ಆಗಸ್ಟ್ 10 ಶನಿವಾರ, ಬೆಂಗಳೂರು
ಬೆಂಗಳೂರಿನಲ್ಲಿ 10ನೇ ದಿನದ ಮತ್ತೆ ಕಲ್ಯಾಣ ಆಂದೋಲನ
ಯುವ ವಿದ್ಯಾರ್ಥಿಗಳೊಂದಿಗೆ ಸಂವಾದ
ಅನನ್ಯ ಟಿವಿ-ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ
ಅಗಸ್ಟ್ 10; ಬೆಂಗಳೂರು; ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಇಂದು ಕರ್ನಾಟದಲ್ಲಿ ಬಹಳ ಜನ ಜಲಪ್ರಳಯದಿಂದ ನಲುಗಿ ಹೋಗಿದ್ದಾರೆ. ದುಃಖ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಸಮಸ್ಥಿತಿಯನ್ನು ಕಂಡುಕೊಂಡವರು ವಚನಕಾರರು. `ನೊಂದವರ ನೋವ ನೋಯದವರೆತ್ತ ಬಲ್ಲರು’ ಎನ್ನುವ ವಚನಕಾರರಂತೆ ನೊಂದವರ ನೋವು ನೊಂದವರಿಗೆ ಮಾತ್ರ ಗೊತ್ತು. ಜಲಪ್ರಳಯದಿಂದ ನೊಂದ ನಮ್ಮ ಸಹೋದರ-ಸಹೋದರಿಯರಿಗೆ ನೆರವು ನೀಡಬೇಕೆಂದು ಕರೆಕೊಡುತ್ತಿದ್ದೇವೆ. ಜಲಪ್ರಳಯದಿಂದ ನೊಂದ ಜೀವಿಗಳಿಗೆ ನಮ್ಮ ಅಲ್ಪ ಸಹಾಯವನ್ನಾದರೂ ಮಾಡಲೇಬೇಕು. ಆಗ ಮಾತ್ರ ಕಲ್ಯಾಣ ಸಾರ್ಥಕ. ನಮ್ಮ ಮಠದಿಂದ 5 ಲಕ್ಷ ರೂಪಾಯಿಗಳನ್ನು ನೆರೆ ಸಂತ್ರಸ್ಥರಿಗೆ ನೀಡಲಾಗುವುದು. ನೆರವು ನೀಡುವಂಥವರು ನಮ್ಮ ಹೆಸರಿಗೇ ಹಣ, ಚೆಕ್, ಡಿಡಿ, ಆನ್ ಲೈನ್ ನಲ್ಲಿಯೂ ಕೊಡಬಹುದು. ಇಂದಿನ ಜನರು ವಚನಕಾರರಂತೆ ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕೆನ್ನುವುದೇ ಮತ್ತೆ ಕಲ್ಯಾಣದ ಉದ್ದೇಶ. ನಮ್ಮ ಸಾವು ದೇವರನ್ನೂ ಶಪಿಸುವ ರೀತಿ ಇರಬೇಕು. ಶರಣರದ್ದು ಪಾರದರ್ಶಕ ಜೀವನ; ಒಳ-ಹೊರಗೊಂದಾದವರು. ಅಂತರಂಗ-ಬಹಿರಂಗ ಶುದ್ಧಿಯೇ ದೇವರನ್ನು ಒಲಿಸುವ ದಾರಿ ಎಂದು ಅದರಂತೆ ನಡೆದವರು. ವಚನಕಾರರು ಅಳವಡಿಕೊಂಡಿದ್ದ ಸೂತ್ರಗಳನ್ನು ನಾವೂ ಅಳವಡಿಕೊಂಡರೆ ಭಗವಂತ ಖಂಡಿತ ನಮಗೂ ಒಲಿಯುವನು. ನಟನೆ, ಮುಖವಾಡದ ಬದುಕನ್ನು ಎಲ್ಲರೂ ಬಿಡಬೇಕು. ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ನೇತಾರರಗಿಂತ ಮತದಾರರೇ ಹೆಚ್ಚು ನಟನೆ ಮಾಡುವರು. ಈ ರೀತಿಯ ಆತ್ಮವಂಚನೆ ಸರಿಯಲ್ಲ. ಬದುಕು ನೇರ, ನಿಷ್ಠುರ, ಸರಳವಾಗಿರಬೇಕು. 12 ನೆಯ ಶತಮಾನದಲ್ಲಿದ್ದ ಅಸಮಾನತೆಗಳನ್ನು ವಚನಕಾರರು ತೊಡೆದು ಹಾಕುವ ಪ್ರಯತ್ನ ಮಾಡಿದ್ದರು. ಆದರೆ ಇಂದೂ ಯಾಕೆ ಅದು ಸಾಧ್ಯವಾಗಿಲ್ಲ ಎಂದು ಮಕ್ಕಳು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರ; ಹಿಂದಿನವರನ್ನು ದೂರುವುದಕ್ಕಿಂತ ಮೊದಲು ತಾನು ವ್ಯಕ್ತಿಗತವಾಗಿ ಸರಿಯಾಗಬೇಕು. ತಪ್ಪುಮಾಡುವುದು ದೊಡ್ಡ ತಪ್ಪಲ್ಲ; ತಪ್ಪೆಂದು ಗೊತ್ತಾದ ಮೇಲೆಯೂ ತಿದ್ದಿಕೊಳ್ಳದಿರುವುದು ದೊಡ್ಡ ತಪ್ಪು. ಅನುಭವ ಮಂಟಪದ ಮೂಲಕ ತಪ್ಪು ಮಾಡಿದವರನ್ನು ಶರಣರು ಪರಿವರ್ತನೆ ಮಾಡಿದರು. ಬದಲಾವಣೆ ತರಲು ನಿಷ್ಠುರತೆ, ಬದ್ಧತೆ ಬೇಕು. ಇಂದು ನಮ್ಮ ಸ್ವಾರ್ಥಕ್ಕೆ ಮಿತಿಯೇ ಇಲ್ಲವಾಗಿರುವುದರಿಂದಲೇ ಇಂದು ಸಣ್ಣ ಸಣ್ಣ ಪ್ರಾಕೃತಿ ವಿಕೋಪಗಳೂ ದೊಡ್ಡ ದೊಡ್ಡ ಅನಾಹುತವನ್ನು ಮಾಡುತ್ತಿವೆ. ಬಸವಣ್ಣ ಸಂಗ್ರಹ ಪ್ರವೃತ್ತಿಯಿಂದ ದೂರ ಇರುವ ಸಲುವಾಗಿ ದಾಸೋಹ ಪ್ರಜ್ಞೆಯನ್ನು ಜಾರಿಗೆ ತಂದರು. ಶರಣರ ವಿಚಾರಗಳು ಕೇವಲ ಪ್ರಚಾರಕ್ಕೆ ಇರುವಂಥವಲ್ಲ; ಆಚಾರಕ್ಕಿರುವಂಥವು. ಲಾಂಛನಗಳೇ ಶರಣತ್ವದ ಲಕ್ಷಣವಲ್ಲ; ಅಂತರಂಗದಲ್ಲಿ ಇವ ನಮ್ಮವ, ಇವ ನಮ್ಮವ ಎನ್ನುವ ಭಾವನೆ ಬರಬೇಕು. ಮಾಗಿದ, ಬಾಗುವ, ನೋವಿಗೆ ಸ್ಪಂದಿಸುವ ಗುಣ ಬಂದರೆ ಅವರೇ ಶರಣರು. ನಕಾರಾತ್ಮಕ ಅಂಶಗಳನ್ನೂ ಸಕಾರಾತ್ಮಕವಾಗಿ ಬದಲಾಯಿಸಿಕೊಂಡು ಸುಸ್ಥಿರ ಸಮಾಜಕಟ್ಟಬೇಕೆನ್ನುವವರು ನಾವು. ಮತ್ತೆ ಕಲ್ಯಾಣ ಕೇವಲ ನಮ್ಮೊಬ್ಬರ ಕೆಲಸವಲ್ಲ; ಅನೇಕರ ಶ್ರಮವಿದೆ. ಈ ಕಲ್ಯಾಣ ಯಶಸ್ವಿಯಾಗಲು ಎಲ್ಲರ ಸಹಕಾರ ಅತ್ಯಗತ್ಯ. ನಾನು ನಾನು ಎನ್ನುವ ಅಹಂಕಾರವನ್ನು ಬಿಟ್ಟು ಮುಗಿದ ಕೈ, ಬಾಗಿದ ತಲೆಯವರಾಗಬೇಕು. ಮತ್ತೆ ಕಲ್ಯಾಣ ಒಂದು ಕಾರ್ಯಕ್ರಮವಲ್ಲ; ಅಭಿಯಾನ. ಇದು ನಿರಂತರವಾಗಿ ನಡೆಯಬೇಕಾಗಿದೆ ಎಂದರು.
