪದಿಂದ ಇನ್ನೂ ಹೆಚ್ಚಿನ ಪಾಪ ಕೂಪಕ್ಕೆ ಬೀಳುತ್ತಿದೆ. ಆದುದರಿಂದ ಮತ್ತೆ ಮತ್ತೆ ಕಲ್ಯಾಣವಾಗಬೇಕು. ಆಯ್ದಕ್ಕಿ ಲಕ್ಕಮ್ಮ `ಆಸೆಯೆಂಬುದು ಅರಸಿಂಗಲ್ಲದೆ, ಶಿವಶರಣರಿಗೆ ಉಂಟೇ?’ ಎಂದು ಪತಿಯನ್ನು ಪ್ರಶ್ನಿಸುತ್ತಾಳೆ. ದುರಾಸೆ ಶರಣರ ಆಲೋಚನೆಗಳಿಗೆ ವಿರುದ್ಧವಾದುದು. ದೇಹವನ್ನೇ ದೇಗುಲ ಮಾಡಿಕೊಂಡು, ತನ್ನೊಳಗಿನ ಶಿವನನ್ನು ಕಂಡಕೊಂಡವರು ಶರಣರು. ಇಂದಿನ ಸಾಹಿತಿಗಳು ಬರೆಯುವುದೇ ಒಂದು; ನಡೆದುಕೊಳ್ಳುವುದೇ ಇನ್ನೊಂದು. ನಮ್ಮನ್ನು ನಾವು ಒಳಗಣ್ಣು ತೆರೆದು ನೋಡಿಕೊಳ್ಳಲು ವಚನಗಳು ಪ್ರೇರಣೆ ನೀಡುವವು ಎಂದರು.
ಬಯಲಿನಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಸಮಾವೇಶದ ನಡುವೆ ಮಳೆ ಬಂದದ್ದರಿಂದ ಕಾರ್ಯಕ್ರಮವನ್ನು ಪಕ್ಕದಲ್ಲಿದ್ದ ಛತ್ರದಲ್ಲಿ ಮುಂದುವರಿಸಲಾಯಿತು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಸುಗ್ಗರಾಜು ಸ್ವಾಗತಿಸಿದರು. ಗಂಗರಾಜು ಕಾರ್ಯಕ್ರಮ ನಿರ್ವಹಿಸಿದರು. ಸಿದ್ಧರಾಜು ವಂದಿಸಿದರು. ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನಗೊಂಡಿತು.
ವೇದಿಕೆಯ ಮೇಲೆ ಎಲ್ ಹನುಮಂತಯ್ಯ, ತಿಮ್ಮರಾಜು, ಪೂರ್ಣಿಮಾ, ಲೋಲಾಕ್ಷಿ ಗಂಗಾಧರ್, ಶಾಂತಾ ಸುಂದರೇಶ್, ನವಾಬ್ ಸಹಾಬ್, ಮಂಜುನಾಥ್, ನಾಗರಾಜು, ಮಂಜುನಾಥ್, ನಾಗರಾಜ್, ಪ್ರಕಾಶ್, ಮಂಜುಳಾ ಸಿದ್ಧರಾಜು, ಜನಪ್ರತಿನಿಧಿಗಳು ಮುಂತಾದವರು ಇದ್ದರು.