`ವೈಚಾರಿಕತೆಗೆ ಭಾಷ್ಯ ಬರೆದ ಶರಣರು’ ಎಂಬ ವಿಷಯ ಕುರಿತಂತೆ ತಮಿಳ್ ಸೆಲ್ವಿ ಮಾತನಾಡಿ ಇಂದಿನ ಬಿಜಾಪುರ ಜಿಲ್ಲೆಯ ಕಲ್ಯಾಣ 12 ನೆಯ ಶತಮಾನದಲ್ಲಿ ಇಡೀ ಭಾರತದ ಶಕ್ತಿಕೇಂದ್ರವಾಗಿತ್ತು. ಅದನ್ನು ಮತ್ತೆ ಆಗುವ ಮಾಡುವ ನಿಟ್ಟಿನಲ್ಲಿ `ಮತ್ತೆ ಕಲ್ಯಾಣ’ವನ್ನು ಪಂಡಿತಾರಾಧ್ಯ ಶ್ರೀಗಳು ಆರಂಭಿಸಿದರೆ. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ಇತರೆ ರಾಜ್ಯಗಳಿಗೂ ಹಬ್ಬಬೇಕು. ಇದು ಇಂದಿನ ತರ್ತು. ಬಸವಣ್ಣನ ಕ್ರಾಂತಿ ಕೇವಲ ಸಾಮಾಜಿಕ ಮತ್ತು ಧಾರ್ಮಿಕ ಮಾತ್ರವಲ್ಲ; ಸಾಹಿತ್ಯಕವಾಗಿ, ಜಾತ್ಯತೀತವಾಗಿ, ಸ್ತ್ರೀ ಸಬಲೀಕರಣದ ಕ್ರಾಂತಿಯೂ ಆಗಿತ್ತು. ಇಂತಹ ಕ್ರಾಂತಿ ಜಗತ್ತಿನ ಇತಿಹಾಸದಲ್ಲಿಯೇ ಎಲ್ಲಿಯೂ ಉದಾಹರಣೆಯಾಗಿ ಸಿಗಲಾರದು. ಕಾಯಕ ಸಿದ್ಧಾಂತವನ್ನು ಅಳವಡಿಸಿಕೊಳ್ಳುವ ವ್ಯಕ್ತಿ ಮಾತ್ರವಲ್ಲ; ರಾಷ್ಟ್ರವೂ ಸಬಲವಾಗುತ್ತದೆ. 12 ನೆಯ ಶತಮನಾನದ ಶರಣರ ತತ್ವ ಸಿದ್ಧಾಂತಗಳು 21 ನೆಯ ಶತಮಾನಕ್ಕೂ ಪ್ರಸ್ತುತ. ಇಂದು ತತ್ವಗಳು ಕೇವಲ ತತ್ವಗಳಾಗಿವೆ. ಆದರೆ ಬಸವಾದಿ ಶರಣರು ತತ್ವವನ್ನು ನಡೆದು ತೋರಿಸಿದರು. ನುಡಿದರೆ ಮುತ್ತಿನಹಾರ, ಮಾಣಿಕ್ಯದ ದೀಪ್ತಿ, ಸ್ಪಟಿಕದ ಸಲಾಕೆ, ಲಿಂಗಮೆಚ್ಚಿ ಅಹುದು ಅಹುದು ಎನ್ನಬೇಕೆನ್ನುವ ವಚನದ ಸಾರವನ್ನೇ ತಿರುವಳ್ಳವರ್ ಕೂಡ ಹೇಳಿದ್ದಾರೆ. ಈ ವಚನ ಕೇವಲ ನುಡಿ ಧೀರರಾದರೆ ಸಾಲದು; ನಡೆ ಧೀರರೂ ಆಗಬೇಕೆನ್ನುವುದನ್ನು ಸೂಚಿಸುತ್ತದೆ. ಬಸವಣ್ಣನವರ ಸಪ್ತಶೀಲಗಳಾದ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ಇದಿರ ಅಳಿಯಲು ಬೇಡ’ ಎನ್ನುವ ಗುಣಗಳನ್ನು ಅಳವಡಿಸಿಕೊಂಡರೆ ಜಗತ್ತಿನಲ್ಲಿ ತನ್ನಿಂದ ತಾನೇ ಶಾಂತಿ, ನೆಮ್ಮದಿಯನ್ನು ಸಿಗುತ್ತದೆ. ಈ ಮಾತು ಇಡೀ ಪ್ರಪಂಚಕ್ಕೆ ಅನ್ವಯಿಸುವಂಥದ್ದು. ಸಾಮಾಜಿಕವಾಗಿ, ಸಾರ್ವಜನಿಕವಾಗಿ ಸ್ತ್ರೀಯರಿಗೆ ಅಭಿವ್ಯಕ್ತಿಗೆ ಸ್ವಾತಂತ್ರ್ಯ ನೀಡಿದ್ದು `ಅನುಭವ ಮಂಟಪ’ ಮಾತ್ರ. ಕೇವಲ ವಿದ್ವಾಂಸರ ಸ್ವತ್ತಾಗಿದ್ದ ಸಾಹಿತ್ಯ ರಚನೆಯನ್ನು ಸಾಮಾನ್ಯರೂ ರಚಿಸಬಹುದು ಎಂದು ತೋರಿದವರು ವಚನಕಾರರು. ಇದು ಒಂದು ಅದ್ಭುತ ಕ್ರಾಂತಿಯೂ ಹೌದು. ಶರಣಸತಿ-ಲಿಂಗಪತಿ ಎನ್ನುವ ವಚನಕಾರರ ಪರಿಕಲ್ಪನೆ ಆದ್ಯಾತ್ಮಿಕವಾಗಿ ಅತ್ಯಂತ ಎತ್ತರವಾದುದು. ವಚನ ಸಾಹಿತ್ಯ ಕನ್ನಡಿಗರ ದೊಡ್ಡ ಸಂಪತ್ತು. ಇದನ್ನು ಕರ್ನಾಟಕದ ಗಡಿಯನ್ನು ಮೀರಿ ಹೊರಗೆ ಹೋಗಲೇಬೇಕಾಗಿದೆ. ಅನುವಾದ, ನಾಟಕಗಳ ಪ್ರದರ್ಶನ, ವಿಚಾರ ಸಂಕಿರಣಗಳ ಮೂಲಕ ಕನ್ನಡದ ಸಾಹಿತ್ಯವನ್ನು ಪರಿಚಯಿಸುವುದರ ಮೂಲಕ ಯಾಕೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕಿದೆ. ತಮಿಳು ಭಾಷೆಯಲ್ಲಿರುವುದಕ್ಕಿಂತ ಹೆಚ್ಚಿನ ಸಂಪತ್ತು ಕನ್ನಡದಲ್ಲಿದೆ ಎಂದರು.
`ಕಲ್ಯಾಣ ಮರುಭೇಟಿ’ ಕುರಿತಂತೆ ಹೆಚ್ ಎಸ್ ಶಿವಪ್ರಕಾಶ ಮಾತನಾಡಿ `ಮತ್ತೆ ಕಲ್ಯಾಣ’ ಎನ್ನುವ ಶಬ್ದಕ್ಕೆ ಅನುರಣನ ಶಕ್ತಿಯಿರುವಂತೆ ಹೊರಚಾಚುಗಳೂ ಇವೆ. ವಚನೋತ್ತರ ಸಾಹಿತ್ಯ ಪರಂಪರೆಯಲ್ಲಿ `ಕಲ್ಯಾಣ’ ಬಹಳ ದೊಡ್ಡ ಕಲ್ಪನೆಯಾಗಿ ಬಳಕೆಯಾಗಿದೆ. ಮತ್ತೆ ಮತ್ತೆ ಕಲ್ಯಾಣವನ್ನು ಕಟ್ಟುವ ಪರಂಪರೆಗೆ ಹೊಸರೂಪನವನ್ನು ಪಂಡಿತಾರಾಧ್ಯ ಶ್ರೀಗಳು ಇಂದು ನೀಡಿದ್ದಾರೆ. ಇಂದು `ಧರ್ಮ’ ಅತ್ಯಂತ ವಿಕೃತ ಕಲ್ಪನೆಯಾಗಿ ಬಳಕೆಯಾಗುತ್ತಿರುವುದು ದುರದೃಷ್ಟಕರ ಸಂಗತಿ. ವಚನಕಾರರ ವಿಶೇಷತೆಯನ್ನು ಗುರುತಿಸಿ ಹೇಳುವ ಕೆಲಸವಾಗಬೇಕು. ವಚನಕಾರರ ಭಕ್ತಿ ಪರಂಪರೆಯಲ್ಲಿ ಬೇರೆ ಯಾವ ಭಕ್ತಿ ಪರಂಪರೆಯಲ್ಲೂ ಇಲ್ಲದ ಕಾಯಕ ತತ್ವ ಅಡಗಿದೆ. ಇದು ವಚನ ಸಂಸ್ಕೃತಿಯ ಬಹಳ ದೊಡ್ಡ ಸಿದ್ಧಿ. ತಮಿಳು ನಾಡಿನ ಭಕ್ತಿ ದೇವಸ್ಥಾನದ ಭಕ್ತಿ. ಆದರೆ ವಚನಕಾರರು ದೇಹವನ್ನೇ ದೇವಾಲಯ ಮಾಡಿಕೊಂಡವರು. ಭಾರತೀಯ ಅನೇಕ ಸಂಸ್ಕೃತಿಗಳ ಇತ್ಯಾತ್ಮಕ ಅಂಶಗಳು ಸೇರಿ ವಚನ ಸಂಸ್ಕೃತಿಯಾಗಿದೆ. ಆಚಾರ್ಯ ಪರಂಪರೆಗೆ ನಾವು ಶಿಕಾರಿಗಳುತ್ತಿರುವ ಬಗ್ಗೆ ಎಚ್ಚರದಿಂದಿರಬೇಕು. ವಚನಕಾರರಲ್ಲಿ ಶೇ. 80 ರಷ್ಟು ಕಾಯಕ ಪರಂಪರೆ ಇದೆ. ಅಕ್ಕಮಹಾದೇವಿಯಲ್ಲಿ ಭಕ್ತಿ, ಅಲ್ಲಮನಲ್ಲಿ ತಾಂತ್ರಿಕ ಪರಂಪರೆಯಿದೆ. ಭಗವದ್ಗೀತೆಯಲ್ಲಿ ಕರ್ಮಯೋಗವನ್ನು ಹೇಳಿದರೆ ವಚನಕಾರರು ಕಾಯಕ ಧರ್ಮವನ್ನು ಹೇಳಿದರು. ವಚನಕಾರರು ದಾನ-ಧರ್ಮಗಳನ್ನು ನಿರಾಕರಿಸಿ ದಾಸೋಹ ತತ್ವವನ್ನು ಹೇಳಿದರು. ಕಾಯಕವನ್ನೇ ಪ್ರಧಾನ ಮಾಧ್ಯಮವನ್ನಾಗಿಸಿ ಆಧ್ಯಾತ್ಮಿಕ ಸಾಧನವನ್ನಾಗಿ ಮಾಡಿಕೊಂಡವರು ವಚನಕಾರರು. 21 ನೆಯ ಶತಮಾನದಲ್ಲಿ ಕಾಯಕ ತತ್ವ ಬಹಳ ಮುಖ್ಯವಾಗಬೇಕು. ಕೊಡೆಕಲ್ ಬಸವೇಶ್ವರರು, ಮಲೆ ಮಹದೇಶ್ವರರು ವಚನಕಾರರ ತತ್ವ ಸಿದ್ಧಾಂತಗಳಿಗೆ ಹೊಸ ರೂಪವನ್ನುಕೊಟ್ಟರು. ವಚನಕಾರರ ತತ್ವಸಿದ್ಧಾಂತಗಳನ್ನು ಕೇವಲ ಕಾಪಿ ಮಾಡದೆ ಪರಿವರ್ತಿಸಿಕೊಂಡು ಅನುಸರಿಸಬೇಕು. ವಚನಕಾರರನ್ನು ತಮ್ಮ ಅರಿವಿನ ಕನ್ನಡಿಯಲ್ಲಿ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಪಂಡಿತಾರಾಧ್ಯ ಶ್ರೀಗಳು ಮಾಡಿದುದರ ಫಲವೇ ಮತ್ತೆ ಕಲ್ಯಾಣ ಎಂದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಯಮೂರ್ತಿ ನಾಗಮೋಹನದಾಸ್ ಮಾತನಾಡಿ ಪಂಡಿತಾರಾಧ್ಯ ಸ್ವಾಮಿಜಿಗಳಿಂದ ನಾವೆಲ್ಲರೂ ಕಲಿಯಲೇ ಬೇಕಾದ ಪಾಠ ಕಾಲಪ್ರಜ್ಞೆ. 