ನೆಲಮಂಗಲದ ಪ್ರವಾಸಿ ಮಂದಿರದಿಂದ ಆರಂಭವಾದ ಸಾಮರಸ್ಯ ನಡಿಗೆಯಲ್ಲಿ ಜನಪ್ರತಿನಿಧಿಗಳು, ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದೊಂದಿಗೆ ಬಸವಣ್ಣ ದೇವರ ಮಠ ತಲುಪಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ:
ಆಗಸ್ಟ್ 11, ನೆಲಮಂಗಲ; ಮತ್ತೆ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಶ್ರೀ ಬಸವಣ್ಣದೇವರ ಮಠದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ವಚನಕಾರರಿಗೆ ಬಯಲಿನ ಬಗ್ಗೆ ವಿಶೇಷ ಆಸಕ್ತಿ. ಬಯಲು ಎಂದರೆ ಎಲ್ಲವನ್ನೂ ಒಳಗೊಂಡದ್ದು ಎಂದರ್ಥ. ಈ ಹಿನ್ನೆಲೆಯಲ್ಲಿ ಅಲ್ಲಮಪ್ರಭುಗಳು `ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು, ಬಯಲು ಬಯಲಾಗಿ ಬಯಲಾಯಿತ್ತಯ್ಯ’ ಎಂದುದು. ಯಾವ ಕಟ್ಟುಪಾಡು ನಿಬಂಧನೆಗಳ ಹಂಗಿಗೆ ಒಳಗಾಗದೆ ಬದುಕಿನ ನಿಜ ಆನಂದವನ್ನು ಹೊಂದಬೇಕು. ಅಮೆರಿಕಾದ ಅಧ್ಯಕ್ಷ ಲಿಂಕನ್ ತನ್ನ ಮಗ ಶಾಲೆಗೆ ಹೋಗುವ ಶಿಕ್ಷಕರಿಗೆ ಹೇಳುವುದು; ನನ್ನ ಮಗನಿಗೆ ಕೇವಲ ಶಿಕ್ಷಣ ಕಲಿಸುವುದಕ್ಕಿಂತ ಸಂಸ್ಕೃತಿಯನ್ನು ಕಲಿಸಿ, ಗಳಿಸುವುದಕ್ಕಿಂತ ಉಳಿಸುವುದ ಕಲಿಸಿ, ಸತ್ಯವ ನುಡಿವದ ಕಲಿಸಿ ಎಂದು. ಭಾರತದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿ ಇದೆ. ನಮ್ಮ ಹಿರಿಯ ಗುರುಗಳು ಹೇಳುವಂತೆ; ವಿದ್ಯಾರ್ಥಿಗಳು ಖಾಲಿ ಚೀಲ ಇದ್ದಂತೆ. ಆ ಖಾಲಿ ಚೀಲಕ್ಕೆ ಮೌಲ್ಯಯುತವಾದುದನ್ನು ತುಂಬಬೇಕು ಎನ್ನುವ ಅರಿವು ತುಂಬುವ ವ್ಯಕ್ತಿಗೆ ಇರಬೇಕು. ಯಾವ ಮಗುವೂ ದಡ್ಡನಲ್ಲ. ಒಳಗಿರುವ ಜ್ಞಾನವನ್ನು ಹೊರತೆಗೆಯುವ ಹೊಣೆ ಪೋಷಕರು ಮತ್ತು ಶಿಕ್ಷಕರದ್ದು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣ ದೊರೆಯುವಂತಾಗಬೇಕು. ದುರ್ದೈವದ ಸಂಗತಿ ಶಿಕ್ಷಣದಲ್ಲಿ ನೈತಿಕತೆ ಕುಸಿಯುತ್ತಿದೆ. ಶರಣರು ಮೊದಲು ವ್ಯಕ್ತಿಗತ ಬದುಕನ್ನು ಕಟ್ಟಿಕೊಂಡು ನಂತರ ಸಮಾಜ ಕಟ್ಟಿದರು.