12 ನೆಯ ಶತಮಾನದಲ್ಲಿ ವಚನಕಾರರು ಮಾಡಿದ ಕ್ರಾಂತಿ ಜಗತ್ತಿನಲ್ಲಿಯೇ ಎಲ್ಲಿಯೂ ನಡೆದಿಲ್ಲ. ಸಮಸಮಾಜದ ನಿರ್ಮಾಣ ಅವರ ಮುಖ್ಯ ಗುರಿಯಾಗಿತ್ತು. ಕಾಯಕ-ದಸೋಹದ ಮಹತ್ವವನ್ನು ಬಿತ್ತಿದವರು, ವೈಚಾರಿಕತೆಯನ್ನು ಬೆಳೆಸಿದವರು, ನೈತಿಕತೆಯನ್ನು ಮೆರೆದವರು, ಮಾನವೀಯ ಮೌಲ್ಯಗಳನ್ನು ಬಿತ್ತಿದವರು ವಚನಕಾರರು. ಭಾರತದ ಸಂವಿಧಾನದಲ್ಲಿ ಬಸವಾದಿ ಶರಣರ ಪ್ರಮುಖ ಅಂಶಗಳನ್ನು ಕಾಣಬಹುದು. ಭಾರತದ ಸಂವಿಧಾನ ಅನುಷ್ಠಾನ ಮತ್ತು ವಚನಗಳ ಅನುಷ್ಠಾನ ಬೇರೆ ಬೇರೆ ಅಲ್ಲ. ನಿಜವಾದ ಭಾರತದ ನಿರ್ಮಾಣವಾದದ್ದು ಸಂವಿಧಾನ ಜಾರಿಗೆ ಬಂದ ಮೇಲೆಯೇ. ಇಂದು ಶೇ. 80 ಕ್ಕಿಂತ ಅಕ್ಷರಸ್ಥರಿದ್ದಾರೆ. ಕೇವಲ ಶೇ. 21 ರಷ್ಟು ಬಡತನದ ರೇಖೆಗಿಂತ ಕೆಳಗಿದ್ದಾರೆ. ಸಂವಿಧಾನದ ಕಾರಣಕ್ಕೆ ನಾವೆಲ್ಲರೂ ಇಂದು ಒಂದು ಸುಸ್ಥಿಗೆ ಬರುವಂತಾಗಿದೆ. ಆದರೆ ಇಂದು ಅಂತಹ ಸಂವಿಧಾನಕ್ಕೆ ಗಂಡಾಂತರ ಬಂದಿದೆ. ಆರ್ಥಿಕ, ಸಾಮಾಜಿಕ ಭಯೋತ್ಪಾದನೆಯ ಜೊತೆಗೆ ತೆರಿಗೆಯ ಭಯೋತ್ಪದನೆಯೂ ಸೇರಿಕೊಂಡಿದೆ. ಕೋಮುವಾದ, ಭಯೋತ್ಪಾದನೆ, ಭ್ರಷ್ಟಾಚಾರ, ಸಾಂಸ್ಕೃತಿಕ ದಿವಾಳಿತನ, ಮತೀಯವಾದಗಳಿಗೆಲ್ಲಕ್ಕೂ ವಚನಕಾರರಲ್ಲಿ ಪರಿಹಾರವಿದೆ. ಚಾರಿತ್ರಿಕ ಸನ್ನಿವೇಶಕ್ಕೆ ಸ್ವಾಮಿಜಿಯವರು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರೂ ಅವರ ಜೊತೆಯಲ್ಲಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಜಿ ಬಿ ಪಾಟೀಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀನಿವಾಸ ಜಿ ಕಪ್ಪಣ್ಣ ಸ್ವಾಗತಿಸಿದರೆ, ಕೆ ವಿ ನಾಗರಾಜಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮೀ ಪಾಟೀಲ್ ವಂದಿಸಿದರು. ಕಾರ್ಯಕ್ರಮದ ನಂತರ ಶಿವಸಂಚಾರದ ಕಲಾವಿದರು `ಮೋಳಿಗೆ ಮಾರಯ್ಯ’ ನಾಟಕವನ್ನು ಪ್ರದರ್ಶಿಸಿದರು.
ಬೆಂಗಳೂರು ಮಹಾನಗರ ಪಾಲಿಕೆಯ ಮುಂಭಾಗದ ಕೆಂಪೇಗೌಡ ಪ್ರತಿಮೆ ಆವರಣದಿಂದ ಆರಂಭವಾದ ಸಾಮರಸ್ಯ ನಡಿಗೆಯಲ್ಲಿ ಪೂಜ್ಯ ಮಹಾಪೌರರು, ಜನಪ್ರತಿನಿಧಿಗಳು, ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು ವಚನಕಾರರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದೊಂದಿಗೆ ರವೀಂದ್ರ ಕಲಾಕ್ಷೇತ್ರ ತಲುಪಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ
ಬೆಂಗಳೂರು, ಆಗಸ್ಟ್ 10; ಮತ್ತೆ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಬಿಇಎಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಮಾತು ದೇವರು ಕೊಟ್ಟಂಥ ಬಹುದೊಡ್ಡ ವರ. ಅಂತಹ ಮಾತನ್ನು ಎಲ್ಲಿ? ಹೇಗೆ? ಮಾತನಾಡಬೇಕು ಎನ್ನುವ ಅರಿವಿರಬೇಕು. ಮಾತಿನ ಮೇಲೆ ಹಿಡಿತ ಇಲ್ಲದೇ ಇದ್ದರೆ ನಮ್ಮ ತಲೆಯ ಮೇಲೆ ನಾವೇ ಚಪ್ಪಡಿಯನ್ನು ಹಾಕಿಕೊಂಡಂತಾಗುತ್ತದೆ. ಅನೇಕ ವೇಳೆ ಮೌನಕ್ಕಿರುವ ಬೆಲೆ ಮಾತಿಗೆ ಇಲ್ಲ. ಹಾಗಂತ ಎಲ್ಲಾ ಸಂದರ್ಭದಲ್ಲಿ ಮೌನವಾಗಿರುವುದಕ್ಕೆ ಸಾಧ್ಯವಿಲ್ಲ. ಭಕ್ತಿ ಸುಭಾಷೆಯ ನುಡಿಯ ನುಡಿಯಬೇಕು. ಮಾತು ಹಿತ-ಮಿತವಾಗಿರಬೇಕು. ನನ್ನ ನಡೆ-ನುಡಿಯಲ್ಲಿ ಕಿಂಚಿತ್ ಕೊರತೆಯಾದರೆ ನನ್ನನ್ನು ಅದ್ದಿ ನೀನೆದ್ದು ಹೋಗು ಅಂತ ದೇವರಿಗೆ ಸವಾಲೆಸೆದವರು ಬಸವಣ್ಣನವರು. ಮಾತು ಒಂದು, ಮನಸ್ಸು ಇನ್ನೊಂದು, ಕೃತಿ ಮತ್ತೊಂದು ಆದ್ರೆ ಯಾವ ಕಲ್ಯಾಣದ ಕನಸನ್ನೂ ಕಾಣಲು ಸಾಧ್ಯವಿಲ್ಲ. ಸಮಾಜದ ಹಿತವನ್ನು ಬಯಸುವಂಥ ಕನಸನ್ನು ಶರಣರು ಕಂಡರು. ವಿದ್ಯಾರ್ಥಿಗಳು ಶಾಲೆಗೆ, ತಂದೆ-ತಾಯಿಗಳಿಗೆ, ಸಮಾಜಕ್ಕೆ ಗೌರವ ತಂದುಕೊಡುವ ಕೆಲಸ ಮಾಡಬೇಕು. ನಮಗೆ ವಿದ್ಯೆ ಹೇಳಿಕೊಟ್ಟ ಗುರುಗಳು ವಂದಿಸುವ ಮಟ್ಟಕ್ಕೆ ನಾವು ಬೆಳೆದಾಗ ನಿಜ ಕಲ್ಯಾಣವಾಗುವುದು. ನಮ್ಮ ಹಿರಿಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಪದೇ ಪದೇ ಹೇಳ್ತಾ ಇದ್ರು; ವಿದ್ಯಾರ್ಥಿಗಳಿಗೆ ಔದ್ಯೋಗಿಕ, ವ್ಯಾವಹಾರಿಕ, ಪಾರಮಾರ್ಥಿಕ ಶಿಕ್ಷಣ ಕೊಡಬೇಕು ಎಂದು. ಈಗ ಇಂತಹ ಶಿಕ್ಷಣ ದೊರಕುತ್ತಿಲ್ಲ. ಕೇವಲ ಪದವಿಗಾಗಿ ಶಿಕ್ಷಣ ನೀಡುತ್ತಿರುವುದು ವಿಷಾದದ ಸಂಗತಿ. ಮೋಸ, ವಂಚನೆಗಳು ಆಗ್ತಾ ಇರೋದೇ ವಿದ್ಯಾವಂತರಿಂದ. ಜ್ಞಾನಕ್ಕಿಂತ ವಿವೇಕಕ್ಕೆ ಹೆಚ್ಚು ಒತ್ತು ಕೊಡಬೇಕು. ವಿದ್ಯಾರ್ಥಿಗಳಿಗೆ ಮುಖ್ಯವಾಗಿ ನೈತಿಕ ನೆಲೆಗಟ್ಟು ಬೇಕು. ಬಸವಣ್ಣನವರದು ಬಾಗಿದ ತಲೆ, ಮುಗಿದ ಕೈ. ಆದ್ದರಿಂದ ಅವರನ್ನು ಸದಾ ಸ್ಮರಿಸಿಕೊಳ್ಳುತ್ತೇವೆ. ಇಂದು ಎಲ್ಲೆಲ್ಲೂ ಮೌಢ್ಯ ತುಂಬಿತುಳುಕ್ತಾ ಇದೆ. 12ನೆಯ ಶತಮಾನದ ಶರಣರು ಮೌಢ್ಯದ ವಿರುದ್ಧ ಹೋರಾಡಿದರು. ನಿಜವಾದ ಹಾವು ಕಂಡರೆ ಕೊಲ್ಲುತ್ತೇವೆ; ಕಲ್ಲಿನ ನಾಗರಕ್ಕೆ ಹಾಲನೆರೆಯುತ್ತೇವೆ. ಇದನ್ನು ಬಿಟ್ಟು ಹಸಿದ ಮಗುವಿಗೆ ಹಾಲನ್ನು ಕೊಡುವ ಕಾರ್ಯ ಮಾಡುವುದೇ ಪುಣ್ಯದ ಕೆಲಸ. ನಿಜವಾದ ದೇವರ ಕಾರ್ಯ. ಇಂತಹ ಮೌಢ್ಯಗಳನ್ನು ಅಳಿಸಿ ವೈಚಾರಿಕ ವಿಚಾರಗಳನ್ನು ಆಚಾರಣೆಗೆ ತಂದವರು ಬಸವಾದಿ ಶಿವಶರಣರು. ಸತ್ಯಕ್ಕನ ಕಾಯಕ ಬೀದಿಯಲ್ಲಿ ಕಸ ಗುಡಿಸುವುದು. ‘ಕಸ ಗುಡಿಸುವಾಗ ಬೀದಿಯಲ್ಲಿ ಹೊನ್ನು, ವಸ್ತ್ರ ಬಿದ್ದಿದ್ದರ ಅದನ್ನು ಕೈಮುಟ್ಟಿ ಎತ್ತುವುದಿಲ್ಲ’ ಎಂದು ಪ್ರಮಾಣ ಮಾಡುತ್ತಾಳೆ. ಇಂತಹ ಗಟ್ಟಿತನ ನಮಗೆ ಬಂದರೆ ಭ್ರಷ್ಟಾಚಾರ ತನ್ನಿಂದ ತಾನೇ ನಿರ್ಮೂಲನೆಯಾಗುತ್ತದೆ ಎಂದರು.