ಇಂದು ಜಗತ್ತು ವೈಜ್ಞಾನಿಕವಾಗಿ ತುಂಬಾ ಸುಧಾರಣೆಯಾಗಿದೆ. ಆದರೆ ನೈತಿಕವಾಗಿ ಅಧಃಪತನ ಹೊಂದಿದೆ. ಆಧುನಿಕ ತಂತ್ರಜ್ಞಾನದಿಂದ ಜಗತ್ತೆ ಅಂಗೈಗೆ ಬಂದಿದ್ದರೂ ನೆಮ್ಮದಿ ಇಲ್ಲವಾಗಿದೆ. ಸ್ಟೀವ್ ಜಾಬ್ಸ್ ಆಪಲ್ ಫೋನ್ ಜನಕ. ಈತ ಜಗತ್ತಿನ ಅಗ್ರಗಣ್ಣಯ ಶ್ರೀಮಂತರಲ್ಲಿ ಒಬ್ಬ. ಈತ ಮೊಬೈಲ್ ಮಾರಯ್ಯ. ಅವನು ತನ್ನ ಅಂತಿಮ ದಿನಗಳಲ್ಲಿ ಹೇಳಿದ್ದು; ನಾನು ಹಣದ ಹಿಂದೆ ಬಿದ್ದು ತಪ್ಪು ಮಾಡಿದೆ. ನನ್ನಂತೆ ನೀವಾರೂ ತಪ್ಪು ಮಾಡಬಾರದು ಎಂದು. ಇದೇ ರೀತಿ 12ನೆಯ ಶತಮಾನದ ಮೋಳಿಗೆ ಮಾರಯ್ಯ ಎನ್ನುವ ಶರಣನಿದ್ದ. ಈತ ಕಾಶ್ಮೀರದ ಮಹಾರಾಜ. ತನ್ನೆಲ್ಲಾ ರಾಜ ವೈಭವವನ್ನು ತ್ಯಜಿಸಿ ಅನುಭವ ಮಂಟಪಕ್ಕೆ ಪತ್ನಿ ಸಹಿತ ಬಂದು ಕಟ್ಟಿಗೆ ಕಡಿದು ತಂದು ಮಾರಿ ಬದುಕುತ್ತಾನೆ. ಇಂದು ಕಾಯಕ ಪ್ರಜ್ಞೆ ಕಡಿಮೆ ಆಗಿ ದೋಚುವ ಪ್ರವೃತ್ತಿ ಹೆಚ್ಚಾಗಿದೆ.. ನಾವು ದುಡಿದು ತಂದ ಸಂಪತ್ತು ತನ್ನೊಬ್ಬನದೆಂದು ಭಾವಿಸದೇ ದಾಸೋಹದ ರೂಪದಲ್ಲಿ ಕೊಡಬೇಕು. ಹೀಗೆ ಶರಣರು ದಾಸೋಹ ಪ್ರಜ್ಞೆಯನ್ನು ಬೆಳೆಸಿದರು. ಕಾಯಕ ಸತ್ಯಶುದ್ಧವಾಗಿ ದೇಹ ಮತ್ತು ಮನಸ್ಸು ಒಂದಾಗಿ ದುಡಿಯುವುದು. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಶರಣರ ವಚನ ಸಾಹಿತ್ಯವನ್ನು ಓದಿ ನಿಮ್ಮ ವ್ಯಕ್ತಿತ್ವವವನ್ನು ಅರಳಿಸಿಕೊಳ್ಳಬೇಕು. ಸಮಾಜ ನಿಂತ ನೀರಾಗದೆ ಚಲನಶೀಲತೆಯನ್ನು ಪಡೆದುಕೊಳ್ಳಬೇಕು. ಈ ಚಲನಶೀಲತೆ ಯುವ ಪೀಳಿಗೆಯಿಂದ ಬರುವಂಥದ್ದು. ನೀವು ನಿಮ್ಮ ನಿಮ್ಮ ದೋಷಗಳನ್ನು ತಿದ್ದಿಕೊಂಡು ಸರಿ ದಾರಿಗೆ ನಡೆದರೆ ಕಲುಷಿತ ಭಾವನೆಗಳು ದೂರವಾಗುತ್ತವೆ. ನಾವು ಯಾವ ಬಟ್ಟೆಯನ್ನು ತೊಡುತ್ತೇವೆ ಎನ್ನುವುದು ಮುಖ್ಯವಲ್ಲ; ಯಾವ ದಾರಿಯಲ್ಲಿ ನಡೆಯುತ್ತೇವೆ ಎನ್ನುವುದು ಮುಖ್ಯ. ನಾವು ಬದಲಾವಣೆಯಾಗದೇ ದೇಶ ಬದಲಾವಣೆಯಾಗಲು ಸಾಧ್ಯವಿಲ್ಲ. ನಾವೆಲ್ಲಾ ಸ್ಥಾವರಕ್ಕಂಟಿಕೊಂಡಿದ್ದೇವೆ. ಅದನ್ನು ಬಿಟ್ಟು ನಾವು ಜಂಗಮಸ್ವರೂಪಿಗಳಾಗಬೇಕು. ಇದಕ್ಕೆ ಶರಣರ ಸಾಹಿತ್ಯ ಪ್ರೇರಣೆ ನೀಡುತ್ತದೆ ಎಂದರು.
12ನೆಯ ಶತಮಾನದಲ್ಲಿ ಯಾವ ಶರಣರು ಮಾತಾಂತರವಾಗಲಿಲ್ಲ. ಅನಿಷ್ಠ ಜಾತಿಪದ್ಧತಿಯಿಂದ ಹೊರಬಂದು, ತುಳಿತಕ್ಕೆ ಒಳಗಾದವರಿಗೆ ಅರಿವು ಮೂಡಿಸಿದರು. ನರಜನ್ಮವನ್ನು ತೊಡೆದು ಲಿಂಗಾಧಾರಣೆಯಾಗಿ ಹರಜನ್ಮ ಮಾಡಿಕೊಂಡವರು. ಮಠಗಳು ಗೋಡೆಗಳನ್ನು ಕಟ್ಟುವ ಬದಲಾಗಿ ಗೋಡೆಗಳನ್ನು ಕೆಡವಿ ಸಾಮರಸ್ಯದ ಕಡೆಗೆ ಕರೆದುಕೊಂಡು ಹೋಗುವ ಕಾರ್ಯ ಮಾಡಬೇಕಾಗಿದೆ. ಬಸವಣ್ಣನವರ ಪೋಟೋ ಪೂಜೆ ಮಾಡುವ ಬದಲಾಗಿ ಅವರ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕು. ಬಸವಣ್ಣನವರು ಅತ್ಯಂತ ಕೆಳವರ್ಗದವರಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಿದರು. ಈ ಹಿನ್ನೆಲೆಯಲ್ಲಿ ಸಾಮರಸ್ಯದ ನಡಿಗೆಯಲ್ಲಿ ಎಲ್ಲ ಧರ್ಮದ ಮುಖಂಡರುಗಳು ಭಾಗವಹಿಸುತ್ತಿದ್ದಾರೆ. ಜಾತಿ, ಮತ, ಧರ್ಮಗಳನ್ನು ಮೀರಿ ಮನುಷ್ಯರೆಲ್ಲ ಒಂದೇ ಎನ್ನುವುದನ್ನು ಸಾರುವುದೇ ‘ಮತ್ತೆ ಕಲ್ಯಾಣ’ ಅಭಿಯಾನದ ಉದ್ದೇಶ.
ಬಸವಣ್ಣ ದೇವರು ಮಠದ ಸಿದ್ಧಲಿಂಗ ಸ್ವಾಮಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿ ನಮ್ಮ ಮಠ ಒಂದು ಜಾತಿಗೆ ಸೀಮಿತವಾಗದೇ ಬಸವಣ್ಣನವರ ತತ್ವಗಳಿಗನುಗುಣವಾಗಿ ನಡೆದುಕೊಂಡು ಹೋಗ್ತಾ ಇದೆ. ಈ ಹಿನ್ನೆಲೆಯಲ್ಲಿಯೇ ‘ಮತ್ತೆ ಕಲ್ಯಾಣ’ ಕಾರ್ಯಕ್ರಮವನ್ನು ನಮ್ಮ ಮಠದ ಅಂಗಳದಲ್ಲಿ ನಡೆಸಲು ತೀರ್ಮಾನಿಸಿರುವುದು ಮತ್ತು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿರುವುದು ಎಂದರು.
ಸಹಮತ ವೇದಿಕೆಯ ಸಂಯೋಜಕ ಅನಂತ ನಾಯಕ ಮಾತನಾಡಿ ಈ ಸಮಾಜದಲ್ಲಿ ನಡೆಯುವಂಥ ಎಲ್ಲ ತಪ್ಪುಗಳಿಗೆ ತಾಯಂದಿರೇ ಕಾರಣ ಎನ್ನುವುದು ಸರಿಯಲ್ಲ. ಅತ್ಯಾಚಾರ ಹೆಣ್ಣುಮಕ್ಕಳು ಹಾಕುವ ಬಟ್ಟೆಯಿಂದ ಆಗುವುದಿಲ್ಲ; ಪುರುಷನ ವಿಕೃತ ಮನಸ್ಸಿನಿಂದ ಆಗುವುದು. ವಚನ ಸಾಹಿತ್ಯ ಗಂಡು ಹೆಣ್ಣನ್ನು ಸಮಾನವಾಗಿ ನೋಡುತ್ತದೆ. ಆದರೆ ಇಂದಿಗೂ ಹೆಣ್ಣು ಅಂದರೆ ಕೀಳು, ಮೈಲಿಗೆ-ಸೂತಕದವಳು ಎನ್ನುವ ಭಾವನೆ ಕೆಲವು ಭಾಗಗಳಲ್ಲಿದೆ. ಇದರಿಂದಾಗಿ ಗಂಡು-ಹೆಣ್ಣುಗಳಲ್ಲಿ ಸಮಾನತೆ ಕಾಣಲಿಕ್ಕೆ ಸಾಧ್ಯವಿಲ್ಲ. ಮತ್ತೆ ಕಲ್ಯಾಣ ಕಾರ್ಯಕ್ರಮದ ಮೂಲಕ ಎಲ್ಲ ಧರ್ಮ, ವರ್ಗದವರನ್ನು ಒಂದುಗೂಡಿಸುವ ಕಾರ್ಯ ನಡೀತಾ ಇದೆ. ತಳಸಮುದಾಯವನ್ನು, ಹಿಂದುಳಿದವರನ್ನು ಮೇಲೆ ತರುವ ಸಲುವಾಗಿ ಮೀಸಲಾತಿ ಕೊಟ್ಟಿದೆ. ಇದೊಂದು ತಾತ್ಕಲಿಕ ಕ್ರಮವಷ್ಟೇ. ಕೇವಲ ಮೀಸಲಾತಿಯಿಂದಲೇ ಸಮಾನತೆಯನ್ನು ತರುವುದಕ್ಕೆ ಸಾಧ್ಯವಿಲ್ಲ ಎಂದರು.
ಶಿವಸಂಚಾರದ ಕಲಾವಿದರು ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ವಚನಗಳನ್ನು ಹಾಡುತ್ತಿದ್ದುದು ವಿಶೇಷವಾಗಿತ್ತು. ಸುಮಾರು ಒಂದೂ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾರ್ವಜನಿಕರು ಭಾಗಹಿಸಿದ್ದರು. ಮತ್ತೆ ಕಲ್ಯಾಣ ಕಾರ್ಯಕ್ರಮದ ನಿಮಿತ್ತ ವಚನ ಗಾಯನ, ಪ್ರಬಂಧ, ಕಂಠಪಾಠ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಾದ 130 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳ ಪ್ರಶ್ನೆಗಳು:
12ನೆಯ ಶತಮಾನದಲ್ಲಿ ಹುಟ್ಟಿಕೊಂಡ ಲಿಂಗಾಯತ ಧರ್ಮದಲ್ಲಿ ಎಲ್ಲ ರೀತಿಯಿಂದಲೂ ಸಮಾನತೆಯಿತ್ತು. ಆದರೆ ಇಂದು ಸಮಾನತೆ ಅಧೋಗತಿಗಿಳಿದಿದೆ. ಇದಕ್ಕೆ ಕಾರಣವೇನು?
12ನೆಯ ಶತಮಾನದಲ್ಲಿ ಹುಟ್ಟಿಕೊಂಡ ಧರ್ಮ ಹೇಗೆ ಮತ್ತು ಏಕೆ ವಿಫಲವಾಯಿತು?
ಎಲ್ಲಾ ಜಾತಿಗಿಂತ ಲಿಂಗಾಯತ ಜಾತಿ ಶ್ರೇಷ್ಠವಾ ?
ಮಾಧ್ಯಮಗಳು ಜಾತಿ ಜಾತಿ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ಸಂಘರ್ಷವನ್ನುಂಟುಮಾಡುಲು ಪ್ರಯತ್ನಿಸುತ್ತಿವೆ. ಇದಕ್ಕೆ ಪರಿಹಾರವೇನು?