ನ್ಯಾಯಮೂರ್ತಿ ಸದಾಶಿವ ಮಾತನಾಡಿ ಪ್ರತಿಯೊಬ್ಬರೂ ತಮ್ಮ ತಮ್ಮ ಜಾತಿಯಿಂದ ಹೊರ ಬಂದಾಗ ಮಾತ್ರ ಜಾತಿ ವ್ಯವಸ್ಥೆಯಿಂದ ಮುಕ್ತರಾಗಲು ಸಾಧ್ಯ. ನಾನು ಇದುರವರೆಗೆ ಸಾವಿರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಈದಿನ ನನ್ನ ಬದುಕಿನ ಅಪರೂಪವಾದ ಸನ್ನಿವೇಶ. `ಮತ್ತೆ ಕಲ್ಯಾಣ’ ಕಾರ್ಯಕ್ರಮ ಸಕಲರ ಒಳಿತನ ಕಾರ್ಯಕ್ರಮ. ಪಂಡಿತಾರಾಧ್ಯ ಸ್ವಾಮೀಜಿಗಳ ನುಡಿಗಳನ್ನು ಕೇಳ್ತಾ ಕೇಳ್ತಾ ತಲ್ಲೀನವಾಗೋ ದಿನ. ಕಲ್ಯಾಣವೆಂದರೆ ಬಿಜಾಪುರ ಜಿಲ್ಲೆಯ ಕಲ್ಯಾಣವಲ್ಲ; ಮನಸ್ಸಿನ ಒಳಗೂ-ಹೊರಗೂ ಕಲ್ಯಾಣವಾಗಬೇಕು. ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳುವುದೇ ನಿತ್ಯ ಕಲ್ಯಾಣ. ಸುಳ್ಳನ್ನಾಡಿದರೂ ಅದು ಇನ್ನೊಬ್ಬರಿಗೆ ಬದುಕಿಗೆ ಮಾರಕವಾಗಬಾರದು. ಇವತ್ತು ಜಾತಿಯ ಭೂತ ಎದ್ದು ಕುಣಿಯುತ್ತಿದೆ. ಈ ಜಾತಿಯ ಭೂತವನ್ನು ಹೋಗಲಾಡಿಸುವುದು, ಅನಿಷ್ಠ ಪದ್ಧತಿಗಳನ್ನು ದೂರತಳ್ಳಿ ಸಮಸಮಾಜದ ನಿರ್ಮಾಣದ ಆಶಯವೇ ‘ಮತ್ತೆ ಕಲ್ಯಾಣ’ ಅಭಿಯಾನದ ಉದ್ದೇಶ. ಬಸವಣ್ಣನವರ ತತ್ವಗಳನ್ನು ಹೇಳುವವರೆಲ್ಲಾ ಲಿಂಗಾಯತರಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ. ಜಾತಿಯ ಹೆಸರಿನಲ್ಲಿ ಧಮನಕ್ಕೆ ಒಳಗಾದವರಿಗೆ, ಅಕ್ಷರ ವಂಚಿತರಿಗೆ, ತುಳಿತಕ್ಕೆ ಒಳಗಾದವರಿಗೆ, ಹಿಂದುಳಿದವರಿಗೆ ಮೀಸಲಾತಿ ಬೇಕು ಎಂದರು.
ವಿದ್ಯಾರ್ಥಿಗಳ ಪ್ರಶ್ನೆಗಳು:
ಸಮೂಹ ಮಾಧ್ಯಮಗಳು ಹೆಚ್ಚು ಮೌಢ್ಯಗಳನ್ನೇ ಪ್ರೋತ್ಸಾಹಿಸುತ್ತಿವೆ. ಅವರಿಗೆ ಸಾಮಾಜಿ ಜವಾಬ್ದಾರಿ ಇಲ್ಲವೇ ?
ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸಾಧ್ಯವೇ?
ಕರ್ನಾಟಕದಲ್ಲಿ ಅನೇಕ ಮಠಾಧೀಶರು ಬಸವಣ್ಣನವರ ಅನುಯಾಯಿಗಳು. ಬಸವಣ್ಣನವರನ್ನು ಮುಂದಿಟ್ಟುಕೊಂಡು ಅವರೇ ಮತ್ತೆ ಜಾತಿಯನ್ನು ಸೃಷ್ಟಿಸುವುದು ಎಷ್ಟರಮಟ್ಟಿಗೆ ಸರಿ?
ವಚನ ಸಾಹಿತ್ಯದಿಂದ ನಮಗಾಗುವ ಅನುಕೂಲವೇನು?
ಸಂವಿಧಾನದಲ್ಲಿ ಎಲ್ಲರೂ ಸಮಾನ ಎಂದು ಹೇಳಲಾಗಿದೆ. ಆದರೂ ಮೀಸಲಾತಿಯ ಅವಶ್ಯಕತೆ ಇದೆಯೇ?
ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಹೇಗೆ?
ಮರ್ಯಾದೆ ಹತ್ಯೆಯಿಂಥ ಘಟನೆಗಳಿಂದ ಸ್ತ್ರೀಯರ ಶೋಷಣೆ ಆಗ್ತಾ ಇದೆ. ಇದಕ್ಕೆ ಪರಿಹಾರವಿಲ್ಲವೇ ?
ಇಂದಿನ ರಾಜಕಾರಣದಲ್ಲಿ ಆದರ್ಶ ನಾಯಕರು ಯಾರೂ ಕಾಣಿಸುತ್ತಿಲ್ಲ. ಇದಕ್ಕೆ ಕಾರಣವೇನು ?
ಎಲ್ಲರೂ ದೇವರನ್ನು ನಂಬುತ್ತಾರೆ. ಹಾಗಾದರೆ ದೇವರು ಎಂದರೇನು?
- ಹೆಚ್ ಎಸ್ ದ್ಯಾಮೇಶ್

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)