ಲಿಂಗಾಯತ ಎನ್ನುವುದು ಜಾತಿಯೇ ಅಥವಾ ಧರ್ಮವೋ ?
ಅನೇಕ ಜನರು ವಚನಗಳ ಬಗ್ಗೆ ವೇದಿಕೆಯಲ್ಲಿ ಭಾಷಣ ಮಾಡುತ್ತಾರೆ. ಆದ್ರೆ ಅವರೆಲ್ಲರೂ ತಮ್ಮ ಬದುಕಿನಲ್ಲಿ ಆಚರಣೆಗೆ ತಂದಿದ್ದಾರೆಯೇ?
ಜಾತಿ ಹೆಸರಿನಲ್ಲಿ ಅನೇಕ ಮಠಗಳು ಹುಟ್ಟಿಕೊಂಡಿವೆ. ಆ ಎಲ್ಲಾ ಮಠಾಧೀಶರು ಸಮಸಮಾಜದ ನಿರ್ಮಾಣದ ಕಡೆ ಇರಬೇಕು ಅಲ್ಲವೇ? ಇದಕ್ಕೆ ತಮ್ಮ ಅಭಿಪ್ರಾಯವೇನು?
ಬಸವಣ್ಣನವರ ಬಗ್ಗೆ ಇದುವರೆಗೆ ತಿಳಿಸಿಕೊಟ್ಟ್ಟಿದ್ದೀರಿ. ಹಾಗೇಯೇ ಇನ್ನಿತರ ಶರಣರ ಬಗ್ಗೆ ತಿಳಿಸಿಕೊಟ್ಟರೆ ಒಳಿತು.
ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವ ಬಗೆ ಹೇಗೆ?
ತತ್ವ, ಸಿದ್ಧಾಂತಗಳನ್ನು ಗುರುಗಳಾದವರು ಮಾತ್ರ ಆಚರಣೆಗೆ ತರುಬೇಕೇ ?
ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ಈ ಮತ್ತೆ ಕಲ್ಯಾಣ ಕಾರ್ಯಕ್ರಮದ ಅರಿವು ಆಗುತ್ತೆ. ಆದ್ರೆ ಹೊರಗಿನವರಿಗೆ ಹೇಗೆ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುತ್ತೀರಾ?
ಅಸಮಾನತೆ ಎನ್ನುವುದು ಜಾತಿಯಲ್ಲಷ್ಟೇ ಅಲ್ಲ; ಭಾಷೆಯಲ್ಲಿಯೂ ಇದೆ ಯಾಕೆ?
‘ಮತ್ತೆ ಕಲ್ಯಾಣ’ದ ಕಾರ್ಯಕ್ರಮ ಬಸವಣ್ಣದೇವರು ಮಠದ ಸಿದ್ಧಲಿಂಗ ಸ್ವಾಮೀಜಿಯವರ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ?
ಅನುಭವ ಮಂಟಪದಲ್ಲಿ ಎಲ್ಲಾ ಸ್ತ್ರೀಯರಿಗೆ ಅವಕಾಶವಿತ್ತು. ಈಗಿನ ಮಠಗಳಲ್ಲಿ ಸ್ತ್ರೀಯರಿಗೆ ಅವಕಾಶವಿಲ್ಲ ಏಕೆ?
12ನೆಯ ಶತಮಾನದಲ್ಲಿ ಮಾಡಿದ ಕ್ರಾಂತಿ 12ನೆಯ ಶತಮಾನಕ್ಕೆ ಮಾತ್ರ ಸೀಮಿತವಾಯಿತು. ತಾವು ಮಾಡುವ ಕ್ರಾಂತಿ ಮುಂದುವರಿಯುತ್ತಾ?
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ನಾವು ನಮ್ಮನ್ನು ಹೇಗೆ ತೊಡಗಿಸಿಕೊಳ್ಳಬೇಕು ?
- ಹೆಚ್ ಎಸ್ ದ್ಯಾಮೇಶ್

